ನಾನು ನೋಡಿದ ಚಿತ್ರ- ಡಿ ಪಿಯನಿಸ್ಟ್

ನಾನು ನೋಡಿದ ಚಿತ್ರ- ಡಿ ಪಿಯನಿಸ್ಟ್

                                   
IMDb: http://www.imdb.com/title/tt0253474/?ref_=nv_sr_1
 
                                                                                                                                                        
    ಇಂಗ್ಲಿಶ್ ಸಿನೆಮಾ ನೋಡುವವರಿಗೆ ಚಿರಪರಿಚಿತ ಎನ್ನಬಹುದಾದ ನಿರ್ದೇಶಕ ಸ್ಟಿವೆನ್ ಸ್ಪಿಲ್ಬರ್ಗ್. ಅವರ "ದಿ ಶಿನ್ದ್ಲರ್ಸ್ ಲಿಸ್ಟ್" ಎರಡನೇ ವಿಶ್ವ ಯುದ್ಧದ ಅವಧಿಯಲ್ಲಿ ಯಹೂದಿಗಳ ಮೇಲಾದ ಕ್ರೌರ್ಯದ ಬಗೆಗಿನ ಚಿತ್ರ. ಅಂತಹದ್ದೇ ಅಷ್ಟೇ ಮಹತ್ತರವಾದ ಚಿತ್ರ "ದಿ ಪಿಯನಿಸ್ಟ್". ರೋಮನ್ ಪೋಲಾನ್ಸ್ಕಿನಿರ್ದೇಶಿರುವ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಏಡ್ರಿಯನ್ ಬ್ರೋಡಿ ಇದ್ದಾರೆ.

    ಈ ಚಿತ್ರ, 1939ರ ಮತ್ತು ನಂತರದ ಅವಧಿಯಲ್ಲಿ ಪೋಲೆಂಡ್ ದೇಶದಲ್ಲಿ ನಾಜಿ ಆರ್ಮಿಯ ಕ್ರೌರ್ಯ, ಅತ್ಯಾಚಾರಗಳ ಬಗ್ಗೆ ಅದರಲ್ಲೇ ಇದ್ದು ನೋವು ಸಂಕಟ ಅನುಭವಿಸಿ ಜೀವ ಉಳಿಸಿಕೊಂಡ ಒಬ್ಬ ಪಿಯಾನಿಸ್ಟ್, ವ್ಲಾಡಿಸ್ಲಾವ್ ಸ್ಪಿಲ್ಮನ್ ರ(Wladyslaw Szpilman) ಕಥೆ. 1939ರ ಆಗಿನ ಪೋಲೆಂಡ್ ಜೀವನದ ವಿಡಿಯೋ ಕ್ಲಿಪ್ ಗಳಿಂದ ಪ್ರಾರಂಭವಾಗುವ ಚಿತ್ರ, ವ್ಲಾಡಿಸ್ಲಾವ್ ರವರು ರೇಡಿಯೋ ಕಾರ್ಯಕ್ರಮ ಕೊಡುತ್ತಿದ್ದ ಸಂದರ್ಭದಿಂದ ತೆರೆದುಕೊಳ್ಳುತ್ತದೆ. ನಾಜಿ ಆರ್ಮಿಯ ಬಾಂಬ್ ದಾಳಿಯ ಕಾರಣದಿಂದ ವಾರ್ಸಾ(Warsaw) ರೇಡಿಯೋ ಕೇಂದ್ರ ಸ್ಥಗಿತಗೊಳಿಸಿ ಅಲ್ಲಿದ್ದ ಎಲ್ಲರೂ ಹೊರಗೆ ಬರುತ್ತಿರುವಾಗ ಸ್ಪಿಲ್ಮನ್ ತನ್ನ ಸ್ನೇಹಿತ ಯೂರೆಕ್ ನ ಸುಂದರ ತಂಗಿ ಡೋರೊಟಳನ್ನು ಭೇಟಿಯಾಗುತ್ತಾನೆ. ಆಕೆಯ ಸೌಂದರ್ಯಕ್ಕೆ ಮನಸೋಲುವ ಸ್ಪಿಲ್ಮನ್ ಆಕೆಯನ್ನು ಸರಿಯಾಗಿ ಮಾತನಾಡಿಸಬೇಕು ಎನ್ನುವಷ್ಟರಲ್ಲಿ ಆಕೆಯ ಅಣ್ಣ ಅದು ಸರಿಯಾದ ಸಮಯವಲ್ಲ ಎಂದು ಹೇಳಿ ಆಕೆಯನ್ನು ಕರೆದೊಯ್ಯುತ್ತಾನೆ.

    ನಾಜಿ ಆರ್ಮಿಯನ್ನು ಹಿಮ್ಮೆಟ್ಟಿಸಲು ಎಲ್ಲ ಪೋಲೆಂಡ್ ನಾಗರಿಕರಿಗೆ ಕರೆ ನೀಡಲಾಗಿರುತ್ತದೆ. ಇದಕ್ಕೆ ಓಗೊಟ್ಟು ಬಹಳಷ್ಟು ಜನ ಮನೆ ಬಿಟ್ಟು ಸುರಕ್ಷಿತ ಜಾಗಗಳಿಗೆ ಹೋಗಿ ಯುದ್ಧ ಮುಂದುವರೆಸಲು ನಿರ್ಧಾರ ಮಾಡಿರುತ್ತಾರೆ. ಆದರೆ ಸ್ಪಿಲ್ಮನ್ ಕುಟುಂಬ ರೇಡಿಯೋದಲ್ಲಿ ಬ್ರಿಟನ್ ದೇಶ ಜರ್ಮನಿಯ ಮೇಲೆ ಯುದ್ಧ ಘೋಷಿಸುವುದನ್ನು ಕೇಳಿ ತಾವಿದ್ದ ಮನೆಯಲ್ಲೇ ಉಳಿದು ಕಾದು ನೋಡಲು ನಿರ್ಧರಿಸುತ್ತಾರೆ. ನಿಧಾನವಾಗಿ ಪರಿಸ್ಥಿತಿ ತಿಳಿಯಾಗಬಹುದು ಎಂದು. ಆದರೆ ಅವರು ಎಣಿಸಿದಂತೆ ನಡೆಯದೆ ನಾಜಿ ಸೇನೆಯು ನಿಧಾನವಾಗಿ ಯಹೂದಿಗಳ ಮೇಲೆ ಒಂದೊಂದೇ ಕಟ್ಟಲೆಗಳನ್ನು ಹೇರಲು ತೊಡಗುತ್ತಾರೆ.

