ನಮ್ಮರಿವೇ ನಮಗೆ ಗುರು

ನಮ್ಮರಿವೇ ನಮಗೆ ಗುರು

ಒಂದೇ  ರೀತಿ ಇರುವ  ಇಬ್ಬರು ಮನುಷ್ಯರನ್ನು ನೋಡಿದ್ದೀರಾ? ನಮಗೆ ಹೊರ ರೂಪದಲ್ಲಿ ಒಂದೇ ತರ ಎನಿಸಿದರೂ ಅವರ ಗುಣ, ಬುದ್ಧಿ, ಸಾಮರ್ಥ್ಯ , ಎಲ್ಲವೂ ಬೇರೆ ಬೇರೆಯೇ ಆಗಿರುತ್ತದೆ. ಆದ್ದರಿಂದ ಒಬ್ಬನಿಗೆ ಸರಿ ಎನಿಸಿದ್ದು ಇನ್ನೊಬ್ಬನಿಗೆ ಸರಿಯಾಗಬೇಕಾಗಿಲ್ಲ. ಉಧಾಹರಣೆಗೆ ಮದುವೆ ಮನೆಯಲ್ಲಿ  ಎಲ್ಲರೂ ಊಟ ಬಲು ರುಚಿಯಾಗಿತ್ತು ಎಂದು ಹೇಳುವಾಗ ಯಾರೊ ಒಬ್ಬರು “ಇವರಿಗೆ ಅಡಿಗೆ ಮಾಡೋದಕ್ಕೆ ಬರುತ್ತೇನ್ರೀ? “ ಎನ್ನದೆ ಇರಲಾರರು. ಅವರವರ ರುಚಿ ಅವರಿಗೆ ಚಂದ. ಅಷ್ಟೆ.ರೂಪದಲ್ಲೂ ಅಷ್ಟೆ. ವಾಸನೆಯಲ್ಲೂ ಅಷ್ಟೆ. ಒಬ್ಬೊಬ್ಬರಿಗೆ ಒಂದೊಂದು ಹಿತವೆನಿಸುತ್ತೆ.

ತಕ್ಷಣಕ್ಕೆ ಒಂದು ಉಧಾಹರಣೆ ನೆನಪಾಗುತ್ತೆ. ನನ್ನ ಮಿತ್ರನೊಬ್ಬನಿದ್ದ. ಮಂಗಳೂರು ಕಡೆಯಿಂದ ಮೀನಿನ ಲಾರಿ ಬಂದದ್ದನ್ನು ನೋಡುತ್ತಾ ಅವನು ಹೇಳ್ತಿದ್ದ “ ಎಷ್ಟು ಹಿತವಾಗಿದೆ! ಅವನು ಆ ಲಾರಿಯಿಂದ ಬರುತ್ತಿದ್ದ ಮೀನಿನ ವಾಸನೆ ಹೋಗುವವರೆಗೂ ಅದನ್ನು ಆಸ್ವಾದಿಸುತ್ತಿದ್ದ. ಅದೇ ಸಮಯದಲ್ಲಿ ನನಗೆ ವಿಲವಿಲ ಒದ್ದಾಡುವ ಹಾಗಾಕ್ತಿತ್ತು. ಮನುಷ್ಯನ ಆಹಾರ, ವಿಹಾರ, ನಡವಳಿಕೆ ಎಲ್ಲವೂ ಬೇರೆ ಬೇರೆಯೇ ಆಗಿರುವಾಗ  ಯಾವುದೇ ವಿಚಾರದಲ್ಲೂ ಎಲ್ಲರಿಗೂ ಒಂದೇ ಮಂತ್ರ ಇರಲು ಸಾಧ್ಯವೇ?

