ನವಿಲುಗಳು

ನವಿಲುಗಳು

      ನಮ್ಮ ರಾಷ್ಟ್ರಪಕ್ಷಿಯಾದ ನವಿಲು ನನ್ನ ಅತ್ಯಂತ ಪ್ರಿಯವಾದ ಪಕ್ಷಿಗಳಲ್ಲೊಂದು. ಪಕ್ಷಿ ಸಾಮ್ರಾಜ್ಯದ ಅತ್ಯಂತ ವರ್ಣರಂಜಿತ ಪಕ್ಷಿಗಳ ಪಟ್ಟಿಯಲ್ಲಿ ಇದಕ್ಕೆ ಪ್ರಮುಖ ಸ್ಥಾನ ಖಚಿತ. ಹಳ್ಳಿಯಲ್ಲಿ ಬೆಳೆದ ನನಗೆ ಮೊದಲಿನಿಂದಲೂ ಪ್ರಾಣಿಪಕ್ಷಿಗಳೆಂದರೆ ತುಂಬಾ ಪ್ರೀತಿ. ನವಿಲುಗಳ ಕೂಗನ್ನು ಮನೆಯ ಬಳಿ ಆಗಾಗ ಕೇಳುತ್ತಿದ್ದರೂ ಮನೆ ಮುಖ್ಯರಸ್ತೆಯ ಬಳಿ ಇದ್ದುದರಿಂದ ಅಲ್ಲಿಗೆ ನವಿಲುಗಳು ಬರುತ್ತಿರಲಿಲ್ಲ. ಹೀಗಾಗಿ ನವಿಲು ತೋರಿಸುವಂತೆ ಅಪ್ಪನಿಗೆ ದುಂಬಾಲು ಬೀಳುತ್ತಿದ್ದೆ. ಅಪ್ಪ ದನಗಳಿಗೆ ಹುಲ್ಲು ತರಲು ಗದ್ದೆಗೆ ಹೋಗುತ್ತಿದ್ದರು. ಒಂದು ದಿನ ನನ್ನನ್ನೂ ಕರೆದುಕೊಂಡು ಹೋಗಿ ಎಂದು ಕೇಳಿಕೊಂಡೆ. ಅಪ್ಪ ಒಪ್ಪಿಕೊಂಡರು. ಹಾಗೆ ಹೋಗುವಾಗ ಗದ್ದೆಯ ಬಳಿ ಹೋಗುತ್ತಿದ್ದಂತೆ ನವಿಲುಗಳ ಕೂಗು ಕಿವಿಗೆ ಅಪ್ಪಳಿಸುತ್ತಿತ್ತು. ಅದನ್ನು ಕೇಳಿ ನನಗಾದ ಖುಷಿ ಅಷ್ಟಿಷ್ಟಲ್ಲ. ಖಂಡಿತ ನನಗೆ ನವಿಲುಗಳ ದರ್ಶನ ಕಾದಿದೆ ಎಂದುಕೊಂಡೆ. ಆದರೆ ಗದ್ದೆಗೆ ಹೋದಾಗ ಅಲ್ಲಿ ಒಂದೇ ಒಂದು ನವಿಲೂ ಇರಲಿಲ್ಲ. ನನಗೆ ಆದ ನಿರಾಸೆಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗದ್ದೆಯಲ್ಲಿದ್ದರೂ ಸುತ್ತಮುತ್ತಲಿನ ಕಾಡುಗಳಿಂದ ನವಿಲುಗಳ ಅಶರೀರವಾಣಿ ಕೇಳುತ್ತಿತ್ತೇ ಹೊರತು ಒಂದೇ ಒಂದು ನವಿಲೂ ಕಣ್ಣಿಗೆ ಬೀಳಲಿಲ್ಲ. ಆ ಕೂಗಿನ ಜಾಡು ಹಿಡಿದು ಕಾಡೊಳಗೆ ಹೋಗುವಷ್ಟು ಧೈರ್ಯ ಆಗ ನನಗಿರಲಿಲ್ಲ. ಏಕೆಂದರೆ ಕಾಡೆಂದರೆ ಹುಲಿ, ಚಿರತೆ, ಸಿಂಹ ಇತ್ಯಾದಿ ಮಾಂಸಾಹಾರಿಗಳು ಮನುಷ್ಯರನ್ನು ಕೊಂದು ತಿನ್ನಲು ಸದಾ ಸಿದ್ಧವಾಗಿರುವ ಭಯಾನಕ ಸ್ಥಳ ಎಂದು ಆಗ ನಂಬಿದ್ದೆ.

     ಮುಂದೆ ನಮ್ಮ ಅಜ್ಜಿ ತಮ್ಮ ಮನೆಯನ್ನು ಸ್ಥಳಾಂತರಿಸಿದಾಗ ಅವರ ಮನೆಯ ಬಳಿ ತುಂಬಾ ಕಾಡಿದ್ದ ಸ್ಥಳವಿತ್ತು. ಆ ಸ್ಥಳವನ್ನು ನನಗೆ ಸ್ವರ್ಗಕ್ಕೆ ಮೂರೇ ಗೇಣು! ಅಲ್ಲಿ ಸಾಕಷ್ಟು ನವಿಲುಗಳಿವೆ ಎಂದು ಅಜ್ಜ ಹೇಳಿದ್ದರು. ಆದರೆ ನನ್ನ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದ್ದು ಅಲ್ಲಿದ್ದ ಬೃಹದಾಕಾರದ ಕೋಣಗಳು. ಸುತ್ತಲಿನ ಮನೆಯವರು ಮೇಯಲು ಹೊರಗೆ ಬಿಟ್ಟಿರುತ್ತಿದ್ದ ಕೋಣಗಳು ಮನೆಯ ಬೇಲಿಯ ಸುತ್ತಲೂ ಸುತ್ತುತ್ತಿದ್ದವು. ಅವುಗಳ ಇರಿಯುವ ಕಣ್ಣೋಟ, ಚೂಪಾದ ಕೋಡುಗಳು ಇವನ್ನೆಲ್ಲ ನೋಡಿಯೇ ಅರ್ಧ ಸತ್ತಂತಾಗಿ ನಾನು ಬೇಲಿಯೊಳಗೇ ನನ್ನ ಕಾರ್ಯಗಳನ್ನು ಸೀಮಿತಗೊಳಿಸಿಕೊಂಡಿದ್ದೆ. ಆದರೆ ಬೇಲಿಯೊಳಗೇ ಇದ್ದರೆ ನವಿಲುಗಳನ್ನು ನೋಡುವ ಅವಕಾಶ ತುಂಬಾ ಕಡಿಮೆಯಿತ್ತು. ಹೀಗಿರುವಾಗ ನನಗಿಂತ ಚಿಕ್ಕ ಹುಡುಗರು ನಿರ್ಭಯವಾಗಿ ಆ ಕೋಣಗಳ ಬಳಿಯೇ ಸುತ್ತಾಡುವುದನ್ನು ಒಮ್ಮೆ ನೋಡಿದೆ. ಕೋಣಗಳು ಅವರ ಅಸ್ತಿತ್ವವನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಿ ತಮ್ಮ ಪಾಡಿಗೆ ತಾವು ಮೇಯುತ್ತಿದ್ದವು. ಅದನ್ನು ನೋಡಿ ನಾನೂ ಧೈರ್ಯ ತಂದುಕೊಂಡು ಒಂದು ದಿನ ಸಮೀಪದಲ್ಲೆಲ್ಲೂ ಕೋಣಗಳಿಲ್ಲದ ಸಮಯ ನೋಡಿ ಬೇಲಿಯಿಂದ ಹೊರಗೆ ಕಾಲಿಟ್ಟೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಒಂದು ಭೂತಾಕಾರದ ಕೋಣ ನನ್ನನ್ನೇ ದಿಟ್ಟಿಸಿ ನೋಡತೊಡಗಿತು. ನನಗೆ ಎದೆ ಧಸಕ್ಕೆಂದಿತು. ನಾನು ಒಂದು ಕ್ಷಣ ಕಲ್ಲಾಗಿ ನಿಂತೆ. ಆದರೆ ಅದು ನನ್ನ ಬಗ್ಗೆ ಹೆಚ್ಚೇನೂ ಆಸಕ್ತಿ ವಹಿಸದೆ ತನ್ನ ಪಾಡಿಗೆ ತಾನು ಮೇಯಲು ತೊಡಗಿತು. ಅದನ್ನು ನೋಡಿ ನನಗೆ ಧೈರ್ಯ ಬಂತು. ಆಮೇಲೆ ಅದಕ್ಕಿಂತ ಕೆಲವೇ ಅಡಿಗಳ ಅಂತರದಲ್ಲಿ ಹಾದುಹೋದರೂ ಅದು ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮೇಯುತ್ತಿತ್ತು. ಅದನ್ನು ನೋಡಿ ನನಗೆ ಧೈರ್ಯ ಬಂತು. ಅಂದಿನಿಂದ ಧೈರ್ಯವಾಗಿ ಒಬ್ಬನೇ ಕಾಡು ಸುತ್ತಲು ಹೋಗುವುದನ್ನು ರೂಢಿಸಿಕೊಂಡೆ.

