ನಾನು ನೋಡಿದ ಚಿತ್ರ- ಲೈಫ್ ಆಫ್ ಬ್ರಯಾನ್
IMDb: http://www.imdb.com/title/tt0079470/
ಎಪ್ಪತರ ದಶಕದಲ್ಲಿ ಇಂಗ್ಲೆಂಡಿನಲ್ಲಿ ಪ್ರಖ್ಯಾತಿ ಪಡೆದಿದ್ದ ಮೊಂಟಿ ಪೈಥಾನ್ ನ ತಂಡ ಬಹಳ ಕಷ್ಟದೊಂದಿಗೆ ಈ ಹಾಸ್ಯ ಚಿತ್ರವನ್ನು ನಿರ್ಮಿಸಿತು. ಆರು ಜನ ಮುಖ್ಯವಾಗಿ ಈ ತಂಡದಲ್ಲಿದ್ದರು- ಗ್ರೆಹಾಂ ಚಾಪ್ಮನ್, ಟೆರ್ರಿ ಜೋನ್ಸ್, ಟೆರ್ರಿ ವಿಲಿಯಮ್ಸ್, ಜಾನ್ ಕ್ಲೀಸ್, ಎರಿಕ್ ಐಡಲ್ ಮತ್ತು ಮೈಕಲ್ ಪೇಲಿನ್. ಇವರು ಈ ಚಿತ್ರದ ಮುನ್ನ ಮೊಂಟಿ ಪೈಥಾನ್ ನ ಫ್ಲೈಯಿಂಗ್ ಸರ್ಕಸ್(Monty Python’s Flying Circus) ಎಂಬ ಹಾಸ್ಯ ಪ್ರಹಸನಗಳ ಮಾಲಿಕೆಯನ್ನ ಬಿಬಿಸಿ ಟಿವಿಗಾಗಿ ಮಾಡಿ ಪ್ರಸಿದ್ಧರಾಗಿದ್ದರು. ಹಾಸ್ಯ ಮಾಡುವಾಗ ಯಾರನ್ನಾದರೂ ಹಾಸ್ಯ ಮಾಡಬಹುದಾದಂತಹ ಸ್ವಾತಂತ್ರ್ಯ ಒಬ್ಬ ಕಲಾವಿದನಿಗಿರಬೇಕು. ಆಗಷ್ಟೇ ಆತನ ಹಾಸ್ಯದ ಸಂಪೂರ್ಣ ಲಾಭ ಮತ್ತು ಮನರಂಜನೆ ನೋಡುಗರದ್ದಾಗುತ್ತದೆ. ಪೊಲಿಟಿಕಲ್ ಕರೆಕ್ಟ್ ನೆಸ್ ಎಂಬ ದೊಡ್ಡ ಪೆಡಂಭೂತ ಇನ್ನೂ ಕಾಲಿರಿಸದಿದ್ದ ಕಾಲದಲ್ಲಿ ರೂಪುಗೊಂಡ ಒಂದು ಅದ್ಭುತ ಹಾಸ್ಯ ಚಿತ್ರವಿದು. ವಿಪರ್ಯಾಸವೆಂದರೆ ಧರ್ಮ, ಸಿದ್ಧಾಂತ ಮತ್ತು ವ್ಯಕ್ತಿಗಳ ಬಗೆಗಿನ ಹಾಸ್ಯ ಇಂದು ಮುಟ್ಟಬಾರದಂತಹ ವಿಷಯಗಳು. ಎಂತಹ ಸಪ್ಪೆ ಮತ್ತು ನೀರಸ ಕಾಲ ನಮ್ಮದು.
ಏಸುವಿನ ಕಥೆ ಬಹುತೇಕ ಎಲ್ಲರಿಗೂ ಪರಿಚಿತ. ಆತ ಹುಟ್ಟಿದ್ದು, ಬೆಳೆದದ್ದು, ಕ್ರಿಶ್ಚಿಯಾನಿಟಿ ಹುಟ್ಟು ಹಾಕಿದ್ದು ಮತ್ತು ಕೊನೆಗೆ ಶಿಲುಬೇಗೇರಿದ್ದು ಎಲ್ಲವೂ ಕೇಳಿರುವ ಕಥೆಗಳು. ಆದರೆ ಆತ ಹುಟ್ಟಿದ ದಿನದಂದೇ ಆತನ ಪಕ್ಕದ ಮನೆಯಲ್ಲಿ ಹುಟ್ಟಿದವನೇ ಈ ಕಾಲ್ಪನಿಕ ಬ್ರಯಾನ್. ಆತನ ಜೀವನ ಕಥೆಯೇ ಲೈಫ್ ಆಫ್ ಬ್ರಯಾನ್. ಏಸು ಹುಟ್ಟಿದ ದಿನದಂದು ಮೂರು ರಾಜರು ಏಸುವಿಗೆ ಕಾಣಿಕೆಯನ್ನಿತ್ತರು. ಆದರೆ ಅಲ್ಲಿಗೆ ಬರುವ ಮುನ್ನ ಆ ಮೂವರು ಬ್ರಯಾನ್ ಮನೆಗೆ ಹೋಗಿ ಅವನೇ ಏಸುವೆಂದು ಕಾಣಿಕೆ ನೀಡುತ್ತಾರೆ ಮತ್ತು ಆತ ಬೆಳೆದು ತನ್ನ ಜನರೆಲ್ಲರಿಗೂ ದೊಡ್ಡ ನಾಯಕನಾಗುತ್ತಾನೆ ಎಂದು ಭವಿಷ್ಯ ನುಡಿದು ಹೊರಗೆ ಹೋಗಿ ನೋಡಿ ನಿಜವಾದ ಏಸುವಿನ ಮನೆ ಸಿಕ್ಕ ಮೇಲೆ ಮತ್ತೆ ಬ್ರಯಾನ್ ಬಳಿಗೆ ಬಂದು ಕೊಟ್ಟ ಉಡುಗೊರೆಗಳನ್ನೆಲ್ಲ ವಾಪಸ್ ಪಡೆದು ಹೋಗುತ್ತಾರೆ. ಇದು ಚಿತ್ರ ತೆರೆಯುವ ರೀತಿ. ಇದರ ನಂತರ ಸಿನೆಮಾದ ಕ್ರೆಡಿಟ್ಸ್ ಜೊತೆಗೆ ಪರಿಚಯ ಗೀತೆ. ಈ ಗೀತೆ ನೀವು ಪೂರ್ತಿ ಕೇಳಬೇಕು. ಒಂದು ಪರಿಚಯ ಹಾಡನ್ನು ಯಾವ ವಿಶೇಷ ಪದಪ್ರಯೋಗವಿಲ್ಲದೆ ಹಾಸ್ಯಮಯವಾಗಿಸುವ ಬಗೆ ಬಹಳ ಚೆನ್ನಾಗಿದೆ.
