ನಗುನಗುತಾ ನಲಿ..
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವಿನ ಎರಡು ದೋಣಿಯ ಮೇಲೆ ಕಾಲಿಟ್ಟು ಗಾಳಿ ಹೆಚ್ಚಾದಾಗ ಸಾವಿನ ಕಡೆ, ಕಡಿಮೆಯಾದಾಗ ಬದುಕಿನ ಕಡೆ ವಾಲುತ್ತಾ ಆದಷ್ಟು ಬೇಗ ಸಾವಿನ ದೋಣಿಯ ಮೇಲೆ ವಾಲುವಂತಾಗಿತ್ತು ಹಿರಿಯ ಹಾಸ್ಯ ಕಲಾವಿದ ರಂಗರಾವ್ ಅವರ ದಿನಚರಿ. ಕಳೆದ ಒಂದು ತಿಂಗಳಿನಿಂದ ಈ ಆಸ್ಪತ್ರೆಯ ಕೊಠಡಿಯೇ ಅವರ ವಾಸಸ್ಥಾನವಾಗಿತ್ತು... ಅಂಥಹ ಮಹಾನ್ ವ್ಯಕ್ತಿಯ ಸಂದರ್ಶನ ಮಾಡುವ ಅವಕಾಶ ನನಗೆ ಒದಗಿತ್ತು.
ಮೊದಮೊದಲು ಈ ಅವಕಾಶ ಬಂದಾಗ ಈ ಸಂದರ್ಭದಲ್ಲಿ ಅವರ ಸಂದರ್ಶನ ಮಾಡುವುದು ಎಷ್ಟು ಸರಿ ಎಂದು ಸಂಪಾದಕರನ್ನು ಕೇಳಿದಾಗ... ವಿಕ್ರಂ ಇಂತಹ ಅವಕಾಶ ಎಲ್ಲರಿಗೂ ಸಿಗಲ್ಲ, ಅಂಥದ್ದರಲ್ಲಿ ನಿಮಗೆ ಬಂದಿರೋ ಅವಕಾಶವನ್ನು ಬೇಡ ಎನ್ನುತ್ತಿದ್ದೀಯ ಅಂತ ಕೇಳಿದರು. ಸಾರ್ ಅಂಥಹ ಮಹಾನ್ ವ್ಯಕ್ತಿಯನ್ನು ಸಂದರ್ಶನ ಮಾಡೋದು ಅಂದರೆ ನನಗೂ ಖುಷಿಯ ಸಂಗತಿಯೇ.. ಆದರೆ ಅವರ ಆರೋಗ್ಯ ಇಂಥಹ ಪರಿಸ್ಥಿತಿಯಲ್ಲಿ ಇರುವಾಗ ಸಂದರ್ಶನಕ್ಕೆ ಹೋಗುವುದು ಯಾಕೋ ಬಹಳ ಮುಜುಗರ ಉಂಟು ಮಾಡುತ್ತದೆ.
ವಿಕ್ರಂ ನೀನು ಅದರ ಬಗ್ಗೆ ಚಿಂತಿಸಬೇಡ. ನಾನಾಗಲೇ ಅವರನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿ ಅವರ ಒಪ್ಪಿಗೆ ಪಡೆದಿದ್ದೇನೆ... ಅಷ್ಟೇ ಅಲ್ಲದೆ ಅವರ ಕುಟುಂಬದವರನ್ನು ಕೂಡ ಸಂಪರ್ಕಿಸಿ ಅವರ ಸಮ್ಮತಿಯನ್ನೂ ಪಡೆದಿದ್ದೇನೆ. ಅದಷ್ಟೇ ಅಲ್ಲದೇ ಡಾಕ್ಟರ್ ಅನುಮತಿಯನ್ನೂ ಪಡೆದಿದ್ದೇನೆ. ಅವರೂ ಸಹ ಅರ್ಧ ಗಂಟೆಯ ಪರಿಮಿತಿ ಕೊಟ್ಟಿದ್ದಾರೆ.. ಹಾಗಾಗಿ ನೀನು ಯಾವುದೇ ಮುಜುಗರ ಪಟ್ಟುಕೊಳ್ಳದೆ ಹೋಗಿ ಅವರ ಸಂದರ್ಶನ ಮಾಡಿಕೊಂಡು ಬಾ.
ಸಾರ್ ಆದರೂ.... ಸರಿ ನೀವೇ ಇಷ್ಟು ಹೇಳಿದ ಮೇಲೆ ಹೋಗ್ತೀನಿ ಸರ್.... ಎಂದು ಅಲ್ಲಿಂದ ಬ್ಯಾಗ್ ತೆಗೆದುಕೊಂಡು ಆಸ್ಪತ್ರೆಯ ಕಡೆ ಹೊರಟೆ... ಗಾಡಿಯಲ್ಲಿ ಹೋಗುತ್ತಾ ರಂಗರಾವ್ ಅವರನ್ನು ಯಾವ ಯಾವ ಪ್ರಶ್ನೆಗಳನ್ನು ಕೇಳಬೇಕು, ಬರೀ ಸಿನಿಮಾ ಬಗ್ಗೆ ಕೇಳಬೇಕೋ? ಅವರ ವೈಯಕ್ತಿಕ ಜೀವನದ ಬಗ್ಗೆ ಕೇಳಬಹುದೋ? ಅವರು ಬೆಳೆದು ಬಂದ ದಾರಿ ಎಲ್ಲವನ್ನೂ ಕೇಳಬಹುದಾ? ಇವೆಲ್ಲವನ್ನೂ ಹೇಳುವಷ್ಟು ಸಮಯ ಅವರಿಗೆ ಸಾಕಾಗುವುದಾ....ಎಂದು ಆಲೋಚಿಸುತ್ತಾ ಬರುವಷ್ಟರಲ್ಲಿ ಆಸ್ಪತ್ರೆಯ ಗೇಟಿನ ಮುಂದೆ ಗಾಡಿ ನಿಲ್ಲಿತು.
