ನಾನು ನೋಡಿದ ಹಳೆಯ ಸಿನಿಮಾ - ಸೀತಾ

ನಾನು ನೋಡಿದ ಹಳೆಯ ಸಿನಿಮಾ - ಸೀತಾ

ಈ ಚಿತ್ರದ 'ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ ' ಹಾಡು ಎರಡು ಆವೃತ್ತಿಗಳಲ್ಲಿದ್ದು ನೀವು ಕೇಳಿರಬಹುದು. ಶೋಕದ ಹಾಡನ್ನು P. B. ಶ್ರೀನಿವಾಸ್ ಅವರು ಹಾಡಿದ್ದು ಸಂಗೀತ ಶ್ರೀಮಂತವಾಗಿದೆ.

ಕತೆಯು ಸಾಮಾಜಿಕವಾಗಿದ್ದರೂ ಒಂದಷ್ಟು ಸಸ್ಪೆನ್ಸ್ , ಕ್ರೈಂ ಇದೆ. ಒಂದು ಅದ್ಭುತ ದೃಶ್ಯ ಕೂಡ ಇದೆ.

ಕತೆ ಹೀಗಿದೆ, ನಾಯಕನ ಹೆಸರು ರಾಮ. ಇವನದು ಶ್ರೀಮಂತ ಮನೆತನ. , ತಂದೆಗೆ ತನ್ನ ಮನೆತನದ ಬಗೆಗೆ ತುಂಬಾ ಅಭಿಮಾನ. ಮನೆಯಲ್ಲಿ ಈ ರಾಮನ ಸಮವಯಸ್ಕ ಒಬ್ಬ ಇದ್ದಾನೆ. ತಂದೆಗೆ ಅವನೂ ಮಗನ ಸಮಾನ.

ರಾಮನು ಒಬ್ಬ ಸಾಮಾನ್ಯ ಹುಡುಗಿ ಸೀತೆಯನ್ನು ಮದುವೆ ಆಗಲು ಬಯಸಿದಾಗ ತಂದೆ ಅದಕ್ಕೆ ಅಡ್ಡ ಬರುವದಿಲ್ಲ. ಅದರಂತೆ ಮದುವೆ ಆಗುತ್ತದೆ.

ಈ ರಾಮ, ಸೀತೆ ಮತ್ತು ಈ ಸಾಕುಮಗ, ರಾಮಾಯಣದ ರಾಮ ಸೀತೆ ಲಕ್ಷ್ಮಣರಂತೆಯೇ ಇದ್ದಾರೆ. ಈ ರಾಮನಿಗೆ ಉದ್ಯೋಗದ‌ ಅಗತ್ಯ ಇಲ್ಲದೇ ಇದ್ದರೂ ತನ್ನ ಕಾಲ ಮೇಲೆ ನಿಂತುಕೊಳ್ಳುವ ಬಯಕೆಯಿಂದ ಬಿಸಿನೆಸ್ ಮಾಡುತ್ತಿರುತ್ತಾನೆ. ಅದಕ್ಕಾಗಿ ಬೇರೆ ಬೇರೆ ಊರುಗಳಿಗೆ ಆಗಾಗ ಹೋಗುತ್ತಿರುತ್ತಾನೆ. ಆಗ ನಾಯಕಿ ಸೀತೆಯು ಹೊತ್ತು ಕಳೆಯಲೂ , ನಾಕು ಜನಕ್ಕೆ ಉಪಕಾರ ಆಗಲಿ ಅಂತಲೂ ಸಾಮಾಜಿಕ ಕಾರ್ಯದಲ್ಲಿ ಮೈದುನನ ಜೊತೆಗೆ ಸೀತೆ ಹೊರಗೆ ಓಡಾಡುತ್ತಿದ್ದಾಳೆ. ಇದು ಮಾವನಿಗೆ ಅಷ್ಟು ಸೇರಿಕೆ ಆಗಿಲ್ಲ. ಈ ರಾಮ ಸೀತೆಗೆ ಒಂದು ಮಗು ಆಗುತ್ತದೆ. ಈ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಸೀತೆಯ ಮಾವನಿಗೆ. ಈ ಬಗ್ಗೆ ಅವನಿಗೆ ಕೊಂಚ ಅಸಹನೆ.
ಅವನ ಒಬ್ಬಂಟಿತನದ ಭಾವನೆಗೆ ಮಗುವಿನ ಸಾಂಗತ್ಯ ಕೊಂಚ ಪರಿಹಾರ ನೀಡುತ್ತದೆ.