ಈಗ ಕಾಲ 33A.D. ಜುದೇಯ(Judea) ದೇಶದಲ್ಲಿ ಏಸು ಕ್ರೈಸ್ತ ಮತದ ಬಗ್ಗೆ ಎಲ್ಲೆಡೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾನೆ. ಹೀಗೆ ಒಂದು ಶನಿವಾರದ ಮಧ್ಯಾಹ್ನ ಆತನ ಸರ್ಮನ್ ಕೇಳುತ್ತ ಜನ ನಿಂತಿರಬೇಕಾದರೆ ಬ್ರಯಾನ್ ತನ್ನ ಅಮ್ಮನೊಂದಿಗೆ ದೂರದಲ್ಲಿ ಅಷ್ಟು ಸರಿಯಾಗಿ ಕೇಳದ ಜಾಗದಲ್ಲಿ ಬಂದು ನಿಂತು ಕೇಳಲು ಪ್ರಯತ್ನಿಸುತ್ತಾನೆ. ಆದರೆ ಆತನ ಅಮ್ಮನಿಗೆ ಸ್ಟೋನಿಂಗ್ ಗೆ(ಬಹಿರಂಗವಾಗಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ) ಹೋಗಬೇಕೆಂಬ ಆಸೆ. ಬ್ರಯಾನ್ ಗೆ ಆತ ಏನು ಹೇಳುತ್ತಿದ್ದಾನೆ ಎಂದು ಕೇಳಬೇಕೆನ್ನುವ ಆಸೆ. ಆದರೆ ಅವನ ಸುತ್ತಲಿದ್ದ ಜನ ಮಾಡಿಕೊಳ್ಳುವ ಚಿಲ್ಲರೆ ಜಗಳದಿಂದ ಏನೂ ಕೇಳಿಸದೆ ಬೇಸತ್ತು ಅಮ್ಮನೊಟ್ಟಿಗೆ ಸ್ಟೋನಿಂಗ್ ಗೆ ಹೋಗುತ್ತಾನೆ. ಅಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ. ಆದರೆ ಈ ನಿಯಮವನ್ನು ಪಾಲಿಸದ ಹೆಂಗಸರು ಗಡ್ಡ ತೊಟ್ಟು ಗಂಡಸರಂತೆ ಕಲ್ಲು ಮಾರುವವನ ಬಳಿ ಕಲ್ಲು ಕೊಂಡುಕೊಂಡು ಬಂದು ಕಲ್ಲು ಹೊಡೆಯುವುದು ಎಂದಿನ ಪ್ರಹಸನ. ಕಲ್ಲು ಮಾರುವವನೂ ಕಲ್ಲು ಮಾರಲು ಅವುಗಳನ್ನು ಬಣ್ಣಿಸಿ ಅದರಲ್ಲಿ ಎಂತಹ ಕುಸುರಿ ಕೆಲಸವಿದೆ ನೋಡಿ ಎಂದೆಲ್ಲ ಪುಸಲಾಯಿಸುತ್ತಾನೆ. ಯಾರೋ ಓರ್ವ ಬಡಪಾಯಿಗೆ ಅನಗತ್ಯವಾಗಿ ದೇವರ ಹೆಸರನ್ನು ಬಳಸಿದ ಎಂಬ ಕಾರಣಕ್ಕೆ ಈ ಶಿಕ್ಷೆ. ಹೆಂಗಸರೆಲ್ಲ ಕಲ್ಲು ಹೊಡೆಯಲು ಕಾತರರಾಗಿರುತ್ತಾರೆ ಆದರೆ ಶಿಕ್ಷೆ ಜಾರಿ ಮಾಡುವವ ನಿಧಾನ ಮಾಡುವುದನ್ನು ತಾಳಲಾರದೆ ಹೆಂಗಸರೆಲ್ಲ ಸೇರಿ ಅವನ ಮೇಲೆಯೇ ಕಲ್ಲು ಎತ್ತಿ ಹಾಕಿ ಸಾಯಿಸುತ್ತಾರೆ. ಇಂತಹ ಅನೇಕ ಇತಿಹಾಸದ ನೈಜ ಘಟನೆಗಳು, ಪದ್ಧತಿಗಳ ಬಗ್ಗೆ ಚಿತ್ರ ಹಾಸ್ಯ ಮಾಡುತ್ತದೆ.
