ನಾನು ನೋಡಿದ ಸಿನಿಮಾ - ಕನ್ನಡಕ್ಕೆ ಡಬ್ ಆದ ರಾಮರಾಜ್ಯಂ ಎಂಬ ತೆಲುಗು ಚಿತ್ರ

ನಾನು ನೋಡಿದ ಸಿನಿಮಾ - ಕನ್ನಡಕ್ಕೆ ಡಬ್ ಆದ ರಾಮರಾಜ್ಯಂ ಎಂಬ ತೆಲುಗು ಚಿತ್ರ

ಇದು ಯೂಟ್ಯೂಬ್ ನಲ್ಲಿ ಸಿಕ್ಕಿತು.
ಈ ಚಿತ್ರದಲ್ಲಿ ರಾಮನ್ನು ವನವಾಸ, ರಾವಣ ಸಂಹಾರ ಮುಗಿಸಿ ಲಕ್ಷ್ಮಣ ಸೀತೆ ಮತ್ತು ಹನುಮಂತನೊಡನೆ ಅಯೋಧ್ಯೆ ಪ್ರವೇಶ ಮಾಡಿದ ನಂತರದ ಕತೆ ಇದೆ.

ರಾಜರು ಪಟ್ಟಕ್ಕೆ ಏರಿದ ಮೇಲೆ ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣಾ ಮಾಡುವುದನ್ನು ನೋಡಿದ್ದೇವೆ.ಆದರೆ ಇಲ್ಲಿ ಶ್ರೀರಾಮನು ಮೊದಲು ರಾವಣ ಸಂಹಾರ ಎಂಬ ದುಷ್ಟ ಶಿಕ್ಷಣವನ್ನು ಮಾಡಿ ನಂತರವೇ ರಾಜನಾಗುತ್ತಿದ್ದಾನೆ ಎಂದು ಎಲ್ಲರೂ ಅನ್ನುತ್ತಾರೆ.

ಪಂಚಭೂತಗಳು ಎಲ್ಲರಿಗೂ ಸಮಾನವೇ. ಈ ಸಮಾನತ್ವವನ್ನೇ ಪ್ರಮಾಣವಾಗಿಸಿ ಧರ್ಮವನ್ನೇ ದೈವವಾಗಿಸಿ ಶ್ರೀರಾಮನು ಸಂಪೂರ್ಣ ಸೇವಾ ಭಾವನೆಯಿಂದ ಈ ರಾಜ್ಯವನ್ನು ಪಾಲನೆ ಮಾಡುತ್ತೇನೆ ಎಂದು ಹೇಳಿ ಪಟ್ಟಕ್ಕೆ ಬರುತ್ತಾನೆ. ತನ್ನನ್ನು ರಾಜನನ್ನಾಗಿ ಮಾಡಿರುವುದು ಪ್ರಜೆಗಳೇ, ಪ್ರಜೆಗಳಿಗೆ ಸುಖ ಸಂತೋಷಗಳನ್ನು ಕೊಡುವವನೇ ರಾಜ ಎಂದು ಆತ ತಿಳಿದಿದ್ದಾನೆ. ತನಗಿಂತ ತನ್ನ ಕುಟುಂಬಕ್ಕಿಂತ ಎಲ್ಲ ಗುರು ಹಿರಿಯರಿಗಿಂತ ಪ್ರಜೆಗಳೇ ಮೇಲು ಎಂಬ ನಂಬಿಕೆ ಅವನದು. ಒಬ್ಬ ಧರ್ಮ ಕರ್ತನಾಗಿ ಅಂದರೆ ಧರ್ಮದರ್ಶಿಯಾಗಿ ಬಹುಶಃ ಟ್ರಸ್ಟಿ ಎಂಬ ಅರ್ಥದಲ್ಲಿ ರಾಜನ ಪದವಿಯನ್ನು ಸ್ವೀಕಾರ ಮಾಡುತ್ತಾನೆ. ರಾಮ ರಾಜ್ಯ ಎಂದರೆ ರಾಮನು ಸೇವೆ ಮಾಡಿದ ರಾಜ್ಯ ಎಂಬ ಅರ್ಥವೇ ಹಿರಿಯದು, ಅವನು ಪಾಲನೆ ಮಾಡಿದ ರಾಜ್ಯ ಎಂಬ ಅರ್ಥ ಅದರ ಕೆಳಗಿನದು ಎಂದವನ ಅಭಿಪ್ರಾಯ.

