ಧನ್ಯವಾದಗಳು ಗೆಳೆಯರೇ..

ಧನ್ಯವಾದಗಳು ಗೆಳೆಯರೇ..

 


ಮೊದಲಿಗೆ ಎಲ್ಲ ಸ್ನೇಹಿತರಿಗೂ ಸ್ನೇಹಿತರ ದಿನದ ಶುಭಾಶಯಗಳು.

ಹೀಗೆಯೇ ಮನೆಯಲ್ಲಿ ಆರಾಮಾಗಿ ಕುಳಿತಿರುವಾಗ, ಮನಸಿಗೆ ಬೇಸರವಾದಾಗ, ಖುಷಿಯಾದಾಗ, ಹೀಗೆ ಯಾವುದೇ ಭಾವವಿರಲಿ, ಎಷ್ಟೇ ಕ್ಲಿಷ್ಟ, ಸರಳ, ತರ್ಲೆಯಾಗಿರಲಿ, ಮೊದಲು ಹಂಚಿಕೊಳ್ಳುವುದು ಸ್ನೇಹಿತನೊಂದಿಗೆ. ಮೂಲೆಯಲ್ಲಿ ಚಾರ್ಜ್ಗಿರುವ ಮೊಬೈಲ್ ತೆಗೆದು ನಾಲಿಗೆಯ ಮೇಲಿರುವ ಗೆಳೆಯನ ಮೊಬೈಲ್ ಸಂಖ್ಯೆ ಒತ್ತಿ, ಹೇಯ್!! ನೋಡೋ ಹೀಗನ್ನಿಸಿತು ಅಂದ ತಕ್ಷಣ ಆ ಕಡೆಯಿಂದ ಶಹಭಾಶ್!! ಭಲೇ ಎಂಬ ಉದ್ಗಾರ ಇಲ್ಲವಾದರೆ, "ಯಾಕೋ, ನಿಂಗೆ ತಲೆ ಸರಿ ಇದೆ ತಾನೇ?" , "ನಿನ್ಗೆನಾಯ್ತೋ, ನಿನ್ನೆ ತಾನೇ ಸರಿ ಇದ್ಯಲ್ಲೋ" ಹೀಗೆ ಈ ದಿನಗಳಲ್ಲಿ ದೂರವಿರುವ ಸ್ನೇಹಿತನನ್ನು ನಿಮ್ಮ ಊಟದ ಮನೆಯಲ್ಲಿ, ಹೊರಗಿನ ಬಾಲ್ಕನಿಯಲ್ಲಿ, ಹೀಗೆ, ಎಲ್ಲೆಂದರಲ್ಲಿ ಕಾಣುವ ಪರಿ.

 ಮೊದಲಿಗೆ ಅಪ್ಪ,ಅಮ್ಮ, ತಮ್ಮನ್ದಿರಿಂದ ದೂರವಾಗಿ ಕಾಣದೂರಿನಲ್ಲಿ, ಯಾರೋ ಅಪರಿಚಿತರೊಡನೆ ಇರುವಾಗ ಒಬ್ಬಂಟಿ ಎಂಬ ಭಾವ ಬಹುವಾಗಿ ಕಾಡಿ, ನನ್ನ ಶಾಲೆಯ ಗೆಳೆಯರನ್ನು ಬಹಳವಾಗಿ ಮಿಸ್ ಮಾಡಿಕೊಂಡ ಕಾಲ ಅದು, ಅದಕ್ಕೆ ತಕ್ಕಂತೆ, ನನ್ನ ಭಾವಕ್ಕೆ, ವ್ಯಕ್ತಿತ್ವಕ್ಕೆ ಹೊಂದುವಂತ, ಕೆಲವೇ ಕೆಲವು ಗೆಳೆಯರಿದ್ದರು. ಇಂದಿಗೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಒಮ್ಮೆ ಬೆಂಗಳೂರಿನಲ್ಲಿ ಅಕಸ್ಮಾತ್ತಾಗಿ ಮೆಜೆಸ್ಟಿಕ್ನಲ್ಲಿ ಸಿಕ್ಕಾಗ, ಮೈದಡವಿ, ಏನಪ್ಪಾ ನಮ್ಮನ್ನ ಮರೆತೇ ಬಿಟ್ಟೆಯಾ? ಎಂಬ ಮಾತು ಇನ್ನೂ ಕಿವಿಯಲ್ಲಿ ಕೇಳಿಸುತ್ತಿದೆ. ಇಂದು ಹೇಳ ಬಯಸುತ್ತೇನೆ, ಇಲ್ಲ, ಖಂಡಿತ ನಿಮ್ಮನ್ನು ಮರೆತಿಲ್ಲ, ಮರೆಯಲು ಸಾಧ್ಯವೂ ಇಲ್ಲ ಆ ಊರಿನಲ್ಲಿ ಯಾರೂ ಪರಿಚಿತರಿಲ್ಲದೆ ಒದ್ದಾಡುತ್ತಿದ್ದಾಗ, ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ.

