ನಗು ಎಂದಿದೆ ಮಂಜನ ಬಂಧು....

ನಗು ಎಂದಿದೆ ಮಂಜನ ಬಂಧು....

ತುಂಬಾ ದಿನಗಳಿಂದ ನಾನು ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಮಾಡಬೇಕು ಎಂದು ಮಂಜನಿಗೆ ಹೇಳುತ್ತಾ ಬಂದಿದ್ದೆ. ಮಂಜ ದಿನಾಲೂ ನಾನು ತಲೆ ತಿನ್ನುವುದು ನೋಡಿ, ಒಮ್ಮೆ ನನ್ನ ಮಿತ್ರ ಒಬ್ಬರು ಪ್ರಕಾಶಕರು ಇರುವರು. ಅವರ ಹತ್ತಿರ ನಿನ್ನನ್ನು ಮಾತನಾಡಿಸುತ್ತೇನೆ ಎಂದು ಅಭಯ ನೀಡಿದ. ಅಂದು ರವಿವಾರ ಮುಂಜಾನೆ ಮಂಜ ಫೋನ್ ಮಾಡಿ ನನ್ನ ಮನೆಗೆ ಬೇಗನೆ ಬಾ ಒಬ್ಬರು ಪ್ರಕಾಶಕರು ಬಂದಿದ್ದಾರೆ ಎಂದು ಕರೆದ. ನಾನು ಶರವೇಗದಲ್ಲಿ ಅವನ ಮನೆ ತಲುಪಿದೆ. 


ಮಂಜ ಮತ್ತು ಪ್ರಕಾಶಕರು ಕುಳಿತ್ತಿದ್ದರು. ತುಂಬಾ ವಯಸ್ಸಾದ ವ್ಯಕ್ತಿ ಇದ್ದರು. ತುಂಬಾ ಒಳ್ಳೆಯ ರೀತಿ ಮಾತನಾಡಿಸಿದರು. ಇಬ್ಬರದು ಪರಿಚಯ, ಉಭಯ ಕುಶಲಗಳು ಮುಗಿದ ಮೇಲೆ, ನನಗೆ ನೀವು ಯಾವ ರೀತಿಯ ಸಾಹಿತ್ಯ ಬರೆಯುತ್ತೀರಿ ಎಂದರು. ನಾನು ನನ್ನ ಲ್ಯಾಪ್ಟಾಪ್ ಮರೆತು ಹೋಗಿದ್ದರಿಂದ, ಮಂಜನ ಕಂಪ್ಯೂಟರ್ ನಲ್ಲಿ ನನ್ನ ಬ್ಲಾಗ್ ಲೇಖನಗಳನ್ನು ತೋರಿಸ ಹತ್ತಿದೆ. ನಾವೆಲ್ಲ ಓದುವಾಗ ಕಂಪ್ಯೂಟರ್ ಇರಲೇ ಇಲ್ಲ ಎಂದು, ಮತ್ತು ಅವರು ಬೀದಿ ದೀಪದ ಬೆಳಕಿನಲ್ಲಿ  ಓದಿ ಜೀವನದಲ್ಲಿ ಪಾಸಾಗಿದ್ದೆ ಎಂದು ಹೇಳಿದರು. ಅದಕ್ಕೆ ಮಂಜ ಸುಮ್ಮನಿರದೆ ಇವನು ಅಗರಬತ್ತಿ ಬೆಳಕಿನಲ್ಲಿ ಓದಿದ್ದಾನೆ ಎಂದು ತಮಾಷೆ ಮಾಡಿದ. ಲೇ.. ನೀನೇನು ಸಿಗರೇಟ್ ಬೆಳಕಿನಲ್ಲಿ ಓದಿ ಪಾಸಗಿದ್ದೀಯಾ? ಎಂದು ಸಿಟ್ಟಿನಿಂದ ಹೇಳಿದೆ.


