ನಾನು (ಕಥೆ)

ನಾನು (ಕಥೆ)

ಜೀವನ ನಾನೆಂದುಕೊಂಡಂತೆ ಅಲ್ಲದಿದ್ದರೂ...ಬಹಳ ಕಷ್ಟವಾಗೇನೂ ಸಾಗುತ್ತಿರಲಿಲ್ಲ. ಹೂವಿನ ಹಾಸಿಗೆ ಅಲ್ಲದಿದ್ದರೂ ಮುಳ್ಳಿನ ಮಂಚವಂತೂ ಆಗಿರಲಿಲ್ಲ. ಇದ್ದುದದರಲ್ಲೇ ಸಂತೋಷವಾಗಿ ಜೀವನ ಸಾಗುತ್ತಿತ್ತು. ಹೆಂಡತಿ, ಮುದ್ದಾದ ಮಗು, ಪುಟ್ಟದೊಂದು ಮನೆ ಎಲ್ಲ ಚೆನ್ನಾಗೆ ಇತ್ತು.

ಹೌದು ಚೆನ್ನಾಗೇ ಇತ್ತು...!! ಈಗ ಚೆನ್ನಾಗಿಲ್ಲ...ಈಗ ಎರಡು ತಿಂಗಳಿಂದ ತಲೆ ಕೆಟ್ಟು ಗೊಬ್ಬರ ಆಗಿ ಹೋಗಿದೆಇದಕ್ಕೆಲ್ಲ ಕಾರಣ?? ನಾನು...ಹೌದು ನಾನು. ಎರಡು ತಿಂಗಳ ಹಿಂದೆ ಗೆಳೆಯನ  ಒತ್ತಡಕ್ಕೆ ಮಣಿದು ಒಂದು ಸಮಾರಂಭಕ್ಕೆ ಹೋಗಿದ್ದೆ. ಸ್ವಲ್ಪ ಹೊತ್ತು ಅದೂ ಇದೂ ಅಂತ ಏನೇನೋ ಕಾರ್ಯಕ್ರಮಗಳು ನಡೆದವು. ನಂತರ ಒಬ್ಬ ಬುದ್ಧಿಜೀವಿ ಮಾತನಾಡಿದ ಭಾಷಣ ನನ್ನ ಬದುಕನ್ನೇ ನಾಶ ಮಾಡಿಬಿಟ್ಟಿದೆ.

ಆತ ಭಾಷಣ ಮಾಡಲು ಆಯ್ದುಕೊಂಡ ವಿಷಯ "ನಾನು". ಆತ ಭಾಷಣ ಮಾಡುತ್ತಿದ್ದಂತೆ ಮೊದಮೊದಲು ನಾನು ಅಷ್ಟಾಗಿ ಅದರ ಕಡೆ ಗಮನ ಕೊಡಲಿಲ್ಲ. ಆದರೆ ಒಮ್ಮೆ ಗಮನ ಕೊಟ್ಟ ಮೇಲೆ ಯಾಕೋ  ಭಾಷಣ ನನ್ನನ್ನು ಆವರಿಸಿಕೊಂಡು ಬಿಟ್ಟಿತ್ತು. ಆತ ಹೇಳುತ್ತಿದ್ದ ವಿಷಯಗಳು ನೇರವಾಗಿ ಸೂಜಿಯಂತೆ ನನಗೆ ಹೇಳುತ್ತಿರುವಂತೆ ಭಾಸವಾಗಿತ್ತು. ಭಾಷಣ ಮುಗಿದು ಸುಮಾರು ಹೊತ್ತು ಆಗಿದ್ದರೂ ಅದರ ಗುಂಗಿನಿಂದ ಆಚೆ ಬರಲು ಸಾಧ್ಯವಾಗಿರಲಿಲ್ಲ. ತಲೆ ತುಂಬಾ ಆತ ಹೇಳಿದ ವಿಷಯಗಳೇ ಗಿರಕಿ ಹೊಡೆಯುತ್ತಿದ್ದವು.

