ನರಕ ಚತುರ್ದಶಿ ಮತ್ತು ದೀಪಾವಳಿ

ನರಕ ಚತುರ್ದಶಿ ಮತ್ತು ದೀಪಾವಳಿ

ನರಕಚತುರ್ದಶಿ ಲೋಕ ಕಂಟಕನಾಗಿದ್ದ ನರಕಾಸುರ ಹತನಾದ ದಿನ.ಶ್ರೀಮನ್ ಮಹಾವಿಷ್ಣುವಿನ ಅವತಾರವೆಂದೇ ನಂಬಿರುವ ಶ್ರೀಕೃಷ್ಣ ನರಕಾಸುರನನ್ನು ವಧಿಸಿದ ದಿನ.ನರಕಾಸುರ ಬಂಧಿಸಿಟ್ಟಿದ್ದ ಹದಿನಾರು ಸಾವಿರದ ನೂರ ಎಂಟು ಸ್ತೀಯರನ್ನು ಬಂಧಮುಕ್ತಗೊಳಿಸಿ ತಾನೇ ಅವರೆಲ್ಲರನ್ನೂ ಶ್ರೀ ಕೃಷ್ಣ ವರಿಸುತ್ತಾನೆ.ಇದು ಲೀಲಾಮಯ ಶ್ರೀಕೃಷ್ಣನ ಭಾಗವತದ ಕತೆಗಳಲ್ಲಿ ಒಂದು.

ನರಕಚತುರ್ದಶಿಯಂದೇ ಮೊದಲಾಗುವ ದೀಪಾವಳಿ ಕಾರ್ತೀಕದ ಕೊನೆಯವರೆಗೂ ಮನೆ ಮನಗಳಲ್ಲಿ, ಗುಡಿ ಗೋಪುರಗಳಲ್ಲಿ ತಿಂಗಳಿಡೀ ದೀಪೋತ್ಸವದ ಬೆಳಕ ಬೆಳಗಿಸುತ್ತದೆ.

ತಲೆ ತುಂಬ ಎಣ್ಣೆ ಸುರಿದುಕೊಂಡು ಅಭ್ಯಂಜನ ಮಾಡುತ್ತೇವೆ. ಸಿಹಿಯೂಟ ಉಂಡು, ಪಟಾಕಿ ಸಿಡಿಸಿ ಸಂತೋಷ ಪಡುತ್ತೇವೆ. ಎಲ್ಲ ಹಬ್ಬಗಳಂತೇ ದೀಪಾವಳಿಗೂ  ಹೊಸಬಟ್ಟೆ ಮನೆಗೆ ಬರುತ್ತದೆ. ಮತ್ತೊಂದು ರಜೆ ಮುಗಿದುಹೋಗುತ್ತದೆ.

ಆಚರಣೆಗಿರುವ ಸೈದ್ಧಾಂತಿಕ ಹಿನ್ನೆಲೆಯನ್ನು ವೈಜ್ಜಾನಿಕವಾಗಿ ವಿಶ್ಲೇಷಣೆ ಮಾಡದಿದ್ದರೆ ಹಬ್ಬ ಎನ್ನುವುದು ಬರಿಯ ವೈಭವವಾಗುತ್ತೆ.ನರಕಾಸುರನ ರಾಜಧಾನಿಯಾಗಿದ್ದುದು ಪ್ರಾಗ್ಜೋತಿಷಪುರ.ಪ್ರಾಗ್ ಎಂದರೆ ಹಳೆಯದು, ಪುರಾತನವಾದುದು. ಜೋತಿಷವೆಂದರೆ ನಾಳೆಯದು, ಭವಿಷ್ಯದ್ದು.ಇದರ ಅರ್ಥ ನಾಳೆ ಎನ್ನುವುದು ಇಂದಿನ ಮುಂದುವರೆದ ಭಾಗ ಮತ್ತು ಇಂದು ಎನ್ನುವುದು ನಿನ್ನೆಯ ಮುಂದುವರಿಕೆ.ಇಂದಿನದೆಲ್ಲವೂ ನಾಳೆಗೂ ವಿಸ್ತರಿಸುತ್ತವೆ, ಇಂದು ಎನ್ನುವುದು ನಿನ್ನೆಯದೆಲ್ಲವನ್ನೂ ತನ್ನೊಟ್ಟಿಗೆ ತಂದಿರುವಂತೆಯೇ!ನರಕಾಸುರ ಕೆಟ್ಟವರಷ್ಟೇ ಉಳಿಯುವ ನರಕವನ್ನು ಪ್ರತಿನಿಧಿಸುತ್ತಿದ್ದಾನೆ ಮತ್ತವನು ಅಸುರ ಎನ್ನುವ ವಿಶೇಷಣವನ್ನೂ ಹೊಂದಿದ್ದಾನೆ.ತಮೋಗುಣದವರು ಧರೆಯನ್ನಳುತ್ತಾ ಇದ್ದಾರೆಂದರೆ ಧರೆಯ ಮೇಲಣ ಧನ, ಕನಕ, ಸೌಂದರ್ಯಗಳೆಲ್ಲ ಅವರ ಸ್ವತ್ತಾಗುತ್ತದೆ.

