ನನ್ನನ್ನು ತಬ್ಬಲಿಯನ್ನಾಗಿ ಮಾಡಿ ಹೋದೆಯಲ್ಲೋ!!

ನನ್ನನ್ನು ತಬ್ಬಲಿಯನ್ನಾಗಿ ಮಾಡಿ ಹೋದೆಯಲ್ಲೋ!!

ಚಿತ್ರ

 

ಪಾಪ, ಈ ತಾತ ಕಳೆದ ನಾಲ್ಕೈದು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು.ನಿನ್ನೆ ಅಂತಿಮಯಾತ್ರೆ ಬೆಳೆಸಿದರು. ಅಷ್ಟೇ ಆಗಿದ್ದರೆ ಈ ಲೇಖನ ಬರೆಯುವ ಅಗತ್ಯವಿರಲಿಲ್ಲ. ಆದರೆ ಈ ತಾತನ ಸೇವೆ ಮಾಡುತ್ತಿದ್ದರಲ್ಲಾ, ಅವರ ಧರ್ಮ ಪತ್ನಿ ವೃದ್ಧ ಮಹಿಳೆ, ಅವರ ಸೇವೆಯನ್ನು ಸ್ಮರಿಸಲೆಂದೇ ಈ ಲೇಖನ ಬರೆಯ ಬೇಕಾಗಿದೆ.

ಅದಕ್ಕಿಂತ ಮುಂಚೆ ಮತ್ತೊಂದು ಘಟನೆ ಬರೆದು ಆನಂತರ ಮತ್ತೆ ಈ ವೃದ್ಧ ಮಹಿಳೆಯ ಬಗ್ಗೆ ಬರೆಯುವೆ. ಹಾಸನ ನಗರದಲ್ಲೇ  ಕಳೆದ ಎಂಟು ಹತ್ತು ವರ್ಷಗಳ ಹಿಂದೆ ನಡೆದ ಘಟನೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದಾರೆ. ಹತ್ತಿರದಲ್ಲಿ ಅವರ ವಾರಸುದಾರರು  ಯಾರೂ ಇಲ್ಲ.ರಾತ್ರಿಯಾದರೂ ಯಾರ ಸುಳಿವಿಲ್ಲ. ಶವವನ್ನು  ಅನಾಥ ಶವವಿಡುವ ಶವಾಗಾರದಲ್ಲಿಟ್ಟು ಸಂಬಂಧಿಸಿದ ಸಿಬ್ಬಂದಿ ಮನೆಗೆ ತೆರಳಿದ್ದಾರೆ. ವಿಷಯ ಹೇಗೋ ಅವರ ದೂರದ ಸಂಬಂಧಿ  ಮಂಜುವಿಗೆ    ಗೊತ್ತಾಗುತ್ತದೆ. ಆಸ್ಪತ್ರೆಗೆ ಧಾವಿಸುತ್ತಾನೆ.  ಶವಾಗಾರದ ಬೀಗ ಹಾಕಿದೆ. ಶವ ಒಳಗಿದೆ. ಶವಾಗಾರದ ಸಿಬ್ಬಂಧಿ ತನ್ನ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದಾನೆ. ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿರುವ ಮೃತರ ಮಗನ ಮನೆಯೂ ಹಾಸನದಲ್ಲೇ ಇದೆ. ಮಂಜು ನೇರವಾಗಿ ಮೃತನ ಮಗನ ಮನೆಗೆ ತೆರಳುತ್ತಾನೆ. ರಾತ್ರಿ ಹನ್ನೊಂದರ ವೇಳೆ. ಎಲ್ಲರೂ ಮಲಗಿದ್ದಾರೆ. ಬಾಗಿಲು ತಟ್ಟಿ ಬಾಗಿಲು ತೆರೆಸುತ್ತಾನೆ. ವಿಷಯ ಹೇಳುತ್ತಾನೆ. “ ಹೋಗಿಬಿಟ್ನಾ? ಸರಿ ವಿಷಯ ತಿಳಿಸಿದಿರಲ್ಲಾ, ನೀವಿನ್ನು ಹೊರಡಿ” ಮೃತನ ಸೊಸೆಯ ಗಡಸು ಧ್ವನಿ ಕೇಳಿದ ಮಂಜು ಯಾಕಾದರೂ ವಿಷಯ ತಿಳಿಸಿದೆನೋ, ಎಂದು ಮನೆಗೆ ಹೊರಡುತ್ತಾನೆ. ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಬೆಳಗಾಗುವುದನ್ನೇ ಕಾದಿದ್ದ ಮಂಜು ಬೆಳಗ್ಗೆ ಬೇಗ ಎದ್ದವನೇ ಆಸ್ಪತ್ರೆಗೆ ತೆರಳುತ್ತಾನೆ. ಬೆಳಿಗ್ಗೆ ಹನ್ನೊಂದು ಗಂಟೆ ಯಾಗಿದೆ ಮೃತನ ಮಕ್ಕಳಾರೂ ಆಸ್ಪತ್ರೆಗೆ ತಲೆ ಹಾಕಿಲ್ಲ. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮಂಜುವನ್ನೇ ತರಾಟೆಗೆ ತೆಗೆದು ಕೊಳ್ಳುತ್ತಾರೆ. ಅಂತೂ ಹೇಗೋ ಅಂತ್ಯ ಸಂಸ್ಕಾರವಾಗುತ್ತೆ. ಈ ಕಥೆ ಇಲ್ಲಿಗೆ ಸಾಕು.