ನಿಮಗೆ ನಗು ಬರಬಹುದು..ಏನು ಇಂತಾ ಪ್ರಶ್ನೆಯನ್ನೂ ಕೇಳುವ ಜನರಿದ್ದಾರೆಯೇ? ಎಂದು. ಕೆಲವರು ಧೈರ್ಯ ಮಾಡಿ ಕೇಳುತ್ತಾರೆ. ಕೆಲವರು ಬೇರೆಯವರಿಗೆ ಸಿಕ್ಕ   ಉತ್ತರವನ್ನು ತಾವೂ ಸ್ವೀಕರಿಸುತ್ತಾರೆ. ಅದೇನು ಅಂತಾ ಪ್ರಶ್ನೆ , ಅಂತೀರಾ? ಅದೇ ಪತಿ-ಪತ್ನಿಯರ ಖಾಸಗೀ ಜೀವನದ ಬಗ್ಗೆ. ಪತಿ-ಪತ್ನಿಯರು ತಿಂಗಳಲ್ಲಿ ಎಷ್ಟು ದಿನ ಸಂಗ ಸೇರಬಹುದು? ಹೆಚ್ಚಾದರೆ ಎಲ್ಲಾದರೂ  ಸೋಲುಂಟಾಗಿ ವ್ಯಾಧಿ ಅಂಟೀತೇ? ನಿಜವಾಗಲೂ ಇದೇ ವಿಚಾರವನ್ನಿಟ್ಟುಕೊಂಡು ಹದಿಹರೆಯದವರಿಗೆ ಕಾಮಶಿಕ್ಷಣ ಕೊಡಬೇಕೂ ಅಂತಾ ಕೂಡ ಸರ್ಕಾರದ ಚಿಂತನೆಯಲ್ಲಿದೆ. ಏನ್ರೀ ಕಾಮ ಶಿಕ್ಷಣ ಕೊಡ್ತಾರೆ! ಯಾವ ಯಾವ ವಯಸ್ಸಿನಲ್ಲಿ ಏನೇನು ಅನುಭವ ಆಗಬೇಕೋ ಆ ಅನುಭವ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ. ನಮ್ಮ ಪೂರ್ವಜರಿಗೆ ಯಾರು ಇಂತಾ ಶಿಕ್ಷಣವನ್ನು ಕೊಟ್ಟಿದ್ದರು? ಆದರೂ ಆರೋಗ್ಯವಂತ ಕೌಟುಂಬಿಕ ಜೀವನವನ್ನು ಅವರು ನಡೆಸಲೇ  ಇಲ್ಲವೇ? ಮೊನ್ನೆ ನಮ್ಮ ಸಂಬಂಧಿಯೊಬ್ಬರಿಗೆ  ನೂರುವರ್ಷ ತುಂಬಿದ ಪ್ರಯುಕ್ತ  ಒಂದು ಕಾರ್ಯಕ್ರಮ ನಡೆಯಿತು. ಈಗಲೂ ಅವರು ಗಟ್ಟಿಮುಟ್ಟಾಗಿಯೇ ಇದ್ದಾರೆ. ಹಿಂದಿನವರಿಗೆಲ್ಲಾ  ಹತ್ತು ಹನ್ನೆರಡು ಮಕ್ಕಳಾದರೂ ಅವರು ಆರೋಗ್ಯವಾಗೇ ಇರ್ತಾ ಇದ್ರು. ಇರಲಿ. ಕಾಮ ಶಿಕ್ಷಣದ ವಿಚಾರದಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಹೇಳ್ತಾರೆ “ ಕಾಮ ಶಿಕ್ಷಣವನ್ನು ಕೊಡಬೇಕಾಗಿಲ್ಲ. ಅದು ಸಹಜವಾಗಿಯೇ ಗೊತ್ತಾಗುತ್ತೆ, ಆದರೆ ಸಂಯಮದ ಶಿಕ್ಷಣವನ್ನು ಕೊಡಬೇಕೂ ಅಂತಾ. ಕಾಮದ ವಿಚಾರವೇ ಇರಬಹುದು, ಆಹಾರದದ ವಿಚಾರವೇ ಇರಬಹುದು, ಸಾಕು ಬೇಕುಗಳು ಆ ಮನುಷ್ಯನಿಗೇ ಗೋಚರವಾಗುತ್ತೆ. ನಮಗೆ ನಮ್ಮ ಸೂಕ್ಷತಮ ಅರಿವೇ ನಮಗೆ ದಾರಿತೋರಿಸುತ್ತದೆ. ಅದನ್ನು ನಾವು ಅರ್ಥಮಾಡಿಕೊಳ್ಳುವ ಹಾಗೆ ನಮ್ಮ ದೇಹ ಮನಸ್ಸುಗಳನ್ನು ಸೂಕ್ಷ್ಮವಾಗಿ ಕಾಪಾಡಿಕೊಂಡಿರಬೇಕು,ಅಷ್ಟೆ. ಇದಕ್ಕೆ ಅಗತ್ಯವಾದ ನಮ್ಮ ಜೀವನ ಶೈಲಿ ಇರಬೇಕು. ಈ ವಿಷಯ ಇರಲಿ. ಇನ್ನೂ ಹಲವು ವಿಷಯಗಳ ಬಗ್ಗೆ ಚಿಂತನ-ಮಂಥನ ನಡೆಸಬೇಕಾಗಿದೆ.

