ನಮ್ಮೂರಿನ ಪೋಸ್ಟಾಫೀಸ್ ನಲ್ಲೊಂದು ದುಃಖದ ಪ್ರಸಂಗ :(

ನಮ್ಮೂರಿನ ಪೋಸ್ಟಾಫೀಸ್ ನಲ್ಲೊಂದು ದುಃಖದ ಪ್ರಸಂಗ :(

ಜಾಗತೀಕ ಹಿಂಜರಿತದಿಂದ ನಾನು ಕೆಲಸ ಮಾಡೋ ಕಂಪನಿಯಲ್ಲೂ ಹತ್ತು ದಿನ ರಜೆ ಕೊಟ್ಟಿದ್ರು. ತುಂಬಾ ದಿನದಿಂದ ಊರಿಗೆ ಹೋಗದೆ ಇದ್ದ ನಾನು, ಇದೇ ಅವಕಾಶಾ ಬಳಸ್ಕೊಂಡು ಕೆಲ ಮಟ್ಟಿಗೆ ಕರ್ನಾಟಕ ಸುತ್ತಿದೆ. ಎಲ್ಲ ಕಡೆ ಮುಖ್ಯವಾಗಿ ಗಮನಿಸಿದ್ದೆನೆಂದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಸಣ್ಣ ಸಣ್ಣ ಊರಲ್ಲೂ ಹಿಂದಿ ಹೇರಿಕೆಯ ನಿರಂತರ ಪ್ರಯತ್ನ ನಡಿತಾ ಇದೆ. ಮೊನ್ನೆ ದಿನ ಊರಲ್ಲಿ ಅಪ್ಪನ ಜೊತೆ ನನ್ನೂರು ಕಲಘಟಗಿಯ ( ಧಾರವಾಡ ಜಿಲ್ಲೆಯಲ್ಲಿದೆ) ಅಂಚೆ ಕಛೇರಿಗೆ ಹೋಗಿದ್ದೆ. ನಮ್ಮಮ್ಮ ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಚಿಕ್ಕದೊಂದು ಹೂಡಿಕೆ ಮಾಡಿದ್ದಾಳೆ. ಆಕೆಗೆ ಹುಶಾರಿಲ್ಲದ ಕಾರಣ ನಾನು, ಅಪ್ಪ ಒಂದು ಡಿಪಾಸಿಟ್ ಮಾಡೋಕೆ ಅಂತ ಹೋಗಿದ್ವಿ. ಅಲ್ಲಿ ನೋಡಿದ ಒಂದು ದೃಶ್ಯದಿಂದ ನಿಜಕ್ಕೂ ಅವಕ್ಕಾದೆ !

ನಾನು ಹಣ ಡಿಪಾಸಿಟ್ ಮಾಡೋಕೆ ಅರ್ಜಿ ಹುಡುಕುತ್ತಾ ಇದ್ದೆ. ಅಷ್ಟರಲ್ಲಿ ಒಬ್ಬ ಮಧ್ಯ ವಯಸ್ಸಿನ ಹಳ್ಳಿಯ ಹೆಣ್ಣು ಮಗಳು ಬಂದು " ಅಣ್ಣಾರೆ, ಈ ಫಾರಮ್ ಸ್ವಲ್ಪ ತುಂಬಿಸಿ ಕೊಡ್ರಿ " ಅಂದ್ರು. ನಾನು ಅಕ್ಷರ ಕಲಿತಿಲ್ಲವೇನೋ ಅಂದುಕೊಂಡು ಆಕೆಯ ಅರ್ಜಿ ಇಸಿದುಕೊಳ್ಳಲು ಹೋದೆ, ಆ ಕ್ಷಣ ಕಂಡದ್ದು ಆಕೆಯ ಇನ್ನೊಂದು ಕೈಯಲ್ಲಿ ಆವತ್ತಿನ ಕನ್ನಡ ಪ್ರಭ ಪತ್ರಿಕೆ. ಅದನ್ನು ನೋಡಿ, ಆಶ್ಚರ್ಯಗೊಂಡು ನಾನು ಕೇಳಿದೆ " ಅಲ್ರಿ ಅಕ್ಕಾರೆ, ನಿಮಗೆ ಓದಾಕ್ ಬಂದ್ರೂ ನನ್ನ ಕಡೆ ಏದಕ್ ತುಂಬಸಾಕ್ ಕೊಟ್ರಿ ಅರ್ಜಿ?"  ಅಂತ, ಅದಕ್ಕೆ ಆಕೆ ಉತ್ತರಿಸಿದ್ದು, " ನಾನು ಐದನೆತ್ತ ತಂಕ ಶಾಲಿಗೆ ಹೋಗೆನ್ರಿ.  ನನಗ್ ಓದಾಕ್, ಬರೆಯಾಕ್ ಎರಡು ಬರತೆತ್ರಿ.. ಆದ್ರ ಬರೇ ಕನ್ನಡ ಒಂದಾ ರೀ,, ಆದ್ರ ಇಲ್ಲಿ ಅರ್ಜಿ ಇಂಗ್ಲೀಶ್ ಬಿಟ್ರ ಹಿಂದಿದಾಗ್ ಐತ್ರಿ, ಹಿಂಗಾಗಿ ನಿಮ್ಮ ಕಡೆ ತುಂಬಸಾಕ ಕೊಟ್ಟೆ ರೀ" ಎಂದು ಹಿಂದಿ, ಇಂಗ್ಲಿಷ್ ಕಲಿಯದೇ ಜೀವನದಲ್ಲೆನೋ ದೊಡ್ಡ ತಪ್ಪು ಮಾಡಿದೆ ಅನ್ನುವಂತ ಮುಖಭಾವ ತೋರಿಸಿದರು

