ನಾನು ನೋಡಿದ ಚಿತ್ರ- ಡಾ.ಸ್ಟ್ರೇಂಜ್ ಲವ್ ಆರ್: ಹೌ ಐ ಲರ್ನ್ದ್ ಟು ಸ್ಟಾಪ್ ವರಿಯಿಂಗ್ ಅಂಡ್ ಲವ್ ದಿ ಬಾಂಬ್
IMDb: http://www.imdb.com/title/tt0057012/?ref_=nv_sr_4
ಹೆಸರು ಉದ್ದ ಆಯ್ತಲ್ವಾ? ಸ್ಟಾನ್ಲಿ ಕೂಬ್ರಿಕ್ ನಿರ್ದೇಶನದಲ್ಲಿ ಮೂಡಿಬಂದ ಅನೇಕ ಅದ್ಭುತ ಸಿನೆಮಾಗಳಲ್ಲಿ ಇದೂ ಒಂದು. 50-60ರ ದಶಕದಲ್ಲಿ ಬಹು ಚರ್ಚಿತ ವಿಷಯ ಅಮೇರಿಕಾ ಮತ್ತು ಯು.ಎಸ್.ಎಸ್.ಆರ್ ನ ನಡುವಿನ ಶೀತಲ ಸಮರ. ಕಾಮ್ಯುನಿಸಮ್ ಮತ್ತು ಕ್ಯಾಪಿಟಲಿಸಮ್ ನಡುವಿನ ಪೈಪೋಟಿಯಲ್ಲಿ ಜಗತ್ತಿನ ದೇಶಗಳೆಲ್ಲವನ್ನು ಸೆಳೆಯುವುದಕ್ಕಾಗಿ ಈ ಎರಡೂ ದೇಶಗಳು ತಮ್ಮ ಪ್ರಯತ್ನವನ್ನು ನಡೆಸಿದ್ದ ಕಾಲವದು. ಇದರ ಕರಾಳ ಮುಖ ಅವತರಿಸಿಕೊಂಡಿದ್ದು ಎರಡನೇ ವಿಶ್ವ ಯುದ್ಧದ ಕೊನೆಯಲ್ಲಿ ಅಮೇರಿಕಾ ಸಿಡಿಸಿದ ಅಣುಬಾಂಬ್. ಶೀತಲ ಸಮರದಲ್ಲಿ ಬದ್ಧ ವೈರಿಗಳಾಗಿ ಗುರುತಿಸಿಕೊಂಡ ಎರಡೂ ದೇಶಗಳು(US and USSR) ತಮ್ಮವೇ ಆಧುನಿಕ ಹೆಚ್ಚು ನಾಶಮಾಡಬಲ್ಲ ಬಾಂಬ್ ತಯಾರಿಸಿ ಪರೀಕ್ಷಿಸಲು ನಿಂತವು. ಹೀಗೆ ಈ ಎರಡೂ ದೇಶಗಳ ನಡುವೆ ಇದ್ದ ಪೈಪೋಟಿ ಯಾವುದೇ ಕ್ಷಣದಲ್ಲಾದರೂ ಯುದ್ಧಕ್ಕೆ ತಿರುಗಬಹುದು ಅಂತೆಣಿಸಿ ಎರಡೂ ದೇಶಗಳು ಹೀಗೆ ಯುದ್ಧ ಆದರೆ ತಕ್ಕ ಪ್ರತ್ಯುತ್ತರ ಕೊಡಲು ಅನೇಕ ಭದ್ರತಾ ಕ್ರಮಗಳನ್ನು ಅನುಸರಿಸಿದ್ದವು. ಅವುಗಳಲ್ಲಿ ಅಣುಬಾಂಬ್ ಉಡಾವಣೆಯೂ ಒಂದು. ಎಲ್ಲಿಯ ತನಕ ವಿವೇಕವಿರುವ ಜನಗಳು ಒಂದು ದೇಶದ ನೇತೃತ್ವ ವಹಿಸಿರುತ್ತಾರೋ ಅಲ್ಲಿಯ ಇಂತಹ ಅಕಾರಣ ಯುದ್ಧಗಳ ಸಂಭವ ಬಹಳ ಕಡಿಮೆ. ಆದರೆ ಇಂತಹ ಪೈಪೋಟಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ ವಿವೇಚನೆಯಿಲ್ಲದ ನಾಯಕರು ದೇಶದ ಭದ್ರತೆಯ ಚುಕ್ಕಾಣಿ ಹಿಡಿದರೆ ಏನಾಗಬಹುದು? ಅದೇ ಈ ಕಥೆಯ ಮೂಲ ವಸ್ತು.