ರಾಮನಿಗೆ ವಿದೇಶ ಪ್ರವಾಸದ ಪ್ರಸಂಗ ಒದಗಿ ಬರುತ್ತದೆ. ಆ ಸಮಯದಲ್ಲಿ ಒಂದು ತೀರ ವಿಚಿತ್ರವಾದ ಪ್ರಸಂಗ ಸಂಭವಿಸುತ್ತದೆ. ಅದೇನಪ್ಪ ಅಂದರೆ ಸೀತೆಯು ನಿದ್ದೆಯಿಂದ ಎದ್ದು ನೋಡಿದಾಗ ಅವಳ ಮಗ್ಗುಲಲ್ಲಿ ಗಂಡ ಇರದೇ ಆತ ಇರುತ್ತಾನೆ! ಈ ಬಗ್ಗೆ ರಾಮನು ತಲೆಕೆಡಿಸಿಕೊಳ್ಳುವುದಿಲ್ಲ. ಇದು ಹೇಗೆ ಸಂಭವಿಸುತ್ತೆ ಎಂಬ ಕುತೂಹಲ ನಿಮ್ಮಲ್ಲಿ ಉಂಟಾದರೆ ನೀವೇ ಸಿನಿಮಾ ನೋಡಬೇಕು! ಇದು ಯೂಟ್ಯೂಬ್ ನಲ್ಲಿ ಇದೆ.

ಸರಿ, ರಾಮನು ವಿದೇಶಕ್ಕೆ ಹೋದನು.

ನಾಯಕನ ಹೆಸರು ರಾಮ, ನಾಯಕಿ ಹೆಸರು ಸೀತೆ ಆದರೆ ರಾಮಾಯಣ ಆಗಬೇಕಾದದ್ದು ನಿರೀಕ್ಷಿತ ತಾನೆ? ಇಲ್ಲಿ ಒಂದಿಷ್ಟು ಪತ್ತೇದಾರಿ ಸಿನಿಮಾ ತರಹ ಸಸ್ಪೆನ್ಸ್ ಮತ್ತು ಕ್ರೈಂ ತಲೆ ಹಾಕುತ್ತವೆ. ಆಯ್ತು ಸೀತೆಗೆ ಮೈದುನನ ಜತೆ ಸಹವಾಸದ ಅಪವಾದ. ಮನೆತನದ ಗೌರವ ಕಾಪಾಡಲು ಮಾವನು ಅವಳನ್ನು ಮನೆಯಿಂದ ಹೊರ ಹೋಗುವಂತೆ ಹೇಳುತ್ತಾನೆ ಮತ್ತು ಮಗನಿಗೆ ಸೀತೆ ಸತ್ತುಹೋದಳು ಎಂದು ಹೇಳುತ್ತಾನೆ.
(ಈ ಸಂದರ್ಭದಲ್ಲಿಯೇ 'ಬರೆದೆ ನೀನು ನನ್ನ ಹೆಸರು ನಿನ್ನ ಬಾಳ ಪುಟದಲಿ' ಎಂಬ ಶೋಕಗೀತೆ ಇದೆ.)
ಅವಳು ಊರು ಬಿಟ್ಟು , ಹೆಸರು ಬದಲಾಯಿಸಿಕೊಂಡು ನರ್ಸ್ ಆಗುತ್ತಾಳೆ.

ಹೀಗೆ ಸುಮಾರು ಇಪ್ಪತ್ತು ವರ್ಷಗಳು ಕಳೆದು ಹೋಗುತ್ತವೆ. ಆ ಮಗು ಈಗ ಬೆಳೆದು ಲಾಯರ್ ಆಗಿದ್ದಾನೆ.

ಈ ಎಲ್ಲದಕ್ಕೂ ಕಾರಣವಾದ ಒಬ್ಬ ದುಷ್ಟ ಬ್ಲ್ಯಾಕ್‌ಮೇಲರ್‌ನು ಮುಂದೆ ಅವಳು ಕೆಲಸ ಮಾಡುತ್ತಿರುವ ಆಸ್ಪತ್ರೆಯಲ್ಲಿಯೇ ಅಡ್ಮಿಟ್ ಆಗುತ್ತಾನೆ. ಅವಳು ಈಗ ಮನಸ್ಸು ಮಾಡಿದರೆ ಅವನು ಸಾಯುವಂತೆ ಮಾಡಬಹುದು. ಈ ಸಮಯದಲ್ಲಿ ನಾನು ಮೊದಲು ಹೇಳಿದಂತೆ ಒಂದು ಅದ್ಭುತ ದೃಶ್ಯ ಇದೆ!

ಅವಳು ಯೋಚಿಸುತ್ತಾಳೆ- ಯಾರಿಗೂ ಅನುಮಾನ ಬಾರದ ಹಾಗೆ ಇವನು ಸಾಯುವ ಹಾಗೆ ನಾನು ಮಾಡಬಹುದು. ಅದರಿಂದ ಜಗತ್ತಿನಲ್ಲಿ ಒಂದು ದುಷ್ಟ ಹುಳು ಇಲ್ಲದಂತಾಗುತ್ತದೆ. ನನ್ನ ಹಾಗೆಯೇ ಎಷ್ಟು ಸಂಸಾರಗಳನ್ನು ಹಾಳು ಮಾಡಿದ್ದಾನೋ ಇವನು?

