' ನಗ್ನತೆ '

' ನಗ್ನತೆ '

ಚಿತ್ರ

 

       

ಶತಮಾನಗಳ ಹಿಂದೆ ಬುದ್ಧ ಹೇಳಿದ

ಆಶೆಯೆ ದುಃಖಕ್ಕೆ ಮೂಲ ಎಂದು ಆ

ಮೊದಲು ಋಷಿ ಮುನಿಗಳು ದಾರ್ಶನಿಕರು

ವೇದೋಪನಿಷತ್ತುಗಳು ಹೇಳಿದ್ದು ಅದನ್ನೆ

 

ಆಶೆಯ ಕಾರಣಕ್ಕಾಗಿ ಯುದ್ಧಗಳಾಗಿವೆ

ಅಮಾಯಕರ ಜೀವ ಹರಣವಾಗಿದೆ

ಮತ್ತೆ ಬುದ್ಧನ ಆ ಹೇಳಿಕೆ ಬದುಕಿಗೆ

ವಿಮುಖವಾಗುವ ಹೇಳಿಕೆಯ? ಆ ಸಾಧಕನ

ಮನಸ್ಥಿತಿ ಎಲ್ಲರಿಗೂ ಬರಲು ಸಾಧ್ಯವೆ?

ಜನಸಾಮಾನ್ಯರ ಪ್ರಶ್ನೆಯಿದು

 

ಬುದ್ಧ ಮಹಾವೀರ ಗಾಂಧಿ ಬದುಕಿಗೆ

ಹತ್ತಿರವಾಗಿ ಸರಳವಾಗಿ ಬದುಕಿದವರು

ಆಗ ಮಹಾತ್ಮನನ್ನು ಆಳುವ ದೊರೆಗಳು

ಅರೆನಗ್ನ ಫಕೀರ ಎಂದು ಲೇವಡಿಯಾಡಿದರು

ಅವಮಾನ ಪಡದ ಗಾಂಧಿ ಇದು ನೀವು

ನಮಗೆ ತಂದಿಟ್ಟ ಸ್ಥಿತಿ ಎಂದರು ನಗ್ನತೆ

ಅವರ ಪ್ರತಿಭಟನೆಯ ಮತ್ತು

ಸ್ವಾಭಿಮಾನದ ಸಂಕೇತವಾಯಿತು

 

