ಧರ್ಮ ಪಥ
ಹೊಸನಗರದ ರಾಮಚಂದ್ರಾಪುರ ಮಠ ಈಗ ಯಾರಿಗೂ ಅಷ್ಟಾಗಿ ಅಪರಿಚಿತವೇನೂ ಅಲ್ಲ. ಗೋ ಹತ್ಯೆ ನಿಷೇದ, ಗೋಕರ್ಣ ಹಸ್ತಾಂತರ ಮುಂತಾದ ವಿಷಯಗಳಿಂದ ಮಾಧ್ಯಮದಲ್ಲೂ, ಜನರ ಬಾಯಿಯಲ್ಲೂ ಆಗಾಗ ಮಾತಾಗಿ, ಕತೆಯಾಗಿ, ಕೆಲವೊಮ್ಮೆ ಅಂತೆ ಕಂತೆಗಳಾಗಿ ಅಂತು ಜನಪ್ರಿಯವಾಗಿದೆ. ಈಗ ಸುಮಾರು ಮೂರು ತಿಂಗಳ ಹಿಂದೆ ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆಗಳು ಮಠದ ಬಗ್ಗೆ ಮತ್ತೆ ಅವ್ಯಾಹತವಾಗಿ ಬರೆದವು. ಸ್ವಾಮಿಗಳ ಬಾಮೈದ ಜಗದೀಶ ಶರ್ಮ ಮಠದ ಶಾಲೆಯಲ್ಲಿ ಅತ್ಯಾಚಾರ-ಪೂರ್ವ ಕಾರ್ಯಕ್ರಮಗಳನ್ನು ಎಸಗುತ್ತಿದ್ದಾನೆಂದು ಅವು ಆಪಾದಿಸಿದ್ದವು ಅಥವಾ ಬಯಲಿಗೆಳೆದಿದ್ದವು. ಅದಾಗಲೇ 8-9 ಮಕ್ಕಳನ್ನು ಶಾಲೆ ಬಿಟ್ಟಿರುವುದನ್ನು ಹಾಗು ಅವರಲ್ಲೊಬ್ಬ ಮಗುವಿನ ತಾಯಿಯ ಸಂದರ್ಶನವನ್ನು ಒತ್ತೊತ್ತಿ ಬರೆದಿದ್ದವು. ನಂತರ ಜಗದೀಶ್ ಶರ್ಮ ತಲೆಮರೆಸಿಕೊಂಡರೆಂದು, ಸಾಗರದಲ್ಲೆಲ್ಲೋ ಜನರು ಅವನನ್ನು ಥಳಿಸಿದರೆಂದು, ಮರುದಿನವೇ ಥಳಿಸಿದ್ದು ಸುಳ್ಳೆಂದೂ ಹೀಗೆ ದಿನಕ್ಕೊಂದು ತಿರುವು ಪ್ರತಿನಿತ್ಯ ಸವಿಸ್ತಾರವಾಗಿ ಕೆಲೆವಷ್ಟೇ ಪ್ರತಿಕೆಗಳಲ್ಲಿ, ಟಿವಿಯಲ್ಲಿ ವರದಿಯಾಗತೊಡಗಿತು. ಇವೆಲ್ಲಾ ಬ್ರೇಕಿಂಗ್ ನ್ಯೂಸ್ ಗಳಾಗಿ ಜನಮನದಲ್ಲಿ ಮಠದ ಬಗೆಗೆ ಹೊಸದೊಂದು ಅನುಮಾನ, ಬಿರುಕು, ಜಿಗುಪ್ಸೆ ಮೂಡತೊಡಗಿದ್ದು ಸುಳ್ಳಲ. ಈ ಮದ್ಯೆ ಮಠದ ಆಡಳಿತ ಮಂಡಳಿಯವರು ಇದು ದುಷ್ಟಕೂಟದ ಹುನ್ನಾರವೆಂದೂ, ಹಾಗೆ ಎಂತದು ನಡೆದಿಲ್ಲವೆಂದು ಹೇಳಿದ್ದಾಯಿತು. ಸ್ವತಃ ಸ್ವಾಮಿಗಳೇ ಇದು ಸಂಪೂರ್ಣ ಅವಾಸ್ತವ ಎಂಬುದನ್ನು ತಮ್ಮ ಚಾತುರ್ಮಾಸ ಆಸಸ್ತಾನವಾಗಿದ್ದ ಕೋಲ್ಕತ್ತಾದಿಂದಲೇ ಹೇಳಿಸಿದ್ದೂ ಆಯಿತು.
ಆದರೆ ಮಾಧ್ಯಮದವರು ಅಲ್ಲಿಗೆ ಬಿಡಲ್ಲಿಲ್ಲ, ಜಗದೀಶ್ ಶರ್ಮನ ಕರ್ಮಕಾಂಡದ ಬಗ್ಗೆ ಪೋಷಕರೊಬ್ಬರು ಈ ಮೊದಲೇ ಆಡಳಿತ ಮಂಡಳಿಗೆ ದೂರು ಕೊಟ್ಟಿದ್ದರಂತೆ, ಯಾವುದೇ ಫಲ ಕಾಣದಿದ್ದಾಗ ಮಾದ್ಯಮದ ಮುಂದೆ ಬರಬೇಕಾಯಿತಂತೆ, ಹೀಗೆ ಮಾದ್ಯಮದ ಮುಂದೆ ಬಂದ ತಪ್ಪಿಗಾಗಿ ಮಠದ ಗೂಂಡಾಗಳು ಬೆದರಿಕೆ ಹಾಗಿದ್ದಾರಂತೆ. ಯಾವ ವಿಷಯವನ್ನು ಮಾದ್ಯಮದವರು ಬಿಡಲ್ಲಿಲ್ಲ. ಅದನ್ನೆಲ್ಲ ಓದಿದವರಿಗೆ ಮಠ ಹತ್ತಿರದವರೆ ಮಾದ್ಯಮಕ್ಕೆ ವಿಷಯ ತಲುಪಿಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು - ಸ್ವಾಮೀಜಿಯವರಿಗೆ ತಲೆಬಿಸಿಯಾಗಿದ್ದು ಅಲ್ಲೇ, ತಾವು ಕಳೆದ 15 ವರ್ಷದಿಂದ ಯಾರಿಗಾಗಿ ದುಡಿದಿದ್ದರೋ, ಅವರೇ ಮಠದ ಬಗ್ಗೆ ಇಲ್ಲ ಸಲ್ಲದ ಕಥೆ ಸೃಷ್ಟಿಸುತ್ತಿದ್ದಾರೆ. ನೂರಾರು ಹೋಳಾಗಳಾಗಿ ಹೋಗಿ, ಎಲ್ಲೆಲ್ಲೋ ತಮ್ಮಷ್ಟಕ್ಕೆ ಬದುಕುತ್ತಿದ್ದ ಮಠದ ಶಿಷ್ಯರನ್ನೆಲ್ಲ ತಾವು ಒಟ್ಟುಗೂಡಿಸಿ, ಒಗ್ಗಟ್ಟಿನ ಅರಿವನ್ನು ಮೂಡಿಸಿಲ್ಲವೇ? ಪ್ರತಿಯೊಂದು ಗ್ರಾಮಕ್ಕೂ, ಊರಿಗೂ, ಮನೆಗೂ ಬೇಟಿ ಮಾಡಿ ಧರ್ಮದ ಅಗತ್ಯತೆಯನ್ನೂ, ಆಷ್ಟೇ ಮುಖ್ಯವಾಗಿ ಈ ಅದುನಿಕ ಜಗತ್ತಿನಲ್ಲಿ ಸಂಘಟನೆಯ ಪ್ರಾಮುಖ್ಯವನ್ನು ವಿವರಿಸಿ, ತಿಳಿಸಿ, ಒಬ್ಬೋಬ್ಬರನ್ನಾಗಿ ಕರೆದು ಕೂಡಿಸಿ, ಮಲೆನಾಡಿನ ಮೂಲೆಯಿಂದ ಮುಂಬೈ ತುದಿಯವರೆಗೂ ಮಠದ ಹೆಸರನ್ನು ಬೆಳಗಿಸಲಿಲ್ಲವ? ಈ ಪರಿಯಾದ ಸಹಸ್ರ ಆನೆ ಬಲದ ಸಂಘಟನೆಯನ್ನು ಬೆಳೆಸಲು ಹಣ ಮಾತ್ರ ಮುಖ್ಯವಲ್ಲ, ಮಠದ ಪ್ರತಿಯೊಂದು ಕನಸನ್ನು ಶ್ರೆದ್ದೆಯಿಂದ ನನಸಾಗಿಸುವ ಶಿಷ್ಯರು, ಭಕ್ತರು ಬೇಕು. ಮೊದಲಾಗಿ ಶಿವಮೊಗ್ಗದ ಆ ಮೂಲೆಯಲ್ಲಿರುವ ಮಠಕ್ಕೆ ಜನ ಬರಬೇಕು, ಬರುವ ಪ್ರತಿಯೊಬ್ಬನಿಗೂ ಮುಂಬಾರಿ ಇನ್ನೂ ಹತ್ತು ಜನರನ್ನು ಕರೆದು ತರುವಷ್ಟರ ಮಟ್ಟಿಗೆ ಅವರನ್ನು ಆಧರಿಸಬೇಕು, ಉತ್ತಮ ಸಮಾಜಕ್ಕಾಗಿ ಮಠದ ಮುಂದಿರುವ ಸವಾಲುಗಳನ್ನೂ, ಅವುಗಳನ್ನು ಎದುರಿಸವ ಉಪಾಯವನ್ನು ಎಲ್ಲರೂ ಮೆಚ್ಚುವಂತೆ ಒಪ್ಪುವಂತೆ ವಿವರಿಸಬೇಕು. ಒಂದು ನಿಮಿಷವೂ ವ್ಯರ್ಥವಾಗದಂತೆ ಹಗಲಿರುಳೂ ತಾವು ತಮ್ಮನ್ನು ಕಳೆದ 15 ವರ್ಷದದಿಂದ ತೊಡಗಿಸಿಕೊಂಡಿಲ್ಲವೇ? ಸ್ವಾಮೀಜಿಯವರಿಗೆ ಆ ಕ್ಷಣದಲ್ಲಿ ಎಲ್ಲವೂ ನಿರರ್ಥಕವೆನಿಸಿರಬೇಕು, ಆಡುವ ಜನರೆದುರು ಕುಣಿಯುವುದು ತರವಲ್ಲವೆಂದುಕೊಂಡಿರಬೇಕು. ಮಠಕ್ಕೆ ಸಂಬಂದಪಟ್ಟ ಹಿರಿಯರನ್ನೂ, ಆಡಳಿತ ಮಂಡಳಿಯನ್ನೂ, ಸಮಸ್ತ ಶಿಷ್ಯ ವರ್ಗವನ್ನು ಮಠಕ್ಕೆ ಬರ ಹೇಳಿಯೇ ಬಿಟ್ಟರು. ಅಂದು ಸ್ವಾಮೀಜಿಯವರು ಹೇಳಿದ್ದರ ಸಾರಾಂಶ ಇಷ್ಟು: ತಾವು ಮಠಕ್ಕೆ ಜನರು ಬಯಸಿ ನೇಮಿಸಲ್ಪಟ್ಟವರೆಂದೂ, ಒಂದೊಮ್ಮೆ ತಾವು ಯಾರಿಗೂ ಬೇಡವಾದರೆ ಈ ಕ್ಷಣವೇ ಪೀಠ ತೊರೆಯುತ್ತೆವೆಂದೂ ಹಾಗು ಆ ಸಮಯದಿಂದಲೇ ತಾವು ರಚಿಸಿದ್ದ ಸರ್ವಸಂಘಟನೆಗಳನ್ನೂ, ಕಮಿಟಿಗಳನ್ನೂ ವಿಸರ್ಜಿಸುತ್ತಿರುವುದಾಗಿ ಘೋಶಿಸಿಯೇಬಿಟ್ಟರು. ಇಡೀ ಶಿಷ್ಯವರ್ಗಕ್ಕೆ ಸಿಡಿಲೆರಾಗಿ ಬಂದಂತಾಗಿ, ತಮ್ಮ ಮುಂದಿನ ಬದುಕೇ ಸುಟ್ಟು ಕರುಕಲಾದಂತಾಯ್ತು. ಆ ದಿನ, ವಾರ, ತಿಂಗಳೆಲ್ಲ ಮಠದಲ್ಲೊಂದು ಸೂತಕದ ಛಾಯೆ ಇತ್ತು. ಗುರುಗಳ, ಮಠದ ಸ್ತಿತಿ ಕಂಡು ಬಹಳ ಮಂದಿ ಮರುಗಿದರು, ಕೆಲವರು ಸ್ವಾಮಿಗಳ ಸಂಬಂದಿಕರು ಮಠದಲ್ಲಿ ಇರಬಾರದಿತ್ತು ಎಂದರು. ಇನ್ನೂ ಕೆಲವರು ಸ್ವಾಮಿಗಳು ತಮ್ಮ ಬಾವನನ್ನು ರಕ್ಷಿಸಲು ಪೀಠ ಬಿಡುತ್ತೇನೆಂದು ಹೆದರಿಸಿದರು, ಅದಿಲ್ಲವಾಗಿದ್ದರೆ ಯಾವದೋ 2 ತಗಡು ಪತ್ರಿಕೆಯಲ್ಲಿ ಏನೂ ಬಂತು ಅಂತ ಇಷ್ಟೆಲ್ಲಾ ರಾದ್ದಾಂತ ಮಾಡಬೇಕಿತ್ತಾ? ಎಂಬಿತ್ಯಾದಿಯಾಗಿ ಪ್ರಶ್ನಿಸಿದರು.