ಮತ್ತೆ ಮರುಕ್ಷಣ ಯೋಚಿಸುತ್ತಾಳೆ- ನಾನು ಒಬ್ಬ ನರ್ಸ್. ನನ್ನ ಕೆಲಸ ರೋಗಿಗಳ ಆರೈಕೆ ಮಾಡುವುದು, ಅವರನ್ನು ಬದುಕಿಸುವುದು.

ಮತ್ತೆ ಆ ಪ್ರಕಾರವಾಗಿ ನಡೆದುಕೊಳ್ಳುತ್ತಾಳೆ.

(ಇಂಥದೊಂದು ಕಥೆ ಜಗತ್ಪ್ರಸಿದ್ಧವಾಗಿದೆ. ಅದು ನಿಮಗೆ ಗೊತ್ತಿರಬೇಕು. ಯಾವುದೋ ಒಂದು ದೇಶ, ಅಲ್ಲಿ ಜನರ ಮತ್ತು ಆಡಳಿತ ನಡುವೆ ಸಂಘರ್ಷ ಇದೆ. ಆಡಳಿತದ ಪರ ಸೈನ್ಯವು ಜನರ ಮೇಲೆ ಜನರ ಮೇಲೆ ನಾನಾ ಬಗೆಯ ದಬ್ಬಾಳಿಕೆ ಅತ್ಯಾಚಾರ ನಡೆಸಿದೆ. ಸೈನ್ಯದ ಮುಖ್ಯ ಅಧಿಕಾರಿ ಕ್ಷೌರಕ್ಕೆಂದು ಒಂದು ಸಲೂನಿಗೆ ಬಂದಿದ್ದಾನೆ. ಅಲ್ಲಿನ ಕ್ಷೌರಿಕನಿಗೆ ತುಂಬಾ ಒಳ್ಳೆಯ ಅವಕಾಶ. ತನ್ನ ಬಂಧು ಬಾಂಧವರ ಸಾವುನೋವಿಗೆ ಅವನು ಸೇಡು ತೀರಿಸಿಕೊಳ್ಳಬಹುದು. ಸೈನ್ಯಾಧಿಕಾರಿಯನ್ನು ಕೊಂದು ಜನರ ಕಣ್ಣಿನಲ್ಲಿ ಹೀರೋ ಆಗಬಹುದು.ಸತ್ತರೆ ಹುತಾತ್ಮ ಆಗಬಹುದು.

ಆದರೆ ಅವನು ವಿಚಾರ ಮಾಡುತ್ತಾನೆ - ನಾನು ಒಬ್ಬ ಕ್ಷೌರಿಕ, ನನ್ನ ನನ್ನ ಕೈಯಲ್ಲಿ ಸಾಬೂನಿನ ಬುರುಗು ಇರಬೇಕೇ ಹೊರತು ರಕ್ತವಲ್ಲ.

ಅವನು ಆ ಪ್ರಕಾರ ನಡೆದುಕೊಳ್ಳುತ್ತಾನೆ.)

ಆದರೆ ಆ ದುಷ್ಟನು ಸೀತೆಯ ಮಾವನ ಕೈಯಲ್ಲಿ ಸಾಯುತ್ತಾನೆ. ಮನೆತನದ ಗೌರವ ಉಳಿಸಲು ಈ ಕೊಲೆಯ ಆರೋಪವನ್ನು ಸೀತೆ ಹೊತ್ತುಕೊಳ್ಳುತ್ತಾಳೆ.

ಆಕೆ ತಾಯಿ ಎಂದರಿಯದ ಆಕೆಯ ಮಗನು ಕೋರ್ಟಿನಲ್ಲಿ ಆಕೆಯ ನಿರಪರಾಧಿತನವನ್ನು ಸಾಬೀತುಪಡಿಸುತ್ತಾನೆ. ಇಲ್ಲಿನ ಕೋರ್ಟ್ ದೃಶ್ಯಗಳು, ವಾದಗಳು ತುಂಬ ಇಷ್ಟ ಆದವು. ಲಾಯರ್ ಹೇಗೆ ಕೆಲಸ ಮಾಡಬೇಕು ಎಂಬ ವಿಚಾರವೂ ಕಾನೂನು ಮತ್ತು ನ್ಯಾಯದ ಕುರಿತಾದ .ಕೆಲ ಸೂಕ್ಷ್ಮಗಳೂ ಇಲ್ಲಿವೆ.

ಸಹಜ ಗತಿಯ ಈ ಸಿನಿಮಾ ಈ ಮೇಲಿನ ಕಾರಣಗಳಿಗಾಗಿ ನೋಡಬೇಕಾದಂಥದ್ದಾಗಿದೆ.

Rating
Average: 4 (1 vote)

Comments