ನಾನು ನೋಡಿದ ಚಿತ್ರ- ದಿ ಜೆನರಲ್(1926)

ನಾನು ನೋಡಿದ ಚಿತ್ರ- ದಿ ಜೆನರಲ್(1926)

IMDb:  http://www.imdb.com/title/tt0017925/

 
 

 

  ಸ್ಲ್ಯಾಪ್ ಸ್ಟಿಕ್ ಕಾಮಿಡಿ ಚಿತ್ರಗಳ ಬಗ್ಗೆ ಯಾರಾದರೂ ಕೇಳಿದರೆ ಥಟ್ಟನೆ ಹೊಳೆಯುವುದು ಚಾರ್ಲಿ ಚ್ಯಾಪ್ಲಿನ್. ಆದರೆ ಆತನಷ್ಟೇ ಖ್ಯಾತಿ ಹೊಂದಿದ್ದ ಮತ್ತು ಅಷ್ಟೇ ಪ್ರತಿಭಾವಂತನಾಗಿದ್ದ ಮತ್ತೊಬ್ಬ ಕಲಾವಿದನೇ ಬಸ್ಟರ್ ಕೀಟನ್(Buster Keaton). ತನ್ನ ವೃತ್ತಿ ಜೀವನದಲ್ಲಿ ಮಾಡಿಕೊಂಡ ಕೆಲವು ತಪ್ಪು ನಿರ್ಧಾರಗಳಿಂದ ಚ್ಯಾಪ್ಲಿನ್ ನಷ್ಟು ಅವಕಾಶಗಳು ಸಿಗದೆ ಹಾಗೇ ಕಣ್ಮರೆಯಾದ ಕಲಾವಿದ ಈತ. ಚ್ಯಾಪ್ಲಿನ್ ತನ್ನ ಚಿತ್ರಗಳಲ್ಲಿ ತನ್ನ ಮುಖದಲ್ಲಿ ತೋರುತ್ತಿದ್ದ ಭಾವನೆಗಳಿಂದ ಎಲ್ಲರನ್ನೂ ನಗಿಸುತ್ತಿದ್ದರೆ, ಕೀಟನ್ ತನ್ನ ನಿರ್ಭಾವುಕ ಮುಖದಿಂದ ನಗಿಸುತ್ತಿದ್ದ. ಅದಕ್ಕಾಗಿಯೇ ಆತನ ಮುಖಕ್ಕೆ ಡೆಡ್ ಪ್ಯಾನ್ ಫೇಸ್ ಎಂದು ಕರೆಯುವುದುಂಟು. ಆತನು ನಟಿಸಿದ ಅನೇಕ ಚಿತ್ರಗಳಲ್ಲಿ ಮಾಡಿರುವ ಸಾಹಸ ದೃಶ್ಯಗಳು ನಿಜಕ್ಕೂ ಬಹಳ ಅಪಾಯಕಾರಿಯಾದವು. ಆದರೂ ಯಾವುದೇ ಸ್ಟಂಟ್ ಡಬಲ್ ಗಳನ್ನು ಉಪಯೋಗಿಸದೆ ತಾನೇ ಆ ಸಾಹಸಗಳನ್ನು ಮಾಡುತ್ತಿದ್ದುದು ಆಶ್ಚರ್ಯಕರ. ನೋಡುವವರಿಗೆ ನಗು ತರಿಸಿದರೂ ಆತ ಆ ದೃಶ್ಯಗಳಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೀಟನ್ ನ ಈ ದೃಶ್ಯಗಳ ವಿಶಿಷ್ಟತೆ ಮತ್ತು ಆತನಿಗೆ ಅವು ಹೇಗೆ ಮೂಡಿಬರಬೇಕು ಎನ್ನುವ ಬಗ್ಗೆ ಇದ್ದ ಕಲ್ಪನೆಯ ಬಗ್ಗೆ ವಿಸ್ತೃತವಾಗಿ ಈ ಕೆಳಗಿನ ಯುಟ್ಯೂಬ್ ವಿಡಿಯೋದಲ್ಲಿ ಬಹಳ ಚೆನ್ನಾಗಿ ವಿವರಿಸಲಾಗಿದೆ.