  ಮೊದಲು ತೋಳುಗಳ ಮೇಲೆ ಯಹೂದಿ ಚಿಹ್ನೆಯಾದ ಡೇವಿಡ್ ನ ನಕ್ಷತ್ರವನ್ನು ಧರಿಸುವಂತೆ ಕಾನೂನು ಮಾಡಲಾಗುತ್ತದೆ. ಬಡವರು ಶ್ರೀಮಂತರು ಎನ್ನದೆ ಎಲ್ಲ ಯಹೂದಿಗಳನ್ನು ಕಂಡಲ್ಲಿ ಅವಮಾನಿಸುವುದು ಕೆಟ್ಟದಾಗಿ ನಡೆಸಿಕೊಳ್ಳುವುದು ಪ್ರಾರಂಭವಾಗುತ್ತದೆ. ನಂತರ ನಿಧಾನವಾಗಿ ಎಲ್ಲ ಯಹೂದಿಗಳನ್ನು ಅವರಿಗಾಗಿಯೇ ಬೇರ್ಪಡಿಸಲಾದ ಒಂದು ಕಾಲೋನಿಗೆ(Jewish Ghetto) ಕಡ್ಡಾಯವಾಗಿ ಸ್ಥಳಾಂತರಿಸಲು ಕಾನೂನು ಹೊರಡಿಸಲಾಗುತ್ತದೆ. ತನ್ನ ಕುಟುಂಬ ಅತ್ಯಗತ್ಯ ವಸ್ತುಗಳನ್ನೆಲ್ಲ ತೆಗೆದುಕೊಂಡು ಸ್ಥಳಾಂತರಿಸುವಾಗ ಸ್ಪಿಲ್ಮನ್  ಡೋರೊಟಳನ್ನು ಮತ್ತೆ ಭೇಟಿಯಾಗುತ್ತಾನೆ. ಆಕೆಗೆ ಇವರ ಮೇಲೆ ನಡೆಸಲಾಗುತ್ತಿರುವ ಅನ್ಯಾಯದ ಬಗ್ಗೆ ಸಿಟ್ಟು ಬೇಸರ ಎರಡೂ ಆದರೂ ಇಬ್ಬರೂ ಏನೂ ಮಾಡಲಾಗದೆ ಕೊನೆಯ ಬಾರಿ ವಿದಾಯ ಹೇಳಿ ಅವರವರ ದಾರಿ ಹಿಡಿಯುತ್ತಾರೆ.

