" ನವ ವಸಂತ ಬಂದ ಜಗಕೆ ಹರುಷ ತಂದ "

" ನವ ವಸಂತ ಬಂದ ಜಗಕೆ ಹರುಷ ತಂದ "

ಚಿತ್ರ


                      


     ಮಾಗಿಯ ಚಳಿಗೆ ಒಣಗಿ ಎಲೆಯುದುರಿಸಿ ಬರಡಾಗಿ ಬರಿ ರೆಂಬೆ ಕೊಂಬೆಗಳನ್ನು ಬಿಟ್ಟುಕೊಂಡು ನಿಲ್ಲುವ ಪ್ರಕೃತಿ ಫಾಲ್ಗುಣದ ಬೇಸಿಗೆಗೆ ಇನ್ನಿಲ್ಲದಂತೆ ಬಸವಳಿದು ಹೋಗುತ್ತಾಳೆ. ಝರಿ ತೊರೆ ಹಳ್ಳ ಕೊಳ್ಳ ನದಿ ನದಗಳು ಮತ್ತು ಕೆರೆ ಕುಂಟೆಗಳು ಬತ್ತಿ ಬರಡಾಗುತ್ತವೆ, ಮನುಷ್ಯ ಸೇರಿದಂತೆ ಪ್ರಕೃತಿಯ ಎಲ್ಲ ಜೀವ ಜಾತಿಗಳು ಯಾವಾಗ ಈ ಬೀಸಿಗೆ ಕೊನೆಗೊಳ್ಳುತ್ತದೆ, ಮಳೆಯ ವೈಭವ ಮತ್ತೆ ಎಂದು ಮರುಕಳಿಸುತ್ತದೆ ಎಂದು ಕಾತರಿಸುತ್ತಿರುತ್ತವೆ. ಮತ್ತೆ ವಸಂತ ಮರಳಿ ಭೂಮಿಗೆ ಕಾಲಿಡುತ್ತಾನೆ. ಬೇಸಿಗೆಯ ಬಿರು ಬಿಸಿಲಿನಲ್ಲೂ ತರು ಲತೆ ಮರ ಗಿಡಗಳು ದಿನ ಬೆಳಗಾಗುವುದರೊಳಗೆ ತಿಳಿ ಹಸಿರು ಮತ್ತು ನಸುಗೆಂಪು ಬಣ್ಣದ ಎಳೆಯ ಪಲ್ಲವಗಳನರಳಿಸಿಕೊಂಡು ನಗು ನಗುತ್ತ ಸಂಭ್ರಮದಿಂದ ನಿಂತು ಬಿಡುತ್ತವೆ.


     ಶುಭ್ರ ನೀಲಾಕಾಶದಲ್ಲಿ ಮೋಡಗಳ ತೇರುಗಳು ಮೇಲೆ ಮೇಲೆರುತ್ತ ಕಣಾರ್ಧದಲ್ಲಿ ಆಕಾಶವನ್ನಾವರಿಸಿ ಬಿಡುತ್ತವೆ. ಗಗನದ ತುಂಬೆಲ್ಲ ಗರ್ನಾಲು ಸಿಡಿಮದ್ದುಗಳ ಆರ್ಭಟ, ಕಣ್ಣು ಕೋರೈಸುವ ಸುಳಿ ಮಿಂಚುಗಳು ಗಗನದ ತುಂಬೆಲ್ಲ ವೈಭವವೋ ವೈಭವ ! ಗದ್ದಲ ಗೌಜಿಗಳೊಡನೆ ವರುಣನ ಆಗಮನ. ತಂಪಾದ ಇಳೆಗೆ ಸಮೃದ್ಧ ಮಳೆಯ ಸಿಂಚನ. ಪ್ರಕೃತಿಗೆ ಇಷ್ಟು ಸಾಕು ತನ್ನ ಎಲ್ಲ ವೈಭವಗಳೊಡನೆ ಅರಳಿ ನಿಲ್ಲಲು. ಚೈತ್ರ ವೈಶಾಖಗಳ ಈ ಪರ್ವ ಕಾಲದಲ್ಲಿ ಬೃಹತ್ತ ಗಾತ್ರದ ಮೇಘಗಳ ದಂಡಿನೊಡನೆ ವರುಣನ ಭೂ ಸಂಚಾರ ಪ್ರಾರಂಭ ವಾಗುತ್ತದೆ. ಹಲವೆಡೆ ಮಳೆಯ ಸಿಂಚನದ ಆಶೆ ಹುಟ್ಟಿಸಿ ಹುಸ ನಗೆ ನಕ್ಕು ವರುಣ ಮೇಘಗಳೊಡನೆ ಹುಸಿ ನಗೆ ನಗುತ್ತ ಮುಂದೆ ಪಯಣ ಬೆಳೆಸಿ ಬಿಡುತ್ತಾನೆ. ಕವಿ ಕಾಳಿದಾಸನಿಗೆ 'ಮೇಘದೂತ' ದಂತಹ ಮೇರು ಕೃತಿ ರಚನೆಗೆ ಈ ಮೋಡಗಳೆ ಪ್ರೇರಣೆ ಅಲ್ಲವೆ?


     ಈ ಮೋಡಗಳು ಬರಿ ರೊಮ್ಯಾಂಟಿಕ್ ಕವಿಗಳಿಗೆ ಮಾತ್ರ ಪ್ರೇರಣೆ ಅಲ್ಲ, ಅವು ಭಿನ್ನ ವಿಚಾರ ಧಾರೆಯ ಕವಿ ಸಾಹಿತಿಗಳನ್ನೂ ಸಹ ಪ್ರೇರೆಪಿಸಿವೆ. ಈ ಸಂಧರ್ಭದಲ್ಲಿ ನವೋದಯದ ಕಾಲ ಘಟ್ಟದ ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಯವರು ಬರೆದ ' ಇಬ್ಬರು ರೈತರು ' ಎಂಬ ಕವನದ ಕೆಲ ಸಾಲುಗಳು ತಮ್ಮ ವಿಭಿನ್ನ ಆಶಯ ಮತ್ತು ವಿಚಾರಗಳ ಕಾರಣದಿಂದಾಗಿ ಗಮನ ಸೆಳೆಯುತ್ತವೆ. ಎಕ್ಕುಂಡಿ ಸಮಾಜವಾದಿ ಕಾವ್ಯವನ್ನು ರಶಿಯನ್ ಮಾದರಿ ಯಲ್ಲಿ ಕನ್ನಡಕ್ಕೆ ತಂದು ಕೊಟ್ಟವರು. ಈ ಕವನದಲ್ಲಿ ನಿರೂಪಕ ನಿರೂಪಿಸುವ ಜಗತ್ತಿನಲ್ಲಿ ಆತನ ಸಾಮಾಜಿಕ ನಿಲುವು, ವರ್ತಮಾನದ ಒತ್ತಡದಲ್ಲಿ ಲಾವಾದ ಹರಿಯುವಿಕೆಯನ್ನು ಮತ್ತು ಅದರ ಬಿಸುಪನ್ನು ಸರಳವಾಗಿ ಅಷ್ಟೆ ಧ್ವನಿ ಪೂರ್ಣವಾಗಿ ನಿರೂಪಿಸಿದ್ದಾರೆ.


     ಈ 'ಇಬ್ಬರು ರೈತರು' ಕವನದಲ್ಲಿ ಮೇಘದೂತ ಕೃತಿ ರಚನಾಕಾರ ಕಾಳಿದಾಸನನ್ನು ಭೇಟಿಯಾಗುವ ಆ ಇಬ್ಬರು ರೈತರು ಆತನನ್ನು ಈ ರೀತಿ ಕೇಳಿ ಕೊಳ್ಳುತ್ತಾರೆ.


                             ನೀವು ಕಳಿಸಿದಿರಲ್ಲ ಒಂದು ಮೋಡ
                             ರಾಮಗಿರಿಯಿಂದ ಅಲಕಾವತಿಯ ಯಕ್ಷಿಣಿಗೆ
                             ಆ ಕುರಿತು ಒಂದಷ್ಟು ತಮ್ಮ ಕೂಡ
                             ಬಿನ್ನವಿಸಲೆಂದೆ ಬಂದಿದ್ದು ನಾವಿಬ್ಬರೂ
                             ಬಾಯೊಣಗಿ ನಿಂತಿರುವ ನಮ್ಮ ಪಯಿರು
                             ಹನಿ ನೀರಿಲ್ಲದೆ ಮೊಗವೊಣಗಿ ಪರಿತಪಿಸುತಿವೆ
                             ದಾರಿಯಲ್ಲವರಿಗೂ ನೀರು ಸುರಿಸು ...