ರಾಜಕಾರಣಿಗಳ ಒಣ ಮಾತುಗಳು, ಹುರುಳಿಲ್ಲದ ದೇಶಪ್ರೇಮದಿಂದ ಬೇಸತ್ತ ಒಬ್ಬ ಅಮೇರಿಕಾದ ನ್ಯೂಕ್ಲಿಯರ್ ಬಾಂಬರ್ ಇರುವ ಏರ್ ಫೋರ್ಸ್ ಬೇಸ್ ನ ಕಮ್ಯಾಂಡರ್ ಜನರಲ್ ರಿಪ್ಪರ್ ರಾಷ್ಟ್ರಾಧ್ಯಕ್ಷರಿಂದ ಅಂಗೀಕಾರವಾಗಿದ್ದ USSR ಮೇಲಿನ ನ್ಯೂಕ್ಲಿಯರ್ ಪ್ರತಿದಾಳಿಯ ಪ್ಲಾನ್ಅನ್ನು ಚಾಲ್ತಿಗೊಳಿಸಿ ಎಲ್ಲ ಬಾಂಬರ್ ಪ್ಲೇನ್ ಗಳಿಗೆ ಆದೇಶ ಕಳಿಸಿ ಬೇಸ್ ಅನ್ನು ಎಲ್ಲ ಹೊರಗಿನ ಸಂಪರ್ಕದಿಂದ ಮುಕ್ತಮಾಡಿಬಿಡುತ್ತಾನೆ.
ಇತ್ತ ಹಾಗೆ ಆದೇಶ ಪಡೆದ ಒಂದು ಬಾಂಬರ್ ಪ್ಲೇನ್ ನ ಪೈಲಟ್ ಗಳು ಈ ಆದೇಶದಿಂದ ಆಶ್ಚರ್ಯಗೊಂಡರೂ ಪಾಪಿ ರೂಸ್ಕಿಗಳಿಗೆ ಬುದ್ಧಿ ಕಲಿಸುವ ಹೊತ್ತು ಬಂತು ಎಂದು ಹೆಮ್ಮೆಯಿಂದ ಬೀಗುತ್ತಾರೆ. ಅದರಲ್ಲೂ ಆ ಪ್ಲೇನ್ ನ ಮುಖ್ಯ ಕಮ್ಯಾಂಡರ್ ತುಂಬಾ ಉತ್ಸಾಹಗೊಂಡು ದೇಶದೆಡೆಗಿನ ಪ್ರೇಮವನ್ನು ಸಾಬೀತು ಮಾಡುವ ಕಾಲ ಬಂತೆಂದು ಸಂತಸಗೊಳ್ಳುತ್ತಾನೆ. ಆದೇಶದ ಪ್ರಕಾರ ಪ್ಲೇನ್ ನ ರೇಡಿಯೋ ಬಂದ್ ಮಾಡಿ ಗುಪ್ತ ಪದದ ಮೇಲೆ ಕಾರ್ಯನಿರ್ವಹಿಸುವ ಗುಪ್ತ ರೇಡಿಯೋವನ್ನು ಚಾಲ್ತಿಗೊಳಿಸುತ್ತಾನೆ. ಇದರರ್ಥ ಪ್ಲಾನ್ ಪ್ರಕಾರದ ಗುಪ್ತ ಪದವಿಲ್ಲದ ಯಾವುದೇ ಸಂದೇಶಗಳು ಬಂದರೂ ಅದನ್ನು ಮಾನ್ಯಮಾಡುವಂತಿಲ್ಲ ಎಂದು.