ಮನುಷ್ಯ ಬರುವಾಗ ಬೆತ್ತಲೆ ಹೋಗುವಾಗ

ಬೆತ್ತಲೆ ಇದನರಿಯದ ನಡೆ ಬರಿ ಕತ್ತಲೆ

ನಗ್ನತೆ ಸರಳತನದ ಪ್ರತೀಕವೆ ಇಲ್ಲ

ಪ್ರಕೃತಿಯೊಡನೆ ಒಂದಾಗುವಿಕೆಯೆ ಯಾಕೆ ಈ

ಉತ್ಕಟತೆ? ಮಹಾವೀರ ನಗ್ನ ಗೊಮ್ಮಟ ಬೆತ್ತಲು

ಇಂದಿಗೂ ದಿಗಂಬರ ಜೈನ ಮುನಿಗಳು ಬೆತ್ತಲು

ಬದುಕಿನ ಸಹಜ ವಾಂಛೆಗಳು

ಕಾಡುವುದಿಲ್ಲವೆ? ಶತ ಶತಮಾನಗಳ ಕಾಲದಿಂದ

ಸಾಗಿಬಂದ ಕಠೋರ ತಪ ಅವರದು ..! ನಗ್ನತೆಯ

ಕುರಿತು ವಿಧ ವಿಧದ ಚಿಂತನೆಗಳಿವೆ ನಗ್ನತ್ವಕ್ಕೇರಿದ

ಮುನಿಯ ಸಾಧನೆ ಜನ ಸಾಮಾನ್ಯನಿಗಾಗದು

ದೇಹದ ಮೋಹ ತೊರೆಯ ಬೇಕೆಂದರೂ

ನಗ್ನವಾಗುವುದು ಅಸಾಧ್ಯ..! ತಾಯಿಯ ಎದುರು

ಮಗುವಿನ ಬೆತ್ತಲು ಪ್ರಿಯ ಪ್ರೇಯಸಿಯರ

ಮಧ್ಯದ ಬೆತ್ತಲು ದೇವರು ದೈವದೆದುರಿನ

ಬೆತ್ತಲು ಒಂದೇ ಆದರೂ ಎಲ್ಲ ಬೇರೆ ಬೇರೆ

ನಗ್ನತೆಯೆ ವ್ಯವಹಾರ ಕತ್ತಲೆಗೆ ಮೀಸಲು

ಬೆಳಕಿನಲಿ ಬೆತ್ತಲೆ ಅಸಾಧ್ಯ ಈ ಸ್ಥಿತಿ ಜೀನ

ಮುನಿಗಳಿಗೆ ಸಾಧ್ಯವಾದದ್ದಾದರೂ ಹೇಗೆ ?

ಮಗುವಿನ ಸಹಜ ಸ್ಥಿತಿಗೆ ಸಾಗಿದ್ದು ಹೇಗೆ?

ಆಶಯಗಳ ತ್ಯಜಿಸುವಿಕೆಯಿಂದ ಸಾಧ್ವವೆ?

 

ಜನ ಸಾಮಾನ್ಯರ ನಗ್ನತೆ ಅರೆನಗ್ನತೆ ಶೌಚಾಲಯ

ಬಚ್ಚಲು ಶ್ಯಯ್ಯಾ ಗೃಹಗಳಿಗೆ ಮೀಸಲು ಅದು

ಅಗತ್ಯ ವಿಸರ್ಜನೆಗಳು ಮುಗಿವ ವರೆಗೆ ಮಾತ್ರ

ಸೆಜ್ಜೆ ಮನೆಯಲಿ ಕೈಗೆಟಕುವ ಬೆತ್ತಲೆಗೂ

ಬಟಾ ಬಯಲಲಿ ನಿಲ್ಲುವ ಮಗುವಿನ ನಗ್ನತೆಗೂ

ಅಜ ಗಜಾಂತರ ವ್ಯತ್ಯಾಸ

 

ಆದಿ ಮಾನವ ಬೆತ್ತಲಾಗಿದ್ದ ನಾಗರಿಕನಾದಂತೆ

ಅದಕೆ ಅಂಜಿದನೆ? ಮರದ ತೊಗಟೆ ಚರ್ಮದ

ಆಚ್ಛಾದನೆ ಹತ್ತಿ ಉಣ್ಣೆಯ ಬಟ್ಟೆಗಳೆ ವರೆಗೆ

ಸಾಗಿಬಂದ ಮಹಾವೀರ ನಿಜಕೂ ದೊಡ್ಡವ

ನಶ್ವರ ದೇಹದ ವ್ಯಾಮೋಹ ತ್ಯಜಿಸಿದ ಗೊಮ್ಮಟನೂ

ಸಾಧಕನೆ ವಿಸ್ತಾರ ಬಯಲಲಿ ಆಕಾಶದೆತ್ತರಕೆ

ಬೆಳೆದು ನಿಂತ ದೇಹದ ಮಮಕಾರ ಮೀರಿ

ಬೆಳೆದು ನಿಂತವರು ಅವರು ಮತ್ತು ಅವರ ಪರಂಪರೆ

 

ಮೈಕೊರೆಯ ಚಳಿಯ ಹಿಮದ ನಡುವೆ ಬೆತ್ತಲಾಗಿ

ಅಲೆವ ಯೋಗಿಗಳಿಗೆ ನಗ್ನತೆ ಸಿದ್ಧಿಸಿತು ಹೇಗೆ?

ಭಯಾನಕ ಚಳಿಯ ತಡೆವ ತಾಕತ್ತು ಬಂದಿತು ಹೇಗೆ?

ಕಟು ಚಳಿಯ ಮಧ್ಯೆಯೂ ಕಾಮ ನಾಭಿಯಲಿ

ಅಂಕುರಿಸಿ ದೇಹವ್ಯಾಪಿಯಾಗಿ ಹರಿದು ವ್ಯಾಪಿಸುವ

ಕಾಮದ ಮೀರುವಿಕೆ ನಮಗೆ ಅಸಾಧ್ಯ..! ಬಟ್ಟೆ ಕಳಚಿದ

ಮಾತ್ರಕ್ಕೆ ಕಾಮನನು ಗೆಲಬಹುದೆ? ಆ ಜೀನ ಮುನಿಗಳಿಗೆ

ದೈವ ಸಾಕ್ಷಾತ್ಕಾರವಾಗಿರಬಹುದೆ? ಹಾಗಾದರೆ ಹುಚ್ಚರು

ಕುಡುಕರು ನಿರ್ಗತಿಕರು ಸಹ ಕೆಲವು ಸಲ ಬೆತ್ತಲಾಗುತ್ತಾರೆ

ಇದಕೆ ಏನನ್ನುವುದು?

