ನಮ್ಮ ನಾಡಿನ ಕಾಳಜಿ

ನಮ್ಮ ನಾಡಿನ ಕಾಳಜಿ

ಈ ಕೆಳಕಂಡ ಬರಹ ಅಥವಾ ಲೇಖನವು ನನ್ನ ಸ್ವಂತ ಅನುಭವ ಹಾಗು ತಿಳುವಳಿಕೆ ಮೇಲೆ ಬರೆದಿದ್ದು. ಇದು ಯಾವುದೇ ಪುಸ್ತಕ, ಬರಹ, ಲೇಖನ, ಭಾಷಣ ಅಥವಾ ಇನ್ನಿತಿರ ಮಾಹಿತಿಯನ್ನ ನಕಲು ಮಾಡಿದ್ದಲ್ಲ. ಹಾಗೆಯೇ ಯಾವುದೇ ಇತರ ಭಾಷೆಯ ಪುಸ್ತಕ, ಲೇಖನ, ಬರಹದ ಅನುವಾದ ಕನ್ನಡಕ್ಕೆ ಮಾಡಿದ್ದಲ್ಲ. ಒಂದು ವೇಳೆ ಕಂಡು ಬಂದಲ್ಲಿ ಅದು ಕೇವಲ ಆಕಸ್ಮಿಕ.

ಬಡವರು, ರೈತರು, ಸಾಮಾನ್ಯರು ನಡೆಸುವ ಜೀವನದ ಮಧ್ಯೆ ಸಮಾಜದ ಅನಾನುಕೂಲಗಳ ಪರಿಹಾರಕ್ಕೆ ನಿತ್ಯವೂ ಹೋರಾಟ ಮಾಡುತ್ತಲೇ ಇರುತ್ತಾರೆ. ಇದು ಒಂದು ಕಡೆ ಬೇಡಿಕೆಯ ಈಡೇರಿಕೆಗಾಗಿ ಮಾಡುವ ಹೋರಾಟ. ಇನ್ನೊಂದು ಕಡೆ ಕನ್ನಡಕ್ಕಾಗಿ, ಕನ್ನಡ ಭಾಷೆಗಾಗಿ, ಕನ್ನಡ ನೆಲಕ್ಕಾಗಿ, ಕನ್ನಡದವರ ಹೋರಾಟ ಲೆಕ್ಕವಿಲ್ಲದಷ್ಟು. ಈ ಎರಡು ಕಡೆಯಲ್ಲೂ ಕೂಡ ನಮ್ಮ ಸರಕಾರದ ಸುಲಭ ಬೆಂಬಲ ಎಲ್ಲಿದೆ ನೀವೇ ಹೇಳಿ? ಇದೊಂದು ಬೆಟ್ಟದ ತುದಿಯಲ್ಲಿ ಒಂಟಿ ಕೈ ಮೇಲೆ ನಮ್ಮ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡು, ಇನ್ನೊಂದು ಹಸ್ತದಿಂದ ಒಬ್ಬರ ಜೀವವನ್ನ ರಕ್ಷಿಸುವ ಹಾಗಿದೆ. ಎರಡನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಆದರೆ, ಯಾವ ಕೈ ಬಿಡಲಿ ಎಂಬ ಸಂಕಟದ ಪ್ರಶ್ನೆ..

ಬೆಂಗಳೂರು ನಮ್ಮ ರಾಜಧಾನಿ. ಅಂದರೆ ಕರ್ನಾಟಕಕ್ಕೆ ಹಿರಿಮೆ. ಹಳ್ಳಿ, ತಾಲುಕಾ, ಜಿಲ್ಲೆಗಳೆಲ್ಲವು ಪುಸ್ತಕದ ಅಂಗಡಿ ಆದರೆ, ಇದು ದೊಡ್ಡ ಗ್ರಂಥಾಲಯವಿದ್ದಂತೆ. ಇಲ್ಲಿ ಎಲ್ಲ ಪುಸ್ತಕದ ಸಂಗ್ರಹವಿರಬೇಕು. ಅದನ್ನ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು. ಇಲ್ಲಿ ಭಾಷೆ ಪ್ರಜ್ಞೆ, ಭಾಷಾಭಿಮಾನ, ಕಲೆ, ಸಂಸ್ಕೃತಿ, ಇನ್ನಿತರ ಪುಸ್ತಕಗಳು ಇರಬೇಕು. ಜೊತೆಗೆ, ಅವುಗಳ ಪಠಣ, ಶ್ರವಣ, ಜ್ಞಾನ ಸಂಪಾದನೆ ಬಹು ಮುಖ್ಯ.