ಆದೇಶ ಕಳಿಸಿದ ನಂತರ ಜನರಲ್ ರಿಪ್ಪರ್ ತನ್ನ ಕಾರ್ಯನಿರ್ವಹಣಾಧಿಕಾರಿ ಮ್ಯಾಂಡ್ರೇಕ್ ಗೆ ಬೇಸ್ ನ ಎಲ್ಲ ಸೈನಿಕರಿಂದ ಅವರ ಖಾಸಗಿ ರೇಡಿಯೋಗಳನ್ನು ವಶಪಡಿಸಿಕೊಳ್ಳಲು ಹೇಳಿರುತ್ತಾನೆ. ಹೀಗೆ ರೇಡಿಯೋ ಒಂದನ್ನು ಮ್ಯಾಂಡ್ರೇಕ್ ತರುತ್ತಿದ್ದಾಗ ರೇಡಿಯೋದಲ್ಲಿ ಇನ್ನೂ ಮನರಂಜನಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದನ್ನೂ ಮತ್ತು ರಷ್ಯಾ ಯಾವುದೇ ದಾಳಿ ನಡೆಸಿರುವುದರ ಬಗ್ಗೆ ಸುದ್ದಿ ಇಲ್ಲದಿರುವುದು ಕೇಳಿ ಗಾಬರಿಗೊಂಡು ಇದರ ಬಗ್ಗೆ ಸ್ಪಷ್ಟನೆ ಕೇಳಲು ಜನರಲ್ ರಿಪ್ಪರ್ ಬಳಿಗೆ ಹೋಗುತ್ತಾನೆ. ಆಗ ಜನರಲ್ ರಿಪ್ಪರ್ ಈತನನ್ನು ತನ್ನ ಕೋಣೆಯಲ್ಲಿ ಬಂಧಿಸಿ ವಿಷಯವೆಲ್ಲವನ್ನೂ ನಿಧಾನವಾಗಿ ಹೇಳತೊಡಗುತ್ತಾನೆ. “ಕಾಮ್ಯುನಿಸ್ಟ್ ಪಿತೂರಿಯ ದಾಳಿಗೆ ಸಿಲುಕದಂತೆ ದೇಶವನ್ನು ಉಳಿಸಬೇಕೆಂದರೆ ದೇಶವನ್ನು ರಾಜಕಾರಣಿಗಳ ಕೈಗೆ ಕೊಡಬಾರದು ಏಕೆಂದರೆ ಅವರಿಗೆ ಭದ್ರತೆಯ ವಿಷಯದಲ್ಲಿ ಯಾವುದೇ ತರಬೇತಿಯಿರುವಿದಿಲ್ಲ” ಎಂದು ರಾಜಕಾರಣಿಗಳ ಬಗೆಗಿನ ತನ್ನ ತಿರಸ್ಕಾರ ಭಾವ ವ್ಯಕ್ತಪಡಿಸುತ್ತಾ ವಿವರಿಸುತ್ತಾ ಹೋಗುತ್ತಾನೆ.