**********************************************************************************************************
ಇಷ್ಟೆಲ್ಲಾ ಆಗಿ ಈಗ ಮೂರು ತಿಂಗಳಾಗಿದೆ, ಇಂದು ಬೆಳಿಬೆಳಿಗ್ಗೆ ಚಂದ್ರು ಎಲ್ಲರ ಮನೆಗೂ ಹೋಗಿ ಸಂಜೆ 5 ಗಂಟೆಗೆ ಊರಿನ ಗಣಪತಿ ದೇವಸ್ತಾನದಲ್ಲಿ ಮೀಟಿಂಗ್ ಇದೆಯೆಂದೂ, ಅಲ್ಲಿಗೆ ಮಠದ ಮುಖ್ಯಸ್ತರು ಬರುತ್ತಾರೆಂದು ಹಾಗೂ ಊರಿನವರೆಲ್ಲರೂ ತಪ್ಪದೆ ಬರಬೇಕೆಂದು ಹೇಳಿದರು. ಚಂದ್ರು ಬರುವ ಹೊತ್ತಿಗೆ ಕಾಡುಮಾವನಿಗೆ ಮುಂಜಾನೆ ಎದ್ದು ದೇವರಿಗೆ ಹೂ ಕೊಯ್ದು, ಕೋಟ್ಟಿಗೆ ಕೆಲಸ ಮುಗಿಸಿಯಾಗಿತ್ತಷ್ಟೆ. "ಕಾಡ್ಮಾವ, ವಿಷಯ ಹಿಂಗ್ ಹಿಂಗ್ ಇದ್ದು, ಸ್ವಾಮಿಗಳ ಅಪ್ಪಣೆ ಆಯ್ದು, ನೀ ಆಗಲಿ, ನಾಗರಾಜ್ ಆಗಲಿ ತಪ್ಪದೆ ಬನ್ನಿ" ಚಂದ್ರು ಗುಡ್ಡ ಹತ್ತಿದ ಸುಸ್ತಿನಲ್ಲಿ ಉಸ್ಸ್ ಎನ್ನುತ್ತಾ, ಒಂಥರಾ ಮಠದವರು ಬಳಸುವ ಶಬ್ದಗಳನ್ನೇ ಬಳಸಿ ಸಬೆಗೆ ಬರ ಹೇಳಿದರು. ಕಾಡು ಮಾವನ ಮನೆ ಊರ ತುದಿಗೆ, ಗುಡ್ಡದ ನೆತ್ತಿಯಲ್ಲಿ, ಇದ್ದದ್ದರಿಂದ ಹತ್ತಿ ಬರುವ ಎಂಥವರಿಗೂ ಸುಸ್ತಾಗುತ್ತದೆ ಅನ್ನಿ. ಚಂದ್ರುಗೆ ಸುಸ್ತಾಗಿದ್ದರೂ, ಮಠದ ಈ ಬಾಗದ "ಗುರಿಕಾರ"ನಾಗಿ ತಾನು ಕಡೆಯ ಬಾರಿ ಬರುತ್ತಿವುದು ಎಂದೆನಿಸಿ ಜವಾಬ್ದಾರಿಯನ್ನು ಹೆಗಲಿಂದಿಳಿಸಿದ ನೆಮ್ಮದಿಯಲ್ಲಿದ್ದರು.
ಅಂದು ಸ್ವಾಮಿಗಳು ತಾವು ರಚಿಸಿದ್ದ ಸರ್ವಸಂಘಟನೆಗಳನ್ನೂ, ಕಮಿಟಿಗಳನ್ನೂ ವಿಸರ್ಜಿಸುತ್ತಿರುವುದಾಗಿ ಘೋಶಿಸಿದ್ದರಿಂದಲೇ ಇಷ್ಟೆಲ್ಲಾ ಆಗಿರುವುದು. ಮಠದ ಎಲ್ಲ ಶಿಷ್ಯರ ಬೇಡಿಕೆ ಮೇರೆಗೆ ಸ್ವಾಮಿಗಳು ಪೀಠದಲ್ಲಿ ಮುಂದುವರೆಯಲು ಒಪ್ಪಿದರೂ, ತಮ್ಮ ಘೋಷಣೆಯನ್ನು ಹಿಂತೆಗೆದುಕೊಳ್ಳುವಂತಿರಲಿಲ್ಲ, ಹಾಗಾಗಿ ಮರು ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅದಲ್ಲದೆ ಇದ್ದಿದ್ದರೆ ಚಂದ್ರು ಇನ್ನೂ ಹತ್ತು ವರ್ಷ "ಗುರಿಕಾರ" ನಾಗಿರಲು ಯಾರೂ ಸಂಕದೂರಲ್ಲಿ ಅಪಸ್ವರ ಎತ್ತುತಿರಲ್ಲಿಲವೇನೋ. ಈಗಲೂ ಊರವರ ಮನಸ್ಸಿಗೆ ಚಂದ್ರುವೇ ಮುಂದುವೆರೆಯಲಿ ಅಂತಿದೆ. ಗಂಡಾಂತರ ಅದದ್ದೆ ಅಲ್ಲಿ, ಚಂದ್ರುಗೆ ಸುತರಾಂ ಮನಸ್ಸಿಲ್ಲ, ಊರಲ್ಲಿ ಯಾರೂ ತಾವಾಗಿ ಮುಂದೆ ಬರುತ್ತಿಲ್ಲ, ಚಾತುರ್ಮಾಸ ಬೇರೆ ಬಂದೆ ಬಿಟ್ಟಿದೆ, "ಗುರುಕಾಣಿಕೆ" ಸಲ್ಲಿಸಲಾದರೂ ಚಾತುರ್ಮಾಸದ ಮೊದಲೇ "ಗುರಿಕಾರ" ನೇಮಕವಾಗುವುದು ಬೇಡವೇ? ಊರಿಗೆ ಊರೇ ಸಣ್ಣಗೆ ಬೆವೆತಿದೆ, ಜೊತೆಗೆ ಯಾರು ವಹಿಸಿಕೊಳ್ಳುತ್ತಾರೆಂಬ ಕುತೂಹಲ ಎಲ್ಲರಿಗಿದೆ.