ದೇವರು ,ಧರ್ಮದ  ವಿಚಾರ ಬಂದರೆ ಸಾಕು, ಜನರು ಹುಂಬರಾಗಿಬಿಡ್ತಾರೆ.ಇದೊಂದು ತರ ಸಮೂಹ ಸನ್ನಿ! ನಿಜವಾಗಲೂ ಬಲು ಬೇಸರವಾಗುವ ಸಂಗತಿ ಎಂದರೆ ಅತ್ಯಂತ ವಿದ್ಯಾವಂತರೆನಿಸಿಕೊಂಡವರು ಅತ್ಯಂತ ಮೂರ್ಖರಾಗಿ ವರ್ತಿಸುವುದು ದೇವರು-ಧರ್ಮದ ವಿಚಾರದಲ್ಲಿಯೇ. ನೋಡೀ ನಾವು ಬೆಳೆದಿರುವ ಪರಿಸರವೇ ಹಾಗಿದೆ. ನಮ್ಮನ್ನೆಲ್ಲಾ  ದೇವರ-ಧರ್ಮದ ಹೆಸರಲ್ಲಿ   ಭಯದಿಂದ  ಬದುಕುವಂತೆ ಬೆಳೆಸಿದ ಪರಿಣಾಮ ಈಗ ಅದರ  ದುಷ್ಪರಿಣಾಮವನ್ನು ನೋಡುತ್ತಿದ್ದೇವೆ. ಎಲ್ಲಾ ಮತಗಳಿಗಿಂತ ಇಸ್ಲಾಮ್ ಮತೀಯರಲ್ಲಿ ಇಂತಾ ಭಯ ಹೆಚ್ಚು.  ಅವರ ದೇವರನ್ನು ನಂಬದವ ಕಾಫಿರ ನೆನಸಿಬಿಡುತ್ತಾನೆ. ಅವನಿಗೆ ಮುಕ್ತಿ ಇಲ್ಲ. ಹಿಂದುಗಳಲ್ಲಿ ಮೂವತ್ಮೂರು ಕೋಟಿ ದೇವತೆ!  ಕ್ರಿಶ್ಚಿಯನರಲ್ಲಿ ಏಸು ಮಾತ್ರವೇ ದೇವರು. ಮತದ ಹೆಸರಲ್ಲಿ ಮತಾಂತರದ ಹಾವಳಿ! ಯಾವ ದೇವರು ಇವರಿಗೆಲ್ಲಾ “ನನ್ನ ಅನುಯಾಯಿಗಳಾಗಿ ಮಾಡಿ, ನಿಮಗೆ ಸ್ವರ್ಗದಲ್ಲಿ ಜಾಗ ಕೊಡುತ್ತೀನೆಂದು ಹೇಳಿದ್ದಾನೋ, ಗೊತ್ತಿಲ್ಲ. ನಿತ್ಯವೂ  ಮತಾಂತರದ ಚಟುವಟಿಕೆಗಳು! ಅದಕ್ಕಾಗಿಯೇ ಭಯೋತ್ಪಾದನೆ!