ರೇಡಿಯೋದ ಮೂಲಕ ಕಳಿಸಿದ ಆದೇಶದ ಬಗ್ಗೆ ಅರಿತ ಸರ್ಕಾರ ಯಾವುದೇ ಆಕ್ರಮಣವಿಲ್ಲದೆ ಹೀಗೆ ದಾಳಿಗೆ ಆದೇಶ ನೀಡಲಾಗಿದೆ ಎಂದು ತಿಳಿದು ಗಾಬರಿಗೊಂಡು ಪೆಂಟಗಾನ್ ನಲ್ಲಿ ತುರ್ತು ಭದ್ರತಾ ಸಭೆ ಕರೆಯುತ್ತದೆ. ದಾಳಿಗೆ ಹೋಗಿರುವ ಪ್ಲೇನ್ ಗಳು ದಾಳಿ ಮಾಡಲು ಇನ್ನೂ ಎಷ್ಟು ಸಮಯ ಇದೆ, ಅವುಗಳನ್ನು ಹೇಗೆ ಮರಳಿ ಕರೆಯುವುದು ಎಂದೆಲ್ಲ ಚರ್ಚಿಸಲು ರಾಷ್ಟ್ರಾಧ್ಯಕ್ಷರು ಭದ್ರತೆಗೆ ಸಂಬಂಧಪಟ್ಟ ಎಲ್ಲ ಜನರಲ್, ಅಧಿಕಾರಿಗಳನ್ನು ಕೇಳುತ್ತಾ ಹೋಗುತ್ತಾರೆ. ಜನರಲ್ ಟರ್ಜಿಡ್ಸನ್ ಎಂಬ ಜನರಲ್ ಗುಪ್ತಪದವಿಲ್ಲದೆ ಹೇಗೆ ಇದು ಕಷ್ಟ ಸಾಧ್ಯ ಎಂದು ವಿವರಿಸುತ್ತ ದಾಳಿಯನ್ನು ತಡೆಯುವುದರ ಬದಲು ರಷ್ಯಾದ ಪ್ರತಿದಾಳಿಗೆ ಹೇಗೆ ತಯಾರಾಗುವುದು ಎಂದು ಯೋಚಿಸೋಣ ಎಂದು ಸಲಹೆ ನೀಡುತ್ತಾರೆ. ಶಾಂತವಾಗಿರುವ ಪರಿಸ್ಥಿತಿಯನ್ನು ಹಾಳುಮಾಡಿದ, ಜಗತ್ತನ್ನು ವಿಶ್ವಯುದ್ಧಕ್ಕೆ ದೂಡಿದ ನಾಯಕ ಎಂದು ತನಗೆ ಹಣೆಪಟ್ಟಿ ಬರುತ್ತದೆ ಎಂದು ರಾಷ್ಟ್ರಾಧ್ಯಕ್ಷ ಇದಕ್ಕೆ ನಿರಾಕರಿಸಿ ಬಹಳ ಚರ್ಚೆಯ ನಂತರ ರಷ್ಯಾದ ರಾಯಭಾರಿಯನ್ನು ವಾರ್ ರೂಮಿಗೇ ಕರೆತಂದು ರಷ್ಯಾದ ಅಧ್ಯಕ್ಷರ ಜೊತೆ ನೇರ ಚರ್ಚೆ ನಡೆಸುವುದು ಎಂದು ಜನರಲ್ ಟರ್ಜಿಡ್ಸನ್ ನ ತೀವ್ರ ವಿರೋಧದ ನಡುವೆ ನಿರ್ಧರಿಸುತ್ತಾನೆ. ದಾಳಿಯ ಬಗ್ಗೆ ತಿಳಿದ ರಷ್ಯಾದ ಅಧ್ಯಕ್ಷ ಕೂಡ ಸಿಟ್ಟು ಮತ್ತು ಗಾಬರಿ ವ್ಯಕ್ತಪಡಿಸುತ್ತಾ ಅಕಸ್ಮಾತ್ ಆ ಪ್ಲೇನ್ ಗಳು ದಾಳಿ ಮಾಡಿದ್ದೇ ಆದರೆ ರಷ್ಯಾದಲ್ಲಿರುವ ಪ್ರತಿದಾಳಿಗೆಂದು ಇಟ್ಟಿರುವ ಡೂಮ್ಸ್ ಡೆ ಮೆಷಿನ್ (ಪ್ರಳಯದ ಯಂತ್ರ) ಸ್ವಯಂ ಚಾಲಿತಗೊಂಡು ಇಡೀ ಭೂಮಿಯನ್ನೇ ನಿರ್ನಾಮ ಮಾಡುತ್ತದೆ ಎಂದು ತಿಳಿಸುತ್ತಾನೆ. ಅದನ್ನು ತಡೆಯಬೇಕಾದರೆ ಹೇಗಾದರೂ ಮಾಡಿ ದಾಳಿಗೆ ಹೋಗಿರುವ ಪ್ಲೇನ್ ಗಳನ್ನು ಮರಳಿ ಕರೆಯುವುದೊಂದೇ ಉಳಿದಿರುವ ಮಾರ್ಗ ಎಂದು ತಿಳಿಸುತ್ತಾನೆ. ಅಮೇರಿಕಾ ಅಧ್ಯಕ್ಷ ಜನರಲ್ ರಿಪ್ಪರ್ ನ ಬೇಸ್ ಮೇಲೆ ಹತ್ತಿರದ ಬೇರೊಂದು ಆರ್ಮಿ ಬೇಸ್ ನಿಂದ ಸೇನೆ ಕಳಿಸಿ ಜನರಲ್ ರಿಪ್ಪರ್ ನನ್ನು ಸೆರೆ ಹಿಡಿದು ಆ ಗುಪ್ತ ಕೋಡ್ ಗಳನ್ನು ತರಲು ಆದೇಶಿಸುತ್ತಾನೆ.
