ನಮ್ಮ ಮನೆಗೆ ಮೊದಲನೇ ಬಾರಿಗೆ ಟಿ.ವಿ. ಬಂದಿದ್ದು.........
ಟೆಲೆವಿಶನ್ ಯಾನೆ ದೂರದರ್ಶನ ಅಲಿಯಾಸ್ ಟಿ.ವಿ. ಇಲ್ಲದ ಮನೆ ಈಗ ತುಂಬಾ ಅಪರೂಪ. ನಮ್ಮ ಮನೆಯಲ್ಲಿ ಟಿ.ವಿ. ಇಲ್ಲವೆಂದು ಯಾರಾದರೂ ಹೇಳಿದರೆ ಅದೇ ಅಚ್ಚರಿಯ ವಿಷಯ ಈಗ. ಅದೇ ನಾನು ಚಿಕ್ಕವನಾಗಿದ್ದಾಗ ಹೀಗಿರಲಿಲ್ಲ, ಕನಿಷ್ಟ ನಾನು ಬೆಳೆದುಬಂದ ಮಧ್ಯಮವರ್ಗದ ಕುಟುಂಬಗಳಲ್ಲಿ. ಆಗ ಟಿ.ವಿ. ಹೊಂದಿರುವುದು ಬಹಳ ದೊಡ್ಡ ವಿಷಯ. 1989-90ರಲ್ಲಿ ನಡೆದದ್ದು ಇದು, ನಾನಿನ್ನೂ ಶಾಲೆಗೂ ಸೇರಿರಲಿಲ್ಲ. ಆದರೂ ಅಚ್ಚಳಿಯದೇ ನೆನಪಿರುವ ಘಟನೆ.
ಆಗ ಪ್ರತಿ ಭಾನುವಾರ ಬೆಳಿಗ್ಗೆ 9.00 ಘಂಟೆಯಿಂದ ಮಹಾಭಾರತ ಧಾರಾವಾಹಿ ಪ್ರಸಾರವಾಗುತ್ತಿತ್ತು. ಆ ಕಾಲಕ್ಕೆ ಅಧ್ಭುತವೆನಿಸುತ್ತಿದ್ದ ತಂತ್ರಜ್ಞಾನ, ರೋಚಕ ಯುದ್ಧದ ದೃಶ್ಯಗಳು ನಮ್ಮಂಥಾ ಚಿಕ್ಕ ಮಕ್ಕಳನ್ನು ಟಿ.ವಿ.ಯ ಮುಂದೆ ಹಿಡಿದು ನಿಲ್ಲಿಸುತ್ತಿದ್ದವು. ಪ್ರತಿ ಭಾನುವಾರದ ಪ್ರಜಾವಾಣಿಯಲ್ಲಿ ಅಂದಿನ ಬೆಳಿಗ್ಗೆ ಪ್ರಸಾರವಾಗುವ ಮಹಾಭಾರತದ ಸಂಚಿಕೆಯ ವಿವರಗಳನ್ನು ಸಂಭಾಷಣೆಯ ಸಮೇತ ಪ್ರಕಟಿಸುತ್ತಿದ್ದರು. ಅದನ್ನು ನನ್ನ ತಂದೆಯವರು ನನಗೂ ನನ್ನ ತಂಗಿಗೂ ಓದಿ ಹೇಳುತ್ತಿದ್ದರು. ಇದರಿಂದ ನಮ್ಮಲ್ಲಿ ಇನ್ನೂ ಕುತೂಹಲ ಹೆಚ್ಚಾಗುತ್ತಿತ್ತು.