ಪುರಾಣ ಕತೆಯ ಸೂಕ್ಷ್ಮಗಳನ್ನಿಲ್ಲಿ ನಾವು ಗಮನಿಸಬೇಕು. ಮಹಾಶೂರನೂ, ಕೇಡಿಗನೂ ಆದ ನರಕಾಸುರ ಇಂದ್ರನ ಲಾಂಛನ ಬಿಳಿಗೊಡೆಯನ್ನೂ ಕದ್ದು ಸ್ವರ್ಗದ ವಿಹಾರ ಧಾಮವಾದ ಮಣಿಪರ್ವತವನ್ನೇ ಕಿತ್ತು ಸಾಗಿಸಿದ್ದಾನೆ. ದೇವತೆಗಳ ತಾಯಿ ಅದಿತಿಯ ಕಿವಿಯೋಲೆಗಳನ್ನು ಕಿತ್ತುಕೊಂಡು ಇಂದ್ರನನ್ನು ರಾಜ್ಯ ಭ್ರಷ್ಟನನ್ನಾಗಿಸಿದ್ದಾನೆ.ಯಥಾ ಪ್ರಕಾರ ಇಂದ್ರನ ಮೊರೆಗೆ ಶ್ರೀಹರಿ ಗರುಡಗಮನನಾಗಿ ಬಂದು ಅಸುರನನ್ನು ನಿಜ ನರಕಕ್ಕೆ  ಕಳಿಸುತ್ತಿದ್ದಾನೆ. ಭಗದತ್ತನ ಪಟ್ಟಾಭಿಷೇಕದೊಂದಿಗೆ ಈ ಕತೆ ಮುಗಿಯುತ್ತದೆ.

ಎಲ್ಲ ಪುರಾಣ ಪ್ರಸಂಗಗಳಂತೇ ಇರುವ ಈ ಕತೆಯನ್ನು ಪುನಃ ಪುನಃ ಮನನ ಮಾಡಿದರೆ ಇಲ್ಲಿ ಬರುವ ಪಾತ್ರಗಳ ಹೆಸರುಗಳು ಸೂಚಿಸುವ ಧ್ವನ್ಯಾರ್ಥವನ್ನು ಗ್ರಹಿಸಿದರೆ ನಮಗೊಂದು ಹೊಸ ಸಂಗತಿ ದೊರಕುತ್ತದೆ.ನಮ್ಮೊಳಗಿರುವ ಅಸುರತ್ವ ಮತ್ತು ನರಕ ಸದೃಶ ಯೋಚನೆಗಳನ್ನು ಕೊಲ್ಲದಿದ್ದರೆ ಜ್ಞಾನದ ಸಂಕೇತವಾದ ಬೆಳಕು ನಮ್ಮಿಂದ ದೂರವೇ ಉಳಿಯುತ್ತದೆ. ಇನ್ನು ಬಿಡುಗಡೆಯಾದ ೧೬,೧೦೮ ಸ್ತ್ರೀಯರು ಅಂದರೆ ನಮ್ಮ ದೇಹದಲ್ಲಿರುವ ಅಷ್ಟೇ ಸಂಖ್ಯೆಯ ನರಗಳು. ಅವನ್ನೆಲ್ಲ ನಾವು ಬಂಧಿಸಿಟ್ಟು ನಿಜ ಛಾತ್ರವನ್ನು ಅಡಗಿಸಿಟ್ಟಿದ್ದೇವೆ. ಕಿವಿಗಳಲ್ಲಿ ಕೇಳಬೇಕಿರುವ ಮಂಗಳವನ್ನು ಇನ್ನೆಲ್ಲಿಯೋ ಬಿಟ್ಟುಬದುಕುತ್ತಿದ್ದೇವೆ. ಇದಕ್ಕೆಲ್ಲ ಬೆಳಕಿನ ಹಬ್ಬದಲ್ಲಿ  ಉತ್ತರ ಕಂಡುಕೊಳ್ಳಬೇಕು.

