ನಮ್ ಶಾಲೆ ಸ್ವಾತಂತ್ರ್ಯೋತ್ಸವ

ನಮ್ ಶಾಲೆ ಸ್ವಾತಂತ್ರ್ಯೋತ್ಸವ


ಭ್ರಷ್ಟತೆ. ದೇಶಕ್ಕೆ ಕಳಂಕ. ಇಡೀ ದೇಶವನ್ನು ಒಗ್ಗೂಡಿಸಿರುವುದೇ ಈ ಸಂಗತಿ. ಅತ್ತ ಅಣ್ಣ ಹಜಾರೆ ಈ ಕಾರ್ಕೋಟಕದ ವಿರುದ್ಧ ಸಿಡಿದೆದ್ದಿದ್ದಾರೆ. ಜನಲೋಕಪಾಲಕ್ಕಾಗಿ ಕಟಿಬದ್ಧರಾಗಿದ್ದಾರೆ. ಈ ಹೊಸ್ತಿಲಲ್ಲಿ ಸ್ವಾತಂತ್ರೋತ್ಸವ.! ಇದು 64ನೇ ಸ್ವಾತಂತ್ರ್ಯೋತ್ಸವ. ಎಂದಿನಂತೆ ಈ ಬಾರಿಯೂ ನನ್ನ ಅಂಗಳದಲ್ಲಿ ಸಂಭ್ರಮ. ಸಡಗರ.

ಈ ಬಾರಿ ಹೊಸತನವಿತ್ತು. ಹೊಸ ಹುರುಪಿತ್ತು. ಹೊಸಬಗೆಯಿತ್ತು. ಅದೆಂದರೆ. ಈ ಬಾರಿ ವೇದಿಕೆ ಮೇಲೆ ಹಿರಿತಲೆಗಳಿರಲಿಲ್ಲ.  ಎಲ್ಲದ್ದಕ್ಕಿಂತ ನಮ್ ಮೇಷ್ಟ್ರಗಳ (ಪಾ)ಭಾಷಣವಿರಲಿಲ್ಲ. ಅದೇ ಗ್ರಾಮಾಫೋನ್ ರಿಪೀಟ್ ಆಗಿರಲಿಲ್ಲ. ಆದರೆ ವೇದಿಕೆ ತುಂಬಿತ್ತು. ಪವಿತ್ರ ಹೃದಯಗಳ ಸಂಗಮವಿತ್ತು. ಹೌದು. ಕಿರಿಯರೆಲ್ಲ ಇಲ್ಲಿ ಹಿರಿಮೆ ಸಾರಿದರು.

ಭ್ರಷ್ಟಾಚಾರದ ವಿರುದ್ಧ ದೇಶಕ್ಕೆ ದೇಶವೇ ದನಿಗೂಡಿಸಿರುವ ಹೊತ್ತಲ್ಲಿ, ನನ್ನಂಗಳದಲ್ಲಿ ನಿರ್ಮಲ ಹೃದಯಗಳು ಮಿಡಿದವು. ಮಿಡಿದ ಶೃತಿಯಿಂದ ಹೊರಹೊಮ್ಮಿದ್ದು ``ವಂದೇಮಾತರಂ``ಮಂತ್ರ. "ಏಳಿ ಎದ್ದೇಳಿ...ಗುರಿಮುಟ್ಟುವ ತನಕ ನಿಲ್ಲದಿರಿ"....ಎಂಬ ಕೂಗು. ಮುಖ್ಯಮಂತ್ರಿ ಅರ್ಜುನ್ ಪಟೇಲ್, ವಿರೋಧ ಪಕ್ಷದ ನಾಯಕಿ ರಕ್ಷಿತ,  ಸಭಾಪತಿ ಪ್ರಿಯಾಂಕ. ನಿಹಾರ್ ಅಹ್ಮದ್, ಚಂದನ, ಯಶಸ್ವಿನಿ, ಪ್ರಸನ್ನ, ಅಕ್ಷಯ್ ಕುಮಾರ್, ರಾಹಿಲ್ ಪಾಷಾ, ಧರ್ಮೇಶ, ಚಂದನ್, ಚೇತನ, ರವಿ ಡಿ.ಆರ್. ಬಿಂದು, ಲಕ್ಷ್ಮಿ, ಸುಮೇರಾಬಾನು, ಸುಷ್ಮಿತ, ಪ್ರಸನ್ನ, ಯಶಸ್ವಿನಿ...ಈ ಎಲ್ಲಾ ಮಂತ್ರಿ ಮಂಡಲದ ಸದಸ್ಯರು ಆಸೀನರಾಗಿದ್ರು. ಕಾರ್ಯಕ್ರಮವೂ ವಿದ್ಯಾರ್ಥಿಗಳೇ ನಡೆಸಿಕೊಟ್ರು.

ಆ-ಶಿಕ್ಷಕವರ್ಗವೆಲ್ಲವೂ ದೂರದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗರಾಜೇಗೌಡ, ಸದಸ್ಯರಾದ ಕುಮಾರ್, ಅಂಬಿಕಾ ಮೊದಲಾದವರು ಹಾಜರಿದ್ದರು. ಜೊತೆಗೆ ಕಾಲೇಜು ಉಪನ್ಯಾಸಕರೂ ಅಲ್ಲಿದ್ದರು. ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ. ಕಡೆಗೆ ಮರುದಿನ ಪತ್ರಿಕೆಯಲ್ಲಿ ಸುದ್ದಿ ಬಂದಾಗ ಎಲ್ಲರೂ ಮೆಚ್ಚಿಕೊಂಡರು...ವಿಜಯಕರ್ನಾಟಕ ಮತ್ತು ಕನ್ನಡಪ್ರಭ ಒಳ್ಳೆಯ ಸುದ್ದಿಯನ್ನ ಪ್ರಕಟಿಸಿ ತಮ್ಮಗೌರವ ಹೆಚ್ಚಿಸಿಕೊಂಡವು.....

 

Rating
No votes yet