https://www.youtube.com/watch?v=UWEjxkkB8Xs

  ಆತನ ಚಿತ್ರಗಳಲ್ಲಿ ಇಂದಿಗೂ ಬಹಳ ಮಾತಾಡಲ್ಪಡುವ ಚಿತ್ರ ‘ದಿ ಜೆನರಲ್’. 1926ರಲ್ಲಿ ತೆರೆಕಂಡ ಈ ಚಿತ್ರ ಕೀಟನ್ ಗೆ ಲಾಭ ತರಲಿಲ್ಲ. ಯುದ್ಧ ಚಿತ್ರವನ್ನು ಹಾಸ್ಯಮಯವಾಗಿ ತೋರಿಸುವ ಬಗೆ ಅಂದಿಗೆ ಹೊಸದು. ಈ ಚಿತ್ರ ಇರುವುದು ಬೇರೆ ಅಮೆರಿಕನ್ ಸಿವಿಲ್ ವಾರ್ ನ ಬಗ್ಗೆ. ಅಮೆರಿಕನ್ ಸಿವಿಲ್ ವಾರ್ ಅಂದಿನ ಮಟ್ಟಿಗೆ ಬಹಳ ಸೂಕ್ಷ್ಮವಾದ ವಿಷಯ. ಕೀಟನ್ ಇದರಲ್ಲಿ ಯಾರನ್ನೂ ಗೇಲಿಮಾಡದಿದ್ದರೂ ಸಿವಿಲ್ ವಾರ್ ನಲ್ಲಿ ಗೆದ್ದ ಯೂನಿಯನ್ ಪಡೆಯನ್ನು ಖಳರಂತೆ ತೋರಿಸಿರುವುದೂ ಈ ಚಿತ್ರ ಸೋಲಲು ಕಾರಣವಿರಬಹುದು. ಅದೇನೇ ಇದ್ದರೂ ಇದೆಲ್ಲದರಿಂದ ಹೊರಗೆ ನಿಂತು ನೋಡುವ ನಮಗೆ ಇದೊಂದು ಅದ್ಭುತ ಚಿತ್ರ ಎನಿಸುವುದರಲ್ಲಿ ಎರಡು ಮಾತಿಲ್ಲ.

  ಕಥೆ ಬಹಳ ಸರಳವಾದದ್ದು. ಜಾನಿ ಗ್ರೇ(ಬಸ್ಟರ್ ಕೀಟನ್) ಎಂಬ ಟ್ರೇನ್ ಲೋಕೋಪೈಲಟ್ ಅಥವಾ ಎಂಜಿನಿಯರ್ ಗೆ ಜೀವನದಲ್ಲಿ ಎರಡು ವಿಷಯ ಅತ್ಯಂತ ಪ್ರಿಯವಾದದ್ದು. ತಾನು ಓಡಿಸುವ ರೈಲು, ‘ದಿ ಜೆನರಲ್’ ಮತ್ತು ತಾನು ಪ್ರೀತಿಸುವ ಹುಡುಗಿ ಆನಾಬೆಲ್ ಲೀ. ಹೀಗೆ ಒಂದು ದಿನ ಜಾನಿ ಅವಳ ಮನೆಗೆ ಹೋದಾಗ, ಯೂನಿಯನ್ ಮತ್ತು ಸೌತ್ ನಡುವೆ ಯುದ್ಧ ಘೋಷಣೆಯಾಗುತ್ತದೆ. ಈ ಸುದ್ದಿ ತಿಳಿದ ಲೀ ತಂದೆ ಮತ್ತು ಅಣ್ಣ ಸೈನ್ಯಕ್ಕೆ ಸೇರಲು ಹೊರಡುತ್ತಾರೆ. ಜಾನಿಗೂ ಸೇರುವಂತೆ ಲೀ ಹೇಳಿದಾಗ ಜಾನಿ ಸೈನ್ಯಕ್ಕೆ ಸೇರಲು ಎಲ್ಲರಿಗಿಂತ ಮುಂಚೆ ಓಡಿಹೋಗಿ ಸರತಿಯಲ್ಲಿ ನಿಲ್ಲುತ್ತಾನೆ. ಆದರೆ ಈತ ರೈಲು ಎಂಜಿನಿಯರ್ ಎಂದು ತಿಳಿದ ಕೂಡಲೆ ಈತ ಸೈನ್ಯಕ್ಕಿಂತ ಸಾಮಾನು ಸಾಗಣೆಗೆ ಹೆಚ್ಚು ಮುಖ್ಯವಾಗಿ ಬೇಕಾದವನು ಎಂದು ಯೋಚಿಸಿ ಅಲ್ಲಿನ ಅಧಿಕಾರಿ ಈತನನ್ನು ಸೇರಿಸಿಕೊಳ್ಳದೆ ಕಳುಹಿಸುತ್ತಾನೆ. ಇದು ತಿಳಿಯದ ಜಾನಿ ತನಗಿಂತ ಪೇಲವ ಸ್ಥಿತಿಯಲ್ಲಿರುವವರನ್ನೆಲ್ಲ ಸೇರಿಸಿಕೊಳ್ಳುತ್ತಿದ್ದಾರೆ ಆದರೆ ತನ್ನನ್ನು ಮಾತ್ರ ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಬಹಳ ಯೋಚಿಸಿ ವಿಧವಿಧವಾಗಿ ಸೈನ್ಯಕ್ಕೆ ಸೇರಲು ಬೇಕಿದ್ದ ಚೀಟಿ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ಅಧಿಕಾರಿ ಈತನನ್ನು ಅಲ್ಲಿಂದ ಒದ್ದು ಕಳುಹಿಸುತ್ತಾನೆ. ಬೇಜಾರು ಮಾಡಿಕೊಂಡು ಅಲ್ಲಿಂದ ಹೊರಡುತ್ತಿದ್ದಾಗ ಲೀ ತಂದೆ ಮತ್ತು ಅಣ್ಣ ಜಾನಿಯನ್ನು ನೋಡಿ ಸರತಿಯಲ್ಲಿ ತಮ್ಮೊಂದಿಗೆ ನಿಲ್ಲಲು ಕರೆಯುತ್ತಾರೆ. ಆದರೆ ಆಗಷ್ಟೇ ಒದೆತ ತಿಂದು ಬಂದಿದ್ದ ಜಾನಿ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಲೀ ತಂದೆ ಮತ್ತು ಅಣ್ಣ ಆತ ಕರೆದರೂ ಸೈನ್ಯಕ್ಕೆ ಸೇರಲಿಲ್ಲ ಎಂದು ಲೀ ಬಳಿ ಹೇಳುತ್ತಾರೆ. ಇದರಿಂದ ಕೋಪಗೊಳ್ಳುವ ಲೀ, ಜಾನಿಗೆ ಆತ ಸೈನ್ಯದ ಸಮವಸ್ತ್ರ ತೊಡುವವರೆಗೂ ತನ್ನ ಬಳಿ ಮಾತನಾಡದಂತೆ ಹೇಳಿ ಕಳುಹಿಸುತ್ತಾಳೆ.