     ಕಾಳಿದಾಸ ಮೇಘದೂತ ಬರೆದ ಕಾಲದಲ್ಲಿ ಯಕ್ಷನ ಸಂದೇಶವನ್ನು ಯಕ್ಷಿಣಿಗೆ ಹೊತ್ತೊಯ್ಯುವ ವಾಹಕ ವಾದರೆ ಎಕ್ಕುಂಡಿಯವರ ಕಾಲದಲ್ಲಿ ಬೇರೊಂದು ರೂಪದಲ್ಲಿ ಮೋಡಗಳ ಪ್ರಸ್ತುತತೆಗೆ ಕನ್ನಡಿ ಹಿಡಿಯುತ್ತವೆ. ಹೀಗಾಗಿ ಮೋಡಗಳು ನಿನ್ನೆ ಇಂದು ಮತ್ತು ನಾಳೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿ ಉಳಿಯುವಂತಹವು. ವಸಂತ ಕಾಲದಲ್ಲಿ ಪ್ರಕೃತಿ ಅರಳಿ ನಿಲ್ಲುವ ಪರಿಯನ್ನು ಇದೇ ಕವಿ ಎಕ್ಕುಂಡಿ ಯವರು ತಮ್ಮ 'ಬಕುಲದ ಹೂವುಗಳು' ಕವನ ಸಂಕಲನದ ಈ ಪ್ರಮುಖ ಕವನದ ಎರಡು ನುಡಿಗಳನ್ನು ಗಮನಿಸೋಣ.



                              ಕಲ್ಲು ಮುಳ್ಳಿನ ಬೆಟ್ಟ ಬುಡದಲ್ಲಿಯೆ ಒಂದು
                              ಬಕುಲ ವೃಕ್ಷದ ತುಂಬ ಹೂ ಸುರಿದು
                              ಟೊಂಗೆ ಟೊಂಗೆಗೆ ಕುಳಿತ ಹಿಂಡು ಹಕ್ಕಿಯ
                              ಹಾಡು ಹೆಂಡತಿಗೆ ಹೇಳಿದನು ಕೂಗಿ ಕರೆದು


                              ಕಂಡಿಯೇನೇ ಸೋಮಿ 'ಬಂಡಿ ಹಬ್ಬದ ಹಿಗ್ಗು
                              ಇಷ್ಟು ದಿನ ಎಲ್ಲಿದ್ದವಿಷ್ಟು ಹೂವು ?
                              ಅನುಗಾಲ ಇಲ್ಲಿಂದಲೆ ಹಾದು ಹೋದವರು
                              ಕಂಡಿದ್ದೆವೇ ಇಂಥ ಸೊಬಗು ನಾವು


     ಇಲ್ಲಿ ಕವಿ ಹಿನ್ನೆಲೆಯಲ್ಲಿ ನಿಂತು ಒಬ್ಬ ಸಾಮಾನ್ಯ ಹಳ್ಳಿಗನ ಮೂಲಕ 'ಬಕುಲದ ಹೂವುಗಳು' ಅರಳಿನಿಂತ ಪರಿಯನ್ನು ಕಂಡು ಅಚ್ಚರಿಗೊಂಡು ತನ್ನ ಹೆಂಡತಿ ಸೋಮಿಗೆ ಹೇಳುತ್ತಾನೆ, ಅನುಗಾಲದಿಂದಲೂ ನಾವು ಇಲ್ಲಿಂದಲೆ ಹಾಯ್ದು ಹೋಗುತ್ತಿದ್ದೆವು. ಒಮ್ಮಿಂದೊಮ್ಮೆಲೆ ಇಷ್ಟೊಂದು ಹೂವುಗಳು ಹೇಗೆ ಅರಳಿದವು ? ಎಂದು. ಇಲ್ಲಿ ಕವಿ ಎಕ್ಕುಂಡಿ ಯವರು ಬಳಸುವ ಪದವನ್ನು ನಾವು ಗಮನಿಸಬೇಕು. ' ಬಂಡಿ ಹಬ್ಬದ ಹಿಗ್ಗು ' ಎಂತಹ ಸುಂದರವಾದ ಪದ ಪುಂಜವನ್ನು ರೂಪಕವನ್ನು ನಮ್ಮ ರಸ ಸ್ವಾದನೆಗೆ ನೀಡಿದ್ದಾರೆ. ಈ ಘಟನೆಯನ್ನು ನಾವು ಸೂಕ್ಷ್ಮವಾಗಿ ಗಮನಿ ಸಬೇಕು. ಒಬ್ಬ ಸಾಮಾನ್ಯ ಹಳ್ಳಿಗನನ್ನು ಸಹ ಪ್ರಕೃತಿಯ ಸಹಜ ಕ್ರಿಯೆಯಾದ ಹೂವಿನ ಅರಳುವಿಕೆ ಕವಿಯಾಗುವಂತೆ ಪ್ರೇರೇಪಿಸುತ್ತದೆ ಎಂಬುದು. ಇಲ್ಲಿ ಹಳ್ಳಿಗ ತಾನು ಕಂಡ ಅಚ್ಚರಿಯನ್ನು ತನ್ನ ಹೆಂಡತಿಗೆ ಹೇಳು ವುದನ್ನು ನೋಡಿದರೆ ಆತನಲ್ಲಿಯೂ ಸಹ ಕವಿ ಮನ ಜಾಗೃತ ಗೊಂಡಿದೆ ಎಂಬುದು. ಇಲ್ಲಿ ನಿರೂಪಕ ಕವಿ ಎಕ್ಕುಂಡಿ ಎಲ್ಲಿಯೂ ಹೊರಗೆ ಕಾಣಿಸಿ ಕೊಳ್ಳುವುದಿಲ್ಲ, ಆದರೆ ಆ ಕವಿ ಆ ಸಾಮಾನ್ಯ ಹಳ್ಳಿಗನಲ್ಲಿಯೆ ಅಂತರ್ಗತ ನಾಗಿದ್ದಾನೆ. ಇದು ಈ ಕವನದ ಮತ್ತು ಪ್ರಕೃತಿಯ ಸಾರ್ವಕಾಲಿಕತೆ.


     ಇನ್ನು ಈ ವಸಂತ ಕಾಲದಲ್ಲಿ ಅರಳಿ ನಿಂತ ಪ್ರಕೃತಿ ಈ ಸಂಧರ್ಭದಲ್ಲಿಯೆ ಬರುವ ಪಾರಂಪರಿಕ ಹಬ್ಬ 'ಯುಗಾದಿ' ಬೇಸಿಗೆಯ ಬೇಗೆಗೆ ಮದುಡಿ ನಿಂತ ಮನಕ್ಕೆ ನೀಡುವ ಒಂದು ದಿವ್ಯ ಚೇತನ. ಯುಗಾಗಿ ಎಂದ ಮೇಲೆ ವರಕವಿ ಬೇಂದ್ರೆ ಯವರನ್ನು ಅಲ್ಲದೆ ಅವರ ನಿತ್ಯ ನೂತನ ಯುಗಾದಿ ಕವನವನ್ನು ನೆನೆಯದೆ ಈ ಲೇಖನ ಅಪೂರ್ಣ. ಇದರಲ್ಲಿ ಎಲ್ಲ ಜೀವ ಸೆಲೆಗಳೊಡನೆ ಆಗಮಿಸುವ ವಸಂತ ಮತ್ತು ಪ್ರಕೃತಿಗಳ ನಿರಂತರತೆಯನ್ನು ಕುರಿತೆ ಕವಿ ಇಲ್ಲಿ ದಾಖಲಿಸಿದ್ದಾರೆ. ಈ ಜಗತ್ತು ಇರುವ ವರೆಗೆ ಕನ್ನಡಿಗರು ಇರುವವರೆಗೆ ತಲೆ ಮಾರುಗಳಿಂದ ತಲೆಮಾರುಗಳ ಮಧ್ಯ ಈ ಕವನ ರಿಂಗುಣಿಸುತ್ತಲೆ ಇರುತ್ತದೆ.
                             
 

Rating
No votes yet

Comments

Submitted by H A Patil Thu, 03/28/2013 - 16:11

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು ಪ್ರತಿಕ್ರಿಯೆಗೆ ವಸಂತಾಗಮನವನ್ನು ಸ್ವಾಗತಿಸುವ ನಿಮ್ಮ ಮನೋಭಿಲಾಷೆಗೆ ಹೃತ್ಪೂರ್ವಕ ಧನ್ಯವಾದಗಳು.