ನಮ್ಮಲ್ಲಿ ಯಾಕೆ ಬರ್ತಿಲ್ಲ ಬಾಹುಬಲಿಯಂಥ ಚಿತ್ರಗಳು..?
ಕಣ್ಣು ಮುಚ್ಚಿ, ದೀರ್ಘವಾಗಿ ಉಸಿರು ಎಳೆದುಕೊಳ್ಳಿ… ಶಾಂತವಾಗಿ ಕುಂತು ಯೋಚಿಸಿ… ನಮ್ಮಲ್ಲಿ ಯಾಕಿಲ್ಲ ಬಾಹುಬಲಿ? ಇವತ್ತು ದೇಶಾದ್ಯಂದ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಬಾಹುಬಲಿ ಸಾವಿರ ಕೋಟಿ ಲೆಕ್ಕದಲ್ಲಿ ಹಣವನ್ನ ಬಾಚಿಕೊಳ್ಳುತ್ತಿದ್ದರೆ, ನಾವು ಮತ್ತದೇ ಹಳೇ ಸೂತ್ರಕ್ಕೆ ಜೋತು ಬಿದ್ದು ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಅಂತಾ ಹಾಡಿದ್ದೇ ಹಾಡನ್ನ ಹಾಡುತ್ತ ಕುಳಿತಿದ್ದೇವೆ.
ಅಷ್ಟಕ್ಕೂ ಬಾಹುಬಲಿಯಲ್ಲಿ ಅಂಥದ್ದೇನಿದೆ? ಇಮ್ಮಡಿ ಪುಲಿಕೇಶಿಯ ಆ ತೇಜಸ್ಸು, ಮಯೂರನ ಮನ ಮುಟ್ಟುವ ಹಾಡುಗಳು, ಗ್ರಾಫಿಕ್ಸ್ ಇಲ್ಲದೆಯೂ ಮನ ತಟ್ಟಿದ್ದ ಶೌರ್ಯ ಕಲೆ, ಬಬ್ರುವಾಹನನ ವಾಗ್ಝರಿ, ಶ್ರೀಕೃಷ್ಣ ದೇವರಾಯರ ಗಾಂಭೀರ್ಯ, ಸತ್ಯ ಹರಿಶ್ಚಂದ್ರನ ಕಾರುಣ್ಯ… ಡಾ. ರಾಜ್ ರಂಥ ಸತ್ವಪೂರ್ಣ ಅಭಿನಯ.. ಹ್ಞೂಂ… ಇಲ್ಲ...
ಹಾಗಿದ್ದರೆ ಹೊಸದೇನಾದರೂ ಇದೆಯಾ? ಕಠಾರಿ ವೀರ, ವೀರ ಕೇಸರಿ, ಕ್ರಾಂತಿವೀರ, ದೂರದ ಬೆಟ್ಟ, ಭಕ್ತ ಪ್ರಹ್ಲಾದ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಕವಿರತ್ನ ಕಾಳಿದಾಸ, ಶ್ರೀನಿವಾಸ ಕಲ್ಯಾಣ ಮುಂತಾದ ವಿಭಿನ್ನ ಐತಿಹಾಸಿಕ ಚಿತ್ರಗಳನ್ನು ಕಂಡ ಕನ್ನಡ ಪ್ರೇಕ್ಷಕ ಹೇಳುವುದಾದರೆ ಅಂಥ ಹೊಸದೇನು ಕೂಡ ಬಾಹುಬಲಿಯಲ್ಲಿ ಇಲ್ಲ. ಆದ್ರೆ ಇದೆಲ್ಲವನ್ನು ಮೀರಿದ್ದು ಒಂದಿದೆ… ಅದು ಬಾಹುಬಲಿ ಚಿತ್ರಗಳ ಹೆಗ್ಗಳಿಕೆ…
ಬಾಹುಬಲಿಯ ಪ್ರತಿ ಫ್ರೇಮ್ ನಲ್ಲೂ ಕೂಡ ಕೇವಲ ನಿರ್ದೇಶಕ ಮತ್ತು ನಿರ್ದೇಶಕ ಮಾತ್ರ ಕಾಣ್ತಾನೆ. ಇಲ್ಲಿ ನಿರ್ದೇಶಕನ ಕನಸಿದೆ. ಆತನ ಕಲ್ಪನೆ ಗರಿಗೆದರಿದೆ. ಆ ಕಲ್ಪನೆಗೆ ತಕ್ಕಹಾಗೆ ಅಂದು ನಿರ್ಮಾಪಕರು ಹಣ ಸುರಿದಿದ್ದಾರೆ, ಇಂದು ಹಣವನ್ನ ಬಾಚುತ್ತಿದ್ದಾರೆ. ಒಂದೊಂದು ದೃಶ್ಯದಲ್ಲೂ ನಿರ್ದೇಶಕನ ಶ್ರಮ ಎದ್ದು ಕಾಣುತ್ತೆ. ಅದಕ್ಕೆ ತಕ್ಕ ಹಾಗೆ ಹೈಪ್ ಸಿಕ್ಕಿದೆ. ಇಲ್ಲಿ ನಟರು ಕೇವಲ ನಟರಾಗಿದ್ದಾರೆ. ಯಾವ ನಟರ ಬಾಯಲ್ಲು ಅವರ ವೈಕ್ತಿಕ ಹೆಗ್ಗಳಿಕೆ, ಅವರ ಕುಟುಂಬದ ಹಿಸ್ಟರಿ, ಆಯಾ ನಟರ ಪ್ರತಿಸ್ಪರ್ಧಿಗಳ ಹೀಯಾಳಿಸುವಿಕೆ, “ನಾನು ಕೆಮ್ಮಿದರೆ ಉಳಿದವರಿಗೆಲ್ಲ ಜ್ವರ” ಅನ್ನೋವಂಥ ಪಂಚಿಂಗ್ ಡೈಲಾಗ್‍ಗಳು ಅರೆ ಕ್ಷಣ ಕೂಡ ನಮಗೆ ಕೇಳುವುದಿಲ್ಲ. ಇಲ್ಲಿ ಸಿನಿಮಾ ಕೇವಲ ಸಿನಿಮಾವಾಗಿದೆ. ಯಾರದ್ದೂ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿಲ್ಲ. ಈ ಚಿತ್ರ ಯಾವುದೇ ಒಂದು ಭಾಷೆಗೆ, ಯಾವುದೋ ಒಂದು ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ಹೀಗಾಗಿಯೇ ತೆಲುಗು, ತಮಿಳು, ಮಲಯಾಳಂ ಅವತರಿಣಿಕೆಯ ಚಿತ್ರ ಎಲ್ಲೆಡೆ ಧೂಳೆಬ್ಬಿಸ್ತಾ ಇದ್ರೆ, ಹಿಂದಿ ಅವತರಿಣಿಗೆ ಬಾಲಿವುಡ್ ತಲೆ ತಿರುಗಿ ಬೀಳುವಂತೆ ಮಾಡಿ ಮುನ್ನುಗ್ತಾ ಇದೆ. ಕರ್ನಾಟಕದ್ದೇ ಉದಾಹರಣೆ ತೆಗೆದುಕೊಳ್ಳುವುದಾದರೆ ಕೊಡವ ಭಾಷೆಯ ಪ್ರಾಬಲ್ಯವಿರುವ ಕೊಡಗು ಜಿಲ್ಲೆ, ತುಳು ಭಾಷೆಯ ಪ್ರಾಬಲ್ಯದ ದಕ್ಷಿಣ ಕನ್ನಡ, ಕೊಂಕಣಿ ಪ್ರಾಬಲ್ಯದ ಉತ್ತರ ಕನ್ನಡ, ತಮಿಳು-ತೆಲುಗು ಪ್ರಭಾವವಿರುವ ಗಡಿನಾಡು, ಅಚ್ಚಕನ್ನಡದ ಪ್ರಭಾವದ ಮಧ್ಯಕರ್ನಾಟಕ, ಮಿನಿ ಇಂಡಿಯಾ ಬೆಂಗಳೂರು… ಎಲ್ಲೆಡೆಯೂ ಬಾಹುಬಲಿ-2 ಬಾಕ್ಸ್ ಆಫೀಸ್ ಅನ್ನ ಕೊಳ್ಳೆಹೊಡೆದಿದೆ…
ಆದ್ರೆ ಶ್ರೀಮಂತ ಹಿಸ್ಟರಿ, ದೀರ್ಘ ಅನುಭವ, ಎಣೆ ಇಲ್ಲದ ಪ್ರತಿಭೆ ಹೇಗೆ ನೋಡಿದ್ರೂ ಸಕ್ಷಮವಾಗಿರೋ ಕನ್ನಡ ಚಿತ್ರರಂಗ ಮಾತ್ರ, ತನ್ನ ಸಾಮರ್ಥ್ಯ ಮರೆತು ಕೆಲವರ ಒಣ ಪ್ರತಿಷ್ಠೆಯ ಹರಕೆಯ ಕುರಿ ಆಗಿ ಕುಳಿತಿದೆ. ಯಾವುದೇ ಮಾಡರ್ನ್ ಟೆಕ್ನಾಲಜಿ ಕೂಡ ಇಲ್ಲದ ಕಾಲದಲ್ಲಿಯೇ ಡಾ. ರಾಜ್ ಕುಮಾರ್ ದ್ವಿಪಾತ್ರ ಅಭಿನಯದ ಬಬ್ರುವಾಹನದಂತ ಟೆಕ್ನಿಕಲಿ ಸೌಂಡ್ ಆಗಿದ್ದಂಥ ಚಿತ್ರ ನೀಡಿದ್ದ ಕನ್ನಡ ಚಿತ್ರರಂಗ ಇಂದು ಬಡವಾಗುತ್ತಲೇ ಹೋಗುತ್ತಿದೆ. ಅಲ್ಲೊಂದು ಇಲ್ಲೊಂದು ಬೆಳ್ಳಿಕಿರಣದಂಥ ಚಿತ್ರಗಳನ್ನ ಬಿಟ್ಟರೆ ಬಹುತೇಕ ಚಿತ್ರಗಳು ಬಂದ ದಾರಿಗೆ ಸುಂಕವಿಲ್ಲದಂತೆ ಕದ ಮುಚ್ಚಿಕೊಂಡು ಹೊರಡ್ತಾ ಇವೆ. ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾಗಿದ್ದ ಚಿತ್ರರಂಗವನ್ನು ಕೇವಲ, ಕೆಲವು ಜಿಲ್ಲೆಗಳಿಗೆ ಸೀಮಿತಗೊಳಿಸಲಾಗ್ತಿದೆ. ಡಬ್ಬಿಂಗ್ ಚಿತ್ರಗಳು ಬಂದರೆ ಕನ್ನಡ ಸಂಸ್ಕೃತಿ ನಶಿಸುತ್ತೆ ಅಂತಾ ಅಬ್ಬರಿಸಿ ಬೊಬ್ಬಿರಿಯುವ ಮಂದಿ, ಕನ್ನಡ ಚಿತ್ರಗಳಲ್ಲಿ ಅದೆಷ್ಟರ ಮಟ್ಟಿಗೆ ಕನ್ನಡ ಸಂಸ್ಕೃತಿಯನ್ನ ಎತ್ತಿಹಿಡಿಯಲಾಗುತ್ತಿದೆ ಅಂತಾ ತಿಳಿಸಬೇಕಿದೆ. ಅದಕ್ಕೂ ಮೊದಲು ಮಚ್ಚು, ಕೊಚ್ಚು, ರಕ್ತ, ಸ್ಪಷ್ಟತೆಯಿಲ್ಲದ ಭಾಷಾ ಪ್ರಯೋಗ ಇದೇನಾ ಕನ್ನಡ ಸಂಸ್ಕೃತಿ? ಅನ್ನೋದನ್ನು ಸ್ಪಷ್ಟ ಪಡಿಸಬೇಕಿದೆ. ಕರ್ನಾಟಕದಲ್ಲಿಯೇ ಕನ್ನಡ ಚಿತ್ರಗಳು ಅನಾಥವಾಗುತ್ತಿರುವುದಕ್ಕೆ ಕಾರಣ ಯಾರು? ಕರ್ನಾಟಕ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಕೀರ್ತಿಗೆ ಇಂದು ಕನ್ನಡ ಅವತರಣಿಗೆ ಇಲ್ಲದೆಯೂ ಬಾಹುಬಲಿ-2 ಚಿತ್ರ ಪಾತ್ರವಾಗಿದೆ. ಇದಕ್ಕೆ ಏನು ಕಾರಣ? ಇಂದು ಬೆಂಗಳೂರು ವಿಶ್ವಮಟ್ಟದಲ್ಲಿ ಗುರ್ತಿಸಿಕೊಂಡಿದ್ದರೂ, ಕನ್ನಡ ಚಿತ್ರರಂಗ ಹಿಂದುಳಿದಿದ್ದಕ್ಕೆ ಯಾರು ಕಾರಣ? ಇಂದು ಕನ್ನಡದಲ್ಲಿ ಹಲವು ಹೊಸ ಪ್ರತಿಭೆಗಳು ವಿಭಿನ್ನ ಚಿತ್ರಗಳನ್ನು ನೀಡಿ, ಗೆದ್ದು ತೋರಿಸಿದ್ದರೂ ಯಾವೊಬ್ಬ ದೊಡ್ಡ ನಿರ್ಮಾಪಕರು ಕೂಡ ಅವರ ಬೆನ್ನಿಗೆ ನಿಲ್ಲದೇ, ಮತ್ತದೇ ಹಳೆ ಸೂತ್ರಗಳಿಗೆ ಜೋತು ಬಿದ್ದು ಸಾಧಿಸಿದ್ದಾದರೂ ಏನು? ರಿಮೇಕ್ ಎಂಜಲನ್ನು ಇನ್ನೆಷ್ಟು ದಿನ ಉಣಿಸುತ್ತೀರಿ? ತೆಲುಗರು ಬಾಹುಬಲಿ ಮಾಡ್ತಾರೆ, ತಮಿಳರು ರೋಬೋ ಚಿತ್ರ ಮಾಡ್ತಾರೆ ಆದ್ರೆ ಕನ್ನಡಿಗರು ‘ಬಂದ್” ಮಾಡ್ತಾರೆ… ಅನ್ನೋ ಹೀಯಾಳಿಸುವಿಕೆಗೆ ಇನ್ನೆಷ್ಟು ದಿನ ಕನ್ನಡಿಗರನ್ನು ಈಡು ಮಾಡ್ತೀರಾ? ಈ ಪ್ರಶ್ನೆಗಳಿಗೆ ಇಂದು ಕನ್ನಡ ಚಿತ್ರರಂಗ ಉತ್ತರಿಸಲೇಬೇಕಿದೆ.