ಆದರೆ ನನಗಿದ್ದ ಒಂದೇ ತೊಂದರೆಯೆಂದರೆ ನಮ್ಮ ಮನೆಯಲ್ಲಿ ಟಿ.ವಿ. ಇಲ್ಲದೇ ಇರುವುದು. ನನ್ನ ತಂದೆ ಆಗಿನ್ನೂ ಸಣ್ಣ ಹುದ್ದೆಯಲ್ಲಿದ್ದುದರಿಂದ ಟಿ.ವಿ. ಖರೀದಿಯನ್ನು ವಿವಿಧ ಕಾರಣಗಳಿಂದ ಮುಂದೂಡುತ್ತಲೇ ಇದ್ದರು. ನನಗೆ ಒಳಗೊಳಗೇ ಅಸಮಾಧಾನವಿದ್ದರೂ ಬಾಯಿ ಬಿಟ್ಟು ಕೇಳಿದಲ್ಲಿ ಒದೆ ಬೀಳುವುದು ಖಚಿತವೆಂದು ಗೊತ್ತಿದ್ದ ಕಾರಣ ಏನೂ ಮಾಡುವಂತಿರಲಿಲ್ಲ!! ನಮ್ಮ ಪಕ್ಕದ ವಠಾರದವರಾದ ನಂದಿನಿ ಆಂಟಿ ಎಂಬುವವರ ಮನೆಯಲ್ಲಿ ಟಿ.ವಿ. ಇತ್ತು. ಹೀಗಾಗಿ ಪ್ರತಿ ಬಾರಿಯೂ ಅವರಲ್ಲಿಗೆ ಹೋಗಿ ನೋಡುವುದು ಅನಿವಾರ್ಯವಾಗಿತ್ತು. ನನ್ನಂತೆಯೇ ಇನ್ನೂ ಐದಾರು ಹುಡುಗರು ಬಂದು ಅವರ ಮನೆಯಲ್ಲಿಯೇ ಮಹಾಭಾರತ ನೋಡುತ್ತಿದ್ದರು. ಆ ಮನೆಯವರೂ ಕೂಡಾ ಏನೂ ಬೇಜಾರು ಮಾಡಿಕೊಳ್ಳದೇ ನಮಗೆ ನೋಡಲು ಅವಕಾಶ ಮಾಡಿಕೊಡುತ್ತಿದ್ದರು. ಭಾನುವಾರ ಸಂಜೆ ಪ್ರಸಾರವಾಗುತ್ತಿದ್ದ ಕನ್ನಡ ಸಿನೆಮಾಗಳನ್ನು ನೋಡಲು ಸ್ವಲ್ಪ ದೂರದಲ್ಲಿ ವಾಸವಿದ್ದ ನಮ್ಮ ಅತ್ತೆಯವರ ಮನೆಗೆ ಹೋಗುತ್ತಿದ್ದೆವು.
ಒಂದು ಭಾನುವಾರ ಬೆಳಿಗ್ಗೆ ಇದೇ ರೀತಿ ಅವರ ನಂದಿನಿ ಆಂಟಿಯವರ ಮನೆಗೆ ಹೋದೆ. ಅಂದು ಇತರೇ ಹುಡುಗರು ಯಾರೂ ಇರಲಿಲ್ಲ. ಹೀಗಾಗಿ ಏಕೋ ಕಸಿವಿಸಿಯಾಗಿತ್ತು. ಅಂದು ಯಾವುದೋ ಭಾರೀ ಯುಧ್ಧದ ದೃಶ್ಯಗಳು ಇದ್ದುದರಿಂದ ಭಾರೀ ಉತ್ಸಾಹದೊಂದಿಗೆ ಹೋಗಿದ್ದೆ. ಆದರೆ ಒಂಬತ್ತು ಗಂಟೆ ಕಳೆದಿದ್ದರೂ ಟಿ.ವಿ. ಹಾಕಿರಲಿಲ್ಲ. "ಆಂಟಿ, ಟಿ.ವಿ. ಹಾಕಿ, ಇವತ್ತು ಯುದ್ಧದ ಸೀನ್ ಇದೆ" ಎಂದೆ. ಅದಕ್ಕೆ ಅಲ್ಲಿಯೇ ಇದ್ದ ನಂದಿನ ಆಂಟಿಯವರ ಗಂಡ "ಇಲ್ಲ ಕಣಪ್ಪಾ, ಇವತ್ತು ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದೆ, ಇನ್ನು ಸ್ವಲ್ಪ ಹೊತ್ತಿನಲ್ಲೇ ಶುರುವಾಗತ್ತೆ. ಅದಕ್ಕೇ ಇವತ್ತು ಟಿ.ವಿ. ಹಾಕಲ್ಲ" ಎಂದರು. "ಇಲ್ಲ ಅಂಕಲ್, ಇವತ್ತು ಒಳ್ಳೆ ಯುದ್ಧದ ಸೀನ್ ಇದೆ, ನೀವು ಟಿ.ವಿ. ಹಾಕಿ, ನಾನು ನೋಡಲೇ ಬೇಕು" ಎಂದೆ. ಅವರಿಗೆ ಏನೆನ್ನಿಸಿತೋ ಏನೊ, ಇಲ್ಲವೇ ಇಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಭಾರೀ ನಿರಾಸೆಯೊಂದಿಗೆ ವಾಪಾಸ್ ಬಂದೆ.