ಲೇಖನಗಳನ್ನು ನೋಡಿ, ನೀವು ಬರಿ ಹಾಸ್ಯ ಲೇಖನಗಳನ್ನೇ ಬರೆದಿದ್ದೀರ ಎಂದರು. ಇವಗಳನ್ನು ಸೇರಿಸಿ ಒಂದು ಪುಸ್ತಕ ಮಾಡಬಹುದು ಆದರೆ, ಇದಕ್ಕೆ ಹೆಸರು ಏನು ಇಡಬೇಕು ಎಂದು ಯೋಚಿಸಿದ್ದೀರಾ? ಎಂದರು. ಅದಕ್ಕೆ ನಾನು ಮತ್ತೆ ತಲೆ ಕೆರೆದುಕೊಳ್ಳುತ್ತಾ ನಿಂತೆ. ಏಕೆಂದರೆ? ನಾನು ಅದರ ಬಗ್ಗೆ ಯೋಚಿಸಿಯೇ ಇರಲಿಲ್ಲ. ನನಗೆ ಪ್ರಕಾಶಣ್ಣ ನೆನಪಾಗಿ, ಅವರು ಇಟ್ಟ (ಇದೆ ಇದರ ಹೆಸರು, ಇದರ ಹೆಸರು ಇದಲ್ಲಾ) ರೀತಿ, ಹೆಸರು ಬೇಕೇ? ಎಂದು ಇಟ್ಟರೆ ಹೇಗೆ ಸರ್, ಎಂದು ಹೇಳಿದೆ. ರೀ.. ಹಾಗೆ ಇಟ್ಟರೆ, ನಿಮ್ಮ ಪುಸ್ತಕದ ಹೆಸರು ಯಾರಾದರು ಕೇಳಿದರೆ ನೀವು ಮತ್ತೆ ಹೆಸರು ಬೇಕೇ? ಎಂದು ಕೇಳಿದ ಹಾಗೆ ಆಗಿ ತಮಾಷೆ ಆಗುತ್ತೆ. ಅದಲ್ಲ ಬೇಡ ಎಂದರು. ನಾನು ತಮಾಷೆಯಾಗಿ ಬರೆದ ಲೇಖನಗಳಿಗೆ ಒಂದು ಸೀರಿಯಸ್ ಹೆಸರು ಹೇಗೆ ಇಡಲು ಸಾಧ್ಯ ಸರ್...ಎಂದೆ. ಆದರೂ ಅದು ಸಾಧ್ಯ ಇಲ್ಲ ಎಂದು ಕಡ್ಡಿಮುರಿದ ಹಾಗೆ ಹೇಳಿದರು.  ಅದಕ್ಕೆ ನಮ್ಮ ತರಲೆ ಮಂಜ "ನಗು ಎಂದಿದೆ ಮಂಜನ ಬಂಧು" ಎಂದು ಇಡು, ನಿನ್ನ ಎಲ್ಲಾ ಲೇಖನಗಳನ್ನು ಮೊದಲು ನಾನು ಪರಿಶೀಲಿಸಿ, ಅನಂತರ ಅವುಗಳಿಗೆ ನಿಜವಾದ ಪಂಚ್ ಕೊಡುವ ಹಾಗೆ ಮಾಡಿದ್ದೆ ನಾನು ಎಂದ. ಆಯಿತು ಹಾಗೆ ಮಾಡುವೆ ಎಂದೆ. ನೀವು ಬರಿ ಹಾಸ್ಯ ಲೇಖನ ಬರೆಯುವುದಕ್ಕೆ ಕಾರಣ ಏನು ಎಂದು ಕೇಳಬಹುದಾ? ಎಂದರು. ಅದಕ್ಕೆ ನಾನು ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ನಗು ಕಾಣಲು ಬಯುಸುತ್ತಾನೆ. ಜೀವನದಲ್ಲಿ ನಾವು ಕಷ್ಟ ಯಾವತ್ತು ಇದ್ದದ್ದೇ. ಹಾಸ್ಯ ಬರೆಯೋದಕ್ಕೆ ನಮ್ಮ ಮಂಜ ಕೂಡ ಕಾರಣ ಎಂದೆ. ಪ್ರಕಾಶಕರು, ಹಾಸ್ಯ ಲೇಖನ ಬರೆಯುವವರು ಜೀವನವನ್ನು ತುಂಬಾ ಉಡಾಫೆಯಾಗಿ ಸ್ವೀಕರಿಸುವವರು, ಅಥವಾ ಜೀವನವನ್ನು ಅತಿಯಾಗಿ ಪ್ರೀತಿಸುವವರು ಮಾತ್ರ ಬರೆಯುತ್ತಾರೆ. ನೀವು ಯಾವ ವರ್ಗಕ್ಕೆ ಸೇರಿದವರು ಎಂದರು. ನಾನು ಹೇಳುವ ಮೊದಲೇ ಮಂಜ "ಇವನು ಉಡಾಫೆಯಾಗೆ ಸ್ವೀಕರಿಸುತ್ತಾನೆ" ಎಂದು ಹಿಯಾಳಿಸಿದ.  ನಾನು ಸುಮ್ಮನೆ ಹಾಗೇನಿಲ್ಲ ಸರ್.. ಎಂದೆ. ಮತ್ತೆ ಪ್ರಕಾಶಕರು ಮುನ್ನಿಡಿ ಮತ್ತು ಹಿನ್ನುಡಿ ಯಾರಿಂದ ಬರೆಸುತ್ತೀರಿ ಎಂದು ಕೇಳಿದರು. ಇವನಿಗೆ ಎಲ್ಲಾ ಮುನ್ನಿಡಿನೇ, ಇವನಿಗೆ ಹಿಂದೆ ನುಡಿಯುವವರು ಕಡಿಮೇನೆ ಎಂದ. ಮತ್ತೆ ನಾನು ಯಾವುದಾದರು ಹಾಸ್ಯ ಸಾಹಿತಿಗಳನ್ನು ಹುಡುಕುತ್ತಿದ್ದೇನೆ ಸರ್ ಎಂದೆ. ನಿಮ್ಮ ಕೆಲವೊಂದು ಲೇಖನಗಳಲ್ಲಿ ನೀವು ಮನಸು ಬಿಚ್ಚಿ ಬರೆದಿಲ್ಲ ಎಂದು ಅನ್ನಿಸುತ್ತೆ ಎಂದರು.  ಅದೇ ಬೀChiಯವರು ನೋಡಿ, ಅವರು ತಮಗೆ ಏನು ಹೇಳಬೇಕೋ ಅದನ್ನು ನಿರ್ಭೀತಿಯಿಂದ, ಮನಸ್ಸು ಬಿಚ್ಚಿ ಹೇಳಿದ್ದಾರೆ, ಅದಕ್ಕೆ ಅವರು ಅಷ್ಟು ಹಾಸ್ಯ ಸೃಷ್ಟಿಸಿರೋದು ಎಂದರು.  ನಾನು ಮುಂದಿನ ಬಾರಿ ಖಂಡಿತ ಹಾಗೆಯೇ ಬರಿಯುತ್ತೇನೆ ಎಂದು ಅಭಯವನ್ನಿತ್ತೆ. ಮತ್ತೆ ನಿಮಗೆ ಕಾವ್ಯನಾಮ ಏನಾದರು ಉಂಟಾ? ಎಂದರು. ಸರ್.. ಇವನು ಬರೀ ಹಾಸ್ಯ ಲೇಖನ ಮಾತ್ರ ಬರೆದಿರೋದು. ಇವನಿಗೆ ಕಾವ್ಯನಾಮ ಎಲ್ಲಾ ಏಕೆ?. ಇವನಿಗೆ ಬೇಕಾದರೆ "ಗಂಡಬೇರುಂಡ" ಅಥವಾ "ಮಂಜನ ಗೆಳೆಯ" ಎಂದು ಇಟ್ಟರೆ ಆಗುತ್ತೆ ಎಂದ. ಮಂಜನ ಗೆಳೆಯ ಸರಿಯಾದ ಕಾವ್ಯನಾಮ ಎಂದರು. ನನಗೆ  ಆಮೇಲೆ  ಅನ್ನಿಸಿತು, ಇಲ್ಲಿ ನನ್ನದು ಎನ್ನುವುದು ಏನು ಇಲ್ಲ ಎಂದು. ಪುಸ್ತಕದ  ಹೆಸರು  "ನಗು ಎಂದಿದೆ ಮಂಜನ ಬಂಧು" ಮತ್ತೆ  ಬರೆದವರು "ಮಂಜನ ಗೆಳೆಯ". ಆದರು  ಅವರು  ಪುಸ್ತಕವನ್ನು  ಪ್ರಕಟಿಸಲು ಒಪ್ಪಿದ್ದರಿಂದ  ಸುಮ್ಮನಾದೆ.
 
