ನಾನು ನೋಡಿದ ಚಿತ್ರ- ಇಕಿರು (ಜಪಾನ್)
IMDb: http://www.imdb.com/title/tt0044741/?ref_=nv_sr_1
ನಮ್ಮ ಜೀವನ ಪರಿಪೂರ್ಣ ಎನ್ನಿಸುವುದು ಯಾವಾಗ? ಸಂಪತ್ತು ಗಳಿಸಿದಾಗ, ಕೀರ್ತಿ ಸಂಪಾದಿಸಿದಾಗ ಅಥವಾ ಬೇರಿನ್ನಾವುದಾದರೂ ವಸ್ತುವನ್ನು ಗಳಿಸಿದಾಗಲೋ? ಏನು ಗಳಿಸಿದರೂ ನಮಗೆ ಜೀವನದ ಕ್ಷಣಗಳನ್ನು ಅನುಭವಿಸಲು ಬರದಿದ್ದರೆ, ಜೀವನ ಎಷ್ಟು ದೀರ್ಘವಾಗಿದ್ದರೂ, ಎಷ್ಟು ಆರೋಗ್ಯಪುರ್ಣವಾಗಿದ್ದರೂ ವ್ಯರ್ಥವೇ. ಇಂದು ನಾ ಜೀವನದ ಬಗೆಗಿನ ದೃಷ್ಟಿಕೋನದ ಬಗ್ಗೆ ಇರುವ ಚಿತ್ರ ಅಕಿರಾ ಕುರೋಸಾವಾ ನಿರ್ದೇಶಿಸಿರುವ “ಇಕಿರು”. ಜಪಾನ್ ನ ಚಿತ್ರಗಳು ಹಾಲಿವುಡ್ ನಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗಳಿಸಲು ಕಾರಣರೆಂದೇ ಹೇಳಬಹುದಾದ ನಿರ್ದೇಶಕ ಅಕಿರಾ ಕುರೋಸಾವಾ. ಅವರ ಚಿತ್ರದಲ್ಲಿನ ಕ್ಯಾಮೆರಾ ಕೆಲಸ, ದೃಶ್ಯವನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತವೆ ಎಂದರೆ, ಕೆಲವು ಚಿತ್ರಗಳ ದೃಶ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲವೆನ್ನುವಷ್ಟು. ಅದರಲ್ಲೂ ಅವರ ಸಮುರಾಯ್ ಚಿತ್ರಗಳು ಚಿತ್ರ ವೀಕ್ಷಕರ ಅಚ್ಚುಮೆಚ್ಚು. ಅವರ ಇನ್ನಿತರ ಪ್ರಖ್ಯಾತ ಚಿತ್ರಗಳು, “ಶಿಚಿನಿನ್ ನೊ ಸಮುರಾಯ್”, ”ರಾಶೋಮಾನ್”, “ಯೊಜಿಂಬೊ”, “ರಾನ್” ಮತ್ತು ಇನ್ನೂ ಹಲವಾರು. ಜಪಾನಿ ಚಿತ್ರಗಳನ್ನು ನೋಡಬಯಸುವವರು ಅಕಿರಾ ಚಿತ್ರಗಳಿಂದ ಪ್ರಾರಂಭಿಸುವುದು ಒಳ್ಳೆಯದು.
ಚಿತ್ರದ ಪ್ರಾರಂಭದಲ್ಲೇ ನಿರ್ದೇಶಕ ನಮಗೆ ಚಿತ್ರದ ಮುಖ್ಯ ಪಾತ್ರಧಾರಿ ಕಾಂಜಿ ವಾಟನಾಬೆಗೆ ಹೊಟ್ಟೆಯ ಕ್ಯಾನ್ಸರ್ ಇರುವುದರ ಬಗ್ಗೆ ತಿಳಿಸುತ್ತಾನೆ. ಆದರೆ ಅದು ಇನ್ನೂ ಆತನಿಗೆ ತಿಳಿದಿಲ್ಲವಷ್ಟೇ. ಕಾಂಜಿ ಸರ್ಕಾರಿ ಸಾರ್ವಜನಿಕ ವ್ಯವಹಾರಗಳ ಕಚೇರಿಯಲ್ಲಿ ಕೆಲಸಮಾಡುವ ಒಬ್ಬ ಅಧಿಕಾರಿ. ಯಾವ ಅಡಚಣೆಯೂ ಇಲ್ಲದೆ ಯಾರ ಸಂಗವೂ ಸೇರದೆ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಾ ದಿನವೂ ಆತ ಕಚೇರಿಯಲ್ಲಿ ಕಾಲ ಕಳೆಯುತ್ತಿರುತ್ತಾನೆ. ಹೀಗೆ ಕೆಲಸ ಮಾಡುತ್ತಿದ್ದ ಒಂದು ದಿನ, ಒಂದು ಕಾಲೋನಿಯ ಹೆಂಗಸರೆಲ್ಲ ಈತನ ಕಚೇರಿಗೆ ಬಂದು ತಮ್ಮ ಮನೆಗಳ ಬಳಿ ಆಗಿರುವ ಚರಂಡಿಯ ಗುಂಡಿಯಲ್ಲಿ ನೀರು ತುಂಬಿ ಓಡಾಡುವವರಿಗೂ ತೊಂದರೆಯಾಗಿ, ಕಾಲೋನಿಯಲ್ಲಿ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದ್ದರ ಬಗ್ಗೆ ದೂರು ಕೊಟ್ಟು ಆ ಗುಂಡಿಯನ್ನು ಮುಚ್ಚಿಕೊಡಲು ಕೇಳಿಕೊಳ್ಳಲು ಬಂದಿರುತ್ತಾರೆ. ಆ ಗುಂಡಿಯನ್ನು ಮುಚ್ಚಿ ಸಮ ಮಾಡಿದರೆ ಅಲ್ಲಿ ಒಂದು ಒಳ್ಳೆಯ ಮಕ್ಕಳ ಆಟದ ಮೈದಾನ/ ಉದ್ಯಾನವನವಾಗಬಹುದು ಎಂದು ಕೇಳಿಕೊಳ್ಳುತ್ತಾರೆ. ಇವರ ದೂರು ಕೇಳಿದ ಒಬ್ಬ ಗುಮಾಸ್ತ ಕಾಂಜಿಯ ಬಳಿ ಬಂದು ಇದು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂದು ಕೇಳಿ ಆ ಹೆಂಗಸರನ್ನು ಆ ಇಲಾಖೆಗೇ ದೂರು ಕೊಡಲು ಕಳುಹಿಸುತ್ತಾನೆ. ಕಾಂಜಿ ಗುಮಾಸ್ತನಿಗೆ ನಿರ್ದೇಶನ ಕೊಟ್ಟು ಮತ್ತೆ ತನ್ನ ಕಡತಗಳಲ್ಲಿ ಮುಳುಗಿಹೋಗುತ್ತಾನೆ. ಆಗ ಆತನ ಕಿರಿಯ ಸಹೋದ್ಯೋಗಿಯೊಬ್ಬಳು ಜೋರಾಗಿ ಯಾವುದೊ ವಿಷಯಕ್ಕೆ ನಗಲು ಪ್ರಾರಂಭಿಸುತ್ತಾಳೆ. ಏಕೆ ಹೀಗೆ ನಗುತ್ತಿರುವುದಾಗಿ ಇನ್ನೊಬ್ಬ ಸಹೋದ್ಯೋಗಿ ಕೇಳಿದಾಗ ಆಕೆ ತಾನು ಓದಿದ ಒಂದು ಜೋಕನ್ನು ಎಲ್ಲರಿಗೂ ಓದಿ ಹೇಳುತ್ತಾಳೆ-
ಒಬ್ಬ- ಏಕೆ ನೀನು ಕಚೇರಿಗೆ ಎಂದೂ ರಜಾ ಹಾಕುವುದಿಲ್ಲ? ನಿನ್ನ ಕಚೇರಿ ನೀನಿಲ್ಲದೆ ನಡೆಯುವುದೇ ಇಲ್ಲವೇ?