ಈಗ ಪುನ: ನಿನ್ನೆರಾತ್ರಿ ಮೃತ್ಯು ವಶನಾದ ಈ ತಾತನ  ವೃದ್ಧ   ಪತ್ನಿ ಯ ಬಗ್ಗೆ ನಾಲ್ಕು ಮಾತು ಬರೆಯಲೇ ಬೇಕು. ನಮ್ಮ ಮನೆಯ ಹಿಂದಿನ ಪುಟ್ಟ ಮನೆಯಲ್ಲಿ ಈ ದಂಪತಿಗಳ ವಾಸ. ನಲ್ವತ್ತು ವರ್ಷ ಪ್ರಾಯದ ಮಗನಿದ್ದಾನೆ. ಆದರೆ ಈ ತಾತನ ಸೇವೆ ಮಾಡುತ್ತಿದ್ದುದು ಈ ಅಜ್ಜಿ ಮಾತ್ರ. ಬೆಳಿಗ್ಗೆಯಿಂದ  ಸಂಜೆವರಗೆ ಸುಮಾರು ಇಪ್ಪತ್ತು ಭಾರಿ ಈ ತಾತ ಮೂತ್ರ ಮಾಡಬೇಕು. ಆ ಸಮಯದಲ್ಲಿ ಈ ತಾತನನ್ನು ಕೈ ಹಿಡಿದು ನಡೆಸುತ್ತಾ ಮನೆಯಿಂದ ಹೊರಗೆ ಕರೆದುಕೊಂಡು ಬಂದು ಮೂತ್ರ ಮಾಡಿಸಿ ಪುನ: ಮನೆಯೊಳಗೆ ಕರೆದುಕೊಂಡು ಹೋಗುವ ಕೆಲಸ ಈ ಅಜ್ಜಿಯದು. ಅಷ್ಟೇ ಅಲ್ಲ, ಕಕ್ಕಸು ಮಾಡಿದಾಗ ಮಗುವನ್ನು ಶುಚಿ ಮಾಡಿದಂತೆ ಶುಚಿ ಮಾಡುತ್ತಿತ್ತು  ಈ ಅಜ್ಜಿ. ನಾನು ನಿತ್ಯವೂ ಈ ಅಜ್ಜ-ಅಜ್ಜಿಯನ್ನು ಗಮನಿಸುವಾಗ ಮನೆಯಲ್ಲೊಂದು ಶೌಚಾಲಯವಿಲ್ಲ. ಆ ಒಂದು ವ್ಯವಸ್ಥೆ ಮಾಡಿಸಿಕೊಡಬೇಕಲ್ಲಾ! ಎಂಬ ವಿಚಾರ ಮನದಲ್ಲಿ ಹಲವು ಭಾರಿ ಮೂಡಿದರೂ ಪ್ರಸ್ತಾಪ ಮಾಡಲು ಅಂಜಿಕೆ. ಕಾರಣ ಒಂದು ಕೆಟ್ಟ   ಅನುಭವ  ಕಳೆದ ಇಪ್ಪತ್ತು ವರ್ಷಗಳ ಹಿಂದೆಯೇ ನನಗೆ ಆಗಿದೆ.

