ನಮ್ಮ ಒಳ್ಳೆತನ ಅತಿಯಾದಾಗ

ನಮ್ಮ ಒಳ್ಳೆತನ ಅತಿಯಾದಾಗ

ತುಂಬಾ ದಿನಗಳಿಂದ ನನ್ನ ತಲೆ ತಿನ್ನುತ್ತಿರುವ ಒಂದು ವಿಚಾರವನ್ನು ಸಂಪದಿಗರಿಗೆ ವರ್ಗಾಯಿಸಿ ಅವರ ಅಭಿಪ್ರಾಯವನ್ನು ಮಾನ್ಯ ಮಾಡಿ ನಾನು ಹಗುರವಾಗಬೇಕೆಂದು ಈ ಬರಹ.
ನಮ್ಮ ಕಿಟ್ಟಿ ರಿಟೈರ್ ಆಗಿ ನಾಲ್ಕು ವರ್ಷಗಳಾಯ್ತು. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ. ಯಾರದೂ ಮದುವೇನೂ ಅಗಿಲ್ಲ. ಮಗ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ ಅಂತಾ ತರ್ತೀದಾನೆ. ಅವರ ಮನೆಯಲ್ಲಿರಬೇಕಾದ ಜನರೆಷ್ಟು? ಗಂಡ ಹೆಂಡತಿ ಮೂರು ಮಕ್ಕಳು ಸೇರಿ ಐದು ಜನ. ಅಲ್ವಾ? ಅಲ್ಲ. ಅವರ ನಾಲ್ಕು ಚದರ ಮನೇಲಿ ಹತ್ತು ಜನ ಇದ್ದಾರೆ. ನೀವು ಊಹಿಸ ಬಹುದೇನೋ... ಅವರ ತಂದೆ, ತಾಯಿ ಅಣ್ಣತಮ್ಮಂದಿರು ಎಲ್ಲಾ ಜೊತೆಯಲ್ಲಿರಬಹುದೆಂದು. ಉಹೂ... ಅವರ್ಯಾರೂ ಅಲ್ಲ. ಅವನ ಜೊತೆಯಲ್ಲಿರುವವರು ಅವರ ಇಬ್ಬರುಅಕ್ಕಂದಿರು,ಭಾವ, ಅಕ್ಕನ ಮಗಳು ಮೊಮ್ಮಗಳು. ಅವರ ಅಕ್ಕಂದಿರ ಸಂಸಾರದಲ್ಲಿ ಅದೇನೋ ತಾಪತ್ರಯ.ಇರಲಿ. ನಮ್ಮ ಕಿಟ್ಟಿಯಾದರೂ ಸಮೃದ್ಧ ವಾಗಿದ್ದಾನೆಯೇ? ಅದೂ ಇಲ್ಲ. ಊರ ಮಂದಿ ಹತ್ತಿರವೆಲ್ಲಾ ಮೈತುಂಬಾ ಸಾಲ. ಅಷ್ಟು ದೊಡ್ದ ಸಂಸಾರ ಹೊರೆಯ ಬೇಕಲ್ಲಾ!!

