ನನ್ನ ಜಿಲ್ಲೆಯ ಭಾಷಾ ವೈವಿದ್ಯತೆ!

ನನ್ನ ಜಿಲ್ಲೆಯ ಭಾಷಾ ವೈವಿದ್ಯತೆ!

ನನ್ನ ಜೀವನದ ಅಮೂಲ್ಯ ಇಪ್ಪತ್ತೊಂದು ವರ್ಷಗಳನ್ನು ಕರಾವಳಿಯ ಜಿಲ್ಲೆಯಾದ ಉತ್ತರ ಕನ್ನಡದ ಅಂಕೋಲೆಯಲ್ಲೂ, ಎರಡುವರೆ ವರ್ಷಗಳನ್ನು ಉತ್ತರ ಕರ್ನಾಟಕದ ಧಾರವಾಡದಲ್ಲೂ ಕಳೆದು, ಉಳಿದ ವಯಸ್ಸನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕಳೆಯುತ್ತಿದ್ದೇನೆ. ಬೆಂಗಳೂರಿಗೆ ಬಂದು ಕೂಡ ಆಗಲೇ ಹತ್ತು ವರ್ಷಗಳು ಸಂಧಿವೆ. ನಾನು ಆಯಾ ಭಾಗಗಳಲ್ಲಿ ವಾಸವಾಗಿದ್ದ ಸಮಯದಲ್ಲಿ ಅಲ್ಲಿನ ಸುತ್ತಲಿನ ಹಲವಾರು ಹಳ್ಳಿಗಳನ್ನು, ನಗರಗಳನ್ನು ಸುತ್ತಿದ್ದೇನೆ. ನಾನು ಒಂದು ಪ್ರದೇಶದಿಂದ ಇತರಂತೆ ನನಗಾದ ಮೊದಲು ಅನುಭವಿಸಿದ ಸಮಸ್ಯೆ ಎಂದರೆ ಅಲ್ಲಿಯ ಭಾಷೆ. ಇದೇನಪ್ಪಾ ಈತ ಕರ್ನಾಟಕದಲ್ಲಿದ್ದೂ, ಕನ್ನಡ ಗೊತ್ತಿದ್ದೂ ಭಾಷೆಯ ಸಮಸ್ಯೆ ಅಂತಿದ್ದಾನಲ್ಲ ಎಂದು ತಪ್ಪು ತಿಳಿದುಕೊಳ್ಳಬೇಡಿ. ಹೌದು ನನ್ನ ಮಾತೃ ಭಾಷೆ ಕನ್ನಡವೇ, ನಾನು ಮಾತನ್ನಾಡುವ ಕನ್ನಡದ ಶೈಲಿಗೂ ಕರ್ನಾಟಕದ ಇತರ ಭಾಗದಲ್ಲಿರು ಕನ್ನಡದ ಶೈಲಿಗೂ ಸಾಕಷ್ಟು ಸಾಮ್ಯತೆಯಿದ್ದರೂ ಆ ಭಾಷೆಯನ್ನು ಬಳಸುವ ರೀತಿ, ಅವರ ಧ್ವನಿಯ ಏರಿಳಿತ, ಅವರು ಉಪಯೋಗಿಸುವ ಕೆಲವು ಪದಗಳು ಇವುಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಒಮ್ಮೆ ಹೀಗೆ ಹೋಗಿ, ಹಾಗೆ ಬರುವವರಿಗೆ ಅಷ್ಟೊಂದು ದೊಡ್ಡ ಸಮಸ್ಯೆ ಎನಿಸದಿದ್ದರೂ ಆಯಾ ಊರುಗಳಿಗೆ ಹೋಗಿ ಅಲ್ಲೇ ಕಾಯಂ ಆಗಿ ನೆಲೆನಿಲ್ಲುವವರಿಗೆ ಇದು ಸ್ವಲ್ಪ ಸಮಸ್ಯೆಯಾಗಿ ಕಾಣುವುದು ಸಾಮಾನ್ಯ. ಅದು ಉತ್ತರ ಕರ್ನಾಟಕದ ಕನ್ನಡವಿರಬಹುದು, ದಕ್ಷಿಣ ಕನ್ನಡದ ಮಂಗಳೂರು ಕನ್ನಡ ಮತ್ತು ಕುಂದಾಪುರ ಕಡೆಯ ಕನ್ನಡವಿರಬಹುದು,  ಮೊದ ಮೊದಲು ನಾವು ಆ ಪ್ರದೇಶಗಳಿಗೆ ಹೋದಾಗ ಮೊದಲು ನಾವು ಅವರ ಭಾಷೆಯ ಶೈಲಿಯನ್ನು ಅರ್ಥಮಾಡಿಕೊಂಡು, ಆ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು, ಆಮೇಲೆ ನಾವು ಅವರ ಶೈಲಿಯಲ್ಲಿ ಮಾತನ್ನಾಡಬೇಕು.

