ನನ್ನ ಮಗ ರಾಮನಾಗಲಿಲ್ಲ - ಲಕ್ಷ್ಮೀಕಾಂತ ಇಟ್ನಾಳ

ನನ್ನ ಮಗ ರಾಮನಾಗಲಿಲ್ಲ - ಲಕ್ಷ್ಮೀಕಾಂತ ಇಟ್ನಾಳ

ನನ್ನ ಮಗ ರಾಮನಾಗಲಿಲ್ಲ
 
 
ತ್ರೇತಾಯುಗದಲಿ,
ಘನಘೋರ ತಪಸ್ಸಿಗೆ ಆತ್ಮಲಿಂಗ ಪಡೆಯಲು
ರಾವಣನ ತಪಶಕ್ತಿಗೆ ಹಿರಿ ಹಿರಿ ಹಿಗ್ಗಿದ್ದಳು
ರಾವಣಮಾತೆ, ಕೈಕೇಶಿ
ಶಕ್ತಿ ಸಂಪತ್ತಿನ ಮದವೇರಿ
ಹೆಣ್ಣಿಗಾಗಿ ದಶಮುಖಗಳು ತರಗೆಲೆಗಳು
ಕರಗಿ ಮಮ್ಮಲ ಮರುಗಿದಳು
ಯಾವ ವಿಷದ ಗಳಿಗೆಯೋ, ಯಾವ ವಿಷಯ ನಿಶೆಯೋ
ಅವಳ ಮಗನು ರಾಮನಾಗಲಿಲ್ಲ
 
 
ದ್ವಾಪರದಲಿ,
 
ಆ ಗಾಂಧಾರಿ ನನ್ನ ಹಾಗೆಯೇ ನತದೃಷ್ಟೆ !
ಮಕ್ಕಳೋನ್ನತಿಗಾಗಿಯೇ ಹಂಬಲಿಸಿ ಸಂಭ್ರಮಿಸಿ
ಅದೇ ಮಕ್ಕಳಿಗಾಗಿ ಕಣ್ಣಿದ್ದು ಕುರುಡಾದಳು
ಯಾವ ಹಿರಿಯರುಪದೇಶಕೆ, ಯಾವ ಗುರೂಪದೇಶಕೆ
ತಲೆಬಾಗದೇ ಹೊನ್ನು ಮಣ್ಣಿಗಾಗಿ ಜೀವಕ್ಕೆರವಾದರು
ಭೂಮಿ ತೂಕದ ಭೀಷ್ಮ ದ್ರೋಣ ಕರ್ಣರನ್ನೂ
ಬಲಿಯಾಗಿಸಿದ ಅವಳ ಮಕ್ಕಳಾರೂ ರಾಮನಾಗಲಿಲ್ಲ!
 
ಕೌಂತೇಯರು,
 
ಅನುಭವಿಸಿ ವನವಾಸ ಅಜ್ಞಾತವಾಸ  
ಊಳಿಗದ ಕುಲುಮೆಯಲಿ ಬೆಂದು ಮಿಂದು
ತಾಯ್ನುಡಿಗೆ, ದ್ರೌಪದಿಯ ಬಹುಪತಿಯರು
ರಾಮನಿಗೂ ಸಮನಾದ ಯುಗಪುರುಷರು
ಮೌಲ್ಯದ ಮಣ್ಣನ್ನು ಮೈದುಂಬಿದವರು
ನ್ಯಾಯದ ತಕ್ಕಡಿಗೆ ದಾರಿದೀವಿಗೆ ಇವರು!
 
ಕಲಿಯುಗದಲಿ,
ದಶಕಗಳ ಪುಣ್ಯದ ಫಲ, ಅಖಂಡ ಕೋಟಿ,
ಅಕ್ಷೋಹಿಣಿ ಸೈನ್ಯವನು ಕಟ್ಟಿದ ರೂವಾರಿ,  
ನವ ಮನ್ವಂತರ ಬೀಜ ನೆಟ್ಟ ದಿಟ್ಟನಿವನು
ಮಹಾ ದಾರ್ಶನಿಕನೊ, ಮಹಾ ಮಾಂತ್ರಿಕನೊ,
 
