ನಾಡನ್ನಾಳುವವರಿಗೊಂದು ಬಹಿರಂಗ ಪತ್ರ.

ನಾಡನ್ನಾಳುವವರಿಗೊಂದು ಬಹಿರಂಗ ಪತ್ರ.

ನಾಡನ್ನಾಳುವವರಿಗೊಂದು ಬಹಿರಂಗ ಪತ್ರ.  

ಮಾನ್ಯರೇ, ಇತ್ತೀಚಿಗೆ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ನೋಡುತ್ತಿದ್ದರೆ ನಾವು ಯಾವ ಯುಗದಲ್ಲಿ ಜೀವಿಸುತ್ತಿದ್ದೇವೆಂದು ಭಯವಾಗುತ್ತಿದೆ.  ನಮ್ಮ ಹೆಣ್ಣು ಮಕ್ಕಳ ಭದ್ರತೆ ಮತ್ತು ಭವಿಷ್ಯದ ಬಗ್ಗೆ ನಮ್ಮನ್ನು ನಾವೇ ಹಲವು ಬಾರಿ ಪ್ರಶ್ನಿಸಿಕೊಳ್ಳುವಂತಾಗಿದೆ.  "ಯತ್ರ ನಾರ್ಯಸ್ತು ಪೂಜ್ಯಂತೇ, ತತ್ರ ದೇವತಾಃ ರಮಂತೇ" ಎಂದ ನಾಡಿನಲ್ಲಿ ಇದೇನಾಗುತ್ತಿದೆ?  ಸರಣಿ ಅತ್ಯಾಚಾರಗಳು, ಕೊಲೆಗಳು, ದಿನನಿತ್ಯದ ಸುದ್ಧಿಗಳಾಗಿವೆ. ಈ ಘೋರ ಅತ್ಯಾಚಾರಗಳನ್ನು, ಕೊಲೆಗಳನ್ನು ತಡೆಯಲಾಗುವುದಿಲ್ಲವೇ? ತಡೆಯಲು ಖಂಡಿತಾ ಸಾಧ್ಯವಿದೆ.  ಆ ನಿಟ್ಟಿನಲ್ಲಿ ಬೇಕಿರುವುದು ಈ ದುರಂತಗಳನ್ನು ನಿಲ್ಲಿಸಲೇಬೇಕೆನ್ನುವ ಸಧೃಡ ಇಚ್ಚಾಶಕ್ತಿ ಮಾತ್ರ.  ಆ ಇಚ್ಚಾಶಕ್ತಿಯ ಕೊರತೆಯೇ ಇಂದು ನಮ್ಮ ದೇಶವನ್ನು, ರಾಜ್ಯವನ್ನು, "ಉದ್ಯಾನ ನಗರಿ" ಯಾಗಿದ್ದ ನಮ್ಮ ಸುಂದರ ಬೆಂಗಳೂರನ್ನು ವಿಶ್ವದೆದುರು "ಅತ್ಯಾಚಾರಿಗಳ ಸ್ವರ್ಗ"ವೆಂದು ಬಿಂಬಿಸುತ್ತಿದೆ, ತಲೆತಗ್ಗಿಸುವಂತೆ ಮಾಡಿದೆ.

ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನನ್ನದೊಂದು ಸಲಹೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿ ಯಾರನ್ನೂ ನೋಯಿಸುವ ಅಥವಾ ಯಾರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ಧೇಶ ಖಂಡಿತಾ ಇಲ್ಲ.  ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಲೇಬೇಕಾಗುತ್ತದೆ.

