ನಮ್ಮ ಮೆಟ್ರೋ
ಅಂದು ದಿನದ ಕೆಲಸ ಮುಗಿಸಿ ಆಫೀಸಿನಿಂದ ಹೊರಡುವಷ್ಟರಲ್ಲಿ ರಾತ್ರಿ ೭ ಆಗಿಹೋಗಿತ್ತು. ಬೆಳಗ್ಗಿನಿಂದ ಸೈಕ್ಲೊನಿನ ತುಂತುರು ಬೇರೆ. ಆಫೀಸಿನಿಂದ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಬಿಡುವ ಗಾಡಿ ಅಂದು ೧೦ ನಿಮಿಷ ಹೆಚ್ಚು ತಗೊಂಡಿತ್ತು. ತಿಂಗಳ ಪಾಸ್ ಇದ್ದ ಕಾರಣ ನಾನು ಕೌನ್ಟರ್ ಕಡೆ ತಿರುಗೂ ನೋಡದೆ, ಬನಶಂಕರಿ ಕಡೆಗೆ ಹೋಗುವ ರೈಲಿಗೆ ಕಾದೆ. ೨ ನಿಮಿಷದಲ್ಲೇ ಬಂದ ರೈಲು ಹತ್ತಿ ಮನೆಗೆ ಫೋನ್ ಮಾಡಿ ತಿಳಿಸಿದೆ. ಸರಿಯಾಗಿ ೪೫ ನಿಮಿಷಗಳಲ್ಲಿ ರೈಲು ನನ್ನ ಮನೆಯ ರಸ್ತೆಯನ್ನು ಪ್ರವೇಶಿಸಿತು. ಬನಶಂಕರಿ ನಿಲ್ದಾಣದಿಂದ ೨೦೦ ಮೀಟರ್ ಮುಂಚೆ ಇರುವ ನನ್ನ ಮನೆಯ ಎರಡನೇ ಮಹಡಿಯ ಬಾಲ್ಕನಿಯಲ್ಲಿ ನನ್ನ ಮಗಳು ನನ್ನನ್ನು ರೈಲಿನೊಳಗೆಯೇ ನೋಡಿ, ಹಿಗ್ಗಿ ಒಳ ಓಡಿದಳು. ಮನೆಗೆ ಬಂದೆ. ಕೈಕಾಲು ತೋಳೆದು ಸಿದ್ಧವಾಗಿದ್ದ ಬಿಸಿ-ಬಿಸಿ ಅಕ್ಕಿ ತರಿ ಉಪ್ಪಿಟ್ಟು (ಜೊತೆಗೆ ಹುಣಿಸೇ ರಸ) ತಿನ್ನಲು ಕೂತೆ. ಅಷ್ಟರಲ್ಲಿ ಆಂಬುಲೆನ್ಸಿನ ಶಬ್ದಕ್ಕೆ ಬೆಚ್ಚಿ ಎಚ್ಚರವಾಯಿತು. ಎದ್ದು ನೋಡಿದರೆ, ನಾ ಕುಳಿತಿದ್ದು ಸೋಫಾ ಮೇಲೂ ಅಲ್ಲ, ನನ್ನ ಮುಂದೆ ಉಪ್ಪಿಟ್ಟೂ ಇರಲಿಲ್ಲ. ನಾ ಕೂತಿದ್ದು ಬಿ.ಟಿ.ಎಸ್. ಬಸ್ಸಿನ ಕಿರಿದಾದ ಸೀಟಿನ ಮೇಲೆ, ಮುಂದಿತ್ತು ತೊಡೆಯ ಮೇಲೆ ಆಫೀಸಿನ ಹೆಣ ಭಾರದ ಲ್ಯಾಪ್ಟಾಪ್! ಆಚೆ ನೋಡಿದೆ, ಘಂಟೆ ೭.೩೦ ಆದರೂ ಆಫೀಸಿನಿಂದ ೬.೩೦ಕ್ಕೆ ಹೊರೆಟ ಬಸ್ಸು ಇನ್ನು ರಿಚ್ಮಂಡ್ ರಸ್ತೆಯಲ್ಲೇ ಹೆಜ್ಜೆ ನಮಸ್ಕಾರ ಹಾಕುತಿತ್ತು. ಕನಸಿನಲ್ಲಿ ಉಪ್ಪಿಟ್ಟು ಕಂಡ ನನ್ನ ಹಸಿವು ಇನ್ನಷ್ಟು ಹೆಚ್ಚಿತ್ತು.