ಹಂಬಲಿಸಿದ್ದೆ ನನ್ನ ಮಗ ರಾಮನಾಗಲೆಂದು,
ಯಾವ ಮಾಯೆಯ ಮಾಟವೊ
ಯಾವ ಸಂಘ ಸಹವಾಸವೋ
ನನ್ನ ಮಗ ರಾಮನಾಗಲಿಲ್ಲ
Rating
No votes yet

Comments

Submitted by nageshamysore Sun, 05/26/2013 - 04:22

ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರೆ,
ತೇತ್ರಾಯುಗ, ದ್ವಾಪರಯುಗದ ಕುದುರೆ ಹತ್ತಿಸಿ ಕೊನೆಗೆ ಕಲಿಯುಗಕ್ಕೆ ಕರೆತಂದು, ಮಗನೂ ರಾಮನಾಗಲಿಲ್ಲ ಅಂದುಬಿಟ್ಟಿರಿ. ನಮ್ಮಮ್ಮನಿಗೊ ನಾನೆ ರಾಮನಾಗಲಿಲ್ಲ ಅನ್ನೊ ಖೇದವಂತೆ!(ಮಗನ ವಿಷಯ ಬಿಡಿ, ರಾಮನಾಗದಿದ್ದರು ಸರಿ, ಕೌರವನಾಗದಿದ್ದರೆ ಸಾಕಪ್ಪ ಅಂತ ಬೇಡಿಕೊಳ್ಳುವ ಸ್ಥಿತಿ!). ಮಾತೃಭಾವದ ಒಳನೋವನ್ನು ಹೆತ್ತವರ ಮೂಕವೇದನೆಯನ್ನು ಕವನ ಚೆನ್ನಾಗಿ ಬಿಂಬಿಸಿದೆ, ಧನ್ಯವಾದಗಳು.
- ನಾಗೇಶ ಮೈಸೂರು, ಸಿಂಗಪುರದಿಂದ

Submitted by lpitnal@gmail.com Sun, 05/26/2013 - 11:06

In reply to by nageshamysore

ಆತ್ಮೀಯ ನಾಗೇಶಜಿ, ಕವನದ ಪ್ರತಿಕ್ರಿಯೆಗೆ ಧನ್ಯ. ವಂದನೆಗಳು, ಹೌದು, ಸ್ವಾತಂತ್ರ್ಯಾನಂತರದ ಆರು ದಶಕಗಳಲ್ಲಿ ಅದೆಷ್ಟು ತ್ರೇತಾಯುಗಗಳೊ, ಅದೆಷ್ಟು ದ್ವಾಪರಗಳೊ, ಕಲಿ ಮತ್ತೆ ಮತ್ತೆ ಉದಯಿಸುತ್ತ, ಮತ್ತೆ ಮತ್ತೆ ತತ್ವಗಳನ್ನು ('ರಾಮ' ನ ಪ್ರತಿಮೆಯಲ್ಲಿ ), ಎನೇನೊ ಹೆಸರಲ್ಲಿ ಜನಮಾನಸವನ್ನು ವಂಚಿಸುತ್ತಿರುವ, ರಾವಣರು, ಕೌರವರು ಯಾವಾವುದೋ ವೇಷಗಳಲ್ಲಿ ಅವತರಿಸುತ್ತಿರುವದನ್ನು ತಿಳಿದು ಖೇದವೆನಿಸುವುದು ಸಹಜ. ಆ ಶ್ರೀಸಾಮಾನ್ಯ ಹತಾಷೆ ಭಾವನೆಗಳು, ಈ ನೆಲದ ನಾಡಿನ ಜನ್ಮಭೂಮಿಯ ಮನದಾಳದ ಮಾತುಗಳು ಹೀಗಿರಬಹುದೇ?

Submitted by ಗಣೇಶ Mon, 05/27/2013 - 00:04

In reply to by lpitnal@gmail.com

>>>ಈ ನೆಲದ ನಾಡಿನ ಜನ್ಮಭೂಮಿಯ ಮನದಾಳದ ಮಾತುಗಳು ಹೀಗಿರಬಹುದೇ?+೧, ಇಟ್ನಾಳರೆ ಕವನದಲ್ಲಿನ ಹತಾಶೆ ಮನ ತಟ್ಟಿತು.ರಾಮನಾಗಲು ಪ್ರಯತ್ನಿಸುವೆ.