( ಜೊತೆಗಿರುವ ಚಿತ್ರ ನೋಡಿ, ಆ ಅರ್ಜಿಯ ಪ್ರತಿಯೊಂದನ್ನು ಹಾಕಿರುವೆ). ಧಾರವಾಡ ಜಿಲ್ಲೆಯ, ಅತ್ತ ಮಲೆನಾಡು ಅಲ್ಲದ, ಇತ್ತ ಬಯಲುಸೀಮೆಯಲ್ಲದ ಊರು ಕಲಘಟಗಿ. ವರ್ಷಕೊಮ್ಮೆ ಬರುವ ಮಳೆರಾಯನ ಮೇಲೆ ಇಲ್ಲಿನ ಜನ ಜೀವನ ನಿಂತಿದೆ. ಇಂತ ಅಚ್ಚ ಕನ್ನಡದ ಊರಲ್ಲಿ, ಕನ್ನಡತಿಯೊಬ್ಬಳಿಗೆ, ಅಲ್ಲೆಲ್ಲೋ 2000 ಕಿ.ಮೀ ದೂರದಲ್ಲಿ ಮಾತಾಡೋ ಹಿಂದಿ ಭಾಷೆ ಕಲಿಯಬೇಕು ಅನ್ನುವ ಅನಿವಾರ್ಯತೆ ತಂದಿರುವ ನಮ್ಮ ಒಕ್ಕೂಟ ವ್ಯವಸ್ಥೆ ಬಗ್ಗೆ ಎಲ್ಲಿಲ್ಲದ ಸಿಟ್ಟು ಬಂತು ಗೆಳೆಯರೇ.