ಗಾಡಿ ನಿಲ್ಲಿಸಿ ಒಳಗಡೆ ಹೆಜ್ಜೆ ಇಡುತ್ತಿದ್ದಂತೆ ಯಾಕೋ ತಿಳಿಯದಂತೆ ಹೆಜ್ಜೆಗಳು ಭಾರವಾದಂತೆ, ಗಂಟಲ ಪಸೆ ಆರಿದಂತಾಗಿ ಹೇಗೆ ಸಂದರ್ಶನ ಮಾಡುವುದೋ ಎನ್ನುವ ಭಯ ಕಾಡಲು ಶುರುವಾಯಿತು. ಇದೇನು ನನ್ನ ಮೊದಲ ಸಂದರ್ಶನವೇನಲ್ಲ. ಹಾಗೆ ನೋಡಿದರೆ ನಮ್ಮ ಪತ್ರಿಕೆಯಲ್ಲಿ ನನ್ನಷ್ಟು ಸಂದರ್ಶನ ಮಾಡಿದವರು ಬೇರೆ ಯಾರೂ ಇರಲಿಲ್ಲ. ಹಾಗಾಗಿಯೇ ಅವಕಾಶ ಒದಗಿ ಬಂದಿತ್ತು. ಆದರೂ ಯಾಕೋ ತಿಳಿಯದ ಭಯ ಆವರಿಸಿತ್ತು. ರಿಸೆಪ್ಶನ್ ಬಳಿ ಹೋಗಿ ICU ಎಲ್ಲಿದೆ ಎಂದು ಕೇಳಿ ಮೂರನೇ ಮಹಡಿ ಕಡೆ ನಡೆಯಲು ಶುರು ಮಾಡಿದೆ. ICU ಬಳಿ ಬಂದಾಗ ಅಲ್ಲಿ ಯಾರೂ ಕಾಣಲಿಲ್ಲ. ಈಗ ಒಳಗೇ ಹೋಗಲೋ ಬೇಡವೋ ಎಂದು ಯೋಚಿಸುತ್ತಿದ್ದಾಗಲೇ ಹಿಂದಿನಿಂದ ಒಂದು ಧ್ವನಿ ಕೇಳಿ ತಿರುಗಿ ನೋಡಿದೆ.
ಯಾರಪ್ಪಾ ನೀನು ಯಾರನ್ನು ನೋಡಬೇಕಿತ್ತು ಎಂದು ಕೇಳಿದರು ಆ ವೃದ್ಧ ಮಹಿಳೆ. ನಾನು ಕೂಡಲೇ ರಂಗರಾವ್ ಅವರನ್ನು ಸಂದರ್ಶಿಸಲು ಬಂದಿದ್ದೇನೆ ಎಂದಾಗ ಆಕೆ ನನ್ನನ್ನು ICU ಒಳಗಡೆ ಕರೆದುಕೊಂಡು ಹೋಗಿ ರಂಗರಾವ್ ಅವರ ಹಾಸಿಗೆಯ ಪಕ್ಕದಲ್ಲಿ ನಿಂತು ಮಲಗಿದ್ದ ರಂಗರಾವ್ ಅವರನ್ನು ರೀ... ನಿಮ್ಮನ್ನು ಹುಡುಕಿಕೊಂಡು ಪತ್ರಿಕೆಯವರು ಬಂದಿದ್ದಾರೆ ಏಳಿ ಎಂದರು. ನಾನು ಕೂಡಲೇ ಅಮ್ಮಾ ಅವರು ಮಲಗಿದ್ದರೆ ತೊಂದರೆ ಇಲ್ಲ... ನಾನು ಕಾಯುತ್ತೇನೆ ಅವರನ್ನು ಎಬ್ಬಿಸಬೇಡಿ ಎನ್ನುವಷ್ಟರಲ್ಲಿ ರಂಗರಾವ್ ಅವರು ಕಣ್ಣು ತೆರೆದು ಬನ್ನಿ.. ನಾನೇನೂ ಮಲಗಿರಲಿಲ್ಲ ಹಾಗೆಯೇ ಸುಮ್ಮನೆ ಮಲಗಿದ್ದೆ ಎಂದು ಪಕ್ಕದಲ್ಲಿದ್ದ ಮಹಿಳೆಗೆ ಸನ್ನೆ ಮಾಡಿ ತಮ್ಮನ್ನು ಕೂಡಲು ಅನುಕೂಲವಾಗುವಂತೆ ಹಾಸಿಗೆ ಸರಿಪಡಿಸಲು ಹೇಳಿದರು. ಅವರು ಹಾಸಿಗೆ ಸರಿಮಾಡುತ್ತಿದ್ದಾಗ ರಂಗರಾವ್ ಅವರು ಇವಳು ನನ್ನ ಮಡದಿ ಸರಸ್ವತಿ ಎಂದು ಪರಿಚಯ ಮಾಡಿಕೊಟ್ಟರು. ಹೆಸರಿಗೆ ತಕ್ಕಂತೆ ಅವರ ಮುಖದಲ್ಲಿ ದೈವೀ ಕಳೆ ತಾಂಡವವಾಡುತ್ತಿತ್ತು. ಆಕೆ ಅವರ ಹಾಸಿಗೆಯನ್ನು ಸರಿಪಡಿಸಿ ಕೂಡಿಸಿ ನೀವು ಮಾತನಾಡುತ್ತಿರಿ ಬರುತ್ತೀನಿ ಎಂದು ಆಚೆ ಹೊರಟರು.
ನಾನು ಹೇಗೆ ಮಾತು ಶುರುಮಾಡಲೆಂದು ಯೋಚಿಸುತ್ತಾ ಆಕಡೆ ಈಕಡೆ ಎಲ್ಲಾ ನೋಡುತ್ತಿದ್ದೆ. ರಂಗರಾವ್ ಅವರೇ ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಏನಪ್ಪಾ... ಜಾಸ್ತಿ ಯೋಚನೆ ಮಾಡಬೇಡ ಬೇಗನೆ ಕೇಳು.. ಇನ್ನು ಆ ಡಾಕ್ಟರ್ ಬಂದ ಅಂದರೆ ಮತ್ತೆ ನನ್ನ ಬಾಯಿಗೆ ಬೀಗ ಹಾಕುತ್ತಾನೆ... ಬರೀ ಅರ್ಧ ಗಂಟೆ ಮಾತಾಡಿ ಅಂತ ಸೂಚನೆ ಕೊಟ್ಟು ಹೋಗಿದ್ದಾನೆ ಎಂದು ನಕ್ಕು ತಮ್ಮ ಕನ್ನಡಕವನ್ನು ಸರಿ ಮಾಡಿಕೊಂಡರು.