ತನ್ನನ್ನು ಸೆರೆ ಹಿಡಿಯಲು ಬಂದ ಸೇನೆ ಕಾಮ್ಯುನಿಸ್ಟ್ ಸೇನೆಯಾಗಿದ್ದು ನಮ್ಮವರಂತೆಯೇ ಬಟ್ಟೆ ಧರಿಸಿದ್ದಾರೆ, ಅದರಿಂದ ಗೊಂದಲಗೊಳ್ಳದೆ ಬಂದವರ ಮೇಲೆ ದಾಳಿ ಮಾಡಿ ಎಂದು ಜನರಲ್ ರಿಪ್ಪರ್ ತನ್ನ ಬೇಸ್ ನ ಸೈನಿಕರಿಗೆ ಸ್ಪೀಕರ್ ಮೂಲಕ ತನ್ನ ರೂಮಿನಿಂದಲೇ ಆದೇಶಿಸುತ್ತಾನೆ. ಆದರೆ ದಾಳಿಗೆ ಸರಿಯಾಗಿ ಉತ್ತರಿಸಲಾಗದೆ ತನ್ನ ಸೈನಿಕರು ನಿಧಾನವಾಗಿ ಶರಣಾಗುತ್ತಿದ್ದಾರೆಂದು ತಿಳಿದ ಕೂಡಲೆ ಬಾತ್ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡು ಗುಪ್ತ ಕೋಡ್ ತನ್ನಲ್ಲಿಯೇ ಉಳಿಸಿಕೊಂಡು ಸಾಯುತ್ತಾನೆ. ಇದನ್ನೆಲ್ಲಾ ಮೂಕನಂತೆ ನೋಡುತ್ತಿದ್ದ ಮ್ಯಾಂಡ್ರೇಕ್ ಜನರಲ್ ಸತ್ತಿರುವುದನ್ನು ಗಮನಿಸಿ ಜನರಲ್ ಜೊತೆಗಿನ ಸಂಭಾಷಣೆಯನ್ನು ಸೂಕ್ಷ್ಮವಾಗಿ ಮೆಲುಕು ಹಾಕಿ ಗುಪ್ತ ಕೋಡನ್ನು ಅಂದಾಜಿಸುತ್ತಾನೆ. ಇದರ ನಂತರ ಆ ಕೋಡನ್ನು ಅಧ್ಯಕ್ಷರ ಕಚೇರಿಗೆ ಫೋನ್ ಮೂಲಕ ತಲುಪಿಸುತ್ತಾನೆ.
