ನನ್ನ ಮೆಚ್ಚಿನ ಪುಸ್ತಕ
ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಪರಮಹಂಸ ಯೋಗಾನಂದರು ಒಬ್ಬ ಪ್ರಸಿದ್ದ ಯೋಗಿ. ಇದೊಂದು ಯೋಗಿಗಳ ಬಗ್ಗೆ ಒಬ್ಬ ಯೋಗಿಯೇ ಬರೆದ ಅಪರೂಪದ ಕೃತಿ. ತಾವು ಕಂಡು ಅನುಭವಿಸಿದ ಘಟನೆಗಳನ್ನು ಪ್ರಾಮಾಣಿಕವಾಗಿ ತಿಳಿ ಹಾಸ್ಯದೊಂದಿಗೆ ಹೇಳುತ್ತಾ ಓದುಗರನ್ನು ಯೋಗ ಮತ್ತು ಆಧ್ಯಾತ್ಮದ ವಿಷಯಗಳಿಗೆ ಪರಿಚಯಿಸುತ್ತಾರೆ.
ಎರಡು ದೇಹಗಳ ಸಂತ, ಗಾಳಿಯಲ್ಲಿ ತೇಲಾಡುವ ಸಂತ, ಪರಮಸುಖಿಯಾದ ಉಪಾಸಕ, ಗಂಧ ಬಾಬ, ಹುಲಿ ಸ್ವಾಮಿ, ನಿಧ್ರಿಸದ ಸಂತ, ನಿರಾಹಾರ ಯೋಗಿನಿ, ಆನಂದಮಯೀ ಮಾ ಮುಂತಾದವರೊಡನೆ ನಡೆದ ತಮ್ಮ ಭೇಟಿಯನ್ನು ವಿವರವಾಗಿ ತಿಳಿಸುತ್ತಾರೆ. ಕವಿ ರವೀಂದ್ರನಾಥ ಟ್ಯಾಗೋರ್, ಮಹಾತ್ಮಾ ಗಾಂಧಿ, ಜಗಧೀಶ್ ಚಂದ್ರ ಬೋಸ್ ರೊಂದಿಗಿನ ಭೇಟಿಯ ವಿವರಗಳು ಮಹತ್ವಪೂರ್ಣ. ಪವಾಡಗಳ ನಿಯಮಗಳು, ಭಾರತದ ಪ್ರಾಚೀನ ದೈವ ಸಾಕ್ಷಾತ್ಕಾರ ವಿಜ್ಞಾನವೆನಿಸಿದ ಕ್ರಿಯಾ ಯೋಗ, ಸಾವಿನಾಚೆಗಿನ ಬದುಕನ್ನು ಗತಿಸಿ ಸುಮಾರು ನಾಲ್ಕು ತಿಂಗಳ ಬಳಿಕ ಪುನರುಜ್ಜೀವನಗೊಂಡ ತಮ್ಮ ಪೂಜ್ಯ ಗುರು ಶ್ರೀ ಯುಕ್ತೇಶ್ವರರಿಂದ ದೊರಕಿದ ಅಪೂರ್ವವಾದ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಸಾವಿಲ್ಲದ ಚಿರಯವ್ವನದ ಗುರು ಶ್ರೀ ಮಹಾವತಾರ ಬಾಬಾಜಿಯವರ ಇರುವಿಕೆ ಮೊತ್ತಮೊದಲ ಬಾರಿಗೆ ಸಾರ್ವಜನಿಕರಿಗೆ ಈ ಪುಸ್ತಕದಿಂದ ತಿಳಿಯುವಂತಾಯಿತು. ಇವರ ಇಚ್ಛೆಯಂತೆ ಆಧ್ಯಾತ್ಮ ಪಿಪಾಸೆಯಿಂದ ಕೂಡಿದ ಪಾಶ್ಚಿಮಾತ್ಯರಿಗೆ ಯೋಗ ವಿದ್ಯೆಯನ್ನು ದಯಪಾಲಿಸಲು 1920 ರಲ್ಲಿ ಅಮೇರಿಕಕ್ಕೆ ಹೋಗಿ ಅಭೂತಪೂರ್ವ ಯಶಸ್ಸುಗಳಿಸಿದ ವಿವರವಿದೆ. 1935-36ರ ತಮ್ಮ ಭಾರತದ ಭೇಟಿಯ ವಿವರಗಳು ತುಂಬಾ ಸ್ಸ್ವಾರಸ್ಯಕರ. ತಮ್ಮ ಮಹಾಸಮಾಧಿಯಾಗುವ ಮೊದಲು 1946ರಲ್ಲಿ ಪ್ರಕಟಗೊಂಡ ಈ ಪುಸ್ತಕಕ್ಕೆ ನಂತರದ ಬೆಳವಣಿಗೆಗಳನ್ನು ಹೇಳುತ್ತಾ ಓದುಗರ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಇನ್ನಷ್ಟು ವಿವರಗಳನ್ನು ಒಂದು ಹೆಚ್ಚುವರಿ ಅಧ್ಯಾಯದಲ್ಲಿ ನೀಡಿದ್ದಾರೆ.
ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ಧರ್ಮ ದೇಶ ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರ ಕಾರಣ ಇದು ಸತ್ಯವೂ ಶಿವವೂ ಸುಂದರವೂ ಆಗಿದೆ. ಎಲ್ಲರ ಮನೆ ಮನಗಳಲ್ಲೂ ಈ ಪುಸ್ತಕ ಬೆಳಗಲಿ ಎಂಬುದೇ ನನ್ನ ಆಶಯ.
ಎನ್. ಅಂಜನ್ ಕುಮಾರ್
thewiseant@yahoo.co.in
Comments
ದನಿಗೂಡು: ನನ್ನ ಮೆಚ್ಚಿನ ಪುಸ್ತಕ
In reply to ದನಿಗೂಡು: ನನ್ನ ಮೆಚ್ಚಿನ ಪುಸ್ತಕ by Shyam Kishore
Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ
In reply to Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ by thewiseant
ಉ: Re: ದನಿಗೂಡು: ನನ್ನ ಮೆಚ್ಚಿನ ಪುಸ್ತಕ
ಉ: ನನ್ನ ಮೆಚ್ಚಿನ ಪುಸ್ತಕ