    ಸ್ಪಿಲ್ಮನ್ ಮತ್ತು ಆತನ ತಮ್ಮ, ತಮ್ಮ ಬಳಿ ಇರುವ ಪುಸ್ತಕಗಳನ್ನು ಮಾರಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ಒಂದು ದಿನ ಇವರ ಸ್ನೇಹಿತನೊಬ್ಬ ಯಹೂದಿಗಳನ್ನು ನಿಯಂತ್ರಿಸಲು ಯಹೂದಿಗಳಲ್ಲೇ ಕೆಲವರನ್ನು ಪೋಲಿಸ್ ಆಗಿ ನಾಜಿ ಸೇನೆ ನೇಮಿಸುತ್ತಿರುವುದಾಗಿ, ತಾನು ಸ್ಪಿಲ್ಮನ್ ಮತ್ತು ಆತನ ತಮ್ಮನನ್ನು ಶಿಫಾರಸು ಮಾಡಿ ಆ ಕೆಲಸಕ್ಕೆ ಹಚ್ಚಬಹುದು ಎಂದು ಹೇಳುತ್ತಾನೆ. ಆದರೆ ಇದಕ್ಕೊಪ್ಪದ ಸ್ಪಿಲ್ಮನ್ ಮತ್ತು ಆತನ ತಮ್ಮ, ಅವನಿಗೆ ಬೈದು ಕಳುಹಿಸುತ್ತಾರೆ. ಅಲ್ಲಿಂದ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಾ ಸ್ಪಿಲ್ಮನ್ ಕುಟುಂಬ ಬಹಳ ಕಷ್ಟ ಅನುಭವಿಸುತ್ತಾರೆ. ಕೊನೆಗೆ ಒಂದು ದಿನ ಎಲ್ಲರನ್ನೂ ದೂರದ ಊರೊಂದಕ್ಕೆ ಕರೆದೊಯ್ಯುತ್ತಿರುವುದಾಗಿ ಎಲ್ಲ ಯಹೂದಿಗಳು ತಮ್ಮ ವಸ್ತುಗಳನ್ನು ಇದ್ದಲ್ಲೇ ಬಿಟ್ಟು ಹೊರಡಬೇಕು ಎಂದು ನಾಜಿ ಸೇನೆ ಆದೇಶಿಸುತ್ತದೆ. ಹೀಗೆ ರೈಲು ಹತ್ತಲು ಒಟ್ಟು ಸೇರಿಸಿದ್ದ ಗುಂಪಲ್ಲಿ ಅಲ್ಲಿಯ ತನಕ ಬೇರೆ ಬೇರೆಯಾಗಿದ್ದ ಸ್ಪಿಲ್ಮನ್ ಕುಟುಂಬ ಮತ್ತೆ ಸೇರುತ್ತದೆ. ತಮ್ಮ ಬಳಿ ಇದ್ದ ಕೊಂಚವೇ ದುಡ್ಡಿನಲ್ಲಿ ಒಂದು ಸಿಹಿ ತಿಂಡಿಯನ್ನು ಕೊಂಡು ಎಲ್ಲರೂ ಹಂಚಿಕೊಂಡು ಕಡೆಯ ಬಾರಿ ತಿನ್ನುತ್ತಾರೆ. ಎಲ್ಲರೂ ರೈಲು ಹತ್ತಲು ಬಂದಾಗ ಸ್ಪಿಲ್ಮನ್ ನನ್ನು ನೋಡಿದ ಪೋಲಿಸ್ ಸ್ನೇಹಿತ ಆತನನ್ನು ರೈಲು ಹತ್ತದಂತೆ ಹೊರಗೆಳೆದು ಬದಿಗೆ ತಳ್ಳುತ್ತಾನೆ ಮತ್ತು ತಪ್ಪಿಸಿಕೊಳ್ಳಲು ಹೇಳುತ್ತಾನೆ. ಆದರೆ ಕುಟುಂಬದವರನ್ನು ಬಿಟ್ಟು ಹೋಗಲು ಮನಸ್ಸಾಗದ ಸ್ಪಿಲ್ಮನ್ ಮತ್ತೆ ಅವರೊಟ್ಟಿಗೆ ಸೇರಲು ಹೋದಾಗ ಆತನನ್ನು ಮತ್ತೆ ಹೊರಗೆಳುಯುವ ಸ್ನೇಹಿತ ತಾನು ಆತನ ಜೀವ ಉಳಿಸಿದ್ದೇನೆಂದೂ, ಅಲ್ಲಿಂದ ತಪ್ಪಿಸಿ ಕೊಳ್ಳಲು ಹೇಳುತ್ತಾನೆ. ಮನಸ್ಸಿಲ್ಲದ ಮನಸ್ಸಿನಿಂದ ಹೊರಡುವ ಸ್ಪಿಲ್ಮನ್ ತನ್ನ ಕುಟುಂಬವನ್ನು ಕಳೆದುಕೊಂಡ ದುಃಖದೊಂದಿಗೆ ಅಳುತ್ತ ಮತ್ತೆ ನಗರಕ್ಕೆ ಬರುತ್ತಾನೆ.

    ಅಳಿದುಳಿದಿದ್ದ ಪೋಲಿಶ್ ಮತ್ತು ಯಹೂದಿಗಳ ಒಂದು ಸಣ್ಣ ಕ್ಯಾಂಪ್ ಗೆ ಸೇರುವ ಸ್ಪಿಲ್ಮನ್ ಅಲ್ಲಿ ಕೂಲಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಅಲ್ಲೂ ದಿನವೂ ಸಾವಿನ ಭಯ ಇದ್ದದ್ದೇ. ಅಷ್ಟರಲ್ಲೇ ಒಂದು ದಿನ ಕ್ಯಾಂಪಿನಲ್ಲಿ ತನ್ನ ಹಳೆ ಪರಿಚಿತನೊಬ್ಬನ ಭೇಟಿಯಾಗುತ್ತದೆ. ಆತನ ಸಹಾಯ ಪಡೆದು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಹವಣಿಸುವ ಸ್ಪಿಲ್ಮನ್ ಒಂದು ದಿನ ಆತನ ಸಹಾಯ ಪಡೆದು ಕ್ಯಾಂಪಿನಿಂದ ತಪ್ಪಿಸಿಕೊಂಡು ಆತನ ಪರಿಚಯಸ್ತ ಪೋಲಿಶ್ ಮಹಿಳೆ ಜನೀನ್ ಳ ಬಳಿ ಸಹಾಯ ಕೇಳಿ ಹೋಗುತ್ತಾನೆ. ಆತನನ್ನು ಮನೆಗೆ ಕರೆದುಕೊಂಡು ಹೋಗುವ ಜನೀನ್ ಆತನಿಗೆ ಉಪಚಾರ ಮಾಡಿ ಆಕೆಯ ಗಂಡನ ಸಹಾಯದಿಂದ ತಮ್ಮ ಮತ್ತೊಬ್ಬ ಪರಿಚಿತ ಗೆಬ್ಚಿನ್ಸ್ಕಿ ಮನೆಗೆ ಕಳಿಸಿ ಅಲ್ಲಿ ಸ್ಪಿಲ್ಮನ್ ಗೆ ಅಂದು ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡುತ್ತಾಳೆ. ಗೆಬ್ಚಿನ್ಸ್ಕಿಈತನನ್ನು ಬರಮಾಡಿಕೊಂಡು ಬೇರೊಂದು ಮನೆಯಲ್ಲಿ ಉಳಿದುಕೊಳ್ಳಲು ಸಹಾಯ ಮಾಡುತ್ತಾನೆ. ಆ ಮನೆಗೆ ಗುಟ್ಟಾಗಿ ಸ್ಪಿಲ್ಮನ್ ನನ್ನು ಭೇಟಿಯಾಗಲು ಜನೀನ್ ಆಗಾಗ ಬರುತ್ತಿರುತ್ತಾಳೆ ಮತ್ತು  ಹಾಗೆ ಬಂದಾಗಲೆಲ್ಲ ಆತನ ಊಟದ ವ್ಯವಸ್ಥೆ ಮಾಡಿಯೂ ಹೋಗುತ್ತಿರುತ್ತಾಳೆ. ಹೀಗೇ ನಡೆಯುತ್ತಿರುವಾಗ ಒಂದು ದಿನ ತಾನಿದ್ದ ಮನೆಯ ಎದುರು ಕಟ್ಟಡದಲ್ಲಿ ಕೆಲವು ಕ್ರಾಂತಿಕಾರಿ ಯಹೂದಿಗಳು ಅಡಗಿದ್ದಾರೆ ಎಂಬ ಮಾಹಿತಿ ತಿಳಿದು ಜರ್ಮನ್ ಸೇನೆ ದಾಳಿ ಮಾಡುತ್ತದೆ. ಆದರೆ ಬಹಳ ದೃಢಸಂಕಲ್ಪ ಹೊಂದಿದ್ದ ಆ ಕ್ರಾಂತಿಕಾರಿಗಳು ಕೊನೆಗೂ ಜರ್ಮನ್ ಸೇನೆಗೆ ಸಾಕಷ್ಟು ಘಾಸಿ ಮಾಡಿ 3 ದಿನ ನಂತರ ಸಾಯುತ್ತಾರೆ. ಇದನ್ನು ತಾನಿದ್ದ ಮನೆಯಿಂದಲೇ ಮೂಕನಂತೆ ನೋಡುತ್ತಿದ್ದ ಸ್ಪಿಲ್ಮನ್ ಜನೀನ್ ಬಂದಾಗ ಆ ಕ್ರಾಂತಿಕಾರಿಗಳು ಸತ್ತದ್ದರಿಂದ ಏನು ಪ್ರಯೋಜನವೋ ಎಂದು ಬೇಸರದಿಂದ ನುಡಿಯುತ್ತಾನೆ. ಅದಕ್ಕೆ ಜನೀನ್ ಈ ಕ್ರಾಂತಿಕಾರಿಗಳ ಹೋರಾಟ ಜರ್ಮನ್ ರನ್ನು ಆಶ್ಚರ್ಯಗೊಳಿಸಿದೆ ಮತ್ತು ಇದರಿಂದ ಪ್ರೇರಿತಗೊಂದು ಪೋಲಿಶ್ ಜನ ಕೂಡ ಜರ್ಮನ್ ರ ವಿರುದ್ಧ ದಂಗೆಯೇಳುತ್ತಾರೆ ಎಂದು ಹೇಳುತ್ತಾಳೆ.

   ಒಂದು ದಿನ ಇದ್ದಕ್ಕಿದ್ದಂತೆ ಗೆಬ್ಚಿನ್ಸ್ಕಿಜರ್ಮನ್ ಸೇನೆ ಜನೀನ್ ಮತ್ತವಳ ಗಂಡನನ್ನು ಸೆರೆಹಿಡಿದಿರುವುದಾಗಿಯೂ ತನ್ನನ್ನೂ ಸೆರೆಹಿಡಿಯಬಹುದು ಎಂಬ ಮಾಹಿತಿ ಸಿಕ್ಕಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಿರುವುದಾಗಿಯೂ ಸ್ಪಿಲ್ಮನ್ಗೂ ತಪ್ಪಿಸಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾನೆ. ತಾನು ಕಂಡುಕೊಂಡ ಆ ಜಾಗವನ್ನು ಬಿಡಲು ಮನಸ್ಸಿಲ್ಲದೆ ಸ್ಪಿಲ್ಮನ್ ಅಲ್ಲಿಯೇ ಉಳಿಯುತ್ತಾನೆ. ಅಷ್ಟರಲ್ಲೇ ಜರ್ಮನ್ ಸೈನಿಕರು ಆತನ ಅಪಾರ್ಟ್ಮೆಂಟ್ ಬಿಲ್ಡಿಂಗ್ ಗೆ ದಾಳಿಯಿಟ್ಟು ಕೆಲವರನ್ನು ಸೆರೆ ಹಿಡಿದುಕೊಂದು ಹೋಗುತ್ತಾರೆ. ಸ್ಪಿಲ್ಮನ್ ಈ ಮನೆಯಲ್ಲಿ ಇರುವುದು ಹೊರಗಿನವರಿಗೆ ತಿಳಿಯಬಾರದಾದ್ದರಿಂದ ಆತ ತುಂಬಾ ನಿಶಬ್ಧವಾಗಿರಬೇಕಾಗಿರುತ್ತದೆ. ಹಸಿವಿನಿಂದ ಮನೆಯಲ್ಲಿ ಏನಿದೆ ಎಂದು ಹುಡುಕುತ್ತಿರುವ ಸಂದರ್ಭದಲ್ಲಿ ತಟ್ಟೆಗಳನ್ನು ಬೀಳಿಸಿ ದೊಡ್ಡ ಸದ್ದು ಮಾಡಿಬಿಡುತ್ತಾನೆ. ಇದರಿಂದ ಈ ಮನೆಯಲ್ಲಿ ಯಾರೋ ಇದ್ದಾರೆ ಎಂದು ತಿಳಿದ ಪಕ್ಕದ ಮನೆಯಾಕೆ ಈತನ ಮನೆ ಬಾಗಿಲು ತಟ್ಟುತ್ತಾಳೆ. ತಾನಿನ್ನು ಸಿಕ್ಕಿಬಿದ್ದೆ ಎಂದು ಗಾಬರಿಗೊಂಡ ಸ್ಪಿಲ್ಮನ್ ತನ್ನ ಸಾಮಾನುಗಳನ್ನೆಲ್ಲಾ ತೆಗೆದುಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ.