  ಕೆಲವು ದಿನಗಳ ನಂತರ ಲೀ ಯುದ್ಧದಲ್ಲಿ ಗಾಯಾಳುವಾಗಿದ್ದ ತನ್ನ ತಂದೆಯನ್ನು ನೋಡಲು ಜಾನಿಯ ರೈಲಿನಲ್ಲಿ ಪ್ರಯಾಣ ಮಾಡುತ್ತಾಳೆ. ಯೂನಿಯನ್ ಪಡೆಯ ಕೆಲವು ಗೂಢಚಾರಿಗಳು ಆ ರೈಲನ್ನು ಊಟಕ್ಕೆ ನಿಲ್ಲಿಸಿದಾಗ ಕದ್ದೊಯ್ದು ದಾರಿಯಲ್ಲಿ ಸಿಗುವ ಎಲ್ಲ ಸೇತುವೆಗಳನ್ನು ಧ್ವಂಸಮಾಡಿ ಸೌತ್ ಸೈನ್ಯದ ಸಾಮಾನು ಸಾಗಣೆಯ ದಾರಿಯನ್ನು ನಿಲ್ಲಿಸುವ ಹುನ್ನಾರ ಮಾಡಿ ರೈಲು ಹತ್ತಿರುತ್ತಾರೆ. ಹಾಕಿಕೊಂಡ ಉಪಾಯದಂತೆ ಬಿಗ್ ಶ್ಯಾಂಟಿ ಎಂಬ ಊರಲ್ಲಿ ರೈಲು ನಿಲ್ಲಿಸಿ ಎಲ್ಲರೂ ಊಟಕ್ಕೆ ಹೋದಾಗ ಈ ಗೂಢಚಾರಿ ಪಡೆ ರೈಲನ್ನು ಕದ್ದೊಯ್ಯುತ್ತಾರೆ. ಹಾಗೆ ಕದ್ದೊಯ್ಯುವಾಗ ಅಕಸ್ಮಾತಾಗಿ ಲೀ ತನ್ನ ಲಗೇಜ್ ಹುಡುಕಲು ಲಗೇಜ್ ಕಂಪಾರ್ಟ್ ಮೆಂಟಿನಲ್ಲಿದ್ದಾಗ ಆಕೆಯನ್ನು ನೋಡಿ ಗಾಬರಿಗೊಂಡ ಗೂಢಚಾರಿಗಳು ಆಕೆಯನ್ನೂ ಸೇರಿಸಿ ರೈಲನ್ನು ಕದ್ದೊಯ್ಯುತ್ತಾರೆ. ರೈಲನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ತಿಳಿದ ತಕ್ಷಣ ಜಾನಿ ಅದರ ಹಿಂದೆ ಓಡುತ್ತಾನೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಅದನ್ನು ಹಿಂಬಾಲಿಸುತ್ತಾನೆ. ಕೊನೆಗೆ ಮುಂದಿನ ನಿಲ್ದಾಣ ತಲುಪಿ ಅಲ್ಲಿದ್ದ ಇನ್ನೊಂದು ರೈಲು(ಟೆಕ್ಸಾಸ್ ಅದರ ಹೆಸರು) ತೆಗೆದುಕೊಂಡು ಕದ್ದೊಯ್ದ ರೈಲನ್ನು ಹಿಂಬಾಲಿಸುತ್ತಾನೆ. ರೈಲಿನ ಈ ಚೇಸ್ ದೃಶ್ಯವನ್ನು ಬಹುಶಃ ಬೇರೆ ಇನ್ಯಾವ ಚಿತ್ರದಲ್ಲಿಯೂ ಕಾಣಲಾರಿರಿ. ಒಂದು ರೈಲು ಇನ್ನೊಂದನ್ನು ಚೇಸ್ ಮಾಡುವುದು ಎಂದರೆ ಏನರ್ಥ? ಅವು ಓಡುವುದು ಹಳಿಯ ಮೇಲಲ್ಲವೇ? ಇಂತಹ ವಿಚಿತ್ರಗಳನ್ನು ಹೊತ್ತು ಮಾರ್ಗ ಮಧ್ಯೆ ಅನೇಕ ಗ್ಯಾಗ್ ಗಳನ್ನು(ದೈಹಿಕ ಹಾಸ್ಯ) ಮಾಡುತ್ತಾ ತನ್ನ ರೈಲು ಜೆನರಲ್ ಅನ್ನು ಹಿಂಬಾಲಿಸುತ್ತಾನೆ. ತಾನು