ಧರ್ಮ-ಮತ ಬೇರೆಯೆ?

ಧರ್ಮ-ಮತ ಬೇರೆಯೆ?

ಧರ್ಮ ಮತ್ತು ಮತದ ಅರ್ಥ ವ್ಯತ್ಯಾಸದ ಕುರಿತಾಗಿ ಸಂಪದದಲ್ಲಿ ನಡೆದ ಚರ್ಚೆಗಳನ್ನು ನೋಡಿ ನನ್ನಲ್ಲಿರುವ ಕೆಲವು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಸಂಸ್ಕೃತ- ಕನ್ನಡ ಶಬ್ದಕೋಶದ ಪ್ರಕಾರ(ಶಬ್ದಾರ್ಥ ಕೌಸ್ತುಭ) ಧರ್ಮ- ೧. ಜಗತ್ತಿನ ಅಭ್ಯುದಯ ಮತ್ತು ನಿಃಶ್ರೇಯಸಗಳಿಗೆ ಕಾರಣಭೂತವಾದ ಗುಣವೇ ಧರ್ಮವು.

೨. ಆಚಾರ, ಸಂಪ್ರದಾಯ, ವಾಡಿಕೆಯಾಗಿ ಬಂದ ಮತಸಂಬಂಧವಾದ ಅನುಷ್ಠಾನ. ಒಟ್ಟು ೨೭ ಅರ್ಥಗಳು ಈ ನಿಘಂಟುವಿನಲ್ಲಿದ್ದು ಒಂದು ಅರ್ಥದಲ್ಲಿಯೂ ಕೂಡ ಧರ್ಮಕ್ಕೆ ಮತ ಎನ್ನುವ ಅರ್ಥ ಕೊಟ್ಟಿಲ್ಲ.

ಇನ್ನು ಮತವೆಂದರೆ-ಅಭಿಪ್ರಾಯ, ಮನೋಗತ, ಆಶಯ,ಪಕ್ಷ ಎಂಬ ಅರ್ಥ ಕೊಟ್ಟಿದ್ದಾರೆ.

ಇನ್ನು ಡಿ.ವಿ.ಜಿಯವರು ಧರ್ಮವನ್ನು ಚೆನ್ನಾಗಿ ವಿವರಿಸಿದ್ದಾರೆ, ಸಾರಾಂಶ ಬರೆಯುವೆ.

ಧಾರಣಾತ್ ಧರ್ಮಂ ಇತ್ಯಾಹುಃ- ಧರ್ಮೋ ರಕ್ಷತಿ ರಕ್ಷಿತಃ - ಯಾವುದನ್ನು ಪಾಲಿಸಿದ್ದಾದರೆ ಅದು ನಮ್ಮನ್ನು ಪಾಲಿಸುವುದೋ ಆ ವಿಧದ ನೀತಿ ನಿಯಮಗಳು ಧರ್ಮ.

ಧರ್ಮವು ಮೂರು ವಿಧ-ನೈಜ, ನ್ಯಾಯ, ಮೈತ್ರಿ. ಇದಕ್ಕೆಲ್ಲ ಸುದೀರ್ಘವಾದ ವಿವರಣೆಯಿದೆ,ಅವಕಾಶ ಇದ್ದಾಗ ಬರೆಯುವೆ.

ಇನ್ನು ಶಂಕರಾಚಾರ್ಯರ ಪ್ರಕಾರ- ಜಗತಃಸ್ಥಿತಿಕಾರಣಮ್ | ಪ್ರಾಣಿನಾಮ್ ಸಾಕ್ಷಾದಭ್ಯುದಯ ನಿಃಶ್ರೇಯಸಹೇತುರ್ಯಃಸಧರ್ಮಃ||

ಅಂದರೆ ಯಾವಚರ್ಯೆಯು ಲೋಕದ ಒಳ್ಳೆಯ ಸ್ಥಿತಿಗೆ ಸಾಧಕವಾಗಿಜೀವಿಗಳಿಗೆ ಇಹದಲ್ಲಿ ಯೋಗಕ್ಷೇಮಗಳನ್ನೂ ಪರದಲ್ಲಿ ಸದ್ಗತಿಯನ್ನು ಸಂಪಾದಿಸಿಕೊಡಬಲ್ಲುದೋ ಅದೇ ಧರ್ಮ.

ಯಾವ ಯಾವ ಕಾರ್ಯಗಳೂ ನಿಯಮಗಳೂ ನೀತಿಗಳೂ ಮನುಷ್ಯನಿಗೆ ಯುಕ್ತವಾಗುತ್ತದೆಯೋ ಅವುಗಳ ಒಟ್ಟೇ ಧರ್ಮ.

ಇನ್ನು ಪ್ರಾಚೀನವಾದ ವೈಶೇಷಿಕ ಸೂತ್ರ ಹೀಗಿದೆ- ಯತೋಭ್ಯುದಯನಿಃಶ್ರೇಯಸಸಿದ್ಧಿಃಸಧರ್ಮಃ|| ನಿಃಶ್ರೇಯಸವೆಂದರೆ ಒಳ್ಳೆಯದರಲ್ಲಿ ಒಳ್ಳೆಯದು,ಅದು ಯಾವುದರಿಂದ ಸಾಧ್ಯವಾಗುವುದೋ ಅದೇ ಧರ್ಮ.

ಹೀಗೆ ನನ್ನ ತಿಳಿವಳಿಕೆಯಲ್ಲಿ ಧರ್ಮಕ್ಕೆ ಮತವೆಂಬ ಸಂಕುಚಿತಾರ್ಥ ಸಲ್ಲದು, ಈ ಬಗ್ಗೆ ನಾನು ತಿಳಿಯದ ವಿಚಾರಗಳಿದ್ದರೆ ತಿಳಿಸಿ.

Rating
No votes yet

Comments