ಸರ್ ನನ್ನ ಹೆಸರು ವಿಕ್ರಂ ಎಂದು... ನಾನು ಇದುವರೆಗೂ ಎಷ್ಟೋ ಜನಗಳ ಸಂದರ್ಶನ ಮಾಡಿದ್ದೇನೆ ಆದರೆ ಅದೇನೋ ಗೊತ್ತಿಲ್ಲ ಇವತ್ತು ಯಾಕೋ ಬಹಳ ಕಷ್ಟ ಆಗುತ್ತಿದೆ... ಅದೂ ತಮ್ಮನ್ನು ಈ ಪರಿಸ್ಥಿತಿಯಲ್ಲಿ... ಅವರು ಒಮ್ಮೆ ತಮ್ಮ ಗಂಟಲು ಸರಿಮಾಡಿಕೊಂಡು... ನನಗೂ ಅದೇ ಆಶ್ಚರ್ಯ ಆಗುತ್ತಿದೆ.. ಈ ಪೇಪರ್ ಅವರಿಗೆ ಮತ್ತು ಟಿವಿ ಚಾನಲ್ ಗಳಿಗೆ ಬರೀ ಹೀರೊ ಹೀರೊಯಿನ್ ಸುದ್ದಿಗಳು ಮಾತ್ರ ಸಾಕಲ್ಲವೆ..ಅದು ಹೇಗೆ ನನ್ನಂಥ ಹಾಸ್ಯ ಕಲಾವಿದನನ್ನು ಸಂದರ್ಶನ ಮಾಡಲು ಬರುತ್ತಿದ್ದಾರೆ ಎಂದು... ಅದೂ ಅಲ್ಲದೆ ಈಗಲೋ ಆಗಲೋ ಟಿಕೆಟ್ ತಗೊಂಡು ಇಂದ್ರನ್ನೋ ಇಲ್ಲ ಯಮನನ್ನು ಭೇಟಿ ಮಾಡಲು ಹೋಗುವ ಹೊತ್ತಿನಲ್ಲಿ ನನ್ನ ಸಂದರ್ಶನ ಯಾಕೆ ಅಂತ ಒಂದು ಕುಹಕ ನಗೆಯಾಡಿದರು...
ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ...ಸ್ವಲ್ಪ ಹೊತ್ತು ಇಬ್ಬರ ಮಧ್ಯೆ ಮೌನವಿದ್ದು ಪುನಃ ಅವರೇ ಆರಂಭಿಸಿದರು.. ಹ್ಮ್ಮ್ ಸರಿ ನಾನು ಸುಮ್ಮನೆ ತಮಾಷೆ ಮಾಡಿದ್ದಷ್ಟೇ ಹೇಳಿ ವಿಕ್ರಂ ನನ್ನಿಂದ ತಮಗೆ ಏನೇನು ಮಾಹಿತಿ ಬೇಕು??
ಸರ್ ನನಗೆ ತಿಳಿದ ಮಟ್ಟಿಗೆ ಇದುವರೆಗೂ ನಮ್ಮ ಸಿನೆಮಾ ಇಂಡಸ್ಟ್ರಿಯಲ್ಲಿ ೫೦೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ ಹಾಸ್ಯ ಕಲಾವಿದರು ಯಾರೂ ಇಲ್ಲ ನಿಮ್ಮನ್ನು ಬಿಟ್ಟು.. ಹಾಗಾಗಿ ತಮ್ಮ ಸಾಧನೆಯ ಕುರಿತು ನಮ್ಮ ಮುಂದಿನ ಪೀಳಿಗೆಯ ಜನಗಳಿಗೆ ತಿಳಿಸುವ ಉದ್ದೇಶ ಈ ಸಂದರ್ಶನ. ತಾವು ತಮ್ಮ ಹುಟ್ಟು, ಓದು,ಸಂಸಾರ, ವೃತ್ತಿ ಜೀವನದ ಬಗ್ಗೆ ಮಾಹಿತಿ ಕೊಟ್ಟರೆ....
ಏನಪ್ಪಾ ಇದು ಸಂದರ್ಶನನೋ ಅಥವಾ ನನ್ನ ಜೀವನಕಥೆಯನ್ನು ಏನಾದರೂ ಸಿನೆಮಾ ಗಿನೆಮಾ ಮಾಡ್ತಿದೀರೋ ಏನು... ದಯವಿಟ್ಟು ಅಂಥದ್ದೆಲ್ಲ ಏನೂ ಮಾಡಬೇಡಿ... ನಾನೇನು ಅಂಥ ಸಾಧನೆ ಮಾಡಿಲ್ಲ ಎಂದು ನಕ್ಕರು... ಸರ್, ಇಲ್ಲ ಹಾಗೆಲ್ಲ ಏನಿಲ್ಲ ಮೊದಲು ನಿಮ್ಮಿಂದ ಮಾಹಿತಿ ತಿಳಿದುಕೊಂಡರೆ ನಂತರ ನಾನೇನಾದರೂ ಪ್ರಶ್ನೆ ಕೇಳಬಹುದು ಹಾಗಾಗಿ...
ರಂಗರಾವ್ ಒಂದು ದೀರ್ಘ ನಿಟ್ಟುಸಿರು ಬಿಟ್ಟು ಪಕ್ಕದಲ್ಲಿದ್ದ ಗ್ಲಾಸಿನಿಂದ ಒಂದು ಲೋಟ ನೀರು ಕುಡಿದು ಕೆಳಗಿಟ್ಟು ಮತ್ತೊಮ್ಮೆ ತಮ್ಮ ಕನ್ನಡಕವನ್ನು ಸರಿಮಾಡಿಕೊಂಡು, ವಿಕ್ರಂ ನಾನು ಹುಟ್ಟಿದ್ದು ೧೯೫೮ರಲ್ಲಿ ಮೈಸೂರಿನಲ್ಲಿ... ರಾಜವಂಶಸ್ಥರ ನಂತರ ನಮ್ಮದೇ ಮೈಸೂರಿನಲ್ಲಿ ಶ್ರೀಮಂತ ಕುಟುಂಬ ಎಂದರೆ. ಬಂಗಾರದ ಚಮಚ ಬಾಯಲ್ಲಿ ಇಟ್ಟುಕೊಂಡು ಬೆಳೆದವನು ನಾನು. ಅಪ್ಪ ಅಮ್ಮನಿಗೆ ನಾನೊಬ್ಬನೇ ಸಂತಾನ...ಹಾಗಾಗಿ ಸಹಜವಾಗಿ ಅತೀ ಮುದ್ದಾಗಿ ನನ್ನ ಬೆಳೆಸಿದರು. ನಮ್ಮ ಮನೆ ತುಂಬಾ ಅಪ್ಪನ ಬಂಧುಗಳು ತುಂಬಿ ಯಾವಾಗಲೂ ಮನೆ ಕಲಕಲ ಎನ್ನುತ್ತಿತ್ತು. ನಾನು ಏನು ಕೇಳಿದರೂ ಮುಂದಿನ ನಿಮಿಷದಲ್ಲಿ ಅದು ನನ್ನ ಮುಂದಿರುತ್ತಿತ್ತು. ಹಾಗೇ ನನ್ನ ಆಸೆಗೆ ಯಾರೂ ಎದುರು ಮಾತಾಡುತ್ತಿರಲಿಲ್ಲ... ನನ್ನ ಓದಿನ ವಿಷಯದಲ್ಲೂ ಅಷ್ಟೇ... ಚಿಕ್ಕಂದಿನಿಂದಲೇ ನನಗೆ ಓದಿನ ಮೇಲೆ ಆಸಕ್ತಿ ಇರಲಿಲ್ಲ...