 ಸೇವಾಭಾರತಿ ವತಿಯಿಂದ  ಹಿಂದುಳಿದ ಕಾಲೊನಿಗಳಲ್ಲಿ ಉಚಿತ ವೈದ್ಯಕೀಯ ತಪಾಸಣೆಯನ್ನು ನಾವು ಆಯೋಜಿಸಿದ್ದೆವು. ಡಾ||ಗುರುರಾಜಹೆಬ್ಬಾರ್,  ಡಾ||ವೈ.ಎಸ್.ವೀರಭದ್ರಪ್ಪ, ಕವಿ ನಾಗರಾಜ್,ಲಕ್ಷ್ಮಣ್ ಜೊತೆಗೂಡಿ ನಾವು ಹಿಂದುಳಿದ ಕಾಲೊನಿಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಬೇಕಾದರೆ ನಾವೆಲ್ಲಾ ತಲೆಯ ಮೇಲೆ ಟೇಬಲ್ ಮತ್ತು ಕುರ್ಚಿಗಳನ್ನು ಹೊತ್ತು ಶಿಬಿರ ವ್ಯವಸ್ಥೆ ಮಾಡುತ್ತಿದ್ದೆವು. ಡಾ|| ಗುರುರಾಜಹೆಬ್ಬಾರ್ ಅವರು ವೈದ್ಯರುಗಳನ್ನು ಮತ್ತು ಲ್ಯಾಬ್ ವ್ಯವಸ್ಥೆ ಮಾಡಿದರೆ  ಡಾ|| ವೀರಭದ್ರಪ್ಪನವರು ಉಚಿತವಾಗಿ ಔಷಧಿ-ಮಾತ್ರೆ ಒದಗಿಸುತ್ತಿದ್ದರಲ್ಲದೆ ಸ್ವತ: ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದರು. ಒಮ್ಮೆಯಂತೂ ಶಿಬಿರ ನಡೆಸುವಾಗ ಅಲ್ಲಿನ ಬಹುಪಾಲು ಜನರಿಗೆ ವಿಪರೀತವಾದ ಚರ್ಮರೋಗ ಇರುವುದು ಪತ್ತೆಯಾಯ್ತು. ಆ ಚರ್ಮ ರೋಗ ಮೂಲೋಚ್ಚಾಟನೆಯಾಗುವವರೆಗೂ ಚಿಕಿತ್ಸೆ ನೀಡಿದೆವು. ನಮಗೆ ಧನ್ಯತಾ ಭಾವವಿತ್ತು. ಆದರೆ ನಾವು ಟೇಬಲ್ ಹೊರುವಾಗ ಕಾಂಪೌಂಡ್ ಮೇಲೆ ಕುಳಿತು ತಮಾಶೆ ನೋಡುತ್ತಿದ್ದ ಯುವಕರ ಗುಂಪು ಮಾತನಾಡುತ್ತಿದ್ದುದು ನಮ್ಮ ಕಿವಿಗೆ ಬಿದ್ದಾಗ ವಿಪರೀತ ನೊಂದು ಕೊಂಡೆವು. ಆ ಯುವಕರು  ಆಡುತ್ತಿದ್ದ ಮಾತು ಕೇಳಿ “ ಸರ್ಕಾರದವರು ಬೇಕಾದಷ್ಟು ಕೊಡ್ತಾರೆ. ಇವರು ನಮಗೆ ಕ್ಯಾಂಪ್ ಮಾಡಿದ ನೆಪ ಮಾಡಿ ದುಡ್ಡು ಹೊಡೆಯುತ್ತಾರೆ”

