ನಾನು ನೋಡಿದ ಚಿತ್ರ - ಫೆಂಟಾಸ್ಟಿಕ್ ಮಿ. ಫಾಕ್ಸ್

ನಾನು ನೋಡಿದ ಚಿತ್ರ - ಫೆಂಟಾಸ್ಟಿಕ್ ಮಿ. ಫಾಕ್ಸ್

IMDb: http://www.imdb.com/title/tt0432283/?ref_=nv_sr_1
 

 
     ಒಂದು ಸ್ಟಾಪ್ ಮೋಶನ್ ಅನಿಮೇಷನ್ ಚಿತ್ರವನ್ನ ಗಟ್ಟಿ ಕಥೆಯೊಂದಿಗೆ ಹೇಗೆ ಸುಂದರವಾಗಿ ಮಾಡಬಹುದು ಎಂಬುದಕ್ಕೆ ಈ ಚಿತ್ರ ಒಳ್ಳೆಯ ಉದಾಹರಣೆ. ಇದು ನೋಡಲಿಕ್ಕೆ ಮಕ್ಕಳ ಚಿತ್ರದಂತೆ ಕಂಡರೂ ಕೆಲವು ಸೂಕ್ಷ್ಮಗಳು ಮಕ್ಕಳ ಗಮನಕ್ಕೆ ಬರದೇ ಹೋಗಬಹುದು.
     ಈ ಚಿತ್ರ ನಮ್ಮಲ್ಲಿ ಕೆಲವರಿಗೆ ಹೇಗೆ ತಾವು ಇಷ್ಟಪಟ್ಟು ಮಾಡುವ ಕೆಲಸವನ್ನು ಅತಿರೇಕಕ್ಕೆ ಒಯ್ದು ಅದರ ಉತ್ತುಂಗದಲ್ಲಿ ನಿಲ್ಲಬೇಕು ಎನ್ನುವ ಆಸೆ ಇರುತ್ತದೋ ಹಾಗೆಯೇ ಆಸೆ ಇರುವ ಮಿ. ಫಾಕ್ಸ್ (ಜಾರ್ಜ್ ಕ್ಲ್ಯೂನಿ) ಎಂಬ ನರಿಯ ಕಥೆ. ತಾನೊಂದು ನರಿಯಾಗಿದ್ದು ಬೇಟೆ ಆಡಿ ತಿನ್ನಬೇಕು ಎನ್ನುವುದು ಅದರ ಧರ್ಮ. ಹಾಗೆಯೇ ಇದ್ದರೆ ಅದರಲ್ಲಿ ವಿಶೇಷತೆ ಏನೂ ಇಲ್ಲ. ಆದರೆ ಇಲ್ಲಿ ನರಿಗೆ ತಾನು ಮನುಷ್ಯರು ಕೂಡಿಟ್ಟ ಪ್ರಾಣಿಗಳನ್ನು ಹೊಂಚು ಹಾಕಿ ತಿನ್ನುವುದು ರೋಮಾಂಚನದ ಸಂಗತಿ. ಮನುಷ್ಯರು ಮಾಡಿಟ್ಟ ಬೋನುಗಳನ್ನು ಉಪಾಯದಿಂದ ತಪ್ಪಿಸಿ ಕೋಳಿ ಇತ್ಯಾದಿ ಪಕ್ಷಿಗಳನ್ನು ಹಿಡಿಯುವುದು ಏನೋ ಸಾಧನೆ ಮಾಡಿದಂತೆ.
    ಹೀಗೆ ತನ್ನ ಹೆಂಡತಿಯೊಂದಿಗೆ ಒಮ್ಮೆ ಒಂದು ತೋಟಕ್ಕೆ ಬೇಟೆ ಆಡಲು ಹೋದಾಗ ಅತಿಯಾದ ಬುದ್ಧಿವಂತಿಕೆ ತೋರಿಸಲು ಹೋಗಿ ಎರಡೂ ನರಿಗಳು ಬೋನಿಗೆ ಬೀಳುತ್ತವೆ. ಆಗ ಫೆಲಿಸಿಟಿ (ಹೆಣ್ಣು ನರಿ ಪಾತ್ರದಲ್ಲಿ ಮೆರಿಲ್ ಸ್ಟ್ರೀಪ್) ತಾನು ಗರ್ಭಿಣಿ ಎನ್ನುವುದನ್ನು ಫಾಕ್ಸ್ ಗೆ ಹೇಳಿದ್ದನ್ನು ಕೇಳಿ ಫಾಕ್ಸ್ ಗೆ ಖುಷಿಯಾದರೂ, ಹೀಗೆ ಕಳ್ಳತನದಿಂದ ಬೇಟೆಯಾಡಿ ಬದುಕುವುದು ಜೀವಕ್ಕೆ ಅಪಾಯ ಎಂದೂ, ತಮ್ಮ ಮಕ್ಕಳಿಗೋಸ್ಕರ ಇನ್ನು ಮುಂದೆಂದೂ ಹೀಗೆ ಮಾಡುವುದು ನಿಲ್ಲಿಸಬೇಕೆಂದು ಫಾಕ್ಸ್ ನಿಂದ  ಮಾತು ಪಡೆಯುತ್ತಾಳೆ.