ಕೊಂಡೊಯ್ದಿದ್ದ ರೈಲನ್ನು ಮಾರ್ಗ ಮಧ್ಯೆ ಬಿಟ್ಟು ಕಾಡೊಳಗೆ ಹೊಕ್ಕು ತನ್ನ ರೈಲನ್ನು ಕೊಂಡೊಯ್ದ ಕಡೆಗೆ ಮೆಲ್ಲಗೆ ಹೋಗುತ್ತಾನೆ. ಅಷ್ಟರಲ್ಲಿ ಮಳೆ ಬಂದು ಮಳೆಯಲ್ಲಿ ನೆನೆಯುತ್ತ ತನ್ನ ರೈಲು ಕದ್ದೊಯ್ದ ಗೂಢಚಾರರು ಹೋದ ಮನೆಗೆ ಹೋಗುತ್ತಾನೆ. ಯಾರು ಇಲ್ಲವೆಂದು ತಿಳಿದು ಅಲ್ಲಿದ್ದ ಊಟದ ಟೇಬಲ್ಲಿನ ಮೇಲಿನ ತಿಂಡಿಯನ್ನು ಎತ್ತಿಕೊಳ್ಳುತ್ತಿದ್ದಂತೆ ಅಲ್ಲಿಗೆ ಆ ಗೂಢಚಾರರು ಬರುತ್ತಾರೆ. ಅವರನ್ನು ನೋಡಿದ ಜಾನಿ ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ, ಅದೇ ಟೇಬಲ್ಲಿನ ಕೆಳಗೆ ಅಡಗಿ ಕೂರುತ್ತಾನೆ. ಹಾಗೇ ಕೂತು ಅಲ್ಲಿದ್ದವರು ಯುದ್ಧದ ಮುಂದಿನ ನಡೆಯ ಬಗ್ಗೆ ಮಾತಾಡುವುದನ್ನೆಲ್ಲ ಕೇಳಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಅವರು ರೈಲು ತರುವಾಗ ಸೆರೆ ಹಿಡಿದ ಆನಬೆಲ್ ಲೀ ಳನ್ನು ಕರೆತರುತ್ತಾರೆ. ಇದನ್ನು ಟೇಬಲ್ಲಿಗೆ ಹೊದಿಸಿದ್ದ ಬಟ್ಟೆಯ ಮೇಲಾದ ಸಣ್ಣ ತೂತಿನಿಂದ ಜಾನಿ ನೋಡಿ ಆಶ್ಚರ್ಯಗೊಂಡು ಲೀ ಇವರ ಬಳಿ ಹೇಗೆ ಸಿಕ್ಕಿಹಾಕಿಕೊಂಡಳು ಎಂದು ಯೋಚಿಸುತ್ತ, ಆಕೆಯನ್ನು ಮತ್ತು ತನ್ನ ರೈಲನ್ನು ಅಲ್ಲಿಂದ ಹೇಗಾದರೂ ಮಾಡಿ ಕೊಂಡೊಯ್ಯಬೇಕು ಎಂದು ನಿರ್ಧರಿಸುತ್ತಾನೆ. ನೆರೆದಿದ್ದವರೆಲ್ಲ ಮಾತುಕತೆಯ ನಂತರ ತಮ್ಮ ತಮ್ಮ ಕೋಣೆಗಳಿಗೆ ತೆರಳಿದ ನಂತರ ಜಾನಿ ಸಮಯ ನೋಡಿ ಅಲ್ಲಿಂದ ಹೊರಬಂದು ಹೊರಗೆ ಕಾವಲಿದ್ದ ಸೈನಿಕನೊಬ್ಬನನ್ನು ಹೊಡೆದುರುಳಿಸಿ ಅವನ ಬಟ್ಟೆ ತೊಟ್ಟು ಲೀ ಳನ್ನು ಬಿಡಿಸಿ ಹೊರತರುತ್ತಾನೆ. ಇಬ್ಬರೂ ಹೊರಬಂದು ಕಾಡು ಸೇರಿ ವಿಶ್ರಾಂತಿ ಪಡೆಯುತ್ತಾರೆ. ಲೀಗೆ ತನ್ನ ಪ್ರಿಯತಮ ಜಾನಿ ತನ್ನನ್ನು ಕಾಪಾಡಲು ಬಂದಿದ್ದಾನೆ ಎಂದು ತಿಳಿದು ಬಹಳ ಸಂತೋಷಪಡುತ್ತಾಳೆ.