ಹಾಗಂತ ಕನ್ನಡದಲ್ಲಿ ಬಾಹುಬಲಿಯಂತ ಪ್ರಯೋಗ ಸಾಧ್ಯವಿಲ್ಲ ಅಂತಲ್ಲ. ಆದ್ರೆ ಅದಕ್ಕೂ ಮೊದಲು ಕೆಲವರ ಸ್ವಾರ್ಥ, ಕೆಲವರ ಒಣ ಪ್ರತಿಷ್ಠೆಯ ‘ಬಲಿ’ ಬೀಳಬೇಕಿದೆ. ಅಲ್ಲದೇ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು, ವಿತರಕರು, ಚಿತ್ರಪ್ರದರ್ಶಕರು COLLECTIVE RESPONSIBILITY ತೆಗೆದುಕೊಂಡು ಮೈ ಕೊಡವಿ ನಿಲ್ಲಬೇಕಿದೆ. ಹಾಗೆ ನಿಂತಿದ್ದೇ ಆದರೆ, ಕನ್ನಡ ಚಿತ್ರರಂಗ ಮತ್ತೆ ತನ್ನ ಗತವೈಭವಕ್ಕೆ ಮರಳೋದ್ರಲ್ಲಿ ಎಳ್ಳುಕಾಳಿನಷ್ಟು ಸಂಶಯವಿಲ್ಲ. ಇದಕ್ಕೆ ಮಲಯಾಳಂ ಚಿತ್ರರಂಗ ಇಂದು ನಮ್ಮ ಕಣ್ಣಮುಂದೆ ಜೀವಂತ ಉದಾಹರಣೆಯಾಗಿ ನಿಂತಿದೆ. ಹಾಗೆ ಆಗಿದ್ದೇ ಆದ್ರೆ ಇಂದು ಮೋಸ್ಟ್ ಪವರ್ ಫುಲ್ ಆಗಿರೋ ಸಾಫ್ಟ್ ಪವರ್ ಚಲನಚಿತ್ರಗಳು ಅಂದು ವಿಜಯ ನಗರ ಸಾಮ್ರಾಜ್ಯ ಲಗ್ಗೆ ಇಟ್ಟಂತೆ, ಇಂದು ಕನ್ನಡ ಚಿತ್ರರಂಗ, ಕನ್ನಡ ಸಂಸ್ಕೃತಿ ಉತ್ತರ ಭಾರತಕ್ಕೂ ಲಗ್ಗೆ ಇಡಲು ಸಾಧ್ಯವಿದೆ. ಇದು ನನ್ನಂಥ ಎಷ್ಟೋ ಸಾಮಾನ್ಯ ಕನ್ನಡಿಗನ ಕನಸು… ಕನ್ನಡ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ನೋಡ್ತಾ ಇಲ್ಲ ಅಂತಾ ದೂರೋದಲ್ಲ, ಕನ್ನಡ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ನೋಡಲೇಬೇಕು.. ಅಂಥ ಚಿತ್ರಗಳನ್ನು ನೀಡ್ತೇವೆ ಅಂತಾ ಸವಾಲು ಹಾಕೋದು ಇಂದಿನ ಜರೂರತ್ತು…
-ರಾಘವೇಂದ್ರ ಗುಡಿ
Comments
ಉ: ನಮ್ಮಲ್ಲಿ ಯಾಕೆ ಬರ್ತಿಲ್ಲ ಬಾಹುಬಲಿಯಂಥ ಚಿತ್ರಗಳು..?
ನೀವ್ ಹೇಳಿದ ಬಬ್ರುವಾಹನ -ರಣಧೀರ ಕಂಠೀರವ ಇತ್ಯಾದಿ ಮುಂದೆ ಈಗಿನ ನವ ನವೀನ ತಂತ್ರಜ್ಞಾನದ ಸಿನೆಮಾಗಳೂ ಬಹು ಹಿಂದೆ.. ನಮ್ಮಲ್ಲಿ ಇನ್ನೂ ಅದೇ ಮಚ್ಚು -ಕೊಚ್ಚು-ಪ್ರೀತಿ ಪ್ರೇಮ ಇತ್ಯಾದಿ..ಭರವಸೆ ಎಂದ್ರೆ ಯುವ ನಿರ್ದೇಶಕರು ಸಂತೋಷ್ ಆನಂದ್ ರಾಮ ಇತ್ಯಾದಿ ಪ್ರತಿಭೆಗಳು.. ನಮ್ಮಲ್ಲೂ ಒಳ್ಳೆ ಹಣವಂತ ಗುಣವಂತ ನಿರ್ಮಾಪಕರು ಕಾಸು ಬಿಚ್ಚಲು ತಯಾರಿದ್ದು ಸ್ಕ್ರಿಪ್ಟ್ ನಿರ್ದೇಶಕರ ಮೇಲೆ ನಂಬಿಕೆ ಇಟ್ರೆ ಖಂಡಿತ ಈ ತರಹ ನಾವೂ ಸಿನೆಮಾ ತೆಗ್ದು ತೋರಿಸಬಹುದು...
ಶುಭವಾಗಲಿ..
ಸಪ್ತಗಿರಿವಾಸಿ.