 
    ಜೀವನದಲ್ಲಿ ಯಾವ thrill ಇಲ್ಲದೆಯೂ ಜೀವನ ಸಪ್ಪೆಯಾದಂತೆ ಫಾಕ್ಸ್ ಪ್ರಾಣಿಗಳ ನ್ಯೂಸ್ ಪೇಪರ್ ಗೆ ಅಂಕಣ ಬರೆಯುತ್ತ ಕಾಲ ಕಳೆಯುತ್ತಿರುತ್ತಾನೆ. ಒಂದೊಮ್ಮೆ ತಾವು ಬದುಕುತ್ತಿರುವ ಮನೆ ಸಣ್ಣದೆಂದೂ ದೊಡ್ಡದೊಂದು ಮನೆಗೆ ಹೋಗೋಬೇಕೆಂದು ನಿರ್ಧರಿಸಿ ಸಾಲ ಮಾಡಿ ಒಂದು ದೊಡ್ಡ ಮರದಲ್ಲಿ ಮನೆ ಮಾಡುತ್ತಾನೆ. ಆ ಮನೆಯಿಂದ ಮೂರು ಜನ ರೈತರ ತೋಟಗಳು ಚೆನ್ನಾಗಿ ನೋಡಬಹುದಾಗಿದ್ದು ಫಾಕ್ಸ್ ಗೆ ಕೊನೆಯಬಾರಿಗೆ ತನ್ನ ಬೇಟೆ ಆಡುವ ಚಟವನ್ನು ಈ ಮೂವರು ರೈತರ ತೋಟದಿಂದ ಕದ್ದು ತೀರಿಸಿಕೊಳ್ಳಬೇಕೆಂದು ಆಸೆ ಹುಟ್ಟುತ್ತದೆ. ಆದರೆ ಮನೆ ಕೊಳ್ಳುವ ಮುಂಚೆಯೇ ಈ ಮೂವರು ರೈತರು ಎಷ್ಟು ಕ್ರೂರಿಗಳು ಎನ್ನುವುದನ್ನು ಫಾಕ್ಸ್ ನ ಲಾಯರ್ ಹೇಳಿರುತ್ತಾನೆ. ಅವನ ಮಾತನ್ನು ಕಡೆಗಣಿಸಿ ಫಾಕ್ಸ್ ಈ ರೈತರ ತೋಟಕ್ಕೆ ನುಗ್ಗುವ ಹೊಂಚು ಹಾಕುತ್ತಾನೆ.

