ನನ್ನ ಕಂಪ್ಯೂಟರ್‍ ಅನುಭವಗಳು - ೩

ನನ್ನ ಕಂಪ್ಯೂಟರ್‍ ಅನುಭವಗಳು - ೩

ಮುಂದುವರಿದಿದೆ....

ಆಗ ಪರ್ಸನಲ್ ಕಂಪ್ಯೂಟರ್‍ ಗಳು ದಿಗಂತದಲ್ಲಿ ಕಾಣತೊಡಗಿದ್ದರೂ ನಮಗೆ ಅದರ ಬಗ್ಯೆ ವಿಶೇಷ ಆಸ್ಥೆಯಿರಲಿಲ್ಲ. ಸುಮಾರು ಅದೇ ಸಮಯದಲ್ಲಿ ಸಿಂಕ್ಲೇರ್‍ ಎಂಬ ಬ್ರಿಟಿಷ್ ಪ್ರತಿಭಾವಂತನೊಬ್ಬ ZX- spectrum ಎಂಬ ಹೆಸರಿನ microcomputer ಅನ್ವೇಶಿಸಿದ್ದ. ಅದು ಭಾರತದಲ್ಲಿಯೂ ದೊರೆಯುತ್ತಿತ್ತು . ಬೆಲೆ ಬಹುಶಃ ೩-೪ ಸಾವಿರ ಇರಬೇಕು. ಅನೇಕ ಹವ್ಯಾಸಿಗಳು ಕೊಂಡಿದ್ದರು. ಅದು ನೋಡಲಿಕ್ಕೆ ದೊಡ್ಡ ಕೀಬೋರ್ಡ್ ಥರಾ ಇದ್ದು , ಟಿವಿಗೆ ಜೋಡಿಸಿ ಉಪಯೋಗಿಸಬೇಕಾಗಿತ್ತು. ಅದರಲ್ಲಿ ಗೇಮುಗಳು , BASIC ಭಾಷೆಯ ಪ್ರೋಗ್ರಾಮುಗಳು ಇತ್ಯಾದಿ ಕ್ಯಾಸೆಟ್ಟುಗಳಲ್ಲಿ ಬರುತ್ತಿದ್ದವು. ನನ್ನ ನೆರೆಮನೆಯವರಿಗೂ ಇದರ ಹುಚ್ಚು ಹತ್ತಿತ್ತು. ಅವರು ನನಗೆ ಕಂಪ್ಯೂಟರ್‍ ಬಹಳ ಗೊತ್ತಿದೆ ಎಂದು (ತಪ್ಪು) ತಿಳಿದುಕೊಂಡಿದ್ದರಿಂದ ಆಗಾಗ ನನ್ನ ಸಲಹೆ ಕೇಳುತ್ತಿದ್ದರು. ನಿಜ ಅಂದರೆ ನನಗೆ spectrum ಅನ್ನು ನೋಡಿಯೂ ಗೊತ್ತಿರಲಿಲ್ಲ. ಅವರು ಕೊನೆಗೂ ಒಂದು spectrum ಕೊಂಡೇ ಬಿಟ್ಟರು. ಮುಂದೆ ಅವರೊಡನೆ ಚರ್ಚೆ ಮಾಡಿ, ಪ್ರಯೋಗ ಮಾಡಿ ಅದರ ಬಗ್ಯೆ ಸ್ವಲ್ಪ ಸ್ವಲ್ಪ ಗೊತ್ತಾದರೂ ನನಗೇನು ಅದರ ಬಗ್ಯೆ ವಿಶೇಷ ಆಸಕ್ತಿ ಬರಲಿಲ್ಲ.