ಮತ್ತೊಂದು ರೀತಿಯಲ್ಲಿ ಇದು ಪರಿಸರ ಶುದ್ಧಿಯ ಸಂಕೇತವೂ ಹೌದು.ಆಶ್ವಯುಜ ಕಳೆದ ಕಾರ್ತೀಕದ ಆರಂಭದ ಈ ಕಾಲದಲ್ಲಿ ಹೆಡೆಯೊಡೆದ ತೆನೆಗಳ ಮೇಲೆ ಹುಳು ಹುಪ್ಪಡಿಗಳು, ಮಿಡತೆಗಳು ದಾಳಿ ಇಡುತ್ತವೆ. ಮತಾಪಿನ ಸುಟ್ಟ ವಾಸನೆ, ಪಟಾಕಿಗಳ ಸದ್ದು ಮತ್ತು ದೀಪಗಳ ಬೆಳಕು ಈ ಹುಳಗಳನ್ನು ದೂರ ಮಾಡುತ್ತವೆ.

ನಮ್ಮ ಹಿರಿಯರು ಸಂಪ್ರದಾಯದ ಹೆಸರಿನಲ್ಲಿ ಕಾಲಾನುಕಾಲದ ಅಗತ್ಯತೆಗಳನ್ನು ಪೋಣಿಸಿರುತ್ತಾರೆ. ನಮ್ಮೊಳಗಿನ ನರಕಾಸುರನನ್ನು ಕೊಂದು ನಮ್ಮೊಳಗೇ ಇರುವ ಶ್ರೀಕೃಷ್ಣ ವಿಜಯ ಪತಾಕೆ ಹಾರಿಸುವ ಸುದಿನ ಇದಾಗಬೇಕು.ಪ್ರಾಗ್ಜೋತಿಷಪುರದ ಕೆಟ್ಟ ಕನಸುಗಳು ನಶಿಸಿ ಬೃಂದಾವನದ ಬೆಳಕು ನಮ್ಮನ್ನು ತೋಯಿಸಬೇಕು.ಆ ಮುರಳಿಯ ನಾದಮಯತೆ ನಾವು ಬೇಡಿದ್ದನ್ನೆಲ್ಲ ಕೊಡುವ ಕಲ್ಪವೃಕ್ಷವಾಗಬೇಕು. ಹಾಗಾದಾಗ ಮಾತ್ರ ಈ ಲೌಕಿಕ ನರಕದಿಂದ ಸ್ವರ್ಗದ ದಾರಿ ಸಿಕ್ಕಲಿಕ್ಕೆ ಸಾಧ್ಯ.ಇಲ್ಲವಾದಲ್ಲಿ ಈ ನರಕದ ಸಹವಾಸ ಮತ್ತಷ್ಟು ರಾಕ್ಷಸರನ್ನಾಗಿಸುತ್ತಲೇ ಸಾಗುತ್ತದೆ. ಅಷ್ಟೆ!

Rating
No votes yet