ನಿಮ್ಮ ಪುಸ್ತಕವನ್ನು ಪ್ರಕಟಿಸಬಹುದು. ಆದರೆ, ನೀವು ಯಾವುದಾದರು ಒಂದು ಒಳ್ಳೆಯ ಪ್ರಸಿದ್ಧಿಯಾಗಿರುವ ಬೇರೆ ಭಾಷೆಯ ಅನುವಾದ ಪುಸ್ತಕ ಮಾಡಿದ್ದೆ ಆದರೆ , ಅದು ಹೇಗಾದರೂ ಮಾರಾಟವಾಗುತ್ತೆ. ನಿಮ್ಮದು ಸ್ವಲ್ಪ ಕಷ್ಟ. ೧೦೦೦ ಕಾಪಿಯಲ್ಲಿ ೫೦೦ ಕಾಪಿ ನೀವೇ ತೆಗೆದುಕೊಳ್ಳುವ ಹಾಗಿದ್ದರೆ ನಿಮ್ಮ ಪುಸ್ತಕ ಪ್ರಕಟಿಸೋಣ ಎಂದರು. ನಾನು ಏನು ಮಾಡಬೇಕೋ ತಿಳಿಯದೆ ಮಂಜನ ಮುಖ ನೋಡಿದೆ. ಮಂಜ ಅದು ಹೇಗೆ ಸಾಧ್ಯ ಎಂದ.  ಸರಿ, ನೀವು ನಿಮ್ಮ ಪುಸ್ತಕ ಪ್ರಚಾರಕ್ಕೆ ಏನು ಮಾಡುವಿರಿ? ಎಂದು ಕೇಳಿದರು. ನಾನು pomphlet ಮಾಡಿ ಹಂಚಿ ಬಿಟ್ಟರೆ ಹೇಗೆ ಎಂದೆ. ಅದಕ್ಕೆ ಮಂಜ ಮೊದಲೇ ಈಗಿನ ಜನ  pomphlet ಓದಲ್ಲ, ಇನ್ನು ನಿನ್ನ ಪುಸ್ತಕ ಓದುತ್ತಾರ ಎಂದ ಮಂಜ. ನೀನು ಫೇಸ್ಬುಕ್ ನಲ್ಲಿ ಹಾಕು ಎಂದ. ಅಷ್ಟರಲ್ಲಿ ಮಂಜನ ಮಡದಿಯ ಆಗಮನ ಆಯಿತು. ಅವಳು ಬಂದೊಡನೆ "ಪ್ರಕಾಶ್ ಮಾಮ" ನೀವು ಯಾವಾಗ ಬಂದಿರಿ, ಎಂದು ಬಂದು ನಮಸ್ಕರಿಸಿದಳು. ನನಗೆ ಅನುಮಾನ ಶುರು ಆಯಿತು ಇವರು ಪ್ರಕಶಕರೋ ಅಥವಾ ಪ್ರಕಾಶ ಎಂಬ ಹೆಸರಿನವರೋ ಎಂದು. ನಾನು ಮಂಜನಿಗೆ ಇವರು ನಿಮ್ಮ ಮಾಮನಾ? ಎಂದೆ. ಹೌದು ಎಂದ. ಇವರು ಮಿಲಿಟರಿಯಲ್ಲಿ ಇದ್ದರು, ತುಂಬಾ ತಮಾಷೆ ಇವರಿಗೆ, ನಿನ್ನ ಬಗ್ಗೆ ತಿಳಿಸಿದ್ದೆ. ಅವರೇ ಈ ನಾಟಕದ ಸೂತ್ರಧಾರರು ಎಂದು ಗಹ.. ಗಹಿಸಿ.. ನಗಹತ್ತಿದ.  ಪಾಪ  .. ಗೋಪಾಲಣ್ಣ, ನಿಮಗೆ  ಬೇರೆ  ಕೆಲಸ  ಇಲ್ಲವೇ  ನಿಮ್ಮದೊಂದು  ಎಂದು  ಮಂಜನಿಗೆ ಮಂಜನ ಮಡದಿ ಕೋಪದಿಂದ ಝಾಡಿಸಿದಳು. ಅಷ್ಟಕ್ಕೇ ಮಂಜ ತನ್ನ  ಮಡದಿಗೆ "ನೀನಾಡದ ಮಾತು ಮಾತಲ್ಲ..."  ಎಂದು  ಹಾಡುತ್ತ  ಕಾಫಿ  ಮಾಡು  ಎಂದು  ಹೇಳಿದ . ಹೌದು  ರೀ ... ನಾನು  ಆಡುವ  ಮಾತು  ಮಾತಲ್ಲ ನಿಮಗೆ  ಅವು  ಎಲ್ಲವು  ಬೈಗುಳಗಳ  ಹಾಗೆ  ಅನ್ನಿಸುತ್ತವೆ  ಎಂದಳು.  ನೀವು  ನೋಡಿದರೆ,  ಚಿಕ್ಕ  ಮಕ್ಕಳ  ಹಾಗೆ  ಎಲ್ಲರನ್ನು  ಗೋಳು  ಹೊಯುವುದೇ  ಆಯಿತು  ಎಂದಳು . ನಾನು  ಕಾಫಿ  ಕುಡಿದು  ಮನೆ  ದಾರಿ  ಹಿಡಿದೆ.


