ನಮ್ಮ ಜನರ ನಡುವೆ ಯಾಕೆ ಹೀಗೆ ...?
ಅಂದು ಸಂಜೆ ಎ.ಟಿ.ಎಂ. ನಲ್ಲಿ ಹಣ ತೆಗೆಯಬೇಕಾಗಿತ್ತು. ಅಲ್ಲಿಗೆ ಹೋದಾಗ ಆರು ಜನ ಸರತಿಸಾಲಿನಲ್ಲಿ ನಿಂತಿದ್ದರು. ನಾನು ಏಳನೆಯವನಾಗಿ ನಿಂತೆ. ಒಬ್ಬೊಬ್ಬರಾಗಿ ಶಿಸ್ತಾಗಿ ಒಳಗ್ಹೋಗಿ ಬಾಗಿಲು ಹಾಕ್ಕೊಂಡು ಆ ಮೆಷಿನ್ ಆಪರೇಟ್ ಮಾಡಿ ಕೈಯಲ್ಲಿ ಚೀಟಿ ಹಿಡಿದೊ ಅಥವಾ ಅದನ್ ಹರಿದು ಬಿಸಾಡಿಯೋ ಹೊರಬರುತ್ತಿದ್ದರು. ನಂಗ್ಯಾಕೊ ಅನುಮಾನ ಕಾಡ್ತಾನೆ ಇತ್ತು. ಆದರೆ, ಯಾರೊಬ್ಬರೂ ತುಟಕ್ ಪಿಟಕ್ ಎನ್ನದೇನೇ ತಮ್ಮ ಕೆಲಸ ಮುಗಿಸಿ ಹೊರಬರುತ್ತಿದ್ದರು! ಯಾರು ಎಷ್ಟು ಹಣ ತೆಗೆದ್ರೋ ಯಾರಿಗೊತ್ತು? ಅಂತೂ ನನ್ನ ಸರದಿ ಬಂತು! ಒಳಗೆ ಹೋದೆ; ಅದನ್ನ ಆಪರೇಟ್ ಮಾಡ್ದೆ . ಅದ್ಹೇನ್ ಹೇಳ್ಬೇಕು- “Sorry unable to dispense” ಅಯ್ಯೋ ನನಗೆ ಮಾತ್ರ ಹೀಗೆ ಹೇಳ್ತೇನು. ನನ್ನ ಸರಿದಿ ಬರೊ ಹೊತ್ತಿಗೆ ಅದರಲ್ಲಿ ದುಡ್ಡು ಖಾಲಿಯಾಗಿರಬೇಕು ಅಂದುಕೊಂಡು ಹೊರಗೆ ಬಂದೆ. ನನ್ನ ಹಿಂದೆ ಅಷ್ಟು ಹೊತ್ತಿಗಾಗಲೇ ನಾಲ್ಕುಜನ ನಿಂತಿದ್ದರು. ಅದರಲ್ಲಿ ದುಡ್ಡಿಲ್ಲ ಬಿಡಿ ಎಂದು ಅವರಿಗೆಲ್ಲ ಕೇಳುವ ಹಾಗೆ ಹೇಳಿದೆ. ಆಗ ಅಲ್ಲೇ ಕುಳಿತಿದ್ದ ಬಾಳೇ ಹಣ್ಣು ವ್ಯಾಪಾರಿ- “ಈವತ್ತು ಭಾನುವಾರ ಸರ್, ಅದ್ರಾಗೆ ಬೆಳಗಿಂದಾನೆ ಹಣ ಇಲ್ಲ; ಆದರೆ, ಯಾರೂ ಯಾರಿಗೂ ಹೇಳೊಲ್ಲ. ನನ್ನಂಗೆ ಅವನೂ ನೋಡ್ಕೊಳ್ಳೀಂತ ಸುಮ್ನೆ ಹೋಗ್ತವ್ರೇ ಎಲ್ರೂ... ನೀವೊಬ್ಬರೇ ನೋಡಿ ಹೇಳಿದ್ದು ಎಂದರು.
ಅಲ್ಲಾ ನಮ್ಮ ಜನ ಯಾಕೆ ಹೀಗೆ ಒಬ್ಬರಿಗೊಬ್ಬರು ಸಹಕಾರಿಯಾಗೊ ಮನೋಭಾವದಿಂದ ದೂರವಾಗ್ತಿದಾರೆ; ಅದರಲ್ಲೂ ಇಂದಿನ ಯುವ ಪೀಳಿಗೆಯವರು.... ಎಂದು ಯೋಚಿಸುವಂತಾಯಿತು.