ನಾಟಕಗಳು ಎಂದರೆ ಬಹಳ ಇಷ್ಟ... ಎಲ್ಲೇ ನಾಟಕಗಳು ನಡೆದರೂ ಅದನ್ನು ನೋಡಲು ಹೋಗುತ್ತಿದ್ದೆವು...ಅದನ್ನು ನೋಡಿ ಬಂದು ಮನೆಯಲ್ಲಿ ಅದನ್ನೇ ಅಭ್ಯಾಸ ಮಾಡಿ ಎಲ್ಲರನ್ನೂ ನಗಿಸುತ್ತಿದ್ದೆ. ನನಗೆ ಮುಂಚಿನಿಂದಲೂ ಹಾಸ್ಯ ನಾಟಕಗಳೆಂದರೆ ಆಸಕ್ತಿ ಜಾಸ್ತಿ. ಹಾಸ್ಯ ನಾಟಕ ಮಾಡುತ್ತಿದ್ದವರ ಹಾವಭಾವ ಎಲ್ಲವನ್ನೂ ಹಾಗೆಯೇ ಅನುಕರಣೆ ಮಾಡುತ್ತಿದ್ದೆ. ಮುಂದೆ ಅದೇ ನನ್ನನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದು ನಿಲ್ಲಲು ಸಹಾಯ ಮಾಡಿದ್ದು. ನನಗೆ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದಿದ್ದರಿಂದ ಅಪ್ಪ ಅಮ್ಮನ ಒಪ್ಪಿಗೆ ಪಡೆದು ನಾಟಕಗಳಲ್ಲಿ ಅಭಿನಯಿಸಲು ಶುರುಮಾಡಿದೆ... ಹಾಗೇ ದಿನಗಳೆಯುತ್ತಾ ಅಪ್ಪನ ಪ್ರಭಾವಿತನಕ್ಕೆ ಅಪ್ಪನನ್ನು ಭೇಟಿ ಮಾಡಲು ಅವಾಗವಾಗ ಸಿನೆಮಾ ನಟರು, ನಿರ್ದೇಶಕರು, ನಿರ್ಮಾಪಕರು ಬಹಳಷ್ಟು ಜನ ಬರುತ್ತಿದ್ದರು.
ಒಮ್ಮೆ ಅಪ್ಪನ ಗೆಳೆಯರೊಬ್ಬರು ಬಂದಿದ್ದಾಗ ನನ್ನ ನಾಟಕದ ಗೀಳಿನ ಬಗ್ಗೆ ತಿಳಿದುಕೊಂಡ ಅವರು ನನ್ನನ್ನು ಅವರ ಸಿನೆಮಾದಲ್ಲಿ ನಟಿಸಲು ಆಹ್ವಾನ ಕೊಟ್ಟರು... ಅಲ್ಲಿಂದ ನನ್ನ ಬದುಕು ಸಿನೆಮಾಗೆ ಅಂಕಿತವಾಯಿತು.... ಹಾಗೇ ಒಂದೊಂದೇ ಸಿನೆಮಾದಲ್ಲಿ ನಟಿಸುತ್ತಾ ನನ್ನ ಜನಪ್ರಿಯತೆ ಕೂಡಾ ಹೆಚ್ಚಾಯಿತು. ಹೀರೋಗಳಿಗಿಂತ ನನಗೆ ಕೊಡುವ ಸಂಭಾವನೆ ಹೆಚ್ಚಾಯಿತು... ಥೀಯೇಟರ್ ನಲ್ಲಿ ಅವರಿಗೆ ಸಿಗುವ ಶಿಳ್ಳೆ, ಚಪ್ಪಾಳೆಗಿಂತ ನನಗೆ ಸಿಗುವ ಶಿಳ್ಳೆ ಚಪ್ಪಾಳೆ ಹೆಚ್ಚಾಯಿತು... ನನ್ನ ಸಿನಿ ಜೀವನದಲ್ಲಿ ನನಗೆ ಸೋಲೇ ಎನ್ನುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದೆ. ಇವತ್ತು ಸಧ್ಯಕ್ಕೆ ಈ ಪರಿಸ್ಥಿಯಲ್ಲಿ ಇದ್ದೀನಿ... ಇಷ್ಟೇ ನೋಡಪ್ಪ ನನ್ನ ಜೀವನ ಎಂದು ಮತ್ತೊಮ್ಮೆ ನೀರನ್ನು ಕುಡಿದು ಕೆಳಗಿಟ್ಟು ನನ್ನ ಕಡೆ ನೋಡಿದರು.
ಸರ್, ಬಹಳ ಧನ್ಯವಾದಗಳು... ನನ್ನ ಕಡೆಯಿಂದ ಒಂದೆರೆಡು ಪ್ರಶ್ನೆ ಕೇಳಬಹುದಾ?
ಕೇಳಪ್ಪಾ, ನೀನು ಬಂದಿರುವ ಉದ್ದೇಶವೇ ಅದಲ್ಲವೇ??
ಸರ್ ನಿಮ್ಮ ಕಾಲದ ಹಾಸ್ಯಕ್ಕೂ ಈಗಿನ ಕಾಲದ ಹಾಸ್ಯಕ್ಕೂ ನಿಮ್ಮ ಧಾಟಿಯಲ್ಲಿ ಉತ್ತರಿಸುವಿರಾ?