Submitted by lpitnal@gmail.com Mon, 05/27/2013 - 09:20

In reply to by ಗಣೇಶ

ಗೆಳೆಯ ಗಣೇಶರೆ, ರಾಮನಾಗಲು ನೆಲದ ಅಳಲಿಗೆ ಕಿವಿಯಾಗಿ ಕಣ್ಣಾಗಿ, ಬದುಕುವ ಪ್ರಯತ್ನ ನಾವೆಲ್ಲ ಮಾಡುವ ಕಾಲವೊಂದಿತ್ತು, ಈಗಿನ ನಮ್ಮ ಪಯಣದ ದಿಕ್ಕು ದಿಶೆ ನೋಡಿದರೆ ಅದು ಸಾಧ್ಯವಾಗುವದರ ಬಗ್ಗೆ ಶ್ರೀಸಾಮಾನ್ಯನಾಗಿ ನನಗೆ ನನ್ನವೇ ಆದ ಸಂದೇಹಗಳಿವೆ. ತಮ್ಮ ಪ್ರ್ತತಿಕ್ರಿಯೆಗೆ ಧನ್ಯ
..

Submitted by makara Sun, 05/26/2013 - 07:44

ಇಟ್ನಾಳರೆ,
ರವಿ ಬೆಳೆಗರೆಯವರು ಮುಕ್ತ ಮುಕ್ತ ಧಾರವಾಹಿಯಲ್ಲಿ ಜಡ್ಜ್ ಪಾರ್ಟ್ ಮಾಡಿದ ವಿಷಯದ ಕುರಿತು ಸಾರ್ವಜನಿಕ ಸಭೆಯೊಂದರಲ್ಲಿ ಮಾಡುತ್ತಿದ್ದರು. ಆಗ ಅವರು ಹೇಳಿದ್ದು ಸ್ವಾರಸ್ಯಕರವಾಗಿದೆ. ಅವರಮ್ಮ ಅವರಿಗೆ ಹೇಳುತ್ತಿದ್ದಳಂತೆ, ರಾಮನ ಹಾಗಂತೂ ಆಗಲಿಲ್ಲ, ಕಡೇ ಪಕ್ಷ ನಾಟಕದಲ್ಲಿಯಾದರೂ ರಾಮನ ಪಾತ್ರ ಮಾಡು ಅದನ್ನಾದರೂ ನೋಡಿ ಖುಷಿ ಪಡ್ತೀನಿ ಅಂತ. ಹಾಗಾಗಿ ಈ ಒಳ್ಳೆಯ ಜಡ್ಜ್ ಪಾತ್ರವನ್ನು ನೋಡಿದ್ದರೆ ತನ್ನಮ್ಮ ಖುಷಿ ಪಡುತ್ತಿದ್ದಳು ಎಂದು ಹೇಳಿದ್ದರು. ಈ ಪ್ರಸಂಗವನ್ನು ನಿಮ್ಮ ವಿಚಾರ ಪ್ರಚೋದಕ ಕವಿತೆ ನೆನೆಪಿಸಿಕೊಳ್ಳುವಂತೆ ಮಾಡಿತು.

Submitted by kavinagaraj Tue, 05/28/2013 - 15:45

ಸುಂದರ ಭಾವ! ಮಾಯೆಯ ಆಟ, ಸಹವಾಸ ದೋಷದ ಕಾರಣಗಳು ಸಣ್ಣವೇನಲ್ಲ! ಉತ್ತಮ ಸಂಸ್ಕಾರ ನೀಡುವ ಶಿಕ್ಷಣದ ಕೊರತೆ ಪ್ರಮುಖ ಕಾರಣವಿರಬಹುದು! ಬಂದಾನು, ರಾಮ!!! ನಿರೀಕ್ಷಿಸೋಣ!