 

ನಗ್ನತೆಯ ಬಯಕೆ ಅಪ್ರಬುದ್ಧತೆಯ ಸಂಕೇತವೆ?

ಬೆತ್ತಲೆಯ ಬಯಕೆ ಸಹ ಆಶೆಯ ಮತಯ್ತೊಂದು ರೂಪ

ಬಟ್ಟೆ ಹಾಕಿಕೊಂಡೂ ನಗ್ನವಾಗಿರಬಹುದು

ಸಲ್ಮಾನ್ ಶಾರೂಖ್ ಅಕ್ಷಯ್ ಬಿಪಾಶಾ ಬೇಬೋ

ಪ್ರಿಯಾಂಕಾ ಕತ್ರೀನಾ ಯಾರೂ ಆಗಬಹುದು

ಇವರದು ನೈಜ ನಗ್ನತೆಯಲ್ಲಿ ಪ್ರದರ್ಶನದ ಬೆತ್ತಲು

ಅದು ನೋಡುವ ಕಣ್ಣುಗಳೆಲೆ ಹೊರತು ಮೂಲದಲಿ ಅಲ್ಲ

 

ಕನಸುಗಳಿಲ್ಲದ ಬದುಕು ಸಾಧ್ವವೆ? ಆಶೆಗಳು ಕನಸುಗಳ

ತಾಯಿಬೇರು ಹಸಿವು ನಿದ್ರೆ ಮೈಥುನ ಜೀವ ಸಂಕುಲದ

ಸಹಜ ಬಯಕೆಗಳು ಹಸಿವು ನಿದ್ರೆಗಳಿಗಿರದ ಬಂಧನ ಬರಿ

ಮೈಥುನಕೆ ಯಾಕೆ? ಅದು ಕತ್ತಲೆಯ ವ್ಯವಹಾರವೆಂದೆ?

ಬಗೆಹರಿಯಲಾರದ ಪ್ರಶ್ನೆ ನಿರ್ಬಂಧಿಸಿದರೂ

ಉತ್ಕಟತೆ ಹೆಚ್ಚು ವಿವೇಕವಿರುವುದು ಬಿಚ್ಚುವುದರಲ್ಲಲ್ಲ

ಬಿಚ್ಚಿದರೂ ಬೆತ್ತಲಾಗದಿರುವಲ್ಲಿ

 

ವೇದೋಪನಿಷತ್ತು ಪುರಾಣ ಪುಣ್ಯಕಥೆಗಳು ಋಷಿ

ಮುನಿಗಳ ಪರಂಪರೆ ನಮಗೆ ಮಾರ್ಗದರ್ಶಿಗಳು

ಆಧರೆ ಅಂಧಾನುಕರಣೆ ಸಲ್ಲ ಅಧ್ಯಯನ ವಿವೇಚನೆ

ವಿಸ್ಲೇಷಣೆ ಗ್ರಹಿಕೆಗಳು ಮುಖ್ಯ ಕಾಲಚಕ್ರ

ಯಾವಾಗಲೂ ಗತಿಶೀಲ ಅದರ ಓಟದಲಿ

ಹೊಸಹುಟ್ಟು ಹೊಸ ಅರ್ಥ ಪಡೆಯಬೇಕು ನಿಜ

ಅರ್ಥದಲಿ ನಾವೆಲ್ಲ ಒಬ್ಬಂಟಿ ಕನಸುಗಳ ಕಟ್ಟಬೇಕು

ದಾರಯನು ಅರಸಬೇಕು ಅಂಧಾನುಕರಣೆ ಒಂದು

ನಿರ್ಜೀವ ಸ್ಥಿತಿ ಅದು ನಿಂತ ನೀರಿನ ಬಗ್ಗಡ ನಾವು

ನಿಂತಲ್ಲಿಯೆ ನಿಂತು ಮಲೆಯಬಾರದು

 