ಇರಬಹುದು. ಇಂತಾ ಉಧಾಹರಣೆಗಳೂ ಇರಬಹುದು. ಆದರೆ ನಾವು ಸೇವಾ ಮನೋಭಾವನೆಯಿಂದಲೇ ಕ್ಯಾಂಪ್ ನಡೆಸುತ್ತಿದ್ದೆವು.ಸರ್ಕಾರದ ಭಿಕ್ಷೆಗೆ ಕೈಯೊಡ್ಡಿರಲಿಲ್ಲ. ಎಲ್ಲರೂ ಸಮರ್ಪಣಾಭಾವದಿಂದಲೇ ಉಚಿತವಾಗಿ ಸೇವೆ ಮಾಡುತ್ತಿದ್ದರು.ಔಷಧಿಗಳನ್ನು ಡಾ|| ವೀರಭದ್ರಪ್ಪನವರು ಉಚಿತವಾಗಿ ಒದಗಿಸುತ್ತಿದ್ದರಿಂದ ನಾವು ಶಿಬಿರಕ್ಕಾಗಿ ಹಣವನ್ನೇ ಖರ್ಚುಮಾಡುತ್ತಿರಲಿಲ್ಲ.ಆ ಯುವಕರನ್ನು ಒಟ್ಟಾಗಿಸಿ  ಈ ವಿಷಯವನ್ನು ಮನವರಿಕೆ ಮಾಡುವ ದುಸ್ಸಾಹಸಕ್ಕೆ ನಾವು ಕೈ ಹಾಕಲಿಲ್ಲ.

ಈ ಘಟನೆ ಹೇಳಲು ಕಾರಣ ಇದೆ. ನಾನೇನಾದರೂ  ಈ ತಾತನ ಮನೆಗೆ ಹೋಗಿ ವಿಚಾರ ಮಾಡಲು ಹೊರಟರೆ ಎಲ್ಲಿ ರಾಜಕೀಯ ಸೇರಿಬಿಡುತ್ತದೋ ಎಂದು ಅಂಜಿದೆ. ಹಿಂದಿನ ಕೆಟ್ಟ ಅನುಭವ ಪಾಠ ಕಲಿಸಿತ್ತು. ಆದರೆ ಈ ವೃದ್ಧ ದಂಪತಿಗಳನ್ನು ನೋಡುವಾಗಲೆಲ್ಲಾ ಕರುಳು ಕಿವಿಚಿದಂತಾಗುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ನಮ್ಮ ಮನೆಯ ಹಿಂದಿರುವ ಹಿಂದುಳಿದ ಪ್ರದೇಶದಲ್ಲಿ ಸರ್ಕಾರದಿಂದಲೇ ಶೌಚಾಲಯ ಕಾಮಗಾರಿ ಆರಂಭವಾಯ್ತು. ಶೌಚಾಲಯ ಇಲ್ಲದವರಿಗೆಲ್ಲಾ ಶೌಚಾಲಯ ನಿರ್ಮಾಣವಾಯ್ತು. ಆದರೆ ಯಾಕೋ ಅದರ ಉಪಯೋಗ ಆಗ್ತಾ ಇಲ್ಲಾ ಅನ್ನೋ ಅನುಮಾನ ನನಗೆ.

     ಹಿಂದುಳಿದ ಜನರ/ಬಡವರ  ಜೀವನ ಇಂದಿಗೂ ಸುಧಾರಿಸಿಲ್ಲ ಎಂಬುದೇ ಸತ್ಯ. ಆದರೆ ಸರ್ಕಾರದಿಂದ ಪ್ರಯತ್ನ ಸಾಗಿಲ್ಲವೇ? ಆರ್ಥಿಕವಾಗಿ ಹತ್ತು ಹಲವು ಯೋಜನೆಗಳು. ವೃದ್ಧರಿಗೆ ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲ ವೇತನ, ಉಚಿತವಾದ ಗೃಹ ನಿರ್ಮಾಣ,ಇತ್ಯಾದಿ ಹಲವು ಯೋಜನೆಗಳು. ಅತೀ ಕಡಿಮೆ ದರದಲ್ಲಿ ಅಕ್ಕಿ,ಗೋದಿ, ಸಕ್ಕರೆ ಸರಬರಾಜು. ಇಷ್ಟಾದರೂ ಮನೆಯ ಸ್ಥಿತಿ ಸುಧಾರಿಸಲಿಲ್ಲ. ಅದರ ಕಾರಣ ಹುಡುಕುವ ಪ್ರಯತ್ನವನ್ನು ಸರ್ಕಾರ ಸರಿಯಾಗಿ ಮಾಡಲೇ ಇಲ್ಲ.ಸಾಮಾನ್ಯವಾಗಿ ಹಿಂದುಳಿದ ವಸತಿ ಕ್ಷೇತ್ರದಲ್ಲಿ ಜನರ ಸ್ಥಿತಿ ಸುಧಾರಿಸದಿರಲು ಮುಖ್ಯ ಕಾರಣ ಶಿಕ್ಷಣದ ಕೊರತೆ ಮತ್ತು ಮದ್ಯ ವ್ಯಸನ.

