ನಾನು ಓದಿದ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕವಿತೆ

ನಾನು ಓದಿದ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕವಿತೆ

ಕರ್ನಾಟಕ ಸಂಗೀತದ ಪಿತಾಮಹರೆನಿಸಿದ ಪುರಂದರದಾಸರನ್ನು ವ್ಯಾಸರು ’ದಾಸರೆಂದರೇ ಪುರಂದರದಾಸರಯ್ಯ’ ಎಂದರು. ಇಂತಹ ಪುರಂದರದಾಸರ ಬಗ್ಗೆ
ನನ್ನ ನೆಚ್ಚಿನ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಬರೆದ ಕವಿತೆ ಇತ್ತೀಚೆಗೆ ಓದಿದೆ. ಇದನ್ನು ಸಂಪದ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಆಸೆಯಾಯಿತು.
ಅದಕ್ಕೆ ಇಲ್ಲಿ ಮೂಡಿಸಿದೆ.

ದಾಸರೆಂದರೆ ನಮ್ಮ ವರ ಪುರಂದರರಯ್ಯ:
ಇದ್ದು ಇಲ್ಲೇ, ಅಲ್ಲಿಗೇರಿದವರು,
ಸಹಜ ಮುಕ್ತಿಯ ನೌಕೆ ಬರುವವರೆಗೂ ಇಲ್ಲೆ
ಈಸಿದವರು, ಎದ್ದು ಜೈಸಿದವರು.

ಬೀದಿ ತಿರುಕನ ಹಾಗೆ ದೈವ ಬಂದಾರಿಸಿತು
ಸಾರಿಸಿತು ಇವರೆದೆಯ, ಹಾರಿಸಿತ್ತು;
ಒದ್ದೆ ಅರಿವೆಯ ಹಿಂಡಿ ರಾಗವನು ಅರಿವಿಂದ
ಆರಿಸಿತು:ದಾಸತ್ವಕೇರಿಸಿತ್ತು.

ನತ್ತು ಕೊಟ್ಟಳ್ಳು ಹರಿಗೆ, ಅತ್ತುಬಿಟ್ಟಳು ಮರೆಗೆ
ಪತಿಯನಿತ್ತಳು ಕೊಡುಗೆ ದೇವನಡಿಗೆ,
ಹೆಣ್ಣು ಮಾಯೆಯ ನೆರಳಿ? ಹೆಣ್ಣು ಗಂಡಿನ ಮರುಳೆ?
ಹೇಳಲೆದೆ ಉಂಟೇನು ಹಾಗಿವಳಿಗೆ?

ಮೈಮರೆತು ಹರಿಸ್ಮರಿಣೆ ಮಾಡಿದರು, ಹಾಡಿದರು;
ಹತ್ತುಜನ ಕೂಡಿದರು ಹರಿಭಕ್ತರು,
ಈವೊತ್ತು ಈ ಕೊಂಪೆ, ನಾಳೆ ದೂರದ ಹಂಪೆ
ಹರಿಯಿಂಪ, ನರುಗಂಪ ಹರಡಿದ್ದರು.

ಕವಿಯಂಗೆ ಆಡಿದರೆ? ಇಲ್ಲಿಲ್ಲ, ತಮ್ಮನ್ನೆ
ಮಿಡಿಸಿದವರು, ನುಡಿಸಿದವರು ಪ್ರಾಣ ದುಡುಕಿ;
ಹಾಡಿದರೆ? ಅಲ್ಲಲ್ಲ ಭಕ್ತಿಯನೆ ಕಾಡಿದರು
ಮನವ ಜಾಲಾಡಿದರು ಹರಿಯ ಹುಡುಕಿ.

ಕಲ್ಲು, ತಿಕ್ಕುವ ಕಲ್ಲು ನಮ್ಮ ದಾಸರ ಭಕ್ತಿ
ಅಲ್ಲಿ ಸತ್ವಪರೀಕ್ಷೆ ನಡೆಯಬೇಕು;
ಮದರಂಗಿಯಂತೆ ಮನ ತೇದು, ಮೇಲಿನ ರಂಗು
ಮರೆಯಾಗಿ ಒಳ ಬಣ್ಣ ಒಡೆಯಬೇಕು.

ದೇಹ ಬೀಜದ ಹಾಗೆ ಎತ್ತಲೋ ಮರೆಯಾಗಿ
ಭಕ್ತಿ ಹೆಮ್ಮರವಾಗಿ ಏಳಬೇಕು,
ಖೇದ, ನಾದದಲ್ಲಿ ಹದವಾಗಿ ಮುದವಾಗಿ
ಮಾರ್ಪಟ್ಟು ಮರು ಹುಟ್ಟು ತಾಳಬೇಕು.

ಹತ್ತಾರು ರಂಗುಗಳು ಹೊಸೆದು ಬೆಳಕಿನ ಒಂದೆ
ಚಿಗುರೊಡೆದು ಅಂಗಾಂಗ ತುಂಬಬೇಕು,
ಏನೆ ಕೇಳಲಿ ಕರ್ಣ, ಏನೆ ಅನ್ನಲಿ ಬಾಯಿ
ಹೆ ನಾಮವೆಂದು ಮನ ನಂಬಬೇಕು.

ಬೇರೆ ಸ್ಮಾರಕ ಬೇಕೆ ಇವರಂಥ ಭಕ್ತರಿಗೆ
ಎಲ್ಲರನ್ನೂ ಸೇರಿದಂಥವರಿಗೆ?
ಬೇರೆ ಬಣ್ಣನೆ ಯಾಕೆ ಈ ಇಂಥ ಮುಕ್ತರಿಗೆ
ಎಲ್ಲವನ್ನೂ ಮೀರಿ ನಿಂತವರಿಗೆ!

Rating
No votes yet