ನನ್ನ ಮುಖಚಿತ್ರ

ನನ್ನ ಮುಖಚಿತ್ರ

ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು.

ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ - ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ ಮೇಲೆ ವಕ್ರವಾಗಿ ಮದ. ಮೋಹದ ಮೂಲೆನಲ್ಲಿ ಮತ್ಸರ. ಹೀಗೆ ಸ್ವಲ್ಪ ಓರೆ ಕೋರೆ ಮಾಡಿ ಜೋಡಿಸಿ. ಎರಡು ಕಣ್ಣಗಳೂ ಸಮವಾಗಿ ಗುಂಡಗೆ ಇಡಬೇಡಿ. ಒಂದು ಸ್ವಲ್ಪ ಆಚೆಗಿಡಿ. ಒಂದು ಕಣ್ಣು ದೂರದಲ್ಲಿರೋದನ್ನ ಎವೆಯಿಕ್ಕದೆ ನೋಡೋ ಹಾಗೆ ಇದ್ದರೆ, ಮತ್ತೊಂದು ಕುರಿ ಕಣ್ಣು ಇಟ್ಟ ಹಾಗೆ ಇರಬೇಕು. ಯಾವ ಕಣ್ಣು ಹ್ಯಾಗೆ ಅಂತ ನಿಮಗೆ ನನ್ನನ್ನ ನೋಡಿದ ತಕ್ಷಣ ಗೊತ್ತಾಗತ್ತೆ. ಹಾಗೆ ಒಳ್ಳೆ ಉದ್ದನೆ ಮೂಗು ಬರೀಬೇಡಿ. ನಂದು ಮೊಂಡು. ಅಲ್ಲಲ್ಲಿ ಕೀರಿದ ಗಾಯ ಇದೆ ಮೂಗಿನ ಮೇಲೆ. ಅದನ್ನು ಮುಜುಗರ ಪಟ್ಕೊಂಡು ನೋಡದೇ ಇರಬೇಡಿ. ಬಾಯೂ ಅಷ್ಟೆ ಒಳ್ಳೇ ಗೆರೆಗಳೇನೂ ಬೇಡ. ತುಟ್ಟಿ ಹರಿದಿದೆ. ಒಂದೊಂದು ಸಲ ಅದಕ್ಕೆ ಪಿನ್ನು ಹಾಕಿಕೊಳ್ಳಬೇಕಾಗತ್ತೆ.

ಈಗ ಕರುಣೆ ಅಸಹ್ಯ ಭಯ ಎಲ್ಲಾ ದೂರಕ್ಕಿಡಿ. ಅಷ್ಟೇ ಅಲ್ಲ ತಮಾಷೆ, ದುಃಖ, ಸಿಟ್ಟು ಎಲ್ಲಾ ಮರೆತು ನನ್ನ ಅವತಾರ ನೋಡಿ. ಬರೆಯೋಕೆ ಮನಸ್ಸು ಆದರೆ, ಬರೀಯೋಕೆ ಆಗತ್ತೆ ಅನ್ನಿಸಿದರೆ ಬಣ್ಣ ಬ್ರಶ್ಶು ತಗೊಳ್ಳಿ ನಾನು ಬಂದು ನಿಮ್ಮ ಮುಂದೆ ಮಗು ಥರ ಕೂತ್ಕೋತೀನಿ.

ದೊಡ್ಡಕ್ಕೆ ಮುಖ ಬರೆದು ಅದಕ್ಕೆ ಚೆನ್ನಾಗಿ ಬಣ್ಣ ಬಳಿರಿ.
ಓರೆ-ಕೋರೆ, ಹರಿದ ತುಟಿ, ಮೂಗಿನ ಗಾಯ, ಕುರಿ ಕಣ್ಣು ಇದೆಲ್ಲಾ ಯಾರಿಗೂ ಕಾಣದ ಹಾಗೆ ಮಾಡಿಬಿಡಿ.
ಹಾಗೇ ಮುಖಕ್ಕೆ ಅಡಿಪಾಯದಂತಿದೆಯಲ್ಲ ಈ ಮದ ಮತ್ಸರ ಲೋಭ ಮೋಹ ಅದನ್ನೂ ಮುಚ್ಚಿಬಿಡಬೇಕು.
ಆವಾಗ ಎಲ್ಲಾರಿಗೂ ಇಷ್ಟ ಆಗೋ ಅಂತ ನನ್ನ ಚಿತ್ರ ತಯಾರಾಗತ್ತೆ.

Rating
No votes yet