ಕಾಡುಮಾವನ ಆಲೋಚನೆಯ ಹಾದಿ ಬೇರೆಡೆಗೆಯೆ. ತನ್ನ ಮನೆಯಲ್ಲಿರುವುದು ತಾನು ಮತ್ತು ಮಗ ಮಾತ್ರ, ಎರಡು ವರ್ಷದ ಹಿಂದೆ ಹೆಂಡತಿ ತೀರಿಕೊಂಡಿದ್ದಾಳೆ, ಮಗ ನಾಗರಜನಿಗೆ ಈ ವರ್ಷ ಮದುವೆ ಮಾಡಬೇಕು, ಆದರೆ ಅವನಿಗೆ ಯಾಕೋ ಶನಿ ದೆಸೆ ಇದ್ದಂತಿದೆ. ಕಳೆದ ಅಮಾವಾಸ್ಯೆಯ ಹಿಂದಿನ ದಿನ ಆರಾಮಾಗಿ ಮಲಗಿದ್ದವನು, ರಾತ್ರಿ ದೊಡ್ಡಗೆ ಕೂಗಿ, ಪ್ರಜ್ಞೆ ತಪ್ಪಿ ಬಿದ್ದದ್ದು, ಮರುದಿನ ಸಂಜೆವರೆಗೂ ಎಂತೆಂತದೂ ಹಲುಬುತ್ತಿದ್ದುದು ಮತ್ತಿನ್ನೆನಕ್ಕೆ? 23 ರ ಹರೆಯದವನಿಗೆ ಇದು ಶನಿ ಕಾಟವಲ್ಲದೆ ಇನ್ನೇನು. ತಿಮ್ಮಣ್ಣನ್ನ ಬಳಿ "ನೋಡಿಸಿದಾಗ" ಅವರು ಅದನ್ನೇ ಹೇಳಿದರು. "ಗುರುವಿಗೆ ನಡೆದುಕೊಳ್ಳಲಿ ಸರಿ ಹೋದೀತು" ಅಂದರು. ಅದಾದ ಮೇಲೆ ಕಾಡುಮಾವ ಸಾಕಷ್ಟು ಚಿಂತಿಸಿದ್ದಾಗಿದೆ, ತನ್ನಿಂದಾಗಲಿ, ಮಗನಿಂದಗಲಿ ಮಠಕ್ಕೆನೂ ತಪ್ಪಾಗಿಲ್ಲ, ಗುರುಕಾಣಿಕೆ, ಹಬ್ಬಗಾಣಿಕೆ ಎಲ್ಲವನ್ನೂ ಕೊಟ್ಟಾಗಿದೆ, ಮಂತ್ರಾಕ್ಷತೆಯೂ ಮನೆಗೆ ಬಂದಿದೆ. ಆದರೂ ಯಾಕೆ ಹೀಗೆ? ಏನಾದರಾಗಲಿ ತಾನು ಮಠದ ಕೆಲಸಗಳಲ್ಲಿ ಇನ್ನೂ ತೊಡಗಿಸಿಕೊಳ್ಳುವ ಎಂದೆನಿಸಿ ಸಬೆಗೆ ತಾನಾಗಲಿ, ಮಗನಾಗಲಿ ಬಂದೆ ಬರುತ್ತೇವೆಂದು ಹೇಳಿ ಚಂದ್ರುವನ್ನು ಕಳಿಸಿದರು.
ಹೀಗೆ ತಮ್ಮ ತಮ್ಮ ಸ್ತಿತಿಗತಿಗೋ, ಕ್ರಿಯಶೀಲತೆಗೋ ಅಥವಾ ಕಿವಿ-ಬಾಯಿಯ ಚಪಲತೆಯ ಅನುಗುಣವಾಗಿಯೋ ಕೆಲವರು ಸಬೆಗೆ ಹೋಗಲು, ಉಳಿದವರು ತಪ್ಪಿಸಿಕೊಳ್ಳಲೂ ಬಯಸಿದರು. ಅಂತು ನಾಲ್ಕಿದ್ದಿದ್ದು ನಾಲ್ಕೂವರೆಯಾಗುವಷ್ಟರಲ್ಲಿ 8 ಜನ ಊರವರೂ, ಮೂವರು ಮಠದವರೂ ಗಣಪತಿ ದೇವಸ್ತಾನದ ಹೋಮ ಕುಂಡದ ಎದುರು ಸೇರಿದರು. ಮಠದ ಕಡೆಯವರಾಗಿ ಬಂದಿದ್ದ, ದೂರದೂರಿನ ಮೋಹನರಾಯರು ಸಬೆಯ ಅದ್ಯಕ್ಷರಾಗಿದ್ದರೆ, ಸುಳ್ಯದಿಂದ ಬಂದಿದ್ದ ವಿಷ್ಣು ಭಟ್ಟರು ತಮ್ಮ ಮಡಿವಸ್ತ್ರದಿಂದಲೂ, ಅತೀ ಸೌಮ್ಯ ಮಾತಿನಿಂದಲೂ ಆಕರ್ಷಣೀಯವೆನಿಸಿದ್ದರು.
ಇನ್ನು ಯಾರು ಬರುವುದಿಲ್ಲ ಅಂತ ಖಾತ್ರಿ ಯಾದ ಮೇಲೆ, ನಾಲ್ಕು ಮುಕ್ಕಾಲಿಗೆ, ಸಬೆ ಆರಂಭವಾಯಿತು. ಮೊದಲಿಗೆ "ಗುರುವಂದನೆ" ಸಲ್ಲಿಸಿದ್ದಾಯಿತು. ಅಧ್ಯಕ್ಷರ ಅಪ್ಪಣೆಯ ಮೇರೆಗೆ, ಹಾಲಿ ಗುರಿಕಾರರಾದ ಚಂದ್ರು ಮಾತು ಆರಂಬಿಸಿದರು "ಶ್ರೀ ಗುರುಭ್ಯೋ ನಮಃ, ಇಂದು ನಾವು ಸೇರಿದ್ದು ನಮ್ಮ ಗ್ರಾಮದಲ್ಲಿ ಮಠದ ಸಂಘಟನೆಯನ್ನು ಪುನರ್ಚೇತನಗೊಳಿಸುವ ಸಲುವಾಗಿ. ನಿಮಗೆಲ್ಲ ಗೊತ್ತಿರುವಂತೆ ಈ ಸೀಮೆಯಲ್ಲಿ ನಮ್ಮ ಊರು ಮಾತ್ರ ಈ ಪ್ರಕ್ರಿಯೆಯಿಂದ ಬಾಕಿ ಉಳಿದಿದ್ದು, ಆದಷ್ಟು ಬೇಗ ನಾವು ಒಬ್ಬ ಗುರುಕಾರರನ್ನು ಹಾಗು ನಾಲ್ವರು "ಮುಖ್ಯ ಶಿಷ್ಯ" ರನ್ನು ನೇಮಿಸಬೇಕಿದೆ. ಶ್ರೀಗಳ ಬಯಕೆಯಂತೆ ಇಲ್ಲಿ ಯಾರನ್ನು ಯಾರೂ ಒತ್ತಾಯಿಸುವ ಹಾಗಿಲ್ಲ. ಇಷ್ಟ ಇದ್ದವರು ತಾವಾಗಿಯೇ ಮುಂದೆ ಬಂದು, ದೈವ ಕಾರ್ಯದ ಜವಾಬ್ದಾರಿ ಹೊತ್ತುಕೊಂಡರೆ ಶ್ರೀಗಳ ಕೃಪೆಗೆ ಒಳಗಾಗಬಹುದು." ಎಂದರು.