  ಮರುದಿನ ಬೆಳಗ್ಗೆ ಇಬ್ಬರೂ ಎಚ್ಚರಗೊಂಡ ನಂತರ ಜಾನಿ ತಾನು ಮತ್ತು ಲೀ ಉತ್ತರದ ಸೈನ್ಯದ ಒಂದು ದೊಡ್ಡ ಕ್ಯಾಂಪ್ ನಲ್ಲಿ ಇದ್ದಾರೆಂದು ತಿಳಿದು ಭಯಗೊಳ್ಳುತ್ತಾರೆ. ಆದರೂ ಜಾನಿ ಉಪಾಯದಿಂದ ಲೀ ಜೊತೆ ತನ್ನ ರೈಲು ‘ದಿ ಜೆನರಲ್’ ಓಡಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಇವನು ಅಲ್ಲಿಂದ ಹೊರಡುತಿದ್ದಂತೆ, ಉತ್ತರದ ಸೈನಿಕರು ಇವನನ್ನು ಇನ್ನೊಂದು ರೈಲಿನಲ್ಲಿ ಹಿಂಬಾಲಿಸುತ್ತಾರೆ. ಹಿಂದಿನ ದಿನ ಕೇಳಿಸಿಕೊಂಡ ಯುದ್ಧದ ಯೋಜನೆಗಳ ಪ್ರಕಾರ ಮುಂದೆ ಬರುವ ಸೇತುವೆ ಉತ್ತರದ ಸೈನ್ಯಕ್ಕೆ ಬಹಳ ಮುಖ್ಯವಾದದ್ದು ಎಂದು ಯೋಚಿಸುವ ಜಾನಿ ಆ ಸೇತುವೆಯನ್ನು ಧ್ವಂಸಮಾಡಲು ತನ್ನ ರೈಲನ್ನು ವೇಗವಾಗಿ ಓಡಿಸುತ್ತಾ ಹೋಗುತ್ತಾನೆ. ಹಾಗೆ ಹೋಗುತ್ತಾ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಇನ್ನೊಂದು ರೈಲಿಗೆ ಅನೇಕ ಅಡ್ಡಿಗಳನ್ನು ನಿರ್ಮಿಸುತ್ತಾ ಹೋಗುತ್ತಾನೆ. ಹೀಗೆ ಹೋಗುವಾಗ ಜಾನಿ ಪ್ರೇಯಸಿ ಲೀ ತನಗೆ ಆದಷ್ಟು ಸಹಾಯ ಮಾಡುತ್ತಾ ಹೋಗುತ್ತಾಳೆ. ಆದರೆ ಆಕೆ ಮಾಡುವ ಸಹಾಯ ಜಾನಿಯ ಉಪಯೋಗಕ್ಕೆ ಬಾರದು. ರೈಲನ್ನು ಓಡಿಸುವುದರಲ್ಲಿ ಮಗ್ನನಾಗಿದ್ದ ಜಾನಿ ಲೀಗೆ ಕಟ್ಟಿಗೆಯನ್ನು ಒಂದೊಂದಾಗಿ ಬಾಯ್ಲರ್ ಗೆ ಹಾಕು ಎಂದಾಗ ಆಕೆ, ಒಂದೊಂದೇ ಕಟ್ಟಿಗೆ ತೆಗೆದು ನೋಡಿ ಅದು ಚೆನ್ನಾಗಿ ಕತ್ತರಿಸಲ್ಪಟ್ಟಿದ್ದರೆ ಮಾತ್ರ ಹಾಕುತ್ತಿರುತ್ತಾಳೆ. ಕಟ್ಟಿಗೆಯಲ್ಲಿ ತೂತು ಅಥವಾ ಇನ್ನಿತರೇ ದೋಷಗಳಿದ್ದರೆ ಅದನ್ನು ಬಿಸಾಡುತ್ತಾಳೆ. ಅದು ಸಾಲದೆಂಬಂತೆ ಗೃಹಿಣಿಯ ತರಹ ಪೊರಕೆ ಹಿಡಿದು ಕಸ ಗುಡಿಸಲು ನಿಲ್ಲುತ್ತಾಳೆ. ಹೀಗೆ ತನ್ನ ಪ್ರೇಯಸಿಯ ಮುಗ್ಧತೆಯನ್ನು ನೋಡಿ ಸಿಟ್ಟು ಮಾಡಿಕೊಳ್ಳದೆ ಅವಳಿಗೆ ಮುತ್ತಿಟ್ಟು ಜಾನಿ ಮುಂದುವರೆಯುತ್ತಾನೆ. ಹಿಂದೆ ಬರುತ್ತಿದ್ದ ರೈಲನ್ನು ಸಾಕಷ್ಟು ಹಿಂದಿಕ್ಕಿದ ನಂತರ ಉತ್ತರದ ಸೈನಿಕರು ತಾವು ಇತರೆ ಸೈನಿಕರೊಂದಿಗೆ ಸಂಧಿಸಲು ಯೋಚಿಸಿದ್ದ ಸೇತುವೆ ತಲುಪಿ ಜಾನಿ ಅದಕ್ಕೆ ಬೆಂಕಿಯಿಡುತ್ತಾನೆ. ಅಲ್ಲಿಂದ ತನ್ನ ದಕ್ಷಿಣದ ಸೈನ್ಯದ ಕ್ಯಾಂಪ್ ತಲುಪಿ ಅಲ್ಲಿನ ಜೆನರಲ್ ಗೆ ಸೇತುವೆಯ ಬಳಿ ಉತ್ತರದ ಸೈನಿಕರು ಸೇರುತ್ತಿರುವ ಬಗ್ಗೆ ಮಾಹಿತಿ ಒದಗಿಸಿ ತಕ್ಷಣ ಅಲ್ಲಿಗೆ ಹೋಗುವಂತೆ ಕೋರುತ್ತಾನೆ. ಅವನು ಹೇಳಿದ್ದನ್ನು ಕೇಳಿ ಜೆನರಲ್ ತನ್ನ ಸೈನ್ಯದೊಂದಿಗೆ ಸೇತುವೆಯ ಬಳಿ ಉತ್ತರದ ಸೈನ್ಯವನ್ನು ಎದುರುಗೊಳ್ಳಲು ಹೋಗುತ್ತಾನೆ. ಅವರೊಡನೆ ಜಾನಿ ಕೂಡ ಹೋಗಿ ಜೆನರಲ್ ಸಹಾಯಕ್ಕೆ ನಿಲ್ಲುತ್ತಾನೆ.