ಇಲ್ಲಿಯ ಕಲಬೆರಕೆಯ ಜೀವನದಂತೆ, ನಮ್ಮ ಭಾಷೆಯು ಕೂಡ ಎಲ್ಲ ಭಾಷೆಗಳ ಜೊತೆಗೆ ಕಲೆತು ಹೋಗುತ್ತಿದೆ. ನಮ್ಮ ಮನೆಯಿಂದಾಚೆ ಹೋಗಿ ಧೈರ್ಯದಿಂದ ಇನ್ನೊಬರನ್ನ ಕನ್ನಡದಲ್ಲಿ ಮಾತಾಡಿಸಿ ವಿಳಾಸ ತಿಳಿದುಕೊಳ್ಳುವ ನಂಬಿಕೆ ಕಡಿಮೆ ಆಗಿದೆ. ನಮ್ಮ ಎಷ್ಟೋ ಕನ್ನಡಿಗರು ಬೆಂಗಳೂರಿನ ಜೀವನಕ್ಕೆ ಬೇಸತ್ತು ಹೊರಟು ಹೋಗಿದ್ದಾರೆ, ಇನ್ನು ಕೆಲವರು ಹೋಗಲು ಬಯಸುತ್ತಿದ್ದಾರೆ. ಆದರೆ ನಮ್ಮ ನೆಲಕ್ಕೆ ನಾವು ಬೆಂಬಲವಾಗಿ ನಿಂತು ಉಳಿಸಿಕೊಳ್ಳದಿದ್ದರೆ ಇನ್ನ್ಯಾರು ಮಾಡುತ್ತಾರೆ? ಹೀಗೆ ಒಬ್ಬಬ್ಬರು ದೂರವಾದರೆ, ನಿಮ್ಮ ಸ್ಥಳಕ್ಕೆ ಹೊರ ದೇಶದವರ ಆಹ್ವಾನ ನೀವೇ ಮಾಡುತ್ತೀರಾ.. ಮತ್ತೆಲ್ಲಿಯ ನಮ್ಮ ಬೆಂಗಳೂರು?

ಕನ್ನಡದವರಿಲ್ಲವಾದರೆ , ಟಿ.ವಿ. ಮಾಧ್ಯಮಗಳು, ರೇಡಿಯೋ ಚಾನಲ್ಗಳು, ಪುಸ್ತಕಗಳು, ಪತ್ರಿಕೆಗಳು ನಿಂತು ಹೋಗುವುದಿಲ್ಲ ಆದರೆ ಅವುಗಳು ಹೊರ ರಾಜ್ಯದ ಭಾಷೆ ಬಳಸಿ, ಅನ್ಯ ಭಾಷಾ ಪ್ರಿಯರಿಗೆ ಖುಷಿ ಕೊಡುತ್ತಾರೆ ಅಷ್ಟೇ. ಹೊರಗಿನವರಿಗೆ ನಮ್ಮ ಅಗತ್ಯವಿಲ್ಲವಾದರೂ, ನಮಗೆ ನಮ್ಮ ಜನರ ಅಗತ್ಯ ತುಂಬಾ ಇದೆ.

ನಮ್ಮ ಜನಗಳಿಗೆ ಸೌಜನ್ಯ, ಸಮಾಧಾನ, ವಿಶಾಲ ಹೃದಯವೇನೋ ಇದೆ ಸರಿ ಆದರೆ ಅದರ ಜೊತೆಗೆ ಸ್ವಲ್ಪ ಜಿದ್ದು, ಮೊಂಡತನ, ಹೆಚ್ಚು ಧೈರ್ಯದ ಅಗತ್ಯವಿದೆ.  ಬನ್ನಿ ಗೆಳಯೆರೆ ದಿಟ್ಟತನದಿಂದ ಹೆಜ್ಜೆ ಇಟ್ಟು, ಯಾವದಕ್ಕೂ ಎದೆಗುಂದದೆ ನಮ್ಮ ಕನ್ನಡ ಬದುಕನ್ನು ಇತರರಿಗೆ ತೋರಿಸೋಣ.

anildesaiit@gmail.com

 

Rating
No votes yet