   ಗೆಬ್ಚಿನ್ಸ್ಕಿ ಒಮ್ಮೆ ಕೊಟ್ಟಿದ್ದ ಮಾಹಿತಿ ಬಳಸಿ ಆತ ಹೇಳಿದ ಮಿ||ಜೀಕೇವಿಚ್ ನನ್ನು ಸಂಪರ್ಕ ಮಾಡಲು ಸ್ಪಿಲ್ಮನ್ ಮುಂದಾಗುತ್ತಾನೆ. ಅವರ ಮನೆಗೆ ಹೋದಾಗ ಅಲ್ಲಿ ರೇಡಿಯೋ ಕೇಂದ್ರದಲ್ಲಿ ಭೇಟಿಯಾಗಿದ್ದ ತನ್ನ ಸ್ನೇಹಿತ ಯೂರೆಕ್ ನ ತಂಗಿ ಡೋರೊಟಳನ್ನು ನೋಡುತ್ತಾನೆ. ಗೆಬ್ಚಿನ್ಸ್ಕಿ ಸಂಪರ್ಕಿಸಲು ಹೇಳಿದ ವ್ಯಕ್ತಿ ಆಕೆಯ ಗಂಡನಾಗಿರುತ್ತಾನೆ. ತನ್ನ ಪರಿಸ್ಥಿತಿಯನ್ನೆಲ್ಲಾ ವಿವರಿಸಿದ ಮೇಲೆ ಆಕೆಯ ಗಂಡನೂ ಬಂದು ಆತನನ್ನು ಅಂದು ಅಲ್ಲೇ ಉಳಿಸಿಕೊಂಡು ಬೇರೊಂದು ಕಡೆ ಉಳಿಯುವ ವ್ಯವಸ್ಥೆ ಮಾಡಿಕೊಡುತ್ತಾನೆ. ಆ ಮನೆ ಎದುರಲ್ಲೇ ಜರ್ಮನ್ ಸೈನಿಕರನ್ನು ಶುಶ್ರೂಷೆ ಮಾಡುತ್ತಿದ್ದ ಆಸ್ಪತ್ರೆಯು ಮತ್ತು ಪೋಲಿಸ್ ಸ್ಟೇಷನ್ ಇರುತ್ತದೆ. ಜರ್ಮನ್ ರಿಂದ ತಪ್ಪಿಸಿಕೊಳ್ಳಬೇಕಾದರೆ ಅವರ ಮಧ್ಯೆಯೇ ಇದ್ದರೆ ಯಾರಿಗೂ ತಿಳಿಯದು ಎಂದು ಜೀಕೇವಿಚ್ ಹೇಳುತ್ತಾನೆ. ಹಾಗೆ ಹೇಳಿ ಆಗಾಗ ಸ್ಪಿಲ್ಮನ್ ಯೋಗಕ್ಷೇಮ ವಿಚಾರಿಸಲು ಬರುವುದಾಗಿಯೂ ಹೇಳಿ ಮನೆಗೆ ಹೊರಗಡೆಯಿಂದ ಬೀಗ ಹಾಕಿ ಹೋಗುತ್ತಾನೆ. ಅವನು ಹೋದಮೇಲೆ ಸ್ಪಿಲ್ಮನ್ ಕಣ್ಣು ಆ ಮನೆಯಲ್ಲಿ ಇದ್ದ ಪಿಯಾನೋ ಮೇಲೆ ಬೀಳುತ್ತದೆ. ಬಹಳ ದಿನದಿಂದ ಪಿಯಾನೋ ನುಡಿಸಿಲ್ಲದ್ದರಿಂದ ತಡೆಯಲಾಗದೆ ಅದರ ಮುಚ್ಚಳಿಕೆ ತೆರೆದು ಕೂರುತ್ತಾನೆ. ಮನದಲ್ಲೇ ಸಂಗೀತವನ್ನು ನೆನೆಯುತ್ತ ಪಿಯಾನೋ ಮೇಲೆ ನುಡಿಸುತ್ತಿರುವಂತೆ ಸುಮ್ಮನೆ ಕೈಯಾಡಿಸುತ್ತಾನೆ. ನಮ್ಮ ಜೀವನದಲ್ಲಿ ಅದಮ್ಯವಾಗಿ ಇಷ್ಟ ಪಡುವ ಒಂದೇ ಒಂದು ವಸ್ತುವಿಂದ ನಮ್ಮನ್ನು ದೂರವಿರಿಸಿದರೆ ಆ ಒದ್ದಾಟ ಮತ್ತು ಸಂಕಟ ಅತೀವವಾದದ್ದು. ಸ್ಪಿಲ್ಮನ್ ನದ್ದು ಇಲ್ಲಿ ಅದೇ ಪರಿಸ್ಥಿತಿ.

