ನನ್ನಮ್ಮನ ದೇವರು

ನನ್ನಮ್ಮನ ದೇವರು

ನಾನು ಪುಟ್ಟ ಹುಡುಗಿಯಗಿದ್ದಾಗ ದೇವರು ಅಂದರೆ ಒಂದು ಬಗೆಯ ಹೆದರಿಕೆಯಿತ್ತು, ಅಮ್ಮ ಹೇಳುವ, ಗುಮ್ಮನ ಕಥೆ, ಭಯಂಕರ ದೇವರುಗಳ ಭೀಭತ್ಸ ಸೇಡು ತೀರಿಸಿಕೊಳ್ಳುವ ಕಥೆಗಳನ್ನ ಬಣ್ಣಿಸುವ ಅಮ್ಮನ ಮಡಿಲಲ್ಲಿ ಹೆದರಿ ಅವುಚಿಕೊಂಡು, ಪಾಪದ ಭಯದಿಂದಲೋ ಭಕ್ತಿಯಿಂದಲೋ ಅಂತೂ ಪೂಜೆ ಮಾಡಲು ಸಂಜೆ ಬಲವಂತವಾಗಿ ಒಪ್ಪಿಕೊಳ್ಳುತ್ತಿದ್ದೆ.

ಸ್ವಲ್ಪ ಬುದ್ಧಿ ಬಂದ ಮೇಲೆ, ದೇವರು ಎನ್ನುವುದು ಯಾರನ್ನ?, ಈ ದೇವರು ನನ್ನನ್ನ ಪರೀಕ್ಷೆ ಇಲ್ಲದೆ ಪಾಸ್ ಯಾಕೆ ಮಾಡುವುದಿಲ್ಲ ಅಂತ ಅಮ್ಮನನ್ನ ಕೇಳಿದಾಗ, ಅಮ್ಮ ಕಣ್ಣುಮರಳಿಸಿ, ನೀನು ಒದಿ ಪಾಸ್ ಅಗದಿದ್ರೆ ಅವನೇನು ಮಾಡಿಯಾನು, ಮೊದಲು ಓದು ಅಂತ ಹೇಳುತ್ತ ಜೊತೆಗೆ ಭಗವದ್ಗೀತೆಯ ಒಂದೆರಡು ಸಾಲುಗಳನ್ನು ಒದರುತ್ತಿದ್ದಳು" ಕರ್ಮಣ್ಯೇ ವಾದಿಕಾರಸ್ಥೆ ಮ-ಫಲೇಶು ಕದಾಚನ" ಅಂತ..

ನಾನು, "ಅದ್ಸರಿ ಹಾಗಾದರೆ ದೇವರು ಈ ಊರಿನಲ್ಲಿರೊ ಕಷ್ಟಪಡುವ ಕೂಲಿಗಳನ್ನೇಕೆ ಸಿರಿವಂತರನ್ನಾಗಿ ಮಾಡೋಲ್ಲ ಅಮ್ಮ", ಅಂತ ಪ್ರಶ್ನೆ ಕೇಳುವಾಗ ಅಮ್ಮ, ಅದು ಹಾಗೆ ಅವರವರ ಕರ್ಮ ಅಂದುಬಿಡುತ್ತಿದ್ದಳು.

ಹಾಗಾದರೆ ನದೆಯುವುದೆಲ್ಲ ಕರ್ಮ, ಅಂದರೆ ನಮ್ಮ ಕೆಲಸಗಳ ಪರಿಣಾಮವೆಂದರೆ ಈ ಜುಟ್ಟಿಲ್ಲದ ಕ್ಯಾಲೆಂಡರ್, ಪೋಸ್ಟರ್ ದೇವರುಗಳಿಗೆಲ್ಲ ನಾನು ಯಾಕೆ ಸಡ್ಡುಹೊಡೆಯಬೇಕು ಅಂತ ನನ್ನ ಸಂಸ್ಕಾರದಿಂದೀಚೆ ಯೋಚಿಸಲು ಶುರುಮಾಡುವ ಹೊತ್ತಿಗೆ ನನಗೆ ನಾಸ್ತಿಕಳು ಅಂತ ಎಲ್ಲಾರು ಪಟ್ಟ ಕಟ್ಟಿದ್ದಾಗಿತ್ತು.

