ಧ್ಯಾನವೂ, ಓಶೋ ಧ್ಯಾನ ಶಿಬಿರವೂ

ಧ್ಯಾನವೂ, ಓಶೋ ಧ್ಯಾನ ಶಿಬಿರವೂ

ಓಶೋ ಧ್ಯಾನ ಶಿಬಿರದಲ್ಲಿನ ನನ್ನ ಅನುಭವಗಳ ಬಗ್ಗೆ ಬರೆಯಬೇಕೆಂದು ಶಿಬಿರಕ್ಕೆ ಹೋಗಿ ಬಂದಾಗಿನಿಂದಲೂ ಅಂದುಕೊಳ್ಳುತ್ತಲೇ ಇದ್ದೆ. ಆದರೆ, ಮೊದಲೆರಡು ಭಾಗಗಳನ್ನು ಸಲೀಸಾಗಿ ಬರೆದುಬಿಟ್ಟೆ. ಮೂರನೇ ಭಾಗವನ್ನು ಬರೆಯಲು ಸಾಧ್ಯವೇ ಆಗಿರಲಿಲ್ಲ. ನನ್ನಂತೆಯೇ ಓಶೋ ಪ್ರೇಮಿಯಾದ ನನ್ನ ಪ್ರೀತಿಯ ಯುವ ಗೆಳೆಯ ಸುಪ್ರೀತ್ ಕೂಡ ಈ ಬಗ್ಗೆ ಒತ್ತಾಯಿಸುತ್ತಲೇ ಇದ್ದ. ಅವನ ಅಭಿಮಾನಕ್ಕೋಸ್ಕರವಾದರೂ ಬರೆಯುತ್ತೇನೆ. ನಾನು ಕೂಡ ಸುಮಾರು ಒಂದು ತಿಂಗಳಿನಿಂದ ಸಂಪದದಲ್ಲಿ ಏನನ್ನೂ ಬರೆಯಲಾಗಿರಲ್ಲ. ಆದ್ದರಿಂದ, ಈ ಪ್ರವೃತ್ತಿಯನ್ನು ತುಂಡರಿಸಲೇಬೇಕೆಂಬ ಹಟದಿಂದಲೂ ಬರೆಯುತ್ತಿದ್ದೇನೆ. ಹಾಗೆಯೇ, ಇನ್ನು ಮುಂದೆ ಕನಿಷ್ಟ ವಾರಕ್ಕೊಮ್ಮೆಯಾದರೂ ಏನನ್ನಾದರೂ ಬರೆಯಬೇಕೆಂದು ಅಂದುಕೊಂಡಿದ್ದೇನೆ. ನಾನು ಓಶೋ ಶಿಬಿರದಲ್ಲಿ ಪಾಲ್ಗೊಂಡು ಈಗಾಗಲೇ ಸುಮಾರು 3 ತಿಂಗಳೇ ಕಳೆದಿರುವವರಿಂದ ಅಲ್ಲಿನ ನನ್ನ ಅನುಭವಗಳು ಅಸ್ಪಷ್ಟವಾಗಿರುವವರಿಂದ ಮುಂದಿನ ಭಾಗದಲ್ಲಿ ಖಂಡಿತವಾಗಿಯೂ ಬರೆಯುತ್ತೇನೆ ಎಂದು ಗೆಳೆಯ ಸುಪ್ರೀತನಿಗೆ ವಚನ ನೀಡುತ್ತ, 2 ತಿಂಗಳ ಹಿಂದೆ ಧ್ಯಾನದ ಬಗ್ಗೆ ನಾನು ಬರೆದಿದ್ದನ್ನಷ್ಟೆ ಇಲ್ಲಿ ಪ್ರಕಟಿಸುತ್ತಿದ್ದೇನೆ.

ಧ್ಯಾನದ ಬಗ್ಗೆ
------------
ಜಾಗತೀಕರಣ, ಖಾಸಗೀಕರಣದ ಪ್ರಭಾವದಿಂದಾಗಿ "ಒತ್ತಡ"ವೆಂಬ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಈಗಿನ ಕಾಲದ ಮಾನವ "ಧ್ಯಾನ"ದ ಮೊರೆ ಹೋಗುತ್ತಿರುವುದು, ಅವನ ಅಗತ್ಯ ಪೂರೈಸುವುದಕ್ಕಾಗಿ ಅಸಲಿ "ಧ್ಯಾನ ಕೇಂದ್ರ"ಗಳನ್ನೂ ಮರೆಮಾಚಿರುವ ನಕಲಿ "ಧ್ಯಾನ ಕೇಂದ್ರ"ಗಳು ಹುಟ್ಟಿಕೊಂಡಿರುವುದು ನಮಗೆಲ್ಲರಿಗೂ ತಿಳಿದ ವಿಚಾರವೇ. ಧ್ಯಾನವೆಂದರೆ ಸಾಧುಸಂತರಿಗೆ ಮಾತ್ರ ಎಂಬ "ಮಾನಸಿಕ ದೂರ" ಹೋಗಿ ಇಂದು ಜನಸಾಮಾನ್ಯರೂ ಧ್ಯಾನ ಮಾಡಬಹುದು ಎಂಬಂತಾಗಿರುವುದು ಒಳ್ಳೆಯ ಸಂಗತಿಯಾಗಿದ್ದರೂ, "ಧ್ಯಾನ" ಎಂಬುದು "ಭಕ್ತಿಯೆಂಬುದು ತೋರಿ ಉಂಬುವ ಲಾಭ"ವಾದಂತೆಯೇ ಆಗಿರುವುದು, "ಆಧ್ಯಾತ್ಮಿಕ ಮನರಂಜನೆ"ಯ ಸರಕಾಗಿರುವುದು ಮಾತ್ರ ದುರಂತದ ವಿಷಯ. ಇದಕ್ಕೆ ಕಾರಣ, ಧ್ಯಾನದ ಬಗೆಗಿರುವ ಸಾಮಾನ್ಯ ಮಾನವನ ತಪ್ಪು ಕಲ್ಪನೆಯೂ ಇರಬಹುದು (ಧ್ಯಾನವೆಂಬುದು ಹಾಗೆ ಕಲ್ಪನೆಗೆ ನಿಲುಕುವಂತಹದ್ದೇ ಎಂಬುದು ಮತ್ತೊಂದು ತಾತ್ವಿಕ ಪ್ರಶ್ನೆ?!).

ಇರಲಿ, "ಧ್ಯಾನವನ್ನು ಪ್ರಪಂಚದಲ್ಲಿ ಯಾವ ಶಾಲೆಯೂ ಕಲಿಸಲಾಗದು" ಎಂಬ ಕಠೋರ ಸತ್ಯ ನುಡಿದಿದ್ದ "ಸತ್ಯವೆಂಬುದು ದಾರಿಗಳಿಲ್ಲದ ಬಯಲು" ಎಂದು ಜಗತ್ತಿಗೇ ಸಾರಿದ ಮಹಾದಾರ್ಶನಿಕ ಜಿದ್ದು ಕೃಷ್ಣಮೂರ್ತಿ, "Meditation is a state of mind which looks at everything with complete attention, totally, not just parts of it." ಎಂದು ಹೇಳಿದ್ದರು. ಇದನ್ನೇ ತನ್ನದೇ ಆದ ರೀತಿಯಲ್ಲಿ ಹೇಳಿದ ಓಶೋ, ಧ್ಯಾನವೆಂದರೆ ತಾನೇ ತಾನಾಗಿ ಘಟಿಸುವಂತಹದ್ದು. ಅಂದರೆ, ಜೆನ್ ಸದ್ಗುರುಗಳು ಹೇಳುವ ಹಾಗೆ 'Sitting silently, doing nothing. The spring comes and the grass goes by itself'. ಅಂದರೆ, ಮೌನದಿಂದ ನಿಷ್ಕ್ರಿಯರಾಗಿ ಕುಳಿತಿರುವಾಗ, ವಸಂತ ಬರುವುದು ಮತ್ತು ಹುಲ್ಲು ತನ್ನಷ್ಟಕ್ಕೆ ತಾನೇ ಬೆಳೆಯುವುದು. ಓಶೋ ಧ್ಯಾನದ ಕುರಿತು ಹೇಳಿದುದರಲ್ಲಿ ಮೂಲಭೂತವಾಗಿ MEDITATION means put the mind aside and watch ಎಂಬುದು 'ಸರ್ವಸಾರ'ವಾಗಿದೆ. ಆ ಘಟಿಸುವಿಕೆಗೆ ಬೇಕಾದ ಪೂರಕ ಪ್ರಕ್ರಿಯೆಗಳ ಕುರಿತ ತಂತ್ರಗಳನ್ನಷ್ಟೇ ಓಶೋ ಜಗತ್ತಿಗೇ ಕಲಿಸಿದರು ಎನ್ನುವುದನ್ನು ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ನಾನು ಕಂಡುಕೊಂಡೆ.

ನಾನು ಭಾಗವಹಿಸಿದ್ದ ಶಿಬಿರದಲ್ಲೂ ಧ್ಯಾನ ಘಟಿಸುವಿಕೆಗೆ ಬೇಕಾದ ಪೂರಕ ಪ್ರಕ್ರಿಯೆಗಳನ್ನಷ್ಟೆ ಇಲ್ಲಿ ಕಲಿಸಲಾಗುವುದೇ ಹೊರತು "ಧ್ಯಾನವನ್ನಲ್ಲ" ಎಂದು ಪದೇ ಪದೇ ಹೇಳುತ್ತಲಿದ್ದರು. ಆ ಬಗ್ಗೆ ಎಷ್ಟು ಮಂದಿ ಶಿಬಿರಾರ್ಥಿಗಳು ತಿಳಿದುಕೊಂಡರೋ ತಿಳಿಯದು. "ಅರಿವೇ ಗುರು" ಎಂದು ನಮ್ಮ ಹಿರಿಯರು ಹೇಳುತ್ತಾ ಬಂದಿರುವುದು ಸುಮ್ಮಸುಮ್ಮನೆ ಅಲ್ಲ. ಹಾಗಾಗಿ, ಧ್ಯಾನ ಅನುಭವ ಅಲ್ಲ, ಅದೊಂದು ಅನುಭಾವ. ಯಾಕೋ ನಮ್ಮ ಅನುಭಾವಿ ಶ್ರೇಷ್ಠ ಅಲ್ಲಮ ಹೇಳಿದ "ಹಿಂದಿಣ ಅನಂತವನು ಮುಂದಿನ ಅನಂತವನು ಒಂದೇ ದಿನ ಒಳಕೊಂಡಿತ್ತು ನೋಡಾ" ಎಂಬ ವಚನ ನೆನಪಾಗುತ್ತಿದೆ.

ಈ ಶಿಬಿರದ ವೈಶಿಷ್ಟ್ಯವೆಂದರೆ ಅಂತಹ ಅನುಭಾವಿಗಳ, ಅನುಭಾವವನ್ನು "ಓಶೋ ಧ್ಯಾನ" ಪ್ರಕ್ರಿಯೆಗೆ ಸಮರ್ಥವಾಗಿ ಅಳವಡಿಸಿಕೊಂಡಿದ್ದು. ಅದು ಈ ಶಿಬಿರದ ಹೆಗ್ಗಳಿಕೆ ಹಾಗೂ ಅಗ್ಗಳಿಕೆ. ಆ ಕುರಿತು ಮುಂದಿನ ಭಾಗದಲ್ಲಿ ವಿವರವಾಗಿ ಹೇಳುತ್ತೇನೆ.

Rating
No votes yet