  ಕೆಲವು ದಿನಗಳ ನಂತರ ಜೀಕೇವಿಚ್ ತನ್ನೊಂದಿಗೆ ಆಂಟೆಕ್ ಶಾಲಾಸ್ ಎಂಬುವವನನ್ನು ಕರೆತಂದು ಇನ್ನು ಮುಂದೆ ಸ್ಪಿಲ್ಮನ್ ನನ್ನು ಆತ ನೋಡಿಕೊಳ್ಳುವುದಾಗಿ ಹೇಳುತ್ತಾನೆ. ಆದರೆ ಆಂಟೆಕ್, ಸ್ಪಿಲ್ಮನ್ ಹಸಿದುಕೊಂಡು ಬಳಲುತ್ತಿದ್ದರೂ ಎರಡು ವಾರದ ನಂತರ ಕೊಂಚ ಆಹಾರದೊಂದಿಗೆ ಬರುತ್ತಾನೆ. ಯಾಕಿಷ್ಟು ನಿಧಾನ ಮಾಡಿದೆ ಎಂದು ಸ್ಪಿಲ್ಮನ್ ಕೇಳಿದಾಗ ದುಡ್ಡಿನ ಅಡಚಣೆಯಾಗಿತ್ತು ಎಂದು ನೆವ ಹೇಳಿ ಸ್ಪಿಲ್ಮನ್ ನಿಂದ ದುಡ್ಡಿಗಾಗಿ ಮಾರಲು ಸ್ಪಿಲ್ಮನ್ ನ ಕೈಗಡಿಯಾರ ಕೂಡ ಕೊಂಡೊಯ್ದಿರುತ್ತಾನೆ. ಇಷ್ಟರಲ್ಲಿ ಸ್ಪಿಲ್ಮನ್ ಜಾಂಡಿಸ್ ಆಗಿ, ಸರಿಯಾದ ಆಹಾರವಿಲ್ಲದೆ ಬಳಲಿ ಮನೆಯಲ್ಲಿ ಒಬ್ಬನೇ ಹಿಂಸೆ ಅನುಭವಿಸುತ್ತಿರುತ್ತಾನೆ. ಒಂದು ದಿನ ಡೋರೋಟ ಮತ್ತು ಜೀಕೇವಿಚ್ ದಂಪತಿ ತಾವು ಬೇರೆಯ ಊರಿಗೆ ಹೋಗುವ ಮುನ್ನ ಕಡೆಯ ಬಾರಿ ಸ್ಪಿಲ್ಮನ್ ಯೋಗಕ್ಷೇಮ ವಿಚಾರಿಸಿ ಹೋಗುವ ಎಂದು ಸ್ಪಿಲ್ಮನ್ ಮನೆಗೆ ಬರುತ್ತಾರೆ. ಸ್ಪಿಲ್ಮನ್ ಸ್ಥಿತಿ ನೋಡಿ ಬೇಸರಗೊಳ್ಳುವ ಡೋರೋಟ ತನ್ನ ಗಂಡನಿಗೆ ಹೇಳಿ ವೈದ್ಯರೊಬ್ಬರನ್ನು ಕರೆಸಿ ಚಿಕಿತ್ಸೆ ಮಾಡಿಸುತ್ತಾಳೆ. ಆಂಟೆಕ್ ಸ್ಪಿಲ್ಮನ್ ಹೆಸರು ಹೇಳಿ ವಾರ್ಸಾ ಊರಿನ ತುಂಬಾ ದುಡ್ಡು ಎತ್ತಿ ಪರಾರಿಯಾಗಿದ್ದಾನೆ ಎಂದು ಡೋರೋಟ ಹೇಳುತ್ತಾಳೆ. ಸ್ಪಿಲ್ಮನ್ ಗಾಗಿ ಕೊಂಚ ಅಡಿಗೆ ಮಾಡಿಕೊಟ್ಟು ಕಡೆಯ ಬಾರಿ ವಿದಾಯ ಹೇಳಿ ಹೊರಡುತ್ತಾಳೆ.