ಇನ್ನೊಬ್ಬ- ಇಲ್ಲ ನಾನು ಒಂದು ದಿನ ರಜಾ ಹಾಕಿದರೆ, ನಾನಿಲ್ಲದೆಯೂ ಕಚೇರಿ ನಡೆಯಬಹುದು ಎಂದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ರಜಾ ಹಾಕುವುದಿಲ್ಲ.
ಇದನ್ನು ಕೇಳಿಯೂ ಕಾಂಜಿ ಏನೂ ಪರಿಣಾಮ ಬೀರದವನಂತೆ ಮತ್ತೆ ಕೆಲಸದಲ್ಲಿ ಮಗ್ನನಾಗುತ್ತಾನೆ.
ಇತ್ತ ಆ ಮಹಿಳೆಯರ ಗುಂಪು ಗುಮಾಸ್ತ ಹೇಳಿದ ಇಲಾಖೆಗೆ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ, ಅವರನ್ನು ಅಲ್ಲಿಂದ ಮತ್ತೆ ಇನ್ನೊಂದು ಇಲಾಖೆಗೆ ಕಳುಹಿಸಲಾಗುತ್ತದೆ. ಮತ್ತೆ ಅಲ್ಲಿಂದ ಇನ್ನೊಂದಕ್ಕೆ. ಹೀಗೆ ಅನೇಕ ಇಲಾಖೆಗಳನ್ನು ಸುತ್ತಾಡಿಕೊಂಡು ಕಡೆಗೆ ಉಪ ಮೇಯರ್ ಬಳಿಗೆ ಹೋದಾಗ ಆತ ಮತ್ತೆ ಅವರನ್ನು ಸಾರ್ವಜನಿಕ ವ್ಯವಹಾರಗಳ ಕಚೇರಿಗೆ ಕಳುಹಿಸುತ್ತಾನೆ. ಆ ಮಹಿಳೆಯರ ಗುಂಪು ಮತ್ತೆ ಕಾಂಜಿಯ ಕಚೇರಿಗೆ ಬಂದು ಕೇಳಿಕೊಂಡಾಗ ಮತ್ತೆ ಇನ್ನೊಂದು ಇಲಾಖೆಗೆ ಹೋಗುವಂತೆ ಗುಮಾಸ್ತ ಉತ್ತರ ಕೊಟ್ಟಾಗ, ಅವರೆಲ್ಲ ಸಿಟ್ಟಿಗೆದ್ದು ಆತನನ್ನು ಬಯ್ದು ಇನ್ನು ಆ ಕಚೇರಿಗೇ ತಾವು ಬರುವುದಿಲ್ಲವೆಂದು ಹೇಳಿ ಹೊರಡಲು ಮುಂದಾದಾಗ ಗುಮಾಸ್ತ ಅವರೆಲ್ಲ ಸಿಟ್ಟಾಗಿದ್ದನ್ನು ನೋಡಿ ಹೆದರಿ ಓಡಿಬಂದು ಸಮಾಧಾನಮಾಡಿ ತಮ್ಮ ದೂರನ್ನು ಲಿಖಿತ ರೂಪದಲ್ಲಿ ಕೊಡುವಂತೆಯೂ ತಮ್ಮ ಮೇಲಾಧಿಕಾರಿ ಕಾಂಜಿ ರಜೆಯಿಂದ ಮರಳಿ ಬಂದ ನಂತರ ಅದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿ ಕಳುಹಿಸುತ್ತಾನೆ. ಎಂದೂ ರಜೆ ತೆಗೆದುಕೊಳ್ಳದ ಕಾಂಜಿ ಹೀಗೆ ಯಾಕೆ ರಜೆ ಮೇಲೆ ತೆರಳಿದ್ದಾನೆ ಎಂದು ಕಚೇರಿಯ ಎಲ್ಲ ಸಹೋದ್ಯೋಗಿಗಳು ಚರ್ಚಿಸಿದ್ದೇ ಚರ್ಚಿಸಿದ್ದು. ಆತನಿಗೆ ಏನಾದರೂ ಆದರೆ ಮುಂದೆ ಯಾರು ಇಲಾಖೆಯ ಮುಖ್ಯಸ್ತರು ಆಗಬಹುದು ಎಂದು ಎಲ್ಲ ಚರ್ಚಿಸುತ್ತ ಕೂರುತ್ತಾರೆ.
ರಜೆ ಮೇಲಿದ್ದ ಕಾಂಜಿ ಆಸ್ಪತ್ರೆಯಲ್ಲಿ ತನ್ನ ಹೊಟ್ಟೆ ನೋವಿನ ಮರ್ಮ ತಿಳಿಯಲು ಬಂದಿರುತ್ತಾನೆ. ತನಗೆ ಹೊಟ್ಟೆಯ ಕ್ಯಾನ್ಸರ್ ಆಗಿರುವುದಾಗಿಯೂ ತನ್ನ ಬಳಿ ಬಹಳ ಸಮಯ ಇಲ್ಲವೆಂದು ತಿಳಿದು ಜರ್ಜರಿತನಾಗುತ್ತಾನೆ. ಇದನ್ನು ಅರಗಿಸಿಕೊಳ್ಳಲಾಗದೆ ಇದಕ್ಕಿದ್ದಂತೆ ತಾನು ಈ ಜಗತ್ತಿನಲ್ಲಿ ಒಬ್ಬಂಟಿಗ ಎಂಬ ಭಾವನೆ ಆವರಿಸಿಕೊಳ್ಳುತ್ತದೆ. ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ ತನ್ನ ಜೀವನದ ಹಾದಿಯಲ್ಲಿ ಈ ಸಂಗತಿ ಒಂದು ದೊಡ್ಡ ಗೋಡೆಯಂತೆ ಎದ್ದುನಿಲ್ಲುತ್ತದೆ. ಆಗ ತನ್ನ ಅಲ್ಲಿಯತನಕದ ಜೀವನವನ್ನು ಅವಲೋಕಿಸುತ್ತ ಹೋಗುತ್ತಾನೆ. ಮನೆಗೆ ಬಂದಾಗ ಮಗ ಸೊಸೆ ತಾವು ಕಟ್ಟಿಕೊಳ್ಳಲು ಬಯಸಿರುವ ಹೊಸ ಮನೆಯ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆಯೇ ವಿನಾ ಈತನ ಬಗ್ಗೆ ಅಷ್ಟು ಗಮನಹರಿಸುವುದಿಲ್ಲ. ಹಾಗೂ ಕೇಳಿದಾಗ ಕಾಂಜಿಯೂ ಈ ಹೊಸ ಸಂಗತಿಯ ಬಗ್ಗೆ ಏನೂ ಹೇಳುವುದಿಲ್ಲ. ಮನೆಯಲ್ಲಿ ಒಬ್ಬನೇ ಕುಳಿತು ತಾನು ಮಗ ಮಿತ್ಸುಒ ಮೇಲೆ ತೋರಿದ ಪ್ರೀತಿ, ತಾಯಿ ಸತ್ತ ಮೇಲೆ ಮತ್ತೆ ಮದುವೆಯಾಗದೆ ಅವನಿಗಾಗಿ ಮಾಡಿದ ತ್ಯಾಗಗಳನ್ನು ನೆನೆಯುತ್ತ ಮಗನನ್ನು ಮನದಲ್ಲೇ, “ಮಿತ್ಸುಒ, ಮಿತ್ಸುಒ” ಎಂದು ಕೂಗಿ ಕರೆಯುತ್ತಾನೆ. ಆ ಕೂಗಿಗೆ ಮಗ ಓಗೊಡದದ್ದನ್ನು ನೋಡಿ ಬೇಸರಗೊಂಡು ಬಂದು ಹಾಸಿಗೆಯಲ್ಲಿ ಅಳುತ್ತ ಮಲಗುತ್ತಾನೆ.