ದೇವರು, ಧರ್ಮ ಇವೆಲ್ಲಾ ಯಾಕೆ ಹೇಳಿ, ಒಂದು ನೆಮ್ಮದಿಯ ಜೀವನಕ್ಕೆ ತಾನೇ? ಇವತ್ತಿನ ಈ ನಮ್ಮ ದೇವರು-ಧರ್ಮದ ಹೆಸರಿನ ಚಟುವಟಿಕೆಗಳು ಮನುಷ್ಯನ ನೆಮ್ಮದಿಯ ಜೀವನಕ್ಕೆ ಕಾರಣ ವಾಗಿವಿವೇಯೇ? ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ನಾನೊಬ್ಬ ಹಿಂದುಕುಟುಂಬದಲ್ಲಿ ಜನಿಸಿ  ನನಗೆ ತಿಳಿದಿರುವಂತೆ, ನನ್ನ ಅನುಭವದಂತೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವೆ. ದೇವರ ಹೆಸರಲ್ಲಿ ಮೋಸಮಾಡುವ ನೂರಾರು ವ್ಯವಸ್ಥೆಗಳು ಇದೀಗ ಸಕ್ರಿಯವಾಗಿವೆ. ಜನರ ಕೈಲಿ ಹಣಕ್ಕೆ ಕೊರತೆ ಇಲ್ಲ. ಈ ಹಣವನ್ನು ಲೂಟಿ ಮಾಡಲು ಬೇಕಾದಷ್ಟು ಷಡ್ಯಂತ್ರಗಳು ಲಂಗು ಲಗಾಮಿಲ್ಲದೆ ನಡೆದಿದೆ. ಧರ್ಮ-ದೇವರ ಹೆಸರಿನಲ್ಲೇ ಹೆಚ್ಚು ಮೋಸದ ವ್ಯವಹಾರ ನಡೆಯುತ್ತಿರುವುದು ಅತ್ಯಂತ  ವಿಷಾಧದ ಸಂಗತಿ ಹಾಗೂ ನಮ್ಮ ದೇಶದ ದೌರ್ಭಾಗ್ಯ ಕೂಡ.ಇವೆಲ್ಲದಕ್ಕೊಂತಲೂ ಹೆಚ್ಚು ಆತಂಕದ ಸಂಗತಿ ಎಂದರೆ ಹೈದ್ರಾಬಾದ್ ನಲ್ಲಿ    ಒಬ್ಬ ಮುಸ್ಲಿಮ್ ಶಾಸಕ ನ ಆರ್ಭಟದ ಭಾಷಣ ಪ್ರಸಾರವಾಗಿದೆ” ಪೋಲೀಸರು ಹದಿನೈದು ನಿಮಿಷ ಸುಮ್ಮನಿದ್ದರೆ ಸಾಕು ಅವನ ಇಪ್ಪತ್ತೈದು ಕೋಟಿ ಮುಸಲ್ಮಾನರು ಒಂದು ನೂರು ಕೋಟಿ ಹಿಂದುಗಳನ್ನು ನಾಮಾವಶೇಷ ಮಾಡಿ ಬಿಡ್ತಾರಂತೆ! ಇದಕ್ಕಿಂತ ಕೆಟ್ಟ ಸಂಗತಿ ಬೇರೊಂದಿದೆಯೇ?  ಮೊಹಮದ್ ಪೈಗಂಬರ್ ಇಂತಾ ಬೋಧನೆ ಮಾಡಿರಲು ಸಾಧ್ಯವೇ? ಇದೊಂದು ಇತ್ತೀಚಿನ ಸ್ಯಾಂಪಲ್ ಅಷ್ಟೆ.