ಇನ್ನು ಎರಡನೆಯ ಉಧಾಹರಣೆ. ಶಂಕರ ತನ್ನ ಪತ್ನಿ ಇಬ್ಬರು ಮಕ್ಕಳೊಡನೆ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿ ಒಬ್ಬರಿಗೆ ಕೆಟ್ಟವನೆನಿಸದೆ ತನ್ನ ಪಾಡಿಗೆ ತಾನು ಬದುಕುತ್ತಿರುವ ಹೈಸ್ಕೂಲು ಶಿಕ್ಷಕ. ಅವರಪ್ಪ-ಅಮ್ಮ ಹಾಗೂ ಅತ್ತೆ-ಮಾವ ಕೂಡ ಇವರ ಮನೆಯಲ್ಲೇ ವಾಸ. ಇವರ ಮಾವ ನಿವೃತ್ತ ಉದ್ಯೋಗಿ.ಅವರಿಗೆ ನಾಲ್ಕು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಎಲ್ಲರೂ ಚೆನ್ನಾಗಿಯೇ ಬೆಂಗಳೂರು, ಮೈಸೂರುಗಳಲ್ಲಿ ಇದ್ದಾರೆ. ಆದರೆ ಇವರು ಮಾತ್ರ ಅಳಿಯನ ಮನೆಯಲ್ಲಿಯೇ ಬಹುಪಾಲು ಜೀವನ.ಜೊತೆಗೆ ಒಮ್ಮೊಮ್ಮೆ ಅಪ್ಪ-ಅಮ್ಮ ಹುಷಾರು ತಪ್ಪಿದರೆ ಅವರನ್ನು ಯಾವುದಾದರೂ ಆಸ್ಪತ್ರೆಗೆ ಸೇರಿಸ ಬೇಕಾಗುತ್ತೆ. ಅದೇ ವೇಳೆ ಅವರ ಮಾವನಿಗೂ ಆರೋಗ್ಯ ಕೆಟ್ಟಿದ್ದುಂಟು. ಇಂತಹಾ ಸಂದರ್ಭ ಗಳಲ್ಲಿ ಶಂಕರನ ಗೋಳು ನೋಡ ಬೇಕು! ಹೆಂಡತಿಯದು ಒಂದು ನರ್ಸಿಂಗ್ ಹೋಂ ಡ್ಯೂಟಿಯಾದರೆ ಶಂಕರನದು ಇನ್ನೊಂದು ನರ್ಸಿಂಗ್ ಹೋಮ್ ಡ್ಯೂಟಿ.
ಇಂತಹ ಸಂದರ್ಭ ನೋಡಿದಾಗಲೆಲ್ಲಾ ಶಂಕರನ ಬಗ್ಗೆ ಅಯ್ಯೋ ಎನಿಸುತ್ತೆ. " ಅಲ್ಲಾ ಶಂಕರ ನೀನು ನಿಮ್ಮ ಅಪ್ಪ-ಅಮ್ಮ ನನ್ನೇನೋ ಇಟ್ಟುಕೊಂಡಿದ್ದೀಯಾ, ಸರಿ. ಅತ್ತೆ-ಮಾವ ಏಕೆ? ಅವರಿಗೆ ಗಂಡು ಮಕ್ಕಳಿಲ್ಲವೇ?"
- ಏನು ಮಾಡಲೀ ಶ್ರೀಧರ, ಆ ಮಕ್ಕಳು ಅವರ ಪಾಡಿಗೆ ಅವರಿಗೆ ಸಂಬಂಧವೇ ಇಲ್ಲದಂತೆ ಇದ್ದಾರೆ.
- ಅಲ್ವೋ ನಿನಗೆಂತಾ ಹುಚ್ಚೋ? ಅವರೆಲ್ಲಾ ಆರಾಮವಾಗಿ ದೊಡ್ದ ದೊಡ್ದ ಮನೆಕಟ್ಟಿಕೊಂಡು ಕಾರ್ ಇಟ್ಟುಕೊಂಡು ಸುಖವಾಗಿದ್ದಾರೆ ಅಂತೀಯಾ! ಇವರನ್ನು ನೀನು ಇಟ್ಟುಕೊಂಡಿದ್ದೀಯಲ್ಲೋ?
-ಅವರಿಗೆ ಮಗಳು ಮನೆ ಅಂದ್ರೇನೇ ಇಷ್ಟಾ, ಏನು ಮಾಡಲೀ?

ಇಂತಾ ಪ್ರಸಂಗಗಳನ್ನು ನೀವು ನೋಡಿದ್ದೀರಾ? ನನ್ನದೊಂದು ಕಾನ್ಸೆಫ್ಟ್ ಇದೆ. ರಸ್ತೆಯ ಎಡಬದಿಯಲ್ಲಿ ಸಂಚರಿಸಿ, ಎಂಬುದು ನಿಯಮ. ಅದರಿಂದ ಸಂಚಾರ ಸುಗುಮ ವಾಗುತ್ತೆ. ಹಾಗೇನೇ ತಂದೆ-ತಾಯಿಯರನ್ನು ಗಂಡು ಮಕ್ಕಳು ಸಾಕಲೀ ಎಂಬುದು ನಮ್ಮಲ್ಲಿ ನಡೆದು ಬಂದಿರುವ ಪದ್ದತಿ. ಹಾಗೆ ಒಂದು ನಿಯಮ ವಿದ್ದರೆ ತಂದೆತಾಯಿಯರನ್ನು ನೋಡಿಕೊಳ್ಳುವ ಹೊಣೆ ಯಾರಿಗಾದರೂ ಇರುತ್ತೆ, ಎಂಬುದು. ಗಂಡುಮಕ್ಕಳು ಅವರ ತಂದೆ-ತಾಯಿಯರನ್ನು ನೋಡಿಕೊಂಡರೆ ಅವರ ಅಕ್ಕ-ತಂಗಿಯರು ಸಹಜವಾಗಿ ಅವರ ಅತ್ತೆ-ಮಾವನನ್ನು ನೋಡಿಕೊಳ್ಳಬೇಕು. ಇದು ಒಂದು ಸುಗಮ ವ್ಯವಸ್ಥೆ. ಆದರೆ ನಮ್ಮ ಕಿಟ್ಟಿ-ಶಂಕರನ ತರ ಅತೀ ಒಳ್ಳೆಯವರಾಗಿಬಿಟ್ಟರೆ ಅವರ ಗತಿ ಏನು? ಸಂಪದಿಗರೇ ನಿಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿ. ನಾನು ಅದನ್ನು ಶಂಕರನಿಗೂ ಕಿಟ್ಟೀಗೂ ತಿಳಿಸಿ ಮನವರಿಕೆ ಮಾಡಬೇಕಿದೆ.

Rating
No votes yet

Comments