ರಜೆ ಮೇಲೆ ತೆರಳಿ ಐದು ದಿನವಾದರೂ ಕಾಂಜಿ ಬಾರದಿದ್ದನ್ನು ಗಮನಿಸಿ ಕಚೇರಿಯ ಒಬ್ಬ ಸಹೋದ್ಯೋಗಿ ಅವನ ಮನೆಯಲ್ಲಿ ವಿಚಾರಿಸಲು ಬಂದಾಗಲೇ ಅವನ ಮಗ ಸೊಸೆಗೆ ತಿಳಿಯುವುದು, ಕಾಂಜಿ ಕಚೇರಿಗೆ ಎಂದು ಹೇಳಿ ಬೇರೆಲ್ಲಿಯೋ ಹೋಗುತ್ತಿದ್ದಾನೆ ಎಂದು. ಇದು ಸಾಲದೆಂಬಂತೆ ಕಾಂಜಿ ತನ್ನ ಖಾತೆಯಿಂದ ೫೦೦೦೦ ಯೆನ್ ಗಳನ್ನು ಹಿಂತೆಗೆದುಕೊಂಡಿದ್ದು ಮಗನನ್ನು ಸ್ವಲ್ಪ ವಿಚಲಿತಗೊಳಿಸುತ್ತದೆ. ತಂದೆಯ ನಿವೃತ್ತಿಯ ಹಣದಿಂದ ಒಂದು ಮನೆಯನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದ ಮಿತ್ಸುಒ ತನ್ನ ತಂದೆ ಹೀಗೆ ಮನಸೋ ಇಚ್ಛೆ ತನ್ನ ದುಡ್ಡನ್ನು ಖರ್ಚು ಮಾಡಿದರೆ ಹೇಗೆ ಎಂದು ಆತಂಕಗೊಳ್ಳುತ್ತಾನೆ. ತನ್ನ ತಂದೆಯ ಬಗ್ಗೆ ತಿಳಿಯಲು ತನ್ನ ಅಂಕಲ್ ಬಳಿ ಬಂದಾಗಲೂ ಹೆಚ್ಚೇನೂ ತಿಳಿಯುವುದಿಲ್ಲ. ಇತ್ತ ಕಾಂಜಿ ಒಂದು ರಾತ್ರಿ ಬೇಸರದಿಂದ ಒಂದು ಸಾಕೆ(ಹೆಂಡದ) ಅಂಗಡಿಯಲ್ಲಿ ಕೂತು ಒಬ್ಬನೇ ಕುಡಿಯುತ್ತ ಕೂತಿದ್ದಾಗ ಒಬ್ಬ ಪತ್ರಕರ್ತನ ಜೊತೆ ಸ್ನೇಹವಾಗುತ್ತದೆ. ಅವನಿಗೆ ತನ್ನ ನೋವನ್ನೆಲ್ಲ ಹೇಳಿಕೊಂಡು ಜೀವನದಲ್ಲಿ ಅಲ್ಲಿಯ ತನಕ ತಾನು ಏನೂ ಮಾಡಿಲ್ಲವೆಂದೂ ಹಾಗಾಗಿ ತನ್ನ ನೋವನ್ನು ಸ್ವಲ್ಪ ಕಾಲವಾದರೂ ಮರೆಯಲು ಅಲ್ಲಿ ಕುಡಿಯುತ್ತಿರುವುದಾಗಿ ಹೇಳುತ್ತಾನೆ. ತನ್ನ ಬಳಿ ೫೦೦೦೦ಯೆನ್ ಇರುವುದಾಗಿಯೂ ಅದನ್ನು ಹೇಗೆ ಖರ್ಚು ಮಾಡಬೇಕೆಂದೇ ತಿಳಿಯುತ್ತಿಲ್ಲ ಎಂದು ಆ ಪತ್ರಕರ್ತನ ಬಳಿ ಹೇಳಿಕೊಳ್ಳುತ್ತಾನೆ. ಆಗ ಆ ಪತ್ರಕರ್ತನಿಗೆ ಕಾಂಜಿಯ ಮೇಲೆ ಮರುಕ ಹುಟ್ಟಿ ತನ್ನ ದುಡ್ಡಿನಲ್ಲೇ ಕಾಂಜಿಯನ್ನು ಊರಿನ ಜೂಜು ಅಡ್ಡೆ, ಕ್ಲಬ್, ಪಬ್, ಬಾರ್ ಮತ್ತು ಇನ್ನೂ ಅನೇಕ ಮೋಜಿನ ತಾಣಗಳಿಗೆ ಕರೆದೊಯ್ಯುತ್ತಾನೆ. ಇಷ್ಟೆಲ್ಲಾ ಮಾಡಿದರೂ ಇಡಿಯ ಜೀವನದಲ್ಲಿ ಪಡದ ಸಂತೋಷ ಈ ಒಂದು ರಾತ್ರಿಯ ಮೋಜು ಸರಿತೂಗದು ಎಂದು ನೆನೆದು ಮತ್ತೆ ದುಃಖಿಸುತ್ತ ಕೂರುತ್ತಾನೆ. ಆಗ ಆತ ಹಾಡುವ ಹಾಡು “ಜೀವನ ಚಿಕ್ಕದು” ಎನ್ನುವ ಹಾಡು ಬಹಳ ಮನಮುಟ್ಟುವಂತಿದೆ. ಇದೆಲ್ಲ ಅನುಭವಿಸಿ ಮಾರನೆಯ ದಿನ ಬೆಳಗ್ಗೆ ರಸ್ತೆಯಲ್ಲಿ ಒಬ್ಬನೇ ಸುಮ್ಮನೆ ನಡೆದು ಹೋಗುತ್ತಿರುವಾಗ ಕಚೇರಿಯ ಹುಡುಗಿ ಈತನನ್ನು ಕಂಡು ಓಡಿಬಂದು ಭೇಟಿಯಾಗುತ್ತಾಳೆ. ದಿನವೂ ಒಂದೇ ಬಗೆಯ ಕೆಲಸ ಮಾಡಿ ಬೇಸರವಾಗಿದೆ ಎಂದು ನೌಕರಿ ಬಿಡುತ್ತಿರುವುದಾಗಿ, ತನ್ನ ರಾಜಿನಾಮೆ ಪತ್ರಕ್ಕೆ ಮುದ್ರೆ ಒತ್ತಿಸಿಕೊಂಡು ಹೋಗಲು ಕಾಂಜಿಯನ್ನು ಹುಡುಕಿ ಬಂದದ್ದಾಗಿ ಹೇಳುತ್ತಾಳೆ. ರಾಜಿನಾಮೆಗೆ ಮುದ್ರೆ ಹಾಕಿಕೊಡುವುದಾಗಿ ಹೇಳಿ ಕಾಂಜಿ ಆಕೆಯನ್ನು ಮನೆಗೆ ಕರೆದೊಯ್ಯುತ್ತಾನೆ. ಇತ್ತ ಕಾಂಜಿಯ ಮನೆಯಲ್ಲಿ ರಾತ್ರಿಯೆಲ್ಲ ಹೊರಗೆ ಇದ್ದ ಅಪ್ಪನನ್ನು ಅದರ ಬಗ್ಗೆ ಹೇಗೆ ವಿಚಾರಿಸುವುದು ಎಂದು ಮಗ, ಸೊಸೆ ಯೋಚಿಸುತ್ತಿರುವಾಗಲೇ, ಕಾಂಜಿ ಒಂದು ಹುಡುಗಿಯನ್ನು ಮನೆಗೆ ಕರೆತಂದದ್ದು ಇಬ್ಬರಿಗೂ ಆಶ್ಚರ್ಯಗೊಳಿಸುತ್ತದೆ.