ಆತನ ಬಾಯಲ್ಲಿ ಅಂತಾ ಘೋರ ಮಾತುಗಳು ಬಂದುದಾದರೂ ಏಕೆ? ಅವನ ತಲೆ ಕೆಟ್ಟಿದೆಯೇ? ಇಲ್ಲಾ!   ನಮ್ಮ ಚಿಂತನೆಗಳು,ನಡವಳಿಕೆಗಳು, ನಮ್ಮ ಚಳುವಳಿಗಳು, ನಮ್ಮ ಪೂಜೆ ಪುನಸ್ಕಾರಗಳು, ನಮ್ಮ ಮಠ ಮಂದಿರಗಳಲ್ಲಿ ಸಿಗುತ್ತಿರುವ ಶಿಕ್ಷಣ, ನಮ್ಮ ರಾಜಕೀಯ ಚಟುವಟಿಕೆಗಳ  ಸ್ವರೂಪ,….ಇವೆಲ್ಲದರ ಒಟ್ಟು ಪರಿಣಾಮ  ಇಂತಾ ಘೋರ ಅಪರಾಧದ ಮಾತುಗಳು  ಆತನ ಬಾಯಲ್ಲಿ ಹೊರಡಲು ಕಾರಣ.ಇಂತಾ ಅಚಾತುರ್ಯಗಳು  ನಡೆಯಬಾರದೆಂದರೆ ದೇಶದ  ಮಹಾನ್ ಮಹಾನ್ ನಾಯಕರೆಲ್ಲಾ ಪಕ್ಷಭೇದ ಮರೆತು ರಾಷ್ಟ್ರದ ಹಿತದೃಷ್ಟಿಯಿಂದ ಒಂದೆಡೆ ಕುಳಿತು ಇದಕ್ಕೆ ಪರಿಹಾರ ಕಂಡುಕೊಳ್ಳ   ಬೇಕು. ಧರ್ಮ-ದೇವರ ವಿಷಯ ಬಂದಾಗ ಅದೊಂದು ಗಂಭೀರ ಸಮಸ್ಯೆಯಾಗಿ ನಮಗೆ ಕಾಡುವುದು ದುರಂತವಲ್ಲವೇ?

ಹಾಗಾದರೆ  ದೇವರು, ಧರ್ಮ, ನಮಗೆ ನೆಮ್ಮದಿಯನ್ನು ಕೊಡಬಲ್ಲುದೇ?  ನಿಜವಾಗಿ ನಮ್ಮ ಬದುಕಿಗೆ ನೆಮ್ಮದಿಯನ್ನು ಕೊಡುವ ವಿಚಾರವೆಂದರೆ ದೇವರು ಮತ್ತು ಧರ್ಮದ ವಿಷಯಗಳೇ ಆಗಿವೆ. ಆದರೆ ದೇವರ ಬಗ್ಗೆ ,ಧರ್ಮದ ಬಗ್ಗೆ ನಮ್ಮ ಚಿಂತನೆಯ ಮೇಲೆ ಅದು ನಮಗೆ ನೆಮ್ಮದಿ ಕೊಡುವ ಅಥವಾ ನೆಮ್ಮದಿ ಹಾಳುಮಾಡುವ ವಿಷಯಗಳಾಗುತ್ತದೆ.

ಮೊದಲೇ ತಿಳಿಸಿದಂತೆ ಒಬ್ಬೊಬ್ಬರದು ಒಂದೊಂದು ರುಚಿ, ಅಲ್ಲವೇ? ದೇವರ ವಿಚಾರದಲ್ಲೂ ಅಷ್ಟೇ. ವೇದದ ನೆಲೆಯಲ್ಲಿ ಚಿಂತನೆ ಮಾಡುವ ಹಂತ ತಲುಪಿದರೆ ಭಗವಂತನಾದರೋ ಸರ್ವಾಂತರ್ಯಾಮಿ. ಅವನಿಗೆ ಯಾವ ಎಲ್ಲೆಯೂ ಇಲ್ಲ. ಅವನಿಗೆ ಆಕಾರವೂ ಇಲ್ಲ. ನಿರಾಕಾರೀ, ಸರ್ವ ಶಕ್ತ ಭಗವಂತನನ್ನು ಪೂಜೆ ಮಾಡುವುದು ಹೇಗೆ? ವೈದಿಕ ಚಿಂತನೆಯಲ್ಲಿ ಪೂಜೆಯ ವಿವರಣೆ ಬಲು ಸೊಗಸಾಗಿದೆ. ಈ ಲೇಖನದಲ್ಲಿ ಆ ಪ್ರಸ್ತಾಪ ಮಾಡದೆ ಭಗವಂತನ ವಿಚಾರದಲ್ಲಿ ಯಾರು ಏನೇ ಹೇಳಿದರೂ ನಮ್ಮ ಅಂತ:ಸಾಕ್ಶಿ ಒಪ್ಪುವಂತೆ  ನಾವು ನಡೆದುಕೊಂಡರಾಯ್ತು.