ಕಾಡುಮಾವ, ರಾಘವೇಂದ್ರ, ಪರಮಣ್ಣ ಇವರೆಲ್ಲ ಯಾರಾಗಬಹುದೆಂದು ಅಲ್ಲಲ್ಲೇ ಗುನುಗುಡುತ್ತ ಚರ್ಚಿಸಿದರು. ಕಾಡುಮಾವನ ಮಗ ನಾಗರಾಜ, ರಾಘು ಮಗ ಗಂದರ್ವ, ಗಣಪತಿ ಎಲ್ಲರ ಹೆಸರು ಒಮ್ಮೊಮ್ಮೆ ಬಂದು ಹೋಯ್ತು. ಎಲ್ಲರೂ ತಿರುಗಾ ಬುಡುಕ್ಕೆ ಬಂದು 'ಚಂದ್ರುವೇ ಅಗಲಿ' ಎಂದರು. ಚಂದ್ರು ತಾವು ಈ ಬಗ್ಗೆ ಸಾಕಷ್ಟು ಯೋಚಿಸಿದ್ದು, ತಮಗೆ ವೈಯಕ್ತಿಕ ಕಾರಣದಿಂದಾಗಿ ಮುಂದುವರಯಲಾಗುತ್ತಿಲ್ಲವೆಂದೂ, ಈ ಬಗ್ಗೆ ಯಾರು ಎಷ್ಟು ಒತ್ತಾಯಿಸಿದರು ಸಾದ್ಯವಿಲ್ಲವೆಂದರು. ಆ ವಿಚಾರ ಅಲ್ಲಿಗೆ ಬಿಟ್ಟಿದ್ದಾಯಿತು. ಈ ಮದ್ಯೆ ಮೊದಲಿಂದ ಸುಮ್ಮನಿದ್ದ ಸತ್ಯನಾರಾಯಣ ಒಮ್ಮೆಲೇ ತಮ್ಮ ಅಭಿಪ್ರಾಯವನ್ನು ಸ್ವಲ್ಪ ದೊಡ್ದದಾಗಿಯೂ, ಉದ್ವೇಗಭರಿತರಾಗಿ "ನನಗೆ ಶ್ರೀಗಳ ಮೇಲೂ, ಪೀಠದ ಮೇಲೂ ಬಹಳ ನಂಬಿಕೆ ಇದೆ. ಹಾಗಂತ ಮಠದವರು ಹೇಳುವುದು ಎಲ್ಲವನ್ನು ಕೇಳುವುದೂ ಇಲ್ಲ, ಒಪ್ಪುವುದೂ ಇಲ್ಲ. ನನಗೆ ಮಠದ ಕೆಲ ಕೆಲಸಗಳ ಬಗ್ಗೆ ಸಾಕಷ್ಟು ಬಿನ್ನಾಭಿಪ್ರಾಯವಿದೆ, ಆದರೆ 'ನಾನೇ ಸರಿ' ಅಂತ ಎಲ್ಲರ ಮುಂದೆ ಕೂಗಿ, ಒಪ್ಪಿಸುವ ಕೆಲಸಕ್ಕೆ ಹೋಗುವುದಿಲ್ಲ. ಮನೆಯ ಕೆಲಸವೇ ಸಾಕಷ್ಟಿದೆ, ಅಷ್ಟೇ ಸಾಕು. ಈ ಮಠ, ಗುರುಕಾರ, ಮಣ್ಣು, ಮಶಿ ಯಾವುದು ಬೇಡ. ಯಾರು ಬೇಕಾದರೂ ಆಗಲಿ, ನಾನು ಕೈಲಾದಷ್ಟು ದುಡ್ಡು ಕೊಡುತ್ತೇನೆ ಮತ್ತು ಆಶಿರ್ವಾದ ಪಡೆಯುತ್ತೇನೆ ಅಷ್ಟೇ ಸಾಕು. ಈಗ ಪೇಟೆಗೆ ಹೋಗುವ ಕೆಲಸವಿದೆ ತಕ್ಷಣ ಹೊರಡ ಬೇಕು" ಅಂದರು. ಅವರ ಉದ್ವೇಗ ಕಂಡು ಯಾರೂ ಅವರನ್ನು ಸಮಾದಾನ ಪಡಿಸಲಿಕ್ಕಾಗಲಿ, ಸಮಜಾಯಿಷಿ ಕೊಡಲಾಗಲಿ ಹೋಗಲಿಲ್ಲ. ಬದಲಿಗೆ ಮಠದ ಬಗ್ಗೆ ಕೆಟ್ಟದಾಗಿ ಬೇರೆದಿದ್ದ ಮಾಧ್ಯಮದವರವನ್ನು ಎಲ್ಲರು ದೂಷಿಸಿದರು, ನಾವು ರಾಜ್ಯದಾದ್ಯಂತ ಧರಣಿ ಮಾಡಬೇಕಿತ್ತು, ಕ್ಷೆಮೆ ಕೇಳಿಸಬೇಕಿತ್ತು ಅಂತೆಲ್ಲ ಮಾತು ಒಗೆದರು. ತಮ್ಮ ಜನಾಂಗದವರೆಲ್ಲ ಹೇಡಿಗಳೆಂದೂ, ಇದೇ ಮತ್ತ್ಯಾವುದೂ ಜನಾಂಗದಲ್ಲಿ ನಡೆದಿದ್ದರೆ ಮಾರಣ ಹೋಮ ನಡೆಯುತ್ತಿತ್ತೆಂದು ಹೇಳಿದ್ದಾಯಿತು. ಈ ನಡುವೆ ಪರಮಣ್ಣ ಹೇಳಿದ್ದು ಎಲ್ಲರಿಗೂ ಸರಿ ಎನ್ನಿಸಿತು 'ನಾವಿರುವರು ಎಂಟು, ನಮಗೆಲ್ಲರಿಗೂ ಚಂದ್ರುವೆ ಆಗಲಿ ಅಂತಿತ್ತು, ಅದಾಗದಿದ್ದ ಮೇಲೆ ಉಳಿದ 7 ರಲ್ಲಿ ಒಬ್ಬರನ್ನು ಹುಡುಕಬೇಕು, ಸಭೆಗೆ ಬಂದಿಲ್ಲದವರನ್ನು ಸೂಚಿಸುವುದು ತರವಲ್ಲ, ಎಲ್ಲರು ಬಂದಿದ್ದರೆ ಸುಲಭವಿತ್ತೆನೂ' ಎಂದರು.