ಕಾಂಜಿ ಆ ಹುಡುಗಿಯನ್ನು ಕರೆದುಕೊಂಡು ಮತ್ತೆ ಹೊರನಡೆದು ಆಕೆಯ ಹರಿದ ಕಾಲುಚೀಲಗಳನ್ನು ನೋಡಿ ಹೊಸ ಜೊತೆಯೊಂದನ್ನು ಆಕೆಗೆ ಕೊಡಿಸುತ್ತಾನೆ. ಆಗ ಆಕೆಯ ಅರಳುವ ನಗು ನೋಡಿ ಕಾಂಜಿ ಆಕೆಯ ಸಂತೋಷದ ಸೋಂಕು ತಗುಲಿದಂತೆ ತಾನೂ ನಗಲು ಪ್ರಾರಂಭಿಸುತ್ತಾನೆ. ಆಕೆಯನ್ನು ತನ್ನೊಡನೆ ಹೋಟೆಲ್ ಗೆ ಕರೆದೊಯ್ದು ಆಕೆಗೆ ಇಷ್ಟವಾದ ತಿಂಡಿಯನ್ನೆಲ್ಲ ಕೊಡಿಸುತ್ತಾನೆ. ಈ ಮುಂಚೆ ಆಕೆ ಕಚೇರಿಯಲ್ಲಿ ಎಲ್ಲರಿಗೂ ಒಂದು ಅಡ್ಡಹೆಸರಿಟ್ಟಂತೆ ತನಗೆ “ಮಮ್ಮಿ”(ಅಥವಾ ಬೆದರು ಬೊಂಬೆ) ಎಂದು ಕರೆದಿದ್ದಕ್ಕೆ, ತಾನು ತನ್ನ ಮಗನ ಒಳಿತಿಗಾಗಿ ದುಡಿಯುತ್ತ ಸಂತೋಷಪಡುವುದನ್ನು ಮರೆತೆ ಹಾಗಾಗಿ ಹೀಗಿದ್ದೇನೆ ಎಂದು ವಿವರಿಸಲು ಮುಂದಾಗುತ್ತಾನೆ. ಆಗ ಆ ಹುಡುಗಿ ಕಾಂಜಿ ತನ್ನ ಸ್ಥಿತಿಗೆ ಮಗನನ್ನು ದೂಷಿಸುವುದು ಸರಿಯಲ್ಲ ಎಂದು ಹೇಳುತ್ತಾಳೆ. ಅಷ್ಟಕ್ಕೇ ಸುಮ್ಮನಾಗುವ ಕಾಂಜಿ ಆಕೆ ಹೇಳಿದ್ದೂ ಸತ್ಯ ಎಂದು ತಿಳಿದು ಮನೆಗೆ ಮರಳಿ ತನ್ನ ನೋವನ್ನೆಲ್ಲ ಮಗನ ಬಳಿ ಹೇಳಿಕೊಳ್ಳಲು ಮುಂದಾಗುತ್ತಾನೆ. ಆಗ ಮಗ ಮಧ್ಯದಲ್ಲೇ ತಡೆದು ಕಾಂಜಿಯ ಈ ಹೊಸ ವರ್ತನೆ ತಮ್ಮ ಮರ್ಯಾದೆ ಕಳಿಯುತ್ತಿದೆಯೆಂದು, ಈ ವಯಸ್ಸಿನಲ್ಲಿ ಕಾಂಜಿ ಒಂದು ಹುಡುಗಿಯ ಜೊತೆ ತಿರುಗುವುದು ಮತ್ತು ಆ ಹುಡುಗಿ ಆತನ ದುಡ್ಡನ್ನೆಲ್ಲ ಖರ್ಚುಮಾಡಿಸುತ್ತಿರುವುದು ಅಷ್ಟು ಚೆನ್ನಾಗಿಲ್ಲ ಎಂದು ತನ್ನ ಆಕ್ಷೇಪ ವ್ಯಕ್ತಪಡಿಸುತ್ತಾನೆ. ಇದನ್ನು ಕೇಳಿದ ಕಾಂಜಿ ಏನು ಹೇಳಲೂ ತಿಳಿಯದೆ ಸುಮ್ಮನೆ ತನ್ನ ಕೋಣೆ ಸೇರುತ್ತಾನೆ. ಅತ್ತ ಎರಡು ವಾರವಾದರೂ ಕೆಲಸಕ್ಕೆ ಕಾಂಜಿ ಬರದಿದ್ದನ್ನು ನೋಡಿ ಜನ ಆತನ ಬಗ್ಗೆ ತಮಗೆ ಬೇಕಾದಂತೆ ಕತೆ ಹುಟ್ಟಿಸಿಕೊಂಡು ಮಾತಾಡಲು ಪ್ರಾರಂಭಿಸುತ್ತಾರೆ.
ಕಾಂಜಿ ಇದ್ಯಾವುದಕ್ಕೂ ಗಮನ ಕೊಡದೆ ಮತ್ತೆ ಆ ಹುಡುಗಿಯ, ಆಕೆ ಈಗ ಕೆಲಸ ಮಾಡುತ್ತಿದ್ದ, ಬೊಂಬೆ ತಯಾರಿಕಾ ಕಾರ್ಖಾನೆಯ ಬಳಿ ಹೋಗಿ ತನ್ನೊಡನೆ ಕಾಲ ಕಳೆಯಲು ಕೇಳಿಕೊಳ್ಳುತ್ತಾನೆ. ಆದರೆ ಆಕೆ ಇದ್ದ ಕೆಲಸ ಬಿಟ್ಟು ಹೀಗೆ ಸುತ್ತಿದರೆ ಹೊಟ್ಟೆಪಾಡು ನಡೆಯಬೇಕಲ್ಲ ಎಂದು ನಿರಾಕರಿಸಿರುತ್ತಾಳೆ. ಆದರೆ ಕಾಂಜಿಯ ಒತ್ತಡಕ್ಕೆ ಮಣಿದು ಆತನೊಡನೆ ಸಂಜೆ ಬರುವುದಕ್ಕೆ ಒಪ್ಪಿಕೊಳ್ಳುತ್ತಾಳೆ. ಹೊಟೆಲ್ಲೊಂದರಲ್ಲಿ ಮಾತನಾಡುತ್ತ ಆ ಹುಡುಗಿ ಕಾಂಜಿ ಯಾಕೆ ಹೀಗೆ ತನಗೆ ಉಪಚಾರ ಮಾಡುತ್ತಿದ್ದಾನೆ ಎಂದು ಕೇಳಿದಾಗ ಕಾಂಜಿ ತನ್ನ ಭಾವನೆಯನ್ನು ಬಗೆಬಗೆಯಾಗಿ ಹೇಳಲು ಪ್ರಯತ್ನಿಸಿ ಕಡೆಗೆ ತನ್ನ ಕ್ಯಾನ್ಸರ್ ಬಗ್ಗೆ ತಿಳಿಸುತ್ತಾನೆ. ತನಗೆ ಆ ಹುಡುಗಿಯಂತೆ ಒಂದು ದಿನವಾದರೂ ಸಂತೋಷದಿಂದ ಜೀವಿಸಬೇಕು ಎಂಬ ಆಸೆ ಎಂದು ಹೇಳಿಕೊಳ್ಳುತ್ತಾನೆ. ಆಕೆಯ ಆ ನಗು ಸಂತೋಷ ತನಗೆ ಅಸೂಯೆ ಹುಟ್ಟಿಸುತ್ತಿದೆಯೆಂದು, ತಾನೂ ಹಾಗಿರಲು ಏನು ಮಾಡಬೇಕು ಎಂದು ಕೇಳಿದಾಗ, ಆ ಹುಡುಗಿ ತಾನು ವಿಶೇಷವಾಗಿ ಏನೂ ಮಾಡುತ್ತಿಲ್ಲವೆಂದು ಆದರೆ ತಾನು ಮಾಡುವ ಬೊಂಬೆಯ ಕೆಲಸ ಬಹಳ ಸಂತೋಷ ಕೊಡುತ್ತದೆ, ಆತನೂ ಹಾಗೇನಾದರೂ ಮಾಡಬಾರದೇಕೆ ಎಂದು ಕೇಳುತ್ತಾಳೆ. ಅದು ಸರಿ ಎನಿಸಿದರೂ ತನ್ನ ಕಚೇರಿಯಲ್ಲಿ ಹಾಗೆ ಮಾಡಲು ಏನೂ ಸಾಧ್ಯವಿಲ್ಲವೆಂದು ಬೇಸರಪಟ್ಟುಕೊಳ್ಳುತ್ತಾನೆ. ಆದರೆ ಇದ್ದಕ್ಕಿದ್ದಂತೆ ಮಿಂಚು ಹರಿದಂತೆ ಏನೋ ಯೋಚಿಸಿ ಇನ್ನೂ ಕಾಲ ಮಿಂಚಿಲ್ಲ, ತಾನು ಕಚೇರಿಯಲ್ಲಿ ಏನಾದರೂ ಮಾಡಲು ಸಾಧ್ಯವಿದೆ ಎಂದು ಯೋಚಿಸಿ ಹೊಸ ಮನುಷ್ಯನಾದಂತೆ ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಆಗ ಹೊಟೆಲಿನಲ್ಲಿ ಹುಟ್ಟುಹಬ್ಬದ ಸ್ನೇಹಕೂಟವನ್ನು ಆಚರಿಸುತ್ತಿದ್ದ ಯಾರೋ “ಹ್ಯಾಪಿ ಬರ್ತ್ ಡೇ ಟು ಯೂ” ಎಂದು ಹಾಡಿದಾಗ ಕಾಂಜಿಯ ಮರುಜನ್ಮವನ್ನು ನೋಡಿಯೇ ಹಾಡಿದಂತೆ ಭಾಸವಾಗುತ್ತದೆ. ಮಾರನೆ ದಿನವೇ ಮಹಿಳೆಯರ ಗುಂಪು ಕೊಟ್ಟಿದ್ದ ದೂರಿನ ಮೇಲೆ ಕ್ರಮ ತೆಗೆದುಕೊಂಡು ಅವರಿಗೆ ಪರಿಹಾರ ಮಾಡಿಕೊಡಲು ಮುಂದಾಗುತ್ತಾನೆ. ಇದಾದ ಐದು ತಿಂಗಳ ನಂತರ ಕಾಂಜಿ ತನ್ನ ಖಾಯಿಲೆಗೆ ಬಲಿಯಾಗುತ್ತಾನೆ.
ಸತ್ತ ನಂತರ ಆತನ ಸ್ಮರಣಾರ್ಥ ಮನೆಯಲ್ಲಿ ಏರ್ಪಡಿಸಿದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಕಚೇರಿಯ ಎಲ್ಲ ಸಹೋದ್ಯೋಗಿಗಳು ಬಂದಿರುತ್ತಾರೆ. ಅಲ್ಲಿಗೆ ಡೆಪ್ಯುಟಿ ಮೇಯರ್ ಕೂಡ ಬಂದಿರುತ್ತಾರೆ. ಡೆಪ್ಯುಟಿ ಮೇಯರ್ ಅಲ್ಲಿಗೆ ಬಂದಿದ್ದಾರೆ ಎಂದು ತಿಳಿದ ಕೆಲ ಪತ್ರಕರ್ತರು ಅಲ್ಲಿಗೇ ಬಂದು ಅವರನ್ನು ಕೆಲ ಪ್ರಶ್ನೆ ಕೇಳಲು ಮುಂದಾಗುತ್ತಾರೆ. ಪತ್ರಕರ್ತರು, ಡೆಪ್ಯುಟಿ ಮೇಯರ್ ಉದ್ಯಾನವನದ ಉದ್ಘಾಟನೆ ಮಾಡಿದಾಗ ಅದೇಕೆ ಕಾಂಜಿ ವಾಟನಾಬೆಯ ಕೊಡುಗೆಯ ಬಗ್ಗೆ ಹೇಳಲಿಲ್ಲ ಎಂದು ಪ್ರಶ್ನಿಸುತ್ತಾರೆ. ಆಗ ಉಪ ಮೇಯರ್, ಕಾಂಜಿ ಸರ್ಕಾರವೆಂಬ ದೊಡ್ಡ ಯಂತ್ರದಲ್ಲಿ ಒಂದು ಚಿಕ್ಕ ಭಾಗವಾಗಿ ಮಾತ್ರ ಇದರಲ್ಲಿ ಕೆಲಸ ಮಾಡಿದ್ದು, ಎಲ್ಲಾ ಕೀರ್ತಿ ಅವರೊಬ್ಬರಿಗೇ ಸಲ್ಲುವುದು ನ್ಯಾಯವಲ್ಲ ಎನ್ನುತ್ತಾರೆ. ಆಗ ಪತ್ರಕರ್ತರು ಸಾರ್ವಜನಿಕ ಅಭಿಪ್ರಾಯ ಬೇರೆಯೇ ಇದ್ದು, ಮೊದಲಿನಿಂದಲೂ ಆ ಉದ್ಯಾನವನ ಪೂರ್ತಿ ನಿರ್ಮಾಣವಾಗುವವರೆಗೂ ಕಾಂಜಿ ಬಹಳ ಕಾಳಜಿ ವಹಿಸಿದ್ದಾರೆಂದೂ, ಅವರ ಕೆಲಸದ ಕೀರ್ತಿಯನ್ನೆಲ್ಲಾ ಉಪ ಮೇಯರ್ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿದೆ ಎಂದು ಹೇಳುತ್ತಾರೆ. ತಾವು ನಿರ್ಮಿಸಿದ ಉದ್ಯಾನವನದಲ್ಲೇ ಕಾಂಜಿ ಸತ್ತಿದ್ದು ವ್ಯವಸ್ಥೆಯ ವಿರುದ್ಧದ ಅವರ ಮೌನ ಪ್ರತಿಭಟನೆಯ ಪ್ರತೀಕ ಎಂದು ಮಾತಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗ ಉಪ ಮೇಯರ್ ಅವನ್ನೆಲ್ಲ ಅಲ್ಲಗಳೆದು ಅವರ ಸಾವಿಗೆ ಯಾರೂ ನೇರವಾಗೂ ಅಥವಾ ಪರೋಕ್ಷವಾಗೂ ಕಾರಣರಲ್ಲ, ಅವರು ಸತ್ತಿದ್ದು ಹೊಟ್ಟೆಯ ಕ್ಯಾನ್ಸರ್ ನಿಂದ ಎಂದು ಹೇಳಿದಾಗ ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ. ತನ್ನ ಮೇಲೆ ಅಷ್ಟು ಅನುಮಾನವಿದ್ದರೆ ಅವರ ಸಾವಿನ ಬಗ್ಗೆ ದಾಖಲೆ ಕೊಟ್ಟ ಆಸ್ಪತ್ರೆಯಲ್ಲೇ ಕೇಳಬಹುದು ಎಂದು ಹೇಳಿ ಕಳಿಸುತ್ತಾನೆ. ಒಳಗೆ ಬಂದು ಕುಳಿತ ನಂತರ ಪತ್ರಕರ್ತರ ಈ ಅಭಿಪ್ರಾಯದಿಂದ ಸಿಟ್ಟಾಗಿದ್ದ ಉಪ ಮೇಯರ್ ತನ್ನನ್ನು ಸಮರ್ಥಿಸಿಕೊಳ್ಳುವಂತೆ ಮತ್ತೆ ಹೊರಗೆ ಹೇಳಿದ್ದನ್ನೇ ಹೇಳಿ ಈ ಕಾರ್ಯ, ಕಾಂಜಿ ಒಬ್ಬರಿಂದ ಆಗುವಂತದ್ದು ಅಲ್ಲವೆಂದು ಹೇಳುತ್ತಾರೆ. ಅದಕ್ಕೆ ಎಲ್ಲರೂ ಸುಮ್ಮನೆ ಹೌದೆಂದು ತಲೆ ಆಡಿಸುತ್ತಾರೆ. ಅಷ್ಟರಲ್ಲಿ ಉದ್ಯಾನವನದ ಅರ್ಜಿ ಕೊಟ್ಟ ಕುರೋಎ ಕಾಲೋನಿಯ ಹೆಂಗಸರು ಅಳುತ್ತಾ ಬಂದು ತಮ್ಮ ಶ್ರದ್ಧಾಂಜಲಿ ಅರ್ಪಿಸಿ ಉಪಮೇಯರ್ ಕಡೆ ತಿರುಗಿಯೂ ನೋಡದೆ ಹೊರಟು ಹೋಗುತ್ತಾರೆ. ಇದರಿಂದ ಇರುಸುಮುರುಸುಗೊಳ್ಳುವ ಉಪಮೇಯರ್ ಸ್ವಲ್ಪ ಸಮಯದ ನಂತರ ಹೊತ್ತಾಯಿತೆಂದು ಎದ್ದು ಹೊರಟುಹೋಗುತ್ತಾನೆ. ಉಪಮೇಯರ್ ಹೋದ ನಂತರ ಕಚೇರಿಯ ಎಲ್ಲ ಸಹೋದ್ಯೋಗಿಗಳು ಈ ಕಾರ್ಯದಲ್ಲಿ ಕಾಂಜಿಯ ಕೊಡುಗೆ ಎಷ್ಟು ಎಂದು ಚರ್ಚಿಸಲು ಪ್ರಾರಂಭಿಸುತ್ತಾರೆ. ಕೆಲವರು ಅದು ಚುನಾವಣೆ ಹತ್ತಿರವಾಯಿತೆಂದು ಮತ್ತು ಅಲ್ಲಿ ಒಂದು ಹೋಟೆಲ್ ನಿರ್ಮಿಸಬಹುದೆಂದು ಅನ್ನಿಸಿದ್ದರಿಂದ ನಗರಾಡಳಿತ ಇದಕ್ಕೆ ಸಮ್ಮತಿಸಿತು, ಇಲ್ಲದಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು? ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ವೃತ್ತಿಜೀವನದ ಕೊನೆಯಲ್ಲಿ ಅವರಲ್ಲಿ ಆದ ಈ ಬದಲಾವಣೆಗೆ ಕಾರಣ ಏನು ಎಂದು ಯೋಚಿಸುತ್ತಾರೆ. ಅವರಿಗೆ ಮುಂಚಿತವಾಗೇ ಹೊಟ್ಟೆಯ ಕ್ಯಾನ್ಸರ್ ಬಗ್ಗೆ ಗೊತ್ತಿತ್ತೇ ಎಂದು ಮಗನನ್ನು ಕೇಳಿದಾಗ ಆತ ಹಾಗೇನಾದರೂ ಇದ್ದಿದ್ದರೆ ತನ್ನ ತಂದೆ ಹೇಳುತ್ತಿದ್ದರು ಎಂದು ಹೇಳುತ್ತಾನೆ. ಅದಕ್ಕೆ ಕಾಂಜಿಯ ಸಹೋದರ ಆತ ತನ್ನ ಇಳಿ ವಯಸ್ಸಿನಲ್ಲಿ ಒಂದು ಹೆಂಗಸಿನ ಸಂಬಂಧ ಮಾಡಿರಬೇಕು, ಹಾಗಾಗಿಯೇ ಈ ರೀತಿ ವರ್ತಿಸಿದ್ದ, ಒಂದು ಹೆಣ್ಣಿನ ಸಂಗ ಒಬ್ಬ ವಯಸ್ಸಾದ ಮನುಷ್ಯನಲ್ಲೂ ಉತ್ಸಾಹ ತುಂಬುತ್ತದೆ ಎಂದು ನಗೆಯಾಡುತ್ತಾನೆ. ಎಲ್ಲರೂ ಅದಕ್ಕೆ ನಗುತ್ತಲೇ ಸಮ್ಮತಿಸುತ್ತಾರೆ. ಆದರೂ ಕಾಂಜಿ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಈ ಉದ್ಯಾನವನದ ವಿಚಾರವಾಗಿ ಕಾಡಿದ್ದು ಬೇಡಿದ್ದು ಮತ್ತು ಅವರ ವಿಚಿತ್ರ ಸಂಕಲ್ಪ ನೋಡಿದರೆ ಬೇರೇನೋ ಇದ್ದಿರಲೇಬೇಕು ಎಂದು ಮತ್ತೆ ಚರ್ಚಿಸತೊಡಗುತ್ತಾರೆ. ಕಾಂಜಿ ಇದರಲ್ಲಿ ವಿಶೇಷ ಕಾಳಜಿ ವಹಿಸಿದ್ದರಿಂದಲೇ ಈ ಕಾರ್ಯವಾಯಿತೆಂದು ಹೇಳುವ ಒಬ್ಬನ ಮಾತಿಗೆ ಇನ್ನೊಬ್ಬ ಆತನನ್ನು ಅಲ್ಲಗಳೆಯುತ್ತಾನೆ. ಚುನಾವಣೆ ಇದ್ದದ್ದರಿಂದ ಮತ್ತು ಆ ಹೋಟೆಲ್ ಮಾಲೀಕರ ಒತ್ತಡದಿಂದ ಉಪ ಮೇಯರ್ ಅದನ್ನು ಆಗಲು ಬಿಟ್ಟದ್ದು ಎಂದಾಗ ಕಾಂಜಿಯ ಕಚೇರಿಯ ಉಪ ಮುಖ್ಯಸ್ಥ ಒನೋ ಅವನನ್ನು ತಡೆದು ಕಾಂಜಿ ಈ ಹಿಂದೆ ನಗರ ಪಾಲಿಕೆ ಕಚೇರಿಯಲ್ಲಿ ಯಾವ ಅಧಿಕಾರಿಯೂ ತೋರಿಲ್ಲದಷ್ಟು ಧೈರ್ಯ ತೋರಿಸಿ ಉಪ ಮೇಯರ್ ಮೇಲೆ ಒತ್ತಡ ತಂದರು ಮತ್ತು ಹೋಟೆಲ್ ಮಾಲಿಕರಿಗೆ ಅಲ್ಲಿ ಹೋಟೆಲ್ ಗಳಾಗುವುದು ಬೇಡವಾಗಿದ್ದರಿಂದ ಕಾಂಜಿಯ ಮೇಲೆ ಹಲ್ಲೆಗೂ ಮುಂದಾಗಿದ್ದರು ಎಂದು ಒಮ್ಮೆ ಆದದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತಾನೆ. ಆಗ ಮತ್ತೆ ಎಲ್ಲರೂ ಹಾಗಾದರೆ ಕಾಂಜಿ ಹೀಗೆ ಮಾಡಲು ಏನು ಕಾರಣ ಎಂದು ಗೊಂದಲಗೊಳ್ಳುತ್ತಾರೆ. ಆಗ ಇದ್ದಕ್ಕಿದ್ದಂತೆ ಒನೋ ನೆನಪಿಸಿಕೊಳ್ಳುತ್ತಾನೆ- ಒಮ್ಮೆ ಹೀಗೆ ಉದ್ಯಾನವನದ ಅರ್ಜಿಯ ಬಗ್ಗೆ ಕೇಳಿಕೊಳ್ಳಲು ಹೋಗಿ ವಾಪಸ್ಸಾಗುತ್ತಿದ್ದಾಗ ಒನೋ ಅವರೆಲ್ಲರ ವರ್ತನೆಯಿಂದ ನಿಮಗೆ ಸಿಟ್ಟು ಬರುವುದಿಲ್ಲವೇ? ಎಂದು ಕೇಳಿದಾಗ ಕಾಂಜಿ ಅವರ ಜೊತೆ ದ್ವೇಷ ಕಟ್ಟಿಕೊಳ್ಳುವಷ್ಟು ಸಮಯ ನನ್ನ ಬಳಿ ಇಲ್ಲ ಎಂದು ಉತ್ತರಿಸುತ್ತಾನೆ. ಇದನ್ನು ಹೇಳಿ ಕಾಂಜಿಗೆ ತನ್ನ ಹೊಟ್ಟೆಯ ಕ್ಯಾನ್ಸರ್ ಬಗ್ಗೆ ತಿಳಿದಿರಲೇಬೇಕು ಎಂದು ಹೇಳುತ್ತಾನೆ. ಅದಕ್ಕೆ ಸಮ್ಮತಿಸುವ ಎಲ್ಲರೂ ತಾವು ಆ ಸ್ಥಾನದಲ್ಲಿದ್ದಿದ್ದರೆ ಹಾಗೇ ಮಾಡುತ್ತಿದ್ದೆವು ಎಂದು ಹೇಳುತ್ತಾರೆ. ಅದಕ್ಕೆ ಆಕ್ಷೇಪ ಎತ್ತುವ ಒಹಾರ, ತಮ್ಮನ್ನು ತಾವು ಕಾಂಜಿಗೆ ಹೋಲಿಸಿಕೊಳ್ಳಲು ತಮಗೆ ಆ ಯೋಗ್ಯತೆಯಿಲ್ಲ, ಕೆಲಸ ಮಾಡುವ ನೆಪ ಹೇಳಿ ಜನರ ಸಮಯ ಹಾಳು ಮಾಡುವ ತಾವೆಲ್ಲ ಸಮಾಜದ ಕೆಟ್ಟ ಹುಳುಗಳು ಎಂದು ಅಬ್ಬರಿಸುತ್ತಾನೆ. ಅವನ ಮಾತಿಗೆ ಮೊದಲು ಸಿಟ್ಟಾದರೂ, ಎಲ್ಲರೂ ಅದಕ್ಕೆ ಮತ್ತೆ ಸಮ್ಮತಿಸಿ ಹೇಗೆ ತಾವೆಲ್ಲ ಒಂದು ಸಣ್ಣ ಕೆಲಸಕ್ಕೂ ಎಷ್ಟೆಲ್ಲಾ ದಾಖಲೆ ಸೃಷ್ಟಿಸಿ ಕಡತಗಳ ಸುಳಿ ಸೃಷ್ಟಿಸುತ್ತಿದ್ದೇವೆ ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ.