೧. ಬ್ರಿಟಿಷರ ಕಾಲದ ಶೈಕ್ಷಣಿಕ ಪದ್ಧತಿಯ ಆಮೂಲಾಗ್ರ ಬದಲಾವಣೆಯಾಗಬೇಕು. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಂಥ ಶಿಕ್ಷಣ ಪದ್ಧತಿಯನ್ನು ರೂಪಿಸಬೇಕು. ಎಲ್ಲ ಶಾಲೆಗಳಲ್ಲಿಯೂ ಪೋಷಕರು ಮತ್ತು ಶಾಲಾ ಸಿಬ್ಬಂದಿಯೊಳಗೊಂಡ ಸಮಿತಿಯೊಂದನ್ನು ರಚಿಸಿ, ಪ್ರತಿ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಸಭೆ ಸೇರಿ ಮಕ್ಕಳ ಬೆಳವಣಿಗೆಯ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಕಡ್ಡಾಯಗೊಳಿಸಬೇಕು. ಮಕ್ಕಳ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿಯ ಬಗ್ಗೆ ಪೂರಕ ಮಾಹಿತಿ ವಿನಿಮಯವಾಗಬೇಕು. ಶಾಲಾ ಕಾಲೇಜುಗಳು ಉತ್ತಮ ಪ್ರಜೆಗಳನ್ನು ರೂಪಿಸುವ ತಾಣಗಳಾಗಬೇಕು.  ಎನ್.ಸಿ.ಸಿ. ಅಥವಾ ಮಿಲಿಟರಿ ಶಿಕ್ಷಣವನ್ನು ಹೈಸ್ಕೂಲಿನಿಂದಲೇ ಕಡ್ಡಾಯಗೊಳಿಸಬೇಕು. 

೨. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಅಂತರ್ಜಾಲ ಬಳಕೆಯನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು. ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಂತರ್ಜಾಲ ಬಳಸಬೇಕಿದ್ದಲ್ಲಿ ಅದು ಶಿಕ್ಷಕರ ಮೇಲುಸ್ತುವಾರಿಯಲ್ಲಿಯೇ ಆಗುವಂತೆ ನಿಯಮ ರೂಪಿಸಬೇಕು. ನಾಯಿಕೊಡೆಗಳಂತೆ ಮೇಲೆದ್ದಿರುವ ಸೈಬರ್ ಕೆಫೆಗಳನ್ನು ನಿಯಂತ್ರಿಸಬೇಕು.  ಲೈಂಗಿಕ ಕ್ರಿಯೆಗಳನ್ನು ತೋರಿಸುವ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಂತರ್ಜಾಲ ತಾಣಗಳನ್ನು ಅಪ್ರಾಪ್ತ ಮಕ್ಕಳಿಗೆ ದೊರಕದಂತೆ ನಿರ್ಬಂಧಿಸಬೇಕು. ಶಾಲಾಮಟ್ಟದಲ್ಲಿಯೇ ಲೈಂಗಿಕ ಶಿಕ್ಷಣವನ್ನು ನೀಡಿ, ಲೈಂಗಿಕತೆಯ ಬಗ್ಗೆ ಇರುವ ಅಸಹಜ ನಂಬಿಕೆಗಳನ್ನು ಹೋಗಲಾಡಿಸಬೇಕು.

೩. ಗೌರವಯುತ ಉಡುಪುಗಳನ್ನು ಶಾಲಾ ಸಮವಸ್ತ್ರವಾಗಿಸಬೇಕು, ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿರುವ ಅರೆಬೆತ್ತಲೆ ಸಮವಸ್ತ್ರಗಳನ್ನು ನಿರ್ಬಂಧಿಸಿ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಉಡುಪನ್ನು ಸಮವಸ್ತ್ರವನ್ನಾಗಿ ಕಡ್ಡಾಯಗೊಳಿಸಬೇಕು. ಶಿಕ್ಷಕರ ಆಯ್ಕೆಯಲ್ಲಿ ಅತ್ಯಂತ ಜಾಗರೂಕತೆ ತೋರಬೇಕು, ನೈತಿಕ ಮೌಲ್ಯಗಳನ್ನು, ದೇಶದ ಚರಿತ್ರೆಯನ್ನು ಎತ್ತಿ ಹಿಡಿಯವಂಥವರಿಗೆ ಶಿಕ್ಷಕ ಹುದ್ದೆ ನೀಡಬೇಕು.