ಮನೆಗೆ ಬಂದ ಮೇಲೆ ರೋಮನ್ ಸೈನಿಕನೋರ್ವ ತಮ್ಮ ಮನೆಯಲ್ಲಿ ಇದ್ದದ್ದು ಕಂಡು ಕೋಪಗೊಳ್ಳುವ ಬ್ರಯಾನ್ ಗೆ ಸಮಾಧಾನ ಹೇಳುವ ಆತನ ತಾಯಿ ಆತ ಓರ್ವ ರೋಮನ್ ಸೆಂಚೂರಿಯನ್ ನ ಮಗ ಆದರೆ ಆ ಸೆಂಚೂರಿಯನ್ ತನ್ನನ್ನು ಪ್ರೀತಿಸಿ ಕೈಕೊಟ್ಟ ಎಂದು ತನ್ನ ಗುಟ್ಟನ್ನು ಹೇಳುತ್ತಾಳೆ. ಹಾಗಾಗಿ ಬ್ರಯಾನ್ ರೋಮನ್ ರನ್ನು ಅಷ್ಟು ಬೈಯುವುದರಲ್ಲಿ ಅರ್ಥವಿಲ್ಲ ಏಕೆಂದರೆ ಆತನೂ ರೋಮನ್ ಎಂದು ಆತನ ತಾಯಿ ಅಂದದ್ದಕ್ಕೆ ಆತ ತಾನೆಂದೂ ಒಬ್ಬ ಯಹೂದಿಯೇ, ಎಂದೆಂದಿಗೂ ರೋಮನ್ ಆಗಲಾರ ಎಂದು ಸಿಟ್ಟು ಮಾಡಿಕೊಂಡು ಕೋಣೆ ಸೇರುತ್ತಾನೆ.
ಒಂದು ದಿನ ರೋಮನ್ ಕಾಲೋಸ್ಸಿಯಂನಲ್ಲಿ ಗ್ಲಾಡಿಯೇಟರ್ ಗಳ ಕಾಳಗ ನಡೆಯುತ್ತಿದ್ದ ವೇಳೆ ಬ್ರಯಾನ್ ವೀಕ್ಷಕರಿಗೆ ತಿನ್ನಲು ವಿಧವಿಧದ ತಿಂಡಿಗಳನ್ನು ಮಾರುತ್ತಿರುತ್ತಾನೆ. ಅಲ್ಲೇ ತಾನು ಹಿಂದೆ ನೋಡಿದ ಹೆಣ್ಣೊಬ್ಬಳನ್ನು ಕಂಡು ಅವಳಿದ್ದ ಗುಂಪಿನ ಬಳಿ ಹೋಗುತ್ತಾನೆ. ಅವರು ಸಾಮ್ರಾಜ್ಯಶಾಹಿ ವಿರೋಧಿಯಾದ ಪೀಪಲ್ಸ್ ಫ್ರಂಟ್ ಆಫ್ ಜುದೇಯ(ಪಿ.ಎಫ್.ಜೆ) ಎಂಬ ಗುಂಪಿಗೆ ಸೇರಿದವರು ಎಂದು ತಿಳಿದು ತನ್ನನ್ನೂ ಸೇರಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಆ ಗುಂಪು ಒಪ್ಪಿ ಅವನನ್ನು ಸೇರಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಗ್ಲಾಡಿಯೆಟರ್ ಗಳ ಕಾಳಗದಲ್ಲಿ ಓರ್ವ ಎದುರಾಳಿಗೆ ಓಡಿಸಿ ಓಡಿಸಿಯೇ ಹೃದಯಾಘಾತ ತರಿಸಿ ಸಾಯಿಸಿ ಗೆಲ್ಲುತ್ತಾನೆ. ಆ ಗುಂಪಿನ ನಾಯಕ ರೆಜ್ ಬ್ರಯಾನ್ ಗೆ ಗೋಡೆಗಳ ಮೇಲೆ “ರೋಮನ್ ಮನೆಗೆ ಹೋಗಿ” ಎಂದು ರಾತ್ರಿ ಬರೆಯುವಂತೆ ಕೆಲಸ ಕೊಡುತ್ತಾನೆ. ಹಾಗೆ ಮಾಡಲು ರಾತ್ರಿ ಹೋಗಿ ರೋಮನ್ ರಿಗೆ ಸಿಕ್ಕಿಬಿದ್ದು ಮತ್ತೆ ಅವರಿಂದ ತಪ್ಪಿಸಿಕೊಳ್ಳುತ್ತಿದ್ದಾಗ ಪಿ.ಎಫ್.ಜೆ ಗುಂಪಿನ ಜೂಡಿತ್ ಆತನನ್ನು ರಕ್ಷಿಸಿ ತಮ್ಮ ಅಡಗುತಾಣಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಪಿ.ಎಫ್.ಜೆ ಗುಂಪಿನ ಸದಸ್ಯರು ರೋಮನ್ ಸೀಸರ್ ಪೊಂಟಿಯಸ್ ಪೈಲೇಟ್ ನ ಹೆಂಡತಿಯನ್ನು ಅಪಹರಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉಪಾಯ ಮಾಡುತ್ತಿರುತ್ತಾರೆ. ಎಲ್ಲ ತಯಾರಾಗಿ ಅಪಹರಿಸಲು ರಾತ್ರಿ ಸೀಸರ್ ನ ಅರಮನೆಗೆ ಹೋದಾಗ ಅಲ್ಲಿ ಮತ್ತೊಂದು ಗುಂಪು ಅದೇ ಕೆಲಸಕ್ಕಾಗಿ ಅಲ್ಲಿಗೆ ಬಂದದ್ದು ತಿಳಿದು ಆ ಎರಡೂ ಗುಂಪಿನ ನಡುವೆ ಪೈಲೇಟ್ ನ ಹೆಂಡತಿ ಯಾರಿಗೆ ಸೇರಬೇಕೆಂಬ ವಿಷಯದಲ್ಲಿ ಜಗಳವಾಗುತ್ತದೆ. ಇದರಿಂದ ಎಚ್ಚೆತ್ತುಕೊಳ್ಳುವ ರೋಮನ್ ಸೈನಿಕರು ಇವರೆಲ್ಲ ಬಡಿದಾಡಿಕೊಂಡು ಬಿದ್ದ ನಂತರ ಉಳಿದ ಬ್ರಯಾನ್ ನನ್ನು ಸೆರೆ ಹಿಡಿದು ಸೆರೆಮನೆಗೆ ತಳ್ಳುತ್ತಾರೆ.
