ನನಗನಿಸಿದ್ದು

ನನಗನಿಸಿದ್ದು

ಆ ಸಂಜೆ ಆ ತಳ್ಳುಗಾಡಿಯವನ ಬಳಿ ಎಂದಿನಂತೆ ತರಕಾರಿಗೆ ನೂಕು ನುಗ್ಗಲು. ತರಕಾರಿಯ ಬೆಲೆ ಬೆಟ್ಟದ ಮೇಲಿಂದ ’ಬಂಜೀ ಜಂಪಿಂಗ್’ ಮಾಡುತ್ತಿರುವ ಈ ಸಂದರ್ಭದಲ್ಲಿ ನಳನಳಿಸುತ್ತಿರುವ ದೊಣ್ಣೆ ಮೆಣಸಿನಕಾಯಿ, ಬೆಂಡೇಕಾಯಿಗಳನ್ನು ಕೇಜಿಗೆ ಹತ್ತರಂತೆ ಮಾರುತ್ತಿದ್ದ, ಎಲ್ಲಕ್ಕಿಂತ ಮನಸೆಳೆಯುತ್ತಿದ್ದುದು ಅವನು ಕೂಗುತ್ತಿದ್ದ/ಕರೆಯುತ್ತಿದ್ದ ರೀತಿ…. ಒಳ್ಳೆಯ ಮಾತುಗಳು ಎರಡೇ ನಿಮಿಷಕ್ಕೆ ಅತಿರೇಕಕ್ಕೆ ಹೋಗಿ ಸ್ವರ ಅಳುವಂತಾದಾಗ ಗೊತ್ತಾಗಿದ್ದು, ಅವನು ಟೈಟ್ ಆದ್ರಿಂದ ಲೂಸ್ ಆಗಿ ಮಾತಾಡ್ತಿದಾನೆ ಅಂತ. ಆ ದೊಂಬಿಯಲ್ಲಿ ಆತನ ಕೈ ಕಾಲೇ ಆಡದೇ ತರಕಾರಿಯನ್ನ ತೂಕಕ್ಕೆ ಹಾಕಲೂ ಅವನಿಂದ ಆಗುತ್ತಿರಲಿಲ್ಲ. ಎಷ್ಟು ಜನ ಈಗಾಗಲೇ ಅವನಿಗೆ ಟೋಪಿ ಹಾಕಿದ್ದರೋ ಗೊತ್ತಿಲ್ಲ. ಅವನ ಗೋಳಾಟ ನೋಡಲಾರದೇ ಪಕ್ಕದ ಗಾಡಿಯವನ ಹತ್ತಿರ ತರಕಾರಿ ತೊಗೊಂಡು ಜೊತೆಗಿದ್ದ ಅಕ್ಕ ರಿಕ್ಷಾ ಸಿಕ್ಕಿದ್ದರಿಂದ ’ಬಾಯ್’ ಹೇಳಿ ಹೊರಟಳು. ನನಗೆ ಬೇಕಾಗಿದ್ದ ಬೆಂಡೆಕಾಯಿ ಬರೀ ಅವನ ಬಳಿ ಇದ್ದಿದ್ರಿಂದ ನನಗೆ ಅಲ್ಲೇ ನಿಲ್ಲದೇ ಗತ್ಯಂತರವಿರಲಿಲ್ಲ. ಬೆಂಡೆಕಾಯಿ ಕವರ್ನಲ್ಲಿ ತುಂಬಿ ತೂಕಕ್ಕೆ ಕೊಡಲು ಹೆಣಗುತ್ತಿರುವಾಗಲೇ ಆ ನಡು ವಯಸ್ಕ ವ್ಯಕ್ತಿ ಹತ್ತಿರ ಬಂದು ನಿಂತಿತು. ಎಷ್ಟಂತೆ ಬೆಂಡೇಕಾಯಿಗೆ? ಎಷ್ಟಂತೆ ದೊಣ್ಣೆ ಮೆಣಸಿನಕಾಯಿಗೆ ಅಂತ ವಿಚಾರಿಸಹತ್ತಿದ. ಅವನ ಇಂಗ್ಲಿಷ್ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸೋಣ ಅಂತ ಒಳಮನಸ್ಸು ಹೇಳುತ್ತಿದ್ದರೂ, ಇವನ ಮುಖ ನೋಡಿದರೆ ಇವನಿಗೆ ಖಂಡಿತಾ ಕನ್ನಡ ಬರೋಲ್ಲ, ಆಮೇಲೆ Translation ಬೇರೆ ಮಾಡಬೇಕು ಅನ್ನಿಸಿ Ten Rupees ಅಂದೆ, ಅಷ್ಟೇ ಸಾಕೆನ್ನುವಂತೆ ಇನ್ನಷ್ಟು ಹತ್ತಿರ ಬಂದು, ಅವನು ಸರಿಯಾಗಿ ತೂಕ ಮಾಡ್ತಾನಾ? ಅವನ ತೂಕದ ಬೊಟ್ಟು ಸರಿ ಇರತ್ತಾ? ಅಂತೆಲ್ಲಾ ಕೇಳಹತ್ತಿದ. ಮೊದಲೇ ಆ ಕುಡುಕ ಗಾಡಿಯವ ಸಮಯ ಕಳೀತಿದ್ದಾನೆ, ಸಾಲದೆಂಬಂತೆ ಇವನ್ಯಾರಪ್ಪ ಅನ್ನಿಸ್ತು. ಮತ್ತಷ್ಟು ಹತ್ತಿರಕ್ಕೆ ಬಂದು ಇನ್ನೇನೋ ಕೇಳುವ ತವಕ ತೋರ್ಪಡಿಸಿದಾಗ ತಟಕ್ಕನೆ ನನ್ನ ಮಂದ ಬುದ್ದಿಯೂ, ಸ್ತ್ರೀ ಸಹಜ ಪ್ರಜ್ಞೆಯೂ ಜಾಗೃತವಾಯ್ತು. ಅವನ body language ಸ್ವಲ್ಪ ಅನುಮಾನಾಸ್ಪದ ಅಂತ ತಲೆಗೆ ಹೋಯ್ತು. ಇದನ್ನೆಲ್ಲಾ ನನ್ನ ಕೇಳುವ ಬದಲು ಅವನನ್ನೇ ಕೇಳಿ ಅಂತ ರೇಗಿದೆ. ಕೊಂಚ ಹಿಂಜರಿದವನಂತೆ ಕಂಡು ಬಂದ ಆತ, ಯಾವುದೋ ಆಟಿಕೆ ಕೊಡಿಸಲಿಲ್ಲವೆಂದು ಮುಖ ಉಬ್ಬಿಸಿಕೊಂಡು ಗಾಡಿಯ ಇನ್ನೊಂದು ತುದಿಗೆ ನಿಂತಿದ್ದ ನನ್ನ ಮಗಳ ಬಳಿಗೆ ಸರಿದ. Child abuse ಬಗ್ಗೆ ಇಷ್ಟೆಲ್ಲಾ ಕೇಳಿದ/ತಿಳಿದ ಮೇಲೂ ಸುಮ್ಮನೇ ಇರಲು, ಒಬ್ಬ ಅಪರಿಚಿತ ವ್ಯಕ್ತಿ ಇಷ್ಟೆಲ್ಲಾ ಸಲಿಗೆ ತೋರಿಸಿದಾಗ tense ಆಗದೇ ಇರಲು ನನ್ನಿಂದ ಆಗಲೇ ಇಲ್ಲ ಜೋರಾಗಿಯೇ ಕಿರುಚಿ ಮಗಳನ್ನು ನನ್ನ ಬಳಿ ಕರೆದೆ, ಮೈ ಮೇಲೇ ಬೀಳುತ್ತಿದ್ದವನಿಗೆ ನಾಲ್ಕು ಬಾರಿಸೋಣ ಅನ್ನಿಸಿದ್ರೂ ಒಂದು ಕೈಯ್ಯಲ್ಲಿ ಭಾರವಾದ ಚೀಲ, ಇನ್ನೊಂದು ಕೈಯ್ಯಲ್ಲಿ ಪರ್ಸ್, ಬೆಂಡೇಕಾಯಿ ಇತ್ಯಾದಿ. ಮನಸ್ಸಲ್ಲೂ “ಗಾಡಿ ತಂದಿಲ್ಲ, ಈಗ ರಿಕ್ಷಾ ಕೂಡ ಸಿಗದೇ ಈ ಮನುಷ್ಯ ಹಿಂದೆ ಬಿದ್ರೆ” ಅನ್ನೋ ಪುಕ್ಕಲು, ಜೊತೆಗೆ ನಾನೇ over react ಮಾಡ್ತಿದ್ದೀನಾ ಅನ್ನೋ ಅನುಮಾನ ಬೇರೆ. “Let she be there! Let she be there!” ಅನ್ನುತ್ತಿದ್ದವನ ಕಡೆ ಇನ್ನೊಮ್ಮೆ ’ಗುರಾಯಿಸಿ’ ಅಂದಾಜಿನ ಮೇಲೆ ೧ ಕೇಜಿ ಬೆಂಡೆಕಾಯಿ ತೊಗೊಂಡು, ಗಾಡಿಯವನ ಕೈಗೆ ಹತ್ತು ರೂಪಾಯಿ ತುರುಕಿ ಮಗಳನ್ನ ಎಳೆದುಕೊಂಡು ಬಂದೆ. ಇಷ್ಟೆಲ್ಲಾ ನಡೆದಿದ್ದು ಕೇವಲ ೫-೬ ನಿಮಿಷಗಳಲ್ಲಿ, ೬ ವರ್ಷದ ಮಗಳಿಗೆ good touch, bad touch ನಡುವಿನ ವ್ಯತ್ಯಾಸ ಹೇಳಿ ಕೊಡಬೇಕಾ? ಕುಡಿದು ಬಡಬಡಿಸುತ್ತಿದ್ದ ಗಾಡಿಯವನು ಅನಾಗರಿಕನಾ? ಅಥವಾ tip top ಆಗಿ ಡ್ರೆಸ್ ಮಾಡ್ಕೊಂದು ಇಂಗ್ಲೀಷಲ್ಲೇ ಮಾತಾಡ್ತಿದ್ದ ’ಆ ವ್ಯಕ್ತಿ’ ಅನಾಗರಿಕನಾ ಅನ್ನೋ ಯೋಚನೆ ಕಾಡಲಾರಂಭಿಸಿತು.

Rating
No votes yet

Comments