ಸಭೆಯ ಉದ್ದೇಶವನ್ನು ಗಂಭೀರಗೊಳಿಸಲು ಅಧ್ಯಕ್ಷರು ಮತ್ತು ವಿಷ್ಣು ಭಟ್ಟರು ಮಾತಿಗೆ ಶುರುವಿಟ್ಟುಗೊಂಡರು. ಮೊದಲಿಗೆ ಮೋಹನರಾಯರು ಸ್ವಾಮಿಗಳ ದ್ಯೇಯ, ಸಂಕಲ್ಪ, ಕನಸು, ಅಪ್ಪಣೆ, ಆಜ್ಞೆ ಮುಂತಾದವನ್ನು ವಿವರವಾಗಿ ತಿಳಿಯಪಡಿಸಿದರು. ಮಠದ ವಿಶೇಷ ದೃಷ್ಟಿಕೋನಗಳು, ಹಮ್ಮಿಕೊಂಡಿರುವ ಯೋಜನೆಗಳು ಈಗ ವಿಶ್ವಸಂಸ್ಥೆಯಿಂದಲೂ ಗುರುತಿಸಲ್ಪಟ್ಟಿದೆ. ಹೀಗಿರುವಾಗ ನಾವು ಮಠದ ಕೈಜೋಡಿಸದೇ ಕೂರುವುದು ಸರಿಯಲ್ಲ. ಮಠವನ್ನು ತೆಗಳುವವರು ಹಲವರಿದ್ದಾರೆ, ಚಿಂತೆಯಿಲ್ಲ; ಅವರು ಆ ಮೂಲಕ ಮಠದ ಕೆಲಸವನ್ನು ಸೂಕ್ಶ್ಮವಾಗಿ ಗಮನಿಸುತ್ತಾರೆ ಹಾಗು ಮುಂದೊಂದು ದಿನ ನಮ್ಮನ್ನು ಸೇರಿಯೇ ಸೇರುತ್ತಾರೆ. ಸ್ವಾಮಿಜಿಯವರೇ ಹೇಳುವಂತೆ ದೂರುವವರಿಗಿಂತ ಆಲಸಿಗಳೇ ದೂಡ್ಡ ಶತ್ರು. ನಾವು ಮಠದ ಶತ್ರುಗಳಾಗುವುದು ಬೇಡ, ಪೀಠಕ್ಕೆ ಸದಾ ತೆಲೆಬಾಗೋಣ. ಮುಖ್ಯವಾಗಿ ಮಠದ ಬಗ್ಗೆ ನಾವು ಗೌರವ ಇಟ್ಟುಕೊಳ್ಳೋಣ, ಎಲ್ಲರೂ ಸ್ವಾಮಿಗಳ ಆಜ್ಞಾನುಸಾರವಾಗಿ ನಡೆಯೋಣ ಅಂದರು. ಚರ್ಚೆ ಮತ್ತೆ ಮುಂದುವರೆಯಿತು, ಯಾರು ಗುರಿಕಾರನ ಜವಾಬ್ದಾರಿ ವಹಿಸಿಕೊಳ್ಳಳು ತಯಾರಿಲ್ಲ. ಊರಲ್ಲಿರುವ 25 ಮನೆಯವರು ಅಷ್ತು ಆಲಸಿಗಳೇ? ಇದು ಬೇಜವಾಬ್ದಾರಿ ತನದ ಪರಮಾವದಿಯಲ್ಲವೇ? ತಿಂಗಳಲ್ಲಿ 8 ದಿನ ಮಠ ದಲ್ಲೇ ಕಳೆಯುವ ವಿಷ್ಣು ಭಟ್ಟರಿಗೆ ಸಹಿಸಲಾಗಲ್ಲಿಲ್ಲ. "ಮಠ ಆಗಾಧವಾದದ್ದು, ಶ್ರೀಗಳು ಅದರ ಆತ್ಮ, ನಮಗಿಂದು ಈ ಮಟ್ಟಿನ ಸುಖಕರ ಬದುಕು ಸಿಕ್ಕಿದೆಯೆಂದರೆ ಶ್ರೀಗಳ ದಯೆಯೇ ಸರಿ. ಈ ಬಾಗದಲ್ಲಿ ಹುಟ್ಟಿ, ಶ್ರೀಗಳ ದನಿ ಕೇಳ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ಆದರೆ ಇವತ್ತು ನಾವೆಲ್ಲಿಗೆ ಬಂದು ತಲುಪಿದ್ದೇವೆ ನೋಡಿ, ದೇವರನ್ನು ಪೂಜಿಸಲು, ಪಾಲಿಸಲು ಯಾರು ಮುಂದೆ ಬರುತ್ತಿಲ್ಲ. ಎಂತಹ ದುರ್ಭಾಗ್ಯ. ನಾನು ನೂರಾರು ಕಡೆ ಓಡಾಡಿದ್ದೇನೆ, ಆದರೆ ಇದೇ ಮೊದಲು, ಗುರಿಕಾರರನ್ನು ಹುಡುಕಿಕೊಳ್ಳಿ ಎಂದು ದೊಂಬಾಲು ಬೀಳುವಂತಾದದ್ದು. ಇದೆಲ್ಲ ಮಠದ ಲಾಬಕ್ಕೆಂದು ತಿಳಿದಿರಾ? ಖಂಡಿತಾ ಅಲ್ಲ. ಗುರಿಕಾರನೆಂದರೆ ಮಠದ ಸಂಪರ್ಕ. ನಿಮಗೆ ಯಾವ ಸಂಪರ್ಕ ಬೇಡವೆಂದರೆ ಬಿಡಿ, ನಿಮ್ಮೂರಿನ "ಕಾಲ"ವನ್ನು ದುರ್ವಿದಿಗೆ ಕೊಟ್ಟಂತಾದೀತು ಅಷ್ಟೇ. ಗುರಿಕಾರನಿಲ್ಲವಾದರೆ ಗುರುಕಾಣಿಕೆ ಸ್ವೀಕರಿಸುವಂತಿಲ್ಲ ಅಂದರೆ ನಿಮ್ಮ ಮನೆಯಲ್ಲಿ ನಡೆಯುವ ಯಾವ ಶುಭ ಕಾರ್ಯಕ್ಕೂ ಶ್ರೀ ಗಳ ಆಶೀರ್ವಾದ ಸಿಗದೇ ಹೋಗಬಹುದು, ಅಥವಾ ನಿಮ್ಮ ಯಾವ ಸುಖ ದುಃಖ ಗಳಿಗೂ ಮಠ ಸ್ಪಂದಿಸದೇ ಇರಬಹುದು, ಹಾಗಾಗಲು ನೀವೇ ಕಾರಣರಾಗ್ತಿರಿ, ನಿಮ್ಮ ಊರು ಮಠದ ದಿಗ್ಬಂಧಕ್ಕೆ ಒಳಪಟ್ಟಂತೆ ಇರುತ್ತದೆ ಮತ್ತೊಮ್ಮೆ ಯೋಚಿಸಿ ಅಂದರು.
ಇನ್ನು ಮುಕ್ಕಾಲು ಗಂಟೆ ಚರ್ಚೆ ನಡೆದರೂ ಯಾರೂ ಯಾವ ತೀರ್ಮಾನಕ್ಕು ಬರಲಾಗಲಿಲ್ಲ. ಈ ಊರಿಗೆ ಸದ್ಯಕ್ಕೆ ಗುರಿಕಾರನಿಲ್ಲ ಎಂದರಷ್ಟೇ. ವಿಷ್ಣು ಭಟ್ಟರು ಇದು ತಮ್ಮ ಜೀವನದ ಅತೀ ದುಃಖದ ದಿನವೆಂದು, ಆದಷ್ಟು ಬೇಗ ಜನರಿಗೆ ಆ ದೇವನೇ ದಾರಿ ತೋರಿಸಬೇಕೆಂದು, ಅಲ್ಲಿಯವರೆಗೆ ಈ ಊರಿಗೆ ಯಾವ ಸಂಕಷ್ಟ ಬರದಿರಲೆಂದು ಶ್ರೀ ಗಳಲ್ಲಿ ಬೇಡಿಕೊಂಡು ಸಬೆ ಮುಗಿಸಿದರು.
ಕಾಡುಮಾವ ಸಬೆ ಮುಗಿಸಿ ಮನೆ ಸೇರುವಷ್ಟರಲ್ಲಿ ಸಂಜೆ 7 ಗಂಟೆಯಾಗಿತ್ತು. ತಲೆಯಲ್ಲ್ಯಕೋ ಅದೇ ಮಾತುಗಳು ಗುನುಗುತ್ತಿದ್ದವು - "ನಮ್ಮೂರಿಗೆ ಕಷ್ಟ ಬರ್ತದ? ಎಂತ ದುರ್ವಿದಿ ಕಾದಿದೆಯೋ, ತೋಟದಲ್ಲೋ ಮನೆಯಲ್ಲೋ... ಚಂದ್ರು, ಪರಮ ರಾಘು ಎಲ್ಲ ಹೀಗೇಕೆ ಮಾಡಿದರು. ಗುರಿಕಾರ ಆಗುವ ಯೋಗ್ಯತೆ ಇರುವವರು ಬೇಡ ಅಂದಿದ್ಯಾಕೋ? ಹಳೆ ಗುರುಗಳಿದ್ದಾಗ ಸಾಗರದ ಲಕ್ಷ್ಮಿನಾರಾಯಣ ಭಟ್ಟರು "ಮಠಕ್ಕೆ ಕೊಡಲು ತಮ್ಮಲ್ಲಿ ಏನೂ ಇಲ್ಲ" ಅಂದರಂತೆ, ಅದಕ್ಕೆ ಹಳೆ ಗುರುಗಳು "ಹಾಗೇ ಆಗಲಿ" ಎಂದು ಪ್ರತಿ ನುಡಿದರಂತೆ, ಅದಾದ ಎರಡು ವರ್ಷ ಆಗುವುದರೊಳಗೆ ಅವರು ಬೀದಿಗೆ ಬಂದದ್ದು ಎಲ್ಲರಿಗೂ ಗೊತ್ತಿದೆ, ಪೀಠದ ಶಕ್ತಿಯೇ ಅಂಥದ್ದು.... ನಮ್ಮೊರಿನವರಿಗೆ ಇದೆಲ್ಲ ಬೇಕಿತ್ತಾ?... ಇತ್ತಿತ್ತಲಾಗಿ ಮಗನಿಗೂ ಮೈ ಸರಿ ಇಲ್ಲ, ಇದೇ ಕಾರಣ ಇದ್ದೀತೆ? ತಿಮ್ಮಣ್ಣನವರು ಆರುವ ದೀಪಕ್ಕೆ ಎಣ್ಣೆ-ನೀರು ಬಿಟ್ಟಂತೆ "ದೋಷವಿದೆ, ಆದರೆ ನಿನ್ನದಲ್ಲ, ಶ್ರೀಗಳಿಗೆ ನಡೆದುಕೋ, ಕಡಿಮೆಯಾದೀತು" ಅಂತ ಅಪೂರ್ಣವಾಗಿ ಅಂದಿದ್ದಾರೆ, ಎಲ್ಲಿಂದ ನಡೆದುಕೊಳ್ಳಲಿ ಗುರುದಕ್ಷಿಣೆ ಕೊಡುವಂತಿಲ್ಲ, ಸ್ವಾಮಿಗಳನ್ನೇ ಕರೆಯಿಸಿ ಪಾದ ಪೂಜೆ ಮಾಡಿಸುವಷ್ಟು ದುಡ್ಡಿಲ್ಲ, ಹಾಗಾದರೆ ಈ ಕಾಯಿಲೆ ಗುಣವಾಗದೇ? ಶ್ರೀಗಳ ಅವಕೃಪೆಗೆ ತಮ್ಮ ಮನೆಯೇ ಮೊದಲಾಯಿತೆ?" ಯೋಚನೆಗಳು ಎಲ್ಲಿಂದ ಎಲ್ಲಿಗೋ ಹೋಗುತ್ತಿವೆ. ಹೊಟ್ಟೆಯೊಳಗೆ ಒಂತರಾ ಸಂಕಟ ಶುರುವಾಗಿದೆ, ನೀರು ಕುಡಿದರು, ಸ್ವಲ್ಪ ಹೊತ್ತು ಹಾಗೆ ಕುಳಿತರು, ಮನೋ ಆಯಾಸ ನೀಗಲಿಲ್ಲ. ಮಗ ನಾಗರಾಜ ಇನ್ನು ಮನೆಗೆ ಬಂದಿರಲ್ಲಿಲ್ಲ, ದೇವರ ಮುಂದೊಂದು ದೀಪ ಹಚ್ಚಿಟ್ಟು, ಊಟ ಮಾಡದೆ ಮಲಗಿದರು.