ನನ್ನ ನಾಸ್ತಿಕಥೆ ಕೊಂಚ ಹದ್ದುಮೀರಿ ಸ್ವಲ್ಪವೇ ಅಹಮ್ ಕಡೆಗೆ ಹರಿಯುತ್ತಿತ್ತು, ನಾನು ದೇವರೆ ಇಲ್ಲವಮ್ಮ ಅಂತ ಅಮ್ಮನಿಗೆ ಹೆಳುತ್ತ, ನನ್ನ ನೋವುಗಳನ್ನೆಲ್ಲ ದೇವರಿಗೆ ಆರೋಪಿಸದೆ ಜೀವಿಸುವುದು ಅಸಾಧ್ಯವೆ ಅಂತ ಯೋಚಿಸಲು ಶುರುಮಾಡಿದೆ, ನಮ್ಮ ಅತೀವ ನೋವಿನಲ್ಲಿ ನಾವು ದೇವರಿಗೆ ಹರಕೆಗಳನ್ನ ಹೊರುವುದು, ದೇವರನ್ನೆ ನಂಬಿ ಜಪಿಸುವುದು,ವ್ರತ ಆಚರಿಸುವುದು,ದಿನವೂ ದೀಪ ಹೊಚುವುದು ಇವೆಲ್ಲ ಕಂದಾಚಾರಗಳಂತೆ ಕಾಣತೊಡಗಿದವು.

ದೇವರು ಇಲ್ಲವೆ ಇಲ್ಲ ಅಂತ ಕೊನೆಗೊಮ್ಮೆ ಗಟ್ಟಿಯಾಗಿ ಅನ್ನಿಸಿಕೋಬೇಕು ಅಂದುಕೊಳ್ಳುತ್ತ ಮೂಲೆಯಲ್ಲೆಲ್ಲೋ ಅದರುತ್ತಿದ್ದ ಭಯದ ವಾಸನೆಯನ್ನು ಅಡಗಿಸಿ ,ದೇವಸ್ಥಾನಗಳಿಗೆ ಹೋಗದೆ ಧೈರ್ಯವಾಗಿ ಅಮ್ಮನ ಬಳಿ "ಬಜಾರಿ" ಎನ್ನಿಸಿಕೊಳ್ಳುತ್ತ ನಿರ್ಭಿಡೆಯಿಂದ ತಪ್ಪು ಗಳನ್ನು ಮಾಡುತ್ತ, ತಪ್ಪಿಗೆ ದೇವರೆದುರು ಕ್ಷಮಿಸೆಂದು ಬೇಡಿಕೊಳ್ಳದೆ ನನ್ನದೆ ಮನಸಿನ ಪರಿವಿಧಿಯನ್ನ ಮತ್ತಷ್ಟು ವಿಸ್ತರಿಸಿಕೊಳ್ಳುತ್ತ, "ಕ್ಷಮೆ " ಮತ್ತು "ಕರುಣೆ" ಎರಡನ್ನು ನನ್ನಲ್ಲೆ ಹೊಂಚಿಕೊಳ್ಳುತ್ತ ಗಟ್ಟಿಯಾಗುತ್ತಿದ್ದ ಹಾಗೆ ಇಂದಿಗೆ ಹದಿನೈದು ಇಪ್ಪತ್ತು ವರುಷಗಳು ಜಾರಿವೆ, ಈಗ ಅಮ್ಮ ನನಗೆ ದೇವರಿಗೆ ಬೇಡಿಕೋ ಅಂತ ಹೇಳುವುದಿಲ್ಲ, ತನ್ನಷ್ಟಕ್ಕೆ ತಾನೆ ಹೋಮಗಳನ್ನ,ವ್ರತಗಳನ್ನ ನನ್ನ ಹೆಸರಲ್ಲಿ ಮಾಡಿಸ್ತಾಇರ್ತಾಳೆ, ನಾನು ದೂರ ದೇಶದಲ್ಲಿರುವುದು ಅವಳೆಲ್ಲ ಕಳವಳಗಳಿಗೆ ಕಾರಣ.