ಹ್ಮ್... ನೋಡಪ್ಪಾ ಬದಲಾವಣೆ ಜಗದ ನಿಯಮ... ನಮ್ಮ ಕಾಲದ ಹಾಸ್ಯ ಎಂದರೆ ಮನೆಮಂದಿಯೆಲ್ಲ ಯಾವುದೇ ಮುಜುಗರವಿಲ್ಲದೆ ಕುಳಿತು ಮನಸು ಬಿಚ್ಚಿ ನಗುತ್ತಿದ್ದರು... ಆ ನಗುವಿನಲ್ಲಿ ಒಂದು ಸಂತೋಷ ಇರುತ್ತಿತ್ತು... ಈಗಿನ ಹಾಸ್ಯದಲ್ಲಿ ಮನೆಮಂದಿಯನ್ನೆಲ್ಲಾ ಅಸಭ್ಯವಾಗಿ ಬೈಯುವುದೇ ಹಾಸ್ಯ ಎಂದುಕೊಂಡಂತಿದೆ... ಅಪ್ಪಾ ಲೂಸಾ.. ಅಮ್ಮ ಲೂಸಾ... ಇದು ಈಗಿನ ಹಾಸ್ಯ... ಹಾಗೆಂದ ಮಾತ್ರಕ್ಕೆ ಈಗಿನ ಕಾಲದ ಎಷ್ಟು ಜನಕ್ಕೆ ನಮ್ಮ ಹಾಸ್ಯ ಇಷ್ಟ ಆಗುತ್ತದೆ... ಬೈಯುತ್ತಲಾದರೂ ಈಗಿನ ಹಾಸ್ಯಕ್ಕೆ ನಗುತ್ತೀರಾ... ಹೌದೋ ಇಲ್ಲವೋ??
ನಾನು ತಲೆ ತಗ್ಗಿಸಿಕೊಂಡು ನಿಜ ಒಪ್ಪಿಕೊಳ್ಳಬೇಕಾಯಿತು...
ಸರ್ ಮುಂದಿನ ಪ್ರಶ್ನೆ ಎನ್ನುವಷ್ಟರಲ್ಲಿ ಡಾಕ್ಟರ್ ಬಂದು ಮಿ. ದಯವಿಟ್ಟು ಸಾಕಿನ್ನು ನಿಮ್ಮ ಸಂದರ್ಶನ... ಅವರು ಇಷ್ಟು ಹೊತ್ತು ಮಾತಾಡಿದ್ದೇ ಹೆಚ್ಚು ಎಂದು ರಾಯರ ಕಡೆ ನೋಡಿ... ರಾಯರೇ ಏನಿದು... ನಿಮಗೆ ಸ್ವತಂತ್ರ ಕೊಟ್ಟರೆ ಹೀಗಾ ಎಂದು ಮತ್ತೆ ಅವರ ಹಾಸಿಗೆ ಸರಿ ಮಾಡಿ ಅವರನ್ನು ಮಲಗಿಸಿ ನನ್ನ ಕಡೆ ನೋಡಿ ಹೊರಡುವಂತೆ ಸೂಚಿಸಿದರು... ನನ್ನ ಪ್ರಶ್ನೆಗಳು ಇನ್ನೂ ಈಗಿನ್ನೂ ಆರಂಭವಾಗಿದೆ ಎಂದು ಅನಿಸಿದರೂ ಯಾಕೋ ಅವರಿಗೆ ತೊಂದರೆ ಕೊಡಬೇಕು ಎನಿಸದೆ ಮರು ಮಾತಾಡದೆ ಆಚೆ ಬಂದಾಗ...ರಂಗರಾವ್ ಅವರ ಪತ್ನಿ ಸರಸ್ವತಿ ಅವರು ಕುಳಿತಿದ್ದರು. ಅವರಿಗೆ ಒಮ್ಮೆ ಹೇಳಿ ಹೊರಡೋಣ ಎಂದುಕೊಂಡು ಅವರ ಬಳಿ ಬಂದು ಅಮ್ಮಾ ನಾನಿನ್ನು ಹೊರಡುತ್ತೇನೆ ಎಂದು ಹೇಳಿ ಅವರ ಕಾಲಿಗೆ ನಮಸ್ಕಾರ ಮಾಡಿ ಹೊರಡೋಣ ಎಂದು ಅಡಿ ಮುಂದೆ ಇಟ್ಟಾಗ, ಏನಪ್ಪಾ ಒಂದು ನಿಮಿಷ ಇಲ್ಲಿ ಕೊಡ್ತೀಯಾ ಎಂದು ತಮ್ಮ ಪಕ್ಕದಲ್ಲಿ ಜಾಗ ತೋರಿಸಿದರು.
ನಾನು ಅವರ ಪಕ್ಕದಲ್ಲಿ ಕುಳಿತು ಹೇಳಿ ಅಮ್ಮಾ ಎಂದಾಗ, ಏನಪ್ಪಾ ಏನಂತ ಹೇಳಿದರು ನಮ್ಮ ಯಜಮಾನರು ಎಂದು ಕೇಳಿದರು. ನಾನು ಒಳಗೆ ರಂಗರಾವ್ ಅವರು ಹೇಳಿದ ವಿಷಯವನ್ನೆಲ್ಲಾ ಹೇಳಿ ಇನ್ನೊಂದೆರೆಡು ಪ್ರಶ್ನೆ ಕೇಳಬೇಕು ಎನ್ನುವಷ್ಟರಲ್ಲಿ ಡಾಕ್ಟರ್ ಬಂದು ಸಾಕು ಎಂದು ಹೇಳಿದರಮ್ಮ ಎಂದಾಗ ಸರಸ್ವತಿಯವರು ಸಣ್ಣ ನಗೆಯೊಂದನ್ನು ನಕ್ಕು ಹ್ಮ್ ಇವರು ಯಾವತ್ತಿಗೂ ಬದಲಾಗಲ್ಲ...ಸ್ವಾಭಿಮಾನಿ ಎಂದು ನಿಟ್ಟುಸಿರು ಬಿಟ್ಟರು... ಯಾಕೋ ಅವರ ಆ ಹೇಳಿಕೆ ನನ್ನಲ್ಲಿ ಕುತೂಹಲವನ್ನುಂಟು ಮಾಡಿ ಅಮ್ಮಾ ಯಾಕಮ್ಮ ಆ ಮಾತು ಹೇಳಿದಿರಿ ಎಂದು ಕೇಳಿದೆ... ಅದಕ್ಕೆ ಅವರು ತಮ್ಮ ಪಕ್ಕದಲ್ಲಿದ್ದ ಬ್ಯಾಗನ್ನು ಕೈಯಲ್ಲಿ ತೆಗೆದುಕೊಂಡು ಈ ಬ್ಯಾಗೇ ನಮ್ಮ ಯಜಮಾನರ ಎರಡನೇ ಹೆಂಡತಿ...ಸದಾಕಾಲ ಈ ಬ್ಯಾಗ್ ಅವರ ಜೊತೆಯಲ್ಲೇ ಇರುತ್ತಿತ್ತು ಎಂದು ಒಮ್ಮೆ ಆ ಬ್ಯಾಗಿನ ಮೇಲೆ ಮಮತೆಯಿಂದ ಕೈಯಾಡಿಸಿದರು... ಆ ಚೀಲ ನೋಡಿದರೆ ಏನಿಲ್ಲವೆಂದರೂ ಕನಿಷ್ಠ ಪಕ್ಷ ನಲವತ್ತು ವರ್ಷವಾದರೂ ಆದಂತಿತ್ತು. ಅಮ್ಮಾ ಏನಮ್ಮ ಅಂತ ವಿಶೇಷ ಈ ಚೀಲದ್ದು ಎಂದಾಗ, ಸರಸ್ವತಿಯವರು ಅದರಿಂದ ಒಂದು ಹಳೆಯ ಫೋಟೋ ಆಲ್ಬಮ್ ತೆಗೆದು ಕೈಗಿಟ್ಟರು.