ಸಾಮಾನ್ಯವಾಗಿ ದೇವರ ವಿಚಾರದಲ್ಲಿ ಹೆಚ್ಚು ಚರ್ಚೆ ಆಗುತ್ತದೆ. ಇದುವರೆವಿಗೆ ದೇವರನ್ನು ನೋಡಿದವರು ಯಾರೂ ಇಲ್ಲ. ಹಾಗಂತಾ ದೇವರಿಲ್ಲ ಎನ್ನಲು ಸಾಧ್ಯವೇ? ಹಾಗೆನ್ನುವಂತಿಲ್ಲ. ದೇವರಿರುವುದರಿಂದಲೇ  ಈ ಪ್ರಪಂಚದಾಟ! ಆದರೆ ಅವನನ್ನು ನೋಡಲು ಸಾಧ್ಯವೇ ಇಲ್ಲ. ಅವನ ಅಸ್ತಿತ್ವವನ್ನು  ಅವನ ಚಟುವಟಿಕೆಯಿಂದ  ಒಪ್ಪಬೇಕು ಅಷ್ಟೆ. ಆದರೆ  ಭಗವಂತನ ಹೆಸರಲ್ಲಿ ಅದೆಷ್ಟು ಮೋಸ ನಡೆಯುತ್ತಿದೆ!  ಇಲ್ಲಿ ನಮಗೆ ಹೆಚ್ಚು ಸಹಾಯವಾಗುವುದು “ ನಮ್ಮ ವಿವೇಕ. ನಮ್ಮ ಅರಿವೇ ನಮಗೆ ಗುರು”  ನಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ನಾವು ಭಗವಂತನ ವಿಚಾರದಲ್ಲಿ ಪೂಜೆ, ಧ್ಯಾನ, ಜಪ,ತಪ, ಏನು ಬೇಕಾದರೂ ಮಾಡಬಹುದು. ಒಟ್ಟಿನಲ್ಲಿ ನಾವು ಮಾಡುವ ಯಾವುದೇ ಕ್ರಿಯೆ ನಮಗೆ ನೆಮ್ಮದಿ ಕೊಡಬೇಕು. ಅದು ನಮಗೇ ತಾನೇ ಗೊತ್ತಾಗುವುದು? ಅದಕ್ಕಾಗಿ ಯಾರನ್ನೂ ಸಲಹೆ ಕೇಳುವ ಅಗತ್ಯವಿಲ್ಲ.

ಇನ್ನು ನಮ್ಮ ಆರೋಗ್ಯದ ವಿಚಾರದಲ್ಲಿ  ಹಲವರು ಹಲವು  ಪುಕ್ಕಟೆ ಸಲಹೆ ಕೊಡುತ್ತಾರೆ. ನಿತ್ಯವೂ ಐದು ಕಿಲೋ ಮೀಟರ್ ವಾಕ್ ಮಾಡಿ, ನಿತ್ಯವೂ ನಾಲ್ಕೈದು ಲೀಟರ್ ನೀರು ಕುಡಿಯಿರಿ, ತಪ್ಪದೆ ಒಂದು ಗಂಟೆ ಯೋಗ ಮಾಡಿ, ಪ್ರಾಣಾಯಾಮ ಮಾಡಿ, ಇತ್ಯಾದಿ…ಇತ್ಯಾದಿ..ಆಹಾರದ ವಿಚಾರದಲ್ಲೂ ಇದನ್ನು ತಿನ್ನಿ, ಇದನ್ನು ತಿನ್ನ ಬಾರದು… ಇತ್ಯಾದಿ…ಇತ್ಯಾದಿ..