ಅಲ್ಲಿಂದ ಮನೆಗೆ ಬಂದ ಮೇಲೂ ಅದರ ಮತ್ತಿನಿಂದ ಆಚೆ ಬರಲು ಸಾಧ್ಯವಾಗುತ್ತಿಲ್ಲ.  ಭಾಷಣ ನನ್ನ ಮೇಲೆ ಅಷ್ಟೊಂದು ಪರಿಣಾಮ ಬೀರಿತ್ತು. ಊಟ ಆದ ಮೇಲೆ ರೂಮಿಗೆ ಹೋಗಿ ಆತ ಭಾಷಣದಲ್ಲಿ ಹೇಳಿದಂತೆ,ಕನ್ನಡಿಯ ಮುಂದೆ ನಿಂತು ನನ್ನ ಪ್ರತಿಬಿಂಬದ ಕಣ್ಣಿನ ದೃಷ್ಟಿಯನ್ನೇ ದಿಟ್ಟಿಸಿ ನೋಡಿ ಒಂದು ಪ್ರಶ್ನೆ ಕೇಳಿಕೊಂಡೆ. ನಾನು ಯಾರುನಾನು ಇಲ್ಲಿಗೇಕೆ ಬಂದಿದ್ದೇನೆಇಲ್ಲಿ ನನ್ನ ಕೆಲಸ ಏನು? ಸಂಬಂಧಗಳೆಲ್ಲ ಯಾಕೆ? ಅಪ್ಪ ಅಮ್ಮ,ಹೆಂಡತಿ,ಮಗ,ಬಂಧುಗಳು,ಸ್ನೇಹಿತರು,ಒಳ್ಳೆಯದು,ಕೆಟ್ಟದು,ಹುಟ್ಟು,ಸಾವು,ಅಳು,ನೋವು,ದುಃಖ,ಸಂತೋಷ, ಇವೆಲ್ಲದರ ಜೊತೆ ನಾನ್ಯಾಕೆ ಹೊಂದಿಕೊಂಡಿದ್ದೇನೆ?

ಉಫ್...ಒಂದರೆ ಘಳಿಗೆ ತಲೆ ಗಿರ್ ಎಂದುಬಿಟ್ಟಿತು. ನಾನು ಕೇಳಿಕೊಂಡ ಯಾವುದೇ ಪ್ರಶ್ನೆಗೂ ನಿಖರವಾದ ಉತ್ತರ ಸಿಗುತ್ತಿಲ್ಲ. ಮತ್ತೆ ಕನ್ನಡಿಯಲ್ಲಿ ನೋಡಲು ಭಯ ಆಗುತ್ತಿತ್ತು. ಮತ್ತೆ ಮತ್ತೆ ಅದೇ ಪ್ರಶ್ನೆಗಳು ಬೂಮರಾಂಗ್ ಹಾಗೆ ಬಂದೆರಗುತ್ತಿತ್ತು. ಛೆ...ಇದೇನಿದು ಹೀಗಾಗುತ್ತಿದೆ. ಅಷ್ಟರಲ್ಲಿ ಹಿಂದಿನಿಂದ ಬಂದ ಹೆಂಡತಿ ಇದೇನ್ರಿ? ಮನೆಗೆ ಬಂದಾಗಿನಿಂದ ಒಂದು ರೀತಿ ಇದ್ದೀರಾ? ಯಾಕೆ ಹುಷಾರಿಲ್ವಾ ಎಂದು ಹಣೆ ಮುಟ್ಟಿ  ನೋಡಿದಳು. ಜ್ವರ ಏನೂ ಇಲ್ಲವಲ್ಲ....

 ವಿಷಯಗಳನ್ನು ಅವಳ ಬಳಿ ಹೇಳಿದರೆ ಅವಳು ಲೇವಡಿ ಮಾಡಿಬಿಡಬಹುದು, ಇಲ್ಲವಾದರೆ ತಲೆ ಕೆಟ್ಟಿದೆ ಎನ್ನುವಳು ಎಂದುಕೊಂಡು ಏನಿಲ್ಲ ಕಣೆ ಆರಾಮಾಗೆ ಇದ್ದೀನಿ ಎಂದು ಅವಳ ಕಣ್ಣೋಟವನ್ನು ತಪ್ಪಿಸಿಕೊಂಡು ಒಳಗೆ ಹೋದೆ.