  ಇಷ್ಟೆಲ್ಲಾ ಆಗುವುದರಲ್ಲಿ ಉತ್ತರದ ಸೈನಿಕರು ಜಾನಿ ಮಾಡಿಟ್ಟಿದ್ದ ಅಡೆಗಳನ್ನೆಲ್ಲ ದಾಟಿ ಸೇತುವೆ ಬಳಿ ಬಂದು ತಮ್ಮ ಇತರೆ ಸೈನಿಕ ಗುಂಪನ್ನು ಸಂಧಿಸುತ್ತಾರೆ. ಸೇತುವೆಗೆ ಬೆಂಕಿ ಬಿದ್ದಿರುವುದನ್ನು ನೋಡಿ ದಾಟುವುದೊ ಬೇಡವೋ ಎಂದು ಯೋಚಿಸುತ್ತಿದ್ದಾಗ, ಅವರಲ್ಲೇ ಒಬ್ಬ ಜೆನರಲ್ ಸೇತುವೆಯಿನ್ನೂ ಅಷ್ಟು ಸುಟ್ಟಿಲ್ಲ, ದಾಟಬಹುದು ಎಂದು ದಾಟಲು ಹೇಳುತ್ತಾನೆ. ಅದರಂತೆ ರೈಲು ದಾಟಲು ಹೋದಾಗ ರೈಲಿನ ಭಾರ ತಾಳಲಾರದೆ ಸುಟ್ಟು ದುರ್ಬಲಗೊಂಡಿದ್ದ ಸೇತುವೆ ಕುಸಿದು ರೈಲೂ ನದಿಯಲ್ಲಿ ಬೀಳುತ್ತದೆ. ಅಲ್ಲಿಗೆ ಉತ್ತರದ ಸೈನ್ಯದವರ ಸಾಮಾನು ಸಾಗಣೆಗೆ ಮಾಡಿಕೊಂಡ ದಾರಿ ಇನ್ನಿಲ್ಲದಾಗುತ್ತದೆ. ಆಶ್ಚರ್ಯದ ಸಂಗತಿಯೇನೆಂದರೆ ಈ ರೈಲು ಬೀಳುವ ದೃಶ್ಯವನ್ನು ಆಟಿಕೆ ರೈಲು ಮತ್ತು ಸೇತುವೆ ಬಳಸಿ ತೆಗೆದದ್ದಲ್ಲ. ಈ ದೃಶ್ಯಕ್ಕಾಗಿ ನಿಜವಾದ ರೈಲನ್ನು ಮತ್ತು ಸೇತುವೆಯನ್ನು ಬಳಸಿಕೊಳ್ಳಲಾಯಿತು. ಈ ಒಂದು ದೃಶ್ಯ ಮೂಕಿ ಚಿತ್ರಗಳ ಇತಿಹಾಸದಲ್ಲೇ ಅತ್ಯಂತ ದುಬಾರಿ ದೃಶ್ಯ. ಈ ದೃಶ್ಯಕ್ಕಾಗಿ ಕೀಟನ್ ಅಂದಿನ ದಿನಗಳಲ್ಲಿ ನಲವತ್ತೆರಡು ಸಾವಿರ ಡಾಲರ್(ಇಂದಿನ ಲೆಕ್ಕದಲ್ಲಿ ಐದು ಲಕ್ಷ ಡಾಲರ್) ಖರ್ಚು ಮಾಡಿದ್ದ. ಇದರ ಅಂದಾಜು ನಿಮಗೆ ಸಿಗಬೇಕೆಂದರೆ, ಅಂದಿಗೆ ಒಂದು ಹೊಚ್ಚ ಹೊಸ ಕಾರಿನ ಸರಾಸರಿ ಬೆಲೆ ಮುನ್ನೂರು ಡಾಲರ್ ಗಳು. ಚಿತ್ರ ಸೋತು ಕೀಟನ್ ಗೆ ಸಾಕಷ್ಟು ನಷ್ಟವಾಯಿತು. ಆದರೂ ಇಂತಹ ಒಂದು ದೃಶ್ಯ ಆಗಿನ ಕಾಲದಲ್ಲಿ ಅಷ್ಟು ಕರಾರುವಾಕ್ಕಾಗಿ ಮಾಡಿದ್ದು ನೋಡಿದರೆ, ಚಿತ್ರನಿರ್ಮಾಣದಲ್ಲಿ ಅಂದಿನ ವೃತ್ತಿಪರತೆ ಮತ್ತು ನೈಪುಣ್ಯತೆ ಎದ್ದು ಕಾಣುತ್ತದೆ. ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ ಮತ್ತು ಚಿತ್ರ ನಿರ್ಮಾಣದ ಬಗೆ ಬದಲಾಗುತ್ತಲೇ ಇರುತ್ತದೆ, ಆದರೆ ಇಂತಹ ದೃಶ್ಯಗಳು ಸಿನೆಮಾ ಇತಿಹಾಸದಲ್ಲೇ ಕಾಲಾತೀತವಾಗಿ ನಿಲ್ಲುತ್ತವೆ.