ಅಲ್ಲಿ ಕೊಂಚ ಕಾಲ ಕಳೆದ ನಂತರ ಸೀಸರ್ ನ ಬಳಿಗೆ ಬ್ರಯಾನ್ ನನ್ನು ಕೊಂಡೊಯ್ಯುತ್ತಾರೆ. ಪೈಲೇಟ್ ಗೆ ‘ರ’ ಅಕ್ಷರ ಉಚ್ಛಾರ ಮಾಡಲು ಬಾರದು. ಆತನ ಈ ‘ರ’ ಇಲ್ಲದ ಮಾತು ಕೇಳಿ ಅಲ್ಲಿ ನೆರೆದಿದ್ದ ಸೈನಿಕರಿಗೆ ಸರಿಯಾಗಿ ಈತ ಹೇಳುವ ಮಾತು ಅರ್ಥವಾಗುವುದಿಲ್ಲ. ಈ ಎಲ್ಲ ಗೊಂದಲದಲ್ಲಿ ಬ್ರಯಾನ್ ಮತ್ತೆ ತಪ್ಪಿಸಿಕೊಳುತ್ತಾನೆ. ರೋಮನ್ ಸೈನಿಕರಿಂದ ತಪ್ಪಿಸಿಕೊಳ್ಳಲು ಗಡ್ಡದ ಅಂಗಡಿಗೆ ಹೋಗಿ ಒಂದು ಗಡ್ಡ ಕೇಳಿ ಅಂಗಡಿಯವ ಹೇಳಿದ ದರ ಕೊಡಲು ಮುಂದಾಗುತ್ತಾನೆ. ಅದಕ್ಕೆ ಒಪ್ಪದ ಅಂಗಡಿಯವ ಚೌಕಾಸಿ ಮಾಡದೆ ತಾನು ಮಾರುವುದಿಲ್ಲ, ಬ್ರಯಾನ್ ಚೌಕಾಸಿ ಮಾಡಿದರೆ ಮಾತ್ರ ಗಡ್ಡ ಕೊಡುವುದಾಗಿ ಪಟ್ಟು ಹಿಡಿಯುತ್ತಾನೆ. ಬ್ರಯಾನ್ ಗೆ ಆ ಪರಿಸ್ಥಿತಿಯಲ್ಲಿ ಸರಿಯಾಗಿ ಚೌಕಾಸಿ ಬರದಿದ್ದನ್ನು ನೋಡಿ ಅಂಗಡಿಯವನೇ ಆತನಿಗೆ ಹೇಗೆ ಚೌಕಾಸಿ ಮಾಡಬೇಕೆಂದು ಹೇಳಿಕೊಡುತ್ತಾನೆ. ಕಡೆಗೆ ಗಡ್ಡದ ಜೊತೆ ಒಂದು ಸೋರೆಕಾಯಿ ಕೊಡುತ್ತಾನೆ. ಅದನ್ನು ಪಡೆದು ಅಂಗಡಿಯವ ಮತ್ತೆ ಚೌಕಾಸಿಯ ಪಾಠ ಹೇಳುವುದರಲ್ಲಿ ಕಾಲು ಕೀಳುತ್ತಾನೆ. ಅಲ್ಲಿಂದ ನೇರವಾಗಿ ಪಿ.ಎಫ್.ಜೆ ಗುಂಪಿನ ಗುಪ್ತ ಮುಖ್ಯ ಕಚೇರಿಗೆ ಹೋಗುತ್ತಾನೆ. ಅಲ್ಲಿಗೆ ಇವನನ್ನು ಬೆನ್ನಟ್ಟಿ ಬರುವ ರೋಮನ್ ಸೈನಿಕರು ಅವರಿದ್ದ ಮನೆ ಬಾಗಿಲಿಗೇ ಬರುತ್ತಾರೆ. ತಕ್ಷಣ ಅಡಗಿಕೊಳ್ಳುವ ಎಲ್ಲರೂ ಮನೆಯ ಒಡೆಯ ಮತ್ತಾಯಸ್ ಸೈನಿಕರಿಗೆ ಮನೆಯನ್ನು ಶೋಧಿಸಲು ಅವಕಾಶ ಕೊಟ್ಟು ಅವರೆಲ್ಲ ಏನೂ ಸಿಗದೆ ವಾಪಸಾದ ಮೇಲೆ ಬ್ರಯಾನ್ ಗೆ ಅವರನ್ನು ನೇರವಾಗಿ ಅಲ್ಲಿಗೆ ಕರೆತಂದದ್ದಕ್ಕೆ ಬಯ್ಯುತ್ತಾರೆ. ಇನ್ನೂ ಮಾತಾಡುತ್ತಿದ್ದಂತೆ ಮತ್ತೆ ಸೈನಿಕರು ಶೋಧಿಸಲು ಬರುತ್ತಾರೆ. ಮತ್ತೆ ಬಚ್ಚಿಟ್ಟುಕೊಳ್ಳುವ ಎಲ್ಲರೂ ಏನೂ ಸಿಗದೆ ಸೈನಿಕರು ಮರಳಿದ್ದನ್ನು ಗಮನಿಸಿ ಇನ್ನೇನು ಹೊರಬರುತ್ತಿದ್ದಂತೆ ಮೂರನೇ ಬಾರಿ ಸೈನಿಕರು ಪ್ರತ್ಯಕ್ಷವಾಗುತ್ತಾರೆ. ಮತ್ತೆ ಎಲ್ಲರೂ ಬಚ್ಚಿಟ್ಟುಕೊಳ್ಳುತ್ತಾರೆ. ಅಷ್ಟರವರೆಗೂ ಬ್ರಯಾನ್ ಬಚ್ಚಿಟ್ಟುಕೊಂಡಿದ್ದ ಕಿಟಕಿಯ ಭಾಗ ಮುರಿದು ಹೊಸ ಧರ್ಮ ಪ್ರಚಾರ ಮಾಡುವವರ ಬೀದಿಗೆ ಬೀಳುತ್ತಾನೆ. ಅವನು ಬಿದ್ದ ಸ್ಥಳದಲ್ಲಿ ಇನ್ನಾರೋ ಇದ್ದದ್ದರಿಂದ ಜನ ಇವನೂ ಧರ್ಮ ಪ್ರಚಾರಕನೇ ಇರಬೇಕೆಂದು ಇವನ ಕಡೆ ನೋಡುತ್ತಾರೆ. ಬ್ರಯಾನ್ ರೋಮನ್ ರಿಂದ ತಪ್ಪಿಸಿಕೊಳ್ಳಲು ಇದು ಸರಿಯಾದ ದಾರಿಯೆಂದು ಅರಿತು ಸುಮ್ಮನೆ ಕಥೆ ಹೇಳುತ್ತಾ ಹೋಗುತ್ತಾನೆ. ಕಥೆಯ ಬಗ್ಗೆ ಪ್ರಶ್ನೆ ಕೇಳಿ ಇವನ ಕಥೆ ಹೇಳುವ ಶೈಲಿ ಇಷ್ಟವಾಗದ ಜನ ಮರಳಿ ಹೋಗುತ್ತಿದ್ದನ್ನು ಮತ್ತು ರೋಮನ್ ಸೇನೆಯ ಪಡೆಯೊಂದು ಅತ್ತಲೇ ಧಾವಿಸುತ್ತಿದ್ದನ್ನು ಗಮನಿಸಿ ಏನೇನೋ ತಡವರಿಸುತ್ತಾನೆ. ಸೈನಿಕರು ಅಲ್ಲಿಂದ ಹೋದ ನಂತರ ತನ್ನ ತಡವರಿಕೆ ನಿಲ್ಲಿಸಿ ತಾನು ನಿಂತಿದ್ದ ಕಟ್ಟೆಯಿಂದ ಕೆಳಗಿಳಿದು ಹೊರಡಲು ಸಿದ್ಧವಾಗುತ್ತಾನೆ. ಇವನು ಮಾತು ಅರ್ಧಕ್ಕೆ ನಿಲ್ಲಿಸಿದ್ದು ಜನರಲ್ಲಿ ಕುತೂಹಲ ಹುಟ್ಟಿಸುತ್ತದೆ. ಜನ ಏನದು ಪೂರ್ತಿ ಹೇಳೆಂದು ಇವನಿಗೆ ದುಂಬಾಲು ಬೀಳುತ್ತಾರೆ. ಏಕೆ ಹೀಗೆ ಪೂರ್ತಿ ಹೇಳದೆ ಗುಟ್ಟು ಮಾಡುತ್ತಿದ್ದಾನೆ ಎಂದು ತಮ್ಮಲ್ಲಿ ತಾವೇ ಇನ್ನಷ್ಟು ಕುತೂಹಲ ಹುಟ್ಟಿಸಿಕೊಂಡು ಇವನು ಮರಣವನ್ನು ಗೆಲ್ಲುವ ಗುಟ್ಟು ತಿಳಿದಿದ್ದಾನೆ ಹಾಗಾಗಿ ಹೇಳುತ್ತಿಲ್ಲ ಎಂದು ತಮ್ಮಲ್ಲೇ ಮಾತಾಡಿಕೊಂಡು ನೋಡನೋಡುತ್ತಿದ್ದಂತೆಯೇ ಆತನನ್ನು ಗುರು ಎಂದು ಕರೆದು ಆತನನ್ನು ಒಂದು ಹಿಂಡು ಜನ ಹಿಂಬಾಲಿಸಲು ಪ್ರಾರಂಭಿಸುತ್ತಾರೆ. ಆತ ಬಿಟ್ಟು ಹೋದ ಸೋರೆಕಾಯಿಯನ್ನು ಪವಿತ್ರ ಎಂದು ಕರೆದು ಅದನ್ನು ಗೌರವಿಸಲು ಮುಂದಾಗುತ್ತಾರೆ. ಈ ಜನರಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಚಪ್ಪಲಿ ಕಿತ್ತರೂ ಅದನ್ನು ಅಲ್ಲೇ ಬಿಟ್ಟು ಓಡುತ್ತಾನೆ. ಆ ಕಿತ್ತ ಚಪ್ಪಲಿಯನ್ನೂ ತಮ್ಮ ಗುರು ಅದರಲ್ಲಿ ಏನೋ ಸಂಕೇತ ಬಿಟ್ಟಿದ್ದಾನೆಂದು ಅದನ್ನೂ ಗೌರವಿಸುತ್ತಾ ಬ್ರಯಾನ್ ನನ್ನು ಹಿಂಬಾಲಿಸುತ್ತಾರೆ. ಹಾಗೆ ಹಿಂಬಾಲಿಸುವಾಗ ಜನರ ಗುಂಪಿನಲ್ಲಿ ಸೋರೆಕಾಯಿಗೆ ನಡೆಕೊಳ್ಳುವ ಗುಂಪು, ಚಪ್ಪಲಿಗೆ ನಡೆಕೊಳ್ಳುವ ಗುಂಪು, ಇವು ಯಾವಕ್ಕೂ ನಡೆದುಕೊಳ್ಳದ ಗುಂಪು ಹೀಗೆ ಹಲವಾರು ಗುಂಪುಗಳಾಗಿ ಒಡೆದು ಬ್ರಯಾನ್ ನನ್ನು ಹಿಂಬಾಲಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಒಂದು ಗುಂಡಿಗೆ ಹಾರುವ ಬ್ರಯಾನ್ ಅಲ್ಲಿ ತಪಸ್ಸಿಗೆ ಕೂತಿದ್ದ ಒಬ್ಬ ಮುದುಕನ ಮೇಲೆ ಬೀಳುತ್ತಾನೆ. ಆ ಮುದುಕ ತನ್ನ ತಪೋಭಂಗ ಮಾಡಿದ ಬ್ರಯಾನ್ ಗೆ ಬಯ್ಯುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಜನ ಬ್ರಯಾನ್ ನನ್ನು ಒಂದು ಪವಾಡ ಮಾಡುವಂತೆ ಪೀಡಿಸುತ್ತಾರೆ. ಬ್ರಯಾನ್ ಅದಕ್ಕೆ ಏನೋ ಹೇಳಿದಕ್ಕೆ ಪವಾಡ ಮಾಡಿದ ಎಂದು ಸಂತೋಷ ಪಡುತ್ತಾರೆ. ಅಷ್ಟರಲ್ಲಿ ಮುದುಕ ಬ್ರಯಾನ್ ಮೇಲಿನ ಸಿಟ್ಟಿನಿಂದ ಅವನಿಗೆ ಹೊಡೆಯಲು ಮುಂದಾದಾಗ ಆತ ಒಬ್ಬ ಧರ್ಮವನ್ನು ನಂಬದವನು ಎಂದು ಆ ಮುದುಕನನ್ನು ಅಲ್ಲಿದ್ದ ಜನ ಹೊಡೆದು ಸಾಯಿಸುತ್ತಾರೆ.
ಇದೆಲ್ಲರದರಿಂದ ತಪ್ಪಿಸಿಕೊಂಡು ಮನೆಗೆ ಬಂದು ಜೂಡಿತ್ ಜೊತೆಗೆ ಇದ್ದ ಬ್ರಯಾನ್ ಬೆಳಗೆದ್ದು ಮನೆ ಮುಂದೆ ರಾಶಿ ರಾಶಿ ಜನ ಸೇರಿದ್ದು ನೋಡಿ ಗಾಬರಿಗೊಳ್ಳುತ್ತಾನೆ. ಅಷ್ಟರಲ್ಲಿ ಮನೆಗೆ ಬರುವ ಆತನ ತಾಯಿ ಈಗ ಇವನು ಇನ್ನೇನು ಅನಾಹುತ ಮಾಡಿರಬಹುದೆಂದು ಸಿಟ್ಟು ಮಾಡಿಕೊಂಡು ಬ್ರಯಾನ್ ಗೆ ಚೆನ್ನಾಗಿ ಹೊಡೆಯುತ್ತಾಳೆ. ಆಕೆಯನ್ನು ತಡೆಯುವ ಜೂಡಿತ್ ಬ್ರಯಾನ್ ಒಬ್ಬ ಒಳ್ಳೆಯ ನಾಯಕ ಎಂದೆಲ್ಲ ಆತನನ್ನು ಹೊಗಳಲು ಶುರು ಮಾಡುತ್ತಾಳೆ. ಹೊರಗಡೆ ನೆರೆದಿದ್ದ ಜನ ಆತನನ್ನು ನೋಡಲೇಬೇಕೆಂದು ಹಠ ಮಾಡಿದ್ದು ನೋಡಿ ಆತನಿಗೆ ಜನರನ್ನು ನೋಡಲು ಕಳಿಸುತ್ತಾಳೆ. ಜನರಿಗೆ ಬ್ರಯಾನ್ ಎಷ್ಟು ಹೇಳಿದರೂ ಕೇಳದಿದ್ದಾಗ ಬೇಸತ್ತು ಮನೆಯಿಂದ ಹೊರಬಂದರೆ ಮತ್ತೆ ಅಲ್ಲಿ ಜನ. ಕೆಲವರು ಇವನನ್ನು ಬಳಸಿ ಜನರಿಗೆ ದರ್ಶನ ಭಾಗ್ಯ ಕರುಣಿಸಲು ದುಡ್ಡು ಪೀಕುತ್ತಿರುತ್ತಾರೆ. ಇವರಿಂದ ಬೇಜಾರಾಗಿ ಒಂಟಿಯಾಗಿ ಕೂತಿದ್ದಾಗ ರೋಮನ್ ಸೈನಿಕರು ಕಡೆಗೂ ಈತನನ್ನು ಸೆರೆಹಿಡಿದು ಶಿಲುಬೆಗೇರಿಸುವ ಶಿಕ್ಷೆ ಕೊಡುತ್ತಾರೆ. ಪಿ.ಎಫ್.ಜೆ ಯ ಸದಸ್ಯರು ಸುಮ್ಮನೆ ತಮ್ಮ ಕಚೇರಿಯಲ್ಲಿ ಕೂತು ಯೋಜನೆ ಹಾಕುತ್ತ ಕುಳಿತಿದ್ದಾಗ ಜೂಡಿತ್ ಬಂದು ಬ್ರಯಾನ್ ನನ್ನು ಸೆರೆ ಹಿಡಿದ ವಿಷಯ ಹೇಳಿದರೂ ಸದಸ್ಯರು ಬ್ರಯಾನ್ ನನ್ನು ಉಳಿಸಬೇಕೋ ಬೇಡವೋ ಎಂದು ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚಿಸಲು ನಿರ್ಧರಿಸುತ್ತಾರಷ್ಟೇ. ಇವರಿಂದ ಏನೂ ಆಗದು ಎಂದು ಜೂಡಿತ್ ಪೈಲೇಟ್ ವಿಶೇಷ ದಿನವಾದ ಅಂದು ಒಬ್ಬ ಖೈದಿಯನ್ನು ಬಂಧಮುಕ್ತಗೊಳಿಸುತ್ತಾನೆಂದು ತಿಳಿದು ಅವನು ಘೋಷಣೆ ಮಾಡುವ ಸ್ಥಳಕ್ಕೆ ಹೋಗಿ ಬ್ರಯಾನ್ ನನ್ನು ಉಳಿಸಲು ಕೇಳುತ್ತಾಳೆ. ಅದಕ್ಕೆ ಒಪ್ಪುವ ಪೈಲೇಟ್ ಹಾಗೆಯೇ ಆಜ್ಞೆಯನ್ನು ಕೊಡುತ್ತಾನೆ. ಅಷ್ಟರಲ್ಲಿ ಶಿಲುಬೆಗೇರಿಸುವ ಜನರನ್ನು ಶಿಕ್ಷೆ ಕೊಡುವ ಜಾಗಕ್ಕೆ ಕರೆದೊಯ್ದಿರುತ್ತಾರೆ. ಅಲ್ಲಿಗೆ ಬರುವ ಪಿ.