ದ್ವಂದ್ವ

ದ್ವಂದ್ವ


 

 

 

 

ದ್ವಂದ್ವ

ಇವು ಈಗ ತಾನೇ ಹೊರಬಂದ ಹೊಸ ಚಪ್ಪಲಿಗಳು.. ಅವು ಹೊಳೆಯುತ್ತವೆ.. ಗಂಭೀರತೆಯಲ್ಲಿ ರಾಜನ ಹೋಲಿಕೆಯಿದ್ದರೂ ಢಾಳಾಗಿ ಬೀಳುತ್ತಿರುವ ರುಧಿರವರ್ಣದಿಂದಾಗಿ ಖಳನಾಯಕನ ಕಳೆ.. ತಮ್ಮ ತಮ್ಮ ಬೆಲೆಪಟ್ಟಿಯನ್ನು ಐ.ಡಿ. ಕಾರ್ಡಿನಂತೆ ನೇತುಹಾಕಿಕೊಂಡ ಮೇಲೆ, ಈಗ ತಾನೇ ರಸ್ತೆಗಿಳಿದ ಹೊಸ ಸೇಲ್ಸ್ ಮನ್ ನ ಮುಖಚರ್ಯೆ ..

 


ಹೊಳೆಯುವ ನಿಯಾನ್ ದೀಪದ ಗಾಜಿನ ಅರಮನೆಯ ರಾಜ್ಯದಲ್ಲಿ ಮುಳುಗಿಬಿಟ್ಟಿವೆ.. ದಿನ ಬೆಳಗಾದರೆ ಜನ ಓಡಾಡುವ ರಸ್ತೆ ಪಕ್ಕದಲ್ಲೇ ಗಿಜಿಗುಡುತ್ತದೆ.. ಆದರೂ ಮೂಕಿಚಿತ್ರ ನೋಡಿದಂತೆ, ಏನೊಂದೂ ಕೇಳುವುದಿಲ್ಲ.. ಆ ಗಾಜಿನ ಪೆಟ್ಟಿಗೆ ಶಬ್ದ ನಿರೋಧಕ.. ತಾವು ಸುಖದಿಂದ ನಿದ್ರಿಸಲಿ ಎಂದು ತಮ್ಮೊಡೆಯ ಈ ರೀತಿ ವ್ಯವಸ್ಥೆ ಮಾಡಿದ್ದಾನೆ ಎಂದು ಖುಷಿಪಡುತ್ತವೆ. ಪ್ರತ್ಯೇಕ ಹಲಗೆಗಳ ತಮ್ಮ ತಮ್ಮ ಬಿಡಾರದಲ್ಲಿ ತಮ್ಮ ಜೊತೆಯೊಡನೆ ಚಪ್ಪಲಿಗಳು ಹಾಯಾಗಿದ್ದಾವೆ.  

 


ಅಂಗಡಿಯವನಿಗೆ ಅವು ಹೊರಪ್ರಪಂಚವನ್ನು ಕಾಣುವುದಕ್ಕಿಂತ ಹೆಚ್ಚಾಗಿ ಹೊರಪ್ರಪಂಚ ಅವನ್ನು ಕಂಡರೆ ಸಾಕು.. ಅದಕ್ಕೆ ಈ ಗಾಜಿನ ಪೆಟ್ಟಿಗೆಯ ಅಲಂಕಾರ.. "ಮೂರ್ಖ ಚಪ್ಪಲಿಗಳೇ ಎದ್ದೇಳಿ.. ಹೊರಬನ್ನಿ.. ಕೂತಲ್ಲೇ ಕೊಳೆಯಬೇಡಿ.."  ಚಪ್ಪಲಿಗಳು ನಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ.. ಅವು ಹೀಗೆ ಕೂಗುತ್ತಿವೆ: "ದೇವರೇ ಯಾವ ಗಿರಾಕಿಯೂ ತಮ್ಮನ್ನು ಕೊಳ್ಳದಿರಲಿ.. ನಾವಿಲ್ಲೇ ಇರುತ್ತೇವೆ" 

 


ಸ್ವಲ್ಪ ದಿನವಾದ ಮೇಲೆ ಅವಕ್ಕೆ ಅನಿಸುತ್ತದೆ... ಪಕ್ಕದಲ್ಲೇ ಪ್ರತಿಯೊಂದಕ್ಕೂ ಅವರದೇ ಆದ ಜೊತೆಯಿದ್ದರೂ ಏನೋ ಒಂಟಿತನದ ಭಾವ ಕಾಡುತ್ತದೆ ..ಹೊರಗಿನ ಜಗತ್ತು ಫಳ ಫಳ ಹೊಳೆದಂತೆ ಭಾಸವಾಗುತ್ತದೆ.. ಗಾಜಿನ ಗೂಡಿನಲ್ಲಿ ಉಸಿರು ಕಟ್ಟಿದಂತಾಗಿ ಒಂದೇ ಸಮನೆ ಹೊರಹೋಗಬೇಕೆಂಬ ಬಯಕೆ ಕಾಡುತ್ತದೆ.. ಗಂಟೆ ರಾತ್ರಿ ಒಂಭತ್ತಾಗಿದೆ.. ಇನ್ನು ಅರ್ಧ ಗಂಟೆಯೊಳಗೆ ಅಂಗಡಿಯವ ಬಾಗಿಲು ಎಳೆಯುತ್ತಾನೆ.. ಅಷ್ಟರೊಳಗೆ ಸೇಲಾಗಿಬಿಟ್ಟರೆ ಈ ಗಾಜಿನ ಸೆರಮನೆಯಿಂದ ಬಿಡುಗಡೆಯಾಗಿಬಿಡಬಹುದಲ್ಲಾ ಎಂಬ ತವಕ ಅದು.. 

 


ಬಿಡುಗಡೆಯ ಕಲ್ಪನೆಯಲ್ಲಿ ಇರುವ ಸುಖವನ್ನು ನಿಜವಾದ ಬಿಡುಗಡೆಯಲ್ಲಿ ಕಾಣಲು ಅಸಾಧ್ಯ ಎಂಬುದು ಹೊರಬಂದ ಮೇಲೆ ಮಾತ್ರ ತಿಳಿಯುತ್ತದೆ.." ಮುಟ್ಟಾಳ ಚಪ್ಪಲಿಗಳೇ, ಹೊರಗೆ ಬರಬೇಡಿ.. ಹೊರಗಿರುವ ಕಲ್ಲು ಮುಳುಗಳಲ್ಲಿ ನರಳುತ್ತೀರಿ"  ಚಪ್ಪಲಿಗಳು ಇದನ್ನು ನಂಬುವುದಿಲ್ಲ... ಅವು ಹೀಗೆ ಕೂಗುತ್ತಿವೆ: "ದೇವರೇ ಯಾವುದೋ ಒಬ್ಬ ಗಿರಾಕಿ ಈಗಲೇ ನಮ್ಮನ್ನು ಕೊಳ್ಳಲಿ.. ನಾವು ಹೊರಗೆ ಬರುತ್ತೇವೆ" 

 


ಚಪ್ಪಲಿಗಳಿನ್ನೂ ದ್ವಂದ್ವದಲ್ಲಿವೆ..  










Rating
No votes yet

Comments