Submitted by lpitnal@gmail.com Tue, 05/28/2013 - 23:05

In reply to by kavinagaraj

ಕವಿನಾಗರಾಜ್ ಜಿ, ವಂದನೆಗಳು. ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯ. ತಾವು ಗುರುತಿಸಿದಂತೆ ಮಾಯೆಯ ಆಟ, ಸಹವಾಸ ದೋಷದ ಕಾರಣಗಳು ಸಣ್ಣವೇನಲ್ಲ, ಹೌದು ನಾನೂ ಅನುಮೋದಿಸುತ್ತೇನೆ. ಇಂದಿನ ಈ ಯುಗದಲ್ಲಿ , ಯಾರು ಪಾಂಡವರೋ, ಯಾರು ಕೌರವರೋ , ಮುಖವಾಡ ಧರಿಸಿದವರು ಯಾರು, ಕಳಚಿದವರು ಯಾರೋ ಅರ್ಥವಾಗುತ್ತಿಲ್ಲ. ಒಂದಿಡೀ ದೇಶಕ್ಕೆ ಮಾದರಿಯಾಗಬೇಕಿದ್ದ ಜನಾಡಳಿತವೊಂದು ತನ್ನನ್ನು ತಾನೇ ತಾನಾಗಿ, ಪಾಂಡವರೆಂದು ತಿಳಿದ ನಮಗೆ ಹೇಗೆ ತಾವು ಕೌರವರ ಹಾಗೆ ಬಿಂಬಿಸಿದರಲ್ಲ. ಯಾರನ್ನು ದಮನಿಸಿ ಬಂದ ಇವರು ಇನ್ನೊಬ್ಬರಿಗಿಂತ ಯಾವುದರಲ್ಲಿ ಭಿನ್ನವಾಗಿದ್ದರು. ಹೀಗೆಲ್ಲ ಅನಲೈಸ್ ಮಾಡುತ್ತದೆ ಮೂಕ ಮನಸ್ಸು. ಒಟ್ಟಿನಲ್ಲಿ ನಾಡ ಮಾತೆಗೆ ದು:ಖದ ಸಂಗತಿಯೇ ತಾನೇ, ಒಂದರ್ಥದಲ್ಲಿ ಪ್ರಕೃತಿಯೇ ದಮನತೆಗೆ ಈಡಾಗುವ ಈ ಪರಿ ಮೌನ ಅಸಹಾಯಕ ನೋವುಗಳನ್ನು ಉಂಟು ಮಾಡುತ್ತ ವ್ಯವಸ್ಥೆಯ ಬಗ್ಗೆ ಸಿನಿಕತೆ ಮೂಡಿಸುತ್ತ ಸಾಗುತ್ತದೆ. ಏನೇ ಆಗಲಿ ಒಳ್ಳೆಯ ದಿನಗಳು ಬಂದೇ ಬರುತ್ತವೆ, ಕಾದು ನೋಡೋಣ. ತಮ್ಮ ಪ್ರತಿಕ್ರಿಯೆಗೆ ಮತ್ತೊಮ್ಮೆ ವಂದನೆಗಳು ಸರ್ ಜಿ.

Submitted by H A Patil Fri, 06/21/2013 - 12:14

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು

' ನನ್ನ ಮಗ ರಾಮನಾಗಲಿಲ್ಲ' ಒಂದು ಅದ್ಭತ ಸಾರ್ವಕಾಲಿಕ ಕವನ. ಈ ಜಗಕೆ ರಾಮನಿಗೆ ರಾಮನೆ ಸರಿಸಾಟಿ, ಆತನಿಗೆ ಸರಿ ಸಮಾನ ಮತ್ತೊಬ್ಬ ಜನಿಸಲಾರ. ಆದರೂ ' ನನ್ನ ಮಗ ರಾಮನಾಗಬೇಕೆಂಬ ನಿಮ್ಮ ಆಶಯ ' ಒಳ್ಳೆಯದೆ, ರಾಮನಾಗದಿದ್ದರೂ ಪರವಾ ಇಲ್ಲ, ಆದರೂ ಆ ದಿಶೆಗಿನ ಪ್ರಯತ್ನ ಸಮಾಜವನ್ನು ಸ್ವಾಸ್ಥ್ಯವಾಗಿಡುತ್ತದೆ. ತುಂಬ ಒಳ್ಳೆಯ ಕವನ ನೀಡಿದ್ದಿರಿ ಧನ್ಯವಾದಗಳು.