ಆ ಆಲ್ಬಮ್ ಎಷ್ಟು ಜೀರ್ಣವಾಗಿತ್ತೆಂದರೆ ಸ್ವಲ್ಪ ಜೋರಾಗಿ ತಿರುಗಿಸಿದರೂ ಛಿದ್ರವಾಗುತ್ತಿತ್ತು... ಅಷ್ಟು ಶಿಥಿಲವಾಗಿತ್ತು. ನಿಧಾನವಾಗಿ ಮೊದಲನೇ ಪುಟ ತಿರುಗಿಸುತ್ತಿದ್ದಂತೆ ಒಂದು ಹಳೆಯ ಗುಡಿಸಿಲಿನ ಮುಂದೆ ಒಬ್ಬ ಪುಟ್ಟ ಬಾಲಕ ಚಡ್ಡಿ ಇಲ್ಲದೇ ನಿಂತಿರುವ ಫೋಟೋ ಇತ್ತು. ನಾನು ಆ ಫೋಟೋದಲ್ಲಿರುವ ವ್ಯಕ್ತಿ ಯಾರೆಂಬಂತೆ ಸರಸ್ವತಿಯವರ ಕಡೆ ನೋಡಿದಾಗ ಅವರು, ಇವರೇನಪ್ಪಾ ನಿಮ್ಮ ರಂಗರಾವ್ ಎಂದರು... ನನಗೆ ಆ ಫೋಟೋ ಬಹಳ ಅಪರೂಪ ಅನಿಸಿದರೂ ಆ ಫೋಟೋ ಹಿಂದೆ ಬಹಳ ವಿಷಯಗಳಿವೆ ಎಂದೆನಿಸಿ... ನಾನು ನಿಜವಾಗಿಯೂ ಸಂದರ್ಶನ ಮಾಡಬೇಕಿರುವುದು ಇವರನ್ನು ಎಂದೆನಿಸಿ ಫೋಟೋ ಆಲ್ಬಮ್ ಮುಚ್ಚಿಟ್ಟು ಅವರ ನೋಡಿದೆ.
ಕ್ಷಣಕಾಲದ ಮೌನದ ನಂತರ... ಅವರು ನಿನ್ನ ಬಳಿ ಹೇಳಿದ ಬಹಳಷ್ಟು ವಿಷಯಗಳು ಶುದ್ಧ ಸುಳ್ಳು..ಬಹಳಷ್ಟು ಅಲ್ಲ ಕೇವಲ ಅವರ ಕಲೆಯ ಆಸಕ್ತಿಯ ವಿಷಯ ಬಿಟ್ಟರೆ ಮತ್ತೆಲ್ಲವೂ ಸುಳ್ಳು... ಎಂದು ತಮ್ಮ ಕನ್ನಡಕವನ್ನು ತೆಗೆದು ಒರೆಸಿಕೊಳ್ಳಲು ಶುರುಮಾಡಿದರು...
ಅವರ ಮಾತು ಕೇಳಿ ನನಗೆ ನಖಶಿಖಾಂತ ಕೋಪ ಬಂತು ... ನಾನೇನು ಕೆಲಸವಿಲ್ಲದೇ ಇವರ ಸಂದರ್ಶನ ಮಾಡಲು ಬಂದೆನಾ... ಇವರಿಗೆ ಸಂದರ್ಶನ ಕೊಡಲು ಇಷ್ಟವಿಲ್ಲದಿದ್ದರೆ ಇಲ್ಲ ಎನ್ನಬೇಕು... ಅದು ಬಿಟ್ಟು ಸುಳ್ಳು ಹೇಳುವ ಅವಶ್ಯಕತೆ ಏನಿತ್ತು... ಛೇ.... ಆದರೆ ಅಷ್ಟರಲ್ಲಿ ಮನಸು ಒಮ್ಮೆ ಅವರು ಹೇಳಿದ ಬೇರೆ ವಿಷಯಗಳು ಯಾವುದೆಂದು ಯೋಚಿಸಿ ಅರೇ!! ಅದರಲ್ಲಿ ಸುಳ್ಳಿನ ವಿಷಯವಾ... ಏನೆಂದು ತಿಳಿದುಕೊಳ್ಳುವ ಕುತೂಹಲ ಮತ್ತಷ್ಟು ಹೆಚ್ಚಾಗಿ... ಅಮ್ಮಾ ದಯವಿಟ್ಟು ಅದೇನೆಂದು ಸಂಕ್ಷಿಪ್ತವಾಗಿ ವಿವರಿಸುತ್ತೀರಾ...
