: ನಲಿನಲಿದ ವೀರಾಂಜನೇಯ :
ವೀರಾಂಜನೇಯ ಭಕ್ತಿ ಕುಸುಮಾಂಜಲಿ ೧
: ನಲಿನಲಿದ ವೀರಾಂಜನೇಯ :
ಮಲೆನಾಡ ಸೆರಗ ನಭ ಚುಂಬಿಸುವ ವೃಕ್ಷಗಳ
ತಳದಿ ಜಲಧಾರೆ ಭೋರೆಂದು ಬಳುಕುತಲಿರುವ
ಸಲಿಲದಿಕ್ಕೆಲ ಸುತ್ತ ಬೆಳೆದ ಹಸಿರಿನ ಮೇಲೆ
ನಲಿನಲಿದ ವೀರಾಂಜನೇಯ ||1||
ಅಲ್ಲಿ ಗಿಳಿವಿಂಡುಗಳ ಕೋಗಿಲೆಗಳಿಂಚರಕೆ
ನವಿಲು ಸಾರಂಗಗಳ ನೃತ್ಯವೈಭವ ಸೊಗಕೆ
ಮೈಮರೆತ ಪುಳಕದಲಿ ಭಾವ ತನ್ಮಯನಾಗಿ
ಕುಣಿಕುಣಿದ ವೀರಾಂಜನೇಯ ||2||
ಕನಕ ಲಂಕೆಯ ದಹಿಸಿ ಮೆರೆದ ಕೇಸರಿ ತನುಜ
ಕನಕಮಕ್ಕಿಯ ಹಸಿರ ಮಲೆಯ ಮರೆಯಲಿ ಇರುವ
ಘನಮಹಿಮ ಕಾರಡವಿ ಬಯಸಿ ಶರಣರಮೇಲೆ
ತಾನೊಲಿದ ವೀರಾಂಜನೇಯ ||3||
ಬೆಳೆದ ಕಬ್ಬಿನ ಜೊತೆಗೆ ಬಾಳೆಗೊನೆ ಸವಿಜೇನು
ಹಲಸುಸೊಳೆ ಸಿಹಿಮಾವು ಹೊಳೆದಡದ ಎಳನೀರು
ಹೊಳೆಯ ಸಿಹಿನೀರ್ ಕುಡಿದ ಕಪಿಬಳಗ ಮೇಳದಲಿ
ನಲಿನಲಿದ ವೀರಾಂಜನೇಯ ||4||
- ಸದಾನಂದ
Rating