ಇಂದು ನನ್ನ ಮಕ್ಕಳು ದೊಡ್ಡವಾಗಿವೆ, ಎಷ್ಟೊ ಬಾರಿ ಮಕ್ಕಳಿಗೆ ದೇವರು ಎನ್ನುವ ಕಾನ್ಸೆಪ್ಟ್ ಬಗ್ಗೆ ಹೇಳುವಾಗ ಅಳುಕು,ತಳಮಳ, ಮುಂದಿನ ಭವಿಷ್ಯತ್ತಿನಲ್ಲಿ "ದೇವರು" ಎನ್ನುವವ ಇರುತ್ತಾನೆಯೋ ಇಲ್ಲವೊ, ಈ ಕ್ಲೋನಿಂಗ್, ಟೆಕ್ನೊಲಜಿ ಗಳ ಹಾವಳಿಯಲ್ಲಿ ಮನುಷ್ಯ ದೆಯ್ಯವೆ ಆಗಿ ಕಂಪ್ಯೂಟRಗಳು ದೇವರಾಗುವ ದಿನ ಬಹುದೂರವಿಲ್ಲ...ಮತ್ತೆ ಹಳೆ ಸಂಪ್ರದಾಯಗಳನ್ನು ಮತ್ತು ಗೊಡ್ಡು ಆಚಾರಗಳನ್ನು ಮಕ್ಕಳ ತಲೆಯಲ್ಲಿ ತುಂಬಲು ಇರುಸು ಮುರುಸಾಗುತ್ತದಾದರು, ಮೊನ್ನೆ ನನ್ನ "ಪುಟ್ಟ" ಮನೆಗೆ ಬಂದು ..ಅಮ್ಮ ಇವತ್ತು ಟೆಸ್ಟ್ ಇತ್ತು ,ನೀನು ಹೇಳಿದಹಾಗೆ ಒಂದು ಪ್ರಶ್ನೆ ನನಗೆ ಗೊತ್ತಾಗಲಿಲ್ಲ, ಆಗ ನಾನು ಮೂಲೆಯಲ್ಲಿ ನಿಂತು ದೇವರನ್ನ ಬೇಡ್ಕೊಂಡೆ, ಆಮೇಲೆ ತುಂಬ ಈಸಿಯಾಗಿ ಅನ್ಸ್ವರ್ ಬರೆದೆ ಅಮ್ಮ...ಅಂದಾಗ..ಅಮ್ಮನ ನೆನಪಾಯಿತು..
ಅವಳನ್ನು ಗೋಳುಹುಯ್ಯುಕೊಳ್ಳುತ್ತಿದ್ದು ನೆನಪಾಗಿ ಕಣ್ಣಲ್ಲಿ ನೀರು ಜಿನುಗಿತು.., ಪಾಪ ನನ್ನಮ್ಮನಿಗೂ ಗೊತ್ತಿತ್ತೇನೊ ದೇವರಿಲ್ಲದ ವಿಶಯ...ಆದರೆ ನಂಬಿಕೆಯ ಪರಿಧಿ, ವಿಸ್ತಾರ ಮತ್ತು ಬದುಕಿಗೆ ಅದು ನೀಡುವ ಅದಮ್ಯ ಅವ್ಯಕ್ತ ಭರವಸೆಯನ್ನ ಯರಾದರು ಸಂಹರಿಸುವುದುಂಟೆ..
ಉಶ್ಯಪ್ಪ "ದೇವರೆ" ನಿನಗೆ ನೂರು ವಂದನೆಗಳು ಎನ್ನುತ್ತ ದೀಪ ಹಚಿಟ್ಟೆ ಆಮೆರಿಕದಲ್ಲಿ..

Rating
No votes yet

Comments