ಅವರು ಹೇಳಿದ ಹಾಗೆ ಅವರದ್ದು ಆಗರ್ಭ ಶ್ರೀಮಂತ ಕುಟುಂಬ ಅಲ್ಲ... ಮೈಸೂರಿನ ಬಳಿ ಒಂದು ಕುಗ್ರಾಮ.... ಕಡು ಬಡ ಕುಟುಂಬ...ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿ ಬೆಳೆದು ಬಂದವರು... ಬಡತನದಲ್ಲಿ ಕಷ್ಟಗಳು ಜಾಸ್ತಿ ಎಂಬಂತೆ ಇವರ ಜೊತೆ ಇನ್ನಿಬ್ಬರು ತಂಗಿಯರು ಇದ್ದರು. ಯಾರದೋ ಹೊಲದಲ್ಲಿ ಕೂಲಿ ಮಾಡಿ ಬಂದದ್ದರಲ್ಲಿ ಸಂಸಾರ ಸಾಗಿಸುತ್ತಿದ್ದರು ಇವರ ತಂದೆ. ಇವರಿಗೆ ಓದಿನಲ್ಲಿ ಅಪಾರ ಆಸಕ್ತಿ ಇದ್ದರೂ ಬಡತನ ಇವರ ಆಸೆಯನ್ನು ಕಮರುವಂತೆ ಮಾಡಿತ್ತು. ಚಿಕ್ಕ ವಯಸ್ಸಿನಲ್ಲೇ ತಾನು ಕೂಡ ಅಪ್ಪ ಅಮ್ಮನ ಜೊತೆ ಕೂಲಿ ಮಾಡಲು ಹೋಗುವ ಪರಿಸ್ಥಿತಿ ಬಂದಿತ್ತು. ಒಮ್ಮೆ ಅವರ ಹಳ್ಳಿಯಲ್ಲಿ ಬೀದಿ ನಾಟಕ ನಡೆಯುತ್ತಿದ್ದಾಗ ಅದನ್ನು ನೋಡಿ ತಾನು ಕೂಡ ನಟನಾಗಬೇಕೆಂದು ಆಸೆ ಪಟ್ಟು ಅಪ್ಪನ ಬಳಿ ಹೇಳಿದಾಗ ಅವರು ನಕ್ಕು ಸುಮ್ಮನಾಗಿಬಿಟ್ಟಿದ್ದರು...
ಅದಾದ ಸ್ವಲ್ಪ ದಿನದಲ್ಲೇ ಅವರ ಅಪ್ಪ ಅಮ್ಮ ಇಬ್ಬರೂ ವರ್ಷದ ಅಂತರದಲ್ಲಿ ವಿಚಿತ್ರ ಖಾಯಿಲೆ ಬಂದು ಹೋಗಿಬಿಟ್ಟರು. ಆಗಸವೇ ಕಳಚಿ ತಲೆ ಬಿದ್ದಂತಾಗಿ ಏನು ಮಾಡಲು ತೋಚದೆ ಕುಳಿತುಬಿಟ್ಟರು. ಕೊನೆಗೆ ತಂಗಿಯರನ್ನು ನೋಡಿ ಧೈರ್ಯ ತಂದುಕೊಂಡು ಇವರೇ ಸಂಪಾದಿಸಲು ಮುಂದಾದರು. ದಿನಪೂರ್ತಿ ದುಡಿದರೂ ಸಿಗುತ್ತಿದ್ದ ಬಿಡಿಗಾಸಿನಿಂದ ತಂಗಿಯರಿಗೆ ಕಷ್ಟಪಟ್ಟು ಊಟ ಹಾಕುತ್ತಿದ್ದರು... ತಾವು ಮಾತ್ರ ಅದೆಷ್ಟು ದಿನಗಳು ಅರೆಹೊಟ್ಟೆಯಿಂದ ಕಳೆದರೋ ಅವರಿಗೇ ಗೊತ್ತಿಲ್ಲ... ಹೀಗೆ ನಡೆಯುತ್ತಿದ್ದಾಗ ತಮ್ಮೊಳಗಿದ್ದ ನಾಟಕದ ಗೀಳು ಮಾತ್ರ ಸತ್ತಿರಲಿಲ್ಲ.... ಹೀಗೆ ಒಮ್ಮೆ ಅವರ ಪಕ್ಕದ ಹಳ್ಳಿಯಲ್ಲಿ ನಾಟಕ ನಡೆಯುತ್ತಿದೆ ಒಂದು ಗೊತ್ತಾಗಿ ನಾಟಕ ನೋಡಲು ಹೋಗಿದ್ದಾಗ... ಆ ನಾಟಕದ ನಿರ್ದೇಶಕರ ಬಳಿ ತಮ್ಮ ನಾಟಕದ ಗೀಳನ್ನು ಹೇಳಿಕೊಂಡಾಗ ಅವರು ತಮ್ಮ ನಾಟಕದಲ್ಲಿ ಪಾತ್ರ ಕೊಡಲು ಒಪ್ಪಿಕೊಂಡರು. ಮೊಟ್ಟ ಮೊದಲ ಬಾರಿಗೆ ಒಂದು ನಾಟಕದಲ್ಲಿ ಒಂದು ಸಣ್ಣ ಪಾತ್ರ ಕೊಟ್ಟು ಅಭಿನಯಿಸುವ ಅವಕಾಶ ಮಾಡಿಕೊಟ್ಟ ನಿರ್ದೇಶಕರ ಕಾಲು ಹಿಡಿದು ಗಳಗಳನೆ ಅತ್ತು ಬಿಟ್ಟಿದ್ದರು. ಆಗ ನಿರ್ದೇಶಕರು ಏಕಪ್ಪಾ ಅಳ್ತಾ ಇದ್ದೀಯ ನಿನಗೆ ಅವಕಾಶ ಕೊಟ್ಟೆನಲ್ಲ ಕೇಳಿದಕ್ಕೆ... ಸಾರ್ ಈ ಸಮಯದಲ್ಲಿ ಪಾತ್ರಕ್ಕಿಂತ ಅದರಿಂದ ಸಿಗುವ ಕಾಸು ಮುಖ್ಯ ಎಂದಾಗ ಇವನ ಕಷ್ಟ ಅರಿತ ನಿರ್ದೇಶಕರು ತಮ್ಮ ಬಳಿಯೇ ಇರುವಂತೆ ಸೂಚಿಸಿದರು. ಆದರೆ ತಂಗಿಯರನ್ನು ಬಿಟ್ಟು ಬರಲು ಸಾಧ್ಯವೇ ಇಲ್ಲವೆಂದು ಹೇಳಿದಾಗ ಅವರನ್ನೂ ಇಲ್ಲಿಗೇ ಕರೆದುಕೊಂಡು ಬಾ ನಮ್ಮ ಜೊತೆಯಲ್ಲೇ ಅವರೂ ಇರಲಿ ಎಂದು ಹೇಳಿದಾಗ ಇವರ ಅಳು ಮತ್ತೂ ಜೋರಾಯಿತು....
