ದೇಶ ಪ್ರೇಮ(ಪ್ರೇರಕ ಪ್ರಸಂಗಗಳು)

ದೇಶ ಪ್ರೇಮ(ಪ್ರೇರಕ ಪ್ರಸಂಗಗಳು)

ಸುಮಾರು ಒಂದು ನೂರು ವರ್ಷಗಳ ಹಿಂದೆ ನಡೆದ ಕಥೆ.

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ದಲ್ಲಿಯ ಜೈಲು.ಅಲ್ಲಿಗೆ ಒಬ್ಬ ಜರ್ಮನಿಯ ಕೈದಿಯನ್ನು ತಂದು ಸೇರಿಸಿದರು.

ಚಳಿಗಾಲದ ರಾತ್ರಿ.ಅಂದು ಗಾಳಿ ಬೀಸಿ ಚಳಿ ಮತ್ತಷ್ಟೂ ಹೆಚ್ಚಾಯಿತು.ಕೈದಿಯು ಜೇಲಿನ ಕೋಣೆಯಲ್ಲಿ ಮೂಲೆಯ ತನ್ನ ಹಾಸಿಗೆಯಲ್ಲಿ ನಡಗುತ್ತ ಕುಳಿತಿದ್ದನು.ಅವನು ಗದ-ಗದ ನಡಗುವದನ್ನು,ಕಟ-ಕಟ ಹಲ್ಲು ಕಡಿಯುವುದನ್ನು ಜೇಲರ ಕಂಡು ಹೊದೆಯಲು ಒಂದು ಕಂಬಳಿ ಕೊಟ್ಟನು.ಕೈದಿ ಅದನ್ನು ಹೊದ್ದುಕೊಳ್ಳಲು ಒಪ್ಪದೆ ದೂರ ಸರಿಸಿದನು.ಉಳಿದ ಕೈದಿಗಳು ಎಷ್ಟು ಹೇಳಿದರು ಕೇಳಲಿಲ್ಲ.ಯಾರೊಡನೆಯೂ ಮಾತಾಡದೆ ಮೂಕನಾಗಿ ನಡುಗುತ್ತಾ ಕುಳಿತನು.ಬರಬರುತ್ತ ಅವನ ನಡುಕ ಹೆಚ್ಚಾಯಿತು.ಮುಖ ಕಪ್ಪಿಟ್ಟಿತು.ಆದರೂ ಅಲುಗಾಡದೆ ಕುಳಿತಲ್ಲೇ ಕುಳಿತ ಮೂರ್ತಿಯಂತೆ.

ಅಷ್ಟರಲ್ಲಿ ಸಾಮ್ರಾಟ ನೆಪೊಲಿಯನ್ನನು ಕೈದಿಗಳ ಕ್ಷೇಮ-ಸಮಾಚಾರ ವಿಚಾರಿಸುತ್ತ ಅಲ್ಲಿಗೆ ಬಂದನು.ಜೇಲಿನ ಅಧಿಕಾರಿಗಳು ಆ ವಿಚಿತ್ರ ಕೈದಿಯ ಬಗ್ಗೆ ತಿಳಿಸಿದರು.ನೆಪೋಲಿಯನ್ನನಿಗೂ ಆಶ್ಚರ್ಯವಾಯಿತು.ಕೂಡಲೇ ಆ ಜರ್ಮನ್ ಕೈದಿಯ ಹತ್ತಿರ ಬಂದನು.ಕೈದಿಯು ಸಾಮ್ರಾಟರು ಬಂದರೂ ಸ್ವಲ್ಪವೂ ಗಾಬರಿಯಾಗದೆ,ಆದರ ನೀಡದೆ,ಕದಲದೆ ಕುಳಿತಿದ್ದನು.

ಸಾಮ್ರಾಟರು ಅಧಿಕಾರವಾಣಿಯಲ್ಲಿ ಏನೇನೋ ಕೇಳಿದರು.ಆದರೆ ಕೈದಿ ನಡುಗುತ್ತ ಮೂಕನಂತೆ ಕುಳಿತೇ ಬಿಟ್ಟಿದ್ದನು.ನಡುಗುವ ಕೈದಿಯನ್ನು ಕಂಡು ನೆಪೋಲಿಯನ್ನನ ಹೃದಯ ಕರಗಿತು.ಅಂಥ ಸ್ಥಿತಿಯಲ್ಲಿ ಹಾಗೆ ಬಿಟ್ಟು ಹೋಗಲು ಮನಸ್ಸಾಗಲಿಲ್ಲ.ಕೈದಿಯ ಸಮೀಪ ಹೋಗಿ ಮಮತೆಯಿಂದ ಮೈ ಮುಟ್ಟಿ "ಅಣ್ಣಾ,ಹೀಗೇಕೆ ಹಟ ಮಾಡುತ್ತಿ? ನಿನ್ನ ತಕರಾರು ತೊಂದರೆ ಏನು ಹೇಳು.ಈಗಲೇ ಅದರ ಬಗ್ಗೆ ವಿಚಾರಿಸಿ ಪೂರೈಸಲಾಗುವುದು" ಎಂದು ಕೇಳಿದರು.

ಆಗ ಕೈದಿಯು ಬಾಯಿ ಬಿಟ್ಟು "ಮಹಾಶಯರೇ,ನಿಮ್ಮ ಮಮತೆಗೆ ಧನ್ಯವಾದಗಳು.ನನ್ನ ಮೌನ,ಹಾಗು ನಾನು ಚಳಿಯಲ್ಲಿ ನಡುಗುತ್ತಿದ್ದರೂ ಚಳಿಕಳೆಯಲು ಹೊದ್ದುಕೊಳ್ಳಲಾಗದ ಬಗ್ಗೆ ನಿಮಗೆ ವಿಚಿತ್ರವಾಗಿದೆ ಎಂಬುದನ್ನು ಬಲ್ಲೆ.ಏನು ಮಾಡಲಿ! ನನ್ನದೂ ವೃತವಿದೆ. ನಾನು ನನ್ನ ದೇಶದ ವಸ್ತುಗಳನ್ನಲ್ಲದೆ ವಿದೇಶೀ ವಸ್ತುಗಳನ್ನು ಮುಟ್ಟಲಾರೆ.ಈಗ ನೀವೇ ಹೇಳಿ ನಿಮ್ಮ ದೇಶದ ಕಂಬಳಿ ಹೇಗೆ ಉಪಯೋಗಿಸಲಿ?" ಎಂದ.

ಜರ್ಮನ್ ಕೈದಿಯ ದೇಶ ಪ್ರೇಮದ ಮುಂದೆ ಸಾಮ್ರಾಟ್ ನೆಪೋಲಿಯನ್ನನು ತಲೆ ಬಾಗಿದನು.
ಕೂಡಲೆ ಅಧಿಕಾರಿಗಳಿಗೆ ಕೈದಿಯ ಆಶೆಯನ್ನು ಪೂರ್ತಿಗೊಳಿಸುವಂತೆ ಆದೇಶ ನೀಡಿ ಹೋದನು.
ಬೆಳಕು ಹರಿವ ಮುನ್ನವೇ ಕೈದಿ ಜಗತ್ತಿನ ಜೇಲಿನಿಂದಲೇ ಬಿಡುಗಡೆ ಹೊಂದಿದ್ದ.

Rating
No votes yet