ಎಲ್ಲಾ ಪ್ಲೇನ್ ಗಳನ್ನು ಮರಳಿ ಕರೆಯಲು ಸಫಲರಾಗುವ ಅಮೇರಿಕಾ ಸೇನೆ ಒಂದು ಪ್ಲೇನ್ ಮಾತ್ರ ರಷ್ಯಾದ ದಾಳಿಗೆ ಗುಪ್ತ ರೇಡಿಯೋ ಕೆಟ್ಟು ರಷ್ಯಾದ ಕಡೆ ಸಾಗುತ್ತಿದೆ ಎಂದು ತಿಳಿದು ರಷ್ಯನ್ನರಿಗೇ ಅದನ್ನು ಹೊಡೆದುರುಳಿಸಲು ತಿಳಿಸುತ್ತಾರೆ. ಈ ಮೊದಲು ಹೇಳಿದ ಪ್ಲೇನ್ ಅದು. ಗುಂಡಿನ ದಾಳಿಗೆ ಪ್ಲೇನ್ ನ ಕೆಲವು ಸ್ವಯಂಚಾಲಿತ ವ್ಯವಸ್ಥೆ ಕೆಟ್ಟಿರುವುದನ್ನು ಮನಗಂಡ ಪ್ಲೇನ್ ನ ಕಮ್ಯಾಂಡರ್ ಅದನ್ನು ತಾನೇ ರಿಪೇರಿ ಮಾಡಿ ಬಾಂಬ್ ಗಳನ್ನು ಬೀಳುವಂತೆ ಮಾಡಲು ಹೋಗಿ ಬಾಂಬಿನ ಜೊತೆ ಕೆಳಗೆ ಬೀಳುತ್ತಾನೆ. ಆ ಬಾಂಬ್ ಸ್ಫೋಟಗೊಂಡು ಅಣು ಯುದ್ಧಕ್ಕೆ ನಾಂದಿ ಹಾಡುತ್ತದೆ.
ಎಲ್ಲ ಕೈ ಮೀರಿದ ನಂತರ ವಾರ್ ರೂಮಿನಲ್ಲಿ ಅಮೇರಿಕಾ ಅಧ್ಯಕ್ಷರ ಸಲಹೆಗಾರ, ವಿಶ್ವ ಯುದ್ಧದ ನಂತರ ಅಮೆರಿಕಾಗೆ ವಲಸೆ ಬಂದ ಒಬ್ಬ ಜರ್ಮನ್ ವಿಜ್ಞಾನಿ ಡಾ||ಸ್ಟ್ರೇಂಜ್ ಲವ್ ಈ ದಾಳಿಯ ನಂತರ ಮಾನವ ಸಂಕುಲವನ್ನು ಹೇಗೆ ಇದೆಲ್ಲದರ ನಂತರ ಮುಂದುವರೆಸುವುದು ಎಂದು ಬಣ್ಣಿಸುತ್ತಾ ಹೋಗುತ್ತಾನೆ. ಆ ವಿಜ್ಞಾನಿಯು ಮಾತನಾಡುತ್ತ ಹೇಗೆ ಸಾವಿರಾರು ಅಡಿಗಳ ಆಳದ ಗಣಿಗಳಲ್ಲಿ ವಿಕಿರಣಗಳು ತಲುಪಲಾರವು ಮತ್ತು ಸುಮಾರು ೧೦೦ ವರ್ಷಗಳವರೆಗೂ ದಾಳಿಯಲ್ಲಿ ಬದುಕುಳಿದ ಜನರೆಲ್ಲರೂ ಅಲ್ಲಿಯೇ ವಾಸಮಾಡಬೇಕಾಗಿಬರಬಹುದು ಎಂದು ಹೇಳುತ್ತಾ ತಮ್ಮ ಪೀಳಿಗೆ ಮುಂದುವರೆಸಲು ವಿವಿಧ ಕ್ಷೇತ್ರಗಳಿಂದ ಜನರನ್ನು ಆಯ್ಕೆ ಮಾಡಿಕೊಂಡು ಮನುಷ್ಯ ಸಂಕುಲ ಮುಂದುವರೆಸುವುದು ಹೇಗೆ ಎಂದು ವಿವರಿಸುತ್ತಾ ಹೋಗುತ್ತಾನೆ. ಹಾಗೆಯೇ ಅಲ್ಲಿದ್ದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಉತ್ತರಿಸುತ್ತಾ ಮೆಲ್ಲಗೆ ಗಾಲಿ ಕುರ್ಚಿಯಿಂದ ಮೇಲೆದ್ದು “ಮೈನ್ ಫ್ಯುರರ್, ನಾನು ನಡೆಯಬಲ್ಲೆ” ಎಂದು ಉದ್ಗಾರವೆತ್ತುತ್ತಾನೆ. ಅಲ್ಲಿಗೆ ಸಿನಿಮಾ ಹಲವಾರು ಅಣು ಬಾಂಬ್ ಸ್ಫೋಟಗೊಳ್ಳುವುದರ ಚಿತ್ರಗಳೊಂದಿಗೆ ಕೊನೆಗೊಳ್ಳುತ್ತದೆ. ಆ ವಿಜ್ಞಾನಿಯ ಕೊನೆಯ ಉದ್ಗಾರ ಹಲವಾರು ಅರ್ಥಗಳಿಗೆ ಎಡೆಮಾಡಿಕೊಡುತ್ತದೆ. ಅದೆಲ್ಲ ನೋಡುವವರ ದೃಷ್ಟಿಕೋನಕ್ಕೆ ಬಿಟ್ಟದ್ದು.