ಒಂದು ಆರತಿ ಪದ್ಯವಿದೆ ಇಲ್ಲಿ:
ಮಂಗಳವು ರಾಮನಿಗೆ ಮಂಗಳವು ಮಹಿಮಗುಣ ಸಂಪನ್ನನಿಗೆ
ಮಂಗಳವು ಕಾರುಣ್ಯ ಕರುಣಾಮಯಗೆ
ಮಂಗಳವು ಜಾನಕಿ ಮಾನಸಿ ನಿವಾಸರಿಗೆ (?)
ಮಂಗಳವು ಸರ್ವ ಜನವoದಿತರಿಗೆ
ಜಯಮಂಗಳಂ ನಿತ್ಯ ಶುಭ ಮಂಗಳಂ

(ರಾಜನ ಮಕ್ಕಳು ಕಾಡಿನಲ್ಲಿ ಬೆಳೆಯಬಾರದು ಎಂದು ವನವಾಸದಲ್ಲಿದ್ದಾಗ ರಾಮ ಮತ್ತು ಸೀತೆ ನಿರ್ಧರಿಸಿರುತ್ತಾರೆ. ಎ೦ದು ಬೇರೆಡೆ ಓದಿದ್ದೆ)
ಈಗ ಸೀತೆ ಬಸುರಿಯಾಗಿದ್ದಾಳೆ. ಅವಳನ್ನು ಕರೆದುಕೊಂಡು ಹೋಗಲು ಅವಳ ತವರು ಮನೆಯವರು ಬಂದರೆ ಅವಳು ಶ್ರೀ ರಾಮನನ್ನು ಬಿಟ್ಟು ಹೋಗಲು ಒಲ್ಲಳು.

ಅಯೋಧ್ಯೆಗೆ ಪ್ರಭುವಾದರೂ ತಾಯಿಗೆ ಆತ ಮಗನೇ. ಆದಕಾರಣ ತಾಯಿಯ ಸಮ್ಮುಖದಲ್ಲಿ ಆತ ಎಂದೂ ಕೂಡನು . ನಿಂತೆಯೇ ಇರುವನು.
ತಾಯಿ ಕೌಸಲ್ಯೆಯು ಮೊದಲಿನಂತೆ ರಾಮ ಎಂದು ಕರೆಯದೆ ರಾಮಪ್ಪ ಎಂದು ಗೌರವದಿಂದ ಕರೆಯುವುದನ್ನು ಇಲ್ಲಿ ನೋಡಬಹುದು. ಸೀತೆಯ ಸಾಕುತಂದೆಯೂ ಅವಳನ್ನು ಸೀತಮ್ಮ ಎಂದೇ ಕರೆಯುತ್ತಾನೆ .

ಮನೆಯಲ್ಲಿ ಮಾವ ಮತ್ತಿತರ ಕುಟುಂಬಸ್ಥರೊಡನೆ ಮಾತನಾಡುವಾಗ ಅವನಿಗೆ ರಾಜಕಾರ್ಯದ ಕರೆ ಬರುತ್ತದೆ.  ರಾಜಕಾರ್ಯಕ್ಕೆ ಮೊದಲ  ಪ್ರಾಶಸ್ತ್ಯ , ನಂತರವೇ ಕುಟುಂಬದ ಮತ್ತು ವೈಯಕ್ತಿಕ ವಿಷಯಗಳು ಎಂದು ಮಾತುಕತೆಗಳನ್ನು ಅಲ್ಲಿಯೇ ನಿಲ್ಲಿಸಿ ರಾಮ ತೆರಳುತ್ತಾನೆ.

