ಧರ್ಮಿಷ್ಟರ ದಂಧೆ

ಧರ್ಮಿಷ್ಟರ ದಂಧೆ

"ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!" ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು. ಒಪ್ಪಿಗೆಯಾಗದವರು ಒಂದೆರಡು ಕ್ಷಣ ದುರುದುರು ಎಂದು ನೋಡಿ "ಹಾಳಾಗಿ ಹೋಗಲಿ" ಎಂಬಂತೆ ಇನ್ನೊಂದತ್ತ ತಿರುಗಿದರು.

ಈ ಒಂದು ವಾರದಲ್ಲಿ ಸಿಡ್ನಿಯ ಮಂದಿಗೆ ತಮ್ಮ ನಂಬಿಕೆಯ ಬಗ್ಗೆಯಷ್ಟೇ ಅಲ್ಲ - ಆದರೆ ಕ್ಯಾತಲಿಕ್ ಎಂಬ ಬಹುದೊಡ್ಡ  ಸಂಯೋಜಿತ ಧರ್ಮದ ಬಗ್ಗೆ ತಲೆಯಲ್ಲಿ ಹಲವು ಯೋಚನೆ ಅನುಮಾನ ಅಭಿಮಾನ ಎಲ್ಲ ಮೂಡಿ ಮುಳುಗುತ್ತಿದೆ. ನೂರಾರು ಸಾವಿರ ಮಂದಿ ಸೇರಬೇಕೆ ಅದೂ ಈ ಕಾಲದಲ್ಲಿ ಅಂದಾಗ ಇಸ್ಲಾಂ ಧರ್ಮದ ಹಜ್ ಯಾತ್ರೆಯನ್ನು ನೆನಪಿಸುತ್ತಾರೆ. ಹಿಂದೂಗಳ ಪ್ರತಿ ಹಬ್ಬಕ್ಕೂ ಹತ್ತಾರು ಸಾವಿರವಾದರೂ ಸೇರುವುದನ್ನೂ, ಕುಂಭಮೇಳಕ್ಕೆ ಕೋಟಿ ಕೋಟಿಯಲ್ಲಿ ಸೇರುವುದನ್ನು ಎತ್ತಿ ತೋರಿಸುತ್ತಾರೆ. ಒಬ್ಬರಿಗಿರುವ ನಂಬಿಕೆ ಇನ್ನೊಬ್ಬರಿಗೆ ಬೇಡವೇ ಎಂಬಂತೆ ಮುಖ ನೋಡುತ್ತಾರೆ.

ಜಾಗತಿಕ ಯುವ ದಿನ ಎಂದು ಕ್ಯಾತಲಿಕ್ ಚರ್ಚ್ ಹಮ್ಮಿಕೊಳ್ಳುವ ಈ ಉತ್ಸವ ಎರಡು ವರ್ಷಕೊಮ್ಮೆ ನಡೆಯುತ್ತದಂತೆ. ಸಿಡ್ನಿಗೆ ನೂರಾರು ಸಾವಿರ ಮಂದಿ ಬಂದಿಳಿದು ಗದ್ದಲ ಶುರುಮಾಡಿದ್ದಾರೆ. ಸಿಡ್ನಿಯ ಮುಖ್ಯ ಬೀದಿಗಳೆಲ್ಲಾ ಮುಚ್ಚಲಾಗಿದ್ದು ಧರ್ಮಿಷ್ಟರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ. ಸಿಡ್ನಿಯ ನಡುವಲ್ಲಿರುವ ಚಂದವಾದ ಡಾರ್ಲಿಂಗ್ ಹಾರ್ಬರಿನಲ್ಲಿ ಪೋಪಜ್ಜನ ಮಾಸ್ ಅಂತೆ. ನಂತರ ಸಿಡ್ನಿಯನ್ನು ಆವರಿಸಿರುವ ಸಾಗರದ ಒಳನೀರುಗಳಲ್ಲಿ ಪೋಪಜ್ಜನ ಬೋಟಕೇಡ್ ಅಂತೆ.

ಜಗತ್ತಿನ ಎಲ್ಲ ಕಡೆಯಿಂದ ಬಂದಿಳಿದಿರುವ ಯಾತ್ರಿಗಳ ಹಾಡು, ಗದ್ದಲ ಗಲಭೆ. ಈ ಮಧ್ಯೆ, ನಾಮ ಹಾಕಿಕೊಂಡು, ಶಾಠಿ ಉಟ್ಟ ಹರೇ ಕೃಷ್ಣದವರ ಕಿರಿಕಿರಿ. ಇಂಡಿಯಾದಿಂದ ಇದಕ್ಕಾಗಿ ಎಂಬಂತೆ ಬಂದು ನ್ಯೂಜಿಲಾಂಡಿನೊಳಗೆ ತೂರಿ ಮಾಯವಾದ ನಿರಾಶ್ರಿತರು ಮತ್ತೊಂದು ಕಡೆ. ಅವರು ಕ್ಯಾತಲಿಕ್ಕರೇ ಅಲ್ಲ ಅಂತ ಒತ್ತಿ ಹೇಳುತ್ತಿದ್ದಾರೆ ಬೇರೆ.

ಈ ಗುರುವಾರ ಸಿಡ್ನಿಯ ಎದೆಯನ್ನು ಸೀಳುವಂತೆ ನಡು ರಸ್ತೆಯಲ್ಲಿ ಪೋಪಜ್ಜನ ಬಹುದೊಡ್ಡ ಪೆರೇಡಂತೆ. ಊರ ತುಂಬಾ ಜನ. ಭಕ್ತರು, ನಿರಾಸಕ್ತರು ಮತ್ತು ತಪ್ತರು. ಎಲ್ಲರ ಸಂತೆ ಸೇರಲಿದೆ.

ಸಿಡ್ನಿಯ ತುಂಬಾ ಎಲ್ಲಿ ಹೆಜ್ಜೆಯಿಟ್ಟರು ನಂಬು, ನಂಬದಿರು, ಅಥವಾ ನಂಬವುದೇ ಯಾಕೆ ಎನ್ನುವಂತ ತಿಕ್ಕಾಟ. ಇವೆಲ್ಲದರಿಂದ ಚಳಿಯಲ್ಲೂ ಗರಮ್ಮಾದ ಹವೆ.

Rating
No votes yet

Comments