ನಾನು ನೋಡಿದ ಹಾಗೆ ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಬಿಜಾಪುರ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಮಾತನ್ನಾಡುವ ಕನ್ನಡ ಭಾಷೆಯ ಶೈಲಿ ಬಹುತೇಕ ಒಂದೆ ತೆರನಾಗಿದೆ. ಹಾಗೆ ತುಮಕುರು, ಹಾಸನ, ಬೆಂಗಳೂರು ಮುಂತಾದ ಕಡೆಗಳಲ್ಲಿ ಮಾತನ್ನಾಡುವ ಕನ್ನಡ ಭಾಷೆಯು ಕೂಡ ಬಹುತೇಕ ಒಂದೇ ತೆರನಾಗಿದೆ. ಆದರೆ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗಲ್ಲ, ಇಲ್ಲಿ ಒಂದೊಂದು ಊರಿನಲ್ಲೂ ಹಲವು ತೆರನಾದ ಶೈಲಿಯ ಕನ್ನಡ ಭಾಷೆ. ಒಂದೊಂದು ಜನಾಂಗದವರದೂ ಒಂದೊಂದು ಶೈಲಿಯ ಕನ್ನಡ. ಆ ಶೈಲಿಯನ್ನು ನೋಡಿಯೇ ಇವರು ಯಾವ ಜನರಿಗೆ ಸೇರಿದವರು ಎಂದು ಗುರುತಿಸಬಹುದು. ಈ ವೈವಿದ್ಯತೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಒಂದಲ್ಲ ಹಲವಾರು ಕಾರಣಗಳು ಸಿಗಬಹುದೇನೋ.

ನಾವು ಅದೆಷ್ಟು ಕಾರಣಗಳನ್ನು ಹುಡುಕಿದರೂ ಅದರಲ್ಲಿ ಎದ್ದು ಕಾಣುವುದು ವಲಸೆ. ಅಂದರೆ ಈ ಬಾಗದ ಕರಾವಳಿಗೆ ಬಂದು ನೆಲೆನಿಂತ ಬಹುಜನರ ಊರು ಕೇರಿಗಳು ಇಂದು ಅವರಿಗೆ ಸಂಭಂದಿಸಿದರೂ ಹಿಂದೊಮ್ಮೆ ಅವರೆಲ್ಲ ಆಯಾ ಕಾಲಘಟ್ಟಗಳಲ್ಲಿ ದೂರದ ಗೊವಾದ ಕಡೆಯಿಂದಲೋ, ದಕ್ಷಿಣ ಕನ್ನಡದ ಕಡೆಯಿಂದಲೋ ಅಥವಾ ಘಟ್ಟದ ಸೀಮೆಯ ಕಡೆಯಿಂದಲೋ ವಲಸೆ ಬಂದಿರಬಹುದು. ಅಂದಿನ ವಲಸೆಗೆ ಅಂದಿನ ರಾಜಕೀಯ ಅಥವಾ ಸಾಮಾಜಿಕ ಕಾರಣಗಳಿರಬಹುದು, ಹಾಗೆ ಬಂದು ಇಲ್ಲಿ ನೆಲೆ ನಿಂತು ಇಲ್ಲಿಯವರೇ ಆಗಿ ಬದುಕಿ ಬಾಳಿರಬಹುದು. ಹಾಗಿದ್ದರೂ ಕೂಡ ಇಷ್ಟೊಂದು ವತ್ಯಾಸಗಳೇಕೆ? ಅಂದಿನ ಬೌಗೋಳಿಕ ಮತ್ತು ಸಾಮಾಜಿಕ ವ್ಯವಸ್ತೆಯನ್ನು ನೋಡಿದಾಗ ಎರಡು ಕಾರಣಗಳು ಹೊಳೆಯುತ್ತದೆ. ಒಂದು ಇಲ್ಲಿಯ ಬಹುಬಾಗ ಬೆಟ್ಟ ಗುಡ್ಡಗಳಿಂದಾವ್ರತ್ತವಾಗಿದ್ದರಿಂದ ಒಂದು ಬಾಗದಲ್ಲಿ ವಾಸಿಸುತ್ತಿದ್ದ ಜನಾಂಗದವರು, ಇನ್ನೊಂದು ಭಾಗದಲ್ಲಿ ವಾಸಿಸುವ ಜನಾಂಗದವರೊಂದಿಗೆ ಈಗಿದ್ದಷ್ಟು ರೀತಿಯಲ್ಲಿ ಸಂಪರ್ಕಿಸಲು ಸಾದ್ಯವಾಗದೇ ಇದ್ದ ಕಾರಣ ಅವರವರ ಭಾಷೆ ಅವರಲ್ಲಿಯೇ ಉಳಿದುಕೊಂಡಿರಬಹುದು. ಎರಡನೆಯದು ಅಂದಿನ ಜಾತಿಯ ವ್ಯವಸ್ಥೆ. ಮೇಲುವರ್ಗದ ಮತ್ತು ಕೆಳವರ್ಗಗಳ ನಡುವಿನ ಅಂದಿನ ಸಂಬಂಧ ಇಂದಿನಷ್ಟು ಸುಧಾರಿತವಾಗಿಲ್ಲದಿದ್ದುದು.