  ಕೆಲವು ದಿನಗಳ ನಂತರ ಸ್ಪಿಲ್ಮನ್ ಮನೆ ಎದುರಲ್ಲಿದ್ದ ಪೋಲಿಸ್ ಸ್ಟೇಷನ್ ಮತ್ತು ಆಸ್ಪತ್ರೆಗೆ ಕೆಲವು ಕ್ರಾಂತಿಕಾರಿಗಳು ದಾಳಿ ಮಾಡುತ್ತಾರೆ. ದಾಳಿ ಮಾಡಿದ ಕ್ರಾಂತಿಕಾರಿಗಳು ಕೆಲವು ಜನ ಈತ ಇದ್ದ ಅಪಾರ್ಟ್ಮೆಂಟಿನಲ್ಲಿ ಕೂಡ ಇದ್ದದ್ದರಿಂದ ಜರ್ಮನ್ ಸೇನೆ ಸ್ಪಿಲ್ಮನ್ ಇದ್ದ ಕಟ್ಟಡದ ಮೇಲೂ ದಾಳಿ ಮಾಡುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಸ್ಪಿಲ್ಮನ್ ಅಡಗಲು ಮತ್ತೊಂದು ಜಾಗವನ್ನು ಹುಡುಕುತ್ತ ಯಾರೂ ಇಲ್ಲದ ಒಂದು ಬಂಗಲೆಗೆ ಹೋಗುತ್ತಾನೆ. ಆ ಬಂಗಲೆಯ ಅಡಿಗೆ ಮನೆಯಲ್ಲಿ ಏನಾದರೂ ಸಿಗುವುದ ಎಂದು ಹುಡುಕುತ್ತಿದ್ದಾಗ  ಒಂದು ಟಿನ್ ಕಲ್ಲಂಗಡಿ ಹಣ್ಣಿನ ರಸ ಸಿಗುತ್ತದೆ. ಅದನ್ನು ತೆಗೆದುಕೊಂಡು ಹೊರಬರುತ್ತಿದ್ದಾಗ ಯಾರೋ ಜರ್ಮನ್ ಭಾಷೆಯಲ್ಲಿ ಮಾತಾಡುತ್ತಿದ್ದನ್ನು ಕೇಳಿ ಅಡಗಿಕೊಳ್ಳಲು ಅಟ್ಟಕ್ಕೆ ಹೋಗುತ್ತಾನೆ. ಹಾಗೆ ಹೋಗುವಾಗ ಯಾರೋ ಆ ಮನೆಯಲ್ಲಿ ಇದ್ದ ಪಿಯಾನೋ ನುಡಿಸುತ್ತಿದ್ದನ್ನು ಕೇಳುತ್ತ ಒಳಗೆ ಸೇರಿಕೊಳ್ಳುತ್ತಾನೆ. ಎಲ್ಲ ಸದ್ದಡಗಿದ ನಂತರ ಕೆಳಗಿಳಿದು ಬಂದು ಆ ಹಣ್ಣಿನ ರಸದ ಟಿನ್ ಒಡೆಯಲು ಪ್ರಯತ್ನಿಸುತ್ತಿದ್ದಾಗ ಅಲ್ಲಿ ಜರ್ಮನ್ ಸೇನೆಯ ಒಬ್ಬ ಕ್ಯಾಪ್ಟನ್ ಆಗಮಿಸುತ್ತಾನೆ. ಆತನನ್ನು ನೋಡಿ ದಿಗಿಲಾಗುವ ಸ್ಪಿಲ್ಮನ್ ಆತ ಕೇಳುವ ಪ್ರಶ್ನೆಗೆಲ್ಲ ಉತ್ತರಿಸಿ ತಾನೊಬ್ಬ ಪಿಯನಿಸ್ಟ್ “ಆಗಿದ್ದೆ” ಎಂದು ಪರಿಚಯಿಸಿಕೊಳ್ಳುತ್ತಾನೆ. ಆ ಕಾಪ್ಟನ್ ಸ್ಪಿಲ್ಮನ್ ನನ್ನು ಕರೆದು ಆ ಬಂಗಲೆಯಲ್ಲಿ ಇದ್ದ ಪಿಯಾನೋ ನುಡಿಸಲು ಹೇಳುತ್ತಾನೆ. ಈ ಸನ್ನಿವೇಶ ತುಂಬಾ ವಿಚಿತ್ರವಾಗಿದೆ. ಆ ಕಾಪ್ಟನ್ ಕೇವಲ ಇನ್ನೊಬ್ಬ ಪಿಯಾನೋ ವಾದಕನ ನುಡಿಸುವಿಕೆಯನ್ನು ಕೇಳಲಷ್ಟೇ ಸ್ಪಿಲ್ಮನ್ ಗೆ ಪಿಯಾನೋ ನುಡಿಸಲು ಹೇಳಿದರೂ, ಸ್ಪಿಲ್ಮನ್ ಗೆ ಇದು ಜೀವನ್ಮರಣದ ಪ್ರಶ್ನೆ. ತಾನು ಸರಿಯಾಗಿ ನುಡಿಸದಿದ್ದರೆ ಎಲ್ಲಿ ಆ ಕಾಪ್ಟನ್ ತನ್ನನ್ನು ಸೆರೆ ಹಿಡಿದು ಜೈಲಿಗೆ ತಳ್ಳುತ್ತಾನೋ ಎಂಬ ಭಯ. ಆದರೂ ಸ್ಪಿಲ್ಮನ್, ಫ್ರೆಡೆರಿಕ್ ಶೋಪಿನ್ ನ ಒಂದು ಬ್ಯಾಲೆಯನ್ನು(Ballade) ಅದ್ಭುತವಾಗಿ ನುಡಿಸುತ್ತಾನೆ. ಇದನ್ನು ಕೇಳುತ್ತಾ ಗಮನಿಸುತ್ತಾ ಹೋಗುವ ಕಾಪ್ಟನ್ ಮುಖ ಸಂಗೀತವನ್ನು ಆಸ್ವಾದಿಸುವವನಂತೆ ಕಂಡರೂ ಒಂದು ಪಶ್ಚಾತಾಪದ ಛಾಯೆ ಹೊತ್ತಿರುತ್ತದೆ. ಸ್ಪಿಲ್ಮನ್ ನುಡಿಸುವ ಸಂಗೀತ ಜನರೇ ಇಲ್ಲದೆ ಬೆಂಗಾಡಾದಂತೆ ಇದ್ದ ವಾರ್ಸಾ ಸಿಟಿಯಲ್ಲಿ ಮೆಲ್ಲಗೆ ಭರವಸೆಯ ಗಾಳಿ ಬೀಸಿದಂತೆ ಭಾಸವಾಗುತ್ತದೆ. ಇದಾದ ನಂತರ ಕಾಪ್ಟನ್, ಸ್ಪಿಲ್ಮನ್ ಅಲ್ಲಿ ಬಚ್ಚಿಟ್ಟುಕೊಂಡಿದ್ದಾನೆಯೇ ಮತ್ತು ಆತ ಯಹೂದಿಯೇ ಎಂದು ಪ್ರಶ್ನಿಸಿದಾಗ ಸ್ಪಿಲ್ಮನ್ ತಾನು ಇನ್ನು ಸತ್ತೆ ಎಂದೇ ಭಾವಿಸುತ್ತಾನೆ. ಆದರೆ ಆ ಕಾಪ್ಟನ್ ಸ್ಪಿಲ್ಮನ್ ಗೆ ಅಟ್ಟದ ಮೇಲೆ ಬಚ್ಚಿಟ್ಟುಕೊಳ್ಳಲು ಹೇಳಿ ಹೋಗುತ್ತಾನೆ.

  ಆ ಕಾಪ್ಟನ್ ಅದೇ ಬಂಗಲೆಯಲ್ಲಿ ಕಛೇರಿ ಸ್ಥಾಪಿಸುತ್ತಾನೆ. ಯಾರಿಗೂ ತಿಳಿಯದಂತೆ ಸ್ಪಿಲ್ಮನ್ ಗೆ ಬ್ರೆಡ್ ಮತ್ತು ಜ್ಯಾಮ್ ತಂದು ಕೊಡುತ್ತಾನೆ; ಜೊತೆಗೆ ಟಿನ್ ಒಡೆಯಲು ಒಂದು ಟಿನ್ ಓಪೆನರ್ ಕೂಡ. ಕೊಂಚ ದಿನಗಳ ನಂತರ ರಷ್ಯಾ ದಾಳಿಗೆ ಹಿಮ್ಮೆಟ್ಟಿ ಜರ್ಮನ್ ವಾಪಾಸಾಗುವ ಸಂದರ್ಭ ಬಂದಾಗ ಆ ಕಾಪ್ಟನ್ ಹೊರಡುವ ಮುನ್ನ ಮತ್ತೆ ಸ್ಪಿಲ್ಮನ್ ಗೆ ಬ್ರೆಡ್ ಕೊಟ್ಟು ತಾನುಟ್ಟಿದ್ದ ಕೋಟ್ ಕೂಡ ಕೊಡುತ್ತಾನೆ. ಕಡೆಗೆ ಸ್ಪಿಲ್ಮನ್ ನ ಹೆಸರು ಕೇಳಿ ಮತ್ತೆ ಶಾಂತಿ ನೆಲೆಸಿದಾಗ ರೇಡಿಯೋದಲ್ಲಿ ಈತನ ಸಂಗೀತ ಕೇಳುವುದಾಗಿಯು ಹೇಳಿ ಹೊರಡುತ್ತಾನೆ.

