ನಂಬುಗೆ
ನಂಬುವುದು ಆದಿಯೊಳು ಪರಮ ಚೇತನ ವಿಭುವ
ಲೋಕವನು ಸೃಷ್ಟಿಸಿದ ಪರದೈವವ
ತಾನು ತಾನಲ್ಲದಿಹ ತಾನೇ ತಾನಾಗಿರುವ
ತನಗೆ ಮಿಗಿಲಿಲ್ಲದಿಹ ಅಧಿದೈವವ
ಎಲ್ಲವನೂ ಒಳಗೊಂಡ ಎಲ್ಲದರ ಹಿಡಿವಡೆದ
ಎಲ್ಲದಕೂ ಮಿಗಿಲಾದ ಚೈತನ್ಯವ
ತಿರುತಿರುಗಿದಾ ಬುಗರಿ ತಿರುಗೆ ತಿರೆಗುರುಳಿದರೆ
ತಿರಿದುದನು ತೆರೆದೀವ ವೈಚಿತ್ರ್ಯವ
ಎಲ್ಲದಕೂ ಎತ್ತರದ ಆದಿಅಂತ್ಯಗಳಿರದ
ಎಲ್ಲರೊಳು ನೆಲೆಸಿರುವ ಆನಂದವ
ರೂಪಗಳ ಮೀರಿರುವ ರೂಪಿನೊಳೇ
ಮೈದೋರ್ವ ಕಾಲದೇಶಗಳಿರದ ಬ್ರಹ್ಮಾಂಡವ
ಬೇಡಿಕೊಳಲಿಂದಿಲ್ಲ ನೂರು ವರಗಳ ಕೃಪೆಯ
ಮೂರುಮೂರರೊಳು ಕಾಣ್ಗೆ ಬಲ್ಲರವನು
Rating