ಮಡದಿ ಮನೆಗೆ ಹೋದೊಡನೆ, ರೀ... ಇಲ್ಲಿ ಇಟ್ಟಿರೋ ದೋಸೆ ನೀವು ತಿಂದಿರಾ ಎಂದಳು. ಹೌದು ..ಎಂದೆ.  ಏಕೆ? ತಿಂದಿರಿ.. ಅದು ಹಂಚಿನಿಂದ ತೆಗೆದ ಮೊದಲನೇ ದೋಸೆ ಎಂದಳು. ಅದಕ್ಕೇನೀಗ ಎಂದೆ. ಮೊದಲನೇ ದೋಸೆ ತಿನ್ನಬಾರದು, ಅದು ಹಂಚಿನ ಕಬ್ಬಿಣ ಅಂಶ ಜ್ಯಾಸ್ತಿ ಇರುತ್ತೆ ಅದು ದೇಹಕ್ಕೆ ಒಳ್ಳೆಯದಲ್ಲ ಎಂದು ಕೋಪದಿಂದ ಅಂದಳು.  ನಿನ್ನದು ಪುರಾಣ ಆಯಿತು ಕಣೆ, ಮೊದಲೇ  ನಾನು  ಬೇಜಾರಿನಲ್ಲಿ  ಇದ್ದೇನೆ  ಎಂದೆ. ಆದ  ವಿಷಯವೆಲ್ಲ  ಹೇಳಿದೆ.  ಆದರೂ ಮನಸಿನಲ್ಲಿ ಒಂದು ತಳಮಳ ಎಲ್ಲಿ ಎಲ್ಲರು ನನ್ನ ಮಡದಿಯ ಹಾಗೆ ಯೋಚಿಸಿ,  ನನ್ನ ಮೊದಲನೇ  ಪುಸ್ತಕ ಯಾರು ಓದದಿದ್ದರೆ ಎಂದು. 


 

Rating
No votes yet

Comments

Submitted by lpitnal@gmail.com Sun, 11/04/2012 - 06:38

ನಗು ಎಂದಿದೆ ಮಂದನ ಬಂಧು.- ನಮಸ್ಕಾರ ಗೋಪಾಲ್ ಜಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ಶುಭ ಮುಂಜಾವು. ಲೇಖನ ತುಂಬ ಹಾಸ್ಯಮಯವಾಗಿದ್ದರು ತಮ್ಮ ಪುಸ್ತಕ ಓದಲು ನಮ್ಮಂಥ ಶ್ರೋತೃಗಳು ಇದ್ದೇ ಇರುತ್ತೇವೆ. ಅದರ ಬಗ್ಗೆ ಯೋಚನೆ ಏಕೆ, ಮಂಜನ ಗೆಳೆಯ ನ 'ನಗು ಎಂದಿದೆ ಮಂಜನ ಬಂಧು' ವನ್ನು ಮಂಜನಿಂದ ಪಂಚ್ ಪಡೆದ ಮಂಜನ ಗೆಳೆಯನಾದ ನಿಮ್ಮ ಅಸ್ತಿತ್ವ ಓದುಗರು ಗುರುತಿಸುತ್ತಾರೆ, ಯೋಚನೆ ಬೇಡ ಗೆಳೆಯರೇ. ಧನ್ಯವಾದಗಳು.

Submitted by venkatb83 Sun, 11/04/2012 - 17:04

"ಹಾಸ್ಯ ಲೇಖನ ಬರೆಯುವವರು ಜೀವನವನ್ನು ತುಂಬಾ ಉಡಾಫೆಯಾಗಿ ಸ್ವೀಕರಿಸುವವರು, ಅಥವಾ ಜೀವನವನ್ನು ಅತಿಯಾಗಿ ಪ್ರೀತಿಸುವವರು ಮಾತ್ರ ಬರೆಯುತ್ತಾರೆ. ನೀವು ಯಾವ ವರ್ಗಕ್ಕೆ ಸೇರಿದವರು ಎಂದರು. ನಾನು ಹೇಳುವ ಮೊದಲೇ ಮಂಜ "ಇವನು ಉಡಾಫೆಯಾಗೆ ಸ್ವೀಕರಿಸುತ್ತಾನೆ"

>>>>ಇದನ್ತು ನಿಜ‌ ನ್ನ‌ ಪಾಲಿಗೆ...ಬರಹ‌ ಸಖತ್ ಮಾರಾಯ್ರೆ...