೪. ಅತ್ಯಂತ ಪ್ರಭಾವಿ ಮಾಧ್ಯಮವಾದ ಚಲನಚಿತ್ರ ಹಾಗೂ ದೂರದರ್ಶನಗಳಲ್ಲಿ ಹೆಣ್ಣನ್ನು ಅರೆಬೆತ್ತಲಾಗಿ, ಭೋಗದ ವಸ್ತುವಾಗಿ ತೋರಿಸುವುದನ್ನು ನಿರ್ಬಂಧಿಸಬೇಕು. ಚಲನಚಿತ್ರ ನಿಯಂತ್ರಣ ಮಂಡಳಿಯಲ್ಲಿ ಸಮಾಜಶಾಸ್ತ್ರ/ಮನಃಶಾಸ್ತ್ರ  ಪರಿಣತರನ್ನು ಸದಸ್ಯರನ್ನಾಗಿಸಬೇಕು. ಹಿಂಸೆ, ಕ್ರೌರ್ಯಗಳನ್ನು ವೈಭವೀಕರಿಸುವ ಚಲಚಿತ್ರಗಳನ್ನು ನಿರ್ಬಂಧಿಸಬೇಕು. ತನ್ಮೂಲಕ ಸಮಾಜದಲ್ಲಿ ವಿಕೃತ ಮನೋಭಾವವನ್ನು ಕಡಿಮೆಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

೫. ಪ್ರತಿಯೊಂದು ಪೋಲೀಸ್ ಠಾಣೆಯಲ್ಲಿಯೂ ಪ್ರತ್ಯೇಕ ಮಹಿಳಾ ವಿಭಾಗವಿರಬೇಕು.  ಮಹಿಳೆಯರಿಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು ಮಹಿಳಾ ಪೊಲೀಸರೇ ನಿಭಾಯಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಈಗಿರುವ ಸಡಿಲ ಕಾನೂನುಗಳನ್ನು ಪುನರ್ವಿಮರ್ಶಿಸಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು.  ಅತ್ಯಾಚಾರಿಗಳಿಗೆ ಆಗುವ ಶಿಕ್ಷೆಯನ್ನು ಸಾರ್ವಜನಿಕವಾಗಿ ತೋರಿಸಿ, ವಿಕೃತಕಾಮಿಗಳ ಮನದಲ್ಲಿ  ಕಾನೂನಿನ ಬಗ್ಗೆ ಭಯ ಹುಟ್ಟಿಸಬೇಕು.

೬. ಯಾವುದೇ ಅಪರಾಧ ಹಿನ್ನೆಲೆಯುಳ್ಳದವರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು.  "ಯಥಾ ರಾಜಾ ತಥಾ ಪ್ರಜಾ" ಎಂವಂತೆ ನಾಯಕರು ನೀತಿವಂತರಾಗಿದ್ದರೆ ಪ್ರಜೆಗಳು ನೀತಿವಂತರಾಗಿರುತ್ತಾರೆನ್ನುವುದನ್ನು ಮನಗಾಣಬೇಕು.

( ನನಗೆ ತೋಚಿದ ಕೆಲವು ಅಂಶಗಳನ್ನು ಉಲ್ಲೇಖಿಸಿ ಈ ಬಹಿರಂಗ ಪತ್ರ ಬರೆದಿದ್ದೇನೆ.  ವಿಚಾರವಂತರು ಇನ್ನಷ್ಟು ವಿಷಯಗಳನ್ನು ಇದರೊಂದಿಗೆ ಸೇರಿಸಬಹುದು, ಯಾವ ಭಾಷೆಗೆ ಬೇಕಾದರೂ ತರ್ಜುಮೆ ಮಾಡಿ, ಯಾರಿಗೆ ಬೇಕಾದರೂ ಕಳುಹಿಸಬಹುದು. ಇದಕ್ಕೆ ನನ್ನ ಸಂಪೂರ್ಣ ಸಹಮತಿಯಿದೆ. ಮುಖ್ಯವಾಗಿ ನಮಗೆ ಬೇಕಿರುವುದು ಸ್ವಸ್ಥ ಸಮಾಜದ ನಿರ್ಮಾಣದ ಕನಸು ನನಸಾಗುವುದು.)