ಅಷ್ಟರಲ್ಲಿ ಅಲ್ಲಿಗೆ ಒಬ್ಬ ಪೋಲಿಸ್ ಪೇದೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬರುತ್ತಾನೆ. ಆತ ಅವರೆಲ್ಲರ ಜೊತೆ ಹಿಂದಿನ ರಾತ್ರಿ ಉದ್ಯಾನವನದಲ್ಲಿ ನಡೆದ ಘಟನೆ ಹಂಚಿಕೊಳ್ಳುತ್ತಾನೆ, “ಸುಮಾರು ಹನ್ನೊಂದು ಗಂಟೆಗೆ ಮಂಜು ಬೀಳುತ್ತಿದ್ದ ರಾತ್ರಿಯಲ್ಲಿ ಗಸ್ತು ತಿರುಗುತ್ತ ಆ ಉದ್ಯಾನವನಕ್ಕೆ ಬಂದಾಗ ಯಾರೋ ಜೋಕಾಲಿಯ ಮೇಲೆ ಕುಳಿತಿದ್ದು ಕಾಣಿಸಿತು. ಯಾರೆಂದು ನೋಡಿದಾಗ ಕಾಂಜಿ ವಾಟನಾಬೆ. ಅವರು ಅಷ್ಟು ಸಂತೋಷದಿಂದ ಇದ್ದದ್ದು ನೋಡಿ ಅವರನ್ನು ಅಲ್ಲಿಯೇ ಕುಳಿತುಕೊಳ್ಳಲು ಬಿಟ್ಟುಬಿಟ್ಟೆ. ಅವರು ಹಾಡುತ್ತಿದ್ದ ಆ ಹಾಡು ಮನದ ಆಳಕ್ಕೆ ತಲುಪುವಂತಿತ್ತು.” ಎಂದು ಆ ಪೇದೆ ನಡೆದ್ದನ್ನೆಲ್ಲಾ ಹಂಚಿಕೊಳ್ಳುತ್ತಾನೆ. ಎಲ್ಲರೂ ಇದನ್ನು ಕೇಳಿ ಆಶ್ಚರ್ಯಗೊಳ್ಳುತ್ತಾರೆ. ಎಲ್ಲರ ಕಲ್ಪನೆಯೂ ಅವರ ಕೊನೆ ಕ್ಷಣದ ಕಡೆಗೆ ತಿರುಗಿದಾಗ, ಕಾಂಜಿ ಅಲ್ಲಿ ಜೋಕಾಲಿಯಲ್ಲಿ ಕುಳಿತು ನೆಮ್ಮದಿಯಿಂದ, ತೃಪ್ತಿಯಿಂದ “ಜೀವನ ಚಿಕ್ಕದು” ಹಾಡು ಹಾಡುತ್ತಿರುವಂತೆ ಕಾಣಿಸುತ್ತದೆ. ಆಗ ದುಃಖತಪ್ತನಾಗುವ ಮಗ ಅಳುತ್ತ ಕೋಣೆಯೊಂದಕ್ಕೆ ಹೋದಾಗ ಅವನ ಹಿಂಬಾಲಿಸುವ ಹೆಂಡತಿಗೆ, ತನ್ನ ತಂದೆ ಹಿಂದಿನ ದಿನ ಮೆಟ್ಟಿಲುಗಳ ಕೆಳಗೆ ತನಗಾಗಿ ನಿವೃತ್ತಿ ವೇತನದ ಎಲ್ಲ ಅರ್ಜಿಗಳು ಮತ್ತು ಮುದ್ರೆಗಳನ್ನು ಸಿದ್ಧಪಡಿಸಿ ಇಟ್ಟೇ ಉದ್ಯಾನವನಕ್ಕೆ ಹೋಗಿದ್ದರು ಎಂದು ಹೇಳುತ್ತಾನೆ. ಸಾಕಷ್ಟು ಕುಡಿದು ಮತ್ತೇರಿದ್ದ ಕಾಂಜಿಯ ಸಹೋದ್ಯೋಗಿಗಳು ತಾವೂ ಇನ್ನುಮುಂದೆ ಕಾಂಜಿಯಂತೆ ಬದುಕುತ್ತೇವೆ, ಅವರ ಸಾವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಉದ್ಗಾರವೆತ್ತಿ ಹೊರಡುತ್ತಾರೆ. ಮಾರನೆ ದಿನ ಕಾಂಜಿಯ ಸ್ಥಾನಕ್ಕೆ ಬಡ್ತಿ ಹೊಂದಿದ ಒನೋ ಈಗ ಕಾಂಜಿಯ ಕುರ್ಚಿಯಲ್ಲಿ ಕುಳಿತು ಕಡತಗಳನ್ನು ನೋಡುತ್ತಿರುತ್ತಾನೆ. ಒಬ್ಬ ಗುಮಾಸ್ತ ಬಂದು ಒಡೆದು ಹೋದ ಚರಂಡಿಯ ಕೊಳವೆಯ ಬಗ್ಗೆ ಯಾರೋ ದೂರು ತಂದಿರುವ ಬಗ್ಗೆ ಹೇಳಿದಾಗ ಅವರನ್ನು ಅಭಿಯಾಂತ್ರಿಕ(ಎಂಜಿನಿಯರಿಂಗ್) ವಿಭಾಗಕ್ಕೆ ಕಳುಹಿಸಲು ಹೇಳುತ್ತಾನೆ. ಇದನ್ನು ನೋಡಿದ ಇನ್ನೊಬ್ಬ ಗುಮಾಸ್ತ ಎದ್ದು ನಿಂತು ಹಿಂದಿನ ದಿನ ಅಷ್ಟು ಅಬ್ಬರಿಸಿದಿರಲ್ಲ, ಇದೇನಾ ನಿಮ್ಮ ಬದ್ಧತೆ ಎಂದು ಕೇಳುವಂತೆ ಒನೋ ಮತ್ತು ಉಳಿದೆಲ್ಲರತ್ತ ನೋಡುತ್ತಾನೆ. ಆದರೆ ತಾವೇ ರಚಿಸಿಕೊಂಡ ಈ ವ್ಯವಸ್ಥೆಯ ವ್ಯೂಹದಲ್ಲಿ ತಾವು ಅಸಹಾಯಕರು ಮತ್ತು ಎಲ್ಲರೂ ಕಾಂಜಿಯಂತಾಗಲು ಸಾಧ್ಯವಿಲ್ಲ ಎಂದು ಆತನಿಗನ್ನಿಸಿ ಸುಮ್ಮನೆ ಕೂರುತ್ತಾನೆ. ಸಂಜೆ ಅದೇ ಗುಮಾಸ್ತ ಕೆಲಸ ಮುಗಿದ ಮೇಲೆ ಕಾಂಜಿ ನಿರ್ಮಿಸಿದ ಆ ಉದ್ಯಾನವನದ ಬಳಿ ಹೋಗಿ ಅಲ್ಲಿ ಈಗ ಮಕ್ಕಳು ಆಡುತ್ತಿದ್ದನ್ನು ನೋಡಿ ಕಾಂಜಿಯ ಕೆಲಸದಿಂದ ಪ್ರೇರಣೆ ಪಡೆದವನಂತೆ ಮುಂದೆ ಸಾಗುತ್ತಾನೆ.
ನಾವು ಜೀವನದಲ್ಲಿ ಏನೆಲ್ಲ ಮಾಡಬೇಕು ಎಂದುಕೊಳ್ಳುತ್ತೇವೆ. ಆದರೆ ಮುಂದೆ ಜೀವನದಲ್ಲಿ ಎಲ್ಲವೂ ತಿಳಿಗೊಂಡಾಗ ಮಾಡೋಣ ಎಂದು ಅದನ್ನೆಲ್ಲಾ ತಳ್ಳುತ್ತಾ, ಮುಂದಕ್ಕೆ ಹಾಕುತ್ತ ಸಾಗುತ್ತೇವೆ. ಆದರೆ ನಾವು ಗಮನಿಸದ ಒಂದು ವಿಷಯ ಕಾಂಜಿಯ ಜೀವನದಲ್ಲಿ ಬಂದಂತೆ ಸಾವು ಹೇಳಿ ಬರುವುದಿಲ್ಲ.
ಅಂದಹಾಗೆ “ಇಕಿರು” ಎಂದರೆ ಜಪಾನಿ ಭಾಷೆಯಲ್ಲಿ “ಬದುಕುವುದು” ಎಂದರ್ಥ.
ಕಾಂಜಿ ಹಾಡುವ ಹಾಡು: https://www.youtube.com/watch?v=rDjmDHiSTm8
-ವಿಶ್ವನಾಥ್
Comments
ಉ: ನಾನು ನೋಡಿದ ಚಿತ್ರ- ಇಕಿರು (ಜಪಾನ್)
ಕಣ್ಣು ತೇವವಾಯಿತು!
ಉ: ನಾನು ನೋಡಿದ ಚಿತ್ರ- ಇಕಿರು (ಜಪಾನ್)
ತುಂಬಾ ಚೆನ್ನಾಗಿ ಬರೆದಿರುವಿರಿ.