      ಮೊದಲ ಬಾರಿಗೆ ನವಿಲನ್ನು ನಾನು ನೋಡಿದ್ದು ತುಂಬಾ ದೂರದಿಂದ. ಅಪ್ಪನ ಜೊತೆ ಅಜ್ಜಿ ಮನೆಯಿಂದ ಮರಳಿ ಬರುತ್ತಿರುವಾಗ ದೂರದಲ್ಲಿ ನವಿಲೊಂದು ಹೋಗುತ್ತಿರುವುದನ್ನು ತೋರಿಸಿದರು. ನನಗೆ ಅಸ್ಪಷ್ಟವಾಗಿ ಅದರ ತಲೆ ಮಾತ್ರ ಕಾಣಿಸಿತು. ಸಮೀಪಕ್ಕೆ ಹೋಗೋಣವೆಂದು ಅಪ್ಪನ ಬಳಿ ಕೇಳಿದೆ. ಅವರೇನೋ ಅತ್ತ ಕರೆದುಕೊಂಡು ಹೋದರಾದರೂ ಅಷ್ಟು ಹೊತ್ತಿಗೆ ಅಲ್ಲಿಂದ ನಿರ್ಗಮಿಸಿತ್ತು. ಹೀಗಾಗಿ ಅದನ್ನು ಹತ್ತಿರದಿಂದ ನೋಡುವ ಆಸೆ ಕೈಗೂಡಲೇ ಇಲ್ಲ.

     ಮೊದಲ ಸಲ ನಾನು ಅದನ್ನು ಹತ್ತಿರದಿಂದ ನೋಡಿದ ಸಂದರ್ಭವನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ಆದರೆ ಅಂದು ಮಾತ್ರ ನಾನು ಎಷ್ಟು ಹೆದರಿದ್ದೆನೆಂದರೆ ನನ್ನ ಹೃದಯಬಡಿತ ಸಹಜಸ್ಥಿತಿಗೆ ಬರಲು ಅರ್ಧ ಗಂಟೆಯೇ ಹಿಡಿದಿತ್ತು. ಮನೆಯ ಗೇಟು ದಾಟಿದ ಬಳಿಕ ಒಂದು ತಿರುವಿದೆ. ಆ ತಿರುವಿನ ಬಳಿ ನವಿಲೊಂದು ಮೇಯುತ್ತಿರುವುದನ್ನು ನೋಡಿದೆ. ಗೇಟಿನಿಂದ ಆ ತಿರುವು ಸುಮಾರು ಐವತ್ತು ಅಡಿ ದೂರದಲ್ಲಿತ್ತು. ನಾನು ಅದನ್ನು ನೋಡಿ ಬೇಗಬೇಗನೆ ಅತ್ತ ಹೆಜ್ಜೆ ಹಾಕಿದೆ. ಆದರೆ ನಾನು ಹತ್ತಿರ ಹೋಗುತ್ತಿದ್ದಂತೆಯೇ ನನ್ನನ್ನು ಕಂಡು ಅದು ಓಡಿಹೋಯಿತು. ನಾನು ಸುತ್ತಮುತ್ತಲೂ ತುಂಬಾ ಹೊತ್ತು ಹುಡುಕಿದರೂ ಅದರ ಸುಳಿವೇ ಸಿಗಲಿಲ್ಲ. ನಿರಾಶನಾಗಿ ನಾನು ಹಿಂದಿರುಗಿ ಬರುತ್ತಿರಬೇಕಾದರೆ ನನ್ನ ತಲೆಯಮೇಲೆ ಏನೋ ಭಾರವಾದ ವಸ್ತುವೊಂದು ಹಾದುಹೋದಂತೆ ಧಡಧಡನೆ ಸದ್ದಾಯಿತು. ನಾನು ಬೆಚ್ಚಿಬಿದ್ದು ತಲೆ ಎತ್ತಿ ನೋಡುತ್ತಿರಬೇಕಾದರೆ ಆ ನವಿಲು ನನ್ನ ಪಕ್ಕದಲ್ಲಿ ನೆಲಕ್ಕಿಳಿದು ಓಡಿಹೋಯಿತು. ನನ್ನ ಪುಕ್ಕಲುತನಕ್ಕೆ ನನಗೇ ಒಮ್ಮೆ ನಗು ಬಂದಿತು. ಆದರೆ ನವಿಲನ್ನು ನೋಡಿದ ಸಂತೋಷಕ್ಕೆ ಆ ಭಯವೆಲ್ಲ ಮಾಯವಾದರೂ ಹೃದಯ ಮಾತ್ರ ತುಂಬಾ ಹೊತ್ತು ಬಡಿದುಕೊಳ್ಳುತ್ತಲೇ ಇತ್ತು.