ಬೆಳಿಗ್ಗೆ ಐದೂವರೆಯಾಗಿರಬಹುದು, ನಾಗರಾಜ ದೊಡ್ಡದಾಗಿ ಕೂಗಿಕೊಂಡ, ಆವತ್ತಿನಗಿಂತ ಎರಡರಷ್ಟು ದೊಡ್ಡಕ್ಕೆ. ಈ ಬಾರಿ ಮೂರ್ಚೆ ಹೋಗಲಿಲ್ಲ, ದೊಡ್ಡಕ್ಕೆ ಹೊಯ್ದುಕೊಳ್ಳುತ್ತಲೇ ಇದ್ದ, ಆ ದೃಶ್ಯ ಕಂಡ ಕಾಡುಮಾವ ಪೂರ್ಣವಾಗಿ ಬೆವರಿಬಿಟ್ಟರು, ಅವರಿಗೆ ತಮ್ಮಿಂದ ಇನ್ನು ಏನೂ ಮಾಡಲಿಕ್ಕಾಗದು ಎಂದು ದೃಢವಾಗಿತ್ತು, ಆದರೂ ತಂದೆಯಾಗಿ ತಮ್ಮ ಕೆಲಸ ಮಾಡಬೇಕಲ್ಲ? ಮಂತ್ರಾಕ್ಷತೆಯನ್ನೂ, ತೀರ್ಥವನ್ನು ಮೈಮೇಲೆ ಹಾಕಿದರು, ಅಕ್ಕಪಕ್ಕದವರಿಗೆ ವಿಷಯ ತಿಳಿದು ಎಲ್ಲರೂ ಮನೆಯ ಮುಂದೆ ಸೇರಿದರು. ಅಷ್ಟೊತ್ತಿಗೆ ನಾಗರಾಜ ಮೂರ್ಛೆ ತಪ್ಪಿಬಿದ್ದಿದ್ದ. ದೂರದ ಆಸ್ಪತ್ರೆಗೆ ಕೊಂಡೊಯ್ಯಲು ಜೀಪಿಗೆ ಹೇಳಿದ್ದಾಯಿತು, ಚಂದ್ರಣ್ಣ "ಇವ ಈ ಬಾರಿ ಉಳಿಯುವುದು ಕಷ್ಟವೇ ಸೈ, ವಿಪರೀತ ಕುಡಿತಾನೆ, ಕೊನೆಯ ಬಾರಿ ಹೀಗೆ ಬಿದ್ದಾಗ ಡಾಕ್ಟರು ಇನ್ನು ಕುಡಿಯಬಾರದೆಂದೂ, ಅವನಿಗೆ ಸಕ್ಕರೆ ಕಾಯಿಲೆಯೂ, ಬಿಪಿಯೂ ಇದೆಯೆಂದು ಹೇಳಿದ್ದಾರೆ" ಅಂತ ಮೆಲ್ಲಗೆ ಯಾರಲ್ಲೋ ಹೇಳಿದರು. ಕಾಡುಮಾವ ಅಲ್ಲೊಂದು ಮೂಲೆಯಲ್ಲಿ ಗೊಣ-ಗೊಣ ಎನ್ನುತ್ತಾ ಕುಳಿತ್ತಿದ್ದರು. ಅವರು ತಮ್ಮಿಶ್ಚೆ ಕಳೆದುಕೊಂಡಿರುವುದು ಎಲ್ಲರೀಗೂ ತಿಳಿಯುವಂತಿತ್ತು. 23 ವರ್ಷದ ಮಾಣಿಗೆ ಒಂದೊಮ್ಮೆ ಕುಡಿದರೂ ಅದನ್ನು ಅರಗಿಸಿಕೊಳ್ಳುವ ತಾಕತ್ತಿಲ್ಲವೇ, ಇದು ಡಾಕ್ಟರ್ರರ ತಿಳಿವಿಗೂ, ಸುಮಾರಿನ ಜನರ ಅರಿವಿಗೂ ನಿಲುಕದ್ದಲ್ಲ. ತಮ್ಮ ಮನೆ ಬರಿದಾಗುತ್ತಿದೆ, ತಾನು ತಯ್ಯಾರಾಗಿ ಕುಳಿತರಾಯಿತು ಎಂದುಕೊಂಡರು. ಜೀಪು ಬಂತು; ನಾಗರಾಜನನ್ನು ಅದರಲ್ಲಿ ಮಲಗಿಸಿದರು, ಊರವರಿಬ್ಬರು ಜೊತೆಗೆ ಹೊರಟರು. ತೀರ ಕುಸಿದವರಂತೆ ಕುಳಿತಿದ್ದ ಕಾಡುಮಾವನವರು ಒಮ್ಮೆ ತಲೆ ಎತ್ತಿದರು ನಾಗರಜನನ್ನು ಹೊತ್ತ ಜೀಪು ಯಮನ ಕೋಣ ಹೂಂಕರಿಸಿದಂತೆ ಒಮ್ಮೆ ದ್ವನಿಸಿ ಹೊರಟೆ ಹೋಯಿತು.
ಸಂಕದೂರಲ್ಲಿ ಆಗಷ್ಟೇ ಸ್ತಂಬೀಬೂತ ಬೆಳಗೊಂದು ಎದ್ದು ಕುಳಿತಿತ್ತು. ಜನರು ನಿನ್ನೆಯ ಸಬೆಯನ್ನು, ಹಳೆಯ ಗುರುಗಳ ಕತೆಯನ್ನು, ನಾಗರಾಜನ ಇಂದಿನ ಸ್ತಿತಿಯನ್ನೂ ತಮಗೆ ತೋಚಿದಂತೆ ಅರ್ಥೈಸಿಕೊಂಡು ಮಾತಾಡತೊಡಗಿದ್ದರು.
**********************************************************************************************************