ನಾಲ್ಕು ಕಾಸು ಕೈಗೆ ಸಿಕ್ಕಿದ ಕೂಡಲೇ ಹೆಂಡ    ಕುಡಿದು ತೂರಾಡುವ ದೃಶ್ಯಗಳು     ಈಗಲೂ ಸರ್ವೇ ಸಾಮಾನ್ಯ. ಈ ಮಾತನ್ನು ಅತಿಯಾದ ನೋವಿನಿಂದ ಹೇಳಲೇ    ಬೇಕಾಯ್ತು.  ಈ ಸಮಸ್ಯೆ ಬಗೆಹರಿಸದೆ ಕೇವಲ ಆರ್ಥಿಕ ಸಹಾಯ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂಬ  ಸತ್ಯದ ಅರಿವು ಹಲವರಿಗೆ ಇದೆ. ಆದರೆ ಈ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ? ಮನುಷ್ಯನ ಜೀವನ ಮಟ್ಟ ಸುಧಾರಿಸುವ ಪ್ರಯತ್ನವನ್ನು ಆರಂಭಿಸುವುದು ಅನಿವಾರ್ಯವಾಗಿದೆ. ಅದು ಈ ವಸತಿ ಕ್ಷೇತ್ರದ ಸುಶಿಕ್ಷಿತರಿಂದಲೇ ಆಗಬೇಕಾಗಿದೆ. ಈ ಒಂದು ಪ್ರಯತ್ನವು ಆರಂಭವಾದರೆ ಅಲ್ಲಿನ ಜನರಿಗೆ ಸಂಸ್ಕಾರವನ್ನು ಕೊಡಲು ನನ್ನೊಡನೆ ಹಲವರು ಇದ್ದಾರೆ. ಪ್ರಯತ್ನಕ್ಕೆ  ಚಾಲನೆ ಅಲ್ಲಿನ ಸುಶಿಕ್ಷಿತ ಯುವಕರಿಂದಲೇ ಆಗಬೇಕು.

 

ಹಿಂದುಳಿದ ವಸತಿ ಕ್ಷೇತ್ರದಲ್ಲಿ ಶಿಕ್ಷಣದ ಕೊರತೆ ಇರಬಹುದು, ಮದ್ಯವ್ಯಸನ ಇರಬಹುದು, ಆದರೆ  ಇಂತಾ ವೃದ್ಧ ಮಾತೆಯರೂ ಇದ್ದಾರೆ. ಹೊರನೋಟವನ್ನು ,ಮಾಸಿದ ಬಟ್ಟೆಯನ್ನು ನೋಡಿ ಇಂತಾ ತಾಯಿಯರನ್ನು ಗುರುತಿಸಲು ಸಾಧ್ಯವಿಲ್ಲ.ಹತ್ತಾರು ಭಾರಿ ಅವರ ಸೇವೆಯನ್ನು ಗಮನಿಸಿದಾಗ    ಅವರೊಳಗಿನ ಹೃದಯವಂತಿಗೆ,ಪ್ರೀತಿ, ವಾತ್ಸಲ್ಯವು ನಮ್ಮ ಕಣ್ತೆರೆಸದೆ ಇರದು. ತನ್ನ ತಂದೆಯನ್ನೇ  ಆಸ್ಪತ್ರೆಯಲ್ಲಿ ಅನಾಥ ಶವವನ್ನಾಗಿ ಮಾಡಿದ,  ಮುಂದುವರೆದರೆಂದು ಬೀಗುವ  ಆರಂಕಿ ವೇತನ ಪಡೆಯುವ ಈ ಪ್ರಾಂಶುಪಾಲರು ಆದರ್ಶವೋ? ಅಥವಾ ನಿರಕ್ಷರ ಕುಕ್ಷಿ , ಹಲವು ಭಾರಿ ಮದ್ಯ ಸೇವಿಸಿಯೂ ತನ್ನ ಪತಿಯ ಸೇವೆಯನ್ನು ಮನೆಯಲ್ಲೇ ಮಾಡುತ್ತಾ  ಪತಿಯ ಕಡೆಯ ಉಸಿರಿರುವವರೆಗೂ ಸೇವೆ ಮಾಡುತ್ತಿದ್ದ ಆ ವೃದ್ಧ ತಾಯಿಯದು ಆದರ್ಶದ ನಡೆಯೋ?   ಆ ತಾಯಿಯ ಗೋಳಾಟ ಕೇಳುತ್ತಿತ್ತು " ನನ್ನನ್ನು ತಬ್ಬಲಿಯನ್ನಾಗಿ ಮಾಡಿ ಹೋದೆಯಲ್ಲೋ? ಆ ಶಿವ ನನ್ನನ್ನು ನಿನಗಿಂತ ಮುಂಚೆ ಕರೆದುಕೊಳ್ಳಬಾರದಿತ್ತೇ?........