Rating
No votes yet

Comments

Submitted by kavinagaraj Sun, 07/27/2014 - 14:18

1. ನಿಮ್ಮನ್ನು ಕೇಸರೀಕರಣದ ಬೆಂಬಲಿಗರು ಎಂದಾರು, ಶಿಕ್ಞಣ ಪದ್ಧತಿ ಬದಲಿಸಲು ಕರೆಕೊಟ್ಟರೆ! ಆದರೆ, ಇದು ಆಗಲೇಬೇಕಾದ ಸಂಗತಿ. ಸಂಪೂರ್ಣ ಒಪ್ಪುವೆ.
2. ಜಾರಿ ಕಷ್ಟ, ಪ್ರಯತ್ನಿಸಬಹುದು.
3ರಿಂದ 6. ೊಪ್ಪತಕ್ಕಂತಹ ಸಂಗತಿಗಳು.
ದೃಷ್ಯಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ. ಅವು ಹಣವುಳ್ಳವರ ಮತ್ತು ವಿದೇಶೀಯರ ಹಿಡಿತದಲ್ಲಿವೆ. ಈ ಕುರಿತೂ ಕಡಿವಾಣ ಅಗತ್ಯ.
ನಿನ್ನೆ ಟಿವಿಯ ಆಂಕರ್ ಒಬ್ಬರು ಅತ್ಯಾಚಾರಕ್ಕೆ ಒಳಗಾದ ಹುಡುಗಿಗೆ ಕೇಳುತ್ತಿದ್ದ ಪ್ರಶ್ನೆಗಳು: ಅವರು ನಿಮಗೆ ಯಾವ ರೀತಿ ಹಿಂಸೆ ಮಾಡಿದರು? ಹೇಗೆ ಮಾಡಿದರು? ಆ ಹುಡುಗಿ ಪಾಪ, ತನ್ನ ಬಟ್ಟೆ ಹರಿದು ಬೆತ್ತಲೆ ಮಾಡಿದರು ಎಂದು ಉತ್ತರಿಸಬೇಕಾಯಿತು. ಇದು ಬೇಕಿತ್ತಾ? ನಿಜವಾದ ಅತ್ಯಾಚಾರಿಗಳು ಇಂತಹವರೇ! ಇದನ್ನು ಕೇಳಿಸಿಕೊಂಡಾಗ ಬಂದ ಸಿಟ್ಟಿನಲ್ಲಿ ಮೈ ಕುದಿಯಿತು. ಚಾನೆಲ್ ಬದಲಾಯಿಸಿದೆ. ಅಷ್ಟೇ ನನ್ನ ಕೈಯಲ್ಲಿ ಮಾಡಲಾಗಿದ್ದುದು!