 ರಾತ್ರಿಯೆಲ್ಲ ಅದೇ ಯೋಚನೆ. ನಾನು ಯಾರು? ಇದೆಲ್ಲ ಏನು?  ಜವಾಬ್ದಾರಿ ಎಲ್ಲ ಯಾಕೆ? ಅಯ್ಯೋ....ಹುಚ್ಚು ಹಿಡಿಯುತ್ತಿದೆ....ಹಾಗೂ ಹೀಗೂ ಕಷ್ಟಪಟ್ಟು ಬೆಳಗಿನ ಜಾವ ನಿದ್ದೆ ಹತ್ತಿತ್ತು. ತಡವಾಗಿ ಮಲಗಿದ ಪರಿಣಾಮ ಎದ್ದಾಗ ತಡವಾಗಿತ್ತು. ಹಾಗೆ ಆಫೀಸಿಗೆ ಹೋದೆ. ಅಲ್ಲೂ ಸಹ ಅದೇ ಅದೇ ಯೋಚನೆಗಳು..ಒಂದಕ್ಕೂ ಉತ್ತರ ಸಿಗುತ್ತಿಲ್ಲ. ಯಾರ ಬಳಿಯೂ ಹೇಳುವ ಹಾಗಿಲ್ಲ. ಇದೇನಿದು ನನ್ನ ಪರಿಸ್ಥಿತಿ? ಅಂತರ್ಜಾಲದಲ್ಲಿ ಏನಾದರೂ ಮಾಹಿತಿ ಸಿಗಬಹುದೇನೋ ಎಂದು ಎಲ್ಲ ತಾಣಗಳಲ್ಲೂ ಹುಡುಕಾಡಿದೆ....ಊಹುಂ....ಇಲ್ಲ.

ಯಾವುದಾದರೂ ಲೈಬ್ರರಿಗೆ ಹೋಗಿ ಸಂಬಂಧಪಟ್ಟ ಪುಸ್ತಕಗಳು ಏನಾದರೂ ಸಿಗಬಹುದೇನೋ ಎಂದು ಹುಡುಕಾಡಿದೆ...ಇಲ್ಲ ಅದರ  ಪ್ರಯೋಜನವಾಗಲಿಲ್ಲ. ದಿನಗಳು ಕಳೆಯುತ್ತಿದ್ದಂತೆ ನನ್ನ  "ನಾನು" ಸಮಸ್ಯೆಯೂ ಉಲ್ಬಣವಾಗುತ್ತ ಹೋಯಿತು. ಈಚೀಚೆಗೆ ಹೆಚ್ಚು ಒಂಟಿಯಾಗಿ ಇರಲು ಮನಸ್ಸು ಬಯಸುತ್ತಿದೆ. ಒಬ್ಬೊಬ್ಬನೇ ಊರುಗಳನ್ನು ಸುತ್ತಿದೆ. ಸಮಸ್ಯೆಯನ್ನು ತಲೆಯಿಂದ ಕಿತ್ತು ಹಾಕಲು ಏನೇನೋ ಪ್ರಯತ್ನ ಮಾಡಿದರೂ ಪರಿಹಾರ ಸಿಗಲಿಲ್ಲ.

ಒಮ್ಮೆ ಹೀಗೆ ಯಾವುದೋ ಒಂದು ಊರಿನಿಂದ ಮನೆಗೆ ವಾಪಸ್ ಬಂದಾಗ ಮನೆಯಲ್ಲಿ ಯಾರೋ ಒಬ್ಬ ವಯಸಾದ ವ್ಯಕ್ತಿ ಕುಳಿತಿದ್ದರು. ಆತನ ವಯಸ್ಸು ಅಂದಾಜು ಎಂಭತ್ತು ವರ್ಷ ಇರಬಹುದು. ಹೊಟ್ಟೆಯ ತನಕ ಬೆಳೆದಿದ್ದ ಬೆಳ್ಳನೆ ಗಡ್ಡವನ್ನು ನೋಡಿ ಅವರ ವಯಸನ್ನು ಅಂದಾಜಿಸಿದ್ದೆ. ಅವರ ಕಣ್ಣುಗಳಲ್ಲಿ ಅದೆಂಥದೋ ತೇಜಸ್ಸು ಹೊಳೆಯುತ್ತಿತ್ತು. ಅವರನ್ನು ನೋಡಿದ ತಕ್ಷಣ ಅದ್ಯಾಕೋ ಗೊತ್ತಿಲ್ಲ ಅವರ ಕಾಲಿಗೆ ಬಿದ್ದು ನಮಸ್ಕರಿಸಬೇಕು ಎಂದೆನಿಸಿತು. ಅವರಿಗೆ ನಮಸ್ಕಾರ ಮಾಡುತ್ತಿದ್ದಂತೆ ಒಳಗಿನಿಂದ ನನ್ನ ಹೆಂಡತಿ ಬಂದಳು.

