ನನ್ನ ನೆನಪಿನಾಳದಲ್ಲಿ ಅಣ್ಣಾವ್ರು

ನನ್ನ ನೆನಪಿನಾಳದಲ್ಲಿ ಅಣ್ಣಾವ್ರು

೧೯೬೮ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ ೩ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ ಮಾತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ನಾವಿದ್ದ ಹರದನಹಳ್ಳಿಯೊಂದು ಪುಟ್ಟ ಹಳ್ಳಿ. ಸಣ್ಣ ಪುಟ್ಟ ವಸ್ತುಗಳು ಮಾತ್ರ ಸಿಗುತ್ತಿತ್ತು. ತಿಂಗಳಿಗೊಮ್ಮೆ ಅಂಗಡಿ ಸಾಮಾನುಗಳನ್ನು ತರಲು ನಗರಕ್ಕೇ ಬರಬೇಕಿತ್ತು. ನಗರದಲ್ಲಿ ನಮ್ಮ ದೊಡ್ಡಪ್ಪನವರು ವಾಸವಾಗಿದ್ದರು. ಅಂದು ನಾನು ನನ್ನ ತಾಯಿ ಮತ್ತು ತಂಗಿ (ನನಗಿಂತ ೨ ವರ್ಷಗಳಷ್ಟು ಚಿಕ್ಕವಳು) ಅಂಗಡಿ ಸಾಮಾನುಗಳನ್ನು ತರಲು ನಗರಕ್ಕೆ ಬಂದಿದ್ದೆವು. ಅಂಗಡಿ ಇದ್ದುದು ಪೇಟೆ ಬೀದಿಯಲ್ಲಿ. ದೊಡ್ಡಪ್ಪನವರ ಮನೆ ಇದ್ದುದು ದೇವಾಂಗ ಬೀದಿಯಲ್ಲಿ, ಬಸ್ ನಿಲ್ದಾಣದ ಎದುರು. ಅಂಗಡಿ ಸಾಮಾನುಗಳನ್ನು ತೆಗೆದುಕೊಂಡು ಹಾಗೆಯೇ ದೊಡ್ಡಪ್ಪನವರ ಮನೆಗೆ ಬಂದಿದ್ದೆವು. ನಗರದಲ್ಲಿಯ ಎಕ್ಸ್‍ಟೆನ್‍ಷನ್ನಿನಲ್ಲಿ ಅಣ್ಣಾವ್ರ (ಡಾ|| ರಾಜಕುಮಾರ) ತಂಗಿಯ ಮನೆ ಇದ್ದಿತ್ತು. ಆಗಾಗ ಅಣ್ಣಾವ್ರು ತಮ್ಮ ತಂಗಿಯ ಮನೆಗೆ ಬರುತ್ತಿದ್ದರಂತೆ. ಈ ವಿಷಯವನ್ನು ನಾನು ಕೇಳುತ್ತಿದ್ದೆನಷ್ಟೆ.