 

ಕನಸುಗಳ ಅರಸುವಿಕೆ ಜೀವನದ ಗತಿಯಲಿ

ಪಡೆವ ಅನುಭವ ಬಹಳ ಮುಖ್ಯ ಸುತ್ತಲೂ

ವ್ಯಾಪಿಸಿವೆ ಕಿಟಕಿ ಬಾಗಿಲುಗಳು ಅವುಗಳನೊಮ್ಮೆ

ತೆರೆಯಬೇಕು ಚಲಿಸುವ ಗಾಳಿಯಲಿ

ಹರಡುವ ಬೆಳಕಿನಲಿ ಜೀವನದ ಕಟು ಅನುಭವಗಳ

ನಿದರ್ಶನಗಳಿವೆ ಆಲೋಚನೆಗಳಿವೆ ಆಯ್ಕೆಗಳಿವೆ

ಪರಿಹಾರಗಳಿವೆ ಅಂತರ್ಮುಖಿಗಳಾಗಿ ಯೋಚಿಸಿ

ಅರಿ ಷಡ್ವರ್ಗಗಳ ಮೋಹ ಕಳಚಿ ಬೆತ್ತಲಾದಾಗ ಅದು

ನಿಜದ ನಗ್ನತೆ ಮೋಕ್ಷ ಯೋಗ ಬೆತ್ತಲಾದಷ್ಟೂ

ಮಾನವಂತರಾಗ ಬಹುದು ಮನುಷ್ಯರಾಗಬಹುದು

ಕೊನೆಗೆ ದೈವತ್ವಕ್ಕೂ ಏರಬಹುದು

 

             ***

Rating
No votes yet

Comments

Submitted by H A Patil Wed, 10/02/2013 - 14:48

ಚಿತ್ರ ಕೃಪೆ : ಗೂಗಲ್ ಇಮೇಜಸ್

Submitted by makara Wed, 10/02/2013 - 20:17

ಹನುಮಂತ ಪಾಟೀಲರಿಗೆ ನಮಸ್ಕಾರಗಳು,
ನಗ್ನ ಸತ್ಯವನ್ನು ಬಹಳ ಚೆನ್ನಾಗಿ ಅನಾವರಣಗೊಳಿಸಿದ್ದೀರ. ಮಗುವಿನಂತಹ ನಿಷ್ಕಲ್ಮಶ ಮನಸ್ಸಿದ್ದಲ್ಲಿ ಮಾತ್ರ ಮನುಜ ನಗ್ನನಾಗಿ ಇರಬಲ್ಲ. ಸ್ವಾಮಿ ವಿವೇಕಾನಂದರು ಸಹ ಆಡಂ ಮತ್ತು ಈವ್‌ರ ಉದಾಹರಣೆಯನ್ನು ಕೊಡುತ್ತಾರೆ. ಎಲ್ಲಿಯವರೆಗೆ ಅವರಿಗೆ ದುರಾಸೆ ಇರಲಿಲ್ಲವೋ ಅಲ್ಲಿಯವರೆಗೂ ಅವರು ಬೆತ್ತಾಲಾಗಿದ್ದರು ಏಕೆಂದರೆ ಆಗ ಅವರಿಗೆ ನಿಷ್ಕಲ್ಮಶ ಮನಸ್ಸಿತ್ತು. ಯಾವಾಗ ಅವರಿಗೆ ಪ್ರಾಪಂಚಿಕ ಆಸೆಯನ್ನು ಪ್ರತಿನಿಧಿಸುವ ಸೇಬನ್ನು ಸವಿಯಬೇಕೆಂಬ ಆಸೆ ಹುಟ್ಟಿತೋ ಆಗ ಅವರಲ್ಲಿ ಕಳಂಕವುಂಟಾಗಿ ಅವರಿಗೆ ನಾಚಿಕೆ ಹುಟ್ಟಿತು, ಹಾಗಾಗಿ ಅವರು ತಮ್ಮ ಮರ್ಮಾಂಗಗಳನ್ನು ಮ್ಯಾಪೆಲ್ ಎಲೆಯಿಂದ ಮುಚ್ಚಿಕೊಳ್ಳುತ್ತಾರೆ. ಎಲ್ಲಾ ಧರ್ಮಗಳು ಹೇಳುವುದು ನಿಷ್ಕಲ್ಮಶ ಮನಸ್ಸನ್ನು ಹೊಂದುವುದೇ ಆಗಿದೆ. ಅಕ್ಕನವರೂ ಸಹ ಬೆತ್ತಲಾಗದೇ ಬಯಲು ಸಿಕ್ಕದಿಲ್ಲಿ ಎಂದು ಸಾರಿದ್ದು ಇದೇ ಅರ್ಥದಲ್ಲಿ ಎಂದುಕೊಳ್ಳುತ್ತೇನೆ.
ಅದ್ಭುತ ಸಂದೇಶ ಸಾರುವ ಮತ್ತು ಗಾಂಧಿ ಜಯಂತಿಗೆ ಸಮಯೋಚಿತವಾಗಿರುವ ನಿಮ್ಮ ಕವನಕ್ಕೆ ಅಭಿನಂದನೆಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Thu, 10/03/2013 - 04:06