ನಂತರದ ದೃಶ್ಯದಲ್ಲಿ ರಾಮ ಸೀತೆಯರು ಏಕಾಂತದಲ್ಲಿದ್ದಾರೆ.
ಸೀತೆಯು ಹುಟ್ಟಿದ ಮನೆ ಬೇರೆಯಾದರೂ ಮಗಳಂತೆಯೇ ಅತ್ತೆಯನ್ನು ಮೆಚ್ಚಿಸಿದ್ದಾಳೆ. ಇದನ್ನು ಮೆಚ್ಚಿದ ಶ್ರೀ ರಾಮನು ಸೀತೆಗೆ ವರಗಳನ್ನು ಕೊಡಮಾಡುತ್ತಾನೆ. ವರಗಳು ಎಂದ ತಕ್ಷಣ ಸೀತೆಗೆ ಗಾಬರಿ . ಹಿಂದೆ ದಶರಥನು ಕೈಗೆ ಕೊಟ್ಟ ವರಗಳಿಂದಾಗಿಯೇ ರಾಮ ಸೀತೆಯರಿಗೆ ವನವಾಸ ಹೋಗಬೇಕಾಗಿ ಬಂದದ್ದು? ಆದರೆ ಆ ವನವಾಸದಿಂದಲೇ ತಾನೇ ಆಗಿದ್ದು ರಾವಣ ಸಂಹಾರ, ಧರ್ಮ ವಿಜಯ, ಲೋಕಶಾಂತಿ ಇತ್ಯಾದಿ?  ಎ೦ದು ರಾಮನ ಸಮಾಧಾನ. ಆಗ ಅವಳು ಕೋರಿಕೊಳ್ಳುವುದು ತಮ್ಮ ಸಂಸಾರಕ್ಕಾಗಿ ಮಕ್ಕಳಿಗಾಗಿ ಮುನಿಗಳ ಆಶೀರ್ವಾದ! ಅದಕ್ಕೆ ಅವನು ಒಪ್ಪಿಕೊಳ್ಳುತ್ತಿದ್ದಂತೆ  ಅವನು ಅಲ್ಲಿಂದ ತೆರಳಬೇಕಾಗುತ್ತದೆ.  ಯಾಕೆಂದರೆ ಅವನ ಪ್ರಕಾರ ದಾಂಪತ್ಯ ಧರ್ಮ ಅಷ್ಟೇ ಏಕೆ , ಎಲ್ಲ ಧರ್ಮಗಳಿಗಿಂತ ಸೇವಾ ಧರ್ಮವೇ ಮೇಲು.
ಆಗ ಅವನಿಗೆ ಗೂಢಚಾರರ ಮೂಲಕ ಅಗಸನ ಸುದ್ದಿ ತಿಳಿದು ಬರುವುದು. ಅಗಸನು ಶ್ರೀ ರಾಮನ ನಡತೆಯನ್ನು ಟೀಕಿಸಿದಾಗ ಅಲ್ಲಿದ್ದ ಉಳಿದವರು ಸುಮ್ಮನಿದ್ದದ್ದನ್ನು ಅಗಸನ ಮಾತಿಗೆ ಅವರ ಸಮ್ಮತಿ ಇದೆ ಎಂದು ಶ್ರೀರಾಮ ತಿಳಿಯುತ್ತಾನೆ.

( ಅಗಸನು ರಾಮನ ಬಗ್ಗೆ ಮಾತನಾಡುವಾಗ ' ಅವನೇನು  ಮೇಲಿನಿಂದ ಉದುರಿದ್ದಾನೆಯೇ ?  ಅವನು ನಮ್ಮಂಗೆ ನರಮನುಷ್ಯ ' ಎನ್ನುತ್ತಾನೆ!)

