ನನ್ನ ಗುಬ್ಬಚ್ಚಿ....
ನನ್ನ ಭ್ರಾಮಕ ಸುಪ್ರಭಾತದಲಿ
ಕಲರವಗುಟ್ಟಿದ ಗುಬ್ಬಚ್ಚಿ
ಅತ್ತು ಬಿಟ್ಟಿತ್ತು, ತುಟಿಗಳನು ಕಚ್ಚಿ
ಯಾರಿಗೂ ಹೇಳದೆ ಕಣ್ಣೀರು
ಸುರಿಸಿತ್ತು ರೆಕ್ಕೆಯನು ಮುಚ್ಚಿ....
ಸಂಧ್ಯಾ ಸ್ನಾನಕ್ಕೆ ಜಾರಿದ್ದ ರವಿಯು
ಮತ್ತೊಮ್ಮೆ ಇಣುಕಿ ನೋಡಿದ್ದ
ಆಗಸವು ಕೆಂಪೇರಿರಲು
ಗುಬ್ಬಚ್ಚಿ ಹಾರಿತ್ತು
ತನ್ನ ಪುಟ್ಟ ಗೂಡಿನತ್ತ
ರಾತ್ರಿ ವೇಳೆಯಲಿ ತರುಲತೆಯು
ಕಣ್ಮುಚ್ಚಿ ನಿದ್ದೆ ಹೋಗಿರಲು
ಚಂದಿರನು ಬಂದಿದ್ದ
ಇರುಳ ತೆಕ್ಕೆಯಲಿ ಹಾಲನಗೆ ಚೆಲ್ಲಿ
ನನ್ನ ಗುಬ್ಬಿಯ ಕೆನ್ನೆಗೆ ಮುತ್ತಿಟ್ಟು ಹೇಳಿದ್ದ
ಕಾಲ ಚಕ್ರ ಸರಿಯುತಿರಲು
ಹೀಗೆ..ದಿನಗಳುರುಳುವುದು
ಇಂದು ನಾಳೆಯಾಗುವುದು
ಬೆಳಗು ರಾತ್ರಿಯಾಗುವುದು
ದುಃಖವೇತಕೆ ನಿನಗೆ?
ಹುಟ್ಟಿ ಬರುವನು ಸೂರ್ಯ ಮತ್ತೆ ಬೆಳಗಿನಲಿ
ಕಷ್ಟ ಸುಖಗಳಿವು ಬಾಳಿನಾ ಚಕ್ರದಲಿ
ಕಣ್ಣೀರೇಕೆ ಈ ಕ್ಷಣಿಕ ಕಷ್ಟಗಳಲಿ?
ಮರೆತು ಬಿಡು ಆ ನಿನ್ನ ಕಹಿನೆನಪುಗಳನು
ಅಪ್ಪಿಕೋ ಹೊಸ ವರುಷವನು ನಗು ನಗುತಲಿ...
Rating
Comments
ಉ: ನನ್ನ ಗುಬ್ಬಚ್ಚಿ....
ಉ: ನನ್ನ ಗುಬ್ಬಚ್ಚಿ....