In reply to by makara

ಶ್ರೀಧರರು ಹೇಳಿದಂತೆ ಕವನದ ಆಶಯ ಮತ್ತು ಸಂದರ್ಭ ಎರಡೂ ಸೊಗಸಾಗಿ ಕೂಡಿ ಬಂದಿದೆ ಪಾಟೀಲರೆ. 'ನಗ್ನತೆಯ ನಗ್ನ ದರ್ಶನ' :-)
 
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Submitted by H A Patil Fri, 10/04/2013 - 12:33

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಕವನದ ಕುರಿತ ತಮ್ಮ ಅಭಿಪ್ರಾಯ ಓದಿದೆ. "ನಗ್ನತೆಯ ನಗ್ನ ದರ್ಶನ" ಅರ್ಥಪೂರ್ಣ ವಿಮರ್ಶೆ. ಧನ್ಯವಾದಗಳು.

Submitted by H A Patil Fri, 10/04/2013 - 12:31

In reply to by makara

ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಅಭಿಪ್ರಾಯ ಓದಿದೆ. ಕವನದ ಕೇಂದ್ರ ವಿಷಯವನ್ನು ವಿವಿಧ ಆಯಾಮಗಳಲ್ಲಿ ನೋಡಿ ವಿಮರ್ಶಿಸಿದ್ದೀರಿ.ಮೆಚ್ಚುಗೆಗೆ ಧನ್ಯವಾದಗಳು..

Submitted by swara kamath Sat, 10/05/2013 - 17:05

<'' ನಿಜದ ನಗ್ನತೆ ಮೋಕ್ಷ ಯೋಗ ಬೆತ್ತಲಾದಷ್ಟೂ

ಮಾನವಂತರಾಗ ಬಹುದು ಮನುಷ್ಯರಾಗಬಹುದು

ಕೊನೆಗೆ ದೈವತ್ವಕ್ಕೂ ಏರಬಹುದು'' > ತುಂಬ ಅರ್ಥ ಗರ್ಭಿತ ಸಾಲುಗಳು,ಓದಿ ಸಂತಸ ವಾಯಿತು ಪಾಟೀಲರೆ.....ನಮಸ್ಕಾರಗಳು

Submitted by H A Patil Sat, 10/05/2013 - 18:46

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ನಗ್ನತೆಯೆಂದರೆ ನನ್ನ ಗ್ರಹಿಕೆಯಲ್ಲಿ ಮನುಷ್ಯ ಎಲ್ಲ ರಾಗ ದ್ವೇಷಗಳಿಂದ ಮುಕ್ತನಾಗುವುದು ಪ್ರಕೃತಿಯ ಎಲ್ಲ ಸಹಜ ಜೀವಿಗಳಂತೆ ಮುಕ್ತವಾಗಿ ಬದುಕುವುದು ಎಲ್ಲ ಜೀವಿಗಳ ಲೇಸನು ಬಯಸುವುದು ಆಗ ಜಗ ಎಷ್ಟು ಸುಂದರ ಅಲ್ಲವೆ? ಈ ಮನೋ ಲಹರಿಯ ಸಂಧರ್ಭದಲ್ಲಿ ಹುಟ್ಟಿದ ಕವನವಿದು, ಮೆಚ್ಚುಗೆಗೆ ಧನ್ಯವಾದಗಳು.