ಅಮೇರಿಕಾ ರಾಷ್ಟ್ರಾಧ್ಯಕ್ಷ, ಮ್ಯಾಂಡ್ರೇಕ್ ಮತ್ತು ಡಾ|| ಸ್ಟ್ರೇಂಜ್ ಲವ್ ಪಾತ್ರಗಳನ್ನು ಪೀಟರ್ ಸೆಲ್ಲರ್ಸ್ ಅದ್ಭುತವಾಗಿ ಮಾಡಿದ್ದಾರೆ. ಮೂರೂ ಪಾತ್ರಗಳಿಗೂ ಬೇರೆಯದೇ ಮಾತಿನ ಶೈಲಿಯಿದ್ದು(accent) ಅದನ್ನು ಯಾವುದೇ ತಪ್ಪುಗಳಿಲ್ಲದೆ ಸೊಗಸಾಗಿ ಅಭಿನಯಿಸಿದ್ದಾರೆ.
ಸಿನಿಮಾ ಅಂತ್ಯದವರೆಗೂ ನಗೆಯಲ್ಲೇ ತೇಲಿಸುತ್ತ ಅತ್ಯಂತ ಗಂಭೀರ ವಿಷಯವನ್ನು ನಿರ್ದೇಶಕ ಬಹಳ ಸೂಕ್ಷವಾಗಿ ಹೇಳಿದ್ದಾರೆ. Mutually Assured Destruction (MAD) ಎನ್ನುವುದು ಪರಸ್ಪರ ವಿನಾಶವನ್ನು ಖಾತ್ರಿಪಡಿಸುವ ಒಂದು ಒಪ್ಪಂದ. ನಾವು ನಾಶವಾದರೆ, ನಮ್ಮೊಂದಿಗೆ ನಿಮ್ಮನ್ನೂ ಒಯ್ಯುತ್ತೇವೆ ಎನ್ನುವ ಒಂದು ಬೆದರಿಕೆ. ಇದನ್ನು ನಿರ್ದೇಶಕ ಚಿತ್ರದ ಒಟ್ಟು ಘಟನಾವಳಿಗಳು, Mutually Assured Destruction ನ ಸಂಕ್ಷಿಪ್ತ ರೂಪ MAD ಅಂದರೆ ಹುಚ್ಚು ಎನ್ನುವ ರೀತಿ ಬಿಂಬಿಸಿದ್ದಾರೆ. ಹಾಗೆ ನೋಡಿದರೆ ದೇಶದ ಭದ್ರತೆ, ಸುರಕ್ಷತೆ ಎಲ್ಲದರ ಆಚೆ ನೋಡಿದರೆ ಇವೆಲ್ಲಾ ಹುಚ್ಚುತನವೇ ಅನ್ನಿಸುತ್ತದೆ.
-ವಿಶ್ವನಾಥ್