ನಾವೂ ಕೂಡ ಎಲ್ಲರ ಸಲಹೆ ಕೇಳಿದ್ದೇ  ಕೇಳಿದ್ದು, ಪೇಪರ್,  ಟಿ.ವಿ.ಗಳನ್ನು ನೋಡಿ ಮಾಡಿದ್ದೇ ಮಾಡಿದ್ದು, ಆದರೆ  ಯಾಕೋ ಆರೋಗ್ಯ ಉತ್ತಮವಾಗಲೇ ಇಲ್ಲ, ಎಂಬ ಕೊರಗು. ಮೊದಲು ಮಾಡಬೇಕಾದುದು ಏನು ಗೊತ್ತಾ?  ತಜ್ಞ  ವೈದ್ಯರೊಡನೆ ಪರೀಕ್ಷೆ ನಡೆಸಿಕೊಳ್ಳುವುದು ತಪ್ಪಿಲ್ಲ. ಅವರು ಒಂದಿಷ್ಟು ಸಲಹೆ ಕೊಡ ಬಹುದು. ಆದರೆ ಅದರ ಪರಿಣಾಮಗಳು ಸರಿಯಾಗಿ ಗೊತ್ತಾಗುವುದು ನಮಗೆ ಮಾತ್ರ. ಯಾವ ಆಹಾರವು ನಮಗೆ ತೊಂದರೆ ಕೊಡುವುದಿಲ್ಲ, ಅದನ್ನು ಸೇವಿಸಬೇಕು,   ಯಾವುದು ತೊಂದರೆ ಕೊಡುತ್ತದೆ, ಅದನ್ನು ಸೇವಿಸಬಾರದು. ನಮಗೆ ನಾವೇ ವಿಧಿ ನಿಶೇಧಗಳನ್ನು  ಹಾಕಿಕೊಳ್ಳಬೇಕು. ಯಾರು ಏನೇ ಹೇಳಲೀ, ಅವರ ದೇಹ ಪ್ರಕೃತಿಯಂತೆ ನಿಮ್ಮ ದೇಹ ಪ್ರಕೃತಿ ಇರಲಾರದು, ಅವರಿಗೆ ಸತ್ಪರಿಣಾಮ ಬೀರಿದ ಆಹಾರ ನಿಮಗೂ ಅಷ್ಟೇ ಪ್ರಮಾಣದಲ್ಲಿ ಸತ್ಪರಿಣಾಮ ಬೀರಬೇಕೆಂಬ ನಿಯಮವೇನೂ ಇಲ್ಲ. ಯೋಗವೂ ಅಷ್ಟೆ.

ಏನೇ ಆಗಲೀ ನಮ್ಮ ಒಳ ಮನಸ್ಸಿನ  ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ಅದರಂತೆ ಬದುಕುವುದನ್ನು ಕಲಿತರೆ ಆಗ ನಾವೇ ಸುಖಿಗಳು .

Rating
No votes yet

Comments

Submitted by RAMAMOHANA Sat, 03/23/2013 - 13:41

ಉತ್ತಮ‌ ವಿಚಾರಯುಕ್ತ ಲೇಖನ‌ ಶ್ರೀಧರ್ ಅವರೆ. ಮುಖ್ಯ ಪ್ರತಿಯೊಬ್ಬರೂ ಇ0ಥಹ‌ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಬಾಳಬೇಕು‍, ಬಾಳಲು ಬಿಡಬೇಕು. ನಮಸ್ಕಾರ‌ ನಮಸ್ಕಾರ‌ ನಮಸ್ಕಾರ‌ ತಮಗೆ
ರಾಮೋ.