ಅಲ್ಲಿಂದ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಾ ಮಾಡುತ್ತಾ ನಿಧಾನವಾಗಿ ನಟನೆಯಲ್ಲಿ ಪರಿಪಕ್ವತೆ ಕಂಡುಕೊಂಡರು...ಎಲ್ಲಾ ಪಾತ್ರಗಳಲ್ಲೂ ಅವಲೀಲವಾಗಿ ನಟಿಸುತ್ತಿದ್ದ ಇವರು ಹಾಸ್ಯ ಪಾತ್ರದಲ್ಲಂತೂ ಇವರನ್ನು ಮೀರಿಸುವವರು ಇಲ್ಲದಂತೆ ತಯಾರಾದರು. ಕಾಲಕ್ರಮೇಣ ತಂಗಿಯರಿಗೂ ಮದುವೆ ಮಾಡಿದರು. ಒಮ್ಮೆ ಬೆಂಗಳೂರಿನಲ್ಲಿ ನಾಟಕ ಮಾಡುವ ಅವಕಾಶ ಬಂದೊದಗಿತು. ಆ ನಾಟಕಕ್ಕೆ ದೊಡ್ಡ ದೊಡ್ಡ ಸಿನೆಮಾ ನಟರು ನಿರ್ದೇಶಕರೆಲ್ಲಾ ಬಂದಿರುವ ಸಂದರ್ಭದಲ್ಲಿ ಇವರ ನಟನೆಯನ್ನು ನೋಡಿ ತಮ್ಮ ಸಿನೆಮಾದಲ್ಲಿ ನಟಿಸಲು ಕೇಳಿದರು....
ಮೊದಮೊದಲಿಗೆ ಬೇಡ ಎಂದವರು ನಂತರ ನಿರ್ದೇಶಕರ ಬಲವಂತ ಹಾಗೂ ಇವರ ಗುರುಗಳ ಪ್ರೋತ್ಸಾಹದಿಂದ ನಟಿಸಲು ಒಪ್ಪಿಕೊಂಡರು. ಮೊದಲ ಸಿನಿಮಾದಲ್ಲೇ ಇವರ ಪಾತ್ರ ಹಾಗೂ ಹಾವಭಾವಗಳು ಜನರನ್ನು ಬಹಳಷ್ಟು ಆಕರ್ಷಿಸಿ ಬಿಟ್ಟಿತ್ತು. ನಂತರ ಕ್ರಮೇಣವಾಗಿ ಒಂದೊಂದೇ ಸಿನೆಮಾಗಳು ಇವರನ್ನು ಅರಸಿ ಬಂದವು... ಅದೇ ಸಂದರ್ಭದಲ್ಲಿ ನನ್ನನ್ನು ಮದುವೆಯಾದರು. ಆದರೆ ಎಷ್ಟೇ ಸಿನೆಮಾಗಳು ಬಂದರೂ ಬರುತ್ತಿದ್ದ ಹಣ ಮಾತ್ರ ಅಷ್ಟಷ್ಟರಲ್ಲೇ.... ಎಷ್ಟೇ ಆಗಲಿ ಹೀರೋ ಅಲ್ಲವಲ್ಲ ಎಂದು ಒಂದು ನಿಟ್ಟುಸಿರು ಬಿಟ್ಟರು....
ಬಹುಶಃ ಅವರ ಮಾತು ಮುಗಿಯಿತು ಎಂದುಕೊಂಡು ಅಮ್ಮಾ ಸಿನೆಮಾದಲ್ಲಿ ಹೀರೋಗಿಂತ ಇವರಿಗೆ ಹೆಚ್ಚು ಶಿಳ್ಳೆ ಮತ್ತು ಚಪ್ಪಾಳೆಗಳು ಬರುತ್ತಿದ್ದವಲ್ಲಾ...
ಹೌದಪ್ಪ ಅದು ಬರೀ ತೆರೆ ಮೇಲೆ ಮಾತ್ರ...ಆದರೆ ತೆರೆಯ ಹಿಂದಿನ ಕಥೆಯೇ ಬೇರೆ...
ಅಮ್ಮಾ..ಆಮೇಲೆ ನೀವು ಹೇಳಿದರಲ್ಲಾ ಚಿಕ್ಕಂದಿನಿಂದ ಬರೀ ಕಷ್ಟದಲ್ಲೇ ಬೆಳೆದವರು.. ಅದು ಹೇಗೆ ಸಿನೆಮಾದಲ್ಲಿ ಆಗಲಿ ನಾಟಕದಲ್ಲಿ ಆಗಲಿ ಬರೀ ಹಾಸ್ಯ ಪಾತ್ರಗಳನ್ನು ಮಾಡಿ ಕೋಟ್ಯಂತರ ಜನರನ್ನು ನಗಿಸಲು ಸಾಧ್ಯವಾಯಿತು?
ಅವರು ಒಂದು ದೀರ್ಘ ನಿಟ್ಟುಸಿರು ಬಿಟ್ಟು... ಹೇಳ್ಲಿಲ್ವಾ ತೆರೆಯ ಮೇಲೆಯೇ ಬೇರೆ ಜೀವನವೇ ಬೇರೆ...ಜೀವನವೆಲ್ಲ ಕಣ್ಣೀರಲ್ಲೇ ಕೈ ತೊಳೆದವರು ಬೇರೆಯವರ ಮುಖದಲ್ಲಿಯಾದರೂ ನಗುವನ್ನು ನೋಡಬೇಕೆಂದು ಸದಾಕಾಲ ಹಪಹಪಿಸುತ್ತಿದ್ದರು... ಹಾಗೆಯೇ ತಮ್ಮ ಜೀವನವನ್ನು ಬೇರೆಯವರ ನಗುಗಾಗಿ ಮುಡಿಪಿಟ್ಟರು...ಅದಕ್ಕೊಂದು ನಿದರ್ಶನ ಎಂದರೆ ಈಗ ನಿನ್ನ ಬಳಿಯೇ ನೋಡು.. ತಾನು ಪಟ್ಟ ಯಾವ ಕಷ್ಟವನ್ನೂ ನಿನ್ನ ಬಳಿ ಹೇಳದೇ ಸುಳ್ಳಾದರೂ ಬರೀ ಸಂತೋಷದ ವಿಷಯವನ್ನು ಹೇಳಿದರಲ್ಲಾ ಹಾಗೆ...
ಮನುಷ್ಯನ ದೊಡ್ಡ ಗುಣ ಅರಿಯಬೇಕೆಂದರೆ ಅವನ ಅಂತಸ್ತಿನಿಂದಲ್ಲ...ಅವನ ವ್ಯಕ್ತಿತ್ವದಿಂದ ಎಂದು ಇಂಥಹವರನ್ನೇ ನೋಡಿ ಹೇಳಿದ್ದಾರೇನೋ ಎಂದುಕೊಂಡು ಸರಸ್ವತಿಯವರಿಗೆ ಕಾಲಿಗೆ ನಮಸ್ಕಾರ ಮಾಡಿ ಅಲ್ಲಿಂದ ಹೊರಟೆ.