ನಮ್ಮನೇಲೂ ಒಂದು ಭಾವಿ ಇತ್ತು ಅಂತ ನಾವು ಬದುಕಿದೆವು. ಇಲ್ದಿದ್ರೆ, ನಮ್ಮ ಪಾಡೂ ಇದೇ ತರ್ಹ ಇರ್ತಿತ್ ಅಲ್ವಾ ?
ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ. ಬಾಲ್ಯದ ಅದೊಂದು ಘಟನೆಯ ಅನುಭವ ನನ್ನ ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ ಸಂಗತಿಗಳಲ್ಲೊಂದು. ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ, ಅಥವಾ ನಾವು ಜೀವನದಲ್ಲಿ ಛಲವಂತರಾಗಿರಬೇಕು, ಎನ್ನುವ ವಿಷಯ ಬಂದಾಗ ಇದನ್ನು ಉದಾಹರಿಸಬಹುದೆ ? ಎನ್ನುವ ವಿಷಯಗಳಲ್ಲಿ ಗೊಂದಲವೇ ಆಗಿತ್ತು. ಒಟ್ಟಿನಲ್ಲಿ ಈ ಒಂದು ಚಿಕ್ಕ ಘಟನೆ ನನ್ನ ಮನಸ್ಸಿನಾಳದಲ್ಲಿ ಉಳಿಯಿತು.
ನಮ್ಮ ಮಾತುಗಳು, ಹಾಗೂ ನಾವು ಮಾಡುವ ಕಾರ್ಯಗಳೂ ನಾವು ಮಾತಾಡಿದಂತೆಯೇ ಅರ್ಥಪೂರ್ಣವಾಗಿರಬೇಕು. ಇದನ್ನು ನಾವು ನಮ್ಮ ಮಹಾಗ್ರಂಥ, ಮಹಾಭಾರತ, ರಾಮಾಯಣಗಳಲ್ಲಿ ಕಾಣುತ್ತೇವೆ. ಮಹಾಭಾರತದಲ್ಲಿ ಪಾಂಡವರು ತಾವು ಗೆದ್ದು ತಂದಿರುವ ಅಮೂಲ್ಯ ಉಪಹಾರದ ಬಗ್ಗೆ ಅವರ ಅಮ್ಮ, ಕುಂತಿಗೆ ಹೇಳಿದಾಗ, ಕೆಲಸದ ಒತ್ತಡದಲ್ಲಿದ್ದ ಆಕೆ, ಒಳ್ಳೆಯದು ಮಕ್ಕಳೇ, ಎಲ್ಲರೂ ಸಮನಾಗಿ ಹಂಚಿಕೊಳ್ಳಿಯೆಂದು ಹೇಳಿದ್ದರ ಔಚಿತ್ಯತೆಯ ಬಗೆಗೆ ನನಗೆ ಸದಾ ಅಳುಕು, ಬೇಸರ. ಒಂದು ತರಹದ ಮಾನಸಿಕ ವೇದನೆಯಾಗಿತ್ತು. ಅಮ್ಮನ ಮಾತನ್ನು ಪಾಲಿಸುವುದು ಒಂದು ಕಡೆ. ಆದರೆ, ಆಕೆಗೆ ಗೊತ್ತಿಲ್ಲದೆ ನುಡಿದ ಅನೃತವನ್ನೂ ಸಮಯ, ಹಾಗೂ ಸಂದರ್ಭಕ್ಕೆ ತಾಳೆಹಾಕಿನೋಡದೆ ಕಣ್ಣು ಮುಚ್ಚಿಕೊಂಡು ತೆಗೆದುಕೊಂಡ ನಿರ್ಣಯ ಎಷ್ಟು ಸಮಂಜಸ ? ಎನ್ನುವ ಮಾತು ಇಂದಿಗೂ ನನ್ನನ್ನು ಕಾಡುತ್ತಿದೆ. ಅಥವಾ ಕುಂತಿ, ವಿಶಾಪಕೊಡುವ ತರಹ, ನಾನು ಹೇಳಿದ ಮಾತು ಇದಕ್ಕೆ ಅನ್ವಯಿಸುವುದಿಲ್ಲ ಎಂದು ಸ್ಪಸ್ಠತೆ ಕೊಡಬಾರದಾಗಿತ್ತೆ ? ಮದುವೆ, ವ್ಯಕ್ತಿವ್ಯಕ್ತಿಗೆ ಸಂಬಂಧಿಸಿದ್ದಲ್ಲವೇ. ಪ್ರತಿ ಸನ್ನಿವೇಶಕ್ಕೂ ಯಾವುದೋ ನಿರೂಪಣೆ, ಸಮಾಧಾನ, ಪ್ರಜ್ಞಾವಂತರು ಸಮಯೋಚಿತವಾಗಿ ಹೆಣೆದು ಕೊಡುತ್ತಾರೆ. ಅದನ್ನೂ ಆ ಮಹಾತಾಯಿ ಚರ್ಚಿಸಿದಂತಿಲ್ಲ ! ಬೇರೆ ಸನ್ನಿವೇಷಗಳಲ್ಲಿ ನಾವು, ‘ಎತ್ತು ಈಯ್ತು, ಅಂದ್ರೆ ಕೊಟ್ಟಿಗೆ ಕಟ್ಟೊದೇ,’ ಎಂದು ಜಾಣತನದ ಮಾತಾಡುತ್ತೇವೆ !
ವೆಂಕಟ್ಲಕ್ಷಮ್ನವರು, ಅವರ ಸೊಸೆ, ಮೊಮ್ಮೊಕ್ಕಳು, ಮಗ, ಎಲೄ ನಮ್ಮ ಮನೆ ಭಾವಿಲೀ ನೀರ್ಸೇದ್ಕೊಂಡ್ ಹೋಗಕ್ಕೆ ಬರೋರು. ಕ್ಷೇತ್ರಪಾಲಯ್ಯನವರ ಭಾವೀಲಿ ಯಾವಾಗ್ಲೂ ಗದ್ದಲ ಜನಸಂದಣಿ ; ಸರ್ದಿಗೆ ಕಾಯ್ಬೇಕು. ನಮ್ಮಮನೇಲಿ ನಾವು ಮುಂಜಾನೆ ಇಲ್ಲವೇ ಸಾಯಂಕಾಲ ದೀಪ ಮುಡ್ಸೊ ಹೊತ್ತಿಗೆ ನೀರ್ ಸೇದೋರೂಢಿಯಲ್ಲಿತ್ತು. ಚಿಕ್ಕವರಾಗಿದ್ದ ನಾವು, ನೀರು ಸೇದಲು ಅರ್ಹತೆಯನ್ನು ಪಡೆದಿರಲಿಲ್ಲ. ನಮ್ಮಪ್ಪ ಅಮ್ಮ ಜೊತೆಯಲ್ಲಿ ಸೇದೋರು. ನಮ್ಮಣ್ಣ ನಾಗರಾಜ, ಅಮ್ಮ, ಇಲ್ಲವೇ ಜೊತೆಯಲ್ಲಿ ಯಾರಾದರೂ ಅಮ್ಮನ-ಗೆಳತಿಯರು ಸಹಾಯಮಾಡೋರು. ಆಗ ಇನ್ನೂ ನಮ್ಮ ಚಿಕ್ಕಪ್ಪ ಸುಬ್ಬಣ್ಣನವರು ಚೆನ್ನಾಗಿದೃ. (ಸ್ವಲ್ಪಕಾಲದ ಮೇಲೆ ಅವರ ಮಾನಸಿಕ ಸ್ಥಿತಿ ಬಿಗಡಾಯಿಸಿ, ಅವರು ಒಮ್ಮೆಲೇ ನಿಷ್ಕಿಯರಾದರು)