ಈ ತರಹದ ಕನಸುಗಳು ಹೊಸದೇನಲ್ಲ. ಎರಡು ವರ್ಷದ ಹಿಂದೆ ಗೊತ್ತಗಿತ್ತು ನನ್ನ ಮನೆಯ ಮುಂದೆಯೇ ಮೆಟ್ರೋ ಓಡಾಡುವುದೆಂದು. ಅಂದೇ ಬಸ್ಸನ್ನು ಬಿಟ್ಟು, ದಿನವೂ ಆಫೀಸಿಗೆ ಮೆಟ್ರೋದಲ್ಲಿ ಓಡಾಡುವ ಆಶಾಗೋಪುರ ಕಟ್ಟಿಕೊಂಡಿದ್ದೆ. ಅದರ ಪ್ರತಿಫಲವೇ ಆಗಾಗ ಬೀಳುವ ಈ ಕನಸುಗಳು. ಮನೆಯಿಂದ ಆಫೀಸಿಗೆ ೧೫ಕಿ.ಮಿ. ಜೊತೆಗೆ ವರ್ಷ-ವರ್ಷವು ಏರಿತ್ತಿರುವ ವಾಹನ ಸಂದಣಿ. ಈ ನಡುವೆಯಂತೂ ದಿನಕ್ಕೆ ೩ ಘಂಟೆಗಳು ಬಸ್ಸಿನಲ್ಲಿ ಕಳೆದುಹೋಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಹೇಗೆ? ಆಫೀಸು ಮನೆಯ ಬಳಿ ಬಾರದು. ಇನ್ನು ಮನೆಯನ್ನು ಆಫೀಸಿನ ಬಳಿ ಮಾಡಲು ಯೋಚಿಸಿದರೇ ಸಾಕು ಮೈ ನಡುಗುತ್ತದೆ. ಚಿಕ್ಕ ವಯಸ್ಸಿನಿಂದ ಬೆಳೆದ ವಾತಾವರಣ ಜನರನ್ನು ಬಿಟ್ಟು, ಕರ್ನಾಟಕವೆಂದೇ ತೋರದ ಆಫೀಸಿನ ಬಳಿ ಇರುವ ಬಡಾವಣೆಗೆ ಹೊಗಿ ಬದುಕಲು ಸಾಧ್ಯವೇ? ನಮ್ಮಮ್ಮನಿಗೇ ಅಲ್ಲಿ ಗೌರಿ ಪೂಜೆ ಅರಿಶಿನ ಕುಂಕುಮ ಕೊಡಲು ನಮ್ಮ ಜನರು ಸಿಗಿವುದೇ ಇಲ್ಲ ವೆಂಬ ಯೋಚನೆ, ಚಿಂತೆ... ಈ ರೀತಿಯ ತ್ರಿಶಂಕುವಿನಲ್ಲಿ ಸಿಲುಕಿರುವ ನನ್ನಂಥವರಿಗೆ ಆಶಾಕಿರಣವಾಯಿತು "ನಮ್ಮ ಮೆಟ್ರೋ".
ನನ್ನ ಮನೆಯ ಮುಂದೆ ಮೆಟ್ರೋ ಕಾಮಗಾರಿ ಶುರುವಾಗಿ ಈಗ ಒಂದೂವರೆ ವರ್ಷವಾಯಿತು. ಅದರಿಂದ ನಮಗೆ ಆಗಿರುವ ಅನಾನುಕೂಲಗಳು ಒಂದೇ ಎರಡೇ? ಮೊದಲು ರಸ್ತೆ ವಿಸ್ತರಿಸಲು ಮನೆಯ ಮುಂದಿದ್ದ ಫುಟ್ಪಾತ್ ಕಬಳಿಸಿದರು. ಈಗ ಮನೆಯ ಮುಂದೆ ಕಾರು ನಿಲ್ಲಿಸುವುದು ಅಸಾಧ್ಯವಾಗಿದೆ. ನಂತರ ಕಾಮಗಾರಿಯಿಂದ ಆದ ಶಬ್ದ, ಧೂಳಿಗೆ ಹೆದರಿ , ನಮ್ಮ ಮನೆಯಲ್ಲಿ ಬಾಡಿಗೆಗಿದ್ದವರು, ಬಿಟ್ಟು ಹೊರೆಟುಹೋದರು. ಮತ್ತೊಬ್ಬರನ್ನು ಹುಡುಕಲು ನಾ ಪಟ್ಟ ಪಾಡು ಅಷ್ಟಿಷ್ಟಲ್ಲ. ಮೆಟ್ರೋ ನಿರ್ಮಾಣಕ್ಕೆ ಬಳಸುವ ಆ ಬೃಹದ್ಯಂತ್ರಗಳು ಮಾಡುವ ಭೂಕಂಪನದಿಂದ ನೀರು ಸರಬರಾಜಿನ ಪೈಪುಗಳು ಒಡೆದು ಹೋದವು. ಮತ್ತೆ ಕಾವೇರಮ್ಮನ ಕೃಪೆ ಒಲಿಸಿಕೊಳ್ಳಲು ೬ ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು. ಇನ್ನು ಆಗ ಈಗ ದೂರವಾಣಿ ಕಡಿತವಂತು ಆಗುತ್ತಲೇ ಇವೆ. ಹಿರಿಯರು ಬೊಧಿಸುವ "ಕೈ ಕೆಸರಾದರೆ ಬಾಯಿ ಮೊಸರು" ನ್ನು ಧೃಢವಾಗಿ ನಂಬಿ, ಇಷ್ಟೆಲ್ಲಾ ಆದರೂ ಮುಂದೆ ಮೆಟ್ರೋವಿನಿಂದ ಆಗುವ ಅನುಕೂಲಗಳಿಗಾಗಿ ಕಾಯುತ್ತಿರುವೆ. ಮೆಟ್ರೋ ರೈಲಿನಿಂದ ನ್ಯೂಯೊರ್ಕ್, ಪ್ಯಾರಿಸ್, ದೆಹೆಲಿ ಮುಂತಾದ ಮಹಾನಗರಗಳಲ್ಲಿ ಓಡಾಟ ಸುಗಮವಾಗಿರುವುದು ನಾನು ಪ್ರತ್ಯಕ್ಷವಾಗಿ ಕಂಡಿರುವೆ, ಲಾಭವೂ ಪಡೆದಿರುವೆ. ಎಲ್ಲಿಂದೆಲ್ಲಿಗೂ ಶಬ್ದ ಹಾಗೂ ವಾಯು ಮಾಲಿನ್ಯವಿಲ್ಲದೆ ದುಬಾರಿಯಲ್ಲದ ದರಗಳಲ್ಲಿ, ಅನಾಯಾಸವಾಗಿ ಕರೆದೊಯ್ಯುವುದು. ಇದರಿಂದ ವಾಣಿಜ್ಯ, ಶಿಕ್ಷಣ, ಪ್ರವಾಸೋದ್ಯಮ ಮೊದಲಾಗಿ ಎಲ್ಲಾ ಕ್ಷೆತ್ರಗಳಿಗೂ ಹಾಗೂ ಬಡವ ಬಲ್ಲಿದರೆಂಬ ಭೆದವಿಲ್ಲದೆ ಎಲ್ಲ ಜನರಿಗೂ ಉಪಯೋಗವಾಗಿದೆ. ಈಡೀ ನಗರದ ಉತ್ಪಾದ್ಕತೆ ಹೆಚ್ಚಾಗಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಈ ಮೆಟ್ರೊ ಸೇವೆ ನಾಂದಿ ಹಾಡಿದೆ.
ಬೆಂಗಳೂರಿಗೂ ಇದರ ಅವಶ್ಯಕತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಎಂದೋ ನಿರ್ಮಾಣವಾಗಬೇಕಗಿದ್ದ ಮೆಟ್ರೋ ಇಂದಾದರೂ ಆಗುತ್ತಿದೆಯಲ್ಲ ಎನ್ನುವುದೇ ನಮಗೆ ಸಾಂತ್ವನದ ವಿಷಯ. ಇಡೀ ಬೆಂಗಳೂರಿಗೆ ಈ "ನಮ್ಮ ಮೆಟ್ರೋ"ವಿನ ಪ್ರಯಾಣ ಸುಖ ಶೀಘ್ರವೇ ದೊರೆಯುವ ನನ್ನ ಕನಸು ಕನ್ನಡಿಯೊಳಗಿನ ಗಂಟಾಗಿಯೇ ಉಳಿಯದೇ, ಸಕಾಲದಲ್ಲಿ ನನಸಾಗಲೆಂದು ನನ್ನ ದೇವರಲ್ಲಿ ಪ್ರಾರ್ಥಿಸುವೆ!
Comments
ಉ: ನಮ್ಮ ಮೆಟ್ರೋ
.".. ನನ್ನ ಮನೆಯ ಮುಂದೆ ಮೆಟ್ರೋ ಕಾಮಗಾರಿ ಶುರುವಾಗಿ ಈಗ ಒಂದೂವರೆ ವರ್ಷವಾಯಿತು."
ವಿಶ್ವೇಶ್ವರರೆ, ಮೆಟ್ರೋ ಕಾಮಗಾರಿ ನಡೆಯುವ ರಸ್ತೆಯಲ್ಲಿ ಹೋಗುವಾಗಲೇ ಸಾಕಾಗುವುದು. ಒಂದೂವರೆ ವರ್ಷ+?- ನಿಮ್ಮ ತೊಂದರೆಗಳನ್ನು ಸೌಮ್ಯರೂಪದಲ್ಲಿ ಹೇಳಿ ಮೆಟ್ರೋವನ್ನು ಸ್ವಾಗತಿಸಿದ್ದೀರಿ. ನಿಮಗೆ ಮನೆಯೆದುರಿನಿಂದಲೇ ಮೆಟ್ರೋ ಪ್ರಯಾಣ ಸುಖ ಆದಷ್ಟು ಬೇಗ ಸಿಗಲೆಂದು ಹಾರೈಸುವೆ.
-ಗಣೇಶ.
In reply to ಉ: ನಮ್ಮ ಮೆಟ್ರೋ by ಗಣೇಶ
ಉ: ನಮ್ಮ ಮೆಟ್ರೋ
<< ಮೆಟ್ರೋ ಕಾಮಗಾರಿ ನಡೆಯುವ ರಸ್ತೆಯಲ್ಲಿ ಹೋಗುವಾಗಲೇ ಸಾಕಾಗುವುದು. ಒಂದೂವರೆ ವರ್ಷ+? <<
ಗಜಗಮನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ.
ರಾಮೋ