IEEE SPECTRUM ಮ್ಯಾಗಜೀನು ೧೯೮೩ರಲ್ಲಿ PCಗಳ ಬಗ್ಯೆ ಒಂದು ವಿಶೇಷ ಸಂಚಿಕೆಯನ್ನು ಹೊರತಂದಿತು. ಬಹಳ ಚೆನ್ನಾಗಿತ್ತು. (ಈಚೀಚಿನವರೆಗೂ ಅದನ್ನು ಕಾಪಿಟ್ಟಿದ್ದೆ. ಆಮೇಲೆ ಬಹುಷಃ ರದ್ದಿಗೆ ಹೋಗಿರಬೇಕು). ಅದರಲ್ಲಿ ಅನೇಕ ಒಳ್ಳೊಳ್ಳೆಯ ಲೇಖನಗಳು , ಚಿತ್ರಗಳೂ ಇದ್ದವು. ನನಗೆ PC ಹೆಸರು ಈ ಮೊದಲೇ ಕೇಳಿದ್ದರೂ, ಸ್ವಲ್ಪ ಆಸಕ್ತಿ ಹುಟ್ಟಿದ್ದು ಆಗಲೇ. ಈಗಾಗಲೇ ನಮ್ಮ ಆಫೀಸುಗಳಲ್ಲಿಯೂ ಒಂದೊಂದು PC ಕಾಣುತ್ತಿದ್ದವು. ಆದರೂ ಅದನ್ನು ಉಪಯೋಗಿಸುವುದು ಬಹಳ ಕಡಿಮೆ ಜನರಿಗೆ ಗೊತ್ತಿತ್ತು .

PCಗೆ ಮೊದಲ ಗಿರಾಕಿಗಳು ಅಂದರೆ, ಟೈಪಿಸ್ಟುಗಳು. ಮೊದಲೆಲ್ಲ ಯಾವುದಾದರೂ, ರಿಪೋರ್ಟ್ , ಮೆಮೊ ಇತ್ಯಾದಿ ನಾವು ಕೈಯಲ್ಲಿ ಬರೆದು ಕೊಟ್ಟರೆ , ಅವರು ಅದನ್ನು ಟೈಪರೈಟರಿನಲ್ಲಿ ಟೈಪು ಮಾಡಿ ನಮಗೆ ಚೆಕ್ ಮಾಡಲಿಕ್ಕೆ ಕಳಿಸುತ್ತಿದ್ದರು. ಸರಿ ಅದರಲ್ಲಿ ಮತ್ತೆ spelling ಇತ್ಯಾದಿ ಶುದ್ಧ ಲೇಖನ ಮಾಡಿ ಕೊನೆಯ ಶುದ್ಧ ಪ್ರತಿ ತೆಗೆಯುವುದಕ್ಕೆ ಸುಮಾರು ಪೇಪರು, ಸಮಯ ವ್ಯಯವಾಗುತ್ತಿತ್ತು. ಇದಕ್ಕೆ ಅಂತ ಟೈಪಿಂಗ್ ಪೂಲ್ ಅಂತ ಒಂದು ಸಣ್ಣ ಟೈಪಿಸ್ಟುಗಳ ಬೆಟಾಲಿಯನ್ನೇ ಇತ್ತು. ಈಗ ಅವರಿಗೆ , ಹಾಗೂ ನಮಗೆ, ಸಲೀಸಾಯಿತು.

PCಯ ಉಪಯೋಗ ಬರಿಯ word processingಗಾಗಿ ಮಾತ್ರಾ. Operating System DOS (ಬಹುಷಃ ೩.೦). ಆಮೇಲೆ Lotus 123 ಬಹು ಬೇಗ ಬಹಳ ಜನಪ್ರಿಯ spread sheet ಆಗಯಿತು. ನನಗಂತೂ ಅದರ ಸೆಲ್ಲುಗಳಲ್ಲಿ ಫಾರ್ಮುಲಾ ಹಾಕಿ ಅವು ಡಾಟಾಕ್ಕೆ ಅನುಗುಣವಾಗಿ ತಮ್ಮಷ್ಟಕ್ಕೆ ತಾನೇ ಬದಲಾಗುವುದನ್ನು ನೋಡುವುದೇ ಒಂದು ಆನಂದ !!.
ಇಂದಿಗೂ ನನಗೆ Lotus 123 ಬಗ್ಯೆ ಏನೋ ಒಂದು ಪ್ರೀತಿ ಉಳಿದುಕೊಂಡಿದೆ.

