ನನ್ನ ಇತ್ತೀಚಿನ ಪುಸ್ತಕ ಖರೀದಿ ಮತ್ತು ಓದು- ಮತ್ತೆ ಸಿಕ್ಕ ವಜ್ರ ?
ಮುಂಬೈಯಲ್ಲಿರುವ ನಾನು ಇತ್ತೀಚೆಗೆ ಧಾರವಾಡಕ್ಕೆ ಹೋದಾಗ ಮತ್ತಷ್ಟು ಪುಸ್ತಕ ಹೊತ್ತು ತಂದೆ .
ಅವು ಇಂತಿವೆ .
೧) ನೀಲು ; ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಬಂದ ಲಂಕೇಶರ ’ನೀಲು’ ಕವನಗಳ ಸಂಗ್ರಹ - ಭಾಗ ೧ . ೪-೫ ಸಾಲುಗಳ ಹೇಳಿಕೆಗಳು , ತುಂಟತನ , ವಾಸ್ತವಿಕತೆ , ಸತ್ಯಗಳು ಇಲ್ಲಿವೆ . ಕವಿತೆಗಳು ಅನ್ನುವದಕ್ಕಿಂತ ವಚನ ಎನ್ನಬಹುದು . ೮೦ % ಓದಿದ್ದೇನೆ. ಒಂದೆರಡು ದಿನದಲ್ಲಿ ಮುಗಿಸುವೆ. ಒಳ್ಳೆಯ ಓದು ( ಐದರಲ್ಲಿ ನಾಲ್ಕು ಅಂಕ)
೨) ಕರ್ವಾಲೋ ; ಹಿಂದೆ ತುಷಾರದಲ್ಲಿ ಧಾರಾವಾಹಿಯಾಗಿ ಬಂದಾಗ ಓದಿದ್ದೆ ; ತೇಜಸ್ವಿ ಅವರ ಕಾದಂಬರಿ . ಇರಲಿ ನನ್ನ ಹತ್ರ ಅಂತ ತಗೊಂಡೆ . ಇನ್ನೊಮ್ಮೆ ಓದಬೇಕು. ಇನ್ನೂ ಓದಿಲ್ಲ.
೩) ಆರ್ಯ ಅವರ ಹೈಬ್ರಿಡ್ ಕತೆಗಳು . - ಜಗತ್ತಿನ ವ್ಯಾಪಕ ಹಿನ್ನೆಲೆಯಲ್ಲಿ ವಿಭಿನ್ನ ಸಂಸ್ಕ್ಲೃತಿ , ಭಾಷೆ , ಸಾಹಿತ್ಯ , ಸಂಗೀತಗಳನ್ನು ಆವರಿಸಿದ ಒಂಥರಾ ಕಲಸುಮೇಲೋಗರದ ಕತೆಗಳು . ( ಐದರಲ್ಲಿ ನಾಲ್ಕು ಅಂಕ)
೪) ಸಂಬಂಧಗಳು - ವಿಚಿತ್ರ ಕನಸುಗಳ ಹಿನ್ನೆಲೆ ಹೊಂದಿದ ಕತೆಗಳು . ಕನಸಿನಲ್ಲಿ ಕಂಡವನು ನನಸಿನಲ್ಲಿ ಬರುವದು , ಸತ್ತವರು ಕನಸಿನಲ್ಲಿ ಬರುವದು , ಹೆಸರಿಡಿದು ಕರೆಯುವದು ಕನಸು ಕಂದವನಿಗೆ ಬರಲಿರುವ ಸಾವಿನ ಸೂಚಕ ನನಸಾಗಿ ಪರಿಣಮಿಸುವದು ಇತ್ಯಾದಿ ವಿಚಿತ್ರ ಕತೆಗಳಿವೆ. ಅರ್ಥ ಅಗಲಿಲ್ಲ ; ಥ್ರಿಲ್ಲರ್ ಕತೆ ಎಂದು ಓದಬಹುದು. ( ಐದರಲ್ಲಿ ಮೂರು ಅಂಕ)
೫) ಹಿಂದೊಮ್ಮೆ ’ಕಲ್ಲೆಂದು ತಿಳಿದು ವಜ್ರವನ್ನು ಎಸೆದ’ ಬಗ್ಗೆ ಬರೆದಿದ್ದೆ . ( http://sampada.net/blog/shreekant_mishrikoti/31/07/2006/2043)
ಆ ಕಾದಂಬರಿ - ಉಸಿರು - ನಿಂಜೂರರದು ಮತ್ತೆ ಸಿಕ್ಕಿತು . ಓದಿ ನೋಡಬೇಕು .