ನಾವೆಲ್ಲರೂ ದೊಡ್ಡಪ್ಪನವರ ಮನೆಯ ಒಳಗಿದ್ದಾಗ, ಹೊರಗಡೆ ಜನಗಳ ಕೂಗು ಕೇಳಿಬಂದಿತ್ತು. ಅದೇನೆಂದು ನೋಡಲು ಮನೆಯಲ್ಲಿದ್ದವರೆಲ್ಲರೂ ಆಚೆಗೆ ಬಂದಿದ್ದೆವು. ಅಲ್ಲಿದ್ದವರಲ್ಲಿ ನಾನೊಬ್ಬನೇ ಗಂಡು ಹುಡುಗ. ಬಸ್ ನಿಲ್ದಾಣದೆದುರಿಗೆ ವಿಪರೀತ ಜನಗಳು ತುಂಬಿದ್ದರು. ತುಂಬಾ ಜನಗಳು ಮನೆಯ ಮುಂದಿನಿಂದ ಬಸ್ ನಿಲ್ದಾಣದ ಕಡೆಗೆ ಓಡುತ್ತಿದ್ದರು. ಆಗ ನನ್ನ ದೊಡ್ಡಮ್ಮ ಯಾರನ್ನೋ ಕೇಳಿದ್ದರು, 'ಯಾಕೆ ಏನಾಯ್ತು ಅಲ್ಲಿ?' ಅದಕ್ಕೆ ಒಬ್ಬರು, 'ಮುತ್ತಣ್ಣಾವ್ರು ಬಂದವ್ರೆ - ಊರಲ್ಲೆಲ್ಲಾ ಮೆರವಣಿಗೆ ಬರ್ತವ್ರಂತೆ - ಅವ್ರದ್ದು ನೂರನೇ ಸಿನೆಮಾ ಬಂತಲ್ಲ - ಈಗ ನಟಸಾರ್ವಭೌಮ ಬತ್ತದಂತೆ', ಎಂದಿದ್ದರು. ಅಣ್ಣಾವ್ರು, ೧೦೦ನೇ ಚಿತ್ರ, ಮೆರವಣಿಗೆ, ಈ ಮಾತುಗಳು ನನ್ನ ಕಿವಿಗೆ ಬೀಳುತ್ತಿದ್ದಂತೆಯೇ ಮೈಯಲ್ಲೆಲ್ಲಾ ಏನೋ ಹೊಸ ಶಕ್ತಿ ಓಡಾಡಿದ ಹಾಗಾಗಿತ್ತು. ಮನೆಯಲ್ಲಿ ಗಂಡಸರು ದೊಡ್ಡವರು ಯಾರೂ ಇರಲಿಲ್ಲ. ದೊಡ್ಡಮ್ಮ ಅಮ್ಮ ಕರೆಯುತ್ತಿದ್ದರೂ ಕೇಳದಂತೆ ಬಸ್ ನಿಲ್ದಾಣದ ಕಡೆಗೆ ಓಡಿದ್ದೆ.