ಒಂದ್ಸಲ, ಬರೋರು ಹೋಗೋರು ಯಾಕೋ ಭಾವಿ ಹತ್ರ ಭಾರಿ ಶಬ್ದ ಮಾಡ್ತಿದ್ರಂತೆ, ನಮ್ಮ ಚಿಕ್ಕಪ್ಪನವರಿಗೆ ರೇಗ್ತು ಅಂತ ಕಾಣ್ಸತ್ತೆ. ಆಷ್ಟೊತ್ಗೆ ವೆಂಕಟ್ಲಕ್ಷಮ್ನೋರೆ ನಮ್ ಚಿಕ್ಕಪ್ಪನ್ ಕಣ್ಗೆ ಕಾಣಿಸ್ಬೇಕೆ ? “ಎಲೄ ಯಾಕ್ ಒಂದೇ ಹೊತ್ಗೆ ಬಂದ್ ನೀರ್ಸೇದ್ತೀರಿ.” ” ಅಲ್ಲಿ ಇನ್ನೊಂದ್ ಭಾವಿ ಇಲ್ವೆ ? ಅಲ್ಗ್ಯಾಕ್ ಹೋಗ್ಬಾರ್ದು” ಅಂತಂದ್ರು. ಸರಿಹೋಯ್ತು. ತಮಗೇ ಹೇಳ್ತಿದಾರೆ ಅಂದ್ಕೊಂಡ್, ಖಂಡಿತವಾದಿ ವೆಂಕಟಲಕ್ಷಮ್ಮ್ನೋರು, ಸೇದಿದ್ದ ಬಿಂದಿಗೆಯ ನೀರನ್ನು ಭಾವಿಗೆ ಸುರಿದು ’ ಧಡ ಧಡ’ ಹೊರ್ಟೇ ಹೋಗ್ಬಿಟ್ರು.
ಅವತ್ನಿಂದ, “ನಿಮ್ಮ ವಠಾರದಲ್ಲಿ ನಾವು ನೀರಿಗೆ ಬರಲ್ಲ,” ಅಂತ ಘೋಷಿಸಿಯೇ ಬಿಟ್ರು. ಅಲ್ಗೆ ಮುಗೀತು ಭೀಷ್ಮರ ಶಪಥದ ತರಹ, ಸುಂಕ್ದೋರ್ಮನೆ ನೀರಿನ್ವ್ಯವಹಾರ ! ಅನೇಕ ವರ್ಷಗಳ ಕಾಲ ಅವರ ಮನೆಯವರು ನೀರು ಸೇದಲು ಬರ್ಲೇ ಇಲ್ಲ ಅಂತ ನಮ್ಮಮ್ಮ ಹೇಳೋರು. ಆದ್ರೆ, ಬರ್ತಾ ಬರ್ತಾ ನೀರಿನ್ ತಾಪತ್ರಯ ಹೆಚ್ಚಾಗ್ತಾ ಹೋಯ್ತು. ಹಿಂದೆ ಮುಂದೆ ನೋಡ್ತಿದ್ದಾಗ, ಚಿಕ್ಕಮ್ಮ, ಕಿಟ್ಟು, ಹೋಗಿ ಅವರ್ನ ಕೇಳ್ಕೊಂಡ್ರಂತೆ. ( ಬೆಡ್ಕೊಂಡ್ರಂತೆ) “ಅಜ್ಜಿ, ಹೇಳಿ ; ಯಾರು ನಿಮಗೇನಂದೃ ; ನಮ್ಮುಂದೆ ಹೇಳಿ, ಪರವಾಗಿಲ್ಲ “ಅಂದ್ರೆ. “ಅಯ್ಯೊ ನಮ್ಮಪ್ಪ, ನಾನ್ ಯಾರ್ ಮೇಲೂ ಕಂಪ್ಲೇಂಟ್ ಹೇಳ್ತಿಲ್ಲ.” “ಯಾಕೊ ನನ್ನ ಮನಸ್ಸಿಗೆ ಬೇಜಾರ್ ಆಯ್ತು.” ” ಯಾರ್ ಅಂದೃ ಅದೆಲ್ಲ ನನ್ನ ಮಾತ್ರ ಕೇಳ್ಲೇ ಬೇಡಿ” ಅಂದ್ಬಿಟೃ. ” ನೋಡಿ, ಪದ್ದಮ್ಮನೋರ್ ಬಂದ್ ಕೇಳಿದಾರೆ, ಅವರ ಮಾತಿಗೆ ಬೆಲೆಕೊಡೋದ್ ನಮ್ಮ ಧರ್ಮ ಅಲ್ವ” ! “ನಂ ಮಾತ್ನ ಸ್ವಲ್ಪ ಕೇಳಿಸ್ಕೊಳ್ಳಿ, ಪದ್ದಮ್ಮ, ಕಿಟ್ಟಣ್ಣ. ” ನನ್ ದೊಂದ್ ಶರತ್ತು. ನಿಮ್ಮಂಗಳ್ದ ಹೊಸ್ಲಿನಿಂದ ಒಳ್ಗೆ ಕಾಲಿಡಲ್ಲ ಅಷ್ಟೆ.” ” ಬಿಂದ್ಗೇಲಿ ಯಾರಾದೃ ನೀರ್ ತಂಕೊಡಿ, ನಂದೇನ್ ಅಡ್ಡಿಯಿಲ್ಲ.” ಅಂತ ಮತ್ತೊಂದ್ ಹೇಳ್ಕೆನ ಕೊಟ್ರಂತೆ. ಅಲ್ಲಿಂದ ಹೊರ್ಗೆ ಬಿಂದ್ಗೆ ನೀರ್ನ ತೊಗೊಂಡ್ ಹೋಗೊದು ನನ್ನ ಜವಾಬ್ದಾರಿ, ಅಂತ ಹೇಳಿದ್ದರು. ಈ ವ್ಯವಸ್ಥೆ, ಬಹಳ ದಿನ ನಡೀತು. ಸಮಯದ ಮುಂದೆ ನಾವೆಲ್ಲಾ ಬೊಂಬೆಗಳಲ್ಲವೇ !
ಕ್ರಮೇಣ, ಉರಿನ ಭಾವಿಗಳೆಲ್ಲಾ ಬತ್ತಿಹೋಗಿ, ಯಾವಭಾವಿಯಲ್ಲೂ ಸಾಕಷ್ಟು ನೀರು ಶೇಖರಿಸಲಾಗುತ್ತಿರಲಿಲ್ಲ. ನಮ್ಮ ಭಾವಿಯದು
ಸಹಿತ ಅದೇ ಪಾಡು. ಭಾವಿಯನ್ನು ಮುಚ್ಚಲಾಗಿದೆ. ಹಿರಿಯೂರಿನ ಸೂಳೆಕೆರೆಯಿಂದ ಕುಡಿಯುವ ನೀರಿನ ಸರಬರಾಜು ನಡೆಯುತ್ತಿದೆ. ಚಿತ್ರದುರ್ಗ, ಹೊಳಲ್ಕೆರೆಗೂ ಇದೇ ನೀರೆ, ಕೊಳವಿಗಳಲ್ಲಿ ಹರಿದು ಬರುತ್ತಿದೆ.
ಒಂದು ದಿನ ವೆಂಕಟಲಕ್ಷಮ್ಮನವರು ಹೋಗ್ಬಿಟೃ, ಎಲ್ಲಾರ್ ತರಹ ; ಅವರ ಪರಿವಾರ ಚಿತ್ರದುರ್ಗಕ್ಕೆ ಬದಲಾಯಿಸಿದರು. ಈ ನೀರಿನ ಬವಣೆ ತಡಿಲಾರದೆ, ನಾವೂ ಏನೂ ಉಪಾಯ ತೋರದೆ ಮೊದ್ಲು ಬೆಂಗಳೂರಿಗೆ, ಆಮೇಲೆ ಬೊಂಬಾಯಿಗೆ ವಲಸೆ ಹೋದೆವು.