 
   ಇದರ ಮಧ್ಯೆ ಫಾಕ್ಸ್ ನ ಮಗ ಆಶ್ (ಜೇಸನ್ ಶ್ವಾರ್ಟ್ಜ್ ಮನ್ ) ತಾನು ಎಲ್ಲರಿಗಿಂತ ಭಿನ್ನ ಎಂದು ತೋರಿಸಲು ತನ್ನ ಕುಟುಂಬದ ಗಮನ ಸೆಳೆಯಲು ವಿಚಿತ್ರವಾಗಿ ಏನಾದರೂ ಮಾಡುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಒಬ್ಬ ಬುದ್ಧಿವಂತ, ಒಳ್ಳೆಯ ಸ್ಪರ್ದಾಳು, ಅವನಿಗಿಂತ ಚೆನ್ನಾಗಿರುವ ಹುಡುಗನೊಬ್ಬ ಮನೆಗೆ ಬಂದರೆ ಆಶ್ ಗೆ ಏನಾಗಬಹುದು. ಹೀಗೆ ಬರುವವನೇ ಕ್ರಿಸ್ಟೋಫೆರ್ಸನ್. ಆಶ್ ನ ಮಾವನ ಮಗ. ಆಶ್ ಗೆ ಇವನ ಮೇಲೆ ಎಲ್ಲಿಲ್ಲದ ಕೋಪ. ಸ್ಕೂಲಿನಲ್ಲೂ ಎಲ್ಲರು ಕ್ರಿಸ್ಟೋಫೆರ್ಸನ್ ನನ್ನೇ ಹೊಗಳುವುದೂ ಅವನ ಸಿಟ್ಟಿಗೆ ಮತ್ತೊಂದು ಕಾರಣ.
    ಫಾಕ್ಸ್ ಮೊದಲು Walt Boggis ನ ತೋಟಕ್ಕೆ ನುಗ್ಗಿ ಕೋಳಿಗಳನ್ನು ಕದಿಯುತ್ತಾನೆ. ನಂತರ Nate Bunceನ ತೋಟಕ್ಕೆ ನುಗ್ಗಿ ಬಾತುಕೋಳಿ ಕದಿಯುತ್ತಾನೆ. ಮನೆಯಲ್ಲಿ ಇದ್ದಕಿದ್ದಂತೆ ಹೀಗೆ ಶೇಖರಣೆಗೊಳ್ಳುತ್ತಿದ್ದ ಕೋಳಿಗಳನ್ನು ನೋಡಿ ಹೆಂಡತಿಗೆ ಆಶ್ಚರ್ಯವಾದರೂ ಆಕೆ ಕೇಳದೆ ಸುಮ್ಮನಿರುತ್ತಾಳೆ. ಮೂರನೆ ಬಾರಿಗೆ Frank Beanನ ತೋಟಕ್ಕೆ ನುಗ್ಗಿ ಅವನ ದಾಸ್ತಾನಿನಲ್ಲಿದ್ದ ರುಚಿಯಾದ ಆಪಲ್ ಸೈಡರ್ ಕದಿಯುತ್ತಾನೆ. ಈ ಬಾರಿ ಹೆಂಡತಿಗೆ ಮಾಲು ಸಮೇತ ಸಿಕ್ಕಿಬೀಳುತ್ತಾನೆ. ಆಗ ಹೆಂಡತಿ ದೊಡ್ಡ ಜಗಳವಾಡಿ ಗೋಳಾಡಿದರೂ ಆಕೆಗೆ ಫಾಕ್ಸ್ ಸಮಾಧಾನ ಮಾಡಿ ಸುಮ್ಮನಾಗುತ್ತಾನೆ.
    ಅತ್ತ ಕೇವಲ ಒಂದು ನರಿಯಿಂದ ಮೋಸ ಹೋದೆವಲ್ಲ ಎಂದು ಸಿಟ್ಟುಗೊಂಡ ಮೂವರೂ ರೈತರು ಒಟ್ಟಿಗೆ ಸೇರಿ ಫಾಕ್ಸ್ ನ ಕೊಲ್ಲಲು ಅದರ ಮರದ ಬಳಿಗೆ ಬರುತ್ತಾರೆ. ಆದರೆ ಅದೃಷ್ಟವಶಾತ್ ಫಾಕ್ಸ್ ಅವರ ಗುಂಡಿಗೆ ಕೇವಲ ಬಾಲ ಕಳೆದುಕೊಳ್ಳುತ್ತಾನೆ. ಇದರಿಂದ ಗಾಬರಿಗೊಂಡ ಕುಟುಂಬ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಆ ಮೂವರು ರೈತರೂ ಆ ಮರವನ್ನೇ ಕೆಡವಲು ನಿಲ್ಲುತ್ತಾರೆ. ತಮ್ಮ ಬಳಿ ಇರುವ ಅಗೆಯುವ ಎಲ್ಲ ಮೆಷಿನುಗಳನ್ನು ತರಿಸಿ ಅಗೆಸುತ್ತಾರೆ, ಇದರಿಂದ ಮನೆ ಕಳೆದುಕೊಂಡ ಫಾಕ್ಸ್ ಗೆ ತನ್ನ ತಪ್ಪು ಅರಿವಾಗುತ್ತದೆ. ಆದರೆ ಕಾಲ ಮಿಂಚಿಯಾಗಿದೆ. ಆ ರೈತರು ಸುತ್ತ ಮುತ್ತ ಇದ್ದ ಎಲ್ಲ ಪ್ರಾಣಿಗಳಿಗೂ ತೊಂದರೆ ಕೊಡಲು ಪ್ರಾರಂಭಿಸಿದಾಗ ಆ ಎಲ್ಲ ಪ್ರಾಣಿಗಳೂ ಫಾಕ್ಸ್ ನನ್ನ ದೂಷಿಸುತ್ತಾರೆ. ಫಾಕ್ಸ್ ಕಡೆಗೆ ತಲೆ ಓಡಿಸಿ ಎಲ್ಲರನ್ನೂ ಕರೆದುಕೊಂಡು ಆ ಮೂವರು ರೈತರ ಉಗ್ರಾಣಗಳಿಗೆ ಬಿಲ ಕೊರೆದು ಇದ್ದದ್ದನ್ನೆಲ್ಲ ದೋಚುತ್ತಾನೆ.