ಎರಡು ತಿಂಗಳಿಂದ ನನ್ನ "ನಾನು" ಸಮಸ್ಯೆಯಿಂದ ಅವಳೂ ಸಾಕಷ್ಟು ಬಳಲಿದ್ದಳು. ಅದನ್ನು ಅವಳ ಕಣ್ಣುಗಳೇ ಹೇಳುತ್ತಿತ್ತು. ಅವಳು ಬಂದೊಡನೆ ಅವಳನ್ನು ನೀನು ಸ್ವಲ್ಪ ಹೊತ್ತು ಆಚೆ ಇರಮ್ಮ ಎಂದು ವಯಸಾದ ವ್ಯಕ್ತಿ ಅವಳಿಗೆ ಹೇಳಿದರು. ಅವಳು ಸುಮ್ಮನೆ ತಲೆಯಾಡಿಸಿ ಮಗುವನ್ನು ಕರೆದುಕೊಂಡು ಹೊರನಡೆದಳು. ನಾನು ಏನೂ ಮಾತನಾಡದೆ ಸುಮ್ಮನೆ ವ್ಯಕ್ತಿಯನ್ನೇ ನೋಡುತ್ತಿದ್ದೆ.

ಅವರು ನನ್ನ ತಲೆಯ ಮೇಲೆ ಕೈಯಾಡಿಸಿ ಮಗು ನಿನ್ನ ಸಮಸ್ಯೆ ಏನು ಎಂದರು. ನಾನು ಅವರಿಗೆ ನನ್ನ "ನಾನು" ಸಮಸ್ಯೆಯನ್ನು ವಿವರಿಸಿದೆ. ಅವರು ಶಾಂತವಾಗಿ ಎಲ್ಲ ಕೇಳಿ ಒಂದು ಮಂದಹಾಸವನ್ನು ಬೀರಿದರು. ಮಗು, ಜಗತ್ತು ಎನ್ನುವುದು ಭಗವಂತನ ಕಾರ್ಖಾನೆಯಂತೆ. ನಾವೆಲ್ಲರೂ ಇಲ್ಲಿ ಕಾರ್ಮಿಕರಂತೆ. ನಿನ್ನ ಮನೆ ಕಾರ್ಖಾನೆಯ ಒಂದು ವಿಭಾಗವಿದ್ದಂತೆ. ಇಲ್ಲಿ ನಿಮ್ಮ ತಂದೆ ತಾಯಿಯರೇ ನಿನಗೆ ಮುಖ್ಯಸ್ತರು. ನಿನ್ನ ಪತ್ನಿ ನಿನ್ನ ಪಾಲುದಾರಳಂತೆ, ನಿನ್ನ ಮಕ್ಕಳು ಬೋನಸ್ ಇದ್ದಂತೆ, ಬಂಧುಗಳು ಸ್ನೇಹಿತರು ಇವರೆಲ್ಲ ನಿನ್ನ ಸಹೋದ್ಯೋಗಿಗಳಂತೆ.

ನೀನು ಬೆಳೆಯುತ್ತ ಹೋದಂತೆ ಒಂದೊಂದು ಹಂತದಲ್ಲಿ ಒಂದೊಂದು ಪ್ರಮೋಷನ್ನು ಸಿಗುತ್ತದೆ, ಪ್ರಮೋಷನ್ನು ಸಿಕ್ಕಂತೆ ನಿನ್ನ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಅವರವರ ಕರ್ಮಾನುಸಾರ ಒಬ್ಬೊಬ್ಬರಿಗೆ ಇಂತಿಷ್ಟು ವರ್ಷ ಕೆಲಸ ಎಂದು  ಭಗವಂ ಮುಂಚೆಯೇ ನಿರ್ಧರಿಸಿರುತ್ತಾನೆ. ಅವರ ಕೆಲಸ ಮುಗಿದ ಮೇಲೆ ಅವನೇ ನಿವೃತ್ತಿ ಕೊಟ್ಟುಬಿಡುತ್ತಾನೆ. ಕೆಲವರು ಮುಂಚೆಯೇ ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಾರೆ!!! ಆದರೆ ಅದು ಪರಿಪೂರ್ಣವಾಗಿರುವುದಿಲ್ಲ.