ಆ ತಕ್ಷಣ ಅಲ್ಲಿಯ ಅಂಚೆ ಕಛೇರಿಯ ಪ್ರಧಾನ ಅಧಿಕಾರಿಯನ್ನು ಕಾಣಲು ಹೋದೆ. ಅವರಿಗೆ ಅಲ್ಲೇ ಇದ್ದ ಅರ್ಜಿಯನ್ನು ತೋರಿಸಿ, ಇದು ಯಾಕೆ ಕನ್ನಡದಲ್ಲಿಲ್ಲ ?? ಇಲ್ಲಿ ಅದ್ಯಾವ ಹಿಂದಿಯವನು ಬರ್ತಾನೆ ಅಂತ ಹಿಂದಿಯಲ್ಲಿ ತಂದಿದೆ ನಿಮ್ಮ ಇಲಾಖೆ? ನಿಮ್ಮ ಇಲಾಖೆಯ ಇಂತಹ ಧೋರಣೆಗಳಿಂದ ಕನ್ನಡಿಗನಿಗೆ ತನ್ನ ನೆಲದಲ್ಲೇ ಕನ್ನಡ, ಯಾವ ಕೆಲಸಕ್ಕೆ ಬಾರದ ಭಾಷೆ ಅಂತ ಸಾಧಿಸೋದು ನಿಮ್ಮ ಉದ್ದೇಶಾನಾ? ಅಂತ ಸ್ವಲ್ಪ ಜೋರಾಗೇ ಬಾಯಿ ಮಾಡಿದೆ. ಅದಕ್ಕೆ ಅಲ್ಲಿಯ ಅಧಿಕಾರಿ ಕೇಳಿದ ಪ್ರಶ್ನೆ ಇನ್ನೂ ವಿಚಿತ್ರವಾಗಿತ್ತು. ಆತ ಹೇಳಿದ್ದು, " ಅಲ್ರೀ ಸರ್ರ್,, ಬ್ಯಾಂಕು, ಫೈನಾನ್ಸು ಇಂತಾ ಕಡೆಯಲ್ಲ ವ್ಯವಹಾರ್ ಮಾಡಬೇಕ್ ಅಂದ್ರ ಹಿಂದಿ/ ಇಂಗ್ಲೀಷ್ ಕಲಿಬೇಕ್ರಿ, ಕಲತಿಲ್ಲ ಅಂದ್ರ ಅದಕ್ಕ ನಾವೇನ್ ಮಾಡಾಕ ಆಗತೇತ್ರಿ ? ನಮಗ ಮ್ಯಾಲಿಂದ ಆರ್ಡರ್ ಐತ್ರಿ, ಎಲ್ಲ ವ್ಯವಹಾರ, ಅರ್ಜಿಗೋಳು ಇಂಗ್ಲೀಷ ಬಿಟ್ರ ಹಿಂದಿದಾಗ್ ಇರಬೇಕು ಅಂತ. ಶಾಲಿನಾಗ್ ಹಿಂದಿ ಕಲಸುದ್ ಇಂತಲ್ಲೆಲ್ಲ ಉಪಯೋಗಕ್ಕ ಬರಲಿ ಅಂತ, ಆ ಹೆಣ್ ಮಗಳು ಐದನ್ನೆತ ಕಲತಿದ್ರ ನಾವೇನ್ ಮಾಡಾಕ್ ಆಗತೇತ್ರಿ?. ಬೇಕಿದ್ರ ಧಾರವಾಡದ ಹೆಡ್ಡಾಫೀಸಿಗೆ ಒಂದು ಕಂಪ್ಲೇಂಟ್ ಬರೀರಿ " ಎನ್ನುವ ಉಡಾಫೆಯ ಉತ್ತರ ಕೊಟ್ಟ. ಆ ಹೆಣ್ಣು ಮಗಳು ಅವಳಿಂದಾಗಿ ಇಷ್ಟೆಲ್ಲ ಗಲಾಟೆ ಆಯ್ತು ಅನ್ನುವ ಹಾಗೇ ತನ್ನ ನೆಲದಲ್ಲೇ, ತನ್ನದಲ್ಲದ ಭಾಷೆಯೊಂದನ್ನು ಕಲಿಯದ ಒಂದೇ ಕಾರಣಕ್ಕೆ ತಪ್ಪಿತಸ್ಥ ಭಾವದಲ್ಲಿ ನಿಂತಿದ್ದನ್ನು ನೋಡಿ ಹೇಳಲಾರದಷ್ಟು ಸಂಕಟವಾಯ್ತು :( .

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನುವ ಮಾತನ್ನು ಬದಲಾಯಿಸಿ, ಹೆಣ್ಣೊಂದು ಹಿಂದಿ ಕಲಿತರೆ, ಕರ್ನಾಟಕದಲ್ಲಿ ವ್ಯವಹರಿಸೋಕೆ ಅರ್ಹಳು ಅಂತ ಬದಲಾಯಿಸಬೇಕೆನೋ. ಶಿಕ್ಷಣ, ಮನರಂಜನೆ, ದಿನ ನಿತ್ಯದ ವ್ಯವಹಾರದಲ್ಲಿ, ಹೀಗೆ ಹಿಂದಿ ಹೇರಿಕೆ ಮುಂದುವರೆಯಲು ಬಿಟ್ರೆ, ಕನ್ನಡ ಅಡುಗೆಮನೆ, ಬಚ್ಚಲುಮನೆ ಭಾಷೆ ಆಗಿ ಬದಲಾಗೋದ್ರಲ್ಲಿ ಎಳ್ಳಷ್ಟು ಅನುಮಾನವಿಲ್ಲ.

ಹಿಂದಿ ಹೇರಿಕೆಯ ಮೂಲಕ ಕನ್ನಡದಂತ ಭಾಷೆಯನ್ನು ಕಾಲ ಕಸವನ್ನಾಗಿ ಕಾಣುವ, ಆ ಮೂಲಕ ಇಲ್ಲದ ಒಗ್ಗಟ್ಟು ತರಲು ಪ್ರಯತ್ನಿಸುತ್ತಿರುವ ಭವ್ಯ ಭಾರತದ ವ್ಯವಸ್ಥೆಯನ್ನು ಎಷ್ಟು ಹೊಗಳಿದರೂ ಸಾಲದು ! ಏನಂತೀರಾ ಗೆಳೆಯರೇ ?

Rating
No votes yet

Comments