ನಿಜವಾಗಿ ಈ ವೃದ್ಧೆ ಮುಂಚಿತವಾಗಿ ಪ್ರಾಣ  ಬಿಟ್ಟಿದ್ದರೆ   ಮಗನಿದ್ದೂ   ಅನಾಥನಾಗುತ್ತಿದ್ದುದು ಆ ತಾತ! ಈ ಹೊತ್ತಿನಲ್ಲಿ ನಮ್ಮಮ್ಮ ನೆನಪಾಗುತ್ತಾಳೆ . ನಮ್ಮಮ್ಮನಿಗೆ ಮೂರ್ನಾಲ್ಕು ತಿಂಗಳು  ಹಾಸನದ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಕೊಡಿಸಿ "ಇನ್ನು ಚಿಕಿತ್ಸೆಯಿಂದ ಯಾವ  ಪ್ರಯೋಜನವಾಗುವುದಿಲ್ಲ" ಎಂದು ವೈದ್ಯರು ಹೇಳಿದಾಗ ನಮ್ಮ ಊರಿಗೆ ಕರೆದುಕೊಂಡು ಹೋದೆವು. ಮನೆಯಲ್ಲೇ ಪ್ರಾಣ ಬಿಡಬೇಕೆಂಬ ಬಯಕೆ ನಮ್ಮಮ್ಮನದು. ಅವರು ಸಾಯುವ ಒಂದು ದಿನ ಮುಂಚೆ ಅವರ ಸ್ನೇಹಿತೆಗೆ ಹೇಳಿದರಂತೆ " ಗೌರಮ್ಮಾ, ನಾನು ನಿಶ್ಚಿಂತೆಯಿಂದ ಪ್ರಾಣ  ಬಿಡುತ್ತೇನೆ, ಕಣೇ, ಅವರಪ್ಪನನ್ನು ಶ್ರೀಧರ ಚೆನ್ನಾಗಿ ನೋಡಿಕೊಂಡಿದ್ದಾನೆ"