ಯಾರು ಭಗವಂತ ಕೊಟ್ಟ  ಕೆಲಸವನ್ನು ಮರ್ಥವಾಗಿ ನಿರ್ವಹಿಸುತ್ತಾರೆ ಅವರ ಜೀವನ ಸಾರ್ಥಕವಾಗಿರುತ್ತದೆ. ಇಷ್ಟು ಹೇಳಿ  ವ್ಯಕ್ತಿ ಸರಿ ಮಗು ನಾನಿನ್ನು ಹೊರಡುತ್ತೀನಿ. ನನಗಿನ್ನೂ ಬಹಳಷ್ಟು ಕೆಲಸ ಇದೆ ಎಂದು ಹೊರಡಲು ಅನುವಾದರು. ನಾನು ಅವರೊಡನೆ ಎದ್ದು, ಸ್ವಾಮಿ, ನನ್ನ ತಲೆಯಲ್ಲಿ ಕೊರೆಯುತ್ತಿದ್ದ "ನಾನು" ಎಂಬ ಸಮಸ್ಯೆ ಈಗ ಬಗೆಹರಿಯಿತು. ಆದರೆ ತಾವು ಯಾರು ಸ್ವಾಮಿ? ಇಷ್ಟು ಹೊತ್ತು "ನಾನು ಯಾರು?" ಎಂಬ ಪ್ರಶ್ನೆ ಕಾಡುತ್ತಿತ್ತು. ಈಗ "ತಾವು ಯಾರೆಂಬ ಪ್ರಶ್ನೆಯೇ?" ಹ್ಹ...ಹ್ಹ...ಹ್ಹ...ಎಂದು ನಗುತ್ತಾ  ವ್ಯಕ್ತಿ ಹೊರಟು  ಹೋದರು.

ಅವರು ಹೊರಟ ಮೇಲೆ ನನ್ನ ಹೆಂಡತಿ ಒಳಗೆ ಬಂದಳು.ನಾನು ಅವಳನ್ನು ಯಾರೇ ಅವರುಎಂದಿದ್ದಕ್ಕೆ,ಅವರು ನನ್ನ ತಾತ,ಊರಿನಿಂದ ಬಂದಿದ್ದರು.ನಿಮ್ಮ ಸಮಸ್ಯೆಗೆ ಪರಿಹಾರ ಹೇಳಲೆಂದು ನಾನೇ ಅವರನ್ನು ರೆಸಿದ್ದೆ ಎಂದಳು. ನನಗೆ ಆಶ್ಚರ್ಯ!! ಅಲ್ಲ ಕಣೇ ನಾನು ನ್ನ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅದು ಹೇಗೆ ನಿನಗೆ ಗೊತ್ತಾಯಿತು?

ಮಹಾಪ್ರಭು ತಾವು ನಿದ್ದೆಯಲ್ಲೂ ನಾನು ಯಾರು? ನಾನು ಯಾರು? ನಾನ್ಯಾಕೆ ಇಲ್ಲಿದ್ದೇನೆ? ಇವರೆಲ್ಲ ನನಗೇನಾಗಬೇಕು? ಎಂದು ಪ್ರತಿದಿನ ಕನವರಿಸುತ್ತಿದ್ದೀರಲ್ಲ. ಅದಕ್ಕೆ ನಾನೇ ಅವರನ್ನು  ಕರೆಸಿದೆ. ಅದು ಸರಿ ಕಣೆ ಅವರು ಏನು ಓದಿದ್ದಾರೆ? ಅಷ್ಟೊಂದು ತಿಳಿದುಕೊಂಡಿದ್ದಾರೆ?

ರೀ...ಅವರು ಜೀವನವನ್ನು ಓದಿದ್ದಾರೆ ಅಷ್ಟೇ ಎಂದು ನಕ್ಕಳು.

(ಇತ್ತೀಚಿಗೆ ಪಾರ್ಥಸಾರಥಿಯವರು ಬರೆದ ಲೇಖನ "ನಾನು" ಎಂಬ ವಿಷಯದಿಂದ ಸ್ಪೂರ್ತಿ ಪಡೆದು ಬರೆದ ಕಥೆ ಇದು)

Rating
No votes yet

Comments

Submitted by RAMAMOHANA Tue, 12/11/2012 - 14:18

ಜಯ0ತ್ ಅವರೆ, ಸರ್ಕಲ್ ಎದ್ದು ನಾನಾಗಿರುವಲ್ಲಿ ಇರುವ‌ ಎರಡೂ ನಿರೂಪಣಾ ಷೈಲಿ ಸೊಗಸಾಗಿದೆ. ನಿಮಗೆ ಅಭಿನ0ದನೆಗಳು.
ರಾಮೋ.