 
    ಆಶ್ ಇವೆಲ್ಲದರ ಮಧ್ಯೆ ಕ್ರಿಸ್ಟೋಫೆರ್ಸನ್ ನ ಜೊತೆ ಸ್ನೇಹ ಬೆಳೆಸಿ ಈಗ ತನ್ನ ತಂದೆ ತಾಯಿಗೆ ತಾನು ಎಷ್ಟು ಧೈರ್ಯಶಾಲಿ ಎಂದು ತೋರಿಸಲು ತನ್ನ ಅಪ್ಪನ ತುಂಡಾದ ಬಾಲದಲ್ಲಿ ಟೈ ಮಾಡಿಕೊಂಡು ಓಡಾಡುತ್ತಿದ್ದ ರೈತನ ಮನೆಗೇ ನುಗ್ಗಿ ಆ ಟೈ ಕದಿಯಲು ಹೋಗಿ ರೈತನ ಹೆಂಡತಿಗೆ ಸಿಕ್ಕಿಬೀಳುತ್ತಾರೆ. ಆದರೆ ಇಬ್ಬರಲ್ಲಿ ಆಶ್ ತಪ್ಪಿಸಿಕೊಂಡರೂ ಕ್ರಿಸ್ಟೋಫೆರ್ಸನ್ ನನ್ನು ರೈತರು ಒತ್ತೆಯಾಳಾಗಿಟ್ಟುಕೊಂಡು ಫಾಕ್ಸ್ ಗೆ ಶರಣಾಗಲು ಒಂದು ಪತ್ರ ಕಳಿಸುತ್ತಾರೆ. ಇದರ ನಂತರ ಕ್ರಿಸ್ಟೋಫೆರ್ಸನ್ ನನ್ನ ಬಿಡಿಸಿ ತರಲು ನಡೆಯುವ ಪ್ರಾಣಿ ಮತ್ತು ಮನುಷ್ಯರ ಯುದ್ಧ ತುಂಬಾ ಹಾಸ್ಯಭರಿತವಾಗಿದೆ. ಕಡೆಗೆ ಫಾಕ್ಸ್ ಎಲ್ಲರನ್ನು ಒಟ್ಟು ಮಾಡಿ ಸುಖವಾಗಿ ಬಾಲವಿಲ್ಲದೆ ಜೀವನ ನಡೆಸುತ್ತಾನೆ ಎನ್ನುವಲ್ಲಿಗೆ ಕಥೆ ಮುಗಿಯುತ್ತದೆ.

 
    ಒಮ್ಮೊಮ್ಮೆ ಕೇವಲ ನಮ್ಮೊಬ್ಬರ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಹೋಗಿ ಇತರರನ್ನು ತೊಂದರೆಗೆ ಸಿಕ್ಕಿಸಬಾರದು ಎಂಬುದು ನೀತಿಯಾದರೂ ಈ ಸಿನಿಮಾದಲ್ಲಿ ಇರುವ ಹಾಸ್ಯದಲ್ಲಿ ಎಲ್ಲವನ್ನೂ ಮರೆಯುತ್ತೀರಿ. Wes Anderson ಈ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರದ ಒಂದೊಂದು ಫ್ರೇಮ್ನಲ್ಲೂ ಅವರ ಸೂಕ್ಷ್ಮ ಕೆಲಸ ಮತ್ತು ಪರ್ಫೆಕ್ಷನ್ ಎದ್ದು ಕಾಣುತ್ತದೆ. ಇವರ ಎಲ್ಲ ಸಿನಿಮಾಗಳಲ್ಲೂ ಒಂದು ಬಣ್ಣವನ್ನು ಪ್ರಧಾನವಾಗಿಟ್ಟುಕೊಂಡು ಮಾಡುತ್ತಾರೆ ಮತ್ತು ಬಹುತೇಕ ಫ್ರೇಮಿನಲ್ಲಿ symmetry ಇರುತ್ತದೆ.
 
- ವಿಶ್ವನಾಥ್
 
 

Rating
No votes yet