ಈಗ ಒಂದು ಮಾತು ಹೇಳಲೇ ಬೇಕು. ಕಾರಣ ಹೇಳುವ ನೈತಿಕ ಅರ್ಹತೆ ಇದೆ ಮತ್ತು ಎಳೆಯರಿಗೆ ಆದರ್ಶವಾಗುವುದಾದರೆ ಆಗಲಿ ಎಂಬ ಉದ್ಧೇಶದಿಂದ. ನಮ್ಮಪ್ಪ ಹಾಸಿಗೆ ಹಿಡಿದಿದ್ದರು. ಅವರಿಗೆ ಆಗ ಸುಮಾರು 75 ವರ್ಷ ವಯಸ್ಸು. ಸ್ವತಂತ್ರವಾಗಿ ಸ್ನಾನ ಮಾಡಲು ಶಕ್ತಿ ಇಲ್ಲ, ಮೂತ್ರ ವಿಸರ್ಜನೆಗೆ  ಮತ್ತು ಶೌಚಕ್ಕೆ ಕೈ ಹಿಡಿದು ಕರೆದುಕೊಂಡು ಹೋಗಬೇಕು. ಆಗ ನನಗೆ ಸರ್ವೈಕಲ್ ಸ್ಪಾಂಡಿಲೈಟಿಸ್ ಕಾರಣ  ಎಡಗೈ ಸ್ವಾದೀನ ತಪ್ಪಿತ್ತು. ಆಗ ಒಂದೇ ಕೈಯಲ್ಲಿ  ಕಷ್ಟಪಟ್ಟು ನಮ್ಮಪ್ಪನಿಗೆ ಸ್ನಾನ ಮಾಡಿಸುವಾಗ ನನ್ನ ಕಣ್ನಲ್ಲಿ ನೀರು ಬರುತ್ತಿತ್ತು. ಬಾಯಲ್ಲಿ ಮಂತ್ರಗಳನ್ನು ಹೇಳಿಕೊಂಡು ಇದೇ ಭಗವಂತನ ಪೂಜೆ ಎಂದು ಅವರಿಗೆ ಸ್ನಾನ ಮಾಡಿಸುತ್ತಿದ್ದೆ. ಅದರಿಂದಲೇ ನಮ್ಮಮ್ಮನಿಗೆ ನನ್ನ ಮೇಲೆ ಅಷ್ಟು ವಿಶ್ವಾಸ ಬಂದಿತ್ತು. ಈ ಘಟನೆ ನನ್ನ ಹೆಚ್ಚುಗಾರಿಕೆ ಕೊಚ್ಚಿ ಕೊಳ್ಳಲು  ಹೇಳಲಿಲ್ಲ. ಸತ್ಯ ಘಟನೆ ಮುಂದಿನ ಯುವಕರಿಗೆ ಆದರ್ಶವಾಗುವುದಾದರೆ ಆಗಲಿ ಎಂದು ಬರೆದೆ ಅಷ್ಟೆ. ಈ ತಾತನ ಸಾವಿನಿಂದ ನನ್ನ ಕಣ್ಮುಂದೆ ಹಲವು ಘಟನೆಗಳು ನೆನಪಾಯ್ತು. ಇದೆಲ್ಲಾ ಘಟನೆ ಓದಿದಿರಿ. ನೀವೇನಂತೀರಾ?

Rating
No votes yet

Comments

Submitted by nageshamysore Mon, 04/22/2013 - 09:46

ನಮಸ್ಕಾರ ಶ್ರೀಧರರವರಿಗೆ,
- ತುಂಬಾ ಹೃದಯಸ್ಪರ್ಶೀ ಚಿತ್ರಣ. ದುರಂತವೆಂದರೆ ಎಷ್ಟೊ ಹೊಣೆಗಾರಿಕೆಯ ನೊಗ ಹೊತ್ತ ಜನ ತಮ್ಮ ಸ್ವಂತ ಕಷ್ಟಗಳ ಜತೆಗೆ ಇದೂ ಒಂದೆಂದುಕೊಂಡು ಸಹಿಸುತ್ತ, ಅನುಭವಿಸುತ್ತಾ ಸಾಗುತ್ತಾರೆ. ತಮ್ಮ ಶಂಖ ತಾವೆ ಊದಲಾಗದ ಸಂಕೋಚ ಬೇರೆ ಅವುಗಳನ್ನು ಬೆಳಕಿಗೆ ತರಿಸದೆ ಕತ್ತಲಲೆ ಹೂತಿಟ್ಟುಬಿಡುತ್ತದೆ. ಆ ದೃಷ್ಟಿಯಿಂದ ನಿಮ್ಮ ಬರಹ ಶ್ಲಾಘನೀಯ. ಮತ್ತಷ್ಟು ಜನರನ್ನು ಪ್ರೇರೆಪಿಸುವುದು ಮಾತ್ರವಲ್ಲದೆ, ಹಾಗೆ ಸವೆಯುತ್ತಿರುವ ಎಷ್ಟೊ ಮಂದಿಗೆ ತಾವು ಒಂಟಿಯಲ್ಲ ಎಂಬ ಸಮಾಧಾನ ಕೊಡುತ್ತದೆ ಕೂಡ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು
- ನಾಗೇಶ ಮೈಸೂರು, ಸಿಂಗಾಪುರದಿಂದ