  ಕೆಲವು ದಿನಗಳ ನಂತರ ರಷ್ಯಾ ಸೇನೆ ವಿಜಯದ ಘೋಷಣೆ ಕೂಗುತ್ತ ಅಡಗಿದ್ದ ಪೋಲಿಶ್ ಜನಗಳಿಗೆ ನಿರ್ಭಯವಾಗಿ ಹೊರಬರಲು ಕರೆಕೊಡುತ್ತಾರೆ. ಕರೆಗೆ ಓಗೊಟ್ಟು ಸ್ಪಿಲ್ಮನ್ ಹೊರಬಂದು ಅಲ್ಲಿ ನಡೆದು ಬರುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಆನಂದದಿಂದ ತಬ್ಬಿಕೊಳ್ಳಲು ಹೋಗುತ್ತಾನೆ. ಆದರೆ ಸ್ಪಿಲ್ಮನ್ ಧರಿಸಿದ್ದ ಜರ್ಮನ್ ಸೇನೆಯ ಕೋಟ್ ನೋಡಿ ಅವರು ಗಾಬರಿಗೊಂಡು ಕಿರುಚಿಕೊಂಡಾಗ ರಷ್ಯಾ ಸೈನಿಕರು ಈತನ ಮೇಲೆ ಗುಂಡು ಹಾರಿಸಲು ತೊಡಗುತ್ತಾರೆ. ಗುಂಡು ಹೊಡೆಯಬೇಡಿ ತಾನೊಬ್ಬ ಪೋಲಿಶ್ ಎಂದು ಕೂಗಿ ಹೇಳಿ ಶರಣಾಗುತ್ತಾನೆ. ಆಗ ರಷ್ಯಾ ಸೈನಿಕನೊಬ್ಬ ಜರ್ಮನ್ ಸೇನೆಯ ಕೋಟ್ ಏಕೆ ಧರಿಸಿದ್ದೆ ಎಂದು ಕೇಳಿದಾಗ “ ಚಳಿಯಾಗಿತ್ತು” ಎಂದು ಸ್ಪಿಲ್ಮನ್ ಉತ್ತರಿಸುತ್ತಾನೆ.

  ಎಲ್ಲ ಕಳೆದು ಮತ್ತೆ ಮೊದಲಿನ ಜೀವನಕ್ಕೆ ಮರಳಿದ ನಂತರ ತನ್ನ ಹಳೆಯ ಸಹೋದ್ಯೋಗಿ/ಸ್ನೇಹಿತ ಸಿಗುತ್ತಾನೆ. ಆತನಿಗೆ ತನ್ನೆಲ್ಲ ಕಥೆ ಹೇಳಿದ ನಂತರ ತನ್ನನ್ನು ರಕ್ಷಿಸಿದ ಅಧಿಕಾರಿಯನ್ನು ತನ್ನ ಸ್ನೇಹಿತ ನೋಡಿದ್ದ ಎಂದು ತಿಳಿದು ಆ ಅಧಿಕಾರಿಯನ್ನು ಹುಡುಕಲು ಪ್ರಯತ್ನಿಸುತ್ತಾನೆ. ಆದರೆ ಪ್ರಯೋಜನವಾಗುವುದಿಲ್ಲ. ಕಡೆಗೆ ಮತ್ತೆ ರೇಡಿಯೋದಲ್ಲಿ ಪಿಯಾನೋ ನುಡಿಸುವ ಕಲಾವಿದನಾಗಿ ತನ್ನ ಜೀವನ ಮುಂದುವರೆಸುತ್ತಾನೆ.

  ಈ ಚಿತ್ರಕ್ಕಾಗಿ ಏಡ್ರಿಯನ್ ಬ್ರೋಡಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿತು. ರೋಮನ್ ಪೋಲನ್ಸ್ಕಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ರೊನಾಲ್ಡ್ ಹಾರ್ವುಡ್ ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ದೊರಕಿತು. ಚಿತ್ರ ಕೇವಲ ಒಬ್ಬ ವ್ಯಕ್ತಿಯದ್ದು ಅನ್ನಿಸಿದರೂ ಒಂದು ಜನಾಂಗ ಅನುಭವಿಸಿದ ಕ್ರೌರ್ಯ, ಹಿಂಸೆಯ ಸಂಕೇತವಾಗಿ ಗಟ್ಟಿಯಾಗಿ ನಿಲ್ಲುತ್ತದೆ.

 

 
 

  

ವ್ಲಾಡಿಸ್ಲಾವ್ ಸ್ಪಿಲ್ಮನ್

 


ಸ್ಪಿಲ್ಮನ್ ಗೆ ರಕ್ಷಣೆ ನೀಡಿದ ಕಾಪ್ಟನ್ ವಿಲ್ಮ್ ಹೊಸೆನ್ಫೆಲ್ದ್

 

 

- ವಿಶ್ವನಾಥ್ 

 

 

Rating
No votes yet