ಸೀತೆಯನ್ನು ತ್ಯಾಗ ಮಾಡುವ ವಿಚಾರ ಬಂದಾಗ ಅವನು ಸಿಂಹಾಸನವನ್ನು ಬಿಟ್ಟೇನು ಆದರೆ ಸೀತೆಯನ್ನು ಬಿಡುವುದಿಲ್ಲ ಎನ್ನುತ್ತಾನೆ. ಭರತನಿಗೆ ಅಥವಾ ಇನ್ನಾರಿಗಾದರೂ ಪಟ್ಟಾಭಿಷೇಕ ಮಾಡಿ ಸೀತೆಯ ಜೊತೆಗೆ ಅರಣ್ಯಕ್ಕೆ ಹೋಗುವೆ ಎನ್ನುತ್ತಾನೆ.

ಕೊನೆಗೆ ಅನಿವಾರ್ಯವಾಗಿ ಸೀತೆಯನ್ನು ಬಿಡಲು ತಯಾರಾಗಿ ಸೀತೆಯನ್ನು ವಾಲ್ಮೀಕಿ ಮುನಿಗಳ ಆಶ್ರಮದ ಬಳಿ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ . ಇದಾವುದರ ಅರಿವೇ ಇಲ್ಲದೆ ಸೀತೆಯು  ಮುನಿಜನರ ಭೇಟಿಗೆಂದು ಸರಳ ವೇಷದಲ್ಲಿ ಹೊರಡುತ್ತಾಳೆ , ತನ್ನ ಜತೆಗೆ ಶ್ರೀರಾಮ ಬರುತ್ತಿದ್ದರೂ ಅವನು  ರಾಜ ಉಡುಗೆಯಲ್ಲಿ ಬರದೆ ಸಾಮಾನ್ಯ ಉಡುಪಿನಲ್ಲೇ ಬರುತ್ತಿದ್ದ ಎನ್ನುತ್ತಾಳೆ. 

ಶ್ರೀರಾಮನು ಪರಿತ್ಯಜಿಸಿದ ಸೀತೆಯ ದುಃಖವನ್ನು ನೋಡಲಾಗದೆ  ಭೂತಾಯಿ ಅವಳನ್ನು ತನ್ನೊಂದಿಗೆ ಬರಲು ಕರೆದರೆ ಸೀತೆ ಅದಕ್ಕೆ ಸಿದ್ಧಳಿಲ್ಲ . ರಘುವಂಶ ವರ್ಧನನಾದ ಮಗುವನ್ನು ಹಡೆದು ತಂದೆಗೆ ಒಪ್ಪಿಸಿಯೇ ಬರುವೆನು ಎನ್ನುವಳು.

ಅತ್ತ 'ನಿನ್ನ ವೈಯಕ್ತಿಕ ದುಃಖದಲ್ಲಿ ಸಾಮಾಜಿಕ ಕರ್ತವ್ಯದ ಪಾಲನೆಯನ್ನು ಮರೆಯಬಾರದು' ಎಂದು ಕೌಸಲ್ಯೆ ರಾಮನಿಗೆ ತಿಳಿಹೇಳಿದಳು. (ವ್ಯಾಸರಾಯ ಬಲ್ಲಾಳರ ಪುರುಷೋತ್ತಮ ಕಾದಂಬರಿಯ ಕೊನೆಯಲ್ಲಿ ಇದೇ ಮಾತನ್ನು ನೋಡಬಹುದು)

ರಾಮೋ ವಿಗ್ರಹೋ ಧರ್ಮ ಅಂತ ಮಾರೀಚ ಹೇಳಿದ್ದಾನೆ ತಪಸ್ಸಿನ ಅಗತ್ಯ ಇಲ್ಲದಿರುವ ಋಷಿ ಅಂತ ವಿಶ್ವಾಮಿತ್ರ ಹೇಳಿದ್ದಾನೆ.ಧರ್ಮ ಸ್ವರೂಪನಾದ ಅವನಿಗೆ ಧರ್ಮದ ಉಪದೇಶದ ಅಗತ್ಯವಿಲ್ಲ.

ನನ್ನ ಧರ್ಮ ಪತ್ನಿ ನನಗೆ ಪ್ರಾಣಶಕ್ತಿ - ಶ್ರೀರಾಮನ ಅನಿಸಿಕೆ. 

Rating
Average: 4 (1 vote)