Submitted by ಗಣೇಶ Sun, 07/27/2014 - 23:56

"ನಿಮಗೆ ಈ ವಿಷಯ ಬಿಟ್ಟು ಬೇರೆ ಏನೂ ಸಿಗುವುದಿಲ್ಲವೇ.." ಎಂದು ಎದುರಿಗೇ ಪ್ರಶ್ನಿಸಿದವರಿಗೆ ಉತ್ತರಿಸುವ ನಾಡನ್ನಾಳುವವರು, ಪತ್ರದ ಕಡೆ ಓರೆಗಣ್ಣಲ್ಲೂ ನೋಡಲಿಕ್ಕಿಲ್ಲ. ನೀವು ಹೇಳಿದ ವಿಚಾರಗಳೆಲ್ಲಾ ಒಪ್ಪತಕ್ಕಂತಹವು. ಬ್ರಿಟಿಷರ ಕಾಲದ ಶಿಕ್ಷಣ ಮಾತ್ರವಲ್ಲ, ಪೋಲೀಸ್, ನ್ಯಾಯ,ರಾಜಕಾರಣ,ಆಡಳಿತ ಪದ್ದತಿ..ಎಲ್ಲವೂ ಬದಲಾಗಬೇಕು.
ಹಣವಂತರು, ಪ್ರಭಾವಿಗಳು ಇಲ್ಲಿ ಯಾವ ಕೇಸು ಸಹ ಗೆಲ್ಲಬಹುದು. ನಮಗೆ ಏನಾದರೂ ಕಷ್ಟವಾದರೆ ಅದನ್ನು ಆದಷ್ಟು ಬೇಗೆ ಮರೆತು ಮುಂದಿನ ಜೀವನದ ಕಡೆ ಗಮನಿಸುವೆವು. ಅದೇ ರೇಪ್‌ಗೊಳಗಾದ ಹೆಣ್ಣು ಕೇಸು ಮುಗಿಯುವವರೆಗೆ ಪ್ರತೀ ಕ್ಷಣ ಅದನ್ನು ನೆನಪಿಸಿಕೊಂಡು ನರಳಬೇಕು. ವರ್ಷಗಳೇ ಉರುಳಿ, ರೇಪ್ ಮಾಡಿದವ ಹೀರೋನಂತೆ ಸುತ್ತುತ್ತಿದ್ದರೆ, ಆಕೆ+ಆಕೆಯ ಮನೆಯವರು ಸದಾ ಅವಮಾನದಲ್ಲಿ ಕೊರಗುತ್ತಿರುವರು.
ಪೋಲೀಸರಂತೂ ಬ್ರಿಟಿಷರ ಕಾಲದವರೇ.. ರೇಪ್ ಬಿಡಿ, ನಮ್ಮದೊಂದು ಸುಲಭದಲ್ಲಿ ತೀರ್ಮಾನಿಸಬಹುದಾದ ಕೇಸನ್ನು ತೆಗೆದುಕೊಂಡು ಹೋದಾಗಲೂ ಅವರು ವರ್ತಿಸಿದ ರೀತಿ ನಮಗೆ ಆಶ್ಚರ್ಯವಾಯಿತು. ನಮ್ಮ ಅಪಾರ್ಟ್‌ಮೆಂಟು ಬಿಲ್ಡರ್ ಮೇಲೆ ನಾವು ಕನ್ಸ್ಯೂಮರ್ ಕೋರ್ಟಲ್ಲಿ ಕೇಸು ಹಾಕಿರುವ ಬಗ್ಗೆ ಹಿಂದೆ ಬರೆದಿರುವೆ. ಆತ ಬೇರೆಯವರಿಗೆ ಹೇಳಿ ನಮ್ಮ ಸೀವೇಜ್ ಲೈನ್‌ನ್ನು ಮರಳು, ಮಣ್ಣು ಹಾಕಿ ಮುಚ್ಚಿಸಿದ! ಪೋಲೀಸರ ಬಳಿ ದೂರು ಕೊಡಲು ಹೋದಾಗ ಬೀದಿ ನಾಯನ್ನು ಅಟ್ಟುವಂತೆ ಹಚಾ ಹಚಾ ಅಂದಿದ್ದರು! ಕೊನೆಗೆ ಪ್ರಭಾವಿ ವ್ಯಕ್ತಿಯ ಮೂಲಕ ಫೋನ್ ಮಾಡಿಸಿದಾಗಲೇ ಕೇಸು ಕೈಗೆತ್ತಿಕೊಂಡರು-ನ್ಯಾಯಾಲಯದಲ್ಲಿ ಕೇಸಿದೆಯಲ್ಲ, ಅಲ್ಲೇ ತೀರ್ಮಾನಿಸಿ ಎಂದು ತಮ್ಮ ಅಮೂಲ್ಯ ಸಲಹೆ ಕೊಟ್ಟು ಕೈ ತೊಳೆದುಕೊಂಡರು. ಇನ್ನು ಏನೂ ಅರಿಯದ ಹಳ್ಳಿಹೆಣ್ಣು ಪೋಲೀಸರ ಕದ ತಟ್ಟಿದರೆ ಅವಳಿಗೆ ಸಿಗುವ ಸಲಹೆ ಏನಿರಬಹುದು ನೀವೇ ಆಲೋಚಿಸಿ.
ನ್ಯಾಯಾಲಯ :)ದ ವಿಷಯ- ಇಲ್ಲೂ ನಮ್ಮದೇ ಅನುಭವ ಹೇಳುವೆ- ನಾವು ಕೇಸು ಹಾಕುತ್ತೇವೆ ಎಂದಾಗಲೇ ಬಿಲ್ಡರ್ "ಹೋಗ್ರಿ, ವರ್ಷಗಟ್ಟಲೆ ಕೇಸು ನಡೆಸುವೆ..." ಎಂದೆಲ್ಲಾ ಸವಾಲು ಹಾಕಿದ್ದ. ಅದರ ಪ್ರಕಾರ ಡೇಟು ಮೇಲೆ ಡೇಟು ಕೊಡುತ್ತಾ ಕೇಸು ಮುಂದೆ ಹೋಗುತ್ತಿದೆ. ಎರಡು ಸೆಕೆಂಡಲ್ಲೇ ಪೂರ್ತಿ ಫೈಲನ್ನೇ ಅಮೆರಿಕಾಗೆ ಕಳುಹಿಸಬಹುದಾದ ಈ ಕಾಲದಲ್ಲಿ ತಿಂಗಳುಗಟ್ಟಲೆ ಸಮಯ ಅಫಿದಾವಿತ್ ಸಲ್ಲಿಸಲು ಕೊಡುವರು! ನನ್ನ ಅಂದಾಜು -ಕೇಸಿನ ಡೇಟು ಮುಂದೆ ಹಾಕುತ್ತಾ ಹಾಕುತ್ತಾ ಎರಡೂ ಕಡೆ ವಕೀಲರಿಗೆ +ನ್ಯಾಯಾಧೀಶರಿಗೆ ಕೇಸು ಏನೆಂದು ಮರೆತೇ ಹೋಗುವುದೋ ಏನೋ..:) ಇನ್ನು ರೇಪ್‌ಗೊಳಗಾದ ಹೆಣ್ಣು ವರ್ಷಗಟ್ಟಲೆ ನ್ಯಾಯಾಲಯ ಸುತ್ತುವ ಶಿಕ್ಷೆ ರೇಪ್ ಮಾಡಿದವನಿಗೆ ಕೊಡುವ ಜೈಲು ಶಿಕ್ಷೆಗಿಂತ ಜಾಸ್ತಿಯೇ.
ಅತ್ಯಾಚಾರಿಗೆ ಅತೀ ಕಠಿಣ ಶಿಕ್ಷೆ, ಅತಿ ಶೀಘ್ರವೇ ನೀಡಲಾಗದಿದ್ದರೂ, ಕೊನೇ ಪಕ್ಷ ಒಂದು ತಿಂಗಳೊಳಗಾದರೂ ನೀಡುವಷ್ಟು ಸುಧಾರಣೆ ನ್ಯಾಯಾಲಯದಿಂದ ಸಾಧ್ಯವಾ? ಹಣವಂತರ ಬೆನ್ನಿಗೆ ನಿಲ್ಲುವ, ರಾಜಕಾರಣಿಗಳ ಆಳುಗಳಂತೆ ವರ್ತಿಸುವ ನಮ್ಮ ಪೋಲೀಸರ ವರ್ತನೆಯಲ್ಲಿ ಬದಲಾವಣೆ ಸಾಧ್ಯವಾ? ರಾಜಕಾರಣಿಗಳು ಇರುವುದು ಜನರನ್ನು ದರ್ಪದಿಂದ ಆಳಲು ಅಲ್ಲ,ಜನಸೇವೆಗೆ ಎಂದು ಅವರ ತಲೆಗೆ ತರಲು ಸಾಧ್ಯವಾ?