ನನ್ನ ಅನಿಸಿಕೆ
''ಅನ್ನದಾಸೆಗೆ ಪರರ ಮನೆಯ ಬಾಗಿಲ ಕಾಯ್ದು
ಅನೇಕ ಬಾಧೆಗಳಿಂದ ನೊಂದೆನಯ್ಯ ''
ಈ ದಾಸವಾಣಿಯನ್ನು ಮೊನ್ನೆ ಯಾರೋ ಒಬ್ಬರು ಫೇಸ್ಬುಕ್ ನಲ್ಲಿ ಹಾಕಿದ್ದರು, ನಾನು ಶೇರ್ ಮಾಡಿದೆ. ಆಮೇಲೆ ರಾತ್ರಿ ಮಲಗಿದಾಗ ಈ ದಾಸವಾಣಿ ಮತ್ತೆ ನೆನಪಿಗೆ ಬಂತು. ಎಷ್ಟು ಸತ್ಯವಾದ ಮಾತು ಇದು. ಪ್ರತಿಯೊಬ್ಬರ ಜೀವನಕ್ಕೂ ಇದು ಅನ್ವಯವಾಗುತ್ತೆ ಅನ್ನಿಸಿತು. ಬೇರೆಯವರ ಮಾತೇಕೆ ನನ್ನ ಬದುಕಿನಲ್ಲೇ ಇದು ಎಷ್ಟು ಸತ್ಯವಾಗಿದೆ, ನನಗೆ ಬೇರೆಯವರ ಕೈಕೆಳಗೆ ದುಡಿಯಲು ಇಷ್ಟವಿಲ್ಲ, ಹಾಗಂತ ಅದು ಅನಿವಾರ್ಯವೂ ಅಲ್ಲ, ಆದರೂ ಬೇರೆಯವರಡಿಯಲ್ಲಿ ದುಡಿಯಲೇ ಬೇಕಾದ ಪರಿಸ್ತಿತಿ.
ಎಲ್ಲವನ್ನು ಬಿಟ್ಟು ದೂರ ಬಹುದೂರ ಹೋಗಿ ಒಬ್ಬಂಟಿಯಾಗಿ ಬಾಳಬೇಕೆಂಬ ಆಸೆ, ಆ ರೀತಿ ಕನಸನ್ನೂ ಕಾಣುತಿರುತ್ತೇನೆ. ಆದರೆ ಅದು ಸಾಧ್ಯವಿಲ್ಲ ಎಂದು ಅರಿವಿಗೆ ಬಂದಾಗ ಅಷ್ಟೇ ಬೇಜಾರೂ ಆಗುತ್ತದೆ. ಈ ಲೌಕಿಕ ಜಂಜಾಟದೊಳಗೆ ಸಿಕ್ಕಿಹಾಕಿಕೊಂಡು ಬರೀ ಪ್ರಪಂಚದ ಸಂಬಂಧಗಳಿಗೆ ಮತ್ತು ವಸ್ತುಗಳಿಗೆ ಆಸೆ ಪಡುತ್ತಾ ಅದು ನನ್ನ ಕೈ ತಪ್ಪಿ ಹೋಗದಂತೆ ದೊಂಬರಾಟ ಆಡುತ್ತಾ ವ್ಯರ್ಥವಾಗಿ ಆಯಸನ್ನು ಕಳೆಯುತಿದ್ದೇನೆ ಅನ್ನೋ ಭಾವನೆ ಒಮ್ಮೊಮ್ಮೆ ಮನಸಿನಲ್ಲಿ ಮೂಡುತ್ತದೆ.
ಬೇರೆಯವರ ವ್ಯವಹಾರಕ್ಕಾಗಿ ಮತ್ತು ನಮ್ಮ ಅವಶ್ಯಕತೆಗಳಿಗಾಗಿ ಅವರ ಕೈಕೆಳಗೆ ದುಡಿದು ಅವರ ಅಡಿಯಾಳಾಗಿ ಅವರು ಹೇಳಿದ ಕೆಲಸಗಳನ್ನು ಮಾಡುತ್ತಾ ಅವರನ್ನು ಬಾಸ್ ಎಂದು ಸಂಭೋದಿಸಿ ಅವರಿಂದ ಸಂಬಳ ಪಡೆದಾಗ ಧನ್ಯತಾಭಾವ ಹೊಂದುವುದು ಎಷ್ಟು ಅರ್ಥಹೀನ ಅಲ್ವೇ ? ನಮ್ಮ ನಿಜವಾದ ಬಾಸ್ ಅನ್ನು (ಪರಮಾತ್ಮ ) ಮರೆತು ಸಂಬಳ ಕೊಡುವವನೇ ಸದಾಶಿವನೆನ್ನೋ ಭಾವನೆ ನನಗೆ ಸರಿ ಅನ್ನಿಸುತ್ತಿಲ್ಲ. ಈ ನಮ್ಮ ಬಾಸ್ ನ ವ್ಯಕ್ತಿತ್ವ ನಡವಳಿಕೆಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದೇ ಎಲ್ಲ. ದುಡ್ಡು ಕೊಟ್ಟವನು ದೊಡ್ಡಪ್ಪ ಎಂದು ದೀನ ಭಾವದಿಂದ ತಲೆ ತಗ್ಗಿಸಿ ಅವನು ಹೇಳಿದ ಮಾತನ್ನು ಕೇಳುತ್ತೇವೆ . ಇದು ಎಷ್ಟರ ಮಟ್ಟಿಗೆ ಸರಿ? ಮನುಷ್ಯ ಒಳ್ಳೆಯವನಾಗಿದ್ದರೆ ಸರಿ ಇಲ್ಲವಾದರೆ ಅವನ ದುಡ್ಡು ತೆಗೆದುಕೊಳ್ಳುವ ಮತ್ತು ಅವನು ಹೇಳುವ ಕೆಲಸಗಳನ್ನು ಮಾಡುವ ನಾವು ಅವನ ಪಾಪ ಕಾರ್ಯಗಳಲ್ಲಿ ಪಾಲುದಾರರಲ್ಲವೇ ?
ನಾನು ಬರೆದಿರುವುದು ನನ್ನ ಅನಿಸಿಕೆ ಅಷ್ಟೇ
Comments
ಉ: ನನ್ನ ಅನಿಸಿಕೆ
ಬಂಧನ- ಒಳಗಾದವರೂ ನಾವೇ, ಬಿಡಿಸಿಕೊಳ್ಳಬೇಕಾದವರೂ ನಾವೇ, ಬಿಡಿಸಿಕೊಳ್ಳದೆ ಇರುವವರೂ ನಾವೇನೇ!!