ಮುಂಬಯಿಯಲ್ಲಿ Microcomputer User's Club ಅಂತ ಒಂದು ಕ್ಲಬ್ ಇತ್ತು. ಅದು ಅದೇ ಒಂದೆರಡು ವರ್ಷದ ಹಿಂದೆ ಆಸಕ್ತರು ಸೇರಿಕೊಂಡು ಕಟ್ಟಿಕೊಂಡ ಹವ್ಯಾಸೀ ಸಂಸ್ಥೆಯಾಗಿತ್ತು. ಅದರಲ್ಲಿ ಎಲ್ಲಾ ಥರದ ಜನರಿದ್ದರು, ತರುಣರು, ಹದಿ ವಯಸ್ಸಿನ ವಿದ್ಯಾರ್ಥಿಗಳು, ತಲೆ ನೆರೆತವರು, ವ್ಯಾಪಾರಿಗಳು, ಇಂಜಿನಿಯರುಗಳು ಇತ್ಯಾದಿ. ಇದಕ್ಕೆ ಸೆಕ್ರೆಟರಿ ಒಬ್ಬ ಮೆಡಿಕಲ್ ಡಾಕ್ಟರು !. ನಾನೂ ಇದಕ್ಕೆ ಮೆಂಬರಾದೆ (ವರ್ಷಕ್ಕೆ ಮುನ್ನೂರು ರೂಪಾಯಿ) . ಇವರು ಒಂದು ಮಾಸಪತ್ರಿಕೆ ಹೊರಡಿಸುತ್ತಿದ್ದರು.ಅದರಲ್ಲಿ spectrum ಮತ್ತು PCಗೆ ಸಂಬಂಧಪಟ್ಟಂತೆ ಲೇಖನಗಳಿರುತ್ತಿದ್ದವು. ಹೊಸ ಹೊಸ ಪ್ರೋಗ್ರಾಮುಗಳು, ಯುಟಿಲಿಟಿಗಳ ಬಗ್ಯೆ ಮಾಹಿತಿ, ಟಿಪ್ಸ್ , ಉಪಯೋಗಿಸಿದವರ ಅನುಭವಗಳು ಇತ್ಯಾದಿ ಇತ್ಯಾದಿ. ಇದಲ್ಲದೆ
ನಿಯಮಿತವಾಗಿ (ಬಹುಶಃ ತಿಂಗಳಿಗೊಮ್ಮೆ ) ಕಾಲ್ಬಾದೇವಿಯ ( ಬೆಂಗಳೂರಿನ ಚಿಕ್ಕಪೇಟೆಯಂಥ , ವ್ಯಾಪಾರಿಗಳೇ ಅಧಿಕವಾಗಿರುವ ಮುಂಬಯಿಯ ಒಂದು ಹಳೆಯ ಪ್ರದೇಶ) ಒಂದು ಹಳೆಯ ಕಟ್ಟಡದ ಮಹಡಿಯ ಮೇಲೆ ಸೇರುತ್ತಿದ್ದೆವು. ಆ ಮೀಟಿಂಗಿನಲ್ಲಿ , ಪ್ರೋಗ್ರಾಮ್ ಡೆಮೋ, ಅಥವಾ ಅನುಭವವನ್ನು ಹಂಚಿಕೊಳ್ಳುವುದು, ಅಥವಾ ಸಂದೇಹ ಪರಿಹಾರ ಇತ್ಯಾದಿ ಕಾರ್ಯಕ್ರಮ ಇರುತ್ತಿತ್ತು. ಇದರ ಅಜೆಂಡಾ ಮೊದಲೇ ಪೋಸ್ಟಿನಲ್ಲಿ ಬರುತ್ತಿತ್ತು. ಕಾಲ್ಬಾದೇವಿ ನಮ್ಮ ಮನೆಯಿಂದ ಸುಮಾರು ದೂರ ಇದ್ದಿದ್ದರಿಂದ ನಾನು ಅಜೆಂಡಾ ನೋಡಿಕೊಂಡು ಆಸಕ್ತಿಯ ವಿಷಯ ಇದ್ದಾಗ ಮಾತ್ರ ಹೋಗುತ್ತಿದ್ದೆ.

ಮುಂದುವರಿಯುವುದು... ( ಕಂಪ್ಯೂಟರಿನಲ್ಲೆಂಥಾ ವೈರಸ್ ? ಮತ್ತು ನನ್ನ ಮೊದಲ PC)

Rating
No votes yet