ಇದೇ ರೀತಿ ನಾವು ಕಾರಣಗಳನ್ನು ಹುಡುಕುತ್ತಾ ನಮಗೆ ತಿಳಿದ ಅನಿಸಿಕೆಗಳನ್ನು ಹೇಳುತ್ತಾ ಹೋಗಬಹುದು ಆದರೆ ಪ್ರಯೋಜನವಿಲ್ಲ. ಅದರ ಬಗ್ಗೆ ಸರಿಯಾದ ನಿಟ್ಟಿನಲ್ಲಿ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಅಲ್ಲೊಬ್ಬರು, ಇಲ್ಲೊಬ್ಬರು ಆ ನಿಟ್ಟಿನಲ್ಲಿ ಪ್ರಯತ್ನಿಸಿತ್ತಿದ್ದಾರೆ, ಅದು ಸಾಲದು ಆ ಬಗ್ಗೆ ವಿಶೇಷವಾದ ಅಧ್ಯಯನವಾದಾಗಲೇ ನಿಜವಾದ ವಿಷಯ ಹೊರಬರಲು ಸಾದ್ಯ. ಅನಿಸಿಕೆಗಳು ಅನುಮಾನಗಳಿದ್ದಂತೆ, ಅವನ್ನು ಸತ್ಯ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಇಂದು ನಾವು ಆಧುನಿಕತೆಯ ಹೊಡತಕ್ಕೆ ಸಿಕ್ಕು ನಮ್ಮ ಗ್ರಾಮೀಣತೆಯ ಸೊಗಡನ್ನು, ಅದರ ಕುರುಹುಗಳನ್ನು, ನಮ್ಮ ಜ್ನಾನಪದ ಕಲೆಗಳನ್ನು, ಜಾನಪದ ಹಾಡುಗಳನ್ನು ಕಳೆದು ಕೊಳ್ಳುತ್ತಾ ಹೋಗುತ್ತಿದ್ದೇವೆ. ಅಂತಹ ಕುರುಹುಗಳನ್ನು ಕಳೆದು ಕೊಳ್ಳುವ ಬದಲು ಸಂಗ್ರಹಿಸಿ ಇಡುವುದು ಅವಶ್ಯಕ. ಹಳೆಯ ಸ್ಮಾರಕಗಳನ್ನು ಕೆಡವಿ ಅದರ ಕಲ್ಲುಗಳಿಂದ ನಮ್ಮ ಮನೆಯ ಕಂಪೌಂಡ್ ಕಟ್ಟುವುದು ಸುಲಭ ಆದರೆ ಅದನ್ನು ಜತನದಿಂದ ಕಾಪಾಡುವುದು ಕಷ್ಟ. ನಾವು ಯಾವ ರೀತಿಯಲ್ಲಿ, ಎಷ್ಟು ರೀತಿಯಲ್ಲಿ ನಮ್ಮ ನೈಜ ಇತಿಹಾಸವನ್ನು ಅರಿಯುತೇವೆಯೋ ಅದೇ ರೀತಿಯಲ್ಲಿ ನಮ್ಮ ಭವಿತವ್ಯವನ್ನು ಕಟ್ಟಿಕೊಳ್ಳಬಹುದು. ಇತಿಹಾಸ ಮನೆಯ ತಳಪಾಯವಿದ್ದಂತೆ, ಭವಿಷ್ಯತ್ತು ಮನೆಯ ಮೇಲ್ಚಾವಣಿಯಿದ್ದಂತೆ. ನಾವು ನಮ್ಮ ಮನೆಯ ಮೇಲ್ಚಾವಣಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆ ನಮ್ಮ ತಳಪಾಯಕ್ಕೂ ಮುಖ್ಯ. ಮೇಲ್ಚಾವಣಿ ಕುಸಿದರೆ ಸರಿಪಡಿಸಬಹುದು ಆದರೆ ಅದೇ ತಳಪಾಯ ಕುಸಿದರೆ, ಮತ್ತೆ ಹೊಸತಾಗಿ ಮನೆ ಕಟ್ಟಬೇಕಾದೀತು ಅಲ್ಲವೇ?

--ಮಂಜು ಹಿಚ್ಕಡ್ 

Rating
No votes yet

Comments