ಉತ್ತರ ದಿಕ್ಕಿನಿಂದ ಜನಗಳ ಸಾಗರ ಬರುತ್ತಿತ್ತು. ಎಲ್ಲರೂ ರಸ್ತೆಯ ಬದಿಗಳಲ್ಲಿ ನಿಂತು ನೋಡುತ್ತಿದ್ದರು. ಅಕ್ಕ ಪಕ್ಕ ಇರುವ ಅಂಗಡಿಯವರುಗಳು ಮಕ್ಕಳಿಗೆಲ್ಲರಿಗೂ ಪೆಪ್ಪರ್‌ಮೆಂಟ್ ಕೊಡುತ್ತಿದ್ದರು. ಅಲ್ಲದೇ ಕೆಲವು ಹಿರಿಯರು ಎಲ್ಲರಿಗೂ ಕಡಲೆಪುರಿಯನ್ನೂ ಹಂಚುತ್ತಿದ್ದರು. ಮೂರು ನಾಲ್ಕು ಲಾರಿಗಳು ಜನಗಳನ್ನು ತುಂಬಿಕೊಂಡು ನಿಧಾನಕ್ಕೆ ಬರುತ್ತಿದ್ದವು. ಮಧ್ಯೆ ಇದ್ದ ಒಂದು ಲಾರಿಯ ಮೇಲ್ಭಾಗದಲ್ಲಿ ಅಣ್ಣಾವ್ರು ನಿಂತಿದ್ದು ಸುತ್ತಲೂ ನೆರೆದಿದ್ದವರಿಗೆಲ್ಲರಿಗೂ ಕೈ ಬೀಸುತ್ತಿದ್ದರು. ಅಣ್ಣಾವ್ರ ಜೊತೆಗೆ ಅವರ ಕುಟುಂಬವೂ ಇದ್ದಿತ್ತು. ಪಕ್ಕದಲ್ಲಿದ್ದವರ್ಯಾರೋ ಒಬ್ಬರು ಅಣ್ಣಾವ್ರ ಮಗಳು ಲಕ್ಷ್ಮಿಯನ್ನು ಎತ್ತಿ ಅವರ ಕೈಗಿತ್ತಿದ್ದರು. ಆಗ ಎಲ್ಲರೂ ಹೋ ಎಂದು ಕೂಗಿದರು. ಲಕ್ಷ್ಮಿಗೆ ಆಗ ೧ ಅಥವಾ ೨ ವರ್ಷಗಳಿರಬೇಕು. ಅವಳೇ ಅವರ ದೊಡ್ಡ ಮಗಳು. ಸುತ್ತಲಿದ್ದ ಜನಗಳೆಲ್ಲರಲ್ಲೂ ವಿದ್ಯುತ್ ಪ್ರವಾಸಿದಂತಾಗಿತ್ತು. ಎಲ್ಲರೂ ಮಂತ್ಗ್ರಮುಗ್ಧರಾಗಿ ನಿಂತಿದ್ದರು. ಅಣ್ಣಾವ್ರಿದ್ದ ಲಾರಿಯ ಹಿಂದೆ ಮುಂದೆ ಇದ್ದ ಇತರೇ ಲಾರಿಗಳಲ್ಲಿ ಜನಗಳು ಬಹಳ ಇರಲಿಲ್ಲ. ಲಾರಿಗಳ ಚಾಲಕರು ಇತರ ಜನಗಳನ್ನು ಹತ್ತಲು ಕರೆಯುತ್ತಿದ್ದರು. ನನಗೆ ಅದೆಲ್ಲಿಂದ ಬುದ್ಧಿ ಬಂದಿತೋ ಏನೋ, ಹಿಂದೆ ಮುಂದೆ ನೋಡದೇ, ಲಾರಿ ಎಲ್ಲಿಗೆ ಹೋಗುತ್ತಿದೆ ಎಂಬುದನ್ನೂ ತಿಳಿದುಕೊಳ್ಳದೇ ಒಂದು ಲಾರಿಯ ಕಡೆ ಓಡಿದ್ದೆ. ದೊಡ್ಡವರೊಬ್ಬರು ನನ್ನನ್ನು ಎತ್ತಿ ಅನಾಮತ್ತಾಗಿ ಲಾರಿಯೊಳಗೆ ಹಾಕಿದ್ದರು. ಆನಂತರ ನೋಡಿದರೆ, ಆ ಲಾರಿಯಲ್ಲೇ ಅಣ್ಣಾವ್ರು ಇದ್ದದ್ದು. ಆ ಲಾರಿಯೊಳಗಿದ್ದ ಮಕ್ಕಳೆಲ್ಲರ ತಲೆ ನೇವರಿಸುತ್ತಿದ್ದರು. ನನಗಂತೂ ಅತೀವ ಆನಂದವಾಗಿತ್ತು. ಆ ಲಾರಿಯೊಳಗೆ ಇದ್ದವರಿಗೆಲ್ಲರಿಗೂ ಹಣ್ಣುಗಳನ್ನೂ ತಿನಿಸುಗಳನ್ನೂ ಕೊಡುತ್ತಿದ್ದರು. ಮೆರವಣಿಗೆಯು ೨ ಘಂಟೆಗಳ ಕಾಲ ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಿ ಕೊನೆಗೆ ಬಸ್ ನಿಲ್ದಾಣದ ಹತ್ತಿರಕ್ಕೆ ಬಂದು ನಮ್ಮಗಳನ್ನು ಇಳಿಸಿದ್ದರು. ಅಂದು ನಾನು ಅಣ್ಣಾವ್ರನ್ನು ಹತ್ತಿರದಿಂದ ನೋಡಿದ್ದೆ. ಅಂದಿನಿಂದ ನಾನು ಅಣ್ಣಾವ್ರ ಪಕ್ಕಾ ಭಕ್ತನಾದೆ.

ಮುಂದೆ ಬಿಡುಗಡೆಯಾದ ಅಣ್ಣಾವ್ರ ಎಲ್ಲ ಚಿತ್ರಗಳನ್ನೂ ನೋಡಲು ಪ್ರಯತ್ನಿಸಿದ್ದೆ (ಕೆಲವು ಚಿತ್ರಗಳನ್ನು ನೋಡಲಾಗಲಿಲ್ಲ).

Rating
No votes yet

Comments