ಎಫ್.ಜೆ ಸದಸ್ಯರನ್ನು ನೋಡಿ ತನ್ನನ್ನು ರಕ್ಷಿಸಲು ಬಂದಿದ್ದಾರೆಂದು ಬ್ರಯಾನ್ ಸಂತೋಷಗೊಳ್ಳುತ್ತಾನೆ. ಆದರೆ ಅವರೆಲ್ಲ ಒಂದು ಉದ್ದದ ಭಾಷವನ್ನಷ್ಟೇ ಕೊಟ್ಟು ಅವನು ತಮಗಾಗಿ ಮಾಡುತಿದ್ದ ತ್ಯಾಗವನ್ನು ತಾವೆಲ್ಲ ಮೆಚ್ಚುತ್ತೇವೆಂದು ಹೇಳಿ ಹೊರಟು ಹೋಗುತ್ತಾರೆ. ಕೊನೆಗೂ ಬ್ರಯಾನ್ ರಕ್ಷಿಸಲು ಅಲ್ಲಿಗೆ ಬರುವ ರೋಮನ್ ಸೈನಿಕರು ಬ್ರಯಾನ್ ಯಾರೆಂದು ಕೇಳಿದಾಗ ಯಾರೋ ಒಬ್ಬ ತಮಾಷೆ ಮಾಡಲು ತಾನೇ ಬ್ರಯಾನ್ ಎಂದು ಕೂಗುತ್ತಾನೆ. ಆಗ ಬ್ರಯಾನ್, ಅವನಲ್ಲ ತಾನು ನಿಜವಾದ ಬ್ರಯಾನ್ ಎಂದು ಎಷ್ಟು ಕೂಗಿ ಹೇಳಿದರೂ ಯಾರೂ ಕೇಳದೆ ಅವನನ್ನು ಅಲ್ಲೇ ಬಿಡುತ್ತಾರೆ. ಜೂಡಿತ್ ಅಲ್ಲಿಗೆ ಬಂದು ರೆಜ್ ತನಗೆ ಎಲ್ಲ ಬಿಡಿಸಿ ಹೇಳಿದ್ದು ಬ್ರಯಾನ್ ಮಾಡಲು ಹೊರಟಿದ್ದ ಕೆಲಸವನ್ನು ತಾನು ಶ್ಲಾಘಿಸುವುದಾಗಿ ಹೇಳಿ ಹೊರಟು ಹೋಗುತ್ತಾಳೆ. ಬ್ರಯಾನ್ ತಾಯಿ ಬಂದು ತನ್ನ ಜೀವನದ ಅಂತ್ಯಕಾಲದಲ್ಲಿ ಹೀಗೆ ಬ್ರಯಾನ್ ಬಿಟ್ಟು ಹೋಗುತ್ತಿದ್ದಾನೆಂದು ಚೆನ್ನಾಗಿ ಬೈದು ಹೊರಟು ಹೋಗುತ್ತಾಳೆ. ಎಲ್ಲ ಕಳೆದುಕೊಂಡೆ ಎಂದು ಹತಾಶನಾಗುವ ಬ್ರಯಾನ್ ಗೆ ಮತ್ತೆ ಹುರಿದುಂಬಿಸಲು ಹಿಂದಿನಿಂದ ಒಬ್ಬ ಹಾಡು ಹಾಡಲು ಪ್ರಾರಂಭಿಸುತ್ತಾನೆ, “Always look on the bright side of life”. ಈ ಹಾಡು ಕೇವಲ ಬ್ರಯಾನ್ ಗಷ್ಟೇ ಅಲ್ಲ ನಮಗೆಲ್ಲರಿಗೂ. ಜೀವನದಲ್ಲಿ ಏನೆಲ್ಲಾ ಕಂಡು ಏನೆಲ್ಲಾ ಮಾಡಿ ಕೊನೆಗೆ ಸಾವು ಹತ್ತಿರಾದಾಗ ಹಾಗೆ ಮಾಡಲಿಲ್ಲವಲ್ಲ, ಹೀಗೆ ಆಗಲಿಲ್ಲವಲ್ಲ ಎಂದು ನಮ್ಮನ್ನು ನಾವೇ ಶಪಿಸುತ್ತೇವೆ, ಹತಾಶರಾಗುತ್ತೇವೆ. ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಹೀಗೆ ವ್ಯಥೆ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನುವುದರಲ್ಲಿ ಸತ್ಯವಿದೆ. ನಮ್ಮ ನಾಟಕಕ್ಕೆ ತೆರೆಯೆಳಿಯುವ ಸಮಯ ಬಂದಾಗ ಒಮ್ಮೆ ಪ್ರೇಕ್ಷರೆಡೆಗೆ ಬಾಗಿ ನಮಿಸಿ ಒಂದು ನಗೆ ಕೊಟ್ಟು ನೇಪಥ್ಯಕ್ಕೆ ಸರಿಯಬೇಕು ಎಂದು ಬಹಳ ಸೊಗಸಾಗಿ ಈ ಹಾಡಲ್ಲಿ ಹಾಡಲಾಗಿದೆ. ಆದರೆ ಈ ಹಾಡಲ್ಲೂ ತಮಾಷೆ ಬಿಟ್ಟಿಲ್ಲ. ಹಾಗಾಗಿ ಈ ಹಾಡು ಸದಾ ಕಾಲ ಮನದಲ್ಲಿ ಉಳಿಯುವಂತಹ ಕೆಲವಲ್ಲಿ ಒಂದು.