ಭಾರೀ ಅವಮಾನವಾದಂತಾಗಿತ್ತು ನನಗೆ. ಮನೆಗೆ ಬಂದವನೇ ಸೀದಾ ಅಮ್ಮನ ಬಳಿ ಓಡಿ ಗೋಳೋ ಎಂದು ಅಳಲು ಶುರು ಮಾಡಿದೆ. ಏನಾಗಿರಬಹುದೆಂದು ಊಹಿಸಿದ ಅಮ್ಮ ಏನೂ ಮಾತಾಡದೇ ಸುಮ್ಮನಿದ್ದಳು. ತುಂಬಾ ಹೊತ್ತು ಅಳುತ್ತಲೇ ಇದ್ದೆ. ಕೊನೆಗೂ ನನ್ನ ವರಾತ ನೋಡಲಾಗದೇ ಅಪ್ಪ ಬಂದೊಡನೆ ಅವರೊಂದಿಗೆ ಮಾತಾಡುವುದಾಗಿ ಹೇಳಿದಳು. ಮಧ್ಯಾಹ್ನ ಅಪ್ಪ ಬಂದು ಊಟ ಮಾಡಿದ ಮೇಲೆ ಶುರು ಮಾಡಿದಳು ಅಮ್ಮ. ಮೊದಲು ನನ್ನ ಕಥೆ ಹೇಳಲಿಲ್ಲ. ಟಿ.ವಿ. ತರುವುದು ಯಾವಾಗ ಎಂದೇ ಶುರು ಮಾಡಿದಳು. "ನೋಡೋಣ, ಸದ್ಯದಲ್ಲೇ" ಎಂಬ ಉತ್ತರ ಬಂತು. ಆನಂತರ ಅಂದಿನ ಘಟನೆ ಹೇಳಿದಳು. ಅಪ್ಪನಿಗೆ ಏನೆನ್ನಿಸಿತೋ ಏನೋ, ಇಂದು ಸಂಜೆಯೇ ಟಿ.ವಿ. ತರುತ್ತೇನೆ ಎಂಬ ಆಶ್ವಾಸನೆ ನೀಡಿದರು. ಹೇಳಿದಂತೆಯೇ, ಅಂದೇ ಸಂಜೆ ವಿಡಿಯೋಕಾನ್ ಕಂಪೆನಿಯ ಟಿ.ವಿ. ತಂದೇ ಬಿಟ್ಟರು.
ಇಂದು ಈ ಘಟನೆಯನ್ನು ನೆನೆಸಿಕೊಂಡರೆ ನನಗೇ ನಗು ಬರುತ್ತದೆ. ಆದರೆ ಆಗಿನ ಕಾಲದ ವಾಸ್ತವತೆಯನ್ನು ಅರಿತುಕೊಂಡಲ್ಲಿ ಇದು ಸಣ್ಣ ಘಟನೆ ಅಲ್ಲದೇ ಇರಬಹುದು ಎಂದೂ ಅನಿಸುತ್ತದೆ.
ನನ್ನ ಅಪ್ಪ ಈಗ ಅದೇ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ, ಇನ್ನೂ ಒಂದು ವರ್ಷ ಸೇವೆ ಮಾಡಲಿದ್ದಾರೆ. ಈಗ ಅಂಥಾ ಹತ್ತು ಟಿ.ವಿ.ಗಳನ್ನು ಖರೀದಿಸಬಹುದು. ಆಗ ನಾವಿದ್ದದ್ದು ಒಂದು ಸಣ್ಣ ಬಾಡಿಗೆ ಮನೆ. ಈಗ ನಮ್ಮದೇ ಸ್ವಂತ ದೊಡ್ಡ ಎರಡು ಮಹಡಿಯ ಮನೆ ಇದೆ. ಆದರೆ ಆಗ ನಮಗಿದ್ದ ಸುಖ ನೆಮ್ಮದಿ ಈಗ ಅದಕ್ಕಿಂತ ತುಂಬಾ ಹೆಚ್ಚು ಸಂಪಾದನೆ ಮಾಡುತ್ತಿರುವಾಗಲೂ ಇಲ್ಲ ಎಂದು ಅನಿಸುತ್ತಿದೆ. ನಾನು ಇಲ್ಲಿ, ಅವರೆಲ್ಲಾ ಅಲ್ಲಿ; ಕೆಲವೊಮ್ಮೆ ಭಾರೀ ಏಕಾಕಿತನ ಕಾಡುತ್ತದೆ. ಇನ್ನೂ ಕನಿಷ್ಠ ಮೂರು ವರ್ಷಗಳ ಕಾಲ ನಾನು ಭಾರತಕ್ಕೆ ವಾಪಸಾಗುವುದು ಕನಸಿನ ಮಾತೇ.. ಇದನ್ನು ನೆನೆದಲ್ಲಿ ಏಕಾಂಗಿತನ ಇನ್ನೂ ಯಾತನಾಮಯವಾಗುತ್ತದೆ....
Comments
ಉ: ನಮ್ಮ ಮನೆಗೆ ಮೊದಲನೇ ಬಾರಿಗೆ ಟಿ.ವಿ. ಬಂದಿದ್ದು.........
ಉ: ನಮ್ಮ ಮನೆಗೆ ಮೊದಲನೇ ಬಾರಿಗೆ ಟಿ.ವಿ. ಬಂದಿದ್ದು.........