  ರೈಲು ಬಿದ್ದ ನಂತರ ಸಾವರಿಸಿಕೊಂಡು ಮುಂದುವರೆಯುವ ಉತ್ತರದ ಸೈನ್ಯದ ಮೇಲೆ ದಕ್ಷಿಣದ ಸೈನ್ಯ ದಾಳಿ ಮಾಡುತ್ತದೆ. ದಾಳಿಗೆ ಉತ್ತರ ಕೊಡುತ್ತ ಉತ್ತರದ ಸೈನಿಕರು ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ವೇಳೆ, ಜಾನಿ ಅಚಾತುರ್ಯದಿಂದ ತೋಪು ಸಿಡಿಸಿ ನದಿಯ ನೀರನ್ನು ಹಿಡಿದಿಟ್ಟಿದ್ದ ಚಿಕ್ಕ ಅಣೆಕಟ್ಟನ್ನು ಒಡೆದು ಬಿಡುತ್ತಾನೆ. ಇದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ, ಉತ್ತರದ ಸೈನಿಕರು ಅಲ್ಲಿಂದ ಹಿಂದೆ ಸರಿದು ಯುದ್ಧಭೂಮಿಯಿಂದ ಓಡಿಹೋಗುತ್ತಾರೆ. ಯುದ್ಧ ಅಲ್ಲಿಗೆ ಮುಗಿಯುತ್ತದೆ. ಯುದ್ಧದಲ್ಲಿ ಜಯಶಾಲಿಗಳಾಗಿ ಮರಳಿದ ಎಲ್ಲರಿಗೂ ಊರಿನ ಜನ ಅಭಿನಂದಿಸುತ್ತಾರೆ. ತಾನು ಸೈನಿಕನಲ್ಲವಲ್ಲ ಎಂದು ಬೇಸರಪಟ್ಟುಕೊಂಡು ಜಾನಿ ತನ್ನ ರೈಲಿಗೆ ಮರಳಿದಾಗ ಅಲ್ಲಿ ಎದುರಾಳಿ ಸೈನ್ಯದ ಜೆನರಲ್ ಓರ್ವ ಜ್ಞಾನತಪ್ಪಿ ಬಿದ್ದದ್ದು ನೋಡಿ ಆತನನ್ನು ಎಬ್ಬಿಸಿ ತನ್ನ ಸೈನ್ಯದ ಜೆನರಲ್ ಬಳಿಗೆ ಶರಣಾಗತಿ ಮಾಡಿಸಲು ಕರೆದೊಯ್ಯುತ್ತಾನೆ. ಜಾನಿಯ ಶೌರ್ಯ ನೋಡಿದ ಜೆನರಲ್ ಆತನಿಗೆ ಸೈನ್ಯದಲ್ಲಿ ಕೊನೆಗೂ ಸೇರಿಸಿಕೊಂಡು ಅವನಿಗೆ ಲೆಫ್ಟಿನೆಂಟ್ ಹುದ್ದೆಯನ್ನು ಕೊಟ್ಟು ಕಳುಹಿಸುತ್ತಾನೆ. ತನ್ನ ಪ್ರಿಯತಮ ಸೈನ್ಯಕ್ಕೆ ಸೇರಲಿಲ್ಲ ಎಂದು ಬೇಸರಪಟ್ಟುಕೊಂಡಿದ್ದ ಲೀ ಕೊನೆಗೆ ಜಾನಿ ಆಫಿಸರ್ ಆಗಿ ಬಂದದ್ದನ್ನು ನೋಡಿ ಖುಷಿಪಡುತ್ತಾಳೆ. ಇಬ್ಬರೂ ಮತ್ತೆ ಒಂದಾಗುವುದರೊಂದಿಗೆ ಕಥೆ ಮುಗಿಯುತ್ತದೆ.
  ಇಲ್ಲಿ ಚಿತ್ರದಲ್ಲಿ ಬರುವ ಅನೇಕ ಹಾಸ್ಯದ ದೃಶ್ಯಗಳನ್ನು ನಾನು ವಿವರಿಸಲು ಹೋಗಿಲ್ಲ. ವಿವರಿಸುವುದು ಕಷ್ಟವೂ ಹೌದು. ಅವನು ಓಡಿಬಂದ, ಅವನು ಬಿದ್ದ ಎಂದೆಲ್ಲ ವಿವರಿಸಲು ಹೋದರೆ ಹಾಸ್ಯ, ಶಾಲೆಯ ವ್ಯಾಕರಣ ಪುಸ್ತಕದ ರೀತಿ ಅನಿಸುತ್ತದೆ. ಅದೃಷ್ಟವಶಾತ್ ಈ ಚಿತ್ರ ಯೂಟ್ಯೂಬ್ ನಲ್ಲಿ ನೋಡಲು ಲಭ್ಯವಿರುವುದರಿಂದ ಕೆಳಗೆ ಈ ಚಿತ್ರದ ಲಿಂಕ್ ಹಂಚಿಕೊಳ್ಳುತ್ತಿದ್ದೇನೆ. ಎರಡು ಬಗೆಯ ಹಿನ್ನಲೆ ಸಂಗೀತವಿರುವ ಚಿತ್ರಗಳು ಇವೆ. ನನಗೆ ಇಷ್ಟವಾದದ್ದನ್ನು( ಕಿನೋ ಇಂಟರ್ ನ್ಯಾಷನಲ್ ನ ಕಾಪಿ) ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಹಾಗೆ ಈ ಚಿತ್ರದ ಬಗೆಗಿನ ಇನ್ನಷ್ಟು ಸ್ವಾರಸ್ಯದ ಸಂಗತಿಗಳನ್ನು ಹೇಳುವ ಕೆಲವು ವೆಬ್ ಲಿಂಕ್ ಗಳನ್ನೂ ಹಂಚಿಕೊಂಡಿದ್ದೇನೆ.

ಚಿತ್ರದ ಲಿಂಕ್ - https://www.youtube.com/watch?v=x2X58JcO9G4

ರೈಲು ಬೀಳುವ ದೃಶ್ಯದ ಬಗ್ಗೆ ಇರುವ ಲಿಂಕ್ -  https://www.thevintagenews.com/2016/09/06/priority-train-scene-buster-keatons-general-expensive-scene-silent-film-history/

ದಿ ಜೆನರಲ್ ಚಿತ್ರಿಸಿದ ಜಾಗದ ಕುರಿತು - https://silentlocations.wordpress.com/2014/09/26/how-buster-keaton-filmed-the-general/

ರೈಲು ಬಿದ್ದ ನಂತರ ಏನಾಯಿತು ಎನ್ನುವುದರ ಬಗ್ಗೆ - http://offbeatoregon.com/H1002b_TheGeneral.html

 

-ವಿಶ್ವನಾಥ್

 
 

Rating
No votes yet