ಧರ್ಮವನ್ನು ಟೀಕಿಸುತ್ತ ಅದನ್ನು ಹಿಂಬಾಲಿಸುವ ಭರದಲ್ಲಿ ಮನುಷ್ಯ ಏನೆಲ್ಲಾ ಮಾಡಿ ಕೂರುತ್ತಾನೆ ಎಂದು ಹಾಸ್ಯಮಯವಾಗಿ ಈ ಚಿತ್ರದಲ್ಲಿ ತೋರಿದ್ದಾರೆ. ಹಾಗೆಯೇ ಸುಮ್ಮನೆ ಕ್ರಾಂತಿ ಕ್ರಾಂತಿ ಎಂದು ಒಣ ಸಿದ್ಧಾಂತಗಳನ್ನು ಇಟ್ಟುಕೊಂಡು ಬಡಿದಾಡುವ ಜನರನ್ನೂ ಅಷ್ಟೇ ಆಡಿಕೊಂಡಿದ್ದಾರೆ. ಈ ಚಿತ್ರವನ್ನು ಮಾಡುವಾಗಿನಿಂದಲೂ ಈ ಚಿತ್ರಕ್ಕೆ ಅನೇಕ ತೊಂದರೆಗಳಾದವು. ನಿರ್ಮಾಪಕರು ಬದಲಾದರು. ಚಿತ್ರ ಬಿಡುಗಡೆಗೆ ತೊಂದರೆಯಾಯಿತು. ಐರ್ಲೆಂಡ್ ನಲ್ಲಿ ಈ ಚಿತ್ರವನ್ನು ಸಾಕಷ್ಟು ವರ್ಷ ಬ್ಯಾನ್ ಮಾಡಲಾಗಿತ್ತು. ಇವೆಲ್ಲದರ ನಡುವೆ ಕೂಡ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ಆದರೆ ಅವರಿಗೆ ಎಂದೂ ಜೀವದ ಭಯ ಇರಲಿಲ್ಲ ಅಥವಾ ಅಂತಹ ಸಂದರ್ಭ ಒದಗಲಿಲ್ಲ. ಇದರ ಬಗ್ಗೆ ಪ್ರತಿಭಟನೆ ಮಾಡುವವರು ಟಿವಿಯಲ್ಲಿ ಇವರೊಡನೆ ಚರ್ಚೆಗೆ ಕೂತರು. ಆ ಚರ್ಚೆಗಳನ್ನು ನೋಡಿ ಇನ್ನಷ್ಟು ಜನ ಚಿತ್ರ ನೋಡಲು ಮುಂದಾದರು. ಈ ಚಿತ್ರ ಏಸು ಕ್ರಿಸ್ತನ ಬಗ್ಗೆ ಅಲ್ಲ. ಅದರಲ್ಲಿ ಅವನ ಬಗ್ಗೆ ಟೀಕೆ ಮಾಡಿಲ್ಲ ಎಂದು ಸಾರಿ ಸಾರಿ ಹೇಳಿದ ನಂತರ ಎಲ್ಲವೂ ಸರಿಹೋಯಿತು. ಈ ಚಿತ್ರ ಮಾಡಿದ ಬಗೆಗಿನ ಒಂದು ಡಾಕ್ಯುಮೆಂಟರಿ ಕೂಡ ಇದೆ. ಇಷ್ಟವಿದ್ದವರು ಅದನ್ನೂ ನೋಡಬಹುದು.
Youtube Link: The secret life of Brian: Documentary on the Monty Python film
ವಿ.ಸೂ: ಚಿತ್ರದಲ್ಲಿ ಭಾಷೆ ಸ್ವಲ್ಪ ಒರಟು ಅನ್ನಿಸಬಹುದು ಮತ್ತು ಒಂದು ನಗ್ನ ದೃಶ್ಯವೂ ಕೆಲವು ಸೆಕೆಂಡುಗಳ ಕಾಲ ಇದೆ. ಇವನ್ನು ಸಹಿಸುವವರಾದರೆ ಇದೊಂದು ಒಳ್ಳೆಯ ಚಿತ್ರ.
ಫನ್ ಫ್ಯಾಕ್ಟ್: ಪೈಥಾನ್ ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದವ ಮೊಂಟಿ ಪೈಥಾನ್ ತಂಡವನ್ನು ಇಷ್ಟಪಡುತ್ತಿದ್ದರಿಂದಲೇ ಅದಕ್ಕೆ ಹಾಗೆ ಹೆಸರಿಟ್ಟ.
-ವಿಶ್ವನಾಥ್