     ಇದಾದ ಬಳಿಕ ಅಜ್ಜಿ ಮನೆಗೆ ಹೋದಾಗಲೆಲ್ಲ ಬೆಳಿಗ್ಗೆ ಕಾಫಿ ಕುಡಿದ ಕೂಡಲೇ ಕಾಡಿನತ್ತ ಹೊರಡುತ್ತಿದ್ದೆ. ಆರು ಗಂಟೆಗೆ ಕಾಡಿನತ್ತ ಹೊರಟರೆ ಒಂಬತ್ತು ಗಂಟೆಗೆ ತಿಂಡಿ ತಿನ್ನಲು ಅವರು ಕರೆಯುವ ತನಕ ಕಾಡೇ ನನ್ನ ಪಾಲಿಗೆ ಬೃಂದಾವನವಾಗಿರುತ್ತಿತ್ತು. ನವಿಲುಗಳು ಅಲ್ಲಿ ಯಥೇಚ್ಛವಾಗಿದ್ದವು. ಅವುಗಳನ್ನು ನೋಡುತ್ತ ಕಾಡೆಲ್ಲ ಸುತ್ತಾಡುತ್ತ ಯಾವ ಚಿಂತೆಗಳಿಲ್ಲದೆ ಮಹಾರಾಜನಂತೆ ಮೆರೆಯುತ್ತಿದ್ದೆ. ಆದರೆ ಎಷ್ಟೇ ನವಿಲುಗಳನ್ನು ಕಂಡರೂ ಗರಿಬಿಚ್ಚಿ ಕುಣಿಯುವ ಒಂದಾದರೂ ನವಿಲನ್ನು ನೋಡಬೇಡವೆ? ಆ ಅವಕಾಶಕ್ಕಾಗಿ ಕಾಯುತ್ತಿದ್ದೆ. ಒಂದು ದಿನ ಆ ಅವಕಾಶವೂ ಒದಗಿಬಂತು. ನಾವು ನಾಲ್ಕಾರು ಜನ ಸ್ನೇಹಿತರು ಒಟ್ಟಾಗಿ ಕಾಡಿಗೆ ಹೋಗಿದ್ದೆವು. ಆಗ ನಮ್ಮೆಲ್ಲರ ಪೈಕಿ ಮುಂದಿದ್ದವಳು 'ಅಣ್ಣಾ, ಅಲ್ಲಿ ನವಿಲು ಗರಿಬಿಚ್ಚಿ ಕುಣಿತಾ ಇದೆ ಬಾ ನೋಡು' ಎಂದು ಕರೆದಳು. ನಾನು ಮತ್ತು ನನ್ನ ತಮ್ಮ ಇಬ್ಬರೂ ಓಡಿದೆವು. ಆದರೆ ನಾವು ಹತ್ತಿರ ಹೋಗುವಷ್ಟರಲ್ಲಿ ಅದು ಓಡಿಹೋಗಿತ್ತು. ಆದರೂ ಸ್ವಲ್ಪ ಮಟ್ಟಿಗೆ ಅದನ್ನು ನೋಡುವುದು ಸಾಧ್ಯವಾಯಿತು. ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಂಡು ಸುಮ್ಮನಾದೆ.

Rating
No votes yet