  ಆ ಊರಿನ ಆ ನನ್ನ ಸ್ನೇಹಿತರ ಪ್ರೀತಿಯನ್ನು ಸವಿಯುತ್ತಿರುವಾಗಲೇ, ಬೆಂಗಳೂರಿಗೆ ಬರುವಂತಾಯಿತು, ಬೆಂಗಳೂರಿಗೆ ಬಂದ ಮೇಲೂ ನನ್ನ ಪರಿಸ್ಥಿತಿ ಅಷ್ಟು ಚೆನ್ನಿರಲಿಲ್ಲ ನನ್ನ ಮೊದಲ ಗೆಳೆಯರ್ಯಾರೂ ಇಲ್ಲಿರಲಿಲ್ಲ ಅಂತೆಯೇ ಇಲ್ಲಿಯೂ, ದಿನ ಕಳೆದಂತೆ ಗೆಳೆಯರ ಬಳಗ ಬೆಳೆಯಲು ಆರಂಭವಾಯ್ತು, ಇಂದು ವಾರಕ್ಕೊಮ್ಮೆ ಗೆಳೆಯರನ್ನು ನೋಡದಿದ್ದರೆ, ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಹೀಗೆಯೇ ನೀವು ತಾವು ಎಂದು ಮೊದಲಾದ ನಮ್ಮ ಗೆಳೆತನ ಇಂದು, ನೀನು, ತಾನು, ಹೋಗೋ, ಬಾರೋ ವರೆಗೆ ಬೆಳೆದಿದೆ. ಅಂತೆಯೇ ಸಂಪದದಲ್ಲೂ ಗೆಳೆತನದ ಜಾತ್ರೆ ಮುಂದುವರೆದಿದೆ. ನನ್ನ ಬದುಕನ್ನು ರೂಪಿಸುವಲ್ಲಿ, ಎಲ್ಲ ರೀತಿಯಲ್ಲೂ ನನ್ನನ್ನು ತಿದ್ದಿ, ತೀಡಿ ಬೆಳೆಸಿದ ಗೆಳೆಯರನ್ನು ಈ ದಿನ ನೆನೆದು ಪ್ರೀತಿಯಿಂದ ನನ್ನ ವಂದನೆಗಳನ್ನು ಸಲ್ಲಿಸಬಯಸುತ್ತೇನೆ. ಧನ್ಯವಾದಗಳು ಗೆಳೆಯರೇ..

ಕವಿವಾಣಿಯಂತೆ, "ಸ್ನೇಹ ಅತಿ ಮಧುರ

                          ಸ್ನೇಹ ಅದು ಅಮರ

                          ಸ್ನೇಹವೇ ಗುಡಿಯೂ

                          ಪ್ರೀತಿಯೇ ದೇವರು

                           ಕಾಲ ದೇಶ ಮೀರಿದ ಭಾವ"  ಈ ಮಧುರ ಪ್ರೀತಿಪೂರ್ವಕ ಸ್ನೇಹ ಅಮರವಾಗಿ ಬೆಳೆದು ನಮ್ಮೆಲ್ಲರ ಮನಗಳಲ್ಲಿ ಸ್ನೇಹದ ಗುಡಿ ಕಟ್ಟುವಂತಾಗಲಿ, ಅಲ್ಲಿ ಪ್ರೀತಿಯ ದೇವರ ಸ್ಥಾಪನೆಯಾಗಲಿ ಎಂದು ಹಾರೈಸುತ್ತೇನೆ.

 
Rating
No votes yet

Comments