ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ
[ ನನ್ನ ಬ್ಲಾಗಿನಿಂದ ಮರುಪ್ರಕಟನೆ - ವೆಂ. ]
ಭೋಜರಾಜ ಚಾರಿತ್ರಿಕ ವ್ಯಕ್ತಿ, ಸುಮಾರು ೧೧ನೆಯ ಶತಮಾನದವನು. ಆದರೂ ೫-೬ನೆಯ ಶತಮಾನದ ಕಾಳಿದಾಸನ ಹೆಸರಿನೊಂದಿಗೆ ಭೋಜನ ಹೆಸರು ಜೋತುಬಿದ್ದಿದೆ. ಚಾರಿತ್ರಿಕ ಭೋಜನಂತೆಯೆ ಕಾಳಿದಾಸನ ಭೋಜನೂ ಕವಿತಾಪಕ್ಷಪಾತಿ. ಆಗಾಗ ಕವಿಗಳನ್ನು ತನ್ನಲ್ಲಿಗೆ ಕರೆಸಿಕೊಂಡು ಗೋಷ್ಟಿಗಳನ್ನು ನಡೆಸಿ ಬಹುಮಾನಮಾಡಿ ಕಳಿಸುತ್ತಿದ್ದನು. ಆಗಾಗ ಕವಿತೆ ಕಟ್ಟುವ ಯಾರಿಗೂ ತನ್ನ ಆಸ್ಥಾನದ ಬಾಗಿಲುಗಳನ್ನು ತೆರೆದು ಅಕ್ಷರಲಕ್ಷವನ್ನು ನಡೆಸುತ್ತಿದ್ದನು. ಅಕ್ಷರಲಕ್ಷವೆಂದರೆ ಕವಿತೆಯ ಅಕ್ಷರವೊಂದಕ್ಕೆ ಲಕ್ಷ ಹೊನ್ನುಗಳಷ್ಟು ಬಹುಮಾನಿಸುವುದು. ಯಾರು ಬೇಕಾದರು ಆಸ್ಥಾನಕ್ಕೆ ಬಂದು ತಾವೆ ಕಟ್ಟಿದೆ ಕವಿತೆಯನು ಹಾಡಿ ಬಹುಮಾನ ಪಡೆಯಬಹುದಾಗಿತ್ತು. ಇಂತಹ ರಾಜನಿದ್ದಾಗ ಕಾಳಿದಾಸಾದಿಗಳಿಗೆ ಯಾವ ಕೊರತೆಯೂ ಇದ್ದಿರಲಾರದು. "ತ್ವಯಿ ದಾತರಿ ರಾಜೇಂದ್ರ ಸುದ್ರುಮಾಂ ನಾಶ್ರಯಾಮಹೇ" (ನೀನಿದ್ದಾಗ ಕಲ್ಪತರು ಬೇರೆ ಬೇಕೆ?) ಎಂದು ಅಷ್ಟಲ್ಲದೆ ಹೊಗಳಿದರೆ?
ಯಾರು ಬೇಕಾದರೂ ಬಹುಮಾನ ಪಡೆಯಬಹುದು ಎಂದದ್ದು ಬರೆಯ ಮಾತಿಗಲ್ಲ. ಭೋಜನ ನಾಡಿನ ಮೂಲೆ ಮೂಲೆಗೂ ಹರಿಕಾರರು ಅಕ್ಷರಲಕ್ಷದ ಸುದ್ದಿಯನ್ನು ಮುಟ್ಟಿಸುತ್ತಿದ್ದರಷ್ಟೆ, ದೂರದ ಹಳ್ಳಿಯ ಇಬ್ಬರು ಬಡ ಪ್ರಜೆಗಳು ರಾಜಧಾನಿಗೆ ಬಂದರು. ಇಬ್ಬರೂ ಸಾಮಾನ್ಯವಾಗಿ ಓದಿಕೊಂಡವರು, ಪಂಡಿತರೇನಲ್ಲ. ಲಕ್ಷವಲ್ಲದಿದ್ದರೆ ಸರಿ, ಸಾವಿರ ಹೊನ್ನಾದರೂ ಬಡತನ ನೀಗಿಸೀತು ಎಂಬ ಆಸೆ. ಆದರೆ ಆ ಹೊನ್ನಿಗಾದರೂ ಕವಿತೆ ಕಟ್ಟಬೇಕಲ್ಲ? ಇಬ್ಬರೂ ಸೇರಿ ಒಂದು ಕಟ್ಟುವುದು, ಬಂದದ್ದನ್ನು ಹಂಚಿಕೊಳ್ಳುವುದು ಎಂದು ಮಾಡಿ ಛತ್ರದ ಜಗಲಿಯ ಮೇಲೆ ಕುಳಿತು ಕವನಕ್ಕೆ ತೊಡಗಿದರು. ಸೂರ್ಯ ಮುಳುಗುವ ಹೊತ್ತಿಗೆ ಒಬ್ಬನ "ಭೋಜನಂ ದೇಹಿ ರಾಜೇಂದ್ರ" ಕ್ಕೆ ಇನ್ನೊಬ್ಬ "ಘೃತಸೂಪಸಮನ್ವಿತಂ" ಸೇರಿಸಿದ್ದ. ಆದರೆ ಅಲ್ಲಿಂದ ಮುಂದೆ ಸಾಗಲಾರಲಿಲ್ಲ. ಇನ್ನೆರಡು ಪಾದಗಳನ್ನು ಸೇರಿಸದೆ ಪದ್ಯ ಪೂರ್ತಿಯಾಗದು. ಏನು ಮಾಡುವುದು? ರಾಜ ಬಿಡುವು ಕೊಟ್ಟಮೇಲೆ ಮನೆಗೆ ವಾಪಸಾಗುತ್ತಿದ್ದ ಕಾಳಿದಾಸನಿಗೆ ತಲೆಯ ಮೇಲೆ ಕೈಹೊತ್ತು ಕುಳಿತ ಈ ಇಬ್ಬರು ಕಂಡರು. ವಿಚಾರಿಸಿದಾಗ ವಿಷಯ ತಿಳಿಯಿತು. ಕಾಳಿದಾಸನಿಗೆ ಇದು ಯಾವ ದೊಡ್ಡವಿಷಯ, ಪದ್ಯ ಪೂರ್ತಿಮಾಡಿ ಕೊಟ್ಟ. ಮರುದಿವಸ ಆಸ್ಥಾನಕ್ಕೆ ಪ್ರಜೆಗಳಿಬ್ಬರೂ ಹೋಗಿ ಪದ್ಯವನ್ನು ಒಪ್ಪಿಸಿದರು. "ಭೋಜನಂ ದೇಹಿ ರಾಜೇಂದ್ರ ಘೃತಸೂಪಸಮನ್ವಿತಂ । ಮಾಹಿಷಂ ಚ ಶರಚ್ಚಂದ್ರಚಂದ್ರಿಕಾಧವಳಂ ದಧಿ ॥" ರಾಜ ತಲೆದೂಗಿದ. ನಿಮ್ಮ ಪದ್ಯವನ್ನು ಮೆಚ್ಚಿದ್ದೇನೆ, ಇಕೋ ೧೬ಲಕ್ಷ ಹೊನ್ನು ಎಂದ. ಪ್ರಜೆಗಳು ತಬ್ಬಿಬ್ಬಾದರು, ಇದೇನು ಮಹಾಸ್ವಾಮಿ, ಅನುಷ್ಟಪ್ಪಿಗೆ ೩೨ ಅಕ್ಷ್ರರಗಳಲ್ಲವೆ? ಇರಬಹುದು, ಎಂದ ರಾಜ, ಆದರೆ ನಿಮ್ಮ ಕವನ ೧೬ ಅಕ್ಷರಗಳು. ಮೊಸರು ಕೇಳಿದ್ದು ಕಾಳಿದಾಸನಲ್ಲವೆ, ಅವನಿಗೆ ೧೬ ಲಕ್ಷಗಳು. ಭೋಜ ರಸಿಕ. ಯೋಗ್ಯತೆ ಬಲ್ಲವನು. ಯಾರ ಕಾವ್ಯ ಯಾವ ಮಟ್ಟದ್ದು ಎಂದು ಕ್ಷಣಮಾತ್ರದಲ್ಲಿ ಅಳೆಯಬಲ್ಲವನಾಗಿದ್ದನು. ಕಾಳಿದಾಸನೇನು ಕಡಿಮೆಯೆ? ಅವನಿಗೆ ಮೊಸರು ಆಗಬೇಕು. ಅದೂ ಎಮ್ಮೆಯ ಮೊಸರು. ಶರತ್ಕಾಲದ ಬೆಳದಿಂಗಳಿನಷ್ಟು ಬಿಳುಪಾದ ಎಮ್ಮೆಯ ಮೊಸರು.
ಭೋಜ ನಿಜವಾಗಿಯೂ ಉದಾರಿ. ಯಾರೋ ಒಬ್ಬ "ಉತ್ತಿಷ್ಟೋತ್ತಿಷ್ಟ ರಾಜೇಂದ್ರ ಮುಖಂ ಪ್ರಕ್ಷಾಲಯಸ್ವ ಟಃ | ತ್ವಮೇಷಾಹ್ವಯತಿ ಕುಕ್ಕು ಚವೈತುಹಿ ಚವೈತುಹಿ" ಎಂದು ಪದ್ಯ ಕಟ್ಟಿ ಹೊನ್ನು ಗಿಟ್ಟಿಸಿಕೊಂಡು ಹೋಗಿದ್ದ. ( ರಾಜ ಏಳು, ಹುಂಜ ಕೂಗುತ್ತಿದೆ, ಮುಖ ತೊಳೆ. ನಾಲ್ಕನೆಯ ಪಾದಕ್ಕೆ ವಸ್ತು ಒದಗಲಿಲ್ಲ, ಪಾದಪೂರಣಗಳನ್ನು ಸೇರಿಸಿ ಪಾದ ಪೂರ್ತಿ ಮಾಡಿದ. ಸಂಸ್ಕೃತ ಬಲ್ಲವರಿಗೆ ಈ ಪದ್ಯದ ಹಾಸ್ಯ ಸುಲಭವಾಗಿ ಮನದಟ್ಟಾಗುವುದು. ) ಮಂತ್ರಿ ಬುದ್ಧಿಸಾಗರನಿಗೆ ಇವೆಲ್ಲವೂ ದುಂದುಗಾರಿಕೆ ಎನಿಸಿತು. ನಾಡಿನ ಭಂಡಾರವನ್ನು ಇಂತಹ ಬೊಗಳೆ ಕವಿಗಳಮೇಲೆ ಸುರಿಯುತ್ತಾರೆಯೆ? ರಾಜನಿಗೆ ಹೇಳುವುದಾದರೂ ಹೇಗೆ? ಸ್ನಾನದ ಮನೆಯ ದಾರಿಯಲ್ಲಿ ಕಾಣುವಹಾಗಿ "ಆಪದರ್ಥಂ ಧನಂ ರಕ್ಷೇತ್" (ಹಣವಿದ್ದರೆ ಆಪತ್ಕಾಲಕ್ಕೆ ಆಗುತ್ತೆ) ಎಂದು ಬರೆದ. ಭೋಜನ ಸ್ನಾನದ ನಂತರ ಹೋಗಿ ನೋಡಿದರೆ ಅಲ್ಲಿ "ಶ್ರೀಮತಾಂ ಆಪದಃ ಕುತಃ" (ಹಣವಂತರಿಗೆ ಆಪತ್ತು ಎಲ್ಲಿಯದು) ಎಂದು ಬರೆದಿತ್ತು. ಮಂತ್ರಿ "ಸಾಚೇದಪಗತಾ ಲಕ್ಷ್ಮೀ" (ದುಂದುವೆಚ್ಚ ಮಾಡಿದರೆ ಆಪತ್ತು ತಾನೆ) ಎಂದು ಬರೆದಿಟ್ಟ. ಮರುದಿವನ ರಾಜನ ಉತ್ತರ ಸಿಕ್ಕಿತು "ಸಂಚಿತಾರ್ಥಂ ವಿನಶ್ಯತಿ" (ಕೂಡಿಟ್ಟದ್ದು ಹಾಳಾಗುವುದು).
ವೆಂ.
Comments
ಉ: ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ
In reply to ಉ: ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ by ananthesha nempu
ಉ: ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