೬) ಲೋಕಾಪುರ ಎಂಬವರ ’ಉಧೋ ಉಧೋ’ ಸಣ್ನ ಕಾದಂಬರಿ . ಬೆಳಗಾಂವಿ , ಐನಾಪುರ , ಅಥಣಿ ಭಾಗದ ಕನ್ನಡ ( ’ಯಾನು’ ಅಂದರೆ ’ಏನು’ ಇತ್ಯಾದಿ) ಆಕರ್ಷಿಸಿ ತೆಗೆದುಕೊಂಡೆ ( ಮಿರ್ಜಿ ಅಣ್ಣಾರಾಯರ ನಿಸರ್ಗ ಸಿಕ್ಕರೆ ಓದಬೇಕು . ) ನಿರ್ಲಿಪ್ತ ವಾಗಿ ಯಲ್ಲಮ್ಮ ಕೇಂದ್ರದೇವತೆ ಆಗಿರುವ ಊರಿನ ಜಾತಿಸಂಬಂಧಿ ಬದಲಾವಣೆಗಳನ್ನು ತಣ್ಣಗೆ ಹೇಳುವದು . ( ಐದರಲ್ಲಿ ಮೂರು ಅಂಕ)
೭) ಎನ್ಕೆ ಅವರ ವೈನಿ ಕಾದಂಬರಿ - ಸಾಕಷ್ಟು ಸುಪ್ರಸಿದ್ಧ - ಹೆಂಡತಿಯಾಗಿ ಬರಬೇಕಾದವಳು ವೈನಿ(ಅತ್ತಿಗೆ) ಆಗಿ ಬಂದಾಗ ಆಗುವ ಮನಸ್ಸಿನ ತಳಮಳ ಇಲ್ಲಿದೆ ಅಂತೆ - ಹಂ ಆಪಕೆ ಹೈ ಕೌನ್ ಚಿತ್ರದ ಕತೆ ಇಲ್ಲಿಂದ ಕದ್ದದ್ದು ಎಂಬ ಆರೋಪವನ್ನು - ಸಾಹಿತಿ ಎನ್. ಕೆ. ಕುಲಕರ್ಣಿ ಅವರು ಮಾಡಿದ್ದರು . ಇನ್ನೂ ಓದಿಲ್ಲ .
೮,೯) ಕಾಫ್ಕಾ ಕತೆಗಳು ಮತ್ತು ಬ್ರೆಖ್ಟ್ ಕತೆಗಳು ಪುಸ್ತಕಗಳನ್ನೂ ಕೊಂಡಿದ್ದೇನೆ . ಇನ್ನೂ ಓದಿಲ್ಲ .
೧೦) ಮತ್ತೆ ’ತಂದೆಯರೂ ಮಕ್ಕಳೂ ’ ಎಂದೇನೋ ಹೆಸರಿರುವ ರಶ್ಯನ್ ಕಾದಂಬರಿಯ ಕನ್ನಡ ಅನುವಾದ . ಇನ್ನೂ ಓದಿಲ್ಲ .
೧೧) ಮುಳಿಯ ತಿಮ್ಮಪ್ಪನವರ ’ಪಶ್ಚಾತ್ತಾಪ’ - ಈ ಬಗ್ಗೆ ಈಗಾಗಲೇ ಬರೆದಿದ್ದೇನೆ.
ಇನ್ನೂ ಓದಿಲ್ಲ ಎಂದು ಬರೆದ ಪುಸ್ತಕಗಳ ಕುರಿತು ಏನದರೂ ವಿಶೇಷ ಇದ್ದರೆ ತಮಗೆ ತಿಳಿಸುವಂಥವನಾಗುವೆನು .
ಇದರಲ್ಲಿ ಒಂದಿಷ್ಟು ಪುಸ್ತಕಗಳು ಸೆಕಂಡ್ ಹ್ಯಾಂಡ್ ಪುಸ್ತಕಗಳು . ಒಟ್ಟಿನಲ್ಲಿ ೬೦೦ ರೂಪಾಯಿಗೆ ೩೦೦೦ ಪುಟಗಳು . ದಿನಕ್ಕೆ ೩೦ ಪುಟದಂತೆ ಮೂರು ತಿಂಗಳು ಓದಬಹುದು !
ನಾನು ಕೆಲಸ ಮಾಡುವಲ್ಲಿ ಪ್ರತಿ ತಿಂಗಳು ೫೦೦ ರೂಪಾಯಿಗಳನ್ನು - ಪುಸ್ತಕ ಮ್ಯಾಗಝಿನ್ ಇತ್ಯಾದಿಗಳಿಗೆ ಕೊಡುವರು . ಆ ಹಣವನ್ನು ಇಲ್ಲಿ ಹಾಕಿದ್ದೇನೆ . ನಿಮಗೂ ಈ ಸೌಲಭ್ಯ ಇದ್ದರೆ ನೀವೂ ಹೀಗೆ ಮಾಡಬಹುದು ಎಂದು ನನ್ನ ಪುಕ್ಕಟೆ ಸಲಹೆ. :)