ನಕ್ಷತ್ರ ದೆಸೆ
ಅದೊಂದು ನಕ್ಷತ್ರ. ಅನಂತವಾದ ವಿಶ್ವದ ಯಾವುದೋ ಮೂಲೆಯಲ್ಲಿ, ಕ್ಷಮಿಸಿ, ವಿಶ್ವಕ್ಕೆ ಮೂಲೆಯೆಂಬುದೇ ಇಲ್ಲವಲ್ಲ; ವಿಶ್ವದ ಯಾವುದೋ ಒಂದು ಕಡೆ ಹುಟ್ಟಿಕೊಂಡಿತ್ತು. ಅದರ ಹುಟ್ಟಿನಲ್ಲಿ ವಿಶೇಷವೇನಿರಲಿಲ್ಲ, ಬೇರೆಲ್ಲಾ ನಕ್ಷತ್ರಗಳು ಹುಟ್ಟಿದ ರೀತಿಯಲ್ಲೇ ಇದೂ ಹುಟ್ಟಿತ್ತು. ಅದು ಹುಟ್ಟಿದಾಗ ಹೆಸರು ಇಡುವವರು ಯಾರೂ ಇರಲಿಲ್ಲವೆಂದೋ ಏನೋ ಅದಕ್ಕೆ ಹೆಸರಿರಲಿಲ್ಲ. ಹೆಸರಿನಲ್ಲೇನಿದೆ ಬಿಡಿ, ಹೆಸರೆಂಬುದೊಂದು ಹಿಡಿ ಅಷ್ಟೇ. ಯಾರನ್ನದರೂ ಹಿಡಿದು ಹಿಗ್ಗಾಮುಗ್ಗಾ ತಿರುಗಿಸಲು ಇರುವ ಹಿಡಿ. ಅದಿರಲಿ, ನಮ್ಮ ನಕ್ಷತ್ರ ಮಾಡುವ ಕೆಲಸದಲ್ಲೂ ವಿಶೇಷವೇನಿರಲಿಲ್ಲ, ಇತರ ಎಲ್ಲಾ ನಕ್ಷತ್ರಗಳಂತೆ ಉರಿಯುತ್ತಾ ತನ್ನ ಸುತ್ತೆಲ್ಲಾ ಬೆಳಕಿನ ಕಿರಣಗಳನ್ನು ಪ್ರಸರಿಸುತ್ತಿತ್ತು.
ಆ ನಕ್ಷತ್ರ ಹುಟ್ಟಿ ಸಹಸ್ರಾರು ಅಥವಾ ಲಕ್ಷಾಂತರ ವರ್ಷಗಳ ನಂತರ ವಿಶ್ವದ ಯಾವುದೋ ಇನ್ನೊಂದು ಕಡೆಯಲ್ಲಿ ಇನ್ನೊಂದು ನಕ್ಷತ್ರ ಹುಟ್ಟಿಕೊಂಡಿತು. ಈ ನಕ್ಷತ್ರಕ್ಕೆ ಗ್ರಹಗಳೆಂಬ ಮರಿಗಳೂ ಹುಟ್ಟಿಕೊಂಡವು. ಅವಗಳಲ್ಲಿ ಮೂರನೆಯದರಲ್ಲಿ ಅದೇನಾಯಿತೋ ಏನೋ ’ಜೀವ’ವೆಂಬುದು ಹುಟ್ಟಿತು. ಬರುಬರುತ್ತ ಅಸಂಖ್ಯ ರೂಪಗಳನ್ನು ಹೊಂದಿತು. ಅವುಗಳಲ್ಲೊಂದು ರೂಪವು ಆಲೋಚನೆ ಎಂಬ ಶಕ್ತಿಯನ್ನು ಪಡೆದುಕೊಂಡಿತು. ಆ ಆಲೋಚನಾ ಶಕ್ತಿಯಿಂದ ಆ ಜೀವರೂಪದ ವರ್ಗ ತನಗೇ ತಾನು ಮಾನವ ಎಂಬ ಹೆಸರಿಟ್ಟುಕೊಂಡಿತು ಮತ್ತು ಸುತ್ತಮುತ್ತ ಕಂಡದನ್ನೆಲ್ಲಾ ತನ್ನ ಹಿಡಿತದಲ್ಲಿರಿಸಿಕೊಳ್ಳಲು ನಾನಾ ಹೆಸರುಗಳನ್ನು ಕೊಡತೊಡಗಿತು. ತಾನೇ ಒಂದು ಅಳತೆಗೋಲನ್ನು ತಯಾರಿಸಿ ಅದರಲ್ಲಿ ತನ್ನದೇ ಬುದ್ಧಿಯನ್ನು ಅಳೆದುಕೊಂಡು ಎಲ್ಲಕ್ಕಿಂತಲೂ ತಾನೇ ಬುದ್ಧಿವಂತನೆಂದೂ, ತನಗಿಂತ ಬುದ್ಧಿವಂತರು ಇಡೀ ವಿಶ್ವದಲ್ಲೇ ಇಲ್ಲವೆಂದೂ ತನಗೇ ಹೇಳಿಕೊಂಡಿತು. ಆ ಬುದ್ಧಿಯನ್ನು ಉಪಯೋಗಿಸಿ ನಾನಾ ವಿಧದ ಶಾಸ್ತ್ರಗಳನ್ನು ಹುಟ್ಟುಹಾಕಿತು. ಮುಂದೇನಾಗುವುದು ಎಂಬ ಅರಿವಿಲ್ಲದಿದ್ದರೂ, ತನ್ನ ಬುದ್ಧಿಶಕ್ತಿಗೆಲ್ಲಿ ಕುಂದು ಬಂದೀತೋ ಎಂದುಕೊಂಡು ಭವಿಷ್ಯ ಹೇಳಲೂ ಶಾಸ್ತ್ರವೊಂದನ್ನು ಸೃಷ್ಟಿಸಿತು.
ನಮ್ಮ ಕಥಾನಾಯಕನಾದ ನಕ್ಷತ್ರದ ಬೆಳಕಿನ ಕಿರಣಗಳು ಮಾನವನನ್ನು ತಲುಪಿದಾಗ ಅದರ ಇರುವಿಕೆಯನ್ನು ಅರಿತು ಅದಕ್ಕೂ ಒಂದು ಹೆಸರಿಡಲಾಯಿತು. ಹೇಗಿದ್ದರೂ ಹಿಡಿಯೊಂದು ಬೇಕಲ್ಲ? ಸರಿ, ಆ ನಕ್ಷತ್ರಕ್ಕೆ ಸಿಕ್ಕ ಹೆಸರು ’ಮೂಲಾ’. ಅಂದಿನಿಂದ ಆ ನಕ್ಷತ್ರದ ದೆಸೆಯೇ ಬದಲಾಯಿತು. ಖಳನಾಯಕನ ಪಾತ್ರಕ್ಕಿಂತ ಕಡಿಮೆಯೇನಿಲ್ಲ ಆ ದೆಸೆ. ಎಲ್ಲೋ ಯಾರೋ ಅತ್ತೆಯೋ ಮಾವನೋ ಸತ್ತರೆಂದರೆ ಸೊಸೆಯೋ, ಅಳಿಯನೋ ಮೂಲಾ ನಕ್ಷತ್ರದಲ್ಲಿ ಹುಟ್ಟಿದಕ್ಕೆ ಹೀಗಾಯಿತು ಎಂಬ ಅಪವಾದ ಹೇರಲಾಯಿತು. ಅಂದರೆ ಹುಟ್ಟಿದ್ದು ಆ ನಕ್ಷತ್ರದಲ್ಲೇನಲ್ಲ, ಇಲ್ಲೇ ಈ ಗ್ರಹದಲ್ಲೇ. ಆದರೂ ಶಾಸ್ತ್ರವೇನೋ ಹೇಳುತ್ತದಲ್ಲ. ಇದೇ ಕಾರಣದಿಂದ ಎಷ್ಟೋ ಯುವಕರಿಗೆ, ಯುವತಿಯರಿಗೆ ಮದುವೆಯೆಂಬ ಸಂಸ್ಕಾರವಾಗಲಿಲ್ಲ, ಆಗುತ್ತಿಲ್ಲ. ಈ ಅಪವಾದವನ್ನು ಸಿದ್ಧಪಡಿಸಲು ಅಂಕಿ ಅಂಶಗಳು ಯಾರ ಬಳಿ ಇದೆಯೋ ತಿಳಿಯದು. ಆದರೂ ತನಗಿಂತ ಬುದ್ಧಿವಂತರಿಲ್ಲವಲ್ಲ!
ಈಗ ಆ ನಕ್ಷತ್ರವಿದೆಯೋ ಇಲ್ಲವೋ ತಿಳಿಯದು. ಅದು ಸಹಸ್ರಾರು ಅಥವಾ ಲಕ್ಷಾಂತರ ವರ್ಷಗಳ ಹಿಂದೆ ಕಳುಹಿಸಿದ ಕಿರಣಗಳು ಈಗ ಈ ಗ್ರಹವನ್ನು ತಲುಪುತ್ತಿವೆ. ತಾವು ಕಾಣುತ್ತಿರುವುದು ಆ ನಕ್ಷತ್ರದ ಭೂತವೆಂಬುದನ್ನು ಆಲೋಚಿಸದೆ ಬುದ್ಧಿವಂತರು ವರ್ತಮಾನದಲ್ಲಿ ಎಷ್ಟೋ ತಮ್ಮವರದ್ದೇ ಭವಿಷ್